ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ವಿಜ್ಞಾನ ಭವನದಲ್ಲಿ `15ನೇ ನಾಗರಿಕ ಸೇವಾ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾಗರಿಕ ಕೇಂದ್ರಿತ ಭಾರತ @2047ರ ಆಡಳಿತ ಮಾದರಿಯನ್ನು ನಿರ್ಧರಿಸುತ್ತದೆ ಎಂದು ಹೇಳಿದರು
ಹೊಸ ಆಡಳಿತ ಮಾದರಿಯಲ್ಲಿ ನಾಗರಿಕ ಸೇವಕರಿಗೆ ನಾಗರಿಕ ಸ್ನೇಹಿ ವಿಧಾನವೊಂದೇ ಏಕೈಕ ಕಾರ್ಯಸಾಧ್ಯವಾದ ಆಯ್ಕೆಯಾಗಿದೆ ಎಂದು ಸಚಿವರು ಹೇಳಿದರು
ಡಾ. ಜಿತೇಂದ್ರ ಸಿಂಗ್ ಅವರು 2019, 2020 ಮತ್ತು 2021ರಲ್ಲಿ ಪ್ರಶಸ್ತಿ ಪಡೆದ ʻಆದ್ಯತೆಯ ಕಾರ್ಯಕ್ರಮಗಳುʼ ಮತ್ತು ʻಆವಿಷ್ಕಾರʼ ಉಪಕ್ರಮಗಳ ಕುರಿತಾದ ಪ್ರದರ್ಶನವನ್ನು ಉದ್ಘಾಟಿಸಿದರು ಮತ್ತು 'ವಿಷನ್ ಇಂಡಿಯಾ @ 2047-ಆಡಳಿತ' ಎಂಬ ವಿಷಯ ಕುರಿತಾದ ಸರ್ವಸದಸ್ಯರ ಅಧಿವೇಶನದ ಅಧ್ಯಕ್ಷತೆ ವಹಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 21ರಂದು ನಾಗರಿಕ ಸೇವೆಗಳ ದಿನದಂದು ʻಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟತೆಗಾಗಿ 2021ನೇ ಸಾಲಿನ ಪ್ರಶಸ್ತಿʼಗಳನ್ನು ಪ್ರದಾನ ಮಾಡಲಿದ್ದಾರೆ
Posted On:
20 APR 2022 4:37PM by PIB Bengaluru
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ); ಭೂ ವಿಜ್ಞಾನ ಖಾತೆ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ); ಪ್ರಧಾನಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಅಣುಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಇಂದು ಇಲ್ಲಿ ಮಾತನಾಡಿ, “ನಾಗರಿಕ ಕೇಂದ್ರಿತತೆಯು ಭಾರತ @2047ರ ಆಡಳಿತ ಮಾದರಿಯನ್ನು ನಿರ್ಧರಿಸಲಿದೆ,ʼʼ ಎಂದು ಹೇಳಿದರು.
ಇಲ್ಲಿನ ವಿಜ್ಞಾನ ಭವನದಲ್ಲಿ 15ನೇ ʻನಾಗರಿಕ ಸೇವಾ ದಿನಾಚರಣೆʼಯನ್ನು ಉದ್ಘಾಟಿಸಿ ಮಾತನಾಡಿದ ಡಾ.ಜಿತೇಂದ್ರ ಸಿಂಗ್ ಅವರು, “ಹೊಸ ಆಡಳಿತ ಮಾದರಿಯಲ್ಲಿ ನಾಗರಿಕ ಸೇವಕರರ ಪಾಲಿಗೆ ʻನಾಗರಿಕ ಸ್ನೇಹಿʼ ವಿಧಾನವೊಂದೇ ಏಕೈಕ ಕಾರ್ಯಸಾಧ್ಯವಾದ ಆಯ್ಕೆಯಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿದ ಸಚಿವರು,
"ನಾಗರಿಕ ಸೇವಾ ದಿನದ ನಿಜವಾದ ಅರ್ಥವೆಂದರೆ ಜನಸಾಮಾನ್ಯರಿಗೆ ಸಮರ್ಪಣೆ. ಪ್ರತಿಯೊಬ್ಬ ನಾಗರಿಕ ಸೇವಕನು ಸಾಮಾನ್ಯ ಮನುಷ್ಯನ ಜೀವನದಲ್ಲಿ ಗಮನಾರ್ಹ ಸುಧಾರಣೆಗಳನ್ನು ತರಲು ಉಕ್ಕಿನ ಸಂಕಲ್ಪವನ್ನು ಹೊಂದಿರಬೇಕು," ಎಂದು ಹೇಳಿದರು.
"ವಿಷನ್ ಇಂಡಿಯಾ@2047 - ನಾಗರಿಕರು ಮತ್ತು ಸರ್ಕಾರವನ್ನು ಹತ್ತಿರಕ್ಕೆ ತರುವುದು" ಎಂಬ 2022ರ ನಾಗರಿಕ ಸೇವಾ ದಿನದ ಧ್ಯೇಯವಾಕ್ಯವನ್ನು ಉಲ್ಲೇಖಿಸಿದ ಡಾ. ಜಿತೇಂದ್ರ ಸಿಂಗ್, ಹಲವು ವರ್ಷಗಳಲ್ಲಿ ಸಾಮಾನ್ಯ ಜನರ ನಿರೀಕ್ಷೆಗಳು ಹೆಚ್ಚಾಗಿವೆ ಮತ್ತು ನಾಗರಿಕ ಸೇವಕರು ಈ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿ, ತಮ್ಮ ಭವಿಷ್ಯದ ಪಾತ್ರದ ಬಗ್ಗೆ ಗಂಭೀರ ಆತ್ಮಾವಲೋಕನವನ್ನು ಮಾಡಬೇಕಾಗಿದೆ ಎಂದು ಕರೆ ನೀಡಿದರು. 2047ರಲ್ಲಿ ಭಾರತವು 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಭಾರತವನ್ನು ಮುಂಚೂಣಿ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ, ನಾವು ಮುಂದಿನ 25 ವರ್ಷಗಳ ಸಕ್ರಿಯ ಸೇವಾವಧಿ ಹೊಂದಿರುವ ಅಧಿಕಾರಿಗಳ ಮೇಲೆ ಗಮನ ಹರಿಸಬೇಕು ಮತ್ತು ಹಾಲಿ ಹಿರಿಯ ಅಧಿಕಾರಿಗಳು ಅಂಥವರ ಸಾಮರ್ಥ್ಯ ವರ್ಧನೆಗೆ ಸಹಾಯ ಮಾಡಬೇಕು ಎಂದು ಅವರು ಸಲಹೆ ನೀಡಿದರು.
“2022ರ ಮಸೂರದ ಮೂಲಕ ಭಾರತ@2047 ಅನ್ನು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಭವಿಷ್ಯದ ಆಡಳಿತ ಮಾದರಿಗಳು ನಾಗರಿಕ ಸೇವಕನ ಪಾತ್ರವನ್ನು ಮರುವ್ಯಾಖ್ಯಾನಿಸಬಹುದು ಮತ್ತು "ಕನಿಷ್ಠ ಸರಕಾರ" ಎಂಬ ಆಶಯದ ನೈಜ ಪ್ರತಿಬಿಂಬವೆಂಬಂತೆ, ಆಡಳಿತವು ಹೆಚ್ಚು ಹೆಚ್ಚು ನಾಗರಿಕ ವಲಯದತ್ತ ವರ್ಗಾವಣೆಗೊಳ್ಳಬಹುದು ಎಂದು ಅವರು ಹೇಳಿದರು. ಅಲ್ಲದೆ, 2047ಕ್ಕೆ ಸಂಬಂಧಿಸಿದ ಸೂಚ್ಯಂಕಗಳ ಸ್ವರೂಪವನ್ನು ಸಂಪೂರ್ಣವಾಗಿ ಈಗಲೇ ಕಲ್ಪಿಸಿಕೊಳ್ಳಬೇಕು ಎಂದು ಅವರು ಹೇಳಿದರು. ತಂತ್ರಜ್ಞಾನ, ಹೊಸ ಸೂಚ್ಯಂಕಗಳು ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಒಳಗೊಂಡ ಸಂಕೀರ್ಣವಾದ ಹಾಗೂ ಪರಸ್ಪರ ಹೆಣೆದುಕೊಂಡ ವ್ಯವಸ್ಥೆಗಳು ಮುಂಬರುವ ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮುನ್ನೆಲೆಗೆ ಬರಲಿವೆ ಎಂದು ಸಚಿವರು ಹೇಳಿದರು.
ನಾಗರಿಕ ಸೇವಾ ದಿನವೆಂದರೆ, ಅದು ನಾಗರಿಕ ಸೇವಕರು ನವೀನ ವಿಧಾನಗಳನ್ನು ಬಳಸಿಕೊಂಡು ಸೂಕ್ತ ಕೆಲಸವನ್ನು ಮಾಡಿದ ಮತ್ತು ನಿರ್ಣಾಯಕ ಕ್ಷೇತ್ರಗಳಲ್ಲಿ ಫಲಿತಾಂಶಗಳನ್ನು ಪಡೆದಂತಹ ಎಲೆಮರೆಯ ಉದಾಹರಣೆಗಳನ್ನು ಆಚರಿಸುವ ಸಂದರ್ಭವಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಇದು ಭಾರತೀಯ ಆಡಳಿತದಲ್ಲಿನ ಪ್ರಮುಖ ಬದಲಾವಣೆಗಳನ್ನು ಗುರುತಿಸುವ, ರಾಷ್ಟ್ರದ ಸೇವೆಯಲ್ಲಿ ಉತ್ಕೃಷ್ಟತೆಯ ಅನ್ವೇಷಣೆಗೆ ನಮ್ಮನ್ನು ನಾವು ಮರುಸೃಷ್ಟಿಸಿಕೊಳ್ಳುವ ಒಂದು ಸಂದರ್ಭ ಎಂದು ಸಚಿವರು ವ್ಯಾಖ್ಯಾನಿಸಿದರು.
ನವದೆಹಲಿಯ ʻಮೆಟ್ಕಾಫ್ ಹೌಸ್ʼನಲ್ಲಿ ಭಾರತೀಯ ಆಡಳಿತ ಸೇವೆಯ ಮೊದಲ ಬ್ಯಾಚ್ ಅನ್ನು ಉದ್ದೇಶಿಸಿ ಸರ್ದಾರ್ ಪಟೇಲರು ಮಾಡಿದ ಭಾಷಣವನ್ನು ಉಲ್ಲೇಖಿಸಿದ ಡಾ. ಜಿತೇಂದ್ರ ಸಿಂಗ್, "ನಿಮ್ಮ ಪೂರ್ವಜರು ಜನಸಾಮಾನ್ಯರ ಒಡನಾಟದಿಂದ ತಮ್ಮನ್ನು ತಾವು ದೂರವಿಟ್ಟ ಸಂಪ್ರದಾಯಗಳಲ್ಲಿ ಬೆಳೆದುಬಂದರು. ಭಾರತದ ಶ್ರೀಸಾಮಾನ್ಯನನ್ನು ನಿಮ್ಮವರೆಂದು ಪರಿಗಣಿಸುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ,ʼʼ ಎಂಬ ಪಟೇಲರ ನುಡಿಮುತ್ತನ್ನು ಪ್ರಸ್ತಾಪಿಸಿದರು.
“ರೂಲ್”ನಿಂದ “ರೋಲ್”ಗೆ (ಆಳ್ವಿಕೆಯಿಂದ ಸೇವಾ ಪಾತ್ರದತ್ತ) ಸಾಗುವ ʻಮಿಷನ್ ಕರ್ಮಯೋಗಿʼಯ ಮುಖ್ಯ ಮಂತ್ರವನ್ನು ಉಲ್ಲೇಖಿಸಿದ ಡಾ. ಜಿತೇಂದ್ರ ಸಿಂಗ್, ಸರಕಾರದ ಹೆಚ್ಚಿನ ಪ್ರಮುಖ ಯೋಜನೆಗಳು ಈಗ ಅಗಾಧವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತವಾಗಿರುವುದರಿಂದ ನಾಗರಿಕ ಸೇವಕರು ಹೊಸ ಮತ್ತು ಸವಾಲಿನ ನಿಯೋಜನೆಗಾಗಿ ತಮ್ಮನ್ನು ತಾವು ತರಬೇತಿಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
2019, 2020 ಮತ್ತು 2021ರಲ್ಲಿ ಪ್ರಶಸ್ತಿ ಪಡೆದ ʻಆದ್ಯತೆಯ ಕಾರ್ಯಕ್ರಮಗಳುʼ ಮತ್ತು ʻಆವಿಷ್ಕಾರʼ ಉಪಕ್ರಮಗಳ ಕುರಿತಾದ ಪ್ರದರ್ಶನವನ್ನು ಉದ್ಘಾಟಿಸಿದರು ಮತ್ತು 'ವಿಷನ್ ಇಂಡಿಯಾ@2047-ಆಡಳಿತ' ಎಂಬ ವಿಷಯದ ಮೇಲೆ ಸರ್ವಸದಸ್ಯರ ಅಧಿವೇಶನದ ಅಧ್ಯಕ್ಷತೆ ವಹಿಸಿದರು.
ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಮಾತನಾಡಿ, “ನಾಗರಿಕ ಸೇವಾ ದಿನವು ಆಚರಣೆಗಳ ದಿನವಾಗಿದೆ. ಜೊತೆ ಜೊತೆಗೆ ಅದು ಪ್ರತಿಫಲನ ಮತ್ತು ಆತ್ಮಾವಲೋಕನದ ದಿನವಾಗಿದೆ ಎಂದು ಹೇಳಿದರು. ʻಮಹತ್ವಾಕಾಂಕ್ಷೆಯ ಜಿಲ್ಲೆಗಳ ಪರಿವರ್ತನಾ ಕಾರ್ಯವಿಧಾನʼವು ಸಾಮಾನ್ಯ ಸೂಚ್ಯಂಕ ಆಧಾರಿತ ಮೇಲ್ವಿಚಾರಣೆ ಮೂಲಕ ಏನನ್ನು ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಿದೆ ಮತ್ತು ಹಾಲಿ ʻಸಂತೃಪ್ತ ವಿಧಾನʼವು ಕಲ್ಯಾಣ ಯೋಜನೆಗಳ ಪ್ರಯೋಜನಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವುದನ್ನು ಖಚಿತಪಡಿಸುತ್ತದೆ,ʼʼ ಎಂದು ಹೇಳಿದರು.
ʻಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದು ಕೊರತೆ ಇಲಾಖೆʼಯ(ಡಿಎಆರ್‌ಪಿಜಿ) ಕಾರ್ಯದರ್ಶಿ ಶ್ರೀ ವಿ.ಶ್ರೀನಿವಾಸ್ ಅವರು ಮಾತನಾಡಿ, “ಸಾಮಾನ್ಯ ನಾಗರಿಕರ ಕಲ್ಯಾಣಕ್ಕಾಗಿ ಜಿಲ್ಲೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಂಸ್ಥೆಗಳು ಮಾಡಿದ ಅಸಾಧಾರಣ ಮತ್ತು ವಿನೂತನ ಕೆಲಸಗಳನ್ನು ಗುರುತಿಸುವ ಉದ್ದೇಶದಿಂದ ʻಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟತೆಗಾಗಿ ಪ್ರಧಾನ ಮಂತ್ರಿ ಪ್ರಶಸ್ತಿʼಗಳನ್ನು ನೀಡಲಾಗುತ್ತದೆ,ʼʼ ಎಂದು ಹೇಳಿದರು.
2022ರ ನಾಗರಿಕ ಸೇವಾ ದಿನದಂದು ನೀಡಲಿರುವ ಪ್ರಶಸ್ತಿಗಳಿಗಾಗಿ ಈ ಕೆಳಗಿನ 6 ಆದ್ಯತಾ ಕಾರ್ಯಕ್ರಮಗಳನ್ನು ಗುರುತಿಸಲಾಗಿದೆ: "ಜನ ಭಾಗೀದಾರಿ" ಅಥವಾ ಪೋಷಣ್ ಅಭಿಯಾನದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದು; ʻಖೇಲೋ ಇಂಡಿಯಾʼ ಯೋಜನೆಯ ಮೂಲಕ ಕ್ರೀಡೆ ಮತ್ತು ಯೋಗಕ್ಷೇಮದಲ್ಲಿ ಉತ್ಕೃಷ್ಟತೆಯನ್ನು ಉತ್ತೇಜಿಸುವುದುʼ ʻಪಿಎಂ ಸ್ವನಿಧಿʼ ಯೋಜನೆಯಲ್ಲಿ ಡಿಜಿಟಲ್ ಪಾವತಿಗಳು ಮತ್ತು ಉತ್ತಮ ಆಡಳಿತ; ʻಒಂದು ಜಿಲ್ಲೆ ಒಂದು ಉತ್ಪನ್ನʼ ಯೋಜನೆಯ ಮೂಲಕ ಸಮಗ್ರ ಅಭಿವೃದ್ಧಿ; ತಡೆರಹಿತ, ಮಾನವ ಹಸ್ತಕ್ಷೇಪವಿಲ್ಲದೆ ಫಲಾನುಭವಿಗಳಿಗೆ ಸೇವೆಗಳ ನೇರ ಪೂರೈಕೆ (ಜಿಲ್ಲೆ / ಇತರರು) ಹಾಗೂ ನಾವೀನ್ಯತೆಗಳು (ಕೇಂದ್ರ, ರಾಜ್ಯ ಮತ್ತು ಜಿಲ್ಲೆಗಳು).
ಈ ವರ್ಷ ಗುರುತಿಸಲಾದ 5 ʻಆದ್ಯತಾ ಕಾರ್ಯಕ್ರಮʼಗಳಿಗೆ 10 ಪ್ರಶಸ್ತಿಗಳನ್ನು ನೀಡಲಾಗುವುದು ಮತ್ತು ಆವಿಷ್ಕಾರಗಳಿಗಾಗಿ ಕೇಂದ್ರ / ರಾಜ್ಯ ಸರಕಾರ/ ಜಿಲ್ಲೆಗಳ ಸಂಸ್ಥೆಗಳಿಗೆ 6 ಪ್ರಶಸ್ತಿಗಳನ್ನು ನೀಡಲಾಗುವುದು.
ಮಾಜಿ ಸಂಪುಟ ಕಾರ್ಯದರ್ಶಿಗಳು, ಮಾಜಿ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಹೆಚ್ಚುವರಿ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿಗಳು / ಎಸಿಎಸ್ / ಪ್ರಧಾನ ಕಾರ್ಯದರ್ಶಿಗಳು ಮತ್ತು ಕೇಂದ್ರ ತರಬೇತಿ ಸಂಸ್ಥೆಗಳ ಮುಖ್ಯಸ್ಥರು / ಸ್ಥಾನೀಯ ಆಯುಕ್ತರು ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ʻಪಿಸಿಸಿಎಫ್ʼಗಳು/ ʻಡಿಜಿಪಿʼಗಳು/ ಹೆಚ್ಚುವರಿ ʻಡಿಜಿಪಿʼಗಳು / ಜಿಲ್ಲಾಧಿಕಾರಿಗಳು, ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಎಟಿಐಗಳು/ ಸಹಾಯಕ ಕಾರ್ಯದರ್ಶಿಗಳು ಮತ್ತು ಸಹಾಯಕ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ 2013-17ನೇ ಸಾಲಿನ ಐಎಎಸ್ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿದ್ದರು.
***
(Release ID: 1818508)
Visitor Counter : 228