ನೌಕಾ ಸಚಿವಾಲಯ
azadi ka amrit mahotsav

ಕೋವಿಡ್ ಸಾಂಕ್ರಾಮಿಕದ ಕಠಿಣ ಸಮಯದಲ್ಲಿ ಕೂಡಾ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಮತ್ತು ಜಾಗತಿಕ ಪೂರೈಕೆ ಸರಪಳಿಯನ್ನು ಕಾರ್ಯಗತಗೊಳಿಸುವಲ್ಲಿ ನಾವಿಕರ ಪ್ರಮುಖ ಕೊಡುಗೆಯಿದೆ ಎಂದು ಶ್ರೀ ಸರ್ಬಾನಂದ ಸೋನೋವಾಲ್ ಅವರು ಹೇಳಿದರು

Posted On: 05 APR 2022 12:34PM by PIB Bengaluru

ಕೋವಿಡ್ ಸಾಂಕ್ರಾಮಿಕದ ಕಠಿಣ ಸಮಯದಲ್ಲಿ ಕೂಡಾ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಮತ್ತು ಜಾಗತಿಕ ಪೂರೈಕೆ ಸರಪಳಿಯನ್ನು ಕಾರ್ಯಗತಗೊಳಿಸುವಲ್ಲಿ ನಮ್ಮ ನಾವಿಕರ ಪ್ರಮುಖ ಕೊಡುಗೆಯಿದೆ ಎಂದು ಕೇಂದ್ರ ಬಂದರು, ನೌಕಾಯಾನ ಮತ್ತು ಜಲಮಾರ್ಗಗಳ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಅವರು ಹೇಳಿದರು.

59 ನೇ ರಾಷ್ಟ್ರೀಯ ಕಡಲ (ಸಾಗರ) ದಿನ ಆಚರಣೆ ಸಮಾರಂಭದಲ್ಲಿ ಕಡಲ ಭ್ರಾತೃತ್ವದ ಎಲ್ಲಾ ಪಾಲುದಾರರನ್ನು ಅಭಿನಂದಿಸುತ್ತಾ ಅವರು, ದೊಡ್ಡ ಸವಾಲುಗಳ ನಡುವೆಯೂ ನಮ್ಮ ಭಾರತೀಯ ನಾವಿಕರು ಧೈರ್ಯದಿಂದ ಭಾರತದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಎತ್ತರಕ್ಕೆ ಘನತೆಯಿಂದ ಹಾರಿಸುವ ಕಾರ್ಯ ಮುಂದುವರಿಸಿದ್ದಾರೆ ಎಂದು ಹೇಳಿದರು. ಕೋವಿಡ್-19 ಸಾಂಕ್ರಾಮಿಕದ ಉತ್ತುಂಗದಲ್ಲಿಯೂ ಸಹ 2021 ರಲ್ಲಿ 2,10,000 ಕ್ಕೂ ಹೆಚ್ಚು ಭಾರತೀಯ ನಾವಿಕರು ಭಾರತೀಯ ಮತ್ತು ವಿದೇಶಿ ಹಡಗುಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂಬ ಅಂಶದಿಂದ ಜಾಗತಿಕ ಪೂರೈಕೆ ಸರಪಳಿಯನ್ನು ಕಾರ್ಯಗತಗೊಳಿಸುವಲ್ಲಿ ಭಾರತೀಯ ನಾವಿಕರು ವಹಿಸಿದ ಮಹತ್ವಪೂರ್ಣವಾದ ಪಾತ್ರವಗಳನ್ನು ಚೆನ್ನಾಗಿ ಅಳೆಯಬಹುದು ಎಂದು ಸಚಿವರು ಹೇಳಿದರು.

ಇದು ಭಾರತದ ಹಾಗೂ ಜಾಗತಿಕ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳು ಅಡೆತಡೆಯಿಲ್ಲದೆ ಮುಂದುವರಿಯುವುದನ್ನು ಖಚಿತಪಡಿಸಿದೆ ಎಂದು ಅವರು ಹೇಳಿದರು. ನಮ್ಮ ಶ್ರೀಮಂತ ಪ್ರಾಚೀನ ಭಾರತೀಯ ನೀತಿ ಮತ್ತು ವಸುಧೈವ ಕುಟುಂಬಕಂ ಅಥವಾ ಇಡೀ ಜಗತ್ತು ಒಂದೇ ಕುಟುಂಬ ಎಂಬ ತತ್ತ್ವಶಾಸ್ತ್ರದ ಮೂಲಕ ಜಗತ್ತಿಗೆ ಉದಾಹರಣೆಯಾಗಿದ್ದೇವೆಂದು ಸಾಂಕ್ರಾಮಿಕ ಸಮಯದಲ್ಲಿ ಪ್ರಪಂಚದಾದ್ಯಂತ ಕೆಲಸ ಮಾಡುವ ನಮ್ಮ ಭಾರತೀಯ ನಾವಿಕರು, ತಮ್ಮ ಕರ್ತವ್ಯಗಳಲ್ಲಿ ತೋರಿಸಿಕೊಟ್ಟಿದ್ದಾರೆ ಎಂದು ಸಚಿವ ಶ್ರೀ ಸೋನೊವಾಲ್ ಹೇಳಿದರು.

 2070 ರ ವೇಳೆಗೆ ಭಾರತವು ನಿವ್ವಳ ಶೂನ್ಯ ಗುರಿಗಳನ್ನು (ನೆಟ್ ಜೀರೊ ಟಾರ್ಗೆಟ್) ಸಾಧಿಸಲಿದೆ ಎಂದು ಪ್ರಧಾನಮಂತ್ರಿಗಳು ಘೋಷಿಸಿದ್ದಾರೆ ಎಂದು ಶ್ರೀ ಸೋನೊವಾಲ್ ಹೇಳಿದರು. ಅದರಂತೆ, ಈ ವರ್ಷದ ರಾಷ್ಟ್ರೀಯ ಕಡಲ ದಿನದ ಚಿಂತನೆ(ಥೀಮ್) 'ಭಾರತೀಯ ಸಾಗರ ಉದ್ಯಮವನ್ನು ನಿವ್ವಳ ಶೂನ್ಯಕ್ಕೆ ಕೊಂಡೊಯ್ಯುವುದು' ಸೂಕ್ತವಾಗಿದೆ. ಮಾರಿಟೈಮ್ ಇಂಡಸ್ಟ್ರಿಯಲ್ಲಿ, ಭಾರತವು ಯಾವಾಗಲೂ ಪರಿಸರ ಸಂರಕ್ಷಣೆಯ ಕಾರಣವನ್ನು ಪ್ರತಿಪಾದಿಸುತ್ತದೆ, ಅದು ದೇಶೀಯ ಹಡಗುಗಳಲ್ಲಿ ಗ್ಲೋಬಲ್ ಸಲ್ಫರ್ ಕ್ಯಾಪ್ ಅಥವಾ ಐ.ಎಂ.ಒ ಹಸಿರುಮನೆ ಅನಿಲ ಹೊರಸೂಸುವಿಕೆ ನಿಯಮಗಳ ಅನುಷ್ಠಾನವಾಗಲಿ ಅಥವಾ 2070 ರ ವೇಳೆಗೆ ನಿವ್ವಳ ಶೂನ್ಯವನ್ನು ತಲುಪಲು ಯು.ಎನ್.ಎಫ್.ಸಿ.ಸಿ. ಗೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತದೆ.

ಪ್ರಧಾನಮಂತ್ರಿಯವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಮತ್ತು ಮಾರಿಟೈಮ್ ಇಂಡಿಯಾ ವಿಷನ್, 2030 ರ ಮೂಲಕ ಪ್ರತಿಪಾದಿಸಲ್ಪಟ್ಟಂತೆ ಮುಂದಿನ ವರ್ಷಗಳಲ್ಲಿ ಭಾರತವು ಸಮುದ್ರ ವಲಯದ ಮೂಲಕ ಜಗತ್ತನ್ನು ಮುನ್ನಡೆಸಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

2016 ಮತ್ತು 2019 ರ ನಡುವೆ ವಿಶ್ವ ಹಡಗು ಸಾಗಣೆಯಲ್ಲಿ ಭಾರತೀಯ ನಾವಿಕರ ಪಾಲು 25% ರಷ್ಟು ಹೆಚ್ಚಳವನ್ನು ತೋರಿಸಿದೆ ಎಂದು ಸಚಿವರು ವಿವರಿಸಿದರು.

 

ಕಳೆದ 3 ವರ್ಷಗಳಲ್ಲಿ ಸರ್ಕಾರದ ಅನೇಕ ಮಧ್ಯಸ್ಥಿಕೆಗಳಿಂದಾಗಿ ಭಾರತೀಯ ವಿಹಾರಿ ಹಡಗು (ಕ್ರೂಸ್) ಉದ್ಯಮವು ವೇಗವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು. ಮುಂದಿನ ದಶಕದಲ್ಲಿ, ಭಾರತೀಯ ವಿಹಾರಿ ಹಡಗು (ಕ್ರೂಸ್)  ಮಾರುಕಟ್ಟೆಯು ಹೆಚ್ಚುತ್ತಿರುವ ಬೇಡಿಕೆ ಮತ್ತು ತೆರಿಗೆಯ ನಂತರದ ಆದಾಯದಿಂದ 8 ಪಟ್ಟು ಹೆಚ್ಚಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು.

ಕಡಲ ಸಮುದಾಯವು ನೀಡಿದ ಮಹತ್ತರವಾದ ಕೊಡುಗೆಯನ್ನು ಸಚಿವ ಶ್ರೀ ಸೋನೊವಾಲ್ ಅವರು ಶ್ಲಾಘಿಸಿದರು. ಮತ್ತು ಲಾಜಿಸ್ಟಿಕ್ ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಹಡಗು ಸಾಗಣೆಯನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರವು 'ವ್ಯಾಪಾರ ಮಾಡುವುದನ್ನು ಸುಲಭಗೊಳಿಸುವ ಪ್ರಕ್ರಿಯೆಗಳನ್ನು' ಉತ್ತೇಜಿಸುತ್ತಿದೆ ಮತ್ತು ಭಾರತೀಯ  ಕಡಲ ಕ್ಷೇತ್ರವು ವಿಶ್ವದ ಅಗ್ರಗಣ್ಯ ಸ್ಥಾನಗಳಿಸಲು ಬೇಕಾದ ಪೂರಕ ಕೆಲಸ ನಿರಂತರವಾಗಿ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಸಫ್ದರ್ಜಂಗ್ ಸ್ಮಾರಕದ  ಬಳಿ  ವಾಕಥಾನ್ ಗೆ ಹಸಿರು ನಿಶಾನೆ ತೋರುವ ಮೂಲಕ  ಕೇಂದ್ರ ಬಂದರು, ನೌಕಾಯಾನ ಮತ್ತು ಜಲಮಾರ್ಗಗಳ ಖಾತೆಯ ರಾಜ್ಯ ಸಚಿವ ಶ್ರೀ ಶಂತನು ಠಾಕೂರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಚಿವಾಲಯದ ಹಿರಿಯ ಅಧಿಕಾರಿಗಳು, ಮಹಾ ನಿರ್ದೇಶಕರು (ಶಿಪ್ಪಿಂಗ್), ಬಂದರು ಅಧಿಕಾರಿಗಳು ಮತ್ತು ಎನ್.ಸಿ.ಆರ್. ಎಂ.ಟಿ.ಐ.ನಲ್ಲಿರುವ ಮ್ಯಾರಿಟೈಮ್ ಇನ್ಸ್ಟಿಟ್ಯೂಟ್ ಗಳ ಸುಮಾರು 600 ಟ್ರೈನಿ ಕೆಡೆಟ್ ಗಳು, ಬೋಧನಾ ವಿಭಾಗಗಳ ಮಂದಿ ಮತ್ತು ಎನ್.ಸಿ.ಆರ್ ಪ್ರದೇಶದ ಮರ್ಚೆಂಟ್ ನೌಕಾಪಡೆ(ನೇವಿ) ಅಧಿಕಾರಿಗಳು ಉಪಸ್ಥಿತರಿದ್ದರು.

ಇಂದಿಗೆ ನಿಖರವಾಗಿ 103 ವರ್ಷಗಳ ಹಿಂದೆ , 5 ನೇ ಏಪ್ರಿಲ್ 1919 ರಂದು, ಭಾರತದ ಧ್ವಜವನ್ನು ಹೊತ್ತ ಎಸ್.ಎಸ್. ಲಾಯಲ್ಟಿ ಎಂಬ ಹೆಸರಿನ ಮೊದಲ ಹಡಗು ಮುಂಬೈಯಿಂದ ಲಂಡನ್ ಗೆ ಪ್ರಯಾಣ ಬೆಳೆಸಿ ಇತಿಹಾಸವನ್ನು ಸೃಷ್ಟಿಸಿದಾಗ, ಭಾರತದ ಪಾಲಿಗೆ “ರಾಷ್ಟ್ರೀಯ ಕಡಲ ದಿನ ಆಚರಣೆ” ವಿಶೇಷ ಪ್ರಾಮುಖ್ಯ ಪಡೆದುಕೊಂಡಿತು. ಇದೀಗ ಇದನ್ನು ನಾವು ಹೆಮ್ಮೆಯಿಂದ ಪ್ರತಿ ವರ್ಷವೂ ಆಚರಿಸುತ್ತಿದ್ದೇವೆ.

****


(Release ID: 1813692) Visitor Counter : 136