ಪ್ರಧಾನ ಮಂತ್ರಿಯವರ ಕಛೇರಿ

ಆರೋಗ್ಯ ವಲಯದ ಮೇಲೆ ಕೇಂದ್ರ ಬಜೆಟ್ 2022 ರ ಧನಾತ್ಮಕ ಪರಿಣಾಮ ಕುರಿತ ವೆಬಿನಾರಿನಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 26 FEB 2022 2:06PM by PIB Bengaluru

ನಮಸ್ಕಾರ್ ಜೀ!

ನನ್ನ ಸಂಪುಟ ಸಹೋದ್ಯೋಗಿಗಳೇ, ದೇಶಾದ್ಯಂತದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಾರ್ವಜನಿಕ ಮತ್ತು ಖಾಸಗಿ ವಲಯದ ಎಲ್ಲಾ ವೃತ್ತಿಪರರೇ ಹಾಗು ಅರೆವೈದ್ಯಕೀಯ, ನರ್ಸಿಂಗ್, ಆರೋಗ್ಯ ನಿರ್ವಹಣೆ, ತಂತ್ರಜ್ಞಾನ ಮತ್ತು ಸಂಶೋಧನೆ ಕ್ಷೇತ್ರಗಳಿಗೆ ಸಂಬಂಧಪಟ್ಟ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ

ಎಲ್ಲಕ್ಕಿಂತ ಮೊದಲು ಜಗತ್ತಿನ ಅತ್ಯಂತ ದೊಡ್ಡ ಲಸಿಕಾ ಆಂದೋಲನವನ್ನು ಯಶಸ್ವಿಯಾಗಿ ನಡೆಸುತ್ತಿರುವುದಕ್ಕೆ 130 ಕೋಟಿ ಭಾರತೀಯರ ಪರವಾಗಿ ನಾನು ನಿಮ್ಮೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ!. ಭಾರತದ ಆರೋಗ್ಯ ರಕ್ಷಣಾ ಮತ್ತು ಚಿಕಿತ್ಸಾ ವ್ಯವಸ್ಥೆ ಎಷ್ಟೊಂದು ದಕ್ಷವಾಗಿದೆ, ಅದು ಹೇಗೆ ಆಂದೋಲನದೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದೀರಿ!.

ಸ್ನೇಹಿತರೇ,

ಕಳೆದ 7 ವರ್ಷಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ಮತ್ತು ಪರಿವರ್ತಿಸುವ ನಮ್ಮ ಪ್ರಯತ್ನಗಳ ವಿಸ್ತರಣೆ ಬಜೆಟಿನಲ್ಲಾಗಿದೆ. ಮತ್ತು ಬಜೆಟ್ ತಜ್ಞರು ಇದನ್ನು ಮೊದಲ ದಿನದಿಂದಲೇ ಅರಿತು ಕೊಂಡಿದ್ದಾರೆ, ನಮ್ಮ ಬಜೆಟ್ ಮತ್ತು ನೀತಿಗಳಲ್ಲಿ ನಿರಂತರತೆ ಮತ್ತು ಪ್ರಗತಿಪರತೆ ಅನಾವರಣಗೊಂಡಿದೆ. ನಾವು ನಮ್ಮ ಆರೋಗ್ಯ ರಕ್ಷಣಾ ವ್ಯವಸ್ಥೆಗಳಲ್ಲಿ ಸಮಗ್ರ ಧೋರಣೆಯನ್ನು ಅಡಕಗೊಳಿಸಿದ್ದೇವೆ. ಇಂದು ನಮ್ಮ ಆದ್ಯತೆ ಆರೋಗ್ಯದ ಮೇಲೆ ಮಾತ್ರವಲ್ಲ ಅಷ್ಟೇ ಸಮಾನವಾಗಿ ಕ್ಷೇಮವನ್ನೂ ಒಳಗೊಂಡಿದೆ. ನಾವು ಅನಾರೋಗ್ಯಕ್ಕೆ ಕಾರಣವಾದ ಸಂಗತಿಗಳನ್ನು ನಿವಾರಿಸಲು ಮತ್ತು ಸಮಾಜದಲ್ಲಿ ಕ್ಷೇಮವನ್ನು ಸ್ಥಾಪಿಸಲು ಹಾಗು ರೋಗಗಳಿಗೆ ಚಿಕಿತ್ಸೆಯನ್ನು ಒಳಗೊಳಿಸಿಕೊಳ್ಳಲು ಆದ್ಯತೆಯನ್ನು ನೀಡುತ್ತಿದ್ದೇವೆ. ಆದುದರಿಂದ ನಾವು ಸ್ವಚ್ಛ ಭಾರತ್ ಅಭಿಯಾನ, ಫಿಟ್ ಇಂಡಿಯಾ ಆಂದೋಲನ, ಪೋಷಣ್ ಆಂದೋಲನ, ಇಂದ್ರಧನುಷ್ ಆಂದೋಲನ, ಆಯುಷ್ಮಾನ್ ಭಾರತ್ ಮತ್ತು ಜಲ್ ಜೀವನ್ ಆಂದೋಲನವನ್ನು ಸಾಧ್ಯವಾದಷ್ಟು ವಿಸ್ತಾರ ವ್ಯಾಪ್ತಿಯಲ್ಲಿ ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ.

ಸ್ನೇಹಿತರೇ,

ಆರೋಗ್ಯ ಕ್ಷೇತ್ರದಲ್ಲಿ ಸಮಗ್ರ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆ ಬಗ್ಗೆ ನಾವು ಮಾತನಾಡುವಾಗ ಅದರಲ್ಲಿ ನಾವು ಮೂರು ಸಂಗತಿಗಳನ್ನು ಅಡಕಗೊಳಿಸಿಕೊಂಡಿರುತ್ತೇವೆ. ಮೊದಲನೆಯದಾಗಿ ಮೂಲಸೌಕರ್ಯದ ವಿಸ್ತರಣೆ ಮತ್ತು ಆಧುನಿಕ ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದ ಮಾನವ ಸಂಪನ್ಮೂಲ. ಎರಡನೆಯದಾಗಿ ಸಾಂಪ್ರದಾಯಿಕ ಭಾರತೀಯ ವೈದ್ಯ ಪದ್ಧತಿಯಾದ ಆಯುಷ್ ನಲ್ಲಿ ಸಂಶೋಧನೆಗೆ ಉತ್ತೇಜನ ಮತ್ತು ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಅದರ ಕ್ರಿಯಾತ್ಮಕ ಬಳಕೆ ಹಾಗು ಮೂರನೆಯದಾಗಿ ಆಧುನಿಕ ಮತ್ತು ಭವಿಷ್ಯತ್ತಿನ ತಂತ್ರಜ್ಞಾನ ಮೂಲಕ ದೇಶದ ಪ್ರತಿಯೊಂದು ಭಾಗದಲ್ಲಿಯೂ ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಮತ್ತು ಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣಾ ಸೌಲಭ್ಯಗಳ ಒದಗಣೆ. ಇದಕ್ಕಾಗಿ, ನಾವು ಆರೋಗ್ಯ ವಲಯದ ಬಜೆಟನ್ನು ಸಾಕಷ್ಟು ಹೆಚ್ಚಿಸಿದ್ದೇವೆ.

ಸ್ನೇಹಿತರೇ,

ನಾವು ಭಾರತದಲ್ಲಿ ದೊಡ್ಡ ನಗರಗಳಿಗೆ ಸೀಮಿತವಾಗಿ ಮಾತ್ರವಲ್ಲ ಅದಕ್ಕಿಂತಲೂ ಹೊರಗೆ ಇಂತಹ ಆರೋಗ್ಯ ಮೂಲಸೌಕರ್ಯವನ್ನು ನಿರ್ಮಾಣ ಮಾಡಲು ಬಯಸುತ್ತೇವೆ. ಕೊರೊನಾ ಬಳಿಕ ನಾನು ಬಗ್ಗೆ ಸತತವಾಗಿ ಜಗತ್ತಿನೆದುರು ಮಾತನಾಡುತ್ತಿರುವುದನ್ನು ನೀವು ನೋಡಿರಬಹುದು. ನಾನುಒಂದು ಭೂಗ್ರಹ ಒಂದು ಆರೋಗ್ಯಕುರಿತು ಮಾತನಾಡುತ್ತಿದ್ದೇನೆ. ಅದೇ ಉತ್ಸಾಹದಲ್ಲಿ, ಸ್ಫೂರ್ತಿಯಲ್ಲಿ ನಾವು ಭಾರತದಲ್ಲಿಯೂ ಕೂಡಾಒಂದು ಬಾರತ ಒಂದು ಆರೋಗ್ಯವನ್ನು ಅಭಿವೃದ್ಧಿ ಮಾಡಬೇಕಾಗಿದೆ. ಆಂದೋಲನ ಕೂಡಾ ಅದೇ ರೀತಿಯದ್ದು, ಅಂದರೆ ಅಂತಹದೇ ಆರೋಗ್ಯ ಸೌಲಭ್ಯಗಳು ದೂರದ ಗ್ರಾಮೀಣ ಪ್ರದೇಶಗಳಲ್ಲಿಯೂ ಅಭಿವೃದ್ಧಿಯಾಗಬೇಕು. ಸಂಕೀರ್ಣ ಆರೋಗ್ಯ ರಕ್ಷಣಾ ಮತ್ತು ಶುಶ್ರೂಷಾ ವ್ಯವಸ್ಥೆಗಳು ಬ್ಲಾಕ್ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಮತ್ತು ಗ್ರಾಮಗಳಲ್ಲಿ ಇರುವಂತೆ ಖಾತ್ರಿಪಡಿಸಬೇಕು. ಮೂಲ ಸೌಕರ್ಯವನ್ನು ನಿರ್ವಹಿಸಿಕೊಂಡು ಮತ್ತು ಅದನ್ನು ಕಾಲ ಕಾಲಕ್ಕೆ ಉನ್ನತೀಕರಿಸಿಕೊಂಡು ಹೋಗುವುದು ಬಹಳ ಮುಖ್ಯ. ಇದಕ್ಕೆ ಖಾಸಗಿ ವಲಯ ಮತ್ತು ಇತರ ವಲಯಗಳು ಬಹಳ ಉತ್ಸಾಹದಿಂದ, ಆಸಕ್ತಿಯಿಂದ ಮುಂದೆ ಬರಬೇಕು.

ಸ್ನೇಹಿತರೇ,

ಉತ್ತಮ ನೀತಿಯನ್ನು ರಚಿಸುವುದರ ಜೊತೆಗೆ ಅದರ ಅನುಷ್ಠಾನ ಕೂಡಾ ಅಷ್ಟೇ ಮುಖ್ಯ. ಆದುದರಿಂದ ನೀತಿಗಳನ್ನು ಅನುಷ್ಠಾನಗೊಳಿಸುವ ಜನರು ಅಥವಾ ಸಂಸ್ಥೆಗಳಿಗೆ ಹೆಚ್ಚು ಗಮನವನ್ನು ಕೊಡುವುದು ಅವಶ್ಯವಾಗಿದೆ. ಆದುದರಿಂದ ಬಜೆಟಿನಲ್ಲಿ ನಾವು ಮತ್ತೆ 2 ಲಕ್ಷ ಅಂಗನವಾಡಿಗಳನ್ನುಸಕ್ಷಮ ಆಂಗನವಾಡಿಗಳುಎಂದು ಸಶಕ್ತೀಕರಣಗೊಳಿಸುವ ಪ್ರಸ್ತಾವನೆಯನ್ನು ಅಡಕಗೊಳಿಸಿಕೊಂಡಿದ್ದೇವೆ.ಅದು ಪೋಷಣ್-2.0 ಗೂ ಅನ್ವಯಿಸುತ್ತದೆ.

ಸ್ನೇಹಿತರೇ,

ಪ್ರಾಥಮಿಕ ಆರೋಗ್ಯ ಜಾಲವನ್ನು ಬಲಪಡಿಸಲು, 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ತ್ವರಿತಗತಿಯಲ್ಲಿ ಸ್ಥಾಪಿಸಲಾಗುತ್ತಿದೆ. ಇದುವರೆಗೆ 85,000ಕ್ಕೂ ಅಧಿಕ  ಕೇಂದ್ರಗಳಲ್ಲಿ ದೈನಂದಿನ ತಪಾಸಣೆ, ಲಸಿಕೆ ನೀಡಿಕೆ, ಮತ್ತು ಪರೀಕ್ಷೆಗಳ ಸೌಲಭ್ಯಗಳು ದೊರೆಯುತ್ತವೆ. ಬಜೆಟಿನಲ್ಲಿ ಮಾನಸಿಕ ಆರೋಗ್ಯವನ್ನೂ ಪಟ್ಟಿಗೆ ಸೇರಿಸಲಾಗಿದೆ. ಸೌಲಭ್ಯಗಳನ್ನು ಗರಿಷ್ಠ ಜನರಿಗೆ ತಲುಪಿಸಲು ನಾವು ದೃಢ ಪ್ರಯತ್ನಗಳನ್ನು ಮಾಡಬೇಕಾಗಿದೆ ಮತ್ತು ಜನರಲ್ಲಿ ಅರಿವನ್ನು ಮೂಡಿಸಲು ಇಂತಹ ಪ್ರಯತ್ನಗಳ ಅವಶ್ಯಕತೆ ಇದೆ. ನೀವು ಕೂಡಾ ಇದರತ್ತ ನಿಮ್ಮ ಪ್ರಯತ್ನಗಳನ್ನು ವಿಸ್ತರಿಸಬೇಕಾಗಿದೆ.

ಸ್ನೇಹಿತರೇ,

ಉತ್ತಮ ಆರೋಗ್ಯ ಮೂಲಸೌಕರ್ಯ ಬರೇ ಸವಲತ್ತು ಮಾತ್ರ ಅಲ್ಲ.ಇದು ಆರೋಗ್ಯ ಶುಶ್ರೂಷಾ ಸೇವೆಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಮೂಲಕ ಹೆಚ್ಚು ಉದ್ಯೋಗಾವಕಾಶಗಳ ನಿರ್ಮಾಣಕ್ಕೆ ಬಹಳ ದೊಡ್ಡ ಹಾದಿಯನ್ನು ಮಾಡಿಕೊಡುತ್ತದೆ. ವರ್ಷದಿಂದ ವರ್ಷಕ್ಕೆ ಆರೋಗ್ಯ ರಕ್ಷಣಾ ಸೇವೆಗಳ ಬೇಡಿಕೆ ಹೆಚ್ಚುತ್ತಿದ್ದು, ಅದಕ್ಕನುಗುಣವಾಗಿ ನಾವು ಕೂಡಾ ಕೌಶಲ್ಯಯುಕ್ತ ಆರೋಗ್ಯ ವೃತ್ತಿಪರರನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿಯೇ ಬಜೆಟಿನಲ್ಲಿ ಆರೋಗ್ಯ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ, ಶುಶ್ರೂಷೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಕಳೆದ ಬಜೆಟಿನಲ್ಲಿ ನೀಡಿದುದಕ್ಕಿಂತ ಹೆಚ್ಚಿನ ಮೊತ್ತವನ್ನು ಒದಗಿಸಲಾಗಿದೆ. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿ ಸುಧಾರಣೆಗಳಿಗೆ ಮತ್ತು ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಸಂಬಂಧಿಸಿ ನಮ್ಮ ಬದ್ಧತೆಗಳ ಬಗ್ಗೆ ನಿಮ್ಮೆಲ್ಲರಿಗೂ ತಿಳಿದಿದೆ. ಸುಧಾರಣೆಗಳನ್ನು ತಂತ್ರಜ್ಞಾನ ಬಳಸಿ ಮುಂದೆ ಕೊಂಡೊಯ್ಯುವುದು ಹೇಗೆ?, ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಇನ್ನಷ್ಟು ಎತ್ತರಿಸುವುದು ಹೇಗೆ?.ಅದನ್ನು ಇನ್ನಷ್ಟು ಒಳಗೊಳ್ಳುವಂತೆ ಮಾಡುವುದು ಮತ್ತು ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡುವುದು ಹೇಗೆ?.ಇವೆಲ್ಲ ನೀವು ಒಂದು ನಿಗದಿತ ಕಾಲಮಿತಿಯೊಳಗೆ ಕೈಗೊಳ್ಳಬೇಕಾದ ದೃಢ ಕ್ರಮಗಳಲ್ಲಿ ಕೆಲವು.

ಸ್ನೇಹಿತರೇ,

ಸಂಶೋಧನೆ, ಔಷಧಿ ಮತ್ತು ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ವೈದ್ಯಕೀಯ ಸಲಕರಣೆಗಳಲ್ಲಿ ಸ್ವಾವಲಂಬನೆ ಸಾಧಿಸದ ಹೊರತು ಆರೋಗ್ಯ ವಲಯಕ್ಕೆ ಸಂಬಂಧಿಸಿದಂತೆ ನಮ್ಮ ಧ್ಯೇಯೋದ್ದೇಶಗಳನ್ನು ಈಡೆರಿಸುವುದು ಸಾಧ್ಯವಿಲ್ಲ. ಕೊರೊನಾ ಅವಧಿಯಲ್ಲಿ ನಾವಿದನ್ನು ಕಂಡುಕೊಂಡಿದ್ದೇವೆ. ತಳಿ ವಿಜ್ಞಾನ, ಜೆನೆರಿಕ್  ಔಷಧಿಗಳು, ಲಸಿಕೆಗಳು ಮತ್ತು ಬಯೋಸಿಮಿಲರ್ಸ್ ಕ್ಷೇತ್ರಗಳಲ್ಲಿ ನಾವು ಬೆಳವಣಿಗೆ ಸಾಮರ್ಥ್ಯವನ್ನು ಹೊಂದಬೇಕು. ಅದಕ್ಕಾಗಿ ನಾವು ವೈದ್ಯಕೀಯ ಸಲಕರಣೆಗಳು ಮತ್ತು ಔಷಧಿಗಳಿಗೆ ಕಚ್ಚಾ ವಸ್ತುಗಳಿಗಾಗಿ ಪಿ.ಎಲ್.. ಯೋಜನೆಗಳನ್ನು ಆರಂಭ ಮಾಡಿದ್ದೇವೆ.

ಸ್ನೇಹಿತರೇ,

ಕೊರೊನಾ ಲಸಿಕಾ ಕಾರ್ಯಕ್ರಮದಲ್ಲಿ ಕೊವಿನ್  ವೇದಿಕೆಯ ಮೂಲಕ ನಮ್ಮ ಡಿಜಿಟಲ್ ತಂತ್ರಜ್ಞಾನದ ಶಕ್ತಿಯನ್ನು ಇಡೀ ಜಗತ್ತೇ ನೋಡಿದೆ. ಆಯುಷ್ಮಾನ್ ಭಾರತ್ ಡಿಜಿಟಲ್ ಆಂದೋಲನವು ಬಳಕೆದಾರ ಮತ್ತು ಸೇವಾ ಪೂರೈಕೆದಾರರ ನಡುವೆ ಸರಳ ಇಂಟರ್ಫೇಸ್ ನ್ನು ಒದಗಿಸುತ್ತದೆ. ಇದರಿಂದ ದೇಶದಲ್ಲಿ ಚಿಕಿತ್ಸೆ ಪಡೆಯುವುದು ಮತ್ತು ಚಿಕಿತ್ಸೆ ನೀಡುವುದು ಬಹಳ ಸುಲಭವಾಗಲಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಭಾರತದ ಗುಣಮಟ್ಟದ ಮತ್ತು ಕೈಗೆಟಕುವ ದರದಲ್ಲಿ ಆರೋಗ್ಯ ಶುಶ್ರೂಷಾ ಸೇವೆ ಜಾಗತಿಕ ಮಟ್ಟಕ್ಕೆ ಲಭ್ಯವಾಗಲಿದೆ. ಇದರಿಂದ ವೈದ್ಯಕೀಯ ಪ್ರವಾಸೋದ್ಯಮ ಹೆಚ್ಚಲಿದೆ ಮತ್ತು ದೇಶವಾಸಿಗಳಿಗೆ ಆದಾಯ ಅವಕಾಶಗಳೂ ಹೆಚ್ಚಲಿವೆ. ವರ್ಷದ ಬಜೆಟಿನಲ್ಲಿ ಆಂದೋಲನವನ್ನು ಇನ್ನಷ್ಟು ಬಲಪಡಿಸಲು ನಾವು ಮುಕ್ತ ವೇದಿಕೆಯಾದ ಆಯುಷ್ಮಾನ್ ಭಾರತ್ ಡಿಜಿಟಲ್ ಆಂದೋಲನದ ಬಗ್ಗೆ ಮಾತನಾಡಿದ್ದೇವೆ. ಇಂತಹ ಹೊಸ ಉಪಕ್ರಮಗಳ ಪರಿಣಾಮ ಮತ್ತು ವ್ಯಾಪ್ತಿಯ ಬಗ್ಗೆ ನಾವು ಗಂಭೀರವಾಗಿ ಚರ್ಚಿಸಬೇಕಾಗಿದೆ.

ಸ್ನೇಹಿತರೇ,

ಕೊರೊನಾ ಅವಧಿಯಲ್ಲಿ ದೂರ ಪ್ರದೇಶದ ಆರೋಗ್ಯ ರಕ್ಷಣಾ ವ್ಯವಸ್ಥೆ, ಟೆಲಿಮೆಡಿಸಿನ್, ಟೆಲಿ ಕನ್ಸಲ್ಟೇಷನ್ ಗಳು ಸುಮಾರು 2.5 ಕೋಟಿ ರೋಗಿಗಳಿಗೆ ಪರಿಹಾರವಾಗಿದ್ದವು. ತಂತ್ರಜ್ಞಾನ ನಗರ ಮತ್ತು ಗ್ರಾಮೀಣ ಭಾರತದ ನಡುವಣ ಆರೋಗ್ಯ ಸೇವಾ ಲಭ್ಯತೆಯ ಅಂತರವನ್ನು ಕಡಿಮೆ ಮಾಡಲು ಬಹಳ ಪ್ರಯೋಜನಕಾರಿಯಾಗಿದೆ. ಈಗ ನಾವು ದೇಶದ ಪ್ರತೀ ಗ್ರಾಮಗಳಿಗೆ ಫೈಬರ್ ಜಾಲವನ್ನು ಒದಗಿಸುತ್ತಿದ್ದೇವೆ. 5 ಜಿ ತಂತ್ರಜ್ಞಾನ ಕೂಡ ಶೀಘ್ರವೇ ಲಭ್ಯವಾಗಲಿದೆ. 5 ಜಿ ತಂತ್ರಜ್ಞಾನವನ್ನು ಬಳಸಿ ದೂರಪ್ರದೇಶಗಳಿಗೆ ಆರೋಗ್ಯ ರಕ್ಷಣಾ ಸೇವೆಯನ್ನು ನೀಡುವಲ್ಲಿ ನಮ್ಮ ಖಾಸಗಿ ವಲಯವು ತನ್ನ ಸಹಭಾಗಿತ್ವವನ್ನು ಹೆಚ್ಚಿಸಬೇಕು. ನಮ್ಮ ಹಳ್ಳಿಗಳಲ್ಲಿ ಅನೇಕ ಔಷಧಾಲಯಗಳು ಮತ್ತು ಆಯುಷ್ ಕೇಂದ್ರಗಳನ್ನು ನಾವು ಹೊಂದಿದ್ದೇವೆ. ಅವುಗಳನ್ನು ನಾವು ಹೇಗೆ ನಗರಗಳಲ್ಲಿರುವ ದೊಡ್ಡ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳ ಜೊತೆ ಜೋಡಿಸಬಹುದು?. ನಾವು ಹೇಗೆ ದೂರ ಪ್ರದೇಶಗಳಿಗೆ ಆರೋಗ್ಯ ಸೇವೆಯನ್ನು ಉತ್ತೇಜಿಸಬಹುದು ಹಾಗು ಟೆಲಿ ಕನ್ಸಲ್ಟೇಶನ್ ಮೂಲಕ ಇದನ್ನು ಒದಗಿಸಬಹುದು?. ಕ್ಷೇತ್ರಗಳಲ್ಲಿಯೂ ನಾವು ನಿಮ್ಮ ಸಲಹೆಗಳನ್ನು ಎದುರು ನೋಡುತ್ತಿದ್ದೇವೆ. ಆರೋಗ್ಯ ವಲಯದಲ್ಲಿರುವ ನಮ್ಮ ಖಾಸಗಿ ಕಂಪೆನಿಗಳು ಆರೋಗ್ಯ ರಕ್ಷಣಾ ವಲಯದಲ್ಲಿ ಡ್ರೋನ್ ತಂತ್ರಜ್ಞಾನ ಬಳಕೆಯನ್ನು ವಿಸ್ತರಿಸುವುದಕ್ಕೆ ಮುಂದೆ ಬರಬೇಕು.

ಸ್ನೇಹಿತರೇ,

ಇಂದು ಇಡೀ ಜಗತ್ತೇ ಆಯುಷ್ ಪಾತ್ರವನ್ನು ಒಪ್ಪಿಕೊಂಡಿದೆ. ಡಬ್ಲ್ಯು.ಎಚ್.. ತನ್ನ ಏಕೈಕ ಸಾಂಪ್ರದಾಯಿಕ ವೈದ್ಯಕೀಯದ ಜಾಗತಿಕ ಕೇಂದ್ರವನ್ನು ಭಾರತದಲ್ಲಿ ಸ್ಥಾಪಿಸಲು ಮುಂದಾಗಿರುವುದು ಬಹಳ ಹೆಮ್ಮೆಯ ಸಂಗತಿ. ಈಗ ಆಯುಷ್ ಮೂಲಕ ನಮಗಾಗಿ ಮತ್ತು ಜಗತ್ತಿಗಾಗಿ ಉತ್ತಮ ಪರಿಹಾರಗಳನ್ನು ರೂಪಿಸುವುದು ಹೇಗೆ ಎಂಬುದನ್ನು ನಾವೆಲ್ಲ ಚಿಂತಿಸಬೇಕಾಗಿದೆ. ಕೊರೊನಾ ಕಾಲಘಟ್ಟವು ಆರೋಗ್ಯ ಶುಶ್ರೂಷಾ ವ್ಯವಸ್ಥೆ ಮತ್ತು ಔಷಧಿಗಳಿಗೆ ಸಂಬಂಧಿಸಿ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಡುವ ಅವಕಾಶವಾಗಿದೆ. ಆದುದರಿಂದ ವೆಬಿನಾರಿನಲ್ಲಿ ಕಾಲಮಿತಿ ನಿಗದಿ ಮಾಡಿದ ಅವಶ್ಯ ಕ್ರಿಯಾ ಯೋಜನೆ ರೂಪುಗೊಂಡರೆ, ಅದು ಬಹಳ ದೊಡ್ಡ ಸೇವೆಯಾಗುತ್ತದೆ. ಮತ್ತು ನಾನು ಇನ್ನೊಂದು ಸಂಗತಿಯನ್ನು ಹೇಳಬಯಸುತ್ತೇನೆ, ಅದರಲ್ಲೂ ವಿಶೇಷವಾಗಿ ನನ್ನ ಖಾಸಗಿ ವಲಯದ ಸ್ನೇಹಿತರಿಗೆ. ಇಂದು ನಮ್ಮ ಮಕ್ಕಳು ಜಗತ್ತಿನ ಸಣ್ಣ ದೇಶಗಳಿಗೆ ಕಲಿಕೆಗಾಗಿ ಹೋಗುತ್ತಿದ್ದಾರೆ, ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಕಲಿಯಲು ಹೋಗುತ್ತಿದ್ದಾರೆ. ಭಾಷೆಯ ಸಮಸ್ಯೆ ಇದ್ದಾಗಲೂ ಅವರು ಹೋಗುತ್ತಿದ್ದಾರೆ. ದೇಶದಿಂದ ಬಿಲಿಯಾಂತರ ರೂಪಾಯಿಗಳು ಹೊರಗೆ ಹೋಗುತ್ತಿವೆ. ನಮ್ಮ ಖಾಸಗಿ ವಲಯ ಕ್ಷೇತ್ರಕ್ಕೆ ಬಹಳ ದೊಡ್ಡ ಸಂಖ್ಯೆಯಲ್ಲಿ ಬರಲು ಸಾಧ್ಯವಿಲ್ಲವೇ?. ಇಲ್ಲಿಯೇ ಗರಿಷ್ಠ ಸಂಖ್ಯೆಯಲ್ಲಿ ವೈದ್ಯರು ಮತ್ತು ಅರೆ ವೈದ್ಯಕೀಯ ಪರಿಣಿತರನ್ನು ರೂಪಿಸಲು ಅನುಕೂಲವಾಗುವಂತೆ ನಮ್ಮ ರಾಜ್ಯ ಸರಕಾರಗಳು ಕೆಲಸಕ್ಕೆ ಭೂಮಿ ಒದಗಿಸುವುದಕ್ಕೆ ಸಂಬಂಧಿಸಿ ಉತ್ತಮ ನೀತಿಗಳನ್ನು ಮಾಡಲು ಸಾಧ್ಯವಿಲ್ಲವೇ?. ಎಲ್ಲಕ್ಕಿಂತ ಮುಖ್ಯವಾಗಿ ನಾವು ಜಗತ್ತಿನ ಬೇಡಿಕೆಯನ್ನು ಈಡೇರಿಸಬಹುದಲ್ಲವೇ. ಕಳೆದ ನಾಲ್ಕು-ಐದು ದಶಕಗಳಲ್ಲಿ ನಮ್ಮ ವೈದ್ಯರು ಭಾರತಕ್ಕೆ ಬಹಳ ದೊಡ್ಡ ಖ್ಯಾತಿಯನ್ನು ತಂದುಕೊಟ್ಟಿದ್ದಾರೆ. ಭಾರತೀಯ ವೈದ್ಯರು ಎಲ್ಲಿಗೆಲ್ಲ ಹೋಗುತ್ತಾರೋ, ಅವರು ದೇಶದ ಹೃದಯವನ್ನು ಗೆಲ್ಲುತ್ತಾರೆ. ಭಾರತೀಯ ವೈದ್ಯರ ಪ್ರತಿಭೆಯನ್ನು ಜಗತ್ತಿನಾದ್ಯಂತ ಜನರು ಶ್ಲಾಘಿಸುತ್ತಾರೆ. ಅಂದರೆ ನಮ್ಮ ಬ್ರಾಂಡಿಂಗ್ ಆಗಿದೆ ಎಂದರ್ಥ. ಈಗ ನಾವು ಅರ್ಹ ಜನರನ್ನು ತಯಾರು ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕಾಗಿದೆ. ಅದೇ ರೀತಿ ನಮ್ಮ ಆರೋಗ್ಯ ವಿಮಾ ಯೋಜನೆ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದು. ನಾನದನ್ನು ಆರೋಗ್ಯ ವಿಮಾ ಯೋಜನೆ ಎಂದು ಕರೆಯುವುದಿಲ್ಲ; ಅದು ಆಯುಷ್ಮಾನ್ ಭಾರತ್; ಮತ್ತು ಅದು ಒಂದು ರೀತಿಯಲ್ಲಿ ಆದಾಯ ಭರವಸೆ ಯೋಜನೆ. ವಿಮಾ ಯೋಜನೆ ಭಾರತ ಸರಕಾರದ್ದಾಗಿದೆ. ಬಡ ರೋಗಿಯೊಬ್ಬರು ನಿಮ್ಮ ಆಸ್ಪತ್ರೆಗೆ ಬಂದರೆ, ಹಣ ಪಾವತಿಯನ್ನು ಭಾರತ ಸರಕಾರ ಮಾಡುತ್ತದೆ. ಹಣದ ಕೊರತೆಯಿಂದಾಗಿ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದನ್ನು ರೋಗಿಗಳು ತಪ್ಪಿಸಿಕೊಳ್ಳುವ ಪರಿಸ್ಥಿತಿ ಇನ್ನು ಇರುವುದಿಲ್ಲ. ಖಾಸಗಿ ವಲಯದ ನನ್ನ ಸ್ನೇಹಿತರು ಟಯರ್ 2 ಮತ್ತು ಟಯರ್ 3 ನಗರಗಳಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿ ಮಾಡಲು ಬರಬಲ್ಲರೇ? ಆಯುಷ್ಮಾನ್ ಭಾರತ್ ಯೋಜನೆಯಡಿ ಸೌಲಭ್ಯ ಪಡೆಯುವ ರೋಗಿಗಳಿಗಾಗಿ ವಿಶೇಷ ಸೌಲಭ್ಯಗಳನ್ನು ದಯವಿಟ್ಟು ಅಭಿವೃದ್ಧಿ ಮಾಡಿ. ನಿಮಗೆ ಆದಾಯಕ್ಕೆ ಸಂಬಂಧಿಸಿ ಯಾವುದೇ ಸಮಸ್ಯೆಗಳು ಬರುವುದಿಲ್ಲ. ನಿಮ್ಮ ಹೂಡಿಕೆಗೆ ಮರುಪಾವತಿ ಭರವಸೆ ಇದೆ. ಯೋಜನೆಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ಅವಕಾಶವಿದೆ ಮತ್ತು ಅಲ್ಲಿ ಹಲವಾರು ಕಾರ್ಯಕ್ರಮಗಳು ಇವೆ, ಇದು ನಮ್ಮ ದೇಶದ ಆರೋಗ್ಯ ವಲಯವನ್ನು ಬಲಿಷ್ಠವನ್ನಾಗಿ ಮಾಡಲಿದೆ ಮತ್ತು ನಮ್ಮ ಆಯುರ್ವೇದ ಬಹಳ ದೊಡ್ಡ ಮಾನ್ಯತೆಯನ್ನು, ಗೌರವವನ್ನು ಪಡೆದಿರುವುದನ್ನು ನೀವು ನೋಡಿರಬಹುದು. ಕೊರೊನಾ ಅವಧಿಯಲ್ಲಿ ಗಿಡಮೂಲಿಕೆಗಳಿಂದ ತಯಾರಾದ ಉತ್ಪನ್ನಗಳ ರಫ್ತು ಬಹಳ ಹೆಚ್ಚಾಗಿದೆ ಮತ್ತು ಅದರೆಡೆಗಿನ ಆಕರ್ಷಣೆ ಹಲವು ಪಟ್ಟು ಹೆಚ್ಚಾಗಿದೆ. ನಾವೆಲ್ಲರೂ ಹೇಗೆ ಕ್ರಿಯಾ ಯೋಜನೆಗಳನ್ನು ಮುಂದಕ್ಕೆ ಕೊಂಡೊಯ್ಯಬಹುದು?.ಭಾರತವು ನಾಯಕತ್ವದ ಪಾತ್ರವನ್ನು ವಹಿಸುವುದಕ್ಕೆ ಅವಶ್ಯವಾದಂತಹ ಸಿದ್ಧತೆಗಳನ್ನು ಮಾಡಲು ಸಹಾಯವಾಗುವಂತೆ ಮುಕ್ತ ಮನಸ್ಸಿನ ಸಲಹೆಗಳನ್ನು ನೀಡಲು ನೀವು ಮುಂದೆ ಬರಬೇಕು ಎಂಬುದು ನನ್ನ ಆಶಯವಾಗಿದೆ. ಬಜೆಟ್ ಅಂಕಿ ಅಂಶಗಳಿಂದ ಮಾತ್ರವೇ ಯಾವುದೇ ಬದಲಾವಣೆ ತರಲು ಸಾಧ್ಯವಾಗದು. ಮತ್ತು ನಾವು ಯಾಕೆ ಒಂದು ತಿಂಗಳು ಮುಂಚಿತವಾಗಿಯೇ ಬಜೆಟ್ ನಿಗದಿ ಮಾಡುತ್ತೇವೆ?. ಇದನ್ನು ಯಾಕೆ ಮಾಡಲಾಗುತ್ತಿದೆ ಎಂದರೆ ನಮ್ಮ ಎಲ್ಲಾ ಬಜೆಟ್ ಪ್ರಸ್ತಾವನೆಗಳಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಯೋಜನೆಗಳನ್ನು ತಯಾರಿಸುವುದಕ್ಕಾಗಿ ಮತ್ತು ನಾವು ನಮ್ಮ ಬಜೆಟನ್ನು ಏಪ್ರಿಲ್ 1 ರಿಂದ ಅನುಷ್ಟಾನ ಮಾಡಲು ಸಾಧ್ಯವಾಗುತ್ತದೆ ಎಂಬುದಕ್ಕಾಗಿ. ಮತ್ತು ನಾವು ಬಹಳ ಕಡಿಮೆ ಅವಧಿಯಲ್ಲಿ ಗರಿಷ್ಠ ಫಲಿತಾಂಶ ಪಡೆಯಬಹುದು ಎಂಬುದಕ್ಕಾಗಿ. ಇಂದಿನ ಚರ್ಚೆಯನ್ನು ಬಹಳ ಉಪಯುಕ್ತವನ್ನಾಗಿಸಬೇಕು ಎಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡತ್ತೇನೆ. ಮತ್ತು ನಾನು ಸರಕಾರದ ಪರವಾಗಿ ಬಹಳ ದೀರ್ಘ ಭಾಷಣ ಮಾಡುವುದಿಲ್ಲ. ಬದಲು ನಾನು ನಿಮ್ಮಿಂದ ದೃಢವಾದ ಯೋಜನೆಗಳ ಬಗ್ಗೆ ಕೇಳಲು ಬಯಸುತ್ತೇನೆ. ಕೆಲವೊಮ್ಮೆ ಕೆಲವು ಸಂಗತಿಗಳು ಅನುಷ್ಠಾನದಿಂದ ಹೊರಗೆ ಉಳಿಯಬಹುದು ಮತ್ತು ಅದಕ್ಕಾಗಿ ತಿಂಗಳುಗಟ್ಟಲೆ ಕಡತಗಳು ಚಲಿಸುತ್ತಲೇ ಇರಬಹುದು. ಚರ್ಚೆ ಇಂತಹ ನಿರ್ವಾತಗಳನ್ನು, ಕೊರತೆಗಳನ್ನು ಕಡಿಮೆ ಮಾಡುವಂತಾಗಲಿ. ನಿಮ್ಮ ಸಲಹೆಗಳು, ಮಾರ್ಗದರ್ಶನ ನಮಗೆ ಸಂಗತಿಗಳನ್ನು ಅನುಷ್ಟಾನಗೊಳಿಸುವುದನ್ನು ಹೆಚ್ಚು ಸುಲಭಗೊಳಿಸಲಿದೆ. ನಮ್ಮ ಅಧಿಕಾರಿಗಳು ಮತ್ತು ವ್ಯವಸ್ಥೆ ಕೂಡಾ ಸಂಗತಿಗಳನ್ನು ಅನುಷ್ಟಾನಿಸುವುದಕ್ಕೆ ಸಂಬಂಧಿಸಿ ಉತ್ತಮ ಮಾರ್ಗದರ್ಶನವನ್ನು ಪಡೆಯಲಿದೆ. ಜಗತ್ತಿನ ಬಿಕ್ಕಟ್ಟು ಆರೋಗ್ಯ ಪರಿಸ್ಥಿತಿಗಳನ್ನು ಇಂದು ನಿಜವಾಗಿಯೂ ಗಂಬೀರ ಪರಿಸ್ಥಿತಿಗೆ ಕೊಂಡೊಯ್ದಿದೆ.ನಾವು ಬಹಳ ಹೆಚ್ಚಿನ ನಿಕಟ ನಿಗಾ ವಹಿಸಬೇಕಾಗಿದೆ.

ನಾನು ನಿಮಗೆಲ್ಲರಿಗೂ ಶುಭವನ್ನು ಹಾರೈಸುತ್ತೇನೆ!

ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.    

***



(Release ID: 1802257) Visitor Counter : 243