ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಉಕ್ರೇನ್‌ನಿಂದ ಭಾರತೀಯರನ್ನು ತಾಯ್ನಾಡಿಗೆ ಸ್ಥಳಾಂತರಿಸಲು ಆರಂಭಿಸಿರುವ ಆಪರೇಷನ್ ಗಂಗಾ ಪಾಲುದಾರರ ಜತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವರ್ಚುವಲ್ ಸಂವಾದ

Posted On: 15 MAR 2022 8:09PM by PIB Bengaluru

ಯುದ್ಧಗ್ರಸ್ಥ ಉಕ್ರೇನ್ ನಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಸ್ಥಳಾಂತರಿಸಲು ಭಾರತ ಸರ್ಕಾರ ಆರಂಭಿಸಿರುವ ‘ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ  ಪಾಲುದಾರರ ಜತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ ಸಂವಾದ ನಡೆಸಿದರು. ಗಂಗಾ ಕಾರ್ಯಾಚರಣೆಯು ಇದುವರೆಗೆ ಉಕ್ರೇನ್‌ನಿಂದ ಸುಮಾರು 23,000 ಭಾರತೀಯ ನಾಗರಿಕರನ್ನು ಮತ್ತು 18 ದೇಶಗಳಿಗೆ ಸೇರಿದ 147 ವಿದೇಶಿ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ.
ಆಪರೇಷನ್ ಗಂಗಾ ಕಾರ್ಯಾಚರಣೆಯ ಭಾಗವಾಗಿರುವ ಉಕ್ರೇನ್, ಪೋಲೆಂಡ್, ಸ್ಲೊವಾಕಿಯಾ, ರೊಮೇನಿಯಾ ಮತ್ತು ಹಂಗೇರಿಯಲ್ಲಿನ ಭಾರತೀಯ ಸಮುದಾಯ ಮತ್ತು ಖಾಸಗಿ ವಲಯದ ಪ್ರತಿನಿಧಿಗಳು ತಮ್ಮ ಅನುಭವಗಳು, ಎದುರಿಸಿದ ಸವಾಲುಗಳನ್ನು ಪ್ರಧಾನಿ ಅವರೊಂದಿಗೆ ಸಂವಾದದಲ್ಲಿ ಹಂಚಿಕೊಂಡರು. ಅಲ್ಲದೆ, ಸಂಕೀರ್ಣ ಮಾನವೀಯ ಕಾರ್ಯಾಚರಣೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದಕ್ಕೆ ಆಗಿರುವ ತೃಪ್ತಿ, ಗೌರವ ಮತ್ತು ನೈಜ ಕೊಡುಗೆಯ ಬಗ್ಗೆ ಅತೀವ ಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಾಚರಣೆಯ ಯಶಸ್ಸಿಗೆ ಅವಿರತ ಶ್ರಮಿಸಿದ ಭಾರತೀಯ ಸಮುದಾಯದ ಮುಖಂಡರು, ಸ್ವಯಂಸೇವಕ ಗುಂಪುಗಳು, ಕಂಪನಿಗಳು, ಖಾಸಗಿ ವ್ಯಕ್ತಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಪ್ರಧಾನಮಂತ್ರಿ ಅವರು ಆತ್ಮೀಯ ಮೆಚ್ಚುಗೆ ಮತ್ತು ಶ್ಲಾಘನೆ ವ್ಯಕ್ತಪಡಿಸಿದರು. ಆಪರೇಷನ್ ಗಂಗಾದಲ್ಲಿ ಭಾಗಿಯಾಗಿರುವ ಎಲ್ಲಾ ಪಾಲುದಾರರು ಪ್ರದರ್ಶಿಸಿದ ದೇಶಭಕ್ತಿಯ ಉತ್ಸಾಹ, ಸಮುದಾಯ ಸೇವೆಯ ಪ್ರಜ್ಞೆ ಮತ್ತು ತಂಡದ ಮನೋಭಾವವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ಪ್ರಧಾನಮಂತ್ರಿ ಅವರು ವಿಶೇಷವಾಗಿ ವಿವಿಧ ಸಮುದಾಯ ಸಂಸ್ಥೆಗಳ ಸೇವೆಯನ್ನು ಶ್ಲಾಘಿಸಿದರು. ಸಾಗರೋತ್ತರ ನೆಲದಲ್ಲಿ  ಅವರು ನಿಸ್ವಾರ್ಥ ಸೇವೆಯ ಭಾರತೀಯ ನಾಗರಿಕತೆಯ ಮೌಲ್ಯಗಳನ್ನು ಸಾಕಾರಗೊಳಿಸಿದ್ದಾರೆ, ಆ ಮೌಲ್ಯಗಳು ಮುಂದುವರಿಯುತ್ತಿರುವುದಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ರಷ್ಯಾ-ಉಕ್ರೇನ್ ಯುದ್ಧ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯ ಪ್ರಜೆಗಳ ಸುರಕ್ಷತೆ ಖಾತ್ರಿಪಡಿಸಲು ಭಾರತ ಸರ್ಕಾರವು ಮಾಡಿದ ಸಂಘಟಿತ ಪ್ರಯತ್ನಗಳ ಕುರಿತು ಮಾತನಾಡಿದ ಪ್ರಧಾನಿ, ಉಕ್ರೇನ್ ಮತ್ತು ಅದರ ನೆರೆಹೊರೆಯ ರಾಷ್ಟ್ರಗಳ ನಾಯಕರೊಂದಿಗೆ ನಿರಂತರ ವೈಯಕ್ತಿಕ ಸಂವಾದ ನಡೆಸಿದ್ದನ್ನು ಸ್ಮರಿಸಿದರು. ಎಲ್ಲಾ ವಿದೇಶಿ ಸರ್ಕಾರಗಳಿಂದ ಪಡೆದ ಬೆಂಬಲಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.
ಹೊರರಾಷ್ಟ್ರಗಳಲ್ಲಿರುವ ಭಾರತೀಯರ ಸುರಕ್ಷತೆಗೆ ಭಾರತ ಸರ್ಕಾರವು ಸದಾ ಆದ್ಯತೆ ನೀಡುತ್ತಾ ಬಂದಿದೆ ಎಂದು ಪುನರುಚ್ಚರಿಸಿದ ಪ್ರಧಾನಿ, ಯಾವುದೇ ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲೂ ಭಾರತ ತನ್ನ ನಾಗರಿಕರಿಗೆ ಸಹಾಯ ಮಾಡಲು ನಿರಂತರ ನಿಷ್ಠೆ ತೋರುತ್ತಾ ಬಂದಿದೆ ಎಂದು ಸ್ಮರಿಸಿದರು. ‘ವಸುಧೈವ ಕುಟುಂಬಕಂ’ನ ಭಾರತದ ಪ್ರಾಚೀನ ತತ್ತ್ವಶಾಸ್ತ್ರದಲ್ಲೇ ಮುನ್ನಡೆಯುತ್ತಾ ಬಂದಿರುವ ಭಾರತವು ತುರ್ತು ಸಂದರ್ಭಗಳಲ್ಲಿ ಇತರ ದೇಶಗಳ ಪ್ರಜೆಗಳಿಗೆ ಮಾನವೀಯ ಬೆಂಬಲವನ್ನು ವಿಸ್ತರಿಸುತ್ತಾ ಬಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.

***


(Release ID: 1806436) Visitor Counter : 263