ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರು ಜೂನ್ 17 ಮತ್ತು 18 ರಂದು  ಗುಜರಾತ್‌ಗೆ  ಭೇಟಿ ನೀಡಲಿದ್ದಾರೆ


ವಡೋದರಾದಲ್ಲಿ ಗುಜರಾತ್ ಗೌರವ್ ಅಭಿಯಾನದಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಲಿದ್ದಾರೆ

ಪ್ರಧಾನಮಂತ್ರಿಯವರು  21,000 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವರು 

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1.4 ಲಕ್ಷಕ್ಕೂ ಅಧಿಕ ಮನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ

16,000 ಕೋಟಿ ರೂ.ಗಳ ಯೋಜನೆಗಳ ಮೂಲಕ ಈ ಪ್ರದೇಶದಲ್ಲಿ ರೈಲ್ವೆ ಸಂಪರ್ಕಕ್ಕೆ ಪ್ರಮುಖ ಉತ್ತೇಜನವಾಗಲಿದೆ

ಜನಸಾಮಾನ್ಯರ ಸುಗಮ ಸೌಕರ್ಯವನ್ನು ಹೆಚ್ಚಿಸಲು ಬಹು ಅಭಿವೃದ್ಧಿ ಕಾರ್ಯಗಳು

ರಾಜ್ಯದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಹೆಚ್ಚಿಸಲು ಯೋಜನೆಗಳ ಆರಂಭ 

ಪಾವಗಡ್ ಬೆಟ್ಟದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಕಾಳಿಕಾ ಮಾತೆಯ ದೇವಾಲಯವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ

Posted On: 16 JUN 2022 3:01PM by PIB Bengaluru

 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 17 ಮತ್ತು 18 ರಂದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಜೂನ್ 18 ರಂದು ಬೆಳಿಗ್ಗೆ 9:15 ಕ್ಕೆ, ಪಾವಗಡ್ ಬೆಟ್ಟದಲ್ಲಿರುವ ಶ್ರೀ ಕಾಳಿಕಾ ಮಾತೆಯ ಜೀರಣೋದ್ದಾರವಾದ  ದೇವಸ್ಥಾನಕ್ಕೆ ಪ್ರಧಾನಮಂತ್ರಿಯವರು ಭೇಟಿ ನೀಡಿ ಉದ್ಘಾಟನೆ ಮಾಡಲಿದ್ದಾರೆ, ನಂತರ 11:30 ಕ್ಕೆ ವಿರಾಸತ್ ವನಕ್ಕೆ ಭೇಟಿ ನೀಡಲಿದ್ದಾರೆ. ನಂತರ, ಮಧ್ಯಾಹ್ನ 12:30 ರ ಸುಮಾರಿಗೆ, ಅವರು ವಡೋದರಾದಲ್ಲಿ ಗುಜರಾತ್ ಗೌರವ್ ಅಭಿಯಾನದಲ್ಲಿ ಭಾಗವಹಿಸುತ್ತಾರೆ, ಅಲ್ಲಿ ಅವರು 21,000 ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

ಗುಜರಾತ್ ಗೌರವ್ ಅಭಿಯಾನ
ವಡೋದರಾದಲ್ಲಿ ಗುಜರಾತ್ ಗೌರವ ಅಭಿಯಾನದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿಯವರು 16,000 ಕೋಟಿ ರೂ.ಗಳ ವಿವಿಧ ರೈಲ್ವೆ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವುಗಳಲ್ಲಿ 357 ಕಿಮೀ ಉದ್ದದ ಹೊಸ ಪಾಲನ್‌ಪುರ್‌ನ - ಮೀಸಲಾದ ಸರಕು ಸಾಗಣೆ ಕಾರಿಡಾರ್‌ನ ಮಾದರ್ ವಿಭಾಗ; 166 ಕಿಮೀ ಉದ್ದದ ಅಹಮದಾಬಾದ್-ಬೋಟಾಡ್ ವಿಭಾಗದ ಗೇಜ್ ಪರಿವರ್ತನೆ; 81 ಕಿಮೀ ಉದ್ದದ ಪಾಲನ್‌ಪುರದ ವಿದ್ಯುದೀಕರಣ - ಮಿತಾ ವಿಭಾಗ ಸೇರಿವೆ. ರೈಲ್ವೇ ವಲಯದಲ್ಲಿ ಇತರ ಉಪಕ್ರಮಗಳ ಶಿಲಾನ್ಯಾಸದೊಂದಿಗೆ ಸೂರತ್, ಉದ್ನಾ, ಸೋಮನಾಥ್ ಮತ್ತು ಸಬರಮತಿ ನಿಲ್ದಾಣಗಳ ಪುನರಾಭಿವೃದ್ಧಿಯ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ. ಈ ಯೋಜನೆಗಳು ಸಾಗಾಣಿಕೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಈ ಪ್ರದೇಶದಲ್ಲಿ ಉದ್ಯಮ ಮತ್ತು ಕೃಷಿ ವಲಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಯೋಜನೆಗಳು ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುತ್ತವೆ ಮತ್ತು ಪ್ರಯಾಣಿಕರ ಸೌಕರ್ಯಗಳನ್ನು ಹೆಚ್ಚಿಸುತ್ತವೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ, ನಗರ ಪ್ರದೇಶದಲ್ಲಿ ಸುಮಾರು 1,800 ಕೋಟಿ ರೂಪಾಯಿ ಮೌಲ್ಯದ ಮನೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ 1,530 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಮನೆಗಳು ಸೇರಿದಂತೆ ಒಟ್ಟು 1.38 ಲಕ್ಷ ಮನೆಗಳನ್ನು ಪ್ರಧಾನ ಮಂತ್ರಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಇದರೊಂದಿಗೆ ಸುಮಾರು 310 ಕೋಟಿ ರೂಪಾಯಿ ಮೌಲ್ಯದ ಸುಮಾರು 3000 ಮನೆಗಳ ಖಟ್ ಮುಹೂರ್ತ ಕೂಡ ನಡೆಯಲಿದೆ.
ಕಾರ್ಯಕ್ರಮದಲ್ಲಿ, ಖೇಡಾ, ಆನಂದ್, ವಡೋದರಾ, ಛೋಟಾ ಉದೇಪುರ್ ಮತ್ತು ಪಂಚಮಹಲ್‌ನಲ್ಲಿ 680 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಧಾನ ಮಂತ್ರಿಯವರು ಲೋಕಾರ್ಪಣೆ ಮಾಡಲಿದ್ದಾರೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ, ಇದು ಈ ಪ್ರದೇಶದಲ್ಲಿ ವಾಸಿಸುವ ಸೌಕರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಗುಜರಾತ್‌ನ ದಭೋಯ್ ತಾಲೂಕಿನ ಕುಂಧೇಲಾ ಗ್ರಾಮದಲ್ಲಿ ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯದ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ. ವಡೋದರಾ ನಗರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ವಿಶ್ವವಿದ್ಯಾನಿಲಯವನ್ನು ಸುಮಾರು 425 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು, ಇದು 2500 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಅಗತ್ಯಗಳನ್ನು ಪೂರೈಸುತ್ತದೆ.
ತಾಯಿ ಮತ್ತು ಮಗುವಿನ ಆರೋಗ್ಯವನ್ನು ಸುಧಾರಿಸುವತ್ತ ಗಮನಹರಿಸುವುದರೊಂದಿಗೆ ಪ್ರಧಾನ ಮಂತ್ರಿ ‘ಮುಖ್ಯಮಂತ್ರಿ ಮಾತೃಶಕ್ತಿ ಯೋಜನೆ’ಗೆ ಚಾಲನೆ ನೀಡಲಿದ್ದು, ಇದು 800 ಕೋಟಿ ರೂ. ಯೋಜನೆಯಡಿ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳಿಂದ 2 ಕೆಜಿ ಕಡಲೆ, 1 ಕೆಜಿ ತೊಗರಿಬೇಳೆ ಮತ್ತು 1 ಕೆಜಿ ಖಾದ್ಯ ಎಣ್ಣೆಯನ್ನು ಉಚಿತವಾಗಿ ನೀಡಲಾಗುತ್ತದೆ. ಪ್ರಧಾನ ಮಂತ್ರಿಗಳು ಸುಮಾರು 120 ಕೋಟಿ ರೂಪಾಯಿಗಳನ್ನು ‘ಪೋಷಣ್ ಸುಧಾ ಯೋಜನೆ’ಗೆ ವಿತರಿಸಲಿದ್ದಾರೆ, ಇದನ್ನು ಈಗ ರಾಜ್ಯದ ಎಲ್ಲಾ ಬುಡಕಟ್ಟು ಫಲಾನುಭವಿಗಳಿಗೆ ವಿಸ್ತರಿಸಲಾಗಿದೆ. ಬುಡಕಟ್ಟು ಜಿಲ್ಲೆಗಳ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ನೀಡುವ ಮತ್ತು ಪೌಷ್ಟಿಕಾಂಶದ ಬಗ್ಗೆ ಶಿಕ್ಷಣ ನೀಡುವ ಪ್ರಯೋಗ ಯಶಸ್ವಿಯಾದ ನಂತರ ಈ ಹೆಜ್ಜೆ ಇಡಲಾಗಿದೆ.

ಶ್ರೀ ಕಾಳಿಕಾ ಮಾತೆಯ ದೇವಸ್ಥಾನದಲ್ಲಿ ಪ್ರಧಾನಮಂತ್ರಿ
ಪಾವಗಡ್ ಬೆಟ್ಟದಲ್ಲಿ ಶ್ರೀ ಕಾಳಿಕಾ ಮಾತೆಯ ಜೀರ್ಣೋದ್ಧಾರಗೊಂಡ ಮಂದಿರವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಇದು ಇಲ್ಲಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ದೇವಾಲಯದ ಪುನರಾಭಿವೃದ್ಧಿಯನ್ನು 2 ಹಂತಗಳಲ್ಲಿ ಮಾಡಲಾಗಿದೆ. ಮೊದಲ ಹಂತದ ಪುನರಾಭಿವೃದ್ಧಿಯ ಉದ್ಘಾಟನೆಯನ್ನು ಈ ವರ್ಷದ ಆರಂಭದಲ್ಲಿ ಏಪ್ರಿಲ್‌ನಲ್ಲಿ ಪ್ರಧಾನ ಮಂತ್ರಿಯವರು ಮಾಡಿದರು. ಕಾರ್ಯಕ್ರಮದಲ್ಲಿ ಉದ್ಘಾಟನೆಗೊಳ್ಳಲಿರುವ ಎರಡನೇ ಹಂತದ ಪುನರಾಭಿವೃದ್ಧಿಯ ಶಂಕುಸ್ಥಾಪನೆಯನ್ನು 2017 ರಲ್ಲಿ ಪ್ರಧಾನ ಮಂತ್ರಿಯವರು ಹಾಕಿದರು. ಇದು ದೇವಾಲಯದ ತಳಹದಿಯ ವಿಸ್ತರಣೆ ಮತ್ತು ಮೂರು ಹಂತಗಳಲ್ಲಿ ದೇವಸ್ಥಾನದ ಸಂಕೀರ್ಣ 'ಪರಿಸರ', ಬೀದಿ ದೀಪಗಳು, ಸಿಸಿಟಿವಿ ವ್ಯವಸ್ಥೆ ಇತ್ಯಾದಿ  ಮುಂತಾದ ಸೌಕರ್ಯಗಳನ್ನು ಒಳಗೊಂಡಿದೆ.

 

****



(Release ID: 1834563) Visitor Counter : 137