ಸಂಪುಟ
azadi ka amrit mahotsav

ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಕಛೇರಿಯ ಪಲೈಸ್ ಡೆಸ್ ನೇಷನ್ಸ್‌ನಲ್ಲಿ ಬಳಸಲು 'ವೇ ಫೈಂಡಿಂಗ್ ಅಪ್ಲಿಕೇಶನ್' ಕುರಿತು ಭಾರತ ಮತ್ತು ವಿಶ್ವಸಂಸ್ಥೆಯ ನಡುವಿನ ಒಪ್ಪಂದಕ್ಕೆ ಸಚಿವ ಸಂಪುಟದ ಅನುಮೋದನೆ

Posted On: 14 JUN 2022 4:11PM by PIB Bengaluru

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟವು, 'ವೇ ಫೈಂಡಿಂಗ್ ಅಪ್ಲಿಕೇಶನ್' ಅನ್ನು ಜಿನೀವಾದಲ್ಲಿರುವ ಪಲೈಸ್ ಡೆಸ್ ನೇಷನ್ಸ್, ವಿಶ್ವಸಂಸ್ಥೆಯ ಕಚೇರಿಯಲ್ಲಿ (ಯುಎನ್‌ಒಜಿ) ಬಳಸಲು ಭಾರತ ಸರ್ಕಾರ ಮತ್ತು ವಿಶ್ವಸಂಸ್ಥೆಯ ನಡುವಿನ ಒಪ್ಪಂದಕ್ಕೆ ಸಹಿ ಹಾಕುವ ಪ್ರಸ್ತಾವನೆಯನ್ನು ಅನುಮೋದಿಸಿದೆ.

ವಿಶ್ವ ಸಂಸ್ಥೆಯು(ಯುಎನ್) 1945 ರಲ್ಲಿ ಸ್ಥಾಪಿಸಲಾದ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ಇದು ಪ್ರಸ್ತುತ 193 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಭಾರತವು ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯವಾಗಿದೆ.

ಐದು ಕಟ್ಟಡಗಳು ಮತ್ತು 21 ಮಹಡಿಗಳನ್ನು ಒಳಗೊಂಡಿರುವ ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಕಚೇರಿ (ಯುಎನ್‌ಒಜಿ), ಐತಿಹಾಸಿಕ ಪಲೈಸ್ ಡೆಸ್ ನೇಷನ್ಸ್‌ನಲ್ಲಿದೆ. ವಿವಿಧ ಸಭೆಗಳು ಮತ್ತು ಸಮಾವೇಶಗಳಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಸದಸ್ಯರು ಮತ್ತು ಸಾರ್ವಜನಿಕರು ಯುಎನ್‌ಒಜಿ ಗೆ ಭೇಟಿ ನೀಡುತ್ತಾರೆ.

ಕಟ್ಟಡಗಳ ಸಂಕೀರ್ಣತೆ ಮತ್ತು ಬೃಹತ್ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು, ಸಂದರ್ಶಕರು ಮತ್ತು ಇತರ ಪ್ರತಿನಿಧಿಗಳು ಎಲ್ಲಾ ಭದ್ರತಾ ದೃಷ್ಟಿಕೋನಗಳಿಗೆ ಬದ್ಧರಾಗಿ ಆವರಣದೊಳಗೆ ತಮ್ಮ ದಾರಿಯನ್ನು ಕಂಡುಕೊಳ್ಳಲು ಸಹಾಯ ಮಾಡುವ ನ್ಯಾವಿಗೇಷನಲ್ ಅಪ್ಲಿಕೇಶನ್‌ನ ಅವಶ್ಯಕತೆ ಇತ್ತು.

ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್‌) ಆಧಾರಿತ ಅಪ್ಲಿಕೇಶನ್‌ಗಳು ತೆರೆದ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ, ಹೆಚ್ಚು ನಿಖರವಾದ ಇನ್-ಬಿಲ್ಡಿಂಗ್ ನ್ಯಾವಿಗೇಷನಲ್ ಅಪ್ಲಿಕೇಶನ್ ಸಂದರ್ಶಕರಿಗೆ ಕೊಠಡಿ ಮತ್ತು ಕಚೇರಿಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

2020ರಲ್ಲಿ 75ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವದ ಸಂದರ್ಭದಲ್ಲಿ 'ವೇ ಫೈಂಡಿಂಗ್ ಅಪ್ಲಿಕೇಶನ್' ಅಭಿವೃದ್ಧಿಯ ಯೋಜನೆಯನ್ನು ಭಾರತ ಸರ್ಕಾರದಿಂದ ವಿಶ್ವಸಂಸ್ಥೆಗೆ ದೇಣಿಗೆಯಾಗಿ ಪರಿಗಣಿಸಲಾಗಿದೆ. ಅಪ್ಲಿಕೇಶನ್‌ನ ಅಭಿವೃದ್ಧಿ ನಿಯೋಜನೆ ಮತ್ತು ನಿರ್ವಹಣೆಗೆ ಅಂದಾಜು ವೆಚ್ಚವು 2 ದಶಲಕ್ಷ ಡಾಲರ್‌ ಆಗಿದೆ.

ಯೋಜನೆಯು ಯುಎನ್‌ಒಜಿಯ ಪಲೈಸ್ ಡೆಸ್ ನೇಷನ್ಸ್ ಆವರಣದಲ್ಲಿ ಮಾರ್ಗದರ್ಶನವನ್ನು ಸುಲಭಗೊಳಿಸಲು ಸಾಫ್ಟ್‌ವೇರ್ ಆಧಾರಿತ 'ವೇ ಫೈಂಡಿಂಗ್ ಅಪ್ಲಿಕೇಶನ್' ನ ಅಭಿವೃದ್ಧಿ ನಿಯೋಜನೆ ಮತ್ತು ನಿರ್ವಹಣೆಯನ್ನು ಒಳಗೊಂಡಿದೆ. ಯುಎನ್‌ಒಜಿಯ ಐದು ಕಟ್ಟಡಗಳಲ್ಲಿ ಹರಡಿರುವ 21 ಮಹಡಿಗಳಲ್ಲಿ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ತಮ್ಮ ಮಾರ್ಗವನ್ನು ಕಂಡುಹಿಡಿಯಲು ಅಪ್ಲಿಕೇಶನ್ ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಇಂಟರ್ನೆಟ್ ಸಂಪರ್ಕದೊಂದಿಗೆ ಆಂಡ್ರಾಯ್ಡ್‌  ಮತ್ತು ಐಒಎಸ್‌  ಸಾಧನಗಳಲ್ಲಿ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ.  ಆ್ಯಪ್ ನ  ಅಭಿವೃದ್ಧಿಯನ್ನು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (ಸಿ-ಡಾಟ್) ಗೆ ವಹಿಸಲಾಗಿದೆ, ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯ (ಸಿಒಟಿ) ಸ್ವಾಯತ್ತ ದೂರ ಸಂಪರ್ಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿದೆ.

ಈ ಯೋಜನೆಯು ಭಾರತ ಸರ್ಕಾರದಿಂದ  ವಿಶ್ವಸಂಸ್ಥೆಗೆ ಮಹತ್ವದ ಕೊಡುಗೆಯಾಗಿದೆ. ಈ ಯೋಜನೆಯು ಭಾರತದ ತಾಂತ್ರಿಕ ಸಾಮರ್ಥ್ಯಗಳನ್ನು ಎತ್ತಿ ತೋರಿಸುವುದಲ್ಲದೆ ವಿಶ್ವಸಂಸ್ಥೆಗೆ ಮಟ್ಟದ ವೇದಿಕೆಯಲ್ಲಿ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ಜಗತ್ತಿನಾದ್ಯಂತ ಅಲ್ಲಿಗೆ ಬರುವವರ ಮೊಬೈಲ್‌ಗಳಲ್ಲಿ 'ಭಾರತದಲ್ಲಿ ತಯಾರಿಸಿ' ದ ಆ್ಯಪ್ ವಿಶ್ವಸಂಸ್ಥೆಯಲ್ಲಿ ಭಾರತದ ಉಪಸ್ಥಿತಿಯನ್ನು ಗಮನಿಸುವಂತೆ ಮಾಡುತ್ತದೆ ಮತ್ತು ಬಲವಾದ ಸಾಫ್ಟ್‌ವೇರ್ ತಂತ್ರಜ್ಞಾನ ಪರಿಣತಿಯ ರೂಪದಲ್ಲಿ ಭಾರತದ ತಂತ್ರಾಂಶದ ಶಕ್ತಿಯನ್ನು ಪ್ರದರ್ಶಿಸುತ್ತದೆ.

 

***


(Release ID: 1834095) Visitor Counter : 187