ಪ್ರಧಾನ ಮಂತ್ರಿಯವರ ಕಛೇರಿ

ಕಚ್‍ನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನದ ವಿಚಾರ ಸಂಕಿರಣದಲ್ಲಿ ಪ್ರಧಾನಮಂತ್ರಿಯವರ ಭಾಷಣ

Posted On: 08 MAR 2022 9:37PM by PIB Bengaluru

ನಮಸ್ಕಾರ!

ನಿಮಗೆಲ್ಲರಿಗೂ ಮತ್ತು ದೇಶದ ಎಲ್ಲಾ ಮಹಿಳೆಯರಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. ಈ ಸಂದರ್ಭದಲ್ಲಿ, ಈ ವಿನೂತನ ಕಾರ್ಯಕ್ರಮವನ್ನು ದೇಶದ ಮಹಿಳಾ ಸಂತರು ಮತ್ತು ‘ಸಾಧ್ವಿಗಳು’   ಆಯೋಜಿಸಿದ್ದಾರೆ. ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.

ತಾಯಂದಿರೇ ಮತ್ತು ಸಹೋದರಿಯರೇ,

ನೀವು ಆಗಮಿಸಿರುವ ಕಚ್ ಭೂಮಿ ಶತಮಾನಗಳಿಂದ ಮಹಿಳಾ ಶಕ್ತಿ ಮತ್ತು ಸಾಮರ್ಥ್ಯದ ಸಂಕೇತವಾಗಿದೆ. ಇಲ್ಲಿ ಮಾ ಆಶಾಪುರ ಮಾತೃಶಕ್ತಿಯ ರೂಪದಲ್ಲಿ ನೆಲೆಸಿದ್ದಾರೆ. ಇಲ್ಲಿನ ಮಹಿಳೆಯರು ಕಠೋರ ಪ್ರಾಕೃತಿಕ ಸವಾಲುಗಳು, ಪ್ರತಿಕೂಲ ಸನ್ನಿವೇಶಗಳ ನಡುವೆ ಹೇಗೆ ಬದುಕಬೇಕು ಎನ್ನುವುದನ್ನು ಇಡೀ ಸಮಾಜಕ್ಕೆ ಕಲಿಸಿ, ಹೋರಾಡಿ ಗೆಲ್ಲುವುದನ್ನು ಕಲಿಸಿದ್ದಾರೆ. ‘ಪಾನಿ ಸಮಿತಿ’ (ಜಲ ಸಮಿತಿ) ಸ್ಥಾಪಿಸುವ ಮೂಲಕ ನೀರಿನ ಸಂರಕ್ಷಣೆಗೆ ಸಂಬಂಧಿಸಿದಂತೆ ಕಚ್‌ನ ಮಹಿಳೆಯರು ವಹಿಸಿದ ಪಾತ್ರವನ್ನು ಅಂತರರಾಷ್ಟ್ರೀಯ ಸಂಸ್ಥೆಗಳೂ ಪರಿಗಣಿಸಿವೆ.  ಕಚ್‌ನ ಮಹಿಳೆಯರು ತಮ್ಮ ದಣಿವರಿಯದ ಶ್ರಮದಿಂದ ಕಚ್‌ನ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿಟ್ಟಿದ್ದಾರೆ. ಕಚ್‌ನ ವರ್ಣಗಳು, ವಿಶೇಷವಾಗಿ ಕರಕುಶಲ ವಸ್ತುಗಳು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ಕಲೆಗಳು ಮತ್ತು ಕೌಶಲ್ಯಗಳು ಈಗ ಇಡೀ ಜಗತ್ತಿನಲ್ಲಿ ವಿಭಿನ್ನ ಗುರುತನ್ನು ಸೃಷ್ಟಿಸುತ್ತಿವೆ. ನೀವು ಪ್ರಸ್ತುತ ಭಾರತದ ಪಶ್ಚಿಮ ಗಡಿಯಲ್ಲಿರುವ ಕೊನೆಯ ಹಳ್ಳಿಯಲ್ಲಿದ್ದೀರಿ. ಇದು ಭಾರತದ ಗಡಿಯಲ್ಲಿರುವ ಗುಜರಾತ್‌ನ ಕೊನೆಯ ಗ್ರಾಮವಾಗಿದೆ. ಅದರ ನಂತರ ಜನಜೀವನವಿಲ್ಲ. ನಂತರ ಮತ್ತೊಂದು ದೇಶದ ಗಡಿ ಪ್ರಾರಂಭವಾಗುತ್ತದೆ. ಗಡಿ ಗ್ರಾಮಗಳಲ್ಲಿರುವ ಜನರಿಗೆ ದೇಶದ ಬಗ್ಗೆ ವಿಶೇಷ ಜವಾಬ್ದಾರಿ ಇದೆ. ಕಚ್‌ನ ವೀರ ಮಹಿಳೆಯರು ಯಾವಾಗಲೂ ಈ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಈಗ ನೀವು ನಿನ್ನೆಯಿಂದ ಅಲ್ಲಿದ್ದೀರಿ, 1971 ರ ಯುದ್ಧದ ಸಮಯದಲ್ಲಿ ನಡೆದ ಘಟನೆಯ ಬಗ್ಗೆ ನೀವು ಯಾರೋ ಅಥವಾ ಇನ್ನೊಬ್ಬರಿಂದ ಕೇಳಿರಬಹುದು. 1971 ರ ಯುದ್ಧದಲ್ಲಿ ಶತ್ರುಗಳು ಭುಜ್ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದರು, ವಿಮಾನಹಾದಿಯ ಮೇಲೆ ಬಾಂಬ್ ದಾಳಿ ಮಾಡಿದರು ಮತ್ತು ಅದನ್ನು ಸಂಪೂರ್ಣವಾಗಿ ನಾಶಪಡಿಸಿದರು. ಅಂತಹ ಸಂದರ್ಭಗಳಲ್ಲಿ, ಸಮಯಕ್ಕೆ ಮತ್ತೊಂದು ಏರ್‌ಸ್ಟ್ರಿಪ್, ವಿಮಾನಹಾದಿಯ ಅಗತ್ಯವಿತ್ತು. ಕಛ್‌ನ ಮಹಿಳೆಯರು ತಮ್ಮ ಪ್ರಾಣ ಲೆಕ್ಕಿಸದೆ, ಭಾರತೀಯ ಪಡೆಗಳಿಗಾಗಿ ವಿಮಾನಹಾದಿಯನ್ನು ನಿರ್ಮಿಸಲು ರಾತ್ರೋರಾತ್ರಿ ಶ್ರಮಿಸಿದ್ದರು ಎಂದು ತಿಳಿದರೆ ನಿಮಗೆಲ್ಲರಿಗೂ ಹೆಮ್ಮೆಯಾಗುತ್ತದೆ. ಇದು ಇತಿಹಾಸದಲ್ಲಿ ಬಹಳ ಮುಖ್ಯವಾದ ಘಟನೆಯಾಗಿದೆ. ನೀವು ಅವರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದರೆ, ಅವರಲ್ಲಿ ಅನೇಕ ತಾಯಂದಿರು ಮತ್ತು ಸಹೋದರಿಯರಿಗೆ ವಯಸ್ಸಾಗಿದೆ ಮತ್ತು ಇನ್ನೂ ನಮ್ಮ ನಡುವೆ ಇದ್ದಾರೆ. ಅವರ ಜೊತೆ ಹಲವು ಬಾರಿ ಮಾತನಾಡುವ ಅವಕಾಶ ನನಗೆ ಸಿಕ್ಕಿದೆ. ಅಂತಹ ಅಸಾಧಾರಣ ಧೈರ್ಯ ಮತ್ತು ಮಹಿಳೆಯರ ಶಕ್ತಿಯ ಈ ನೆಲದಿಂದ ಈಗ ನಮ್ಮ ಸ್ತ್ರೀಶಕ್ತಿ ಸಮಾಜಕ್ಕಾಗಿ ಸೇವೆಯನ್ನು ಪ್ರಾರಂಭಿಸುತ್ತಿದೆ.

ತಾಯಂದಿರೇ ಮತ್ತು ಸಹೋದರಿಯರೇ,

ನಮ್ಮ ವೇದಗಳು 'ಪುರಂಧಿ: ಯೋಷ' ಎಂಬಂತಹ ಮಂತ್ರಗಳಿಂದ ಸ್ತ್ರೀಯರನ್ನು ಆವಾಹಿಸಿಕೊಂಡಿವೆ. ಅಂದರೆ, ಮಹಿಳೆಯರು ತಮ್ಮ ನಗರ ಮತ್ತು ಸಮಾಜದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಮತ್ತು ದೇಶವನ್ನು ಮುನ್ನಡೆಸಬೇಕು. ಮಹಿಳೆಯರು ನೈತಿಕತೆ, ನಿಷ್ಠೆ, ನಿರ್ಣಾಯಕತೆ ಮತ್ತು ನಾಯಕತ್ವದ ಪ್ರತಿಬಿಂಬ ಮತ್ತು ಅದನ್ನು ಪ್ರತಿನಿಧಿಸುತ್ತಾರೆ. ಅದಕ್ಕಾಗಿಯೇ ನಮ್ಮ ವೇದಗಳು ಮತ್ತು ಸಂಪ್ರದಾಯಗಳು ಮಹಿಳೆಯರು ರಾಷ್ಟ್ರಕ್ಕೆ ಮಾರ್ಗದರ್ಶನ ಮಾಡಲು ನಿಪುಣರು ಮತ್ತು ಸಮರ್ಥವಾಗಿರಬೇಕು ಎಂದು ಕರೆ ನೀಡಿವೆ. ನಾರೀ ತೂ ನಾರಾಯಣೀ (ಮಹಿಳೆ ದೈವಿಕತೆಯ ಅಭಿವ್ಯಕ್ತಿ) ಎಂದು ನಾವು ಆಗಾಗ್ಗೆ ಹೇಳುತ್ತೇವೆ. ನಮ್ಮ ದೇಶದಲ್ಲಿ ‘ನರ ಕರಣೀ ಕರೇ ತೋ ನಾರಾಯಣ ಹೋ ಜಾಯೆ’ ಅಂದರೆ, ಮನುಷ್ಯನು ಸರ್ವೋಚ್ಚ ದೇವರಾಗಲು ಏನಾದರೂ ಮಾಡಬೇಕು ಎಂದು ಹೇಳಲಾಗುತ್ತದೆ. ಇವೆರಡರ ನಡುವಿನ ವ್ಯತ್ಯಾಸವನ್ನು ನೋಡಿ. ನಾವು ಸ್ವಲ್ಪ ಹೆಚ್ಚು ಯೋಚಿಸಿದರೆ, ನಮ್ಮ ಪೂರ್ವಜರು ಇದನ್ನು ಪುರುಷರಿಗಾಗಿ ಏಕೆ ಹೇಳಿದ್ದಾರೆಂದು ನಮಗೆ ಅರ್ಥವಾಗುತ್ತದೆ, ಆದರೆ ತಾಯಿ ಮತ್ತು ಸಹೋದರಿಯರಿಗಾಗಿ ನಾರಿ ತೂ ನಾರಾಯಣಿ!

ತಾಯಂದಿರೇ ಮತ್ತು ಸಹೋದರಿಯರೇ,

ಭಾರತವು ಪ್ರಪಂಚದ ಅಂತಹ ಬೌದ್ಧಿಕ ಸಂಪ್ರದಾಯದ ವಾಹಕವಾಗಿದೆ, ಅದರ ಅಸ್ತಿತ್ವವು ಅದರ ತತ್ವದ ಮೇಲೆ ಕೇಂದ್ರೀಕೃತವಾಗಿದೆ. ಮತ್ತು ಈ ತತ್ತ್ವದ ಆಧಾರವು ಅದರ ಆಧ್ಯಾತ್ಮಿಕ ಪ್ರಜ್ಞೆಯಾಗಿದೆ. ಮತ್ತು ಈ ಆಧ್ಯಾತ್ಮಿಕ ಪ್ರಜ್ಞೆಯು 'ನಾರಿ ಶಕ್ತಿ' ಮೇಲೆ ಕೇಂದ್ರೀಕೃತವಾಗಿದೆ. ನಾವು ಸಂತೋಷದಿಂದ ಮಹಿಳೆಯ ರೂಪದಲ್ಲಿ ದೈವಿಕ ಶಕ್ತಿಯನ್ನು ಸ್ಥಾಪಿಸಿದ್ದೇವೆ. ನಾವು ದೈವಿಕ ಜೀವಿಗಳನ್ನು ಪುರುಷ ಮತ್ತು ಸ್ತ್ರೀ ಎರಡೂ ರೂಪಗಳಲ್ಲಿ ನೋಡಿದರೆ, ನಾವು ಸ್ತ್ರೀ ಅಸ್ತಿತ್ವಕ್ಕೆ ಮೊದಲ ಆದ್ಯತೆ ನೀಡುತ್ತೇವೆ. ಅದು ಸೀತಾ-ರಾಮ, ರಾಧಾ-ಕೃಷ್ಣ, ಗೌರಿ-ಗಣೇಶ, ಅಥವಾ ಲಕ್ಷ್ಮಿ-ನಾರಾಯಣ! ನಮ್ಮ ಈ ಸಂಪ್ರದಾಯದ ಬಗ್ಗೆ ನಿಮಗಿಂತ ಚೆನ್ನಾಗಿ ಪರಿಚಯವಿರುವವರು ಯಾರಿದ್ದಾರೆ? ನಮ್ಮ ವೇದಗಳಲ್ಲಿ ಘೋಷ, ಗೋಧಾ, ಅಪಾಲ ಮತ್ತು ಲೋಪಾಮುದ್ರೆಯಂತಹ ಅನೇಕ ಸ್ತ್ರೀ ದಾರ್ಶನಿಕರು ಇದ್ದಾರೆ. ಗಾರ್ಗಿ ಮತ್ತು ಮೈತ್ರೇಯಿ ಮುಂತಾದ ವಿದ್ವಾಂಸರು ವೇದಾಂತದ ಸಂಶೋಧನೆಗೆ ದಾರಿ ತೋರಿಸಿದರು. ಉತ್ತರದ ಮೀರಾಬಾಯಿಯಿಂದ ದಕ್ಷಿಣದ ಅಕ್ಕ ಮಹಾದೇವಿಯವರೆಗೆ, ಭಾರತದ ದೈವಿಕ ಮಹಿಳೆಯರು ಭಕ್ತಿ ಚಳುವಳಿಯಿಂದ ಜ್ಞಾನ ದರ್ಶನದವರೆಗೆ ಸಮಾಜದಲ್ಲಿ ಸುಧಾರಣೆ ಮತ್ತು ಬದಲಾವಣೆಗೆ ಧ್ವನಿ ನೀಡಿದ್ದಾರೆ. ಕಚ್ ಮತ್ತು ಗುಜರಾತ್‌ನ ಈ ಭೂಮಿಯಲ್ಲಿಯೂ ಸಹ, ನೀವು ಸತಿ ತೋರಲ್, ಗಂಗಾ ಸತಿ, ಸತಿ ಲೋಯನ್, ರಾಂಬಾಯಿ ಮತ್ತು ಲೀರ್ ಬಾಯಿಯಂತಹ ಅನೇಕ ದೈವಿಕ ಮಹಿಳೆಯರನ್ನು ಕಾಣುತ್ತೀರಿ. ಅಂತೆಯೇ, ಯಾವುದೇ ಗ್ರಾಮ ಅಥವಾ ಗ್ರಾಮ ದೇವತೆ ಅಥವಾ ನಂಬಿಕೆಯ ಕೇಂದ್ರವಾದ 'ಕುಲದೇವಿ' ಇಲ್ಲದ ಯಾವುದೇ ಪ್ರದೇಶವನ್ನು ನೀವು ಕಾಣುವುದಿಲ್ಲ. ಈ ದೇವತೆಗಳು ಅನಾದಿ ಕಾಲದಿಂದಲೂ ನಮ್ಮ ಸಮಾಜವನ್ನು ಸೃಷ್ಟಿಸಿದ ಈ ದೇಶದ ‘ನಾರಿ’ಪ್ರಜ್ಞೆಯ ಪ್ರತೀಕಗಳು. ಈ ಮಹಿಳಾ ಪ್ರಜ್ಞೆಯು ಸ್ವಾತಂತ್ರ್ಯ ಚಳವಳಿಯಲ್ಲೂ ದೇಶದಲ್ಲಿ ಸ್ವಾತಂತ್ರ್ಯದ ಜ್ಯೋತಿಯನ್ನು ಬೆಳಗಿಸಿತು. ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ನಾವು 1857 ರ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸಿಕೊಳ್ಳಬೇಕು. ಭಾರತದ ಸ್ವಾತಂತ್ರ್ಯ ಚಳವಳಿಯ ಅಡಿಪಾಯವನ್ನು ಹಾಕುವಲ್ಲಿ ಭಕ್ತಿ ಚಳುವಳಿಯು ಪ್ರಮುಖ ಪಾತ್ರವನ್ನು ಹೊಂದಿತ್ತು. ದೇಶದ ಪ್ರತಿಯೊಂದು ಭಾಗದಲ್ಲೂ ಋಷಿಮುನಿಗಳು, ಸಂತರು ಮತ್ತು ವಿದ್ವಾಂಸರು ಭಾರತದ ಪ್ರಜ್ಞೆಯನ್ನು ಬೆಳಗಿಸುವ ಅಸಾಧಾರಣ ಕೆಲಸವನ್ನು ಮಾಡಿದರು.   ಮತ್ತು ಅದೇ ಪ್ರಜ್ಞೆಯ ಬೆಳಕಿನಲ್ಲಿ ದೇಶವು ಸ್ವಾತಂತ್ರ್ಯ ಚಳುವಳಿಯಲ್ಲಿ ಯಶಸ್ವಿಯಾಯಿತು. ಇಂದು ನಾವು ಅಂತಹ ಹಂತದಲ್ಲಿದ್ದೇವೆ, ಸ್ವಾತಂತ್ರ್ಯದ 75 ವರ್ಷಗಳು ಪೂರ್ಣಗೊಂಡರೂ ನಮ್ಮ ಆಧ್ಯಾತ್ಮಿಕ ಪ್ರಯಾಣ ಮುಂದುವರಿಯುತ್ತದೆ. ಆದರೆ ಸಾಮಾಜಿಕ ಪ್ರಜ್ಞೆ, ಸಾಮಾಜಿಕ ಸಾಮರ್ಥ್ಯ, ಸಾಮಾಜಿಕ ಅಭಿವೃದ್ಧಿ ಮತ್ತು ಸಮಾಜದಲ್ಲಿನ ಬದಲಾವಣೆಯು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೊಂದಿಗೆ ಸಂಬಂಧ ಹೊಂದಿದೆ. ಮತ್ತು ಸಂತ ಸಂಪ್ರದಾಯದ ಎಲ್ಲಾ ತಾಯಂದಿರು ಮತ್ತು ಸಹೋದರಿಯರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕುಳಿತಿರುವಾಗ, ನಾನು ನಿಮ್ಮೊಂದಿಗೆ ಏನಾದರೂ ಮಾತನಾಡಬೇಕು ಎಂದು ನಾನು ಭಾವಿಸುತ್ತೇನೆ. ಇಂದು ನಾನು ಅಂತಹ ಜಾಗೃತ ಮಹಿಳೆಯರ ಗುಂಪಿನೊಂದಿಗೆ ಮಾತನಾಡುತ್ತಿರುವುದು ನನ್ನ ಅದೃಷ್ಟ.

ತಾಯಂದಿರೇ ಮತ್ತು ಸಹೋದರಿಯರೇ,

ಈ ಭೂಮಿಯನ್ನು ತಾಯಿ ಎಂದು ಪರಿಗಣಿಸುವ ರಾಷ್ಟ್ರದಲ್ಲಿ, ಮಹಿಳೆಯರ ಪ್ರಗತಿಯು ಯಾವಾಗಲೂ ರಾಷ್ಟ್ರದ ಸಬಲೀಕರಣಕ್ಕೆ ಶಕ್ತಿಯನ್ನು ನೀಡುತ್ತದೆ. ಮಹಿಳೆಯರ ಜೀವನವನ್ನು ಸುಧಾರಿಸುವುದು ಮತ್ತು ಭಾರತದ ಅಭಿವೃದ್ಧಿಯ ಪ್ರಯಾಣದಲ್ಲಿ ಅವರ ಸಂಪೂರ್ಣವಾಗಿ ಭಾಗವಹಿಸುವಂತೆ   ಮಾಡುವುದು ಇಂದು ದೇಶದ ಆದ್ಯತೆಯಾಗಿದೆ ಮತ್ತು ಅದಕ್ಕಾಗಿಯೇ ನಾವು ನಮ್ಮ ತಾಯಿ ಮತ್ತು ಸಹೋದರಿಯರ ಕಷ್ಟಗಳನ್ನು ಕಡಿಮೆ ಮಾಡಲು ಒತ್ತು ನೀಡುತ್ತಿದ್ದೇವೆ. ಕೋಟಿಗಟ್ಟಲೆ ತಾಯಂದಿರು, ಸಹೋದರಿಯರು ಬಯಲು ಶೌಚಕ್ಕೆ ಮನೆಯಿಂದ ಹೊರಗೆ ಹೋಗಬೇಕಾದ ಪರಿಸ್ಥಿತಿ ನಮ್ಮಲ್ಲಿತ್ತು. ಮನೆಯಲ್ಲಿ ಶೌಚಾಲಯದ ಕೊರತೆಯಿಂದ ಅವರು ಅನುಭವಿಸಿದ ನೋವನ್ನು ನಾನು ಪದಗಳಲ್ಲಿ ವಿವರಿಸಬೇಕಾಗಿಲ್ಲ.  ನಮ್ಮ ಸರ್ಕಾರ ಮಹಿಳೆಯರ ಈ ನೋವನ್ನು ಅರ್ಥ ಮಾಡಿಕೊಂಡಿದ್ದು. ಆಗಸ್ಟ್ 15 ರಂದು ಕೆಂಪು ಕೋಟೆಯಿಂದ ಘೋಷಣೆಯಾದ ನಂತರ, ನಾವು ದೇಶಾದ್ಯಂತ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಇದು  ಒಂದು ಕೆಲಸವೇ ಎಂದು ಈಗ ಅನೇಕರು ಆಶ್ಚರ್ಯ ಪಡುತ್ತಾರೆ. ಅದು ಇಲ್ಲದಿದ್ದರೆ, ನಂತರ ಯಾರೂ ಇದನ್ನು ಮೊದಲು ಮಾಡಲಿಲ್ಲ. ತಾಯಂದಿರು ಮತ್ತು ಸಹೋದರಿಯರು ಹಳ್ಳಿಗಳಲ್ಲಿ ಸೌದೆ ಮತ್ತು ಬೆರಣಿ ಬಳಸಿ ಅಡುಗೆ ಮಾಡುವುದನ್ನು ನೀವೆಲ್ಲರೂ ನೋಡಿದ್ದೀರಿ. ಹೊಗೆಯಿಂದ ಉಂಟಾಗುವ ಅಸ್ವಸ್ಥತೆಯನ್ನು ಮಹಿಳೆಯರ ಹಣೆಬರಹವೆಂದು ಪರಿಗಣಿಸಲಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು, ದೇಶವು ಅವರಿಗೆ 9 ಕೋಟಿಗೂ ಹೆಚ್ಚು ಉಜ್ವಲ ಗ್ಯಾಸ್ ಸಂಪರ್ಕಗಳನ್ನು ನೀಡಿ ಅವರನ್ನು ಹೊಗೆಯಿಂದ ಮುಕ್ತಗೊಳಿಸಿತು. ಹಿಂದಿನ ಮಹಿಳೆಯರಿಗೆ ಅದರಲ್ಲೂ ಬಡ ಮಹಿಳೆಯರಿಗೆ ಬ್ಯಾಂಕ್ ಖಾತೆ ಕೂಡ ಇರಲಿಲ್ಲ. ಪರಿಣಾಮವಾಗಿ, ಅವರು ಆರ್ಥಿಕವಾಗಿ ದುರ್ಬಲರಾಗಿದ್ದರು. ನಮ್ಮ ಸರ್ಕಾರ 23 ಕೋಟಿ ಮಹಿಳೆಯರನ್ನು ಜನ್ ಧನ್ ಖಾತೆಗಳ ಮೂಲಕ ಬ್ಯಾಂಕಿಗೆ ಜೋಡಿಸಿದೆ. ಇಲ್ಲವಾದರೆ, ಮಹಿಳೆಯರು ಅಡುಗೆಮನೆಯಲ್ಲಿ ಗೋಧಿ ಅಥವಾ ಅಕ್ಕಿಯ ಪೆಟ್ಟಿಗೆಯಲ್ಲಿ ಹಣವನ್ನು ಹೇಗೆ ಇಡುತ್ತಿದ್ದರು ಎನ್ನುವುದು ನಮಗೆ ತಿಳಿದಿದೆ. ಇಂದು ನಾವು ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಹಣವನ್ನು ಬ್ಯಾಂಕಿಗೆ ಜಮಾ ಮಾಡುವಂತೆ ವ್ಯವಸ್ಥೆ ಮಾಡಿದ್ದೇವೆ. ಇಂದು ಹಳ್ಳಿಗಳಲ್ಲಿ ಮಹಿಳೆಯರು ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ಸಣ್ಣ ಕೈಗಾರಿಕೆಗಳ ಮೂಲಕ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುತ್ತಿದ್ದಾರೆ. ಮಹಿಳೆಯರಲ್ಲಿ ಯಾವತ್ತೂ ಕೌಶಲ್ಯದ ಕೊರತೆ ಇರಲಿಲ್ಲ. ಆದರೆ ಈಗ ಅದೇ ಕೌಶಲ ಆಕೆಯನ್ನು ಹಾಗೂ ಆಕೆಯ ಕುಟುಂಬವನ್ನು ಬಲಪಡಿಸುತ್ತಿದೆ. ಇಂದು ಸರ್ಕಾರವು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಅನೇಕ ಮಾಧ್ಯಮಗಳ ಮೂಲಕ ಆರ್ಥಿಕ ಸಹಾಯವನ್ನು ನೀಡುತ್ತಿದೆ, ಇದರಿಂದ ಅವರು ಮುಂದೆ ಸಾಗಲು, ಅವರ ಕನಸುಗಳನ್ನು ನನಸಾಗಿಸಲು ಮತ್ತು ಅವರ ಇಚ್ಛೆಗೆ ಅನುಗುಣವಾಗಿ ಯಾವುದೇ ಕೆಲಸವನ್ನು ಮಾಡಬಹುದು. ಇಂದು 'ಸ್ಟ್ಯಾಂಡಪ್ ಇಂಡಿಯಾ' ಅಡಿಯಲ್ಲಿ ಶೇಕಡಾ 80 ರಷ್ಟು ಸಾಲಗಳು ನಮ್ಮ ತಾಯಂದಿರು ಮತ್ತು ಸಹೋದರಿಯರ ಹೆಸರಿನಲ್ಲಿವೆ. 70 ರಷ್ಟು ಸಾಲವನ್ನು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಮುದ್ರಾ ಯೋಜನೆಯಡಿ ನೀಡಲಾಗಿದೆ. ಇದರಲ್ಲಿ ಸಾವಿರಾರು ಕೋಟಿ ರೂಪಾಯಿಗಳು ಒಳಗೊಂಡಿವೆ. ಇನ್ನೂ ಒಂದು ಮುಖ್ಯವಾದ ವಿಷಯವನ್ನು ನಾನು ನಿಮ್ಮ ಮುಂದೆ ಪ್ರಸ್ತಾಪಿಸಲು ಬಯಸುತ್ತೇನೆ. ನಮ್ಮ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಎರಡು ಕೋಟಿಗೂ ಹೆಚ್ಚು ಮನೆಗಳನ್ನು ನೀಡಿದೆ, ಏಕೆಂದರೆ ಭಾರತದ ಪ್ರತಿಯೊಬ್ಬ ಬಡವರಿಗೂ ಪಕ್ಕಾ ಮನೆ ಇರಬೇಕು ಎಂದು ನಾವು ಕನಸು ಕಂಡಿದ್ದೇವೆ. ಗೋಡೆಗಳಷ್ಟೇ ಅಲ್ಲ ಪಕ್ಕಾ ಮೇಲ್ಛಾವಣಿ ಇರುವ ಮನೆ, ಶೌಚಾಲಯ ಇರುವ ಮನೆ, ನಲ್ಲಿಯಿಂದ ನೀರು, ವಿದ್ಯುತ್ ಸಂಪರ್ಕ, ಗ್ಯಾಸ್ ಸಂಪರ್ಕ ಹೀಗೆ ಎಲ್ಲ ಪ್ರಾಥಮಿಕ ಸೌಲಭ್ಯಗಳು ಇರುವ ಮನೆ. ನಾವು ಸರ್ಕಾರ ರಚಿಸಿದಾಗಿನಿಂದ ಎರಡು ಕೋಟಿ ಬಡ ಕುಟುಂಬಗಳಿಗಾಗಿ ಎರಡು ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಈ ಸಂಖ್ಯೆ ದೊಡ್ಡದಾಗಿದೆ. ಈಗ, ಮನೆಯ ಬೆಲೆ ಎಷ್ಟು? ಚಿಕ್ಕ ಮನೆಯಾದರೆ 1.5 ಲಕ್ಷ, ಎರಡು ಲಕ್ಷ, 2.5 ಲಕ್ಷ, ಮೂರು ಲಕ್ಷ ರೂ. ಅಂದರೆ ಮನೆ ಪಡೆದ ಎರಡು ಕೋಟಿ ಮಹಿಳೆಯರು ‘ಲಕ್ಷಾಧಿಪತಿ’ ಆಗಿದ್ದಾರೆ. ‘ಲಕ್ಷಾಧಿಪತಿ’ ಎನ್ನುವುದು ದೊಡ್ಡದಾಗಿ ಅನಿಸುತ್ತದೆ. ಬಡವರ ಬಗ್ಗೆ ಸಹಾನುಭೂತಿ ಇದ್ದರೆ ಮತ್ತು ಕೆಲಸ ಮಾಡುವ ಉದ್ದೇಶವಿದ್ದರೆ ಅದು ಸಾಧ್ಯ. ನಮ್ಮ ಎರಡು ಕೋಟಿ ತಾಯಂದಿರು ಮತ್ತು ಸಹೋದರಿಯರಲ್ಲಿ ಅನೇಕರು ಮಾಲೀಕತ್ವದ ಹಕ್ಕುಗಳನ್ನು ಪಡೆದಿದ್ದಾರೆ. ಹೆಣ್ಣಿಗೆ ಅವರ ಹೆಸರಿನಲ್ಲಿ ಜಮೀನು, ಅಂಗಡಿ, ಮನೆ ಇರದ ಕಾಲವೊಂದಿತ್ತು.  ಜಮೀನು ಅಥವಾ ಅಂಗಡಿಯು ಪತಿ, ಅಥವಾ ಮಗ ಅಥವಾ ಸಹೋದರನ ಹೆಸರಿನಲ್ಲಿದೆ. ಅದೇ ರೀತಿ ಕಾರು, ಸ್ಕೂಟರ್ ಖರೀದಿಸಿದರೆ ಅದು ಗಂಡ, ಮಗ, ಅಣ್ಣನ ಹೆಸರಿನಲ್ಲಿ ಇರುತ್ತಿತ್ತು. ಮಹಿಳೆಯ ಹೆಸರಿನಲ್ಲಿ ಮನೆ, ಕಾರು ಇರಲಿಲ್ಲ.  ಮೊದಲ ಬಾರಿಗೆ,  ನಮ್ಮ ತಾಯಂದಿರು ಮತ್ತು ಸಹೋದರಿಯರ ಹೆಸರಿನಲ್ಲಿ ಆಸ್ತಿಯನ್ನು ಹೊಂದಲು ನಿರ್ಧರಿಸಲಾಯಿತು. ಅವರು ಈ ಶಕ್ತಿಯನ್ನು ಹೊಂದಿದಾಗ, ಅವರು ಸಶಕ್ತರಾಗುತ್ತಾರೆ. ತಾಯಂದಿರು ಮತ್ತು ಸಹೋದರಿಯರು ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪಾಲುದಾರರಾಗುತ್ತಾರೆ. ಅವರ ಭಾಗವಹಿಸುವಿಕೆ ಹೆಚ್ಚಾಗುತ್ತದೆ. ಇಲ್ಲದಿದ್ದರೆ, ಹಿಂದೆ ಏನಾಗುತ್ತಿತ್ತು? ತಂದೆ ಮಗ ಯಾವುದೋ ವ್ಯವಹಾರದಲ್ಲಿ ನಿರತರಾಗಿದ್ದಾಗ ತಾಯಿ ಬಂದಾಗ  ಆಕೆಯನ್ನು ಅಡುಗೆ ಮನೆಗೆ ಹೋಗುವಂತೆ ಹೇಳಲಾಯಿತು. ಈ ಸಮಾಜದ ಸ್ಥಿತಿಯನ್ನು ನಾವು ನೋಡಿದ್ದೇವೆ. ಇಂದು, ಸಶಕ್ತ ತಾಯಂದಿರು ಮತ್ತು ಸಹೋದರಿಯರು ಯಾವುದೇ ವ್ಯವಹಾರದ ಸಾಧಕ ಬಾಧಕಗಳ ಬಗ್ಗೆ ಪುರುಷ ಸದಸ್ಯರಿಗೆ ಸಲಹೆ ನೀಡುತ್ತಿದ್ದಾರೆ. ಇಂದು ಅವರ ಭಾಗವಹಿಸುವಿಕೆ ಹೆಚ್ಚುತ್ತಿದೆ. ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಸಹ ಮೊದಲೇ ಸಮರ್ಥರಾಗಿದ್ದರು,  ಆದರೆ ಅವರ ಕನಸುಗಳು ಹಳೆಯ ಆಲೋಚನೆ ಮತ್ತು ಅವ್ಯವಸ್ಥೆಯಿಂದ ಬಂಧಿಸಲ್ಪಟ್ಟವು. ತಾಯ್ತನದ ಸಮಯದಲ್ಲಿ ಅನೇಕ ಹೆಣ್ಣುಮಕ್ಕಳು ತಮ್ಮ ಕೆಲಸವನ್ನು ಬಿಡಬೇಕಾಯಿತು. ಆ ಸಮಯದಲ್ಲಿ ಅವರಿಗೆ ಹಣದ ಅವಶ್ಯಕತೆ ಹೆಚ್ಚು  ಮತ್ತು ಅವರು ಗರ್ಭಿಣಿಯಾಗಿದ್ದಾಗ ಕೆಲಸವನ್ನು ಬಿಡಬೇಕಾದರೆ, ಅವರ ಹೊಟ್ಟೆಯೊಳಗಿನ ಮಗುವಿಗೂ ಪರಿಣಾಮ ಬೀರುತ್ತದೆ. ಎಷ್ಟೋ ಹೆಣ್ಣುಮಕ್ಕಳು ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಹೆದರಿ ತಮ್ಮ ಕೆಲಸವನ್ನು ಬಿಡಬೇಕಾಯಿತು. ಈ ಎಲ್ಲಾ ಪರಿಸ್ಥಿತಿಗಳನ್ನು ಬದಲಾಯಿಸಲು ನಾವು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಾವು ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಿದ್ದೇವೆ. ಒಂದು ವರ್ಷದಲ್ಲಿ 52 ವಾರಗಳಿವೆ,  26 ವಾರಗಳ ಹೆರಿಗೆ ರಜೆ ನೀಡಲಾಗುತ್ತದೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ನಾವು ಕಠಿಣ ಕಾನೂನುಗಳನ್ನು ಮಾಡಿದ್ದೇವೆ. ಅತ್ಯಾಚಾರದಂತಹ ಘೋರ ಅಪರಾಧಗಳಿಗೆ ಮರಣದಂಡನೆ ವಿಧಿಸುವ ಮೂಲಕ ನಮ್ಮ ಸರ್ಕಾರ ಉತ್ತಮ ಕೆಲಸ ಮಾಡಿದೆ. ಅದೇ ರೀತಿ ಗಂಡು ಮತ್ತು ಹೆಣ್ಣು ಮಕ್ಕಳನ್ನು ಸಮಾನವಾಗಿ ಪರಿಗಣಿಸಿ, ಹೆಣ್ಣು ಮಕ್ಕಳ ವಿವಾಹದ ವಯಸ್ಸನ್ನು 21 ವರ್ಷಕ್ಕೆ ಏರಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ಸಂಸತ್ತಿನ ಮುಂದೆ ಪ್ರಸ್ತಾವನೆ ಇದೆ. ಇಂದು ದೇಶವು ಸಶಸ್ತ್ರ ಪಡೆಗಳಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚಿನ ಪಾತ್ರಗಳನ್ನು ಉತ್ತೇಜಿಸುತ್ತಿದೆ. ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಪ್ರವೇಶ ಆರಂಭವಾಗಿದೆ.

ತಾಯಂದಿರೇ ಮತ್ತು ಸಹೋದರಿಯರೇ,

ಮಹಿಳಾ ಶಕ್ತಿಯ ಸಬಲೀಕರಣದ ಈ ಯಾತ್ರೆಯನ್ನು ತ್ವರಿತ ಗತಿಯಲ್ಲಿ ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನೀವೆಲ್ಲರೂ ನನ್ನ ಮೇಲೆ ತುಂಬಾ ಪ್ರೀತಿಯನ್ನು ಹೊಂದಿದ್ದೀರಿ, ನನ್ನನ್ನು ತುಂಬಾ ಆಶೀರ್ವದಿಸಿದ್ದೀರಿ, ನಾನು ನಿಮ್ಮ ಮಧ್ಯದಲ್ಲಿ ಬೆಳೆದಿದ್ದೇನೆ, ನಾನು ನಿಮ್ಮಲ್ಲಿ ಒಂದು ವಿನಂತಿಯನ್ನು ಬಯಸುತ್ತೇನೆ. ಕೆಲವು ಸಮಸ್ಯೆಗಳಲ್ಲಿ ನನಗೆ ನಿಮ್ಮ ಸಹಾಯ ಬೇಕು. ನೀವು ಏನು ಮಾಡಬೇಕು? ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಅಲ್ಲಿಗೆ ಬಂದಿರುವ ನಮ್ಮ ಕೆಲವು ಮಂತ್ರಿಗಳು ಅಥವಾ ಕಾರ್ಯಕರ್ತರು ನಿಮಗೆ ಹೇಳಿರಬಹುದು. ಒಂದು ಕುಟುಂಬವಾಗಲಿ ಅಥವಾ ಸಂನ್ಯಾಸಿಯಾಗಲಿ, ಭಾರತದ ಯಾವುದೇ ಮಗು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ ಅದು ನಮಗೆ ನೋವುಂಟುಮಾಡುತ್ತದೆಯಲ್ಲವೇ? ಅದರಿಂದ ನಮಗೆ ನೋವಾಗಬೇಕೋ ಬೇಡವೋ? ನಾವು ಈ ಸಮಸ್ಯೆಯನ್ನು ವೈಜ್ಞಾನಿಕವಾಗಿ ಪರಿಹರಿಸಬಹುದೇ ಅಥವಾ ಇಲ್ಲವೇ? ನಾವು ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲವೇ? ಆದ್ದರಿಂದ, ಅಪೌಷ್ಟಿಕತೆಯ ವಿರುದ್ಧದ ಅಭಿಯಾನದಲ್ಲಿ ನೀವು ಸಾಕಷ್ಟು ಸಹಾಯ ಮಾಡಬಹುದು ಎಂದು ನಾನು ಹೇಳುತ್ತೇನೆ. ಅದೇ ರೀತಿ ‘ಬೇಟಿ ಬಚಾವೋ, ಬೇಟಿ ಪಢಾವೋ’ ಅಭಿಯಾನದಲ್ಲಿ ನಿಮ್ಮ ಪಾತ್ರ ದೊಡ್ಡದು. ನಿಮ್ಮ ಹೆಣ್ಣುಮಕ್ಕಳೊಂದಿಗೆ ನೀವು ನಿರಂತರವಾಗಿ ಮಾತನಾಡಬೇಕು ಇದರಿಂದ ಅವರು ಗರಿಷ್ಠ ಸಂಖ್ಯೆಯಲ್ಲಿ ಶಾಲೆಗೆ ಹೋಗುವುದು ಮಾತ್ರವಲ್ಲದೆ ಅವರ ಅಧ್ಯಯನವನ್ನು ಪೂರ್ಣಗೊಳಿಸಬೇಕು. ನೀವು ಹುಡುಗಿಯರನ್ನು ಕರೆದು ಅವರೊಂದಿಗೆ ಮಾತನಾಡಬೇಕು. ನೀವು ಅವರನ್ನು ಮಠಗಳಲ್ಲಿ, ದೇವಾಲಯಗಳಲ್ಲಿ ಅಥವಾ ಎಲ್ಲಿಯಾದರೂ ಪ್ರೇರೇಪಿಸಬೇಕು. ಈಗ ಸರ್ಕಾರ ಅಭಿಯಾನವನ್ನು ಪ್ರಾರಂಭಿಸಲಿದ್ದು, ಅದರ ಅಡಿಯಲ್ಲಿ ಶಾಲೆಗಳಿಗೆ ಹೆಣ್ಣು ಮಕ್ಕಳ ದಾಖಲಾತಿಯನ್ನು ಆಚರಿಸಲಾಗುವುದು. ಇದರಲ್ಲಿ ನಿಮ್ಮ ಸಕ್ರಿಯ ಭಾಗವಹಿಸುವಿಕೆ ಕೂಡ ಬಹಳಷ್ಟು ಸಹಾಯ ಮಾಡುತ್ತದೆ.  ‘ವೋಕಲ್ ಫೋರ್ ಲೋಕಲ್’ ಅಂತಹ ಒಂದು ವಿಷಯವಾಗಿದೆ. ನೀವು ನನ್ನಿಂದ ಇದನ್ನು ಎಷ್ಟೋ ಸಲ ಕೇಳಿರಬೇಕು.  ಮಹಾತ್ಮ ಗಾಂಧೀಜಿ ಹೇಳಿದ್ದರು ಆದರೆ ನಾವು ಮರೆತಿದ್ದೇವೆ. ಇಂದಿನ ಜಗತ್ತಿನ ಸ್ಥಿತಿಯನ್ನು ಗಮನಿಸಿದರೆ  ತನ್ನ ಕಾಲ ಮೇಲೆ ನಿಲ್ಲುವ ದೇಶ ಮಾತ್ರ ಉಳಿಯಬಹುದು. ಹೊರಗಿನಿಂದ ವಸ್ತುಗಳನ್ನು ತಂದು ಜೀವನ ಮಾಡುವವನು ಏನನ್ನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ, ‘ವೋಕಲ್ ಫೋರ್ ಲೋಕಲ್’ ನಮ್ಮ ಆರ್ಥಿಕತೆಗೆ ಬಹಳ ಮುಖ್ಯವಾದ ವಿಷಯವಾಗಿದೆ ಮತ್ತು ಇದು ಮಹಿಳಾ ಸಬಲೀಕರಣಕ್ಕೂ ಬಹಳ ನಿಕಟ ಸಂಬಂಧ ಹೊಂದಿದೆ. ಹೆಚ್ಚಿನ ಸ್ಥಳೀಯ ಉತ್ಪನ್ನಗಳ ಶಕ್ತಿ ಮಹಿಳೆಯರ ಕೈಯಲ್ಲಿದೆ. ಆದ್ದರಿಂದ, ನಿಮ್ಮ ಭಾಷಣಗಳು ಮತ್ತು ಜಾಗೃತಿ ಅಭಿಯಾನಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಬಳಸಲು ನೀವು ಜನರನ್ನು ಪ್ರೋತ್ಸಾಹಿಸಬೇಕು.

ನಿಮ್ಮ ಭಕ್ತರು ಅವರು ಬಳಸುವ ವಿದೇಶಿ ನಿರ್ಮಿತ ಮತ್ತು ಭಾರತೀಯ ಉತ್ಪನ್ನಗಳ ಪಟ್ಟಿಯನ್ನು ಮಾಡಲು ಹೇಳಿ. ವಿದೇಶಿ ನಿರ್ಮಿತ ಸಣ್ಣಪುಟ್ಟ ಉತ್ಪನ್ನಗಳೂ ನಮ್ಮ ಮನೆಗಳನ್ನು ಆಕ್ರಮಿಸಿಕೊಂಡಿವೆ. ಒಂದು ಛತ್ರಿಯನ್ನು ಕೂಡ ಆಮದು ಮಾಡಿಕೊಳ್ಳಲಾಗುತ್ತದೆ. ಶತಮಾನಗಳಿಂದ ನಮ್ಮ ದೇಶದಲ್ಲಿ ಛತ್ರಿಗಳನ್ನು ತಯಾರಿಸಲಾಗುತ್ತಿದೆ. ಅದನ್ನು ಆಮದು ಮಾಡಿಕೊಳ್ಳುವ ಅಗತ್ಯವೇನು? ಇಲ್ಲಿ ನಿಮಗೆ ಎರಡು ಅಥವಾ ನಾಲ್ಕು ರೂಪಾಯಿಗಳು ಹೆಚ್ಚಾಗಬಹುದು, ಆದರೆ ಇದು ತುಂಬಾ ಜನರಿಗೆ ಜೀವನೋಪಾಯವನ್ನು ನೀಡುತ್ತದೆ. ನಾವು ವಸ್ತುಗಳನ್ನು ಆಮದು ಮಾಡಿಕೊಳ್ಳಲು ಇಷ್ಟಪಡುತ್ತೇವೆ ಎಂದು ನಾನು ಭಾವಿಸುತ್ತೇನೆ. ನೀವು ಜನರನ್ನು ಪ್ರೇರೇಪಿಸಬಹುದು ಮತ್ತು ಭಾರತೀಯರ ಬೆವರು ಇರುವ ಭಾರತೀಯ ಮಣ್ಣಿನಿಂದ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಲು ಅವರಿಗೆ ಹೇಳಬಹುದು. ನಾನು ‘ವೋಕಲ್ ಫೋರ್ ಲೋಕಲ್’ ಅನ್ನು ಪ್ರಚಾರ ಮಾಡುವಾಗ, ನಾನು ದೀಪಾವಳಿ ದೀಪಗಳ ಬಗ್ಗೆ ಮಾತ್ರ ಉಲ್ಲೇಖಿಸುತ್ತಿದ್ದೇನೆ ಎಂದು ಜನರು ಭಾವಿಸುತ್ತಾರೆ. ಇದು ದೀಪಾವಳಿ ದೀಪಗಳು ಮಾತ್ರವಲ್ಲ. ಸುತ್ತಲೂ ನೋಡಿ ಮತ್ತು ನೀವೇ ನೋಡಿ. ಅದೇ ರೀತಿ, ನೀವು ನಮ್ಮ ನೇಕಾರ ಮತ್ತು ಕುಶಲಕರ್ಮಿ ಸಹೋದರ ಸಹೋದರಿಯರನ್ನು ಭೇಟಿಯಾದಾಗ, ಅವರಿಗೆ ಸರ್ಕಾರದ ಜಿಇಎಂ ಪೋರ್ಟಲ್ ಬಗ್ಗೆ ತಿಳಿಸಿ. ಭಾರತ ಸರ್ಕಾರವು ಅಂತಹ ಪೋರ್ಟಲ್ ಅನ್ನು ರಚಿಸಿದೆ, ಅದರ ಸಹಾಯದಿಂದ ದೂರದ ಪ್ರದೇಶದಲ್ಲಿ ಎಲ್ಲಿಯಾದರೂ ವಾಸಿಸುವ ಯಾರಾದರೂ ತಮ್ಮ ಉತ್ಪನ್ನಗಳನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದು. ಇದೊಂದು ಮಹತ್ವದ ಪ್ರಯತ್ನ. ನೀವು ಸಮಾಜದ ವಿವಿಧ ವರ್ಗಗಳನ್ನು ಭೇಟಿಯಾದಾಗಲೆಲ್ಲಾ ನಾಗರಿಕರ ಕರ್ತವ್ಯಗಳನ್ನು ಒತ್ತಿಹೇಳಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನೀವು ಆಗಾಗ ಅವರಿಗೆ ‘ಪಿತೃ ಧರ್ಮ’ ಅಥವಾ ‘ಮಾತೃ ಧರ್ಮ’ದ ಬಗ್ಗೆ ಹೇಳುತ್ತಿರುತ್ತೀರಿ.  ದೇಶಕ್ಕೆ ಪ್ರಜೆಯ ಧರ್ಮವೂ ಅಷ್ಟೇ ಮುಖ್ಯ.  ಸಂವಿಧಾನದಲ್ಲಿ ಪ್ರತಿಪಾದಿಸಿರುವ ಈ ಮನೋಭಾವವನ್ನು ನಾವು ಒಟ್ಟಾಗಿ ಬಲಪಡಿಸಬೇಕಾಗಿದೆ. ಈ ಚೈತನ್ಯವನ್ನು ಬಲಪಡಿಸುವ ಮೂಲಕ ನಾವು ನವ ಭಾರತವನ್ನು ನಿರ್ಮಿಸುವ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ದೇಶಕ್ಕೆ ಆಧ್ಯಾತ್ಮಿಕ ಮತ್ತು ಸಾಮಾಜಿಕ ನಾಯಕತ್ವವನ್ನು ನೀಡುವ ಮೂಲಕ ರಾಷ್ಟ್ರ ನಿರ್ಮಾಣದ ಈ ಪಯಣದಲ್ಲಿ ನೀವು ಪ್ರತಿಯೊಬ್ಬ ವ್ಯಕ್ತಿಯನ್ನು ಸಂಪರ್ಕಿಸುತ್ತೀರಿ ಎಂದು ನನಗೆ ಖಾತ್ರಿಯಿದೆ. ನಿಮ್ಮ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ನಾವು ಶೀಘ್ರದಲ್ಲೇ ನವ ಭಾರತದ ಕನಸನ್ನು ನನಸಾಗಿಸಲು ಸಾಧ್ಯವಾಗುತ್ತದೆ. ಭಾರತದ ಕೊನೆಯ ಹಳ್ಳಿಯ ನೋಟವನ್ನು ನೀವು ಆನಂದಿಸಿರಬೇಕು. ಬಹುಶಃ ನಿಮ್ಮಲ್ಲಿ ಕೆಲವರು ವೈಟ್ ರಾನ್ ಅನ್ನು ನೋಡಲು ಹೋಗಿರಬಹುದು ಅಥವಾ ಬಹುಶಃ ಇಂದು ಹೋಗುತ್ತಿರಬಹುದು. ಇದು ತನ್ನದೇ ಆದ ಸೌಂದರ್ಯವನ್ನು ಹೊಂದಿದೆ. ಕೆಲವು ಕ್ಷಣಗಳ ಕಾಲ ಅಲ್ಲಿ ಏಕಾಂಗಿಯಾಗಿ ಕುಳಿತುಕೊಳ್ಳುವ ಮೂಲಕ ನೀವು ಆಧ್ಯಾತ್ಮಿಕ ಭಾವನೆಯನ್ನು ಸಹ ಅನುಭವಿಸಬಹುದು. ನೀವು ಹೊಸ ಪ್ರಜ್ಞೆಯನ್ನು ಅನುಭವಿಸುವಿರಿ. ನಾನು ಬಹುಕಾಲದಿಂದ ಈ ಮಣ್ಣಿಗೆ ಅಂಟಿಕೊಂಡಿದ್ದರಿಂದ ಈ ಸ್ಥಳವನ್ನು ನಾನು ತುಂಬಾ ಆನಂದಿಸಿದೆ. ನೀವು ಅಲ್ಲಿರುವುದರಿಂದ, ನೀವು ಅಲ್ಲಿಗೆ ಭೇಟಿ ನೀಡಬೇಕು ಮತ್ತು ವಿಶೇಷ ಅನುಭವವನ್ನು ಅನುಭವಿಸಬೇಕು. ನಾನು ನಿಮಗೆ ಶುಭ ಹಾರೈಸುತ್ತೇನೆ. ಅಲ್ಲಿರುವ ನಮ್ಮ ಕೆಲವು ಸಹೋದ್ಯೋಗಿಗಳೊಂದಿಗೆ ಮಾತನಾಡಿ. ನೀವೂ ಸಮಾಜಕ್ಕಾಗಿ ಮುಂದೆ ಬನ್ನಿ. ಸ್ವಾತಂತ್ರ್ಯ ಚಳವಳಿಯಲ್ಲಿ ‘ಸಂತ’ ಸಂಪ್ರದಾಯ ಪ್ರಮುಖ ಪಾತ್ರ ವಹಿಸಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದ ನಂತರ ‘ಸಂತ’ ಸಂಪ್ರದಾಯವು ದೇಶವನ್ನು ಮುನ್ನಡೆಸುವಲ್ಲಿ ಮುಂದಾಳತ್ವ ವಹಿಸಿ ಸಾಮಾಜಿಕ ಬಾಧ್ಯತೆಯಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ಅದನ್ನೇ ನಾನು ನಿಮ್ಮಿಂದ ನಿರೀಕ್ಷಿಸುತ್ತೇನೆ.  ಎಲ್ಲರಿಗೂ ಬಹಳ ಧನ್ಯವಾದಗಳು!
 
ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

***



(Release ID: 1809514) Visitor Counter : 258