ಪ್ರಧಾನ ಮಂತ್ರಿಯವರ ಕಛೇರಿ
ಬಿಸಿಲಿನ ಝಳ (ಶಾಖ ತರಂಗ) ನಿರ್ವಹಣೆ ಮತ್ತು ಮುಂಗಾರು ಸಿದ್ಧತೆಗಳಿಗೆ ಸಂಬಂಧಿಸಿದ ಪರಿಸ್ಥಿತಿ ಪರಾಮರ್ಶೆಗೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನ ಮಂತ್ರಿ.
ಬಿಸಿಲಿನ ಝಳ ಅಥವಾ ಅಗ್ನಿ ಅವಘಡಗಳಲ್ಲಿ ಜೀವ ಹಾನಿ ತಡೆಯಲು ಸರ್ವ ಕ್ರಮ ಕೈಗೊಳ್ಳಿ: ಪ್ರಧಾನ ಮಂತ್ರಿ.
ದೇಶದಲ್ಲಿ ಅರಣ್ಯಗಳು ಕಾಡ್ಗಿಚ್ಚಿಗೆ ತುತ್ತಾಗುವ ಸಾಧ್ಯತೆಯನ್ನು ತಡೆಯಲು ಸಮಗ್ರ ಪ್ರಯತ್ನಗಳು ಅವಶ್ಯ: ಪ್ರಧಾನ ಮಂತ್ರಿ
“ಪ್ರವಾಹ ಪರಿಸ್ಥಿತಿ ನಿಭಾವಣೆಗೆ ಸಿದ್ಧತಾ ಯೋಜನೆಗಳನ್ನು” ತಯಾರಿಸಲು ರಾಜ್ಯಗಳಿಗೆ ಸಲಹೆ.
ಪ್ರವಾಹ ಪೀಡಿತ ರಾಜ್ಯಗಳಿಗೆ ಎನ್.ಡಿ.ಆರ್.ಎಫ್. ನಿಂದ ನಿಯೋಜನಾ ಯೋಜನೆ ತಯಾರಿ
ಕರಾವಳಿ ಪ್ರದೇಶಗಳಲ್ಲಿ ಹವಾಮಾನ ಎಚ್ಚರಿಕೆಗಳನ್ನು ಸಕಾಲದಲ್ಲಿ ನೀಡುವುದೂ ಸೇರಿದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳಲು ಪ್ರಧಾನ ಮಂತ್ರಿ ನಿರ್ದೇಶನ
ಸಮುದಾಯಗಳಲ್ಲಿ ಸೂಕ್ಷ್ಮತ್ವ ಮೂಡಿಸುವುದಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನು ಸಕ್ರಿಯವಾಗಿ ಬಳಸಿ: ಪ್ರಧಾನ ಮಂತ್ರಿ
Posted On:
05 MAY 2022 7:54PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಬಿಸಿಲಿನ ಝಳ (ಶಾಖ ತರಂಗ) ನಿರ್ವಹಣೆ ಮತ್ತು ಮುಂಗಾರು ಸಿದ್ಧತಾಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಿದರು.
ಸಭೆಯಲ್ಲಿ ಐ.ಎಂ.ಡಿ. ಮತ್ತು ಎನ್.ಡಿ.ಎಂ.ಎ. ಗಳು 2022 ರ ಮಾರ್ಚ್-ಮೇ ತಿಂಗಳಲ್ಲಿ ದೇಶಾದ್ಯಂತ ಅಧಿಕ ಉಷ್ಣಾಂಶ ಇರುವ ಬಗ್ಗೆ ಮಾಹಿತಿ ನೀಡಿದವು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯ, ಜಿಲ್ಲಾ ಮತ್ತು ನಗರ ಮಟ್ಟದಲ್ಲಿ ಪ್ರತಿಕ್ರಿಯಾ ಮಾದರಿಯಾಗಿ ಬಿಸಿಲಿನ ಝಳ/ ಉಷ್ಣಾಂಶ ಕ್ರಿಯಾ ಯೋಜನೆಯನ್ನು ತಯಾರಿಸಲು ಸಲಹೆ ಮಾಡಲಾಗಿದೆ. ನೈಋತ್ಯ ಮುಂಗಾರು ಸಿದ್ಧತೆಗೆ ಸಂಬಂಧಿಸಿ ಎಲ್ಲಾ ರಾಜ್ಯಗಳಿಗೂ “ಪ್ರವಾಹ ಸಿದ್ಧತಾ ಯೋಜನೆಗಳನ್ನು” ರೂಪಿಸಲು ಮತ್ತು ಮತ್ತು ಅವಶ್ಯ ಸೂಕ್ತ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲು ಸಲಹೆ ಮಾಡಲಾಗಿದೆ. ಎನ್.ಡಿ.ಆರ್.ಎಫ್. ಗೆ ಪ್ರವಾಹ ಬಾಧಿತ ರಾಜ್ಯಗಳಲ್ಲಿ ಅದರ ನಿಯೋಜನಾ ಯೋಜನೆಯನ್ನು ರೂಪಿಸಲೂ ಸಲಹೆ ಮಾಡಲಾಗಿದೆ. ಸಮುದಾಯಗಳಲ್ಲಿ ಸೂಕ್ಷ್ಮತ್ವ ಮೂಡಿಸಲು ಸಾಮಾಜಿಕ ಮಾಧ್ಯಮಗಳನ್ನು ಸಕ್ರಿಯವಾಗಿ ಮತ್ತು ವ್ಯಾಪಕವಾಗಿ ಬಳಸಲೂ ಸೂಚಿಸಲಾಗಿದೆ.
ಶಾಖದಿಂದ (ಶಾಖ ತರಂಗ) ಅಥವಾ ಅಗ್ನಿ ಅವಘಡಗಳಿಂದ ಸಾವುಗಳು ಸಂಭವಿಸುವುದನ್ನು ತಪ್ಪಿಸಲು ನಾವು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಪ್ರಧಾನ ಮಂತ್ರಿ ಇಂತಹ ಯಾವುದೇ ಘಟನೆಗಳ ಸಂದರ್ಭದಲ್ಲಿ ನಮ್ಮ ಪ್ರತಿಕ್ರಿಯಾ ಸಮಯ ಕನಿಷ್ಟವಾಗಿರಬೇಕು ಎಂದೂ ಹೇಳಿದರು.
ಉಷ್ಣಾಂಶ ಹೆಚ್ಚುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ನಿಯಮಿತವಾಗಿ ಅಗ್ನಿ ಸುರಕ್ಷಾ ಆಡಿಟ್ ನಡೆಸಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು. ದೇಶದಲ್ಲಿರುವ ವೈವಿಧ್ಯಮಯ ಅರಣ್ಯ ಪರಿಸರದಲ್ಲಿ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆಯನ್ನು ತಡೆಯಲು ಮತ್ತು ಅಗ್ನಿ ಅನಾಹುತದ ಸಂಭಾವ್ಯತೆಯನ್ನು ಸಕಾಲದಲ್ಲಿ ಪತ್ತೆ ಹಚ್ಚಲು ಮತ್ತು ಅಗ್ನಿ ಶಮನಕ್ಕಾಗಿ ಹಾಗು ಅಗ್ನಿ ಅಕಸ್ಮಿಕದ ಬಳಿಕ ಪುನಶ್ಚೇತನವನ್ನು ತ್ವರಿತಗೊಳಿಸುವುದಕ್ಕಾಗಿ ಅರಣ್ಯ ಸಿಬ್ಬಂದಿಗಳ ಸಾಮರ್ಥ್ಯವನ್ನು ವೃದ್ಧಿಸಲು ಹಾಗು ಸಂಸ್ಥೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಕಾರ್ಯಪ್ರವೃತ್ತವಾಗಬೇಕಾದ ಅಗತ್ಯದ ಬಗ್ಗೆಯೂ ಪ್ರಧಾನ ಮಂತ್ರಿ ಅವರು ಮಾತನಾಡಿದರು.
ಬರಲಿರುವ ಮುಂಗಾರು ಹಿನ್ನೆಲೆಯಲ್ಲಿ ಕಲುಷಿತ ನೀರು ಪೂರೈಕೆಯನ್ನು ತಪ್ಪಿಸಲು ಕುಡಿಯುವ ನೀರಿನ ಗುಣಮಟ್ಟದ ಮೇಲೆ ನಿಗಾವಹಿಸುವಂತೆ ಮತ್ತು ಕಲುಷಿತ ನೀರಿನಿಂದಾಗಿ ಹರಡುವ ರೋಗಗಳ ಪ್ರಸಾರ ತಡೆಯನ್ನು ಖಾತ್ರಿಗೊಳಿಸಲು ಅವಶ್ಯಕ ವ್ಯವಸ್ಥೆಗಳನ್ನು ಮಾಡುವಂತೆಯೂ ಪ್ರಧಾನ ಮಂತ್ರಿ ಅವರು ನಿರ್ದೇಶನವಿತ್ತರು.
ಶಾಖ ಹೆಚ್ಚಳ ಮತ್ತು ಬರಲಿರುವ ಮುಂಗಾರು ಹಿನ್ನೆಲೆಯಲ್ಲಿ ಎಲ್ಲಾ ವ್ಯವಸ್ಥೆಗಳು ಸರ್ವಸಿದ್ಧವಾಗಿರುವಂತೆ ನೋಡಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳ ನಡುವೆ ಸಮರ್ಪಕ ಸಮನ್ವಯ ಅವಶ್ಯಕತೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮಂತ್ರಿ ಅವರ ಸಲಹೆಗಾರರು, ಸಂಪುಟ ಕಾರ್ಯದರ್ಶಿ, ಹಾಗು ಗೃಹ, ಆರೋಗ್ಯ, ಜಲಶಕ್ತಿ ಸಚಿವಾಲಯಗಳ ಕಾರ್ಯದರ್ಶಿಗಳು, ಎನ್.ಡಿ.ಎಂ.ಎ. ಸದಸ್ಯ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್.ಡಿ.ಎಂ.ಎ.), ಭಾರತೀಯ ಹವಾಮಾನ ಇಲಾಖೆಯ (ಐ. ಎಂ.ಡಿ.) ಡಿ.ಜಿ.ಗಳು ಮತ್ತು ಡಿ.ಜಿ. ಎನ್.ಡಿ.ಆರ್.ಎಫ್. ಸಭೆಯಲ್ಲಿ ಭಾಗವಹಿಸಿದ್ದರು.
***
(Release ID: 1823127)
Visitor Counter : 225
Read this release in:
Assamese
,
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam