ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ [ಪಿಎಂ ಸ್ವನಿಧಿ] ಯನ್ನು 2022 ರ ಮಾರ್ಚ್ ನಿಂದ 2024 ರ ವರೆಗೆ ಮುಂದುವರೆಸಲು ಸಂಪುಟ ಅನುಮೋದನೆ

Posted On: 27 APR 2022 4:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ [ಪಿಎಂ ಸ್ವನಿಧಿ] ಕಾರ್ಯಕ್ರಮವನ್ನು 2022 ರ ಮಾರ್ಚ್ ನಿಂದ 2024 ರ ವರೆಗೆ ಮುಂದುವರೆಸಲು ಅನುಮೋದನೆ ನೀಡಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಮುಕ್ತವಾಗಿ ಕೈಗೆಟುವ ರೀತಿಯಲ್ಲಿ ಸಾಲದ ನೆರವು, ಡಿಜಿಟಲ್ ವಹಿವಾಟು ಹೆಚ್ಚಿಸುವ, ಬೀದಿ ಬದಿ ವ್ಯಾಪಾರಿಗಳು ಮತ್ತು ಅವರ ಕುಟುಂಬಗಳ ಸಮಗ್ರ ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು  ಕೇಂದ್ರೀಕರಿಸುವ ಉದ್ದೇಶವನ್ನು ಇದು ಒಳಗೊಂಡಿದೆ. 

ಯೋಜನೆ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಕೈಗೆಟುಕುವ ಮಾರ್ಗದಲ್ಲಿ ಮುಕ್ತ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಈ ಯೋಜನೆಯಡಿ  5,000 ಕೋಟಿ ರೂಪಾಯಿ ಸಾಲ ಒದಗಿಸಲಾಗಿತ್ತು. ಇವತ್ತಿನ ಅನುಮೋದನೆಯಿಂದ ಸಾಲದ ಪ್ರಮಾಣ 8,100 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಬೀದಿ ವ್ಯಾಪಾರಿಗಳಿಗೆ ದುಡಿಯುವ ಬಂಡವಾಳವನ್ನು ಹೆಚ್ಚಿಸಿ, ವ್ಯಾಪಾರವನ್ನು ವಿಸ್ತರಿಸಿಕೊಳ್ಳಲು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸಹಕಾರಿಯಾಗಲಿದೆ. 
ವ್ಯಾಪಾರಿಗಳಿಗೆ ಕ್ಯಾಶ್ ಬ್ಯಾಕ್ ಸೇರಿದಂತೆ ಡಿಜಿಟಲ್ ಪಾವತಿಗಳ ಪ್ರಚಾರ ಮಾಡಲು ಆಯವ್ಯಯದ ಮೊತ್ತವನ್ನು ಹೆಚ್ಚಿಸಲಾಗಿದೆ. ಈ ಪ್ರಸ್ತಾವನೆಯ ಅಂಗೀಕಾರದಿಂದ ನಗರ ಭಾರತದ 1.2 ಕೋಟಿ ನಾಗರಿಕರಿಗೆ ಲಾಭವಾಗಲಿದೆ. 
ಪಿಎಂ ಸ್ವನಿಧಿ ಕಾರ್ಯಕ್ರಮದಡಿ ಈಗಾಗಲೇ ಮಹತ್ವದ ಸಾಧನೆಗಳನ್ನು ಮಾಡಲಾಗಿದೆ. 2022 ರ ಏಪ್ರಿಲ್ 25 ರ ವೇಳೆಗೆ 31.9 ಲಕ್ಷ ಜನರಿಗೆ ಸಾಲ ಮಂಜೂರು ಮಾಡಲಾಗಿದೆ ಮತ್ತು 29.6 ಲಕ್ಷ ಜನರಿಗೆ 2.931 ಕೋಟಿ ರೂಪಾಯಿ ಸಾಲದ ಮೊತ್ತವನ್ನು ವಿತರಿಸಲಾಗಿದೆ. ಎರಡನೇ ಹಂತದಲ್ಲಿ 2.4 ಲಕ್ಷ ಮಂದಿಗೆ ಸಾಲ ಮಂಜೂರು ಮಾಡಿದ್ದು, 385 ಕೋಟಿ ರೂಪಾಯಿ ವಿತರಣೆ  ಮಾಡಲಾಗಿದೆ. ಈ ಪೈಕಿ 10 ಕೋಟಿ ರೂಪಾಯಿ ಕ್ಯಾಶ್ ಬ್ಯಾಕ್ ರೂಪದಲ್ಲಿ ನೀಡಲಾಗಿದೆ. ಇದರ ಜತೆಗೆ 51 ಕೋಟಿ ರೂಪಾಯಿ ಮೊತ್ತವನ್ನು ಬಡ್ಡಿ ಸಬ್ಸಿಡಿ ವಿಧಾನದಲ್ಲಿ ಪಾವತಿಸಲಾಗಿದೆ. 
ಈ ಯೋಜನೆಯನ್ನು 2020ರ ಜೂನ್ ನಲ್ಲಿ ಸಾಂಕ್ರಾಮಿಕ ಕಾರಣದಿಂದ ಜಾರಿ ಮಾಡಲಾಗಿತ್ತು. ಇದೀಗ ಸಣ್ಣ ಮತ್ತು ಮಧ್ಯಮ ಉದ್ಯಮ ವಲಯದ ಮೇಲಿನ ನಿರ್ಬಂಧಗಳನ್ನು ಹಿಂತೆದುಕೊಳ್ಳಲು ಸಾಧ್ಯವಾಗದ ಕಾರಣ ಯೋಜನೆಯನ್ನು ವಿಸ್ತರಣೆ ಮಾಡಲಾಗುತ್ತಿದೆ. 2024 ರ ಡಿಸೆಂಬರ್ ವರೆಗೆ ಔಪಚಾರಿಕವಾಗಿ ಸಾಲ ನೀಡುವ ಮಾರ್ಗಗಳನ್ನು ಸಾಂಸ್ಥಿಕಗೊಳಿಸಲು ಸಹಾಯ ಮಾಡುತ್ತದೆ. ವ್ಯಾಪಾರ ವಿಸ್ತರಣೆಯನ್ನು ಸೂಕ್ತವಾಗಿ ಯೋಜಿತ ರೀತಿಯಲ್ಲಿ ಮಾಡಲು, ಜಿಡಿಟಲ್ ವಹಿವಾಟುಗಳ ಅಳವಡಿಕೆಯನ್ನು ವೃದ್ಧಿಸಲು, ಸಾಲ ನೀಡುವ ಸಂಸ್ಥೆಗಳ ಮೇಲೆ ಸಂಭವನೀಯ ಎನ್.ಪಿ.ಎ ಗಳ ಪ್ರಭಾವನ್ನು ತಗ್ಗಿಸಲು ಮತ್ತು ಖಚಿತವಾದ ರೀತಿಯಲ್ಲಿ ಸಾಲದ ಮೂಲವನ್ನು ಒದಗಿಸಲು ಸಹಕಾರಿಯಾಗುತ್ತದೆ. ಬೀದಿ ಬದಿ ವ್ಯಾಪಾರಿಗಳು ಮತ್ತು ಅವರ ಕುಟುಂಬದವರನ್ನು ಸಾಮಾಜಿಕ, ಆರ್ಥಿಕವಾಗಿ ಸಮಗ್ರ ರೀತಿಯಲ್ಲಿ ಮೇಲೆತ್ತಲು ಈ ನಿರ್ಧಾರದಿಂದ ಸಹಕಾರಿಯಾಗಲಿದೆ.  


 *****



(Release ID: 1820695) Visitor Counter : 1020