ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಭಾಷಾಂತರ
Posted On:
02 MAY 2022 8:15PM by PIB Bengaluru
ಚಾನ್ಸಲರ್ ಶೋಲ್ಜ್ ಅವರೇ,
ಸ್ನೇಹಿತರೇ,
ಗೂಟನ್ ಟಾಗ್.... ನಮಸ್ಕಾರ!
ಮೊದಲನೆಯದಾಗಿ, ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ಚಾನ್ಸಲರ್ ಶೋಲ್ಜ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ವರ್ಷದ ನನ್ನ ಮೊದಲ ವಿದೇಶ ಪ್ರವಾಸವು ಜರ್ಮನಿಯಿಂದ ಆರಂಭವಾಗುತ್ತಿರುವುದು ನನಗೆ ಸಂತೋಷ ತಂದಿದೆ. ಈ ವರ್ಷದ ಆರಂಭದಲ್ಲಿ ವಿದೇಶಿ ನಾಯಕರೊಬ್ಬರೊಂದಿಗೆ ನನ್ನ ಮೊದಲ ದೂರವಾಣಿ ಸಂಭಾಷಣೆ ನಡೆದಿದ್ದೂ, ನನ್ನ ಸ್ನೇಹಿತ ಚಾನ್ಸಲರ್ ಸ್ಕೋಲ್ಜ್ ಅವರೊಂದಿಗೆ. ಇಂದಿನ ಭಾರತ-ಜರ್ಮನಿ ಐಜಿಸಿಯು, ಚಾನ್ಸಲರ್ ಸೋಲ್ಜ್ ಅವರಿಗೂ ಈ ವರ್ಷ ಯಾವುದೇ ದೇಶದೊಂದಿಗಿನ ಮೊದಲ ಐಜಿಸಿಯಾಗಿದೆ. ಈ ಮಹತ್ವದ ಸಹಭಾಗಿತ್ವಕ್ಕೆ ಭಾರತ ಮತ್ತು ಜರ್ಮನಿಗಳೆರಡೂ ಎಷ್ಟು ಆದ್ಯತೆ ನೀಡುತ್ತಿವೆ ಎಂಬುದನ್ನು ಈ ಅನೇಕ ಪ್ರಥಮಗಳು ತೋರಿಸುತ್ತವೆ. ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ, ಭಾರತ ಮತ್ತು ಜರ್ಮನಿ ಅನೇಕ ಸಮಾನ ಮೌಲ್ಯಗಳನ್ನು ಹಂಚಿಕೊಂಡಿವೆ. ಈ ಹಂಚಿಕೆಯ ಮೌಲ್ಯಗಳು ಮತ್ತು ಹಂಚಿಕೆಯ ಹಿತಾಸಕ್ತಿಗಳ ಆಧಾರದ ಮೇಲೆ, ಅನೇಕ ವರ್ಷಗಳಲ್ಲಿ ನಮ್ಮ ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ.
ನಮ್ಮ ಕೊನೆಯ ಐಜಿಸಿಯನ್ನು 2019 ರಲ್ಲಿ ನಡೆಸಲಾಗಿತ್ತು. ಅಂದಿನಿಂದ ಜಗತ್ತಿನಲ್ಲಿ ಗಮನಾರ್ಹ ಬದಲಾವಣೆಗಳು ಸಂಭವಿಸಿವೆ. ಕೋವಿಡ್ -19 ಸಾಂಕ್ರಾಮಿಕ ರೋಗವು ಜಾಗತಿಕ ಆರ್ಥಿಕತೆಯ ಮೇಲೆ ವಿನಾಶಕಾರಿ ಪರಿಣಾಮ ಬೀರಿದೆ. ಇತ್ತೀಚಿನ ಭೌಗೋಳಿಕ ರಾಜಕೀಯ ಘಟನೆಗಳು ವಿಶ್ವ ಶಾಂತಿ ಮತ್ತು ಸ್ಥಿರತೆ ಎಷ್ಟು ದುರ್ಬಲವಾಗಿದೆ ಮತ್ತು ಎಲ್ಲಾ ದೇಶಗಳು ಎಷ್ಟು ಪರಸ್ಪರ ಸಂಪರ್ಕ ಹೊಂದಿವೆ ಎಂಬುದನ್ನು ತೋರಿಸಿವೆ. ಉಕ್ರೇನಿನ ಬಿಕ್ಕಟ್ಟಿನ ಆರಂಭದಿಂದಲೂ, ನಾವು ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ್ದೇವೆ, ವಿವಾದವನ್ನು ಪರಿಹರಿಸಲು ಮಾತುಕತೆಯೊಂದೇ ಮಾರ್ಗ ಎಂದು ಒತ್ತಾಯಿಸಿದ್ದೇವೆ. ಈ ಯುದ್ಧದಲ್ಲಿ ಯಾವುದೇ ಕಡೆಯವರು ಗೆಲ್ಲುವುದಿಲ್ಲ, ಪ್ರತಿಯೊಬ್ಬರೂ ತೊಂದರೆ ಅನುಭವಿಸುತ್ತಾರೆ ಎಂದು ನಾವು ನಂಬುತ್ತೇವೆ. ಅದಕ್ಕಾಗಿಯೇ ನಾವು ಶಾಂತಿಯ ಪರವಾಗಿದ್ದೇವೆ. ಉಕ್ರೇನ್ ಸಂಘರ್ಷದಿಂದ ಉಂಟಾದ ಪ್ರಕ್ಷುಬ್ಧತೆಯಿಂದಾಗಿ ತೈಲ ಬೆಲೆಗಳು ಗಗನಕ್ಕೇರುತ್ತಿವೆ; ಜಗತ್ತಿನಲ್ಲಿ ಆಹಾರ ಧಾನ್ಯಗಳು ಮತ್ತು ರಸಗೊಬ್ಬರಗಳ ಕೊರತೆಯೂ ಇದೆ. ಇದು ವಿಶ್ವದ ಪ್ರತಿಯೊಂದು ಕುಟುಂಬಕ್ಕೂ ಹೊರೆಯಾಗಿದೆ, ಆದರೆ ಅಭಿವೃದ್ಧಿಶೀಲ ಮತ್ತು ಬಡ ದೇಶಗಳ ಮೇಲೆ ಅದರ ಪರಿಣಾಮವು ಇನ್ನೂ ಗಂಭೀರವಾಗಿರುತ್ತದೆ. ಈ ಸಂಘರ್ಷದ ಮಾನವೀಯ ಪರಿಣಾಮದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ನಮ್ಮ ಪರವಾಗಿ ನಾವು ಉಕ್ರೇನ್ ಗೆ ಮಾನವೀಯ ನೆರವನ್ನು ಕಳುಹಿಸಿದ್ದೇವೆ. ಆಹಾರ ರಫ್ತು, ತೈಲ ಪೂರೈಕೆ ಮತ್ತು ಆರ್ಥಿಕ ನೆರವಿನ ಮೂಲಕ ಇತರ ಸ್ನೇಹಪರ ದೇಶಗಳಿಗೆ ನೆರವು ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ.
ಇಂದು, ಭಾರತ-ಜರ್ಮನಿ ಪಾಲುದಾರಿಕೆಯು ತನ್ನ ಆರನೇ ಐಜಿಸಿಯಿಂದ ಹೊಸ ದಿಕ್ಕನ್ನು ಪಡೆದುಕೊಂಡಿದೆ. ಇಂಧನ ಮತ್ತು ಪರಿಸರ ವಲಯಗಳೆರಡರಲ್ಲೂ ನಮ್ಮ ಸಹಕಾರಕ್ಕೆ ಈ ಐಜಿಸಿ ಮಹತ್ವದ ಮಾರ್ಗದರ್ಶನ ನೀಡಿದೆ. ಇಂದು ತೆಗೆದುಕೊಂಡ ನಿರ್ಧಾರಗಳು ನಮ್ಮ ಪ್ರದೇಶ ಮತ್ತು ವಿಶ್ವದ ಭವಿಷ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂಬ ವಿಶ್ವಾಸ ನನಗಿದೆ. ಇಂದು, ನಾವು ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ಇಂಡೋ-ಜರ್ಮನಿ ಸಹಭಾಗಿತ್ವವನ್ನು ಪಾಲಿಸುತ್ತಿದ್ದೇವೆ. ಗ್ಲ್ಯಾಸ್ಗೋದಲ್ಲಿ ತನ್ನ ಹವಾಮಾನ ಮಹತ್ವಾಕಾಂಕ್ಷೆಯನ್ನು ಹೆಚ್ಚಿಸುವ ಮೂಲಕ ಹಸಿರು ಮತ್ತು ಸುಸ್ಥಿರ ಬೆಳವಣಿಗೆಯು ನಮಗೆ ನಂಬಿಕೆಯ ಒಂದು ಅಂಶವಾಗಿದೆ ಎಂದು ಭಾರತವು ಜಗತ್ತಿಗೆ ತೋರಿಸಿದೆ. ಈ ಹೊಸ ಪಾಲುದಾರಿಕೆಯ ಅಡಿಯಲ್ಲಿ, 2030ರ ವೇಳೆಗೆ 10 ಶತಕೋಟಿ ಯುರೋಗಳ ಹೆಚ್ಚುವರಿ ಅಭಿವೃದ್ಧಿ ನೆರವಿನೊಂದಿಗೆ ಭಾರತದ ಹಸಿರು ಬೆಳವಣಿಗೆಯ ಯೋಜನೆಗಳನ್ನು ಬೆಂಬಲಿಸಲು ಜರ್ಮನಿ ನಿರ್ಧರಿಸಿದೆ. ಇದಕ್ಕಾಗಿ ನಾನು ಜರ್ಮನಿ ಮತ್ತು ಚಾನ್ಸಲರ್ ಶೋಲ್ಜ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.
ನಮ್ಮ ಪೂರಕ ಸಾಮರ್ಥ್ಯಗಳನ್ನು ಪರಿಗಣಿಸಿ, ನಾವು ಹಸಿರು ಜಲಜನಕ ಕಾರ್ಯಪಡೆಯನ್ನು ರಚಿಸಲು ನಿರ್ಧರಿಸಿದ್ದೇವೆ. ಎರಡೂ ದೇಶಗಳಲ್ಲಿ ಹಸಿರು ಜಲಜನಕ ಮೂಲಸೌಕರ್ಯವನ್ನು ಹೆಚ್ಚಿಸಲು ಇದು ತುಂಬಾ ಉಪಯುಕ್ತವಾಗಲಿದೆ. ಭಾರತ ಮತ್ತು ಜರ್ಮನಿಗಳೆರಡೂ ಇತರ ದೇಶಗಳಲ್ಲಿ ಅಭಿವೃದ್ಧಿ ಸಹಕಾರದಲ್ಲಿ ದೀರ್ಘ ಅನುಭವವನ್ನು ಹೊಂದಿವೆ. ಇಂದು, ನಾವು ನಮ್ಮ ಅನುಭವಗಳನ್ನು ಸಂಯೋಜಿಸಲು ಮತ್ತು ತ್ರಿಪಕ್ಷೀಯ ಸಹಕಾರದ ಮೂಲಕ ಮೂರನೇ ರಾಷ್ಟ್ರಗಳಲ್ಲಿ ಜಂಟಿ ಯೋಜನೆಗಳಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ನಮ್ಮ ಸಹಕಾರವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪಾರದರ್ಶಕ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಗಳಿಗೆ ಪರ್ಯಾಯವನ್ನು ಒದಗಿಸುತ್ತದೆ. ಸ್ನೇಹಿತರೇ,
ಕೋವಿಡೋತ್ತರ ಯುಗದಲ್ಲಿ, ಭಾರತವು ಇತರ ಬೆಳೆಯುತ್ತಿರುವ ಆರ್ಥಿಕತೆಗಳಿಗೆ ಹೋಲಿಸಿದರೆ ಅತ್ಯಂತ ವೇಗದ ಬೆಳವಣಿಗೆಯನ್ನು ಕಾಣುತ್ತಿದೆ. ಭಾರತವು ಜಾಗತಿಕ ಚೇತರಿಕೆಯ ಪ್ರಮುಖ ಆಧಾರ ಸ್ತಂಭವಾಗಲಿದೆ ಎಂಬ ವಿಶ್ವಾಸ ನಮಗಿದೆ. ಇತ್ತೀಚೆಗೆ, ನಾವು ಯುಎಇ ಮತ್ತು ಆಸ್ಟ್ರೇಲಿಯಾದೊಂದಿಗೆ ಬಹಳ ಕಡಿಮೆ ಸಮಯದಲ್ಲಿ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ. ನಾವು, ಐರೋಪ್ಯ ಒಕ್ಕೂಟದೊಂದಿಗೂ ಸಹ, ಎಫ್.ಟಿಎ ಮಾತುಕತೆಗಳಲ್ಲಿ ಆರಂಭಿಕ ಪ್ರಗತಿಗೆ ಬದ್ಧರಾಗಿದ್ದೇವೆ. ಭಾರತದ ನುರಿತ ಕೆಲಸಗಾರರು ಮತ್ತು ವೃತ್ತಿಪರರು ಅನೇಕ ದೇಶಗಳ ಆರ್ಥಿಕತೆಗೆ ಕೊಡುಗೆ ನೀಡಿದ್ದಾರೆ. ಭಾರತ ಮತ್ತು ಜರ್ಮನಿ ನಡುವಿನ ಸಮಗ್ರ ವಲಸೆ ಮತ್ತು ಸಂಚಾರದ ಸಹಭಾಗಿತ್ವದ ಒಪ್ಪಂದವು ಎರಡೂ ದೇಶಗಳ ನಡುವೆ ಸಂಚಾರವನ್ನು ಸುಗಮಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ.
ಈ ಶೃಂಗಸಭೆ ಮತ್ತು ನಿಮ್ಮ ಉಪಕ್ರಮಕ್ಕಾಗಿ ನಾನು ಮತ್ತೊಮ್ಮೆ ನಿಮಗೆ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಘೋಷಣೆ - ಇದು ಪ್ರಧಾನಮಂತ್ರಿಯವರ ಹೇಳಿಕೆಗಳ ಅಂದಾಜು ಭಾಷಾಂತರವಾಗಿದೆ. ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಗಿದೆ.
***
(Release ID: 1822354)
Visitor Counter : 186
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam