ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಶ್ರೀ ಅನುರಾಗ್ ಠಾಕೂರ್ ಅವರು ಬೆಂಗಳೂರಿನಲ್ಲಿ ʻಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ -2021ʼಕ್ಕೆ ಮುಂಚಿತವಾಗಿ ವಿವಿಧ ವಿಶ್ವವಿದ್ಯಾಲಯಗಳ ಸ್ಪರ್ಧಿಗಳೊಂದಿಗೆ ಸಂವಾದ ನಡೆಸಿದರು
ʻಕೆಐಯುಜಿ-2021ʼ ಕ್ರೀಡಾಕೂಟದಲ್ಲಿ ಸ್ಪರ್ಧಿಗಳಿಗೆ ಸ್ಮರಣೀಯ ಅನುಭವವನ್ನು ಖಾತರಿಪಡಿಸಲು ಮಾಡಲಾದ ವ್ಯವಸ್ಥೆಗಳನ್ನು ಸಚಿವರು ಪರಿಶೀಲಿಸಿದರು
Posted On:
24 APR 2022 4:41PM by PIB Bengaluru
ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಹೊಸದಾಗಿ ಸೇರಿಸಲಾದ ಮಲ್ಲಕಂಭ ಮತ್ತು ಯೋಗಾಸನ ಸೇರಿದಂತೆ 13 ವಿಭಾಗಗಳ ಕ್ರೀಡಾಕೂಟ ಆಯೋಜಿಸಿರುವ ಸ್ಥಳ - ಜೈನ್ ವಿಶ್ವವಿದ್ಯಾಲಯದ ʻಗ್ಲೋಬಲ್ ಕ್ಯಾಂಪಸ್ʼಗೆ ದಿಢೀರ್ ಭೇಟಿ ನೀಡಿದರು.
ಸ್ವತಃ ಕ್ರೀಡಾಪಟುವಾಗಿರುವ ಯುವ ಸಚಿವರು ವಿವಿಧ ಕ್ರೀಡಾ ಮೈದಾನಗಳಿಗೆ ನಡಿಗೆಯಲ್ಲೇ ಸಾಗಿ, ʻಕೆಐಯುಜಿʼನಲ್ಲಿ ಸ್ಪರ್ಧಿಗಳ ಸ್ಮರಣೀಯ ಅನುಭವ ಖಾತರಿಪಡಿಸಲು ಮಾಡಲಾದ ವಿವಿಧ ವ್ಯವಸ್ಥೆಗಳನ್ನು ಪರೀಶೀಲಿಸಿದರು. ಕ್ರಿಕೆಟ್ ಆಟಗಾರನಾಗಿ ತಮ್ಮ ಆಟದ ದಿನಗಳನ್ನು ನೆನಪಿಸಿಕೊಂಡ ಸಚಿವರು, "ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಅತ್ಯುತ್ತಮ ಸೌಲಭ್ಯಗಳೊಂದಿಗೆ ಜೈನ್ ವಿಶ್ವವಿದ್ಯಾಲಯವು ಕರ್ನಾಟಕ ಸರಕಾರದ ಜತೆ ಸಹಯೋಗದೊಂದಿಗೆ ಈ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಅದ್ಭುತ ಕೆಲಸವನ್ನು ಮಾಡುತ್ತಿದೆ. ಇಂದು ಇಲ್ಲಿ ಈ ಕ್ರೀಡಾಪಟುಗಳನ್ನು ನೋಡಿದಾಗ, ನಾನು ಕ್ರಿಕೆಟ್ ಆಡಿದ ನನ್ನ ವಿಶ್ವವಿದ್ಯಾಲಯದ ದಿನಗಳು ನೆನಪಾಗುತ್ತಿವೆ. ಬಿಹಾರದ ದರ್ಭಾಂಗ ಮತ್ತು ಸಮಸ್ತಿಪುರದಂತಹ ಸ್ಥಳಗಳಲ್ಲಿ ನಡೆದ ಕೆಲವು ಪಂದ್ಯಾವಳಿಗಳು, ಸೌಲಭ್ಯಗಳು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ ಇಂದು ಮೂಲಸೌಕರ್ಯವು ತುಂಬಾ ಸುಧಾರಿಸಿದೆ ಮತ್ತು ಕ್ರೀಡಾಪಟುಗಳಿಗೆ ಇಲ್ಲಿ ಒದಗಿಸಲಾಗುತ್ತಿರುವ ಸೌಲಭ್ಯಗಳು ಹೇಗಿವೆ ಎಂಬುದನ್ನು ನೀವೇ ನೋಡಬಹುದು. ʻಕೆಐಯುಜಿʼ ಮೂಲಕ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಸರಿಸಮನಾದ ವೇದಿಕೆಯನ್ನು ಒದಗಿಸುವುದು ನಮ್ಮ ಉಪಕ್ರಮವಾಗಿದೆ,ʼʼ ಎಂದರು.
ಉದಯೋನ್ಮುಖ ಕ್ರೀಡಾಪಟುಗಳಿಗೆ ನೀವು ಏನು ಹೇಳಲು ಬಯಸುತ್ತೀರಿ ಎಂದು ಕೇಳಿದಾಗ, ಶ್ರೀ ಠಾಕೂರ್ ಅವರು "ಕ್ರೀಡಾಸ್ಫೂರ್ತಿಯಿಂದ ಆಟವಾಡಿ. ಸ್ವಚ್ಛ ಕ್ರೀಡೆಗಳನ್ನು ಪ್ರಚಾರ ಮಾಡುವಂತೆ ಮತ್ತು ಕಾರ್ಯಕ್ಷಮತೆಯ ವರ್ಧನೆ ಔಷಧಗಳನ್ನು ಬಳಸದಂತೆ ನಾನು ಅವರಿಗೆ ಸಲಹೆ ನೀಡುತ್ತೇನೆ. ಅದಕ್ಕಾಗಿಯೇ, ಕ್ರೀಡಾಪಟುಗಳಿಗೆ ಸರಿಯಾದ ಮಾಹಿತಿಯನ್ನು ನೀಡಲು ಹಾಗೂ ವಿಶೇಷವಾಗಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಯುವ ಕ್ರೀಡಾಪಟುಗಳಿಗೆ ಡೋಪಿಂಗ್ ಬಗ್ಗೆ ಹೆಚ್ಚಿನ ಜಾಗೃತಿಯನ್ನು ಮೂಡಿಸಲು ನಾವು ಇಲ್ಲಿ ʻನಾಡಾʼ ಉಪಸ್ಥಿತಿಯನ್ನೂ ಹೊಂದಿದ್ದೇವೆ," ಎಂದು ಹೇಳಿದರು.
ವಿವಿಧ ವಿಶ್ವವಿದ್ಯಾಲಯಗಳ ಸ್ಪರ್ಧಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ಕ್ರೀಡಾಪಟುಗಳ ಕ್ಷೇತ್ರಗಳು ಮತ್ತು ಕ್ರೀಡೆಯಲ್ಲಿ ಅವರ ಮಹತ್ವಾಕಾಂಕ್ಷೆಗಳ ಬಗ್ಗೆ ಮಾಹಿತಿ ಪಡೆದರು.
ಸಚಿವರು ಮಾತನಾಡಿಸಿದ ಕ್ರೀಡಾಪಟುಗಳಲ್ಲಿ ʻಎಸ್ಆರ್‌ಎಂʼ ವಿಶ್ವವಿದ್ಯಾಲಯದ ಪುರುಷರ ವಾಲಿಬಾಲ್ ತಂಡದ ಎಸ್ ಸಂತೋಷ್ ಕೂಡ ಒಬ್ಬರು.
"ನಮ್ಮ ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರೊಂದಿಗಿನ ಭೇಟಿಯು ಒಂದು ವಿನೀತ ಮಧುರವಾದ ಅನುಭವವಾಗಿತ್ತು. ಅವರು ಕಠಿಣ ಪರಿಶ್ರಮವನ್ನು ಮುಂದುವರಿಸುವಂತೆ ಮತ್ತು ನಮ್ಮ ರಾಜ್ಯ ಮತ್ತು ವಿಶ್ವವಿದ್ಯಾಲಯಗಳಿಗಾಗಿ ಆಡುತ್ತಲೇ ಇರುವಂತೆ ನಮ್ಮನ್ನು ಹುರಿದುಂಬಿಸಿದರು. ಸ್ವತಃ ಮಂತ್ರಿಗಳೇ ನಮ್ಮ ಬಳಿಗೆ ಬಂದಾಗ ಮತ್ತು ನಮ್ಮ ಕ್ರೀಡೆಯ ಬಗ್ಗೆ ಕೇಳಿದಾಗ ನಿಜಕ್ಕೂ ಅದು ತುಂಬಾ ಪ್ರೇರಣೆ ನೀಡುತ್ತದೆ. ಅಲ್ಲದೆ ಹಿರಿಯ ಸಚಿವರೊಬ್ಬರು ಕ್ರೀಡಾಪಟುವಿನೊಂದಿಗೆ ಸ್ವತಃ ಆಡುವುದನ್ನು ಅತ್ಯಂತ ಅಪರೂಪ. ಇದು ನಮ್ಮನ್ನು ಇನ್ನೂ ಹೆಚ್ಚು ಭಾವಪರವಶರನ್ನಾಗಿಸಿದೆ,ʼʼ ಎಂದು ಸಂತೋಷ್ ಹೇಳಿದರು.
ಮಹಿಳಾ ವಿಭಾಗದಲ್ಲಿ ʻಎಚ್ಆರ್‌ಎಂʼ (ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯ) ಮತ್ತು ʻಎಡಬ್ಲ್ಯುಯುʼ (ಅಡಾಮಸ್ ವಿಶ್ವವಿದ್ಯಾಲಯ, ಪಶ್ಚಿಮ ಬಂಗಾಳ) ಹಾಗೂ ಪುರುಷರ ವಿಭಾಗದಲ್ಲಿ ಚೆನ್ನೈನ ʻಎಸ್ಆರ್ಎಂʼ ವಿಶ್ವವಿದ್ಯಾಲಯ ಮತ್ತು ʻಎಡಬ್ಲ್ಯುಯುʼ ನಡುವೆ ಬೆಳಗ್ಗೆ ಪಂದ್ಯಗಳು ನಡೆಯುತ್ತಿರುವಾಗ ಸಚಿವರು ವಾಲಿಬಾಲ್ ಕ್ರೀಡಾಂಗಣಕ್ಕೆ ಆಗಮಿಸಿದರು. ಅವರು ಎರಡೂ ತಂಡಗಳೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಮುಂಬರುವ ಪಂದ್ಯಗಳಿಗೆ ಶುಭ ಹಾರೈಸಿದರು. ರೆಫರಿಗಳು ಮತ್ತು ಪ್ರೇಕ್ಷಕರೊಂದಿಗೂ ಅವರು ಸಂವಾದ ನಡೆಸಿದರು. ಇದಲ್ಲದೆ, ಸಚಿವರು ಸ್ವತಃ ಒಂದು ಸುತ್ತಿನ ವಾಲಿಬಾಲ್ ಆಟದಲ್ಲೂ ತೊಡಗಿಸಿಕೊಂಡರು.
***
(Release ID: 1819665)
Visitor Counter : 215