ಉಪರಾಷ್ಟ್ರಪತಿಗಳ ಕಾರ್ಯಾಲಯ

ಮಾಧ್ಯಮಗಳು ಜವಾಬ್ದಾರಿಯುತ ಪ್ರಸಾರದಲ್ಲಿ ತೊಡಗಬೇಕೆಂದು ಉಪರಾಷ್ಟ್ರಪತಿ ಕರೆ


ಮಾಧ್ಯಮದಲ್ಲಿ ವೈಭವೀಕರಣ ಹೆಚ್ಚುತ್ತಿರುವುದಕ್ಕೆ ಉಪರಾಷ್ಟ್ರಪತಿ ಕಳವಳ

ಪ್ರಜಾಪ್ರಭುತ್ವಕ್ಕೆ ಪತ್ರಿಕಾ ಸ್ವಾತಂತ್ರ್ಯ ಅನಿವಾರ್ಯ: ಉಪರಾಷ್ಟ್ರಪತಿ

ಆಕಾಶವಾಣಿಯ ನೆಲ್ಲೂರು ಎಫ್ ಎಂ ಕೇಂದ್ರದಲ್ಲಿ 10 ಕಿಲೋವ್ಯಾಟ್ ಎಂಎಫ್ ಕಾರ್ಯಾಚರಣೆಗಾಗಿ 100 ಮೀಟರ್ ಟವರ್ ಅನ್ನು ಉದ್ಘಾಟಿಸಿದ ಉಪರಾಷ್ಟ್ರಪತಿ

Posted On: 27 APR 2022 12:29PM by PIB Bengaluru

ಮಾಧ್ಯಮಗಳು ನೈತಿಕ ಪತ್ರಿಕೋದ್ಯಮದ ಮೌಲ್ಯಗಳನ್ನು ಪಾಲನೆ ಮಾಡಬೇಕು ಮತ್ತು ತಮ್ಮ ಸುದ್ದಿಗಳ ಪ್ರಸಾರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಇಂದು ಕರೆ ನೀಡಿದರು.

ಸುದ್ದಿಯನ್ನು ಉತ್ಪ್ರೇಕ್ಷಿಸುವ ಮತ್ತು ವೈಭವೀಕರಿಸುವ ಪ್ರವೃತ್ತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಇದು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ ಎಂದು ಹೇಳಿದರು. ಕೆಲವು ಸಲ ಅಂತಹ ತಪ್ಪು ಮಾಹಿತಿಯು ಭಯವನ್ನು ಉಂಟುಮಾಡಬಹುದು ಅವರು ಹೇಳಿದರು ಮತ್ತು “ಸತ್ಯಕ್ಕೆ ಹತ್ತಿರವಾಗಿರಿ ಮತ್ತು ಸುದ್ದಿಗಳ ವೈಭವೀಕರಣದಿಂದ ದೂರವಿರಿ’’ ಎಂದು ಉಪರಾಷ್ಟ್ರಪತಿ ಹೇಳಿದರು. 

ಆಕಾಶವಾಣಿಯ ನೆಲ್ಲೂರು ಎಫ್ ಎಂ ಕೇಂದ್ರದಲ್ಲಿ 10 ಕಿಲೋವ್ಯಾಟ್ ಎಂಎಫ್ ಕಾರ್ಯಾಚರಣೆಗೆ  100 ಮೀಟರ್ ಟವರ್ ಅನ್ನು ಶ್ರೀ ಎಂ.ವೆಂಕಯ್ಯನಾಯ್ಡು  ಉದ್ಘಾಟಿಸಿದರು. ಆಕಾಶವಾಣಿ ಸ್ಟುಡಿಯೋಗೆ ಆಗಮಿಸಿದ ಶ್ರೀ ವೆಂಕಯ್ಯ ನಾಯ್ಡು ಅವರು ನೇರ ಪ್ರಸಾರದ ಮೂಲಕ ವಿಶೇಷ ಭಾಷಣ ಮಾಡಿದರು ಮತ್ತು ನೆಲ್ಲೂರು ಜನರಿಗೆ ಎಫ್‌ಎಂ ಟವರ್ ಅನ್ನು ಸಮರ್ಪಿಸಿದರು. ತಾವು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದಾಗ ಅಡಿಗಲ್ಲು ಹಾಕಿದ ಕೇಂದ್ರ ಇಂದು ಕಾರ್ಯಾರಂಭ ಮಾಡುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. 
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ವೆಂಕಯ್ಯ ನಾಯ್ಡು ಅವರು ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಸ್ವಾತಂತ್ರ್ಯ ಅನಿವಾರ್ಯವಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಜನರಿಗೆ ನಾನಾ ವಿಷಯಗಳ ಬಗ್ಗೆ  ಜಾಗೃತಿ ಮೂಡಿಸುವಲ್ಲಿ ಮತ್ತು ಪ್ರಜಾಪ್ರಭುತ್ವ ಬಲವರ್ಧನೆಯಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಆ ನಿಟ್ಟಿನಲ್ಲಿ ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಪ್ರಸಾರ ಮಾಧ್ಯಮದ ನಿರ್ಣಾಯಕ ಪಾತ್ರವನ್ನು ಅವರು ಒತ್ತಿ ಹೇಳಿದರು. 
ಡಿಜಿಟಲ್ ಯುಗದಲ್ಲಿ ಮಾಧ್ಯಮದ ವ್ಯಾಪಕ ವ್ಯಾಪ್ತಿ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದ ಶ್ರೀ ಎಂ.ವೆಂಕಯ್ಯ ನಾಯ್ಡು ಅವರು ಸಮಾಜದಲ್ಲಿನ ವಾಸ್ತವಗಳನ್ನು ಪ್ರತಿಬಿಂಬಿಸುವಂತೆ ಮಾಧ್ಯಮಗಳಿಗೆ ಸಲಹೆ ನೀಡಿದರು ಮತ್ತು ಪತ್ರಿಕೋದ್ಯಮದ ಮೂಲ ತತ್ವಗಳಿಗೆ ಸದಾ ಬದ್ಧವಾಗಿರಬೇಕು. ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳುವ ಮತ್ತು ಸ್ವಯಂ ನಿಯಂತ್ರಣ ಮಾಡಿಕೊಳ್ಳುವ ಅಗತ್ಯವೂ ಇದೆ. ಪ್ರಾಮಾಣಿಕ ಮತ್ತು ನೈತಿಕ ಪತ್ರಿಕೋದ್ಯಮವನ್ನು ಪಾಲನೆ ಮಾಡುವ ಮಾಧ್ಯಮ ಸಂಸ್ಥೆಗಳನ್ನು ಜನರು ಪ್ರೋತ್ಸಾಹಿಸಬೇಕು ಎಂದು ಅವರು ಸಲಹೆ ನೀಡಿದರು. 
ವಾಹಿನಿಗಳಲ್ಲಿ ನಡೆಯುವ ಚರ್ಚೆ, ಸಂವಾದಗಳಲ್ಲಿ ಗುಣಮಟ್ಟ ಕುಸಿಯುತ್ತಿರುವುದನ್ನು ಉಲ್ಲೇಖಿಸಿದ ಅವರು ಪ್ರಮುಖ ರಾಷ್ಟ್ರೀಯ ವಿಷಯಗಳ ಬಗ್ಗೆ ಹೆಚ್ಚು ಅರ್ಥಪೂರ್ಣ ಮತ್ತು ಗೌರವಯುತ ಚರ್ಚೆಗಳು ನಡೆಯಬೇಕು ಎಂದು ಕರೆ ನೀಡಿದರು. ಭಾರತ ಶೇ.60ರಷ್ಟು ಗ್ರಾಮೀಣ ಜನಸಂಖ್ಯೆಯನ್ನು ಹೊಂದಿದೆ ಎಂದು ನೆನಪಿಸಿದ ಅವರು, ಗ್ರಾಮೀಣ ಭಾರತದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ಕರೆ ನೀಡಿದರು. 
ಸಾಮಾಜಿಕ ಮಾಧ್ಯಮಗಳು ಹೆಚ್ಚುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ನಕಲಿ ಅಥವಾ ಸುಳ್ಳು ಸುದ್ದಿಗಳ ವಿದ್ಯಮಾನದ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಜನರು ಪರಿಶೀಲಿಸದ ಮತ್ತು ಆಧಾರರಹಿತ ಮಾಹಿತಿಯನ್ನು ಇತರರಿಗೆ ರವಾನಿಸಬಾರದು ಎಂದು ಹೇಳಿದರು. 
ರೇಡಿಯೊದ ಜನಪ್ರಿಯತೆ ಮತ್ತು ವಿವಿಧ ವಿಷಯಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವಲ್ಲಿ ಅದರ ಪ್ರಾಮುಖ್ಯತೆಯನ್ನು ಉಪರಾಷ್ಟ್ರಪತಿಗಳು ಉಲ್ಲೇಸಿದರು. ರೇಡಿಯೋ ಅನೇಕ ಕಲಾವಿದರಿಗೆ ಮಾನ್ಯತೆ ತಂದುಕೊಡುವಲ್ಲಿ ಹಾಗೂ ವಿಸ್ತರಣಾ ಸೇವೆಯನ್ನು ರೈತರಿಗೆ ಹತ್ತಿರವಾಗಿಸುವಲ್ಲಿ ಸಹಕಾರಿಯಾಗಿದೆ ಎಂದು ಅವರು ಸ್ಮರಿಸಿದರು. 
ಆಂಧ್ರಪ್ರದೇಶದ ಸರ್ಕಾರದ ಕೃಷಿ ಮತ್ತು ಸಹಕಾರ, ಮಾರುಕಟ್ಟೆ, ಆಹಾರ ಸಂಸ್ಕರಣೆ ಸಚಿವ ಶ್ರೀ ಕಾಕನಿ ಗೋವರ್ಧನ್ ರೆಡ್ಡಿ, ಆಂಧ್ರಪ್ರದೇಶದ ಶಾಸಕ ಶ್ರೀ ಕೋಟಂರೆಡ್ಡಿ ಶ್ರೀಧರ್ ರೆಡ್ಡಿ, ಪ್ರಸಾರ ಭಾರತಿ ಸಿಇಒ ಶ್ರೀ ಶಶಿ ಶೇಖರ್ ವೆಂಪತಿ, ಆಕಾಶವಾಣಿಯ ಮಹಾನಿರ್ದೇಶಕರಾದ ಶ್ರೀ ಎನ್. ವೇಣುಧರ ರೆಡ್ಡಿ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  


***



(Release ID: 1820491) Visitor Counter : 201