ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಮಂತ್ರಿ.


"ಭಾರತದ ಆತ್ಮಜಾಗೃತಿ ಕುಸಿದಾಗ, ದೇಶದಾದ್ಯಂತ ಸಂತರು ಮತ್ತು ಋಷಿಗಳು ದೇಶದ ಆತ್ಮವನ್ನು ಪುನರುಜ್ಜೀವನಗೊಳಿಸಿದರು"

"ದೇವಾಲಯಗಳು ಮತ್ತು ಮಠಗಳು ಸಂಕಷ್ಟದ ಕಾಲಘಟ್ಟದಲ್ಲಿ ಸಂಸ್ಕೃತಿ ಮತ್ತು ಜ್ಞಾನವನ್ನು ಜೀವಂತವಾಗಿಟ್ಟವು"

ಭಗವಾನ್ ಬಸವೇಶ್ವರರು ನಮ್ಮ ಸಮಾಜಕ್ಕೆ ನೀಡಿದ ಶಕ್ತಿ, ಪ್ರಜಾಪ್ರಭುತ್ವದ ಮೌಲ್ಯಗಳು, ಶಿಕ್ಷಣ ಮತ್ತು ಸಮಾನತೆಯ ಆದರ್ಶಗಳು ಇಂದಿಗೂ ಭಾರತದ ತಳಹದಿಯಾಗಿವೆ.

Posted On: 20 JUN 2022 8:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೈಸೂರಿನ ಶ್ರೀ ಸುತ್ತೂರು ಮಠದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರು. ಪರಮಪೂಜ್ಯ ಶ್ರೀ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ,ಶ್ರೀ ಸಿದ್ದೇಶ್ವರ ಸ್ವಾಮೀಜಿ,  ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಮತ್ತು ಕೇಂದ್ರ ಸಚಿವ ಶ್ರೀ ಪ್ರಹ್ಲಾದ ಜೋಶಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ಚಾಮುಂಡೇಶ್ವರಿ ದೇವಿಗೆ ನಮಸ್ಕರಿಸಿ, ಮಠದಲ್ಲಿ ಮತ್ತು ಸಂತರ ನಡುವೆ ಇರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಶ್ರೀ ಸುತ್ತೂರು ಮಠದ ಆಧ್ಯಾತ್ಮಿಕ ಪರಂಪರೆಗೆ ಅವರು ಗೌರವ ಸಲ್ಲಿಸಿದರು. ಈಗ ಚಾಲ್ತಿಯಲ್ಲಿರುವ ಆಧುನಿಕ ಉಪಕ್ರಮಗಳೊಂದಿಗೆ ಸಂಸ್ಥೆಯು ತನ್ನ ದೀಕ್ಷೆಗಳಿಗೆ ಹೊಸ ವಿಸ್ತರಣೆಯನ್ನು ಒದಗಿಸುತ್ತದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ಪ್ರಧಾನಮಂತ್ರಿಯವರು ನಾರದ ಭಕ್ತಿ ಸೂತ್ರ, ಶಿವಸೂತ್ರ ಮತ್ತು ಪತಂಜಲಿ ಯೋಗ ಸೂತ್ರಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಬರೆದ ಅನೇಕ ‘ಭಾಷ್ಯ’ಗಳನ್ನು ಲೋಕಾರ್ಪಣೆ ಮಾಡಿದರು. ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಪ್ರಾಚೀನ ಭಾರತದ ‘ಶ್ರುತಿ’ ಸಂಪ್ರದಾಯಕ್ಕೆ ಸೇರಿದವರು ಎಂದು ಪ್ರಧಾನ ಮಂತ್ರಿ ಅವರು ಅಭಿಪ್ರಾಯಪಟ್ಟರು.

ಧರ್ಮಗ್ರಂಥಗಳ ಪ್ರಕಾರ ಜ್ಞಾನದಷ್ಟು ಉದಾತ್ತವಾದದ್ದು, ಶ್ರೇಷ್ಟವಾದುದು ಯಾವುದೂ ಇಲ್ಲ, ಅದಕ್ಕಾಗಿಯೇ ಋಷಿಗಳು ಜ್ಞಾನದಿಂದ ಕೂಡಿದ ಮತ್ತು ವಿಜ್ಞಾನದಿಂದ ಅಲಂಕೃತವಾದ ನಮ್ಮ ಅಂತಃಪ್ರಜ್ಞೆಯನ್ನು ರೂಪಿಸಿದರು, ಇದು ಜ್ಞಾನೋದಯದಿಂದ ಬೆಳೆಯುವಂತಹದು ಮತ್ತು ಸಂಶೋಧನೆಯಿಂದ ಬಲಗೊಳ್ಳುವಂತಹದು ಎಂದು ಪ್ರಧಾನಿ ಹೇಳಿದರು. “ಕಾಲ ಮತ್ತು ಯುಗಗಳು ಬದಲಾಗಿವೆ ಮತ್ತು ಭಾರತವು ಅನೇಕ ಚಂಡಮಾರುತಗಳನ್ನು, ಬಿರುಗಾಳಿಗಳನ್ನು  ಎದುರಿಸಿದೆ. ಆದರೆ, ಭಾರತದ ಅಂತಃಪ್ರಜ್ಞೆ ಕುಸಿದಾಗೆಲ್ಲ, ದೇಶದೆಲ್ಲೆಡೆ ಇರುವ ಸಂತರು ಮತ್ತು ಋಷಿಮುನಿಗಳು ಇಡೀ ಭಾರತದ ಅಂತರಾತ್ಮಕ್ಕೆ ಪುನಶ್ಚೇತನ ನೀಡಿದರು” ಎಂದೂ ಪ್ರಧಾನಮಂತ್ರಿ ಹೇಳಿದರು. ಶತಮಾನಗಳಷ್ಟು ದೀರ್ಘ  ಸಂಕಷ್ಟದ ಕಾಲದಲ್ಲಿ ದೇವಾಲಯಗಳು ಮತ್ತು ಮಠಗಳು ಸಂಸ್ಕೃತಿ ಮತ್ತು ಜ್ಞಾನವನ್ನು ಜೀವಂತವಾಗಿಟ್ಟವು ಎಂದು ಅವರು ನುಡಿದರು.

ಸತ್ಯದ ಅಸ್ತಿತ್ವವು ಕೇವಲ ಸಂಶೋಧನೆಯ ಆಧಾರದ ಮೇಲೆ ನಿಂತಿರುವುದಲ್ಲ,  ಅದು ಸೇವೆ ಮತ್ತು ತ್ಯಾಗವನ್ನು ಆಧರಿಸಿದೆ ಎಂದೂ ಪ್ರಧಾನಿ ಹೇಳಿದರು. ಸೇವೆ ಮತ್ತು ತ್ಯಾಗವನ್ನು ನಂಬಿಕೆಗಿಂತಲೂ ಮೇಲಿನ ಸ್ಥರದಲ್ಲಿ ಇರಿಸಿರುವ ಈ ಸ್ಪೂರ್ತಿಗೆ ಶ್ರಿ ಸುತ್ತೂರು ಮಠ ಮತ್ತು ಜೆಎಸ್ಎಸ್ ಮಹಾ ವಿದ್ಯಾಪೀಠ ಉದಾಹರಣೆಗಳಾಗಿವೆ ಎಂದವರು ಬಣ್ಣಿಸಿದರು.

ದಕ್ಷಿಣ ಭಾರತದ ಸಮಾನತೆ ಮತ್ತು ಆಧ್ಯಾತ್ಮಿಕ ತತ್ವಗಳ ಕುರಿತು ಮಾತನಾಡಿದ ಪ್ರಧಾನ ಮಂತ್ರಿ ಅವರು, "ನಮ್ಮ ಸಮಾಜಕ್ಕೆ ಭಗವಾನ್ ಬಸವೇಶ್ವರರು ನೀಡಿದ ಶಕ್ತಿ, ಪ್ರಜಾಪ್ರಭುತ್ವ, ಶಿಕ್ಷಣ ಮತ್ತು ಸಮಾನತೆಯ ಆದರ್ಶಗಳು ಈಗಲೂ ಭಾರತಕ್ಕೆ ಅಡಿಪಾಯವಾಗಿವೆ” ಎಂದು ಹೇಳಿದರು. ಶ್ರೀ ಮೋದಿ ಅವರು ಲಂಡನ್ನಲ್ಲಿ ಬಸವೇಶ್ವರರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡರು. ನಾವು ಮ್ಯಾಗ್ನಾಕಾರ್ಟಾ ಮತ್ತು ಭಗವಾನ್ ಬಸವೇಶ್ವರರ ಬೋಧನೆಗಳನ್ನು ಹೋಲಿಕೆ ಮಾಡಿದರೆ ಶತಮಾನಗಳ ಹಿಂದಿನ ಸಮಾನತೆಯ  ಸಮಾಜದ ದೃಷ್ಟಿ ನಮಗೆ ಗೋಚರಿಸುತ್ತದೆ ಎಂದು ಹೇಳಿದರು. ನಿಸ್ವಾರ್ಥ ಸೇವೆಯ ಈ ಸ್ಫೂರ್ತಿ ನಮ್ಮ ರಾಷ್ಟ್ರದ ಬುನಾದಿ ಎಂದು ಪ್ರಧಾನಿ ವಿಶ್ಲೇಷಿಸಿದರು. ‘ಅಮೃತ ಕಾಲ’ದ ಈ ಕಾಲಘಟ್ಟವು  ಸಂತರ ಬೋಧನೆಯಂತೆ ಸಬ್ಕಾ ಪ್ರಯಾಸ್ಗೆ ಉತ್ತಮ ಸಂದರ್ಭವಾಗಿದೆ ಎಂದು ಅವರು ಹೇಳಿದರು. ಇದಕ್ಕಾಗಿ ರಾಷ್ಟ್ರೀಯ ಪ್ರತಿಜ್ಞೆಗಳೊಂದಿಗೆ ನಮ್ಮ ಪ್ರಯತ್ನಗಳು ಸಾಗಬೇಕಾದ ಅಗತ್ಯವಿದೆ ಎಂದೂ ಅವರು ಪ್ರತಿಪಾದಿಸಿದರು.

ಭಾರತೀಯ ಸಮಾಜದಲ್ಲಿ ಶಿಕ್ಷಣದ ಸಹಜ ಸಾವಯವ ಬಾಂಧವ್ಯವನ್ನು  ಪ್ರಧಾನ ಮಂತ್ರಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.  "ಇಂದು, ಶಿಕ್ಷಣ ಕ್ಷೇತ್ರದಲ್ಲಿ 'ರಾಷ್ಟ್ರೀಯ ಶಿಕ್ಷಣ ನೀತಿ'ಯ ಉದಾಹರಣೆ ನಮ್ಮ ಮುಂದಿದೆ. ದೇಶದ ಪ್ರಕೃತಿಯ ಭಾಗವಾಗಿರುವ ಇದು ಸುಲಭವಾಗಿ, ನಮ್ಮ ಹೊಸ ಪೀಳಿಗೆಗೆ ದಕ್ಕುವಂತಾಗಬೇಕು. ಆ ಮೂಲಕ ಅದು ಅವರ ಮುನ್ನಡೆಗೆ ಪೂರಕವಾಗಬೇಕು.  ಇದಕ್ಕಾಗಿ ಸ್ಥಳೀಯ ಭಾಷೆಗಳಲ್ಲಿ ಕಲಿಯುವ ಆಯ್ಕೆಯ ಅವಕಾಶಗಳನ್ನು  ನೀಡಲಾಗುತ್ತಿದೆ” ಎಂದವರು ಹೇಳಿದರು. ದೇಶದ ಪರಂಪರೆಯ ಬಗ್ಗೆ ಒಬ್ಬನೇ ಒಬ್ಬ ಪ್ರಜೆಯೂ ಸಹ ಅರಿವು ಇಲ್ಲದವನಾಗಿರಬಾರದು ಎಂಬುದು ಸರ್ಕಾರದ ಇರಾದೆಯಾಗಿದೆ ಎಂದೂ ಶ್ರೀ ಮೋದಿ ಹೇಳಿದರು. ಈ ಅಭಿಯಾನದಲ್ಲಿ ಆಧ್ಯಾತ್ಮಿಕ ಸಂಸ್ಥೆಗಳ ಪಾತ್ರದ  ಮಹತ್ವವನ್ನು ಒತ್ತಿ ಹೇಳಿದ ಅವರು  ಹೆಣ್ಣು ಮಕ್ಕಳ ಶಿಕ್ಷಣ, ಪರಿಸರ, ಜಲ ಸಂರಕ್ಷಣೆ ಮತ್ತು ಸ್ವಚ್ಛ ಭಾರತದಂತಹ ಅಭಿಯಾನಗಳಲ್ಲಿಯೂ  ಆಧ್ಯಾತ್ಮಿಕ ಸಂಸ್ಥೆಗಳಿಗೆ ಮಹತ್ವದ ಪಾತ್ರವಿದೆ ಎಂದರು.  ನೈಸರ್ಗಿಕ ಕೃಷಿಯ ಮಹತ್ವವನ್ನೂ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಎಲ್ಲರೂ ತಮ್ಮ ಮೇಲೆ ಇಟ್ಟಿರುವ ನಿರೀಕ್ಷೆಗಳನ್ನು ಈಡೇರಿಸುವಂತಾಗಲು ಶ್ರೇಷ್ಟ ಪರಂಪರೆ ಮತ್ತು ಸಂತರಿಂದ ಮಾರ್ಗದರ್ಶನ ಮತ್ತು ಆಶೀರ್ವಾದವನ್ನು ಕೋರುವುದಾಗಿ ಹೇಳುವ  ಮೂಲಕ ಪ್ರಧಾನಮಂತ್ರಿಯವರು ತಮ್ಮ ಮಾತುಗಳನ್ನು ಸಮಾರೋಪಗೊಳಿಸಿದರು.

.

 

 

******



(Release ID: 1835704) Visitor Counter : 210