ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ʻಸೆಮಿಕಾನ್ ಇಂಡಿಯಾ ಸಮ್ಮೇಳನ-2022ʼಕ್ಕೆ ಅದ್ಧೂರಿ ಚಾಲನೆ


ಭಾರತದ ಸೆಮಿ ಕಂಡಕ್ಟರ್‌ ಪರಿಸರ ವ್ಯವಸ್ಥೆಯನ್ನು ವೇಗವರ್ಧನೆಗೊಳಿಸುವ ಕುರಿತಾದ ಸಂಭಾಷಣೆಗೆ ಜಾಗತಿಕವಾಗಿ ಅತ್ಯುತ್ತಮ ಮತ್ತು ಪ್ರತಿಭಾವಂತ ಮನಸ್ಸುಗಳು ಒಂದೆಡೆ ಸೇರಿವೆ

ದೇಶದಲ್ಲಿ ಚಿಪ್ ವಿನ್ಯಾಸ ಮತ್ತು ಉತ್ಪಾದನಾ ಪರಿಸರ ವ್ಯವಸ್ಥೆಯ ವೇಗವರ್ಧನೆ ಹಾಗೂ ಬೆಳವಣಿಗೆಗೆ ನಾವು ಬದ್ಧರಾಗಿದ್ದೇವೆ - ಶ್ರೀ ನರೇಂದ್ರ ಮೋದಿ

ಭಾರತವನ್ನು ಜಾಗತಿಕವಾಗಿ ವಿದ್ಯುನ್ಮಾನ ಮತ್ತು ಸೆಮಿ ಕಂಡಕ್ಟರ್‌ ಕೈಗಾರಿಕೆಯ ಪ್ರಮುಖ ಕೇಂದ್ರವಾಗಿಸುವ ನಮ್ಮ ಆಶಯಕ್ಕೆ ಎಲ್ಲಾ ಮಧ್ಯಸ್ಥಗಾರರ ಜಾಗರೂಕ ಯೋಜನೆ ಮತ್ತು ವಿವೇಚನಾಯುತ ಪ್ರಯತ್ನಗಳ ಬೆಂಬಲವಿದೆ - ಶ್ರೀ ಅಶ್ವಿನಿ ವೈಷ್ಣವ್

ಭಾರತದಲ್ಲಿ ನವೋದ್ಯಮಗಳು ʻಟೆಕೇಡ್‌ʼ ಅನ್ನು ನಿರ್ಮಿಸುತ್ತಿವೆ, ಅದಕ್ಕೆ ಚಾಲನೆ ನೀಡುತ್ತಿವೆ ಮತ್ತು ವೇಗವರ್ಧನೆಗೊಳಿಸುತ್ತಿವೆ. ಉದ್ಯಮಶೀಲ ಶಕ್ತಿಯು ಭಾರತದ ಸೆಮಿ ಕಂಡಕ್ಟರ್‌ ಪರಿಸರ ವ್ಯವಸ್ಥೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ: ಶ್ರೀ ರಾಜೀವ್ ಚಂದ್ರಶೇಖರ್

ಉತ್ಪಾದನಾ ಘಟಕ ಸ್ಥಾಪನೆಗೆ ಬೆಂಗಳೂರಿನಲ್ಲಿ 1800 ಕೋಟಿ ಹೂಡಿಕೆ ಘೋಷಿಸಿದ ʻಅಪ್ಲೈಡ್ ಮೆಟೀರಿಯಲ್ಸ್ʼ

Posted On: 29 APR 2022 5:21PM by PIB Bengaluru

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಾಲಿ ಸಾಮರ್ಥ್ಯಗಳನ್ನು ಪ್ರದರ್ಶಿಸಲು, ಆವಿಷ್ಕಾರಗಳನ್ನು ರೂಪಿಸಲು ಮತ್ತು ಜಾಗತಿಕ ಉತ್ತಮ ಕಾರ್ಯವಿಧಾನಗಳ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಪ್ರಮುಖ ಮಧ್ಯಸ್ಥಗಾರರನ್ನು ಒಟ್ಟುಗೂಡಿಸಲು ವಿನ್ಯಾಸಗೊಳಿಸಲಾದ ಜಾಗತಿಕ ಸೆಮಿಕಂಡಕ್ಟರ್‌ ಸಮ್ಮೇಳನ ʻಸೆಮಿಕಾನ್ ಇಂಡಿಯಾ ಶೃಂಗಸಭೆ-2022ʼಗೆ ಚಾಲನೆ ನೀಡಿದರು. ʻಭಾರತದ ಸೆಮಿ ಕಂಡಕ್ಟರ್‌ ಪರಿಸರ ವ್ಯವಸ್ಥೆಯ ವೇಗವರ್ಧನೆʼ ಎಂಬ ಧ್ಯೇಯವಾಕ್ಯದೊಂದಿಗೆ ಪ್ರಮುಖ ಸಮಾವೇಶವನ್ನು 2022ರ ಏಪ್ರಿಲ್ 29 ರಿಂದ ಮೇ 1 ರವರೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಸಮ್ಮೇಳನವನ್ನು ಉದ್ಘಾಟಿಸಿದ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, "ಇಂದು ಸೆಮಿಕಂಡಕ್ಟರ್‌ಗಳು ವಿಶ್ವದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ. ಭಾರತವು ತನ್ನ ಗ್ರಾಹಕ ನೆಲೆ ಮತ್ತು ನುರಿತ ಎಂಜಿನಿಯರಿಂಗ್ ಕಾರ್ಯಪಡೆಯಿಂದಾಗಿ ಈ ವಿಭಾಗದಲ್ಲಿ ಪ್ರಭಾವಶಾಲಿ ದೇಶವಾಗುವ ವಿಶಿಷ್ಟ ಅವಕಾಶವನ್ನು ಹೊಂದಿದೆ. ನಮ್ಮ ಸರ್ಕಾರವು ಈ ವಲಯದ ಸಾಮರ್ಥ್ಯದ ಬಗ್ಗೆ ತಿಳಿದಿದೆ, ಮತ್ತು ದೇಶದಲ್ಲಿ ಚಿಪ್ ವಿನ್ಯಾಸ ಮತ್ತು ಉತ್ಪಾದನಾ ಪರಿಸರ ವ್ಯವಸ್ಥೆಯ ವೇಗವರ್ಧನೆ ಮತ್ತು ಬೆಳವಣಿಗೆಗೆ ನಾವು ಬದ್ಧರಾಗಿದ್ದೇವೆ. 'ಹೈಟೆಕ್, ಉನ್ನತ ಗುಣಮಟ್ಟ ಮತ್ತು ಹೆಚ್ಚಿನ ವಿಶ್ವಾಸಾರ್ಹತೆ' ತತ್ವದ ಮೇಲೆ ನಿರ್ಮಾಣಗೊಂಡ ಪರಿಸರ ವ್ಯವಸ್ಥೆ ಇದಾಗಲಿದೆ,” ಎಂದರು.
“ಭಾರತವು ಡಿಜಿಟಲೀಕರಣವನ್ನು ಅಳವಡಿಸಿಕೊಂಡಿರುವ ರೀತಿಯಲ್ಲಿ ನಮ್ಮ ʻಡಿಜಿಟಲ್-ಮೊದಲುʼ ಕಾರ್ಯವಿಧಾನವನ್ನು ನೋಡಬಹುದು. ಇಂದು, ʻಯುಪಿಐʼ ಅತ್ಯಂತ ದಕ್ಷ ಪಾವತಿ ಮೂಲಸೌಕರ್ಯವಾಗಿದೆ. ಆರೋಗ್ಯ ಮತ್ತು ಕಲ್ಯಾಣದಿಂದ ಹಿಡಿದು ಸೇರ್ಪಡೆ ಮತ್ತು ಸಬಲೀಕರಣದವರೆಗೆ ಆಡಳಿತದ ಎಲ್ಲಾ ರೂಪಗಳಲ್ಲಿ ಜೀವನವನ್ನು ಪರಿವರ್ತಿಸಲು ನಾವು ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸುತ್ತಿದ್ದೇವೆ. ತಂತ್ರಜ್ಞಾನದ ಮುಂದಿನ ಕ್ರಾಂತಿಯಲ್ಲಿ ಭಾರತವು ಮುಂಚೂಣಿಯಲ್ಲಿರಲು ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಹೊಸ ಪರಿಕಲ್ಪನೆಗಳನ್ನು ರೂಪಿಸಲು, ಚರ್ಚಿಸಲು ಮತ್ತು ಬೆಳವಣಿಗೆಗೆ ಅನುವು ಮಾಡಿಕೊಡುವ ನೀತಿಗಳನ್ನು ರೂಪಿಸಲು ಉದ್ಯಮ ಮತ್ತು ಸರ್ಕಾರವನ್ನು ಮತ್ತಷ್ಟು ಹತ್ತಿರಕ್ಕೆ ತರಲು ಈ ಸಮ್ಮೇಳನವು ಮಹತ್ವದ ಹೆಜ್ಜೆಯಾಗಿದೆ. ಸುಗಮ ವ್ಯಾಪಾರ, ಸಶಕ್ತೀಕರಣ ನೀತಿಗಳು, ʻಪಿಎಲ್ಐʼ ಮತ್ತು ಇತರ ಯೋಜನೆಗಳ ರೂಪದಲ್ಲಿ ವಿತ್ತೀಯ ಬೆಂಬಲ ಹಾಗೂ ಭಾರತದಲ್ಲಿ ಮತ್ತು ಜಾಗತಿಕವಾಗಿ ಈ ವಲಯಕ್ಕೆ ಅಗತ್ಯವಿರುವ ಪ್ರತಿಭೆಗಳನ್ನು ಒದಗಿಸಲು ಯುವಕರಿಗೆ ಕೌಶಲ್ಯ ಮತ್ತು ತರಬೇತಿಯಲ್ಲಿ ಹೂಡಿಕೆ ಮಾಡಲು ನಾವು ಬದ್ಧರಾಗಿದ್ದೇವೆ,” ಎಂದು ಪ್ರಧಾನಿ ಹೇಳಿದರು.
“ನಾವು ʻಭಾರತ ಸೆಮಿಕಂಡಕ್ಟರ್ ಮಿಷನ್‌ʼಗಾಗಿ 10 ಶತಕೋಟಿ ಅಮೆರಿಕನ್‌ ಡಾಲರ್‌ ಮೀಸಲಿಟ್ಟಿದ್ದೇವೆ ಮತ್ತು ಸದೃಢ ಸೆಮಿ ಕಂಡಕ್ಟರ್‌ ಪರಿಸರ ವ್ಯವಸ್ಥೆಯನ್ನು ರೂಪಿಸಲು ಮತ್ತು ಭಾರತವನ್ನು ಭವಿಷ್ಯದಲ್ಲಿ ಮುನ್ನಡೆಸಲು ಬೆಳವಣಿಗೆ ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸುತ್ತಿದ್ದೇವೆ,” ಎಂದು ಮಾಹಿತಿ ನೀಡಿದರು.
ʻಮೇಕ್ ಇನ್ ಇಂಡಿಯಾʼ ಮತ್ತು ʻಆತ್ಮನಿರ್ಭರ್ ಭಾರತ್ʼನಂತಹ ದೊಡ್ಡ ರಾಷ್ಟ್ರೀಯ ಅಭಿಯಾನಗಳೊಂದಿಗೆ ಈ ಸಮ್ಮೇಳನವು ಹೊಂದಿಕೆಯಾಗುತ್ತದೆ. ಇದನ್ನು ʻಇಂಡಿಯಾ ಸೆಮಿಕಂಡಕ್ಟರ್ ಮಿಷನ್ʼಗೆ (ಐಎಸ್ಎಂ)  ಚಿಮ್ಮು ಹಲಗೆಯಾಗಿ (ಲಾಂಚ್‌ ಪ್ಯಾಡ್‌) ಎಂದು ಗುರುತಿಸಲಾಗಿದೆ. ಸೆಮಿಕಂಡಕ್ಟರ್ ವಲಯದಲ್ಲಿ ಸೂಪರ್ ಪವರ್ ಆಗುವ ಭಾರತದ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಈ ವಲಯದ ಪ್ರತಿಭಾವಂತ ಮನಸ್ಸುಗಳು ಒಗ್ಗೂಡಿವೆ. ಮೂರು ದಿನಗಳ ಈ ಸಮಾವೇಶವನ್ನು ಭಾರತದ ಸೆಮಿ ಕಂಡಕ್ಟರ್‌ ಕಾರ್ಯತಂತ್ರಕ್ಕೆ ಉತ್ತೇಜನ ನೀಡಲು ಮತ್ತು ಅದರ ಭವಿಷ್ಯದ ಕ್ರಮ ಮತ್ತು ಬೆಳವಣಿಗೆಯ ಮೈಲುಗಲ್ಲುಗಳನ್ನು ಪಟ್ಟಿ ಮಾಡಲು ವಿನ್ಯಾಸಗೊಳಿಸಲಾಗಿದೆ ಎಂದು ಪ್ರಧಾನಿಯವರು ಹೇಳಿದರು. 

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ; ರೈಲ್ವೆ ಮತ್ತು ಸಂಪರ್ಕ ಖಾತೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, "ಭಾರತವು ಹೊಂದಿರುವ ಅತಿದೊಡ್ಡ ಆಸ್ತಿಯೆಂದರೆ ಅದರ ಪ್ರತಿಭಾನ್ವಿತ ಕಾರ್ಯಪಡೆ. ಇಡೀ ವಿಶ್ವವೇ ಅದರ ಮೇಲೆ ವಿಶ್ವಾಸವಿರಿಸಿದೆ. ಭಾರತವನ್ನು ಚಿಪ್ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಪ್ರಮುಖ ದೇಶವನ್ನಾಗಿ ಮಾಡುವುದೆಂದರೆ, ಅದೊಂದು ಓಟದ ಸ್ಪರ್ಧೆಯಲ್ಲ, ಬದಲಿಗೆ ಅದೊಂದು ಮ್ಯಾರಥಾನ್ ಸರಿಯಷ್ಟೇ. ಜಾಗತಿಕ ಮಟ್ಟದಲ್ಲಿ ವಿದ್ಯುನ್ಮಾನ ಮತ್ತು ಸೆಮಿ ಕಂಡಕ್ಟರ್‌ ಉದ್ಯಮದ ಪ್ರಮುಖ ಕೇಂದ್ರವಾಗಿ ಭಾರತವನ್ನು ರೂಪಿಸಲು ಎಲ್ಲಾ ಮಧ್ಯಸ್ಥಗಾರರ ಜಾಗರೂಕ ಯೋಜನೆ ಮತ್ತು ಅಳೆದು-ತೂಗಿದ ಪ್ರಯತ್ನಗಳು ನಮ್ಮ ಆಶಯವನ್ನು ಬೆಂಬಲಿಸುತ್ತವೆ. ನಮ್ಮ ಅನುಕೂಲಕರ ನೀತಿಗಳ ಜೊತೆಗೆ, ಸೆಮಿ ಕಂಡಕ್ಟರ್‌ ಉದ್ಯಮಕ್ಕಾಗಿ 85 ಸಾವಿರ ನುರಿತ ತರಬೇತಿ ಪಡೆದ ಮತ್ತು ಉತ್ಪಾದನಾ ಸನ್ನದ್ಧ ಕಾರ್ಯಪಡೆಯನ್ನು ರಚಿಸಲು ಸರಕಾರ ಮುಂದಾಗಿದೆ. ಇದಕ್ಕೆ ನೆರವಾಗಲು ಪಠ್ಯಕ್ರಮವನ್ನು ವಿನ್ಯಾಸಗೊಳಿಸಲು ನಾವು ಶೈಕ್ಷಣಿಕ ಮತ್ತು ಜಾಗತಿಕ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ನಾವು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಮತ್ತು ಈ ವಲಯದ ದೀರ್ಘಕಾಲೀನ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಕೇಂದ್ರೀಕೃತ ರೀತಿಯಲ್ಲಿ ಉದ್ಯಮದೊಂದಿಗೆ ನಿಕಟವಾಗಿ ಕೆಲಸ ಮಾಡುವ ಭರವಸೆಯನ್ನು ಪುನರುಚ್ಚರಿಸುತ್ತೇವೆ," ಎಂದು ಸಚಿವ ವೈಷ್ಣವ್‌ ಅವರು ಹೇಳಿದರು.


ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್ ಅವರು, "ಜಗತ್ತು ಇತ್ತೀಚಿನ ದಿನಗಳಲ್ಲಿ ಅತ್ಯಂತ ಕೆಟ್ಟ, ಅನಿರೀಕ್ಷಿತ ಕಾಲಘಟ್ಟವನ್ನು ಹಾದು ಬಂದಿದೆ. ಕೋವಿಡ್‌ ಸಾಂಕ್ರಾಮಿಕದ ವೇಳೆ ಲಾಕ್‌ಡೌನ್‌ನಿಂದಾಗಿ ಭಾರತವು ಸಮಾರು 150 ಶತಕೋಟಿ ಡಾಲರ್ನಿಂದ 200 ಶತಕೋಟಿ ಡಾಲರ್ ಆರ್ಥಿಕ ನಷ್ಟವನ್ನು ಅನುಭವಿಸಿದೆ. ಆದಾಗ್ಯೂ, ಆರ್ಥಿಕ ಹಿನ್ನಡೆಗಳ ಹೊರತಾಗಿಯೂ ನಾವು ಬಲವಾಗಿ ಹೊರಹೊಮ್ಮಿದ್ದೇವೆ. ನಮ್ಮ ವಿಶಾಲ ದೇಶ ಮತ್ತು ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಭಾರತವು ಉತ್ತಮ ಕ್ಷಮತೆಯನ್ನು ಪ್ರದರ್ಶಿಸಿದೆ. ಜೊತೆಗೆ ತನ್ನ ಲಸಿಕಾ ಕಾರ್ಯಕ್ರಮ, ಆರೋಗ್ಯ ರಕ್ಷಣೆ ಮತ್ತು ಹಣಕಾಸು ಬೆಂಬಲ ಹಾಗೂ ತನ್ನ ನಾಗರಿಕರಿಗೆ ಇತರ ಕಲ್ಯಾಣ ಯೋಜನೆಗಳನ್ನು ಒದಗಿಸುವ ಮೂಲಕ ಅಸಾಧಾರಣ ರೀತಿಯಲ್ಲಿ ಕಾರ್ಯನಿರ್ವಹಿಸಿದೆ,” ಎಂದು ಹೇಳಿದರು.

ಪರಿಣಾಮಕಾರಿ ಆಡಳಿತ ಮತ್ತು ಸಹಾನುಭೂತಿಯ ನೀತಿಗಳು ಈ ಸ್ಮರಣೀಯ ಸಾಧನೆಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ
ಸಾಂಕ್ರಾಮಿಕ ರೋಗವು ತ್ವರಿತ ಡಿಜಿಟಲೀಕರಣಕ್ಕಾಗಿ ನಮ್ಮ ಮೇಲೆ ಹೇರಿದ ಒತ್ತಡದ ಬಗ್ಗೆಯೂ ನಮಗೆ ತಿಳಿದಿದೆ. ಸ್ಥಿತಿಸ್ಥಾಪಕತ್ವದೊಂದಿಗೆ ಈ ವಿಪತ್ತನ್ನು ಎದುರಿಸುವ ನಮ್ಮ ಸಾಮರ್ಥ್ಯವನ್ನು ಇಡೀ ಜಗತ್ತು ಶ್ಲಾಘಿಸಿದೆ. ಇಂದು ನಮ್ಮ ತಂತ್ರಜ್ಞಾನ ಪರಿಸರ ವ್ಯವಸ್ಥೆಯು ವಿಶ್ವಾದ್ಯಂತ ತನ್ನ ಉತ್ಕೃಷ್ಟತೆಗಾಗಿ ಗುರುತಿಸಲ್ಪಟ್ಟಿದೆ ಮತ್ತು ಅನೇಕ ʻಯುನಿಕಾರ್ನ್ʼಗಳಿಂದ ತುಂಬಿರುವ ನಮ್ಮ ನವೋದ್ಯಮ ಪರಿಸರ ವ್ಯವಸ್ಥೆಯು ಈ ಸಂಗತಿಗೆ ಸಾಕ್ಷಿಯಾಗಿದೆ. ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನಾ ವಲಯವು ನಮ್ಮ ಮುಂದಿನ ಹಂತದ ಬೆಳವಣಿಗೆಯ ನಿರ್ಣಾಯಕ ಅಂಶವಾಗಿದೆ. ಈ ಬೆಳವಣಿಗೆಯನ್ನು ವೇಗವರ್ಧನೆಗೊಳಿಸಲು, ನಾವು ಅನುಕೂಲಕರ ನೀತಿಗಳು ಮತ್ತು ಸಂಘಟಿತ ಪ್ರಯತ್ನ ಮಾಡಬೇಕಿದೆ. ಜೊತೆಗೆ ಉದ್ಯಮದೊಂದಿಗೆ ನಿಕಟ ಸಹಯೋಗದಿಂದ ಬೆಂಬಲಿತವಾಗಿರುವ ಮಾರ್ಗಸೂಚಿಯನ್ನು ರೂಪಿಸಿದ್ದೇವೆ. ʻಸಬ್ ಕಾ ಸಾಥ್ʼ, ʻಸಬ್ ಕಾ ಪ್ರಯಾಸ್ʼ ಖಾತರಿಪಡಿಸುವ ಮೂಲಕ ಭಾರತವನ್ನು ಮುಂದಿನ ʻಟೆಕೇಡ್ʼ(Techade)ನಲ್ಲಿ ಮುಂಚೂಣಿಯಲ್ಲಿ ನಿಲ್ಲಿಸುವ ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳ ಆಶಯವನ್ನು ನಾವು ಒಟ್ಟಿಗೆ ಸಾಕಾರಗೊಳಿಸಬಹುದು,ʼʼ ಎಂದರು. 
ಪ್ರಮುಖ ಭಾರತೀಯ ಮತ್ತು ಜಾಗತಿಕ ಉದ್ಯಮಗಳ ಉಪಸ್ಥಿತಿಯ ಮೂಲಕ ಉದ್ಘಾಟನಾ ಸಮಾರಂಭವು ಉತ್ತಮ ಪ್ರಾತಿನಿಧ್ಯಕ್ಕೆ ಸಾಕ್ಷಿಯಾಯಿತು. ಹಾಜರಿದ್ದ ಉದ್ಯಮದ ನಾಯಕರು ದೇಶವನ್ನು ಸೆಮಿ ಕಂಡಕ್ಟರ್‌ ಕೇಂದ್ರವನ್ನಾಗಿ ಪರಿವರ್ತಿಸುವಲ್ಲಿ ಸರ್ಕಾರದ ಪ್ರಯತ್ನಗಳು ಮತ್ತು ದೂರದೃಷ್ಟಿಯನ್ನು ಶ್ಲಾಘಿಸಿದರು.  ʻಮೈಕ್ರಾನ್ ಟೆಕ್ನಾಲಜಿʼ ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಶ್ರೀ ಸಂಜಯ್ ಮೆಹ್ರೋತ್ರಾ ಅವರು ಮಾತನಾಡಿ, ʻಆತ್ಮನಿರ್ಭರ ಭಾರತʼವನ್ನು ಖಾತರಿಪಡಿಸಿಕೊಳ್ಳುವಲ್ಲಿ ಸೆಮಿ ಕಂಡಕ್ಟರ್‌ ವಲಯದ ಪಾತ್ರವನ್ನು ಒತ್ತಿಹೇಳಿದರು. ಇದು ಉದ್ಯಮ, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರದ ಸಾಮೂಹಿಕ ಪ್ರಯತ್ನಗಳಿಂದ ಸಾಧ್ಯವಾಗಲಿದೆ ಎಂದರು.  ʻಇಂಟೆಲ್ ಫೌಂಡ್ರಿ ಸರ್ವಿಸಸ್‌ʼ ಅಧ್ಯಕ್ಷರಾದ ಶ್ರೀ ರಣಧೀರ್ ಠಾಕೂರ್ ಅವರು ತಮ್ಮ ಮುಖ್ಯ ಭಾಷಣದಲ್ಲಿ, “ದೇಶೀಯ ಸೆಮಿ ಕಂಡಕ್ಟರ್‌ ವಲಯವು ನಿರ್ವಹಿಸುತ್ತಿರುವ ನಿರ್ಣಾಯಕ ಪಾತ್ರವನ್ನು ಪುನರುಚ್ಚರಿಸಿದರು ಮತ್ತು ಆರ್ಥಿಕ ಬೆಳವಣಿಗೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಇದು ಮುಂದುವರಿಯಲಿದೆ,ʼʼ ಎಂದರು. ಸೆಮಿಕಂಡಕ್ಟರ್‌ಗಳು ಡಿಜಿಟಲ್ ಯುಗದಲ್ಲಿ ಹೊಸ ತೈಲವಾಗಿದೆ. ಸ್ವದೇಶಿ ಸಂಶೋಧಕರಿಗೆ ಉತ್ತೇಜನ ನೀಡುವುದರಿಂದ ಮತ್ತು ದೇಶದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಜಾಗತಿಕ ಸಂಸ್ಥೆಗಳನ್ನು ಸ್ವಾಗತಿಸುವುದರಿಂದ ಮುಂಬರುವ ವರ್ಷಗಳಲ್ಲಿ ಭಾರತದ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಚಾಲಕ ಶಕ್ತಿ ದೊರೆಯಲಿದೆ. ʻಟೆಂಟೋರೆಂಟ್ʼ ಸಂಸ್ಥೆಯ ಸಿಇಒ ಜಿಮ್ ಕೆಲ್ಲರ್ ಅವರು ಮಾತನಾಡಿ, “ನಮ್ಮ ದೈನಂದಿನ ಜೀವನದಲ್ಲಿ ಸೆಮಿ ಕಂಡಕ್ಟರ್‌ಗಳ ಬಳಕೆಯ ವ್ಯಾಪಕ ಸ್ವರೂಪವನ್ನು ಒತ್ತಿಹೇಳಿದರು. ಗ್ರಾಹಕ ನೆಲೆ ಮತ್ತು ಡೇಟಾ ವೇಗವಾಗಿ ಬೆಳೆಯುತ್ತಿರುವುದರಿಂದ, ವೇಗವನ್ನು ಕಾಯ್ದುಕೊಳ್ಳಲು ಸೆಮಿ ಕಂಡಕ್ಟರ್‌ ವ್ಯವಸ್ಥೆಯ ಅಗತ್ಯವಿದೆ. ಜಾಗತಿಕವಾಗಿ ಪ್ರತಿಭೆ ಮತ್ತು ತಂತ್ರಜ್ಞಾನದ ದೃಷ್ಟಿಕೋನದಿಂದ ಭಾರತವು ಈ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ,ʼʼ ಎಂದರು.
ನಿಗದಿಪಡಿಸಲಾದ ಮೈಲಿಗಲ್ಲುಗಳನ್ನು ಸಾಧಿಸುವ ಮತ್ತು ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಧ್ಯಸ್ಥಗಾರರೊಂದಿಗೆ ಕೆಲಸ ಮಾಡಲು ತನ್ನ ಬದ್ಧತೆ ಮತ್ತು ತೀವ್ರ ಆಸಕ್ತಿಯನ್ನು ಪ್ರದರ್ಶಿಸುವ ಮೂಲಕ ಸಮ್ಮೇಳನದ ಸಮಯದಲ್ಲಿ, ಸರ್ಕಾರವು ಉದ್ಯಮದೊಂದಿಗೆ ತನ್ನ ಸಹಭಾಗಿತ್ವವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಿತು. ಈ ಕೆಳಗಿನ ತಿಳಿವಳಿಕಾ ಒಡಂಬಡಿಕೆಗೆ (ಎಂಓಯು) ಅಂಕಿತ ಹಾಕಲಾಯಿತು:

ಭಾರತದಲ್ಲಿ ಸೆಮಿ ಕಂಡಕ್ಟರ್‌ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ʻಸೆಮಿʼ ಮತ್ತು ʻಎಲ್ಸಿನಾʼ (SEMI and ELCINA) ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ
ಸೆಮಿ ಕಂಡಕ್ಟರ್‌ ಉತ್ಪಾದನೆಯಲ್ಲಿ ಸಹಭಾಗಿತ್ವಕ್ಕಾಗಿ ಸಿಡಿಎಸಿ ಮತ್ತು ಕ್ವಾಲ್ಕಾಮ್ ನಡುವಿನ ತಿಳಿವಳಿಕಾ ಒಡಂಬಡಿಕೆ, ʻಪಿಎಲ್ಐʼ ಯೋಜನೆಯ ಉದ್ದೇಶಗಳಿಗೆ ಅನುಗುಣವಾಗಿ ಸೆಮಿ ಕಂಡಕ್ಟರ್‌ ವಿನ್ಯಾಸ ನವೋದ್ಯಮಗಳನ್ನು ಉದ್ದೇಶಿಸಿದ ಒಡಂಬಡಿಕೆ ಇದಾಗಿದೆ.
ಸೆಮಿಕಂಡಕ್ಟರ್ ವಲಯಕ್ಕಾಗಿ ಟೆಕ್ ಉದ್ಯೋಗಿಗಳಿಗೆ ತರಬೇತಿ ಮತ್ತು ಕೌಶಲ್ಯ ನೀಡಲು ಎಐಸಿಟಿಇ ಮತ್ತು ಸೆಮಿ ಮತ್ತು ಐಎಸ್ಎಂ ನಡುವೆ ತಿಳಿವಳಿಕೆ ಒಪ್ಪಂದ


'ಸೆಮಿಕಂಡಕ್ಟರ್ ಉತ್ಪಾದನಾ ಪೂರೈಕೆ ಸರಪಳಿ - ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಅವಕಾಶ' ಕುರಿತು ಐಇಎಸ್ಎ ಉದ್ಯಮ ವರದಿಯನ್ನು ಬಿಡುಗಡೆ ಮಾಡಿದೆ.
ಜಾಗತಿಕ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನಾ ಕೇಂದ್ರವಾಗುವ ಭಾರತದ ಮಹತ್ವಾಕಾಂಕ್ಷೆಯನ್ನು ಪ್ರಾರಂಭಿಸಲು ಈ
ಸಮ್ಮೇಳನವನ್ನು ʻಉಡಾವಣಾ ವೇದಿಕೆʼ ಆಗಿ ಭಾವಿಸಲಾಗಿದೆ. ಕಾರ್ಯಕ್ರಮದ ಮೊದಲ ದಿನ ʻಸೆಮಿʼಯ ಅಧ್ಯಕ್ಷರು ಮತ್ತು ಸಿಇಓ ಶ್ರೀ ಅಜಿತ್ ಮನೋಚಾ ಅವರು ʻಇಂಡಿಯಾಸ್‌ ʻಫ್ಯಾಬ್‌ʼಲಸ್‌ ಪುಷ್‌ ಫಾರ್‌ ಮಿಲಿಯನ್ ಚಿಪ್ಸ್ ಫಾರ್‌ ಬಿಲಿಯನ್ಸ್‌ʼ ಬಗ್ಗೆ ಮಾತನಾಡಿದರು. 
ಸೆಮಿಕಂಡಕ್ಟರ್ ʻಫ್ಯಾಬ್ʼ ಅನ್ನು ಭಾರತದಲ್ಲಿ ಸ್ಥಳೀಯವಾಗಿ ಸ್ಥಾಪಿಸಲು ಮತ್ತು ಪ್ರದರ್ಶಿಸಲು ಭಾರತವು ಐದು ಜಾಗತಿಕ ಸೆಮಿಕಾನ್ ಪ್ರಮುಖರಿಂದ ಹೂಡಿಕೆ ಪ್ರಸ್ತಾವಗಳನ್ನು ಸ್ವೀಕರಿಸಿದೆ. ಗ್ರಾಹಕ ಸಾಧನಗಳು, ಆಟೋಮೋಟಿವ್‌ಗಳು ಮತ್ತು ವೈಯಕ್ತಿಕ ಎಲೆಕ್ಟ್ರಾನಿಕ್ಸ್ ಸೇರಿದಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳಲ್ಲಿ ಬಳಸುವ ಚಿಪ್ ಗಳನ್ನು ತಯಾರಿಸಲು ಈ ಪ್ರಸ್ತಾಪಗಳಿವೆ. 20.5 ಶತಕೋಟಿ ಅಮೆರಿಕನ್‌ ಡಾಲರ್‌ ಪ್ರಸ್ತಾಪಗಳನ್ನು ಸ್ವೀಕರಿಸಲಾಗಿದೆ.
ಮೆಟೀರಿಯಲ್ ಎಂಜಿನಿಯರಿಂಗ್ ಸಲ್ಯೂಷನ್ಸ್ ಮತ್ತು ವಿಶ್ವದ ಅತಿದೊಡ್ಡ ಸೆಮಿಕಂಡಕ್ಟರ್ ಡಿಸ್‌ಪ್ಲೇ ಉಪಕರಣ ತಯಾರಕರಾದ ʻಅಪ್ಲೈಡ್ ಮೆಟೀರಿಯಲ್ಸ್ʼ ಭಾರತದಲ್ಲಿ 1800 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಉದ್ದೇಶಿತ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಕಂಪನಿಯು ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.
ಭವಿಷ್ಯದ ಸೆಮಿಕಂಡಕ್ಟರ್ ಸಾಮರ್ಥ್ಯಗಳತ್ತ ಭಾರತದ ನಡಿಗೆʼ ಎಂಬ ವಿಷಯದ ಮೇಲಿನ ಚರ್ಚೆಯಲ್ಲಿ ಬರುನ್ ದತ್ತಾ, ಐಎಂಇಸಿʼ ಎರೆಜ್ ಇಂಬರ್ಮನ್, ಟವರ್ ಸೆಮಿಕಂಡಕ್ಟರ್ಸ್; ರಾಜ್ ಕುಮಾರ್, ಐಜಿಎಸ್ಎಸ್ ವೆಂಚರ್ಸ್; ʻಗ್ಲೋಬಲ್ ಫೌಂಡ್ರಿಸ್‌ʼನ ರಾಜೇಶ್ ನಾಯರ್ ಮುಂತಾದ ಹೆಸರಾಂತ ಉದ್ಯಮ ನಾಯಕರು ಭಾಗವಹಿಸಿದ್ದರು. ಈ  ವಲಯದಲ್ಲಿನ ಹಂತದ ಬೆಳವಣಿಗೆಗೆ ಸಜ್ಜಾಗಲು ಸಂಘಟಿತ ಪ್ರಯತ್ನಗಳ ಅಗತ್ಯವನ್ನು ಇವರು ಒತ್ತಿ ಹೇಳಿದರು. ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಬೆಳವಣಿಗೆಯನ್ನು ತ್ವರಿತಗೊಳಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ದೇಶದ ದೊಡ್ಡ ಎಂಜಿನಿಯರಿಂಗ್ ಪ್ರತಿಭೆಗಳ ಭಂಡರ ರೂಪಿಸಲು ಆಕರ್ಷಕ ಕಲಿಕೆ ಮತ್ತು ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಪ್ರಮುಖ ಚಿಪ್ ಮತ್ತು ಮೈಕ್ರೋಪ್ರೊಸೆಸರ್ ತಯಾರಕರು, ತಾಂತ್ರಿಕ ಸಂಸ್ಥೆಗಳು ಮತ್ತು ಹೊಸ ಯುಗದ ತಂತ್ರಜ್ಞಾನ ನವೋದ್ಯಮಗಳ ಪ್ರದರ್ಶನವನ್ನು ಸಹ ಸಮ್ಮೇಳನವು ಒಳಗೊಂಡಿದೆ. ಈ ಪ್ರದರ್ಶನವು ಈ ವಲಯದಲ್ಲಿನ ಪ್ರಸ್ತುತ ಸಾಮರ್ಥ್ಯಗಳನ್ನು ಮತ್ತು ಹೊಸ ಆವಿಷ್ಕಾರಗಳ ರೋಮಾಂಚಕ ಸಾಧ್ಯತೆಗಳನ್ನು ಪುನರುಚ್ಚರಿಸುತ್ತದೆ.


***



(Release ID: 1821436) Visitor Counter : 289