ಪ್ರಧಾನ ಮಂತ್ರಿಯವರ ಕಛೇರಿ

ʻಆಪರೇಷನ್ ಗಂಗಾʼ ಪರಿಶೀಲನೆಗಾಗಿ ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

Posted On: 28 FEB 2022 10:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಮರಳಿ ಕರೆತರಲು ʻಆಪರೇಶನ್ ಗಂಗಾʼ ಅಡಿಯಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಪರಿಶೀಲಿಸಲು ಇಂದು ತಮ್ಮ ನೇತೃತ್ವದಲ್ಲಿ ಎರಡನೇ ಉನ್ನತ ಮಟ್ಟದ ಸಭೆ ನಡೆಸಿದರು. ಅಲ್ಲಿನ ಎಲ್ಲಾ ಭಾರತೀಯ ಪ್ರಜೆಗಳು ಸುರಕ್ಷಿತ ಮತ್ತು ಸುಭದ್ರವಾಗಿರಲು ಇಡೀ ಸರ್ಕಾರಿ ಯಂತ್ರವು ಹಗಲಿರುಳು ಶ್ರಮಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ವಿವಿಧ ರಾಷ್ಟ್ರಗಳಿಗೆ ತಮ್ಮ ವಿಶೇಷ ಪ್ರತಿನಿಧಿಗಳಾಗಿ ನಾಲ್ವರು ಹಿರಿಯ ಸಚಿವರು ತೆರಳುವುದರಿಂದ ಸ್ಥಳಾಂತರ ಪ್ರಯತ್ನಗಳಿಗೆ ಹುರುಪು ಬರಲಿದೆ ಎಂದು ಪ್ರಧಾನಿ ಗಮನ ಸೆಳೆದರು. ಇದು ವಿಷಯದಲ್ಲಿ ಸರ್ಕಾರ ನೀಡುವ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ. ಉಕ್ರೇನ್ ಗಡಿಗಳಲ್ಲಿ ಮಾನವೀಯ ಪರಿಸ್ಥಿತಿಯನ್ನು ಎದುರಿಸಲು ಉಕ್ರೇನ್‌ಗೆ ಪರಿಹಾರ ಪೂರೈಕೆಯ ಮೊದಲ ಕಂತನ್ನು ನಾಳೆ ಕಳುಹಿಸಲಾಗುವುದು ಎಂದು ಪ್ರಧಾನಿ ಹೇಳಿದರು.

ʻವಸುಧೈವ ಕುಟುಂಬಕಂʼ (ಇಡೀ ವಿಶ್ವವೇ ನಮ್ಮ ಕುಟುಂಬ) ಎಂಬ ಭಾರತದ ಧ್ಯೇಯವಾಕ್ಯದ ಆಶಯದಂತೆ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ನೆರೆಯ ರಾಷ್ಟ್ರಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಜನರಿಗೂ ಭಾರತ ಸಹಾಯ ಮಾಡುತ್ತದೆ. ಅವರೂ ಸಹ ಭಾರತದ ನೆರವು ಪಡೆಯಬಹುದು ಎಂದು ಪ್ರಧಾನಮಂತ್ರಿಯವರು ಹೇಳಿದರು.

***



(Release ID: 1802260) Visitor Counter : 172