ಪ್ರಧಾನ ಮಂತ್ರಿಯವರ ಕಛೇರಿ

ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿದರು


"ತಲೆಮಾರುಗಳಿಗೆ ಪ್ರೀತಿ ಮತ್ತು ಭಾವನೆಗಳನ್ನು ಉಡುಗೊರೆಯಾಗಿ ನೀಡಿದ ಲತಾ ದೀದಿಯಿಂದ ಸಹೋದರಿಯ ಪ್ರೀತಿಯನ್ನು ಪಡೆಯುವುದಕ್ಕಿಂತಲೂ ಹೆಚ್ಚಿನ ಗೌರವ ಏನಿದೆ"

“ನಾನು ಈ ಪ್ರಶಸ್ತಿಯನ್ನು ಎಲ್ಲಾ ದೇಶವಾಸಿಗಳಿಗೆ ಅರ್ಪಿಸುತ್ತೇನೆ. ಲತಾ ದೀದಿ ಜನರಿಗೆ ಸೇರಿದ್ದಂತೆ, ಅವರ ಹೆಸರಿನಲ್ಲಿ ನನಗೆ ನೀಡಿದ ಈ ಪ್ರಶಸ್ತಿಯೂ ಕೂಡಾ ಜನರಿಗೆ ಸೇರಿದೆ"

"ಸ್ವಾತಂತ್ರ್ಯ ಪೂರ್ವದಲ್ಲಿ ಅವರು ಭಾರತಕ್ಕೆ ಧ್ವನಿ ನೀಡಿದರು ಮತ್ತು ಕಳೆದ 75 ವರ್ಷಗಳ ಕಾಲ ದೇಶದ ಪ್ರಯಾಣವೂ ಕೂಡಾ ಅವರ ಧ್ವನಿಯೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡಿದೆ"

"ಲತಾ ಜೀ ಸಂಗೀತವನ್ನು ಆರಾಧಿಸುತ್ತಿದ್ದರು. ಆದರೆ, ದೇಶಭಕ್ತಿ ಮತ್ತು ರಾಷ್ಟ್ರೀಯ ಸೇವೆಯು ಅವರ ಹಾಡುಗಳ ಮೂಲಕ ಸ್ಫೂರ್ತಿ ಪಡೆದಿವೆ"

"ಲತಾ ಜೀ ಅವರು ನಿಜವಾಗಿಯೂ 'ಏಕ್ ಭಾರತ್ ಶ್ರೇಷ್ಠ್ ಭಾರತ್' ನ ಸುಮಧುರ ಅಭಿವ್ಯಕ್ತಿಯಂತಿದ್ದರು"

“ಲತಾ ಜಿ ಅವರ ಹಾಡುಗಳು ಇಡೀ ದೇಶವನ್ನು ಒಂದುಗೂಡಿಸುವಲ್ಲಿ ಕೆಲಸ ಮಾಡಿತು. ಜಾಗತಿಕವಾಗಿ, ಅವರು ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು”

Posted On: 24 APR 2022 7:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಬೈನಲ್ಲಿ ನಡೆದ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡರು.  ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರಿಗೆ ಮೊದಲನೇ "ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ" ಪ್ರದಾನ ಮಾಡಲಾಯಿತು.  ಭಾರತ ರತ್ನ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ಸ್ಥಾಪಿಸಲಾದ ಈ ಪ್ರಶಸ್ತಿಯನ್ನು ರಾಷ್ಟ್ರ ನಿರ್ಮಾಣಕ್ಕೆ ಅನುಕರಣೀಯ ಕೊಡುಗೆಗಾಗಿ ಪ್ರತಿ ವರ್ಷ ಒಬ್ಬ ವ್ಯಕ್ತಿಗೆ ಪ್ರತ್ಯೇಕವಾಗಿ ನೀಡಲಾಗುವುದು.  ಈ ಸಂದರ್ಭದಲ್ಲಿ ಇತರ ಗಣ್ಯರ ಜೊತೆಗೆ ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ಭಗತ್ ಸಿಂಗ್ ಕೋಶ್ಯಾರಿ ಮತ್ತು ಮಂಗೇಶ್ಕರ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

"ಸಂಗೀತದ ಬಗ್ಗೆ ನನಗೆ ಹೆಚ್ಚು ಆಳವಾದ ಜ್ಞಾನವಿಲ್ಲದಿದ್ದರೂ ಕೂಡಾ ಸಾಂಸ್ಕೃತಿಕ ಮೆಚ್ಚುಗೆಯಿಂದ ಸಂಗೀತವು ಒಂದು ‘ಸಾಧನೆ’ ಮತ್ತು 'ಭಾವನೆ' ಗಳು ಸಮ್ಮಿಶ್ರ ಎಂದು ಭಾವಿಸಲಾಗಿದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ಅವ್ಯಕ್ತವನ್ನು ವ್ಯಕ್ತಪಡಿಸುವುದೇ 'ಪದ'ವಾಗಿದೆ.  ವ್ಯಕ್ತಪಡಿಸಿದ್ದಕ್ಕೆ ಶಕ್ತಿ ಮತ್ತು ಪ್ರಜ್ಞೆಯನ್ನು ತುಂಬುವುದು ‘ನಾದ’ವಾಗಿದೆ  ಮತ್ತು ಪ್ರಜ್ಞೆಯನ್ನು ಮತ್ತು ಭಾವನೆಗಳನ್ನು ತುಂಬಿಸಿ ಅದನ್ನು ಸೃಷ್ಟಿ ಮತ್ತು ಸೂಕ್ಷ್ಮತೆಯ ಪರಮಾವಧಿಗೆ ಕೊಂಡೊಯ್ಯುವುದೇ ‘ಸಂಗೀತ’ವಾಗಿದೆ.  ಸಂಗೀತವು ನಿಮ್ಮಲ್ಲಿ ಶೌರ್ಯ, ತಾಯಿಯ ವಾತ್ಸಲ್ಯವನ್ನು ತುಂಬುತ್ತದೆ. ಇದು ದೇಶಭಕ್ತಿ ಮತ್ತು ಕರ್ತವ್ಯ ಪ್ರಜ್ಞೆಗಳನ್ನು ಉತ್ತುಂಗಕ್ಕೆ ಕೊಂಡೊಯ್ಯಬಹುದು. ಲತಾ ದೀದಿಯ ರೂಪದಲ್ಲಿ ಸಂಗೀತದ ಈ ಸಾಮರ್ಥ್ಯ ಮತ್ತು ಶಕ್ತಿಯನ್ನು ನೋಡಿದ ನಾವು ಅದೃಷ್ಟವಂತರು" ಎಂದು ಪ್ರಧಾನಮಂತ್ರಿ ಅವರು ಹೇಳಿದರು.  ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಪ್ರಧಾನಮಂತ್ರಿ ಶ್ರೀ ಮೋದಿ ಅವರು "ನನಗೆ, ಲತಾ ದೀದಿ ಅವರು 'ಸ್ವರ ಸಾಮ್ರಾಜ್ಞಿ (ಸುರ್ ಸಾಮ್ರಾಜ್ಞಿ)' ಮತ್ತು ನನ್ನ "ಅಕ್ಕ(ಸಹೋದರಿ)".  ತಲೆಮಾರುಗಳಿಗೆ ಪ್ರೀತಿ ಮತ್ತು ಭಾವನೆಯ ಉಡುಗೊರೆಯನ್ನು ನೀಡಿದ ಲತಾ ದೀದಿ ಅವರಿಂದ ಸಹೋದರಿಯ ಪ್ರೀತಿಯನ್ನು ಪಡೆದಿರುವುದಕ್ಕಿಂತ ಹೆಚ್ಚಿನ ಭಾಗ್ಯ ಇನ್ನೇನಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. 

 ಸಾಮಾನ್ಯವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಲು ಪ್ರಧಾನಮಂತ್ರಿ ಅವರು ಎಂದೂ ಆಸಕ್ತಿ ತೋರುವುದಿಲ್ಲ. ಆದರೆ, "ಮಂಗೇಶ್ಕರ್ ಕುಟುಂಬವು ಲತಾ ದೀದಿಯಂತಹ ಹಿರಿಯ ಸಹೋದರಿಯ ಹೆಸರನ್ನು ಸೂಚಿಸಿ, ದೀದಿ ಹೆಸರಲ್ಲಿ ಪ್ರಶಸ್ತಿಯನ್ನು ನೀಡಲು ಕರೆದಾಗ ಅದು ಅವರ ವಾತ್ಸಲ್ಯ ಮತ್ತು ಪ್ರೀತಿಯ ಸಂಕೇತವಾಗುತ್ತದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು.  “ಇದನ್ನು ಇಲ್ಲ ಎಂದು ಹೇಳುವುದು ನನಗೆ ಸರಳವಾಗಿ ಸಾಧ್ಯವಿಲ್ಲ.  ನಾನು ಈ ಪ್ರಶಸ್ತಿಯನ್ನು ಎಲ್ಲಾ ದೇಶವಾಸಿಗಳಿಗೆ ಅರ್ಪಿಸುತ್ತೇನೆ.  ಲತಾ ದೀದಿ ಜನರಿಗೆ ಸೇರಿದ್ದಂತೆ, ಅವರ ಹೆಸರಿನಲ್ಲಿ ನನಗೆ ನೀಡಿದ ಈ ಪ್ರಶಸ್ತಿಯೂ ಕೂಡಾ ಜನರಿಗೆ ಸೇರಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಪ್ರಧಾನಮಂತ್ರಿಯವರು ಅನೇಕ ವೈಯಕ್ತಿಕ ಉದಾಹರಣೆಗಳನ್ನು, ಸಾಂದರ್ಭಿಕ ಉಪಾಖ್ಯಾನಗಳನ್ನು ಉಲ್ಲೇಖಿಸಿ  ವಿವರಿಸಿದರು ಮತ್ತು ಸಾಂಸ್ಕೃತಿಕ ಜಗತ್ತಿಗೆ ಲತಾ ದೀದಿಯವರ ನೀಡಿದ ಅಪಾರ ಕೊಡುಗೆಯನ್ನು ಸವಿವರವಾಗಿ ವಿವರಿಸಿದರು. “ನಮ್ಮ ದೇಶವು ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ಲತಾ ಜಿ ಅವರ ಭೌತಿಕ ಪ್ರಯಾಣವು ಪೂರ್ಣಗೊಂಡಿತು.  ಅವರು ಸ್ವಾತಂತ್ರ್ಯದ ಮೊದಲು ಭಾರತಕ್ಕೆ ಧ್ವನಿ ನೀಡಿದ್ದರು ಮತ್ತು ಈ 75 ವರ್ಷಗಳ ದೇಶದ ಪ್ರಯಾಣವೂ ಅವರ ಧ್ವನಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.

 ಮಂಗೇಶ್ಕರ್ ಕುಟುಂಬದಲ್ಲಿನ ದೇಶಭಕ್ತಿಯ ಎಳೆಯ ಕುರಿತು ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.  "ಗೀತೆಯ ಜೊತೆಗೆ ಲತಾ ದೀದಿ ಅವರಲ್ಲಿದ್ದ ದೇಶಭಕ್ತಿಯ ಪ್ರಜ್ಞೆ ಅಪ್ಯಾಯಮಾನವಾಗಿದೆ, ಅವರ ತಂದೆಯವರೇ ಅದಕ್ಕೆ ಮೂಲ ಕಾರಣ" ಎಂದು ಪ್ರಧಾನಮಂತ್ರಿ ಅವರು ಹೇಳಿದರು.  ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಶಿಮ್ಲಾದಲ್ಲಿ ನಡೆದ ಬ್ರಿಟಿಷ್ ವೈಸ್ ರಾಯ್ ಅವರ ಕಾರ್ಯಕ್ರಮದಲ್ಲಿ ವೀರ್ ಸಾವರ್ಕರ್ ಬರೆದ ಹಾಡನ್ನು ದೀನಾನಾಥ್ ಜೀ ಅವರು ಹಾಡಿದ ಘಟನೆಯನ್ನು ಪ್ರಧಾನಮಂತ್ರಿ ಶ್ರೀ ಮೋದಿ ಅವರು ತಮ್ಮ ಭಾಷಣದಲ್ಲಿ ಸ್ಮರಿಸಿ ವಿವರಿಸಿದರು. "ಬ್ರಿಟಿಷರ ಆಳ್ವಿಕೆಗೆ ಸವಾಲೆಸೆದು ವೀರ ಸಾವರ್ಕರ್ ಅವರು ಈ ಹಾಡನ್ನು ಬರೆದಿದ್ದಾರೆ.  ಈ ದೇಶಭಕ್ತಿಯ ಭಾವನೆಯನ್ನು ಅವರ ಕುಟುಂಬಕ್ಕೆ ದೀನನಾಥ್ ಜೀ ಅವರು ಉತ್ತರಾಧಿಕಾರವಾಗಿ ನೀಡಿದ್ದಾರೆ "  "ಲತಾ ಜೀ ಸಂಗೀತವನ್ನು ತನ್ನ ಆರಾಧನೆಯನ್ನಾಗಿ ಮಾಡಿಕೊಂಡರು ಆದರೆ ದೇಶಭಕ್ತಿ ಮತ್ತು ದೇಶಸೇವೆಗಳು ಅವರ ಹಾಡುಗಳ ಮೂಲಕ ಸ್ಫೂರ್ತಿಯನ್ನು ಪಡೆದವು." ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಲತಾ ದೀದಿಯವರ ವೈಭವೋಪೇತ, ಸುಪ್ರಸಿದ್ಧ ಹಾಗೂ ಜನಪ್ರಿಯತೆಯ ವೃತ್ತಿಜೀವನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, “ಲತಾ ಜೀ ಅವರು ನಿಜವಾಗಿಯೂ  ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ನ ಸುಮಧುರ ಅಭಿವ್ಯಕ್ತಿಯಂತಿದ್ದರು.  ಅವರು ಸುಮಾರು 30 ಕ್ಕೂ ಹೆಚ್ಚು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ.  ಅದು ಹಿಂದಿ, ಮರಾಠಿ, ಸಂಸ್ಕೃತ ಅಥವಾ ಇತರ ಯಾವುದೇ ಭಾರತೀಯ ಭಾಷೆಯಾಗಿರಲಿ, ಅವರ ಸುಸ್ವರ ಎಲ್ಲಾ ಮನೆಯಲ್ಲಿಯೂ, ಎಲ್ಲರಿಗೂ ಅನುಗುಣವಾಗಿ ಸಮಾನವಾಗಿ ಇತ್ತು."   “ಸಂಸ್ಕೃತಿಯಿಂದ ನಂಬಿಕೆಗೆ, ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ, ಲತಾ ಜೀ ಅವರ ಟಿಪ್ಪಣಿಗಳು ಇಡೀ ದೇಶವನ್ನು ಒಂದುಗೂಡಿಸಲು ಕೆಲಸ ಮಾಡಿದೆ.  ಜಾಗತಿಕವಾಗಿ, ಅವರು ಸದಾ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು.  ಪ್ರತಿ ರಾಜ್ಯದ, ಪ್ರತಿ ಪ್ರದೇಶದ ಜನರ ಮನಸ್ಸಿನಲ್ಲಿ ಅವರು ನೆಲೆಯೂರಿದ್ದಾರೆ.  ಭಾರತೀಯತೆಯೊಂದಿಗೆ ಸಂಗೀತ ಹೇಗೆ ಅಮರವಾಗಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ" ಎಂದು ಪ್ರಧಾನಮಂತ್ರಿ ಅವರು ವಿವರಿಸಿ ಹೇಳಿದರು. ಕುಟುಂಬದ ವಿವಿಧ ಪರೋಪಕಾರಿ ಕಾರ್ಯಗಳನ್ನು ಸಹ ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. 

"ಭಾರತಕ್ಕೆ ಅಭಿವೃದ್ಧಿ ಎಂದರೆ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ ಮತ್ತು ಸಬ್ಕಾ ಪ್ರಯಾಸ್" ಎಂದು ಪ್ರಧಾನಮಂತ್ರಿ ಅವರು ಹೇಳಿದರು.  "ಈ ಯೋಜನೆಯು ‘ವಸುಧೈವ ಕುಟುಂಬಕಂ’ ವಿವರಿಸುವಂತೆ ಎಲ್ಲರ ಕಲ್ಯಾಣದ ತತ್ವವನ್ನು ಮೂಲದಲ್ಲಿ ಒಳಗೊಂಡಿದೆ. ಅಭಿವೃದ್ಧಿಯ ಅಂತಹ ಕಲ್ಪನೆಯನ್ನು ಕೇವಲ ಭೌತಿಕ ಸಾಮರ್ಥ್ಯಗಳಿಂದ ಸಾಧಿಸಲಾಗುವುದಿಲ್ಲ. ಇದಕ್ಕಾಗಿ ಆಧ್ಯಾತ್ಮಿಕ ಪ್ರಜ್ಞೆಯು ವಿಮರ್ಶಾತ್ಮಕವಾಗಿ ಮುಖ್ಯವಾಗುತ್ತದೆ.  ಅದಕ್ಕಾಗಿಯೇ ಯೋಗ, ಆಯುರ್ವೇದ ಮತ್ತು ಪರಿಸರದಂತಹ ಕ್ಷೇತ್ರಗಳಲ್ಲಿ ಭಾರತವು ನಾಯಕತ್ವವನ್ನು ನೀಡುತ್ತಿದೆ." ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ಭಾರತದ ಈ ಕೊಡುಗೆಗಳಲ್ಲಿ ನಮ್ಮ ಭಾರತೀಯ ಸಂಗೀತವೂ ಒಂದು ಪ್ರಮುಖ ಭಾಗವಾಗಿದೆ ಎಂದು ನಾನು ನಂಬುತ್ತೇನೆ.  ನಾವು ಈ ಪರಂಪರೆಯನ್ನು ಅದೇ ಮೌಲ್ಯಗಳೊಂದಿಗೆ ಜೀವಂತವಾಗಿರಿಸೋಣ ಮತ್ತು ಅದನ್ನು ಮುಂದಕ್ಕೆ ಕೊಂಡೊಯ್ಯೋಣ ಮತ್ತು ಅದನ್ನು ವಿಶ್ವ ಶಾಂತಿಯ ಮಾಧ್ಯಮವನ್ನಾಗಿ ಮಾಡೋಣ” ಎಂದು ಹೇಳುತ್ತಾ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

****



(Release ID: 1819829) Visitor Counter : 155