ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ.) 2020 ಅನುಷ್ಠಾನದ ಪ್ರಗತಿ ಪರಿಶೀಲನೆಗೆ ಪ್ರಧಾನ ಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ


ಎನ್.ಇ.ಪಿ.2020ನ್ನು ಲಭ್ಯತೆ, ಸಮಾನತೆ, ಒಳಗೊಳ್ಳುವಿಕೆ ಮತ್ತು ಗುಣಮಟ್ಟದ ಉದ್ದೇಶಗಳೊಂದಿಗೆ ಅನುಷ್ಠಾನ ಮಾಡಲಾಗುತ್ತಿದೆ: ಪ್ರಧಾನ ಮಂತ್ರಿ.

ಶಾಲೆಗೆ ಹೋಗುವ ಮಕ್ಕಳಲ್ಲಿ ತಂತ್ರಜ್ಞಾನದ ಅತಿಯಾದ ಬಳಕೆ ನಿವಾರಿಸಲು ಆನ್ ಲೈನ್ ಮತ್ತು ಭೌತಿಕ ಕಲಿಕೆಯ ಹೈಬ್ರಿಡ್ ವ್ಯವಸ್ಥೆ ಅಭಿವೃದ್ದಿ ಅವಶ್ಯ: ಪ್ರಧಾನ ಮಂತ್ರಿ.

ವಿಜ್ಞಾನ ಪ್ರಯೋಗಾಲಯಗಳಿರುವ ಸೆಕೆಂಡರಿ ಶಾಲೆಗಳು ಆ ಪ್ರದೇಶದಲ್ಲಿ ಮಣ್ಣು ಪರೀಕ್ಷೆಗೆ ರೈತರಿಗೆ ನೆರವಾಗಲು ಪ್ರಧಾನ ಮಂತ್ರಿ ಸಲಹೆ.

ರಾಷ್ಟ್ರೀಯ ಚಾಲನಾ ಸಮಿತಿಯ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ರಚನೆಯಾಗುತ್ತಿದೆ.

ಶೈಕ್ಷಣಿಕ ಬ್ಯಾಂಕ್ ಆಫ್ ಕ್ರೆಡಿಟ್ ನಲ್ಲಿ ಸುಮಾರು 400 ಉನ್ನತ ಶಿಕ್ಷಣ ಸಂಸ್ಥೆಗಳು ನೊಂದಾಯಿಸಿಕೊಳ್ಳುವ ಮೂಲಕ ಉನ್ನತ ಶಿಕ್ಷಣದಲ್ಲಿ ಬಹು ಪ್ರವೇಶ - ನಿರ್ಗಮನ ವಾಸ್ತವದ ಸಂಗತಿಯಾಗಲಿದೆ.

ಯು.ಜಿ.ಸಿ. ಮಾರ್ಗದರ್ಶಿಗಳನ್ವಯ ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಎರಡು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಲು ಅವಕಾಶ.

ಎಚ್.ಇ.ಐ.ಗಳಿಗೆ ಪೂರ್ಣ ಪ್ರಮಾಣದ ಆನ್ ಲೈನ್ ಕೋರ್ಸ್ ಗಳನ್ನು ನಡೆಸಲು ಅವಕಾಶ ನೀಡಿಕೆಯಿಂದ ಆನ್ ಲೈನ್ ಕಲಿಕೆಗೆ ಭಾರೀ ಬೆಂಬಲ ಮತ್ತು ಆನ್ ಲೈನ್ ವಿಷಯ ಸಾಮಗ್ರಿ (ಕಂಟೆಂಟ್)ಗೆ ಅನುಮತಿಸುವಿಕೆಯ ಮಿತಿ ಶೇ.40ಕ್ಕೆ ಏರಿಕೆ.

ಶೈಕ್ಷಣಿಕ ಸಾಧನೆಗೆ ಸಂಬಂಧಿಸಿದಂತೆ ಇರುವ ಭಾಷಾ ಸಂಬಂಧಿ ಅಡೆ ತಡೆಗಳ ನಿವಾರಣೆಗೆ ಬಹುಭಾಷಿಕತೆಗೆ ಉತ್ತೇಜನ

Posted On: 07 MAY 2022 6:05PM by PIB Bengaluru

ಪ್ರಧಾನ ಮಂತ್ರಿ ಅವರಿಂದು ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ.) 2020 ರ ಅನುಷ್ಠಾನಕ್ಕೆ ಸಂಬಂಧಿಸಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಎನ್.ಇ.ಪಿ. 2020 ಕಾರ್ಯಾರಂಭ ಮಾಡಿದ ಎರಡು ವರ್ಷಗಳಲ್ಲಿ ಅದರ ಅನುಷ್ಠಾನವು,  ನೀತಿಯಡಿ ರೂಪಿಸಲಾದ ಲಭ್ಯತೆ, ಸಮಾನತೆ, ಒಳಗೊಳ್ಳುವಿಕೆ ಮತ್ತು ಗುಣಮಟ್ಟಗಳ ಉದ್ದೇಶಗಳ ಸಾಧನೆಗೆ ಹಲವಾರು ಉಪಕ್ರಮಗಳು ಜಾರಿಗೆ ಬಂದಿರುವುದನ್ನು ನೋಡಿದೆ. ಶಾಲಾ ಮಕ್ಕಳನ್ನು ಪತ್ತೆ ಮಾಡಿ ಅವರನ್ನು ಮುಖ್ಯ ವಾಹಿನಿಗೆ ಮರಳಿ ಕರೆತರುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳೂ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಬಹು ಪ್ರವೇಶ ಮತ್ತು ನಿರ್ಗಮನದ ಅವಕಾಶಗಳ ಸೇರ್ಪಡೆ ಸಹಿತ ಹಲವಾರು  ಪರಿವರ್ತನಾಶೀಲ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಇವುಗಳು ನಾವು “ಅಮೃತ ಕಾಲ”ಕ್ಕೆ ಪ್ರವೇಶ ಪಡೆಯುತಿರುವ ಕಾಲಘಟ್ಟದಲ್ಲಿ  ದೇಶದ ಪ್ರಗತಿಯನ್ನು ವ್ಯಾಖ್ಯಾನಿಸಲಿವೆ ಮತ್ತು ಅದರ ಮುಂಚೂಣಿ ವಹಿಸಲಿವೆ.    
ಶಾಲಾ ಶಿಕ್ಷಣ 
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ರಚನೆಯ ಕಾರ್ಯದ ಬಗ್ಗೆ ಪ್ರಧಾನ ಮಂತ್ರಿ ಅವರಿಗೆ ವಿವರ ಒದಗಿಸಲಾಯಿತು. ರಾಷ್ಟ್ರೀಯ ಚಾಲನಾ ಸಮಿತಿಯ ಮಾರ್ಗದರ್ಶನದಲ್ಲಿ ಅದು ಪ್ರಗತಿಯಲ್ಲಿರುವ ಬಗ್ಗೆ ತಿಳಿಸಲಾಯಿತು. ಶಾಲಾ ಶಿಕ್ಷಣದಲ್ಲಿ ಬಾಲವಾಟಿಕಾದಲ್ಲಿ ಗುಣಮಟ್ಟದ ಇ.ಸಿ.ಸಿ.ಇ, ನಿಪುಣ ಭಾರತ, ವಿದ್ಯಾ ಪ್ರವೇಶ, ಪರೀಕ್ಷಾ ಸುಧಾರಣೆಗಳು ಮತ್ತು ನವೀನ ಶಿಕ್ಷಣಶಾಸ್ತ್ರದ ಅಂಗಗಳಾದ ಕಲಾ ಸಂಯೋಜಿತ ಶಿಕ್ಷಣ, ಆಟಿಕೆ ಆಧಾರಿತ ಕಲಿಕಾ ವಿಧಾನಗಳನ್ನು ಉತ್ತಮ ಕಲಿಕೆಗಾಗಿ ಹಾಗು ಅದರ ಫಲಶ್ರುತಿಗಾಗಿ ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಶಾಲೆಗೆ ಹೋಗುವ ಮಕ್ಕಳು ತಂತ್ರಜ್ಞಾನಗಳ ವಿಪರೀತ ಬಳಕೆ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಆನ್ ಲೈನ್ ಮತ್ತು ಭೌತಿಕ ಕಲಿಕೆಯನ್ನು ಒಳಗೊಂಡ ಹೈಬ್ರಿಡ್ ವ್ಯವಸ್ಥೆಯೊಂದನ್ನು ಅಭಿವೃದ್ಧಿ ಮಾಡಬೇಕಾಗಿದೆ ಎಂದವರು ಅಭಿಪ್ರಾಯಪಟ್ಟರು. 
ಅಂಗನವಾಡಿ ಕೇಂದ್ರಗಳಲ್ಲಿ ಲಭ್ಯ ಇರುವ ದತ್ತಾಂಶಗಳನ್ನು ಮಕ್ಕಳು ಅಂಗನವಾಡಿಯಿಂದ ಶಾಲೆಗಳಿಗೆ ಸೇರುವಾಗ ಯಾವುದೇ ಅಡೆತಡೆ ಇಲ್ಲದೆ ಶಾಲಾ ದತ್ತಾಂಶಗಳ ಜೊತೆ ಸಂಯೋಜನೆಗೊಳ್ಳುವಂತಿರಬೇಕು. ಶಾಲೆಗಳಲ್ಲಿ ಮಕ್ಕಳನ್ನು ತಂತ್ರಜ್ಞಾನದ ಸಹಾಯದಿಂದ ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು.  ವಿದ್ಯಾರ್ಥಿಗಳಲ್ಲಿ ಪರಿಕಲ್ಪನಾತ್ಮಕ ಕೌಶಲ್ಯಗಳನ್ನು ಬೆಳೆಸಲು ದೇಶೀಯವಾಗಿ ಅಭಿವೃದ್ಧಿ ಮಾಡಿದ ಆಟಿಕೆಗಳನ್ನು ಬಳಸುವುದಕ್ಕೆ ಆದ್ಯತೆ ನೀಡಬೇಕು. ವಿಜ್ಞಾನ ಪ್ರಯೋಗಾಲಯಗಳನ್ನು ಹೊಂದಿರುವ ಸೆಕೆಂಡರಿ ಶಾಲೆಗಳು ಆ ಪ್ರದೇಶದಲ್ಲಿರುವ ರೈತರೊಂದಿಗೆ ಕೈಜೋಡಿಸಿ ಮಣ್ಣಿನ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಮಣ್ಣು ಪರೀಕ್ಷೆಯನ್ನು ಕೈಗೊಳ್ಳುವಂತೆಯೂ ಅವರು ಸಲಹೆ ಮಾಡಿದರು. 
ಉನ್ನತ ಶಿಕ್ಷಣದಲ್ಲಿ ಬಹುಶಿಸ್ತೀಯತೆ
ಬಹು ಪ್ರವೇಶ –ನಿರ್ಗಮನ, ಮತ್ತು ಜೀವನ ಪೂರ್ತಿ ಕಲಿಕೆಗಾಗಿ ಹಾಗು ಅದರಲ್ಲಿ ಹೊಂದಾಣಿಕೆಗಾಗಿ ಮಾರ್ಗದರ್ಶಿಗಳ ಜೊತೆ  ಡಿಜಿಲಾಕರ್ ವೇದಿಕೆಯಲ್ಲಿ ಶೈಕ್ಷಣಿಕ ಬ್ಯಾಂಕ್ ಆಫ್ ಕ್ರೆಡಿಟ್ ಕಾರ್ಯಾರಂಭದಿಂದಾಗಿ ವಿದ್ಯಾರ್ಥಿಗಳಿಗೆ ಅವರ ಅನುಕೂಲತೆಗಳಿಗೆ ತಕ್ಕಂತೆ ಮತ್ತು ಅವರ ಆಯ್ಕೆಗೆ ತಕ್ಕಂತೆ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಧಾನ ಮಂತ್ರಿ ಅವರಿಗೆ ತಿಳಿಸಲಾಯಿತು.  ಜೀವನ ಪೂರ್ತಿ ಕಲಿಕೆಗಾಗಿ ಹೊಸ ಸಾಧ್ಯತೆಗಳನ್ನು ರೂಪಿಸಲು ಮತ್ತು ಕಲಿಯುವವರಲ್ಲಿ ಚಿಕಿತ್ಸಕ ದೃಷ್ಟಿ  ಹಾಗು ಅಂತರ್ಶಿಸ್ತೀಯ ಚಿಂತನಾಕ್ರಮವನ್ನು ಮೂಡಿಸಲು ಯು.ಜಿ.ಸಿ.ಯು ಮಾರ್ಗದರ್ಶಿಗಳನ್ನು ಪ್ರಕಟಿಸಿದ್ದು, ಅದರನ್ವಯ ವಿದ್ಯಾರ್ಥಿಗಳು ಏಕಕಾಲಕ್ಕೆ ಎರಡು ಶೈಕ್ಷಣಿಕ ಕಾರ್ಯಕ್ರಮಗಳನ್ನು ಅಭ್ಯಸಿಸಬಹುದಾಗಿದೆ. ರಾಷ್ಟ್ರೀಯ ಉನ್ನತ ಶಿಕ್ಷಣ ಅರ್ಹತಾ ಚೌಕಟ್ಟು (ಎನ್.ಎಚ್.ಇ.ಕ್ಯು. ಎಫ್.) ಕೂಡಾ ಸಿದ್ಧತಾ ಹಂತದಲ್ಲಿದೆ. ಯು.ಜಿ.ಸಿ.ಯು ಈಗಿರುವ “ಪಠ್ಯಕ್ರಮ ಚೌಕಟ್ಟು ಮತ್ತು ಪದವಿ ಕಾರ್ಯಕ್ರಮದ ಕ್ರೆಡಿಟ್ ವ್ಯವಸ್ಥೆ” ಯನ್ನು ಎನ್.ಎಚ್.ಇ.ಕ್ಯು. ಎಫ್.ಗೆ ಅನುಗುಣವಾಗಿ ಪರಿಷ್ಕರಿಸುತ್ತಿದೆ. 
ಬಹು ಮಾದರಿ ಶಿಕ್ಷಣ 
ಶಾಲೆಗಳಲ್ಲಿ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆನ್ ಲೈನ್, ಮುಕ್ತ ಮತ್ತು ಬಹು ಮಾದರಿ ಕಲಿಕೆಯನ್ನು ಬಹುವಾಗಿ ಉತ್ತೇಜಿಸಲಾಗುವುದು. ಈ ಉಪಕ್ರಮವು ಕೋವಿಡ್ 19 ಜಾಗತಿಕ ಸಾಂಕ್ರಾಮಿಕದ ಕಾರಣದಿಂದ ಆಗಿರುವ ಕಲಿಕಾ ನಷ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಮತ್ತು ಇದು ದೇಶದ ದೂರದ ದುರ್ಗಮ ಮತ್ತು ಸಂಪರ್ಕ ಸೌಲಭ್ಯ ಇಲ್ಲದ ಭಾಗಗಳಿಗೆ ಶಿಕ್ಷಣ ತಲುಪುವಂತೆ ಮಾಡುವಲ್ಲಿ ಬಹಳ ದೊಡ್ಡ ಕೊಡುಗೆ ನೀಡಲಿದೆ. ಸ್ವಯಂ, ದೀಕ್ಷಾ, ಸ್ವಯಂ ಪ್ರಭಾ, ವರ್ಚುವಲ್ ಪ್ರಯೋಗಾಲಯಗಳು ಮತ್ತು ಇತರ ಆನ್ ಲೈನ್ ಸಂಪನ್ಮೂಲಗಳ ಪೋರ್ಟಲ್ ಗಳ ಹಿಟ್ ಗಳಲ್ಲಿ ಮತ್ತು ವಿದ್ಯಾರ್ಥಿ ನೋಂದಣೆಗಳಲ್ಲಿ ಬಹಳ ದೊಡ್ಡ ಏರಿಕೆಯಾಗಿದೆ. ಈ ಪೋರ್ಟಲ್ ಗಳು ಸಂಜ್ಞಾ ಭಾಷೆ ಸಹಿತ ಬಹು ಭಾರತೀಯ ಭಾಷೆಗಳಲ್ಲಿ ಅಧ್ಯಯನ ಸಾಮಗ್ರಿಗಳನ್ನು ಒದಗಿಸುತ್ತಿವೆ. ಮಾತ್ರವಲ್ಲ ದೃಷ್ಟಿ ಹೀನರಿಗೆ ಶ್ರಾವ್ಯ ಮಾದರಿಗಳನ್ನೂ ಇವುಗಳು ಒಳಗೊಂಡಿವೆ. 
ಮೇಲ್ಕಾಣಿಸಿದ ಅಂಶಗಳಲ್ಲದೆ,  ಇವುಗಳ ಜೊತೆಗೆ ಮುಕ್ತ ಮತ್ತು ದೂರ ಶಿಕ್ಷಣ (ಒ.ಡಿ.ಎಲ್.) ಹಾಗು ಆನ್ ಲೈನ್ ಕಾರ್ಯಕ್ರಮಗಳ ನಿಯಮಾವಳಿಗಳಡಿಯಲ್ಲಿ 59 ಉನ್ನತ ಶಿಕ್ಷಣ ಸಂಸ್ಥೆಗಳನ್ನು (ಎಚ್.ಇ.ಐ.ಗಳು) ಯು.ಜಿ.ಸಿ.ಯು ಅಧಿಸೂಚಿಸಿದ್ದು, ಅವುಗಳು 351 ಪೂರ್ಣ ಪ್ರಮಾಣದ ಕಾರ್ಯಕ್ರಮಗಳನ್ನು ಒದಗಿಸುತ್ತಿವೆ ಹಾಗು 86 ಎಚ್.ಇ.ಐ. ಗಳು 1081 ಒ.ಡಿ.ಎಲ್. ಕಾರ್ಯಕ್ರಮಗಳನ್ನು ನೀಡುತ್ತಿವೆ. ಕಾರ್ಯಕ್ರಮಗಳಲ್ಲಿ ಆನ್ ಲೈನ್ ಸಾಮಗ್ರಿಗಳ ಅನುಮತಿಸಬಹುದಾದ ಮಿತಿಯನ್ನು ಕೂಡಾ ಶೇ.40 ಕ್ಕೆ ಹೆಚ್ಚಿಸಲಾಗಿದೆ. 
ಅನ್ವೇಷಣೆ ಮತ್ತು ನವೋದ್ಯಮಗಳು
ನವೋದ್ಯಮಗಳ ಮತ್ತು ಅನ್ವೇಷಣೆಯ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು 28 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳ ಎಚ್.ಇ.ಐ.ಗಳಲ್ಲಿ 2,774 ಸಾಂಸ್ಥಿಕ ಅನ್ವೇಷಣಾ ಪರಿಷತ್ತುಗಳನ್ನು ಸ್ಥಾಪಿಸಲಾಗಿದೆ. ಅನ್ವೇಷಣಾ ಸಾಧನೆಗಳ ಮೇಲೆ ಸಂಸ್ಥೆಗಳಿಗೆ ಅಟಲ್ ಶ್ರೇಯಾಂಕ (ಎ.ಆರ್.ಐ.ಐ.ಎ.) ವನ್ನು ಎನ್.ಇ.ಪಿ.ಜೊತೆ ಜೋಡಿಸುವ ವ್ಯವಸ್ಥೆಯನ್ನು ಸಂಶೋಧನೆ, ಇನ್ಕ್ಯುಬೇಶನ್ ಮತ್ತು ನವೋದ್ಯಮಗಳ ಸಂಸ್ಕೃತಿಯನ್ನು ಬೆಳೆಸುವುದಕ್ಕಾಗಿ 2021 ರ ಡಿಸೆಂಬರ್ ತಿಂಗಳಲ್ಲಿ ಆರಂಭ ಮಾಡಲಾಗಿದೆ. ಎ.ಆರ್.ಐ.ಐ.ಎ.ಯಲ್ಲಿ 1438 ಸಂಸ್ಥೆಗಳು ಭಾಗವಹಿಸಿದ್ದವು. ಚಿಂತನೆ ಅಭಿವೃದ್ಧಿ, ಮೌಲ್ಯಮಾಪನ ಮತ್ತು ಪ್ರಯೋಗಾತ್ಮಕ ಕಲಿಕೆಗಾಗಿ ಆನ್ವಯಿಕ ಪ್ರಯೋಗಾಲಯಗಳಿಗಾಗಿ (ಐ.ಡಿ.ಇ.ಎ.) ಕೈಗಾರಿಕಾ ಸಹಭಾಗಿತ್ವದೊಂದಿಗೆ 100 ಸಂಸ್ಥೆಗಳಿಗೆ ಎ.ಐ.ಸಿ.ಟಿ.ಇ. ಹಣಕಾಸು ನೆರವು ನೀಡಿದೆ.  
ಭಾರತೀಯ ಭಾಷೆಗಳಿಗೆ ಉತ್ತೇಜನ
ಶಿಕ್ಷಣದಲ್ಲಿ ಬಹುಭಾಷಿಕತ್ವಕ್ಕೆ ಒತ್ತು ನೀಡಲಾಗುತ್ತಿದೆ ಮತ್ತು ಯಾವುದೇ ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆಗೆ ಇಂಗ್ಲೀಷ್ ಜ್ಞಾನ ಅಡ್ಡಿಯಾಗದಂತೆ ಖಾತ್ರಿಪಡಿಸಲಾಗುತ್ತಿದೆ. ಈ ಉದ್ದೇಶವನ್ನು ಮನದಲ್ಲಿಟ್ಟುಕೊಂಡು ರಾಜ್ಯಗಳು ತಳ ಮಟ್ಟದಲ್ಲಿ ಎರಡು/ ಮೂರು ಭಾಷೆಗಳಲ್ಲಿ ಪಠ್ಯ ಪುಸ್ತಕಗಳನ್ನು ಪ್ರಕಟಿಸುತ್ತಿವೆ. ಮತ್ತು ದೀಕ್ಷಾ ವೇದಿಕೆಯ ಪಠ್ಯವನ್ನು 33 ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಭಾರತೀಯ ಸಂಜ್ಞಾ ಭಾಷೆಯನ್ನು  (ಐ.ಎಸ್.ಎಲ್.) ಸೆಕೆಂಡರಿ ಮಟ್ಟದಲ್ಲಿ ಭಾಷಾ ವಿಷಯವಾಗಿ ಎನ್.ಐ.ಒ.ಎಸ್. ಅಳವಡಿಸಿದೆ. 
ಎನ್.ಟಿ.ಎ.ಯು 13 ಭಾಷೆಗಳಲ್ಲಿ ಜೆ.ಇ.ಇ. ಪರೀಕ್ಷೆಗಳನ್ನು ನಡೆಸಿದೆ. ಎ.ಐ.ಸಿ.ಟಿ.ಇ.ಯು ಎ.ಐ. ಆಧಾರಿತ ಭಾಷಾಂತರ ಆಪ್ ನ್ನು ಅಭಿವೃದ್ಧಿ ಮಾಡಿದೆ ಮತ್ತು ಅಧ್ಯಯನ ಸಾಮಗ್ರಿಗಳನ್ನು ಭಾರತೀಯ ಭಾಷೆಗಳಿಗೆ ಭಾಷಾಂತರ ಮಾಡಲಾಗುತ್ತಿದೆ. ಹಿಂದಿ, ಮರಾಠಿ, ಬೆಂಗಾಲಿ, ತಮಿಳು, ಮತ್ತು ಕನ್ನಡಗಳಲ್ಲಿ ತಾಂತ್ರಿಕ ಪುಸ್ತಕಗಳ ರಚನೆಯನ್ನು  ಕೈಗೆತ್ತಿಕೊಳ್ಳಲಾಗಿದೆ. 2021-22 ರಿಂದ 10 ರಾಜ್ಯಗಳಲ್ಲಿ 19 ಇಂಜಿನಿಯರಿಂಗ್ ಕಾಲೇಜುಗಳಲ್ಲಿ 6 ಭಾರತೀಯ ಭಾಷೆಗಳಲ್ಲಿ ಇಂಜಿನಿಯರಿಂಗ್ ಕೋರ್ಸುಗಳನ್ನು ಒದಗಿಸಲಾಗುತ್ತಿದೆ. ಎ.ಐ.ಸಿ.ಟಿ. ಯು ಪ್ರಾದೇಶಿಕ ಭಾಷೆಗಳಲ್ಲಿ ಹೆಚ್ಚುವರಿಯಾಗಿ 30/60 ಅಧಿಕ ಸೀಟುಗಳ ಅವಕಾಶವನ್ನು  ಮತ್ತು ಮಂಜೂರಾದ ಸೇರ್ಪಡೆ ಸಂಖ್ಯೆಯಲ್ಲಿ ಶೇ.50ರವರೆಗೆ ಪ್ರಾದೇಶಿಕ ಭಾಷಾ ಸೇರ್ಪಡೆಗೆ ಅವಕಾಶವನ್ನು  ಒದಗಿಸಿದೆ. 
ಭಾರತೀಯ ಜ್ಞಾನ ವ್ಯವಸ್ಥೆಯನ್ನು ಎನ್.ಇ.ಪಿ.2020 ರ ಶಿಫಾರಸುಗಳನ್ವಯ ಉತ್ತೇಜಿಸಲಾಗುತ್ತಿದೆ. ಭಾರತೀಯ ಜ್ಞಾನ ವ್ಯವಸ್ಥೆ (ಐ.ಕೆ.ಎಸ್.) ಕೋಶವನ್ನು ಎ.ಐ.ಸಿ.ಟಿ.ಇ.ಯಲ್ಲಿ ಸ್ಥಾಪಿಸಲಾಗಿದೆ  ಮತ್ತು ದೇಶಾದ್ಯಂತ 13 ಐ.ಕೆ.ಎಸ್. ಕೇಂದ್ರಗಳನ್ನು  ತೆರೆಯಲಾಗಿದೆ. 
ಸಭೆಯಲ್ಲಿ ಶಿಕ್ಷಣ (ಎಂ.ಒ.ಇ.)  ಮತ್ತು ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತಾ (ಎಂ.ಎಸ್.ಡಿ.ಇ.) ಸಚಿವರಾದ  ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ಎಂ.ಎಸ್.ಡಿ.ಇ. ಸಹಾಯಕ ಸಚಿವರಾದ ರಾಜೀವ ಚಂದ್ರಶೇಖರ್, ಎಂ.ಒ.ಇ.ಯ ಎಂ.ಒ.ಎಸ್. ಶ್ರೀ ಸುಭಾಸ್ ಸರ್ಕಾರ್, ಎಂ.ಒ.ಇ.ಯ ಎಂ.ಒ.ಎಸ್. ಶ್ರೀಮತಿ ಅನ್ನಪೂರ್ಣಾ ದೇವಿ, ಎಂ.ಒ.ಇ.ಯ ಎಂ.ಒ.ಎಸ್. ಶ್ರೀ ರಾಜಕುಮಾರ್ ರಂಜನ್ ಸಿಂಗ್, ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಪ್ರಧಾನ ಮಂತ್ರಿ ಅವರ ಸಲಹೆಗಾರರು, ಯು.ಜಿ.ಸಿ. ಅಧ್ಯಕ್ಷರು, ಎ.ಐ.ಸಿ.ಟಿ.ಇ. ಅಧ್ಯಕ್ಷರು, ಎನ್.ಸಿ.ವಿ.ಇ.ಟಿ. ಅಧ್ಯಕ್ಷರು, ಎನ್.ಸಿ.ಇ.ಆರ್.ಟಿ. ನಿರ್ದೇಶಕರು ಮತ್ತು ಶಿಕ್ಷಣ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

***



(Release ID: 1823592) Visitor Counter : 294