ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ -2021 ಕ್ಕೆ ನಾಳೆ ಚಾಲನೆ ನೀಡಲಿದ್ದಾರೆ.



ಶ್ರೀ ಥಾವರ್ ಚಂದ್ ಗೆಹ್ಲೋಟ್, ಶ್ರೀ ಅಮಿತ್ ಶಾ, ಶ್ರೀ ಬಸವರಾಜ ಬೊಮ್ಮಾಯಿ, ಶ್ರೀಮತಿ ನಿರ್ಮಲಾ ಸೀತಾರಾಮನ್, ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಶ್ರೀ ನಿಸಿತ್ ಪ್ರಮಾಣಿಕ್ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪ್ರಖ್ಯಾತ ಕ್ರೀಡಾಪಟುಗಳ ಸಂಗಮ

200 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ ಸುಮಾರು 3879 ಸ್ಪರ್ಧಿಗಳು ದೇಶೀಯ ಕ್ರೀಡೆಗಳಾದ ಮಲ್ಲಕಂಬ ಮತ್ತು ಯೋಗಾಸನ ಸೇರಿದಂತೆ 20 ವಿವಿಧ ವಿಭಾಗಗಳಲ್ಲಿ ಭಾಗವಹಿಸಲಿದ್ದಾರೆ.

Posted On: 23 APR 2022 3:23PM by PIB Bengaluru

ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಎರಡನೇ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ-2021 ಕ್ಕೆ ಭಾನುವಾರ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಚಾಲನೆ ನೀಡಲಿದ್ದಾರೆ. ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, ಕರ್ನಾಟಕ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ರಾಜ್ಯ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಕ್ಕೆ ಕೀರ್ತಿ ತಂದ ಹಿಂದಿನ ಮತ್ತು ಈಗಿನ ಅಥ್ಲೀಟ್‌ಗಳು ಸಂಗಮವಾಗಲಿದೆ.
ಕರ್ನಾಟಕದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಶ್ರೀ ನಾರಾಯಣ ಗೌಡ, ಗೌರವ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ವಿಧಾನಪರಿಷತ್‌ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ, ಕರ್ನಾಟಕ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

.


ಕರ್ನಾಟಕದ ಶ್ರೀಮಂತ ಸಂಸ್ಕೃತಿಯ ಪರಂಪರೆಯನ್ನು ಪ್ರತಿಬಿಂಬಿಸಲು ವಿನ್ಯಾಸಗೊಳಿಸಲಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಲು ದೇಶದಾದ್ಯಂತದ ಪ್ರತಿನಿಧಿಗಳು ಸೇರಿದಂತೆ 2,500 ಕ್ಕೂ ಹೆಚ್ಚು ಮಂದಿ ಕ್ರೀಡಾಂಗಣದಲ್ಲಿ ಸೇರುತ್ತಾರೆ. ಲೇಸರ್ ಶೋ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ ಮತ್ತು ತಂತ್ರಜ್ಞಾನದಲ್ಲಿ ಪ್ರವರ್ಧಮಾನದಲ್ಲಿರುವ ರಾಜ್ಯದ ಬಗ್ಗೆ ಪ್ರದರ್ಶನ ನೀಡುತ್ತದೆ.

 



ಕರ್ನಾಟಕ ರಾಜ್ಯ ಸರ್ಕಾರ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಬೆಂಬಲದೊಂದಿಗೆ ಜೈನ್ ವಿಶ್ವವಿದ್ಯಾನಿಲಯವು ಆಯೋಜಿಸಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ- 2021 ಭಾರತದ ಅತಿದೊಡ್ಡ ಕ್ರೀಡಾಕೂಟವಾಗಿದೆ ಮತ್ತು ಭುವನೇಶ್ವರದಲ್ಲಿ ನಡೆದ ಮೊದಲ ಕ್ರೀಡಾಕೂಟಕ್ಕೆ ತೆರೆಬಿದ್ದ ಕೂಡಲೇ ಕಾಣಿಸಿಕೊಂಡ ಸಾಂಕ್ರಾಮಿಕ ರೋಗದ ನಂತರ ನಡೆಯುತ್ತಿರುವ ಮೊದಲ ಸಾಮೂಹಿಕ ಕ್ರೀಡಾಕೂಟವಾಗಿದೆ.

 



ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ- 2021 ರ ಮೂಲಕ, ಕರ್ನಾಟಕ ಸರ್ಕಾರವು ಪ್ರಸಕ್ತ ಸಮಸ್ಯೆಯಾದ ಪರಿಸರ ಸುಸ್ಥಿರತೆಯ ಬಗ್ಗೆ ಗಮನಹರಿಸುತ್ತಿದೆ. ಕ್ರೀಡಾಕೂಟದಲ್ಲಿ ಮೈದಾನದ ಹೊರಗೆ ಬಳಸಿದ ಎಲ್ಲ ವಸ್ತುಗಳನ್ನೂ ಮರುಬಳಕೆ ಮಾಡಬಹುದಾಗಿದೆ. ಕ್ರೀಡಾಪಟುಗಳ ಸಾರಿಗೆಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಾಗುವುದು ಮತ್ತು ಎಲ್ಲಾ ತ್ಯಾಜ್ಯವನ್ನು ಪ್ರತಿ ಸ್ಥಳದಲ್ಲೂ ಮೂಲದಲ್ಲಿಯೇ ಹಸಿ ಮತ್ತು ಒಣ ಎಂದು ಪ್ರತ್ಯೇಕಿಸಲಾಗುತ್ತದೆ. ಕೆಐಯುಜಿ 2021 ಪರಿಸರ ಸ್ನೇಹಿ ಕ್ರೀಡಾಕೂಟ (ಗ್ರೀನ್ ಗೇಮ್ಸ್) ಆಗಿರುತ್ತದೆ.
200 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ ಸುಮಾರು 3879 ಸ್ಪರ್ಧಿಗಳು ದೇಶೀಯ ಕ್ರೀಡೆಗಳಾದ ಮಲ್ಲಕಂಬ ಮತ್ತು ಯೋಗಾಸನ ಸೇರಿದಂತೆ 20 ವಿವಿಧ ವಿಭಾಗಗಳಲ್ಲಿ ಭಾಗವಹಿಸಲಿದ್ದಾರೆ. ಕಂಠೀರವ ಕ್ರೀಡಾಂಗಣ ಸಂಕೀರ್ಣವು ಅಥ್ಲೆಟಿಕ್ಸ್ ಮತ್ತು ಬಾಸ್ಕೆಟ್‌ಬಾಲ್‌ಗೆ ಆತಿಥ್ಯ ವಹಿಸಲಿದ್ದು, ಭಾರತೀಯ ಕ್ರೀಡಾ ಪ್ರಾಧಿಕಾರ ಕ್ಯಾಂಪಸ್ ನಲ್ಲಿ ಶೂಟಿಂಗ್ ಮತ್ತು ಹಾಕಿ ಸ್ಪರ್ಧೆಗಳು ಜನರಲ್‌ ಕಾರಿಯಪ್ಪ ಕ್ರೀಡಾಂಗಣದಲ್ಲಿ ನಡೆಯಲಿವೆ. ಉಳಿದೆಲ್ಲ ಕಾರ್ಯಕ್ರಮಗಳು ಜೈನ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಲಿವೆ.
ಕೆಐಯುಜಿ 2021 ರಲ್ಲಿ ಭಾಗವಹಿಸುವ 8000 ಕ್ಕೂ ಹೆಚ್ಚು ಸ್ಪರ್ಧಿಗಳು, ತರಬೇತುದಾರರು ಮತ್ತು ಅಧಿಕಾರಿಗಳು ಸ್ಪರ್ಧೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ ಮೊಬೈಲ್ ಅಪ್ಲಿಕೇಶನ್‌ಗೆ ಪ್ರವೇಶವನ್ನು ಹೊಂದಿದ್ದಾರೆ. ಈ ಒನ್‌ ಸ್ಟಾಪ್‌ ಅಪ್ಲಿಕೇಶನ್ ವಸತಿ, ಆಹಾರ, ಸಾರಿಗೆ ಸೇವೆ, ತುರ್ತು ಸಂಪರ್ಕಗಳು, ವಿವಿಧ ಸ್ಥಳಗಳನ್ನು ತಲುಪಲು ನಕ್ಷೆಗಳು ಮತ್ತು ಇತರ ವಿವರಗಳ ಜೊತೆಗೆ ಆಟಗಳ ಕುರಿತು ಪ್ರಮುಖ ಅಧಿಸೂಚನೆಗಳ ಬಗ್ಗೆ ಮಾಹಿತಿಯನ್ನು ಹೊಂದಿರುತ್ತದೆ.
ಉದ್ಘಾಟನಾ ಸಮಾರಂಭದ ಕುರಿತು ಮಾತನಾಡಿದ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಶ್ರೀ ಕೆ.ಸಿ.ನಾರಾಯಣಗೌಡ “ಭಾನುವಾರದ ಉದ್ಘಾಟನಾ ಸಮಾರಂಭಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಇಂದು ಬೆಳಗ್ಗೆ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರು ಬೆಂಗಳೂರಿಗೆ ಆಗಮಿಸಿದ್ದಾರೆ” ಎಂದು ಹೇಳಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯದ ಎಲ್ಲಾ ಸಚಿವರಲ್ಲದೆ ಕರ್ನಾಟಕ ಮತ್ತು ಭಾರತಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ತಂದುಕೊಟ್ಟಿರುವ ಪ್ರಕಾಶ್ ಪಡುಕೋಣೆ, ಪಂಕಜ್ ಅಡ್ವಾಣಿ, ಅಂಜು ಬಾಬಿ ಜಾರ್ಜ್, ಅಶ್ವಿನಿ ನಾಚಪ್ಪ, ರೀತ್ ಅಬ್ರಹಾಂ ಸೇರಿದಂತೆ ಹಲವಾರು ಪ್ರಮುಖ ಕ್ರೀಡಾಪಟುಗಳು ಸಮಾರಂಭದಲ್ಲಿ ಭಾಗವಹಿಸುತ್ತಾರೆ ಎಂದು ಅವರು ಹೇಳಿದರು.
ಕರ್ನಾಟಕ ಸರ್ಕಾರವು ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ 2021 ರಲ್ಲಿ ಭಾಗವಹಿಸುವವರಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ, ಕ್ರೀಡಾಪಟುಗಳು ತಮ್ಮ ವಸತಿಯಿಂದ ಸ್ಪರ್ದಾ ಸ್ಥಳಗಳಿಗೆ ಪ್ರಯಾಣಿಸುವಾಗ ಬೆಂಗಳೂರು ಮೆಟ್ರೋದಲ್ಲಿ ತಮ್ಮ ಕ್ರೀಡಾ ಸಾಮಗ್ರಿಗಳನ್ನು ಸಾಗಿಸಲು ಅನುವು ಮಾಡಿಕೊಟ್ಟಿದೆ.
ನಗರದ ಪ್ರಮುಖ ಸ್ಥಳಗಳಲ್ಲಿ ಹೋರ್ಡಿಂಗ್‌ಗಳ ಮೂಲಕ ಇಡೀ ಬೆಂಗಳೂರು ನಗರವನ್ನು ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ 2021 ರ ಭಾಗವಾಗಿಸಲು ರಾಜ್ಯ ಸರ್ಕಾರವು ಅಪಾರ ಪ್ರಯತ್ನಗಳನ್ನು ಮಾಡಿದೆ. ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ 2021 ರಲ್ಲಿ ಭಾಗವಹಿಸುವವರು ರೈಲು ಮತ್ತು ಬಸ್ ನಿಲ್ದಾಣಗಳಿಂದ ಹೊರಬಂದ ತಕ್ಷಣ ಜಾಹೀರಾತು ಬೋರ್ಡ್‌ಗಳು ಅವರನ್ನು ಸ್ವಾಗತಿಸಲು ಸಜ್ಜಾಗಿದ್ದು ಅವರೆಲ್ಲರೂ ಕೆಯುಐಜಿ ಪರಿಸರವನ್ನು ಪ್ರವೇಶಿಸುತ್ತಾರೆ.

***

 


(Release ID: 1819339) Visitor Counter : 242