ಪ್ರಧಾನ ಮಂತ್ರಿಯವರ ಕಛೇರಿ

ಮುಖ್ಯಮಂತ್ರಿಗಳು ಮತ್ತು ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ

Posted On: 29 APR 2022 1:50PM by PIB Bengaluru

ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಶ್ರೀ ಎನ್.ವಿ.ರಮಣ ಜೀ, ನ್ಯಾಯಮೂರ್ತಿ ಶ್ರೀ ಯು.ಯು.ಲಲಿತ್ ಜೀ, ಕೇಂದ್ರ ಕಾನೂನು ಸಚಿವ ಶ್ರೀ ಕಿರಣ್ ರಿಜಿಜು ಜೀ, ರಾಜ್ಯ ಸಚಿವ ಪ್ರೊ.ಎಸ್.ಪಿ.ಸಿಂಗ್ ಬಾಘೇಲ್ ಜಿ, ಎಲ್ಲಾ ರಾಜ್ಯಗಳ ಗೌರವಾನ್ವಿತ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ಗಳು, ಭಾರತದ ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರು, ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಮೂರ್ತಿಗಳು, ಗೌರವಾನ್ವಿತ ಅತಿಥಿಗಳು, ಇಂದು ಇಲ್ಲಿ ಉಪಸ್ಥಿತರಿರುವ ಇತರ ಎಲ್ಲ ಗಣ್ಯರು, ಮಹಿಳೆಯರೇ ಮತ್ತು ಮಹನೀಯರೇ!
ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಈ ಜಂಟಿ ಸಮ್ಮೇಳನವು ಸಂವಿಧಾನದ ಸೊಬಗಿನ ರೋಮಾಂಚಕತೆಯ ದ್ಯೋತಕವಾಗಿದೆ. ಈ ಸಂದರ್ಭದಲ್ಲಿ ನಿಮ್ಮೆಲ್ಲರೊಂದಿಗೆ ಕೆಲವು ಕ್ಷಣಗಳನ್ನು ಕಳೆಯುವ ಅವಕಾಶ ನನಗೆ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ನಮ್ಮ ದೇಶದಲ್ಲಿ, ನ್ಯಾಯಾಂಗದ ಪಾತ್ರವು ಸಂವಿಧಾನದ ರಕ್ಷಕನದ್ದಾಗಿದ್ದರೆ, ಶಾಸಕಾಂಗವು ನಾಗರಿಕರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ಸಂವಿಧಾನದ ಎರಡು ಧಾರೆಗಳ ಈ ಸಂಗಮ ಮತ್ತು ಸೃಷ್ಟಿಯಾದ ಸಮತೋಲನವು ದೇಶದಲ್ಲಿ ಪರಿಣಾಮಕಾರಿ ಮತ್ತು ಕಾಲಮಿತಿಯ ನ್ಯಾಯಾಂಗ ವ್ಯವಸ್ಥೆಯ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತದೆ ಎಂದು ನಾನು ನಂಬುತ್ತೇನೆ. ಈ ಕಾರ್ಯಕ್ರಮಕ್ಕಾಗಿ ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.
ಸ್ನೇಹಿತರೇ,
ಮುಖ್ಯಮಂತ್ರಿಗಳು ಮತ್ತು ಮುಖ್ಯ ನ್ಯಾಯಮೂರ್ತಿಗಳ ಈ ಜಂಟಿ ಸಮಾವೇಶಗಳು ಈ ಹಿಂದೆಯೂ ನಡೆದಿವೆ ಮತ್ತು ದೇಶಕ್ಕಾಗಿ ಕೆಲವು ಹೊಸ ಆಲೋಚನೆಗಳು ಯಾವಾಗಲೂ ಅವುಗಳಿಂದ ಹೊರಹೊಮ್ಮಿವೆ. ಆದರೆ, ಈ ಬಾರಿ ಈ ಘಟನೆ ಇನ್ನೂ ವಿಶೇಷವಾಗಿದೆ. ಇಂದು ದೇಶವು ' ಆಜಾದಿ ಕಾ ಅಮೃತ ಮಹೋತ್ಸವ 'ವನ್ನು ಆಚರಿಸುತ್ತಿರುವ ಸಮಯದಲ್ಲಿ ಈ ಸಮ್ಮೇಳನವನ್ನು ನಡೆಸಲಾಗುತ್ತಿದೆ. ಸ್ವಾತಂತ್ರ್ಯದ ಈ 75 ವರ್ಷಗಳು ನ್ಯಾಯಾಂಗ ಮತ್ತು ಕಾರ್ಯಾಂಗದ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ನಿರಂತರವಾಗಿ ಸ್ಪಷ್ಟಪಡಿಸಿವೆ. ಅಗತ್ಯವಿದ್ದಲ್ಲಿ, ಈ ಸಂಬಂಧವು ದೇಶಕ್ಕೆ ಒಂದು ದಿಕ್ಕನ್ನು ಒದಗಿಸಲು ನಿರಂತರವಾಗಿ ವಿಕಸನಗೊಂಡಿದೆ. ಇಂದು, 'ಆಜಾದಿ ಕಾ ಅಮೃತ್ ಮಹೋತ್ಸವ ' ದ ಸಮಯದಲ್ಲಿ, ದೇಶವು ಹೊಸ ಕನಸುಗಳೊಂದಿಗೆ ಹೊಸ ಸಂಕಲ್ಪಗಳನ್ನು ತೆಗೆದುಕೊಳ್ಳುತ್ತಿರುವುದರಿಂದ, ನಾವು ಸಹ ಭವಿಷ್ಯದ ಕಡೆಗೆ ನೋಡಬೇಕು. ದೇಶವು ಸ್ವಾತಂತ್ರ್ಯ ಪಡೆದು 100 ವರ್ಷಗಳನ್ನು ಪೂರೈಸಲಿರುವ 2047 ರಲ್ಲಿ ನಾವು ದೇಶದಲ್ಲಿ ಯಾವ ರೀತಿಯ ನ್ಯಾಯಾಂಗ ವ್ಯವಸ್ಥೆಯನ್ನು ನೋಡಲು ಬಯಸುತ್ತೇವೆ ? 2047 ರ ಭಾರತದ ಆಶೋತ್ತರಗಳನ್ನು ಈಡೇರಿಸುವಷ್ಟು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ನಾವು ಸಮರ್ಥವಾಗಿಸುವುದು ಹೇಗೆ? ಈ ಪ್ರಶ್ನೆ ಇಂದು ನಮ್ಮ ಆದ್ಯತೆಯಾಗಿರಬೇಕು. 'ಅಮೃತ್ ಕಾಲ'ದಲ್ಲಿ ಸುಲಭ ನ್ಯಾಯ, ತ್ವರಿತ ನ್ಯಾಯ ಮತ್ತು ಎಲ್ಲರಿಗೂ ನ್ಯಾಯ ಸಿಗುವಂತಹ ನ್ಯಾಯಾಂಗ ವ್ಯವಸ್ಥೆ ನೋಡುವಂತಾಗಬೇಕು
ಸ್ನೇಹಿತರೇ,
ದೇಶದಲ್ಲಿ ನ್ಯಾಯ ವಿಳಂಬ ತಗ್ಗಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ನಾವು ನ್ಯಾಯಾಂಗದ ಬಲವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ನ್ಯಾಯಾಂಗದ ಮೂಲಸೌಕರ್ಯವನ್ನು ಸುಧಾರಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರಕರಣ ನಿರ್ವಹಣೆಗಾಗಿ ಐಸಿಟಿ ಬಳಕೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಅಧೀನ ನ್ಯಾಯಾಲಯಗಳು ಮತ್ತು ಜಿಲ್ಲಾ ನ್ಯಾಯಾಲಯಗಳಿಂದ ಹಿಡಿದು ಉಚ್ಚ ನ್ಯಾಯಾಲಯಗಳವರೆಗೆ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಇದಲ್ಲದೆ, ನ್ಯಾಯಾಂಗ ಮೂಲಸೌಕರ್ಯವನ್ನು ಬಲಪಡಿಸಲು ದೇಶದಲ್ಲಿ ವ್ಯಾಪಕ ಕೆಲಸಗಳನ್ನು ಸಹ ಮಾಡಲಾಗುತ್ತಿದೆ. ಈ ಪ್ರಯತ್ನದಲ್ಲಿ ರಾಜ್ಯಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಸ್ನೇಹಿತರೇ,
ಇಂದು ತಂತ್ರಜ್ಞಾನವು ನಾಗರಿಕರ ಹಕ್ಕುಗಳಿಗೆ ವಿಶ್ವದಾದ್ಯಂತ ಅವರ ಸಬಲೀಕರಣಕ್ಕಾಗಿ ಒಂದು ಪ್ರಮುಖ ಸಾಧನವಾಗಿ ಮಾರ್ಪಟ್ಟಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಸಹ ತಂತ್ರಜ್ಞಾನದ ಸಾಧ್ಯತೆಗಳ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ನಮ್ಮ ಗೌರವಾನ್ವಿತ ನ್ಯಾಯಾಧೀಶರು ಈ ಚರ್ಚೆಯನ್ನು ಕಾಲಕಾಲಕ್ಕೆ ಮುಂದಕ್ಕೆ ಕೊಂಡೊಯ್ಯುತ್ತಲೇ ಇರುತ್ತಾರೆ. ಭಾರತ ಸರ್ಕಾರವು ಡಿಜಿಟಲ್ ಇಂಡಿಯಾ ಮಿಷನ್ ನ ಅತ್ಯಗತ್ಯ ಭಾಗವಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಬಳಸುವ ಸಾಧ್ಯತೆಗಳನ್ನು ಸಹ ಪರಿಗಣಿಸುತ್ತದೆ. ಉದಾಹರಣೆಗೆ, ಇ-ನ್ಯಾಯಾಲಯಗಳ ಯೋಜನೆಯನ್ನು ಇಂದು ಮಿಷನ್ ಮೋಡ್ ನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯದ ಇ-ಸಮಿತಿಯ ಮಾರ್ಗದರ್ಶನದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಏಕೀಕರಣ ಮತ್ತು ಡಿಜಿಟಲೀಕರಣದ ಕೆಲಸವು ತ್ವರಿತವಾಗಿ ನಡೆಯುತ್ತಿದೆ. ಇಲ್ಲಿ ಉಪಸ್ಥಿತರಿರುವ ಎಲ್ಲ ಮುಖ್ಯಮಂತ್ರಿಗಳು ಮತ್ತು ಉಚ್ಚ ನ್ಯಾಯಾಲಯಗಳ ಎಲ್ಲಾ ಮುಖ್ಯ ನ್ಯಾಯಮೂರ್ತಿಗಳು ಈ ಅಭಿಯಾನಕ್ಕೆ ವಿಶೇಷ ಮಹತ್ವ ನೀಡುವಂತೆ ಮತ್ತು ಅದನ್ನು ಮುಂದುವರಿಸುವಂತೆ ನಾನು ಒತ್ತಾಯಿಸುತ್ತೇನೆ. ಡಿಜಿಟಲ್ ಇಂಡಿಯಾದೊಂದಿಗೆ ನ್ಯಾಯಾಂಗದ ಈ ಏಕೀಕರಣವು ಇಂದು ದೇಶದ ಸಾಮಾನ್ಯ ಜನರ ನಿರೀಕ್ಷೆಯಾಗಿದೆ. ಕೆಲವು ವರ್ಷಗಳ ಹಿಂದೆ ನಮ್ಮ ದೇಶಕ್ಕೆ ಡಿಜಿಟಲ್ ವಹಿವಾಟು ಅಸಾಧ್ಯವೆಂದು ಪರಿಗಣಿಸಲಾಗಿತ್ತು. ಜನರು ಅದರ ಬಗ್ಗೆ ಭಯಭೀತರಾಗಿದ್ದರು. ನಮ್ಮ ದೇಶದಲ್ಲಿ ಇದು ಎಂದಾದರೂ ಸಂಭವಿಸಬಹುದೇ ಎಂದು ಅವರು ಆಶ್ಚರ್ಯ ಪಡುತ್ತಿದ್ದರು ಮತ್ತು ಅದರ ವ್ಯಾಪ್ತಿಯು ನಗರಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಅವರು ನಂಬಿದ್ದರು; ಅಲ್ಲದೆ ಅದನ್ನು ಅದರಾಚೆಗೆ ವಿಸ್ತರಿಸಲಾಗದು ಎಂದು ಹೇಳಲಾಗಿತ್ತು. ಆದರೆ ಇಂದು ಡಿಜಿಟಲ್ ವಹಿವಾಟುಗಳು ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿಯೂ ಸಾಮಾನ್ಯವಾಗಿದೆ. ಕಳೆದ ವರ್ಷ ವಿಶ್ವದಾದ್ಯಂತ ನಡೆದ ಎಲ್ಲಾ ಡಿಜಿಟಲ್ ವಹಿವಾಟುಗಳ ಪೈಕಿ ಶೇಕಡ 40 ರಷ್ಟು ಭಾರತದಲ್ಲಿ ನಡೆದಿದೆ. ಸರ್ಕಾರಕ್ಕೆ ಸಂಬಂಧಿಸಿದ ಸೇವೆಗಳಿಗಾಗಿ ಈ ಹಿಂದೆ ತಿಂಗಳುಗಟ್ಟಲೆ ನಾಗರಿಕರು ನಿರಂತರವಾಗಿ ಕಚೇರಿಗಳಿಗೆ ಹೋಗಬೇಕಾಗಿತ್ತು. ಆದರೀಗ ಮೊಬೈಲ್ ನಲ್ಲಿ ಲಭ್ಯವಿವೆ. ಅಂತಹ ಸನ್ನಿವೇಶದಲ್ಲಿ, ಆನ್ ಲೈನ್ ನಲ್ಲಿ ಸೇವೆಗಳು ಮತ್ತು ಸೌಲಭ್ಯಗಳನ್ನು ಪಡೆಯುತ್ತಿರುವ ನಾಗರಿಕರು ನ್ಯಾಯದ ಹಕ್ಕಿನ ಬಗ್ಗೆಯೂ ಇದೇ ರೀತಿಯ ನಿರೀಕ್ಷೆಗಳನ್ನು ಹೊಂದಿರುವುದು ಸ್ವಾಭಾವಿಕವಾಗಿದೆ.
ಸ್ನೇಹಿತರೇ,
ಇಂದು ನಾವು ತಂತ್ರಜ್ಞಾನ ಮತ್ತು ಭವಿಷ್ಯದ ವಿಧಾನದ ಬಗ್ಗೆ ಮಾತನಾಡುವಾಗ ಅದರ ಪ್ರಮುಖ ಅಂಶವೆಂದರೆ ತಂತ್ರಜ್ಞಾನ ಸ್ನೇಹಿ ಮಾನವ ಸಂಪನ್ಮೂಲಗಳು. ತಂತ್ರಜ್ಞಾನವು ಇಂದಿನ ಯುವಕರ ಜೀವನದ ಸ್ವಾಭಾವಿಕ ಭಾಗವಾಗಿದೆ. ಯುವಕರ ಈ ಪರಿಣತಿ ಅವರ ವೃತ್ತಿಪರ ಶಕ್ತಿಯಾಗುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಬ್ಲಾಕ್-ಚೈನ್ ಗಳು, ಎಲೆಕ್ಟ್ರಾನಿಕ್ ಅನ್ವೇಷಣೆ, ಸೈಬರ್-ಭದ್ರತೆ, ರೋಬೋಟಿಕ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಜೈವಿಕ ನೈತಿಕತೆಯಂತಹ ವಿಷಯಗಳನ್ನು ಹಲವಾರು ದೇಶಗಳ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಕಲಿಸಲಾಗುತ್ತಿದೆ. ಕಾನೂನು ಶಿಕ್ಷಣವು ನಮ್ಮ ದೇಶದಲ್ಲಿಯೂ ಈ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರಬೇಕು ಮತ್ತು ಅದನ್ನು ಖಚಿತಪಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅದಕ್ಕಾಗಿ ನಾವು ಸಂಘಟಿತ ಪ್ರಯತ್ನಗಳನ್ನು ಮಾಡಬೇಕಾಗಿದೆ.
ಸ್ನೇಹಿತರೇ,
ಇದನ್ನು ನಮ್ಮ ಧರ್ಮಗ್ರಂಥಗಳಲ್ಲಿ- ನ್ಯಾಯಮೂಲಂ ಸುರಜಯಂ ಸ್ಯಾತ್. ಅಂದರೆ, ನ್ಯಾಯವು ಯಾವುದೇ ದೇಶದ ಆಡಳಿತದ ಆಧಾರವಾಗಿದೆ. ಆದ್ದರಿಂದ ನ್ಯಾಯವು ಜನರೊಂದಿಗೆ ಸಂಪರ್ಕ ಹೊಂದಿರಬೇಕು; ಅದು ಜನರ ಆಡುಭಾಷೆಯಾಗಿರಬೇಕು. ಸಾಮಾನ್ಯ ಮನುಷ್ಯ ನ್ಯಾಯದ ತಳಹದಿಯನ್ನು ಅರ್ಥಮಾಡಿಕೊಳ್ಳದ ಹೊರತು, ಅವರಿಗೆ ನ್ಯಾಯ ಮತ್ತು ಸರ್ಕಾರಿ ಆದೇಶಗಳ ನಡುವೆ ಹೆಚ್ಚಿನ ವ್ಯತ್ಯಾಸ ಗೊತ್ತಾಗದು. ಈ ದಿನಗಳಲ್ಲಿ ನಾನು ಸರ್ಕಾರದ ಒಂದು ವಿಷಯದ ಬಗ್ಗೆ ಚಿಂತನ-ಮಂಥನ ನಡೆಸುತ್ತಿದ್ದೇನೆ. ಜಗತ್ತಿನಲ್ಲಿ ಅಂತಹ ಅನೇಕ ದೇಶಗಳಿವೆ. ಅಲ್ಲಿ ಕಾನೂನು ಪರಿಭಾಷೆಗಳನ್ನು ಬಳಸಿಕೊಂಡು ಕಾನೂನುಗಳನ್ನು ತಯಾರಿಸಲಾಗುತ್ತದೆ. ಆದರೆ ಅದೇ ಸಮಯದಲ್ಲಿ ಆ ಕಾನೂನು ಪರಿಭಾಷೆಗಳನ್ನು ಸಾಮಾನ್ಯ ಮನುಷ್ಯನು ಅರ್ಥಮಾಡಿಕೊಳ್ಳಲು ಸರಳ ಭಾಷೆಯಲ್ಲಿ ವಿವರಿಸಲಾಗುತ್ತದೆ. ಎರಡೂ ನಮೂನೆಗಳು ಮಾನ್ಯವಾಗಿವೆ. ಇದರ ಪರಿಣಾಮವಾಗಿ, ಸಾಮಾನ್ಯ ಜನರು ಕಾನೂನು ಪದಗಳನ್ನು ಅರ್ಥಮಾಡಿಕೊಳ್ಳಲು ಮತ್ತೆ ಮತ್ತೆ ನ್ಯಾಯಾಂಗ ವ್ಯವಸ್ಥೆಗೆ ಹೋಗಬೇಕಾಗಿಲ್ಲ. ಮುಂಬರುವ ದಿನಗಳಲ್ಲಿ, ನಮ್ಮ ದೇಶದ ಕಾನೂನುಗಳಿಗೆ ಸಂಪೂರ್ಣ 'ಕಾನೂನು ಪರಿಭಾಷೆ' ಮಾತ್ರವಲ್ಲದೆ, ಸಾಮಾನ್ಯ ಜನರಿಗೆ ಚೆನ್ನಾಗಿ ಅರ್ಥವಾಗುವ ಭಾಷೆಯಲ್ಲಿ ಅದೇ ಕಾನೂನುಗಳ ಸರಳ ಆವೃತ್ತಿಯೂ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಅವೆರಡನ್ನೂ ಒಟ್ಟಿಗೆ ಅಂಗೀಕರಿಸಲಾಗುತ್ತಿತ್ತು. ಇದರಿಂದ ಮುಂದೆ ಶ್ರೀಸಾಮಾನ್ಯರು ಅದರ ಆಧಾರದ ಮೇಲೆ ಮಾತನಾಡಬಹುದು. ಇದು ವಿಶ್ವದ ಅನೇಕ ದೇಶಗಳಲ್ಲಿ ಒಂದು ಸಂಪ್ರದಾಯವಾಗಿದೆ. ಈಗ ನಾನು ಒಂದು ತಂಡವನ್ನು ರಚಿಸಿದ್ದೇನೆ ಮತ್ತು ಅವರು ಅದನ್ನು ಅಧ್ಯಯನ ಮಾಡುತ್ತಿದ್ದಾರೆ.
ಸ್ನೇಹಿತರೇ,
ಇಂದಿಗೂ ನಮ್ಮ ದೇಶದಲ್ಲಿ ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯದ ಎಲ್ಲಾ ಕಾರ್ಯಕಲಾಪಗಳು ಇಂಗ್ಲಿಷ್ ನಲ್ಲಿ ನಡೆಯುತ್ತವೆ ಮತ್ತು ಸ್ವತಃ ಸಿಜೆಐ ಅವರೇ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ನಾನು ಪ್ರಶಂಸಿಸುತ್ತೇನೆ. ನಾಳೆ ಪತ್ರಿಕೆಗಳು ಈ ಕಥೆಯನ್ನು ಎತ್ತಿಕೊಂಡರೆ, ಅದು ಸಕಾರಾತ್ಮಕ ಸುದ್ದಿಯನ್ನು ಮಾಡುತ್ತದೆ. ಆದರೆ ಜನರು ಅದಕ್ಕಾಗಿ ಕಾಯಬೇಕಾಗುತ್ತದೆ.
ಸ್ನೇಹಿತರೇ,
ಒಂದು ದೊಡ್ಡ ಜನಸಂಖ್ಯೆಗೆ ನ್ಯಾಯಾಂಗ ಪ್ರಕ್ರಿಯೆ ಮತ್ತು ಅದರ ತೀರ್ಪುಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ನಾವು ಈ ವ್ಯವಸ್ಥೆಯನ್ನು ಸರಳಗೊಳಿಸಬೇಕು ಮತ್ತು ಸಾಮಾನ್ಯ ಜನರಿಗೆ ಲಭ್ಯವಾಗುವಂತೆ ಮಾಡಬೇಕಾಗಿದೆ. ನಾವು ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಇದು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ದೇಶದ ಸಾಮಾನ್ಯ ಜನರ ವಿಶ್ವಾಸವನ್ನು ಹೆಚ್ಚಿಸುತ್ತದೆ. ಅವರು ಅದರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಭಾವಿಸುತ್ತಾರೆ. ಈಗ ನಾವು ನಮ್ಮ ಮಾತೃಭಾಷೆಯಲ್ಲಿ ತಾಂತ್ರಿಕ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣವನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಮಕ್ಕಳು ಬೇರೆ ದೇಶಗಳಿಗೆ ಹೋಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಆ ದೇಶಗಳ ಹೊಸ ಭಾಷೆಗಳನ್ನು ಕಲಿಯಲು ಪ್ರಯತ್ನಿಸುತ್ತಾರೆ. ಆದ್ದರಿಂದ, ನಾವು ಈ ಉಪಕ್ರಮವನ್ನು ನಮ್ಮ ದೇಶದಲ್ಲಿ ಪ್ರಾರಂಭಿಸಬಹುದು. ಅನೇಕ ರಾಜ್ಯಗಳು ತಮ್ಮ ಮಾತೃಭಾಷೆಯಲ್ಲಿ ತಾಂತ್ರಿಕ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣವನ್ನು ನೀಡುವ ಉಪಕ್ರಮವನ್ನು ಕೈಗೊಂಡಿವೆ ಎಂದು ನನಗೆ ಸಂತೋಷವಾಗಿದೆ. ಹಳ್ಳಿಯ ಬಡ ಮಗುವು ಉನ್ನತ ಶಿಕ್ಷಣದಲ್ಲಿ ಭಾಷಾ ಅಡೆತಡೆಗಳಿಂದಾಗಿ ಅಡಚಣೆಗಳನ್ನು ಎದುರಿಸುತ್ತದೆ. ಆದರೆ ಈಗ ಅವರಿಗೆ ಎಲ್ಲಾ ಮಾರ್ಗಗಳು ತೆರೆದುಕೊಳ್ಳುತ್ತವೆ ಮತ್ತು ಇದು ಸಹ ಒಂದು ದೊಡ್ಡ ನ್ಯಾಯವಾಗಿದೆ. ಇದು ಸಾಮಾಜಿಕ ನ್ಯಾಯವೂ ಹೌದು. ಸಾಮಾಜಿಕ ನ್ಯಾಯಕ್ಕಾಗಿ ನ್ಯಾಯಾಂಗಕ್ಕೆ ಹೋಗುವ ಅಗತ್ಯವಿಲ್ಲ. ಕೆಲವೊಮ್ಮೆ ಸಾಮಾಜಿಕ ನ್ಯಾಯವನ್ನು ಪಡೆಯುವಲ್ಲಿ ಭಾಷೆಯೂ ಒಂದು ಪ್ರಮುಖ ಅಂಶವಾಗಬಹುದು.
ಸ್ನೇಹಿತರೇ,
ಮತ್ತೊಂದು ಗಂಭೀರ ಸಮಸ್ಯೆ ಎಂದರೆ ಸಾಮಾನ್ಯ ಮನುಷ್ಯನಿಗೆ ಕಾನೂನಿನ ವ್ಯಾಖ್ಯಾನ. 2015ರಲ್ಲಿ ಸರ್ಕಾರ ಅಪ್ರಸ್ತುತವಾಗಿದ್ದ 1800 ಕಾನೂನುಗಳನ್ನು ಗುರುತಿಸಿದ್ದು, ಈಗಾಗಲೇ 1450 ಕಾನೂನುಗಳನ್ನು ರದ್ದುಪಡಿಸಲಾಗಿದೆ .ಆದರೆ, ರಾಜ್ಯಗಳು ಕೇವಲ 75 ಕಾನೂನುಗಳನ್ನು ಮಾತ್ರ ರದ್ದುಗೊಳಿಸಿವೆ. ಎಲ್ಲಾ ಮುಖ್ಯಮಂತ್ರಿಗಳು ಇಂದು ಇಲ್ಲಿ ಕುಳಿತಿದ್ದಾರೆ. ನಿಮ್ಮ ರಾಜ್ಯದ ನಾಗರಿಕರ ಹಕ್ಕುಗಳಿಗಾಗಿ, ಅವರ ಸುಗಮ ಜೀವನಕ್ಕಾಗಿ ಆ ಕಾನೂನುಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನಿಮ್ಮ ಪ್ರದೇಶಗಳಲ್ಲಿ ಅಂತಹ ದೊಡ್ಡ ಕಾನೂನುಗಳ ಜಾಲವಿದೆ. ಜನರು ಪ್ರಾಚೀನ ಕಾನೂನುಗಳ ಬಲೆಯಲ್ಲಿ ಸಿಲುಕಿದ್ದಾರೆ. ದಯವಿಟ್ಟು ಆ ಕಾನೂನುಗಳನ್ನು ರದ್ದುಗೊಳಿಸಿ ಮತ್ತು ಜನರು ನಿಮ್ಮನ್ನು ಆಶೀರ್ವದಿಸುತ್ತಾರೆ!
ಸ್ನೇಹಿತರೇ,
ನ್ಯಾಯಾಂಗ ಸುಧಾರಣೆಯು ಕೇವಲ ಒಂದು ನೀತಿಯ ವಿಷಯವಲ್ಲ. ದೇಶದಲ್ಲಿ ಬಾಕಿ ಉಳಿದಿರುವ ಕೋಟ್ಯಂತರ ಪ್ರಕರಣಗಳನ್ನು ಪರಿಹರಿಸಲು, ನೀತಿಯಿಂದ ತಂತ್ರಜ್ಞಾನದವರೆಗೆ ದೇಶದಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಮತ್ತು ನಾವು ಅದನ್ನು ಮತ್ತೆ ಮತ್ತೆ ಚರ್ಚಿಸಿದ್ದೇವೆ. ಈ ಸಮ್ಮೇಳನದಲ್ಲಿಯೂ ಸಹ ನಿಮ್ಮಂತಹ ಎಲ್ಲಾ ತಜ್ಞರು ಈ ವಿಷಯದ ಬಗ್ಗೆ ವಿವರವಾಗಿ ಮಾತನಾಡಲಿದ್ದಾರೆ. ಸಕಾರಾತ್ಮಕ ಫಲಿತಾಂಶದ ಬಗ್ಗೆ ನನಗೆ ಖಾತ್ರಿಯಿದೆ. ನಾನು ಬಹುಶಃ ಬಹಳ ಸಮಯದಿಂದ ಅಂತಹ ಕೂಟಗಳಿಗೆ ಹಾಜರಾಗುತ್ತಿದ್ದೇನೆ. ಪ್ರಾಯಶಃ ನಾನು ನ್ಯಾಯಾಧೀಶರಿಗಿಂತ ಹೆಚ್ಚಾಗಿ ಇಂತಹ ಸಭೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದಿದ್ದೇನೆ. ಏಕೆಂದರೆ ನಾನು ಹಲವಾರು ವರ್ಷಗಳಿಂದ ಮುಖ್ಯಮಂತ್ರಿಯಾಗಿ ಈ ಸಮ್ಮೇಳನಕ್ಕೆ ಬರುತ್ತಿದ್ದೆ. ಈಗ ನಾನು ಪ್ರಧಾನ ಮಂತ್ರಿಯಾಗಿ ಇಲ್ಲಿಗೆ ಬರುವ ಅವಕಾಶವನ್ನು ಪಡೆದಿದ್ದೇನೆ. ಒಂದು ರೀತಿಯಲ್ಲಿ, ನಾನು ಈ ಕೂಟದಲ್ಲಿ ಹಿರಿಯನಾಗಿದ್ದೇನೆ.
ಸ್ನೇಹಿತರೇ,
ಈ ವಿಷಯದ ಬಗ್ಗೆ ಮಾತನಾಡುವಾಗ, ಈ ಎಲ್ಲಾ ಕಾರ್ಯಗಳಿಗೆ ಮಾನವ ಸಂವೇದನೆಯು ಬಹಳ ನಿರ್ಣಾಯಕವಾಗಿದೆ ಎಂದು ನಾನು ನಂಬುತ್ತೇನೆ. ನಾವು ಮಾನವ ಸಂವೇದನೆಯನ್ನು ಸಹ ತಿರುಳಾಗಿಡಬೇಕು. ಇಂದು, ದೇಶದಲ್ಲಿ ಸುಮಾರು 3.5 ಲಕ್ಷ ಕೈದಿಗಳು ವಿಚಾರಣಾಧೀನ ಕೈದಿಗಳಾಗಿದ್ದು, ಜೈಲಿನಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಬಡ ಅಥವಾ ಸಾಮಾನ್ಯ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಈ ಪ್ರಕರಣಗಳನ್ನು ಪರಿಶೀಲಿಸಲು ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ಸಮಿತಿ ಇರುತ್ತದೆ ಮತ್ತು ಅನ್ವಯವಾಗುವಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು. ಸಾಧ್ಯವಾದರೆ, ಮಾನವೀಯ ನೆಲೆಗಟ್ಟಿನಲ್ಲಿ ಮತ್ತು ಸಹಜವಾಗಿ ಕಾನೂನಿನ ಆಧಾರದ ಮೇಲೆ ಈ ವಿಷಯಗಳಿಗೆ ಆದ್ಯತೆ ನೀಡುವಂತೆ ನಾನು ಎಲ್ಲಾ ಮುಖ್ಯಮಂತ್ರಿಗಳು ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಮೂರ್ತಿಗಳಿಗೆ ಮನವಿ ಮಾಡುತ್ತೇನೆ. ಅಂತೆಯೇ, ನ್ಯಾಯಾಲಯಗಳಲ್ಲಿ, ವಿಶೇಷವಾಗಿ ಸ್ಥಳೀಯ ಮಟ್ಟದಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಪರಿಹರಿಸಲು ಮಧ್ಯಸ್ಥಿಕೆಯು ಒಂದು ಪ್ರಮುಖ ಮಾರ್ಗವಾಗಿದೆ. ನಮ್ಮ ಸಮಾಜದಲ್ಲಿ ಮಧ್ಯಸ್ಥಿಕೆಯ ಮೂಲಕ ವಿವಾದಗಳನ್ನು ಬಗೆಹರಿಸುವ ಸಾವಿರಾರು ವರ್ಷಗಳ ಹಿಂದಿನ ಸಂಪ್ರದಾಯವಿದೆ. ಸೌಹಾರ್ದಯುತ ಇತ್ಯರ್ಥ ಮತ್ತು ಪರಸ್ಪರ ಭಾಗವಹಿಸುವಿಕೆಯು ನ್ಯಾಯದ ವಿಶಿಷ್ಟ ಮಾನವೀಯ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ. ವಾಸ್ತವವಾಗಿ, ನಮ್ಮ ಸಮಾಜದ ಆ ಗುಣಲಕ್ಷಣವು ಇನ್ನೂ ಅಸ್ತಿತ್ವದಲ್ಲಿದೆ. ನಮ್ಮ ಆ ಸಂಪ್ರದಾಯಗಳನ್ನು ನಾವು ಕಳೆದುಕೊಂಡಿಲ್ಲ. ನಾವು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. ನಾನು ಲಲಿತ್ ಜಿ ಅವರನ್ನು ಸಹ ಪ್ರಶಂಸಿಸಲು ಬಯಸುತ್ತೇನೆ. ಅವರು ದೇಶಾದ್ಯಂತ ಪ್ರವಾಸ ಮಾಡಿದ್ದಾರೆ ಮತ್ತು ಈ ಕೆಲಸಕ್ಕಾಗಿ ಪ್ರತಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಮತ್ತು ಅದೂ ಸಹ ಕೊರೊನಾ ಅವಧಿಯಲ್ಲಿ.
ಸ್ನೇಹಿತರೇ,
ಈ ರೀತಿಯಾಗಿ, ಪ್ರಕರಣಗಳನ್ನು ಕಡಿಮೆ ಸಮಯದಲ್ಲಿ ಪರಿಹರಿಸಲಾಗುತ್ತದೆ, ನ್ಯಾಯಾಲಯಗಳ ಹೊರೆಯೂ ಕಡಿಮೆಯಾಗುತ್ತದೆ ಮತ್ತು ಸಾಮಾಜಿಕ ಚೌಕಟ್ಟು ಸಹ ಸುರಕ್ಷಿತವಾಗಿ ಉಳಿಯುತ್ತದೆ. ಈ ಆಲೋಚನೆಯೊಂದಿಗೆ, ನಾವು ಮಧ್ಯಸ್ಥಿಕೆ ಮಸೂದೆಯನ್ನು ರಕ್ಷಣಾತ್ಮ ಶಾಸನವಾಗಿ ಸಂಸತ್ತಿನಲ್ಲಿ ಮಂಡಿಸಿದ್ದೇವೆ. ನಮ್ಮ ಶ್ರೀಮಂತ ಕಾನೂನು ಪರಿಣತಿಯೊಂದಿಗೆ, ನಾವು 'ಪರಿಹಾರಕ್ಕೆ ಮಧ್ಯಸ್ಥಿಕೆ' ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಬಹುದು. ನಾವು ಇಡೀ ಜಗತ್ತಿಗೆ ಒಂದು ಮಾದರಿಯನ್ನು ಪ್ರಸ್ತುತಪಡಿಸಬಹುದು. ಪ್ರಾಚೀನ ಮಾನವೀಯ ಮೌಲ್ಯಗಳು ಮತ್ತು ಆಧುನಿಕ ದೃಷ್ಟಿಕೋನದೊಂದಿಗೆ, ಈ ಸಮ್ಮೇಳನದಲ್ಲಿ ಅಂತಹ ಎಲ್ಲಾ ವಿಷಯಗಳನ್ನು ವಿವರವಾಗಿ ಚರ್ಚಿಸಿದ ನಂತರ, ನಿಮ್ಮಂತಹ ಎಲ್ಲಾ ವಿದ್ವಾಂಸರು ಆ ಸಾರವನ್ನು ತರುತ್ತಾರೆ ಎಂದು ನನಗೆ ಖಾತ್ರಿಯಿದೆ. ಅದು ಬಹುಶಃ ಮುಂದಿನ ಪೀಳಿಗೆಗೆ ಉಪಯುಕ್ತವಾಗಬಹುದು. ಈ ಸಮ್ಮೇಳನದಿಂದ ಹೊರಹೊಮ್ಮಲಿರುವ ಹೊಸ ವಿಚಾರಗಳು ನವ ಭಾರತದ ಆಕಾಂಕ್ಷೆಗಳನ್ನು ಈಡೇರಿಸುವ ಮಾಧ್ಯಮವಾಗಲಿದೆ. ಈ ನಂಬಿಕೆಯೊಂದಿಗೆ, ನಿಮ್ಮೆಲ್ಲರ ಮಾರ್ಗದರ್ಶನಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಆಭಾರಿಯಾಗಿದ್ದೇನೆ ಮತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ದೇಶದ ನ್ಯಾಯಾಂಗ ವ್ಯವಸ್ಥೆಗೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತವೆ ಮತ್ತು ಸಾಧ್ಯವಿರುವ ಎಲ್ಲಾ ಸಹಾಯವನ್ನು ಒದಗಿಸುತ್ತವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇದರಿಂದ ನಾವೆಲ್ಲರೂ ಒಟ್ಟಾಗಿ ದೇಶದ ನಾಗರಿಕರ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗುತ್ತದೆ. 2047 ರಲ್ಲಿ ದೇಶವು ಸ್ವಾತಂತ್ರ್ಯದ 100 ನೇ ವರ್ಷವನ್ನು ಆಚರಿಸುತ್ತಿರುವಾಗ ನಾವು ನಮ್ಮ ನ್ಯಾಯಾಂಗ ವ್ಯವಸ್ಥೆಯ ವಿಷಯದಲ್ಲಿ ಹೆಚ್ಚು ಹೆಮ್ಮೆ, ಗೌರವ ಮತ್ತು ವೈಭವದೊಂದಿಗೆ ಮತ್ತಷ್ಟು ಮುಂದುವರಿಯಬಹುದು ಎಂದು ನಾನು ಭಾವಿಸುತ್ತೇನೆ. ನಿಮಗೆ ನನ್ನ ಶುಭ ಹಾರೈಕೆಗಳು! ತುಂಬ ಧನ್ಯವಾದಗಳು!
ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.

***



(Release ID: 1822063) Visitor Counter : 705