ಪ್ರಧಾನ ಮಂತ್ರಿಯವರ ಕಛೇರಿ

ಕೆನಡಾದಲ್ಲಿ ಸನಾತನ ಮಂದಿರ ಸಾಂಸ್ಕೃತಿಕ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಟಿಪ್ಪಣಿಗಳ ಕನ್ನಡ ಅನುವಾದ

Posted On: 01 MAY 2022 9:49PM by PIB Bengaluru

ನಮಸ್ಕಾರ! 
ನಿಮ್ಮೆಲ್ಲರಿಗೂ ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಗುಜರಾತ್ ದಿನದ ಶುಭಾಶಯಗಳು. ಕೆನಡಾದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ಮೌಲ್ಯಗಳನ್ನು ಜೀವಂತವಾಗಿರಿಸುವಲ್ಲಿ ಒಂಟಾರಿಯೊ ಮೂಲದ ಸನಾತನ ಮಂದಿರ ಸಾಂಸ್ಕೃತಿಕ ಕೇಂದ್ರವು ನಿರ್ವಹಿಸಿದ ಪಾತ್ರದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಕೆನಡಾಕ್ಕೆ ನಾನು ನೀಡಿದ ಭೇಟಿಗಳಲ್ಲಿ ನಾನು ಇದನ್ನು ಅನುಭವಿಸಿದ್ದೇನೆ, ನಿಮ್ಮ ಈ ಪ್ರಯತ್ನಗಳಲ್ಲಿ ನೀವು ಎಷ್ಟು ಸಫಲರಾಗಿದ್ದೀರಿ ಮತ್ತು ನಿಮ್ಮ ಬಗ್ಗೆ ನೀವು ಹೇಗೆ ಸಕಾರಾತ್ಮಕ ಪ್ರಭಾವ ಬೀರಿದ್ದೀರಿ ಎಂಬುದನ್ನು ನಾನು ನೋಡಿದ್ದೇನೆ.
 2015ರ ಅನುಭವದ ಅವಿಸ್ಮರಣೀಯ ನೆನಪು, ಕೆನಡಾದಲ್ಲಿ ಭಾರತೀಯ ಮೂಲದ ಜನರ ಮೇಲಿನ ವಾತ್ಸಲ್ಯ ಮತ್ತು ಪ್ರೀತಿಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸನಾತನ ಮಂದಿರ ಸಾಂಸ್ಕೃತಿಕ ಕೇಂದ್ರ ಮತ್ತು ಈ ವಿನೂತನ ಪ್ರಯತ್ನಕ್ಕೆ ಸಹಕರಿಸಿದ ನಿಮ್ಮೆಲ್ಲರನ್ನು ನಾನು ಅಭಿನಂದಿಸುತ್ತೇನೆ. ಸನಾತನ ದೇವಾಲಯದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಈ ಪ್ರತಿಮೆಯು ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಬಲಪಡಿಸುವುದಲ್ಲದೆ, ಎರಡೂ ದೇಶಗಳ ನಡುವಿನ ಸಂಬಂಧದ ಸಂಕೇತವೂ ಆಗಿದೆ.
ಸ್ನೇಹಿತರೇ, ಒಬ್ಬ ಭಾರತೀಯನು ಪ್ರಪಂಚದಲ್ಲಿ ಎಲ್ಲಿಯೇ ವಾಸಿಸುತ್ತಿದ್ದರೂ, ಅವರು ಎಷ್ಟೇ ತಲೆಮಾರುಗಳನ್ನು ಜೀವಿಸಿದ್ದರೂ ಅವರ ಭಾರತೀಯತೆ ಭಾರತದ ಬಗ್ಗೆ ಅವರ ನಿಷ್ಠೆ ಸ್ವಲ್ಪವೂ ಕಡಿಮೆಯಾಗುವುದಿಲ್ಲ. ಭಾರತೀಯರು ಯಾವುದೇ ದೇಶದಲ್ಲಿ ವಾಸಿಸುತ್ತಿದ್ದರೂ ಅವರು ಆ ದೇಶಕ್ಕೆ ಸಂಪೂರ್ಣ ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಾರೆ. ಪ್ರಜಾಸತ್ತಾತ್ಮಕ ಮೌಲ್ಯಗಳು ಅವರ ಪೂರ್ವಜರು ಭಾರತದಿಂದ ಒಯ್ದ ಕರ್ತವ್ಯ ಪ್ರಜ್ಞೆ ಅವರ ಹೃದಯದ ಮೂಲೆಯಲ್ಲಿ ಸದಾ ಜೀವಂತವಾಗಿರುತ್ತವೆ.
ಏಕೆಂದರೆ, ಭಾರತವು ಒಂದು ರಾಷ್ಟ್ರವಾಗುವುದರ ಜೊತೆಗೆ, ಒಂದು ಮಹಾನ್ ಸಂಪ್ರದಾಯ. ಒಂದು ಸೈದ್ಧಾಂತಿಕ ಸ್ಥಾಪನೆ, ಒಂದು ಸಂಸ್ಕಾರದ ಆಚರಣೆಯೂ ಆಗಿದೆ. ' ವಸುಧೈವ ಕುಟುಂಬಕಂ' ಕುರಿತು ಮಾತನಾಡುವ ಉನ್ನತ ಚಿಂತನೆ ಭಾರತದ್ದಾಗಿದೆ. ಭಾರತವು ಇನ್ನೊಬ್ಬರನ್ನು ಕಳೆದುಕೊಂಡು ತನ್ನ ಉದ್ಧಾರದ ಕನಸು ಕಾಣುವುದಿಲ್ಲ. ಭಾರತವು ಅದರೊಂದಿಗೆ ಇಡೀ ಮನುಕುಲದ, ಇಡೀ ವಿಶ್ವದ ಕಲ್ಯಾಣವನ್ನು ಬಯಸುತ್ತದೆ. ಆದ್ದರಿಂದಲೇ, ಕೆನಡಾದಲ್ಲಿ ಅಥವಾ ಇನ್ನಾವುದೇ ದೇಶದಲ್ಲಿ, ಭಾರತೀಯ ಸಂಸ್ಕೃತಿಗೆ ಸಮರ್ಪಿತವಾದ ಶಾಶ್ವತ ದೇವಾಲಯವನ್ನು ನಿರ್ಮಿಸಿದಾಗ, ಅದು ಆ ದೇಶದ ಮೌಲ್ಯಗಳನ್ನು ಸಹ ಶ್ರೀಮಂತಗೊಳಿಸುತ್ತದೆ.
ಆದ್ದರಿಂದ, ನೀವು ಕೆನಡಾದಲ್ಲಿ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿದರೆ, ಪ್ರಜಾಪ್ರಭುತ್ವದ ಹಂಚಿಕೆಯ ಪರಂಪರೆಯ ಆಚರಣೆಯೂ ಇದೆ. ಆದ್ದರಿಂದ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಆಚರಣೆಯು ಕೆನಡಾದ ಜನರಿಗೆ ಭಾರತವನ್ನು ಹೆಚ್ಚು ಹತ್ತಿರದಿಂದ ನೋಡುವ ಅವಕಾಶವನ್ನು ಕಲ್ಪಿಸುತ್ತದೆ ಎಂದು ನಾನು ನಂಬುತ್ತೇನೆ.
ಸ್ನೇಹಿತರೇ, 
 ಅಮೃತ ಮಹೋತ್ಸವ, ಸನಾತನ ಮಂದಿರ ಸಾಂಸ್ಕೃತಿಕ ಕೇಂದ್ರದ ಸ್ಥಳ ಮತ್ತು ಸರ್ದಾರ್ ಪಟೇಲರ ಪುತ್ಥಳಿಯೊಂದಿಗೆ ಸಂಬಂಧಿಸಿದ ಕಾರ್ಯಕ್ರಮ ಸ್ವತಃ ಭಾರತದ ದೊಡ್ಡ ಚಿತ್ರಣವಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಏನನ್ನು ಕನಸು ಕಂಡರು? ಸ್ವತಂತ್ರ ದೇಶಕ್ಕಾಗಿ ಅವರು ಹೇಗೆ ಹೋರಾಡಿದರು? ಆಧುನಿಕ ಭಾರತ, ಪ್ರಗತಿಪರ ಭಾರತ! ಅದೇ ಸಮಯದಲ್ಲಿ, ತನ್ನ ಆಲೋಚನೆಗಳಿಂದ, ತನ್ನ ಚಿಂತನೆಯಿಂದ, ತನ್ನ ತತ್ವಶಾಸ್ತ್ರದಿಂದ ತನ್ನ ಬೇರುಗಳೊಂದಿಗೆ ಭಾರತ ಸಂಪರ್ಕ ಹೊಂದಿದೆ. ಅದಕ್ಕಾಗಿಯೇ, ಸರ್ದಾರ್ ಸಾಹೇಬರು ಸೋಮನಾಥ ದೇವಾಲಯವನ್ನು ಭಾರತಕ್ಕೆ ಸಾವಿರಾರು ವರ್ಷಗಳ ಪರಂಪರೆಯನ್ನು ನೆನಪಿಸಲು ಜೀರ್ಣೋದ್ಧಾರ ಮಾಡಿದರು. ಇದು ಸ್ವಾತಂತ್ರ್ಯದ ನಂತರ ಹೊಸ ಘಟ್ಟದಲ್ಲಿ ನಿಂತಿತು. ಗುಜರಾತ್ ಆ ಸಾಂಸ್ಕೃತಿಕ ಮಹಾಯಾಗಕ್ಕೆ ಸಾಕ್ಷಿಯಾಯಿತು.
ಇಂದು, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ, ನಾವು ಈ ರೀತಿಯ ನವ ಭಾರತವನ್ನು ನಿರ್ಮಿಸಲು ಸಂಕಲ್ಪ ಮಾಡುತ್ತೇವೆ. ಆ ಕನಸನ್ನು ನನಸು ಮಾಡುವ ಸರ್ದಾರ್ ಸಾಹೇಬರ ಸಂಕಲ್ಪವನ್ನು ನಾವು ಪುನರುಚ್ಚರಿಸುತ್ತೇವೆ. ಮತ್ತು ಈ 'ಏಕತೆಯ ಪ್ರತಿಮೆ' ದೇಶಕ್ಕೆ ದೊಡ್ಡ ಸ್ಫೂರ್ತಿಯಾಗಿದೆ. 'ಏಕತಾ ಪ್ರತಿಮೆ'ಯ ಪ್ರತಿರೂಪವಾಗಿ, ಕೆನಡಾದ ಸನಾತನ ಮಂದಿರ ಸಾಂಸ್ಕೃತಿಕ ಕೇಂದ್ರದಲ್ಲಿ ಸರ್ದಾರ್ ಸಾಹೇಬ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗುವುದು.
ಸ್ನೇಹಿತರೇ,
ಇಂದಿನ ಕಾರ್ಯಕ್ರಮ ಭಾರತದ ಅಮೃತ ಸಂಕಲ್ಪವು ಕೇವಲ ಭಾರತದ ಗಡಿಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬ ಅಂಶದ ಸಂಕೇತವಾಗಿದೆ. ಈ ನಿರ್ಣಯಗಳು ಪ್ರಪಂಚದಾದ್ಯಂತ ಹರಡುತ್ತಿವೆ, ಇಡೀ ಜಗತ್ತನ್ನು ಸಂಪರ್ಕಿಸುತ್ತಿವೆ. ಇಂದು, ನಾವು 'ಆತ್ಮನಿರ್ಭರ ಭಾರತ' ಅಭಿಯಾನವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿರುವಾಗ, ನಾವು ವಿಶ್ವಕ್ಕೆ ಪ್ರಗತಿಯ ಹೊಸ ಸಾಧ್ಯತೆಗಳನ್ನು ತೆರೆಯುವ ಬಗ್ಗೆಯೂ ಮಾತನಾಡುತ್ತೇವೆ. ಇಂದು, ನಾವು ಯೋಗದ ಹರಡುವಿಕೆಗೆ ಶ್ರಮಿಸುತ್ತಿರುವಾಗ, ವಿಶ್ವದ ಪ್ರತಿಯೊಬ್ಬ ವ್ಯಕ್ತಿಗೂ 'ಸರ್ವೇ ಸಂತು ನಿರಾಮಯಃ' ಎಂದು ನಾವು ಹಾರೈಸುತ್ತೇವೆ.
ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ವಿಷಯಗಳಲ್ಲಿ ಭಾರತದ ಧ್ವನಿ ಇಡೀ ಮನುಕುಲವನ್ನು ಪ್ರತಿನಿಧಿಸುತ್ತದೆ. ಭಾರತದ ಈ ಅಭಿಯಾನವನ್ನು ಮುಂದಕ್ಕೆ ಕೊಂಡೊಯ್ಯಲು ಇದು ಸಕಾಲ. ನಮ್ಮ ಕಠಿಣ ಪರಿಶ್ರಮವು ನಮಗಾಗಿ ಮಾತ್ರವಲ್ಲ, ಇಡೀ ಮನುಕುಲದ ಕಲ್ಯಾಣವು ಭಾರತದ ಪ್ರಗತಿಯೊಂದಿಗೆ ಸಂಬಂಧ ಹೊಂದಿದೆ ಮತ್ತು ನಾವು ಇದನ್ನು ಜಗತ್ತಿಗೆ ಮನವರಿಕೆ ಮಾಡಿಕೊಡಬೇಕು. ನೀವೆಲ್ಲರೂ ಭಾರತೀಯರು ಮತ್ತು ಭಾರತೀಯ ಮೂಲದ ಎಲ್ಲಾ ಜನರು ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತೀರಿ.
ಅಮೃತ ಮಹೋತ್ಸವದ ಈ ಕಾರ್ಯಕ್ರಮಗಳು ಭಾರತದ ಪ್ರಯತ್ನಗಳನ್ನು, ಭಾರತದ ವಿಚಾರಗಳನ್ನು ವಿಶ್ವಕ್ಕೆ ಕೊಂಡೊಯ್ಯುವ ಮಾಧ್ಯಮವಾಗಬೇಕು ಮತ್ತು ಇದು ನಮ್ಮ ಆದ್ಯತೆಯಾಗಿರಬೇಕು! ನಮ್ಮ ಈ ಆದರ್ಶಗಳನ್ನು ಅನುಸರಿಸುವ ಮೂಲಕ, ನಾವು ನವ ಭಾರತವನ್ನು ಸೃಷ್ಟಿಸುತ್ತೇವೆ ಮತ್ತು ಉತ್ತಮ ಪ್ರಪಂಚದ ಕನಸನ್ನು ನನಸು ಮಾಡುತ್ತೇವೆ ಎಂಬ ವಿಶ್ವಾಸ ನನಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು, ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು!
ಹಕ್ಕು ನಿರಾಕರಣೆ - ಇದು ಪ್ರಧಾನ ಮಂತ್ರಿ ಅವರ ಹೇಳಿಕೆಗಳ ಅಂದಾಜು ಭಾಷಾಂತರವಾಗಿದೆ. ಮೂಲ ಟಿಪ್ಪಣಿಗಳನ್ನು ಹಿಂದಿಯಲ್ಲಿ ನೀಡಲಾಗಿದೆ.

***



(Release ID: 1822003) Visitor Counter : 199