ಪ್ರಧಾನ ಮಂತ್ರಿಯವರ ಕಛೇರಿ
ʻಗರುಡ ಏರೋಸ್ಪೇಸ್ʼನಿಂದ 100 ಕಿಸಾನ್ ಡ್ರೋನ್‌ಗಳ ಹಾರಾಟಕ್ಕೆ ಸಾಕ್ಷಿಯಾದ ಸಂದರ್ಭದಲ್ಲಿ ಪ್ರಧಾನಿ ಅವರ ಭಾಷಣದ ಕನ್ನಡ ಆವೃತ್ತಿ
Posted On:
19 FEB 2022 11:54AM by PIB Bengaluru
ನಮಸ್ಕಾರ,
ಸರಕಾರದ ನೀತಿಗಳು ಸರಿಯಾಗಿದ್ದರೆ ರಾಷ್ಟ್ರವು ಉನ್ನತ ಎತ್ತರವನ್ನು ಮುಟ್ಟುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ದಿನವು ಇಂತಹ ಪರಿಕಲ್ಪನೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಕೆಲವು ವರ್ಷಗಳ ಹಿಂದೆ, ಡ್ರೋನ್ ಅನ್ನು ಸೇನೆಗೆ ಸಂಬಂಧಿಸಿದ ತಂತ್ರಜ್ಞಾನ ಅಥವಾ ಶತ್ರುಗಳನ್ನು ಎದುರಿಸಲು ಬಳಸುವ ತಂತ್ರಜ್ಞಾನ ಎಂದು ಪರಿಗಣಿಸಲಾಗಿತ್ತು. ನಮ್ಮ ಆಲೋಚನೆಗಳು ಆ ನಿರ್ದಿಷ್ಟ ಬಳಕೆಗೆ ಮಾತ್ರ ಸೀಮಿತವಾಗಿದ್ದವು. ಆದರೆ ಇಂದು ನಾವು ಮನೇಸರ್‌ನಲ್ಲಿ ʻಕಿಸಾನ್ ಡ್ರೋನ್ʼ ಘಟಕವನ್ನು ಉದ್ಘಾಟಿಸುತ್ತಿದ್ದೇವೆ. ಇದು 21ನೇ ಶತಮಾನದ ಆಧುನಿಕ ಕೃಷಿ ವ್ಯವಸ್ಥೆಯ ದಿಕ್ಕಿನಲ್ಲಿ ಹೊಸ ಅಧ್ಯಾಯವಾಗಿದೆ. ಈ ಉಡಾವಣೆಯು ಡ್ರೋನ್ ವಲಯದ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲಾಗಿದೆ ಮಾತ್ರವಲ್ಲ, ಅನಂತ ಸಾಧ್ಯತೆಗಳ ಬಾಗಿಲುಗಳನ್ನು ತೆರೆಯುತ್ತದೆ ಎಂದು ನನಗೆ ಖಾತ್ರಿಯಿದೆ. ʻಗರುಡ ಏರೋಸ್ಪೇಸ್ʼ ಮುಂದಿನ ಎರಡು ವರ್ಷಗಳಲ್ಲಿ ಒಂದು ಲಕ್ಷ 'ಮೇಡ್ ಇನ್ ಇಂಡಿಯಾ' ಡ್ರೋನ್ ಗಳನ್ನು ತಯಾರಿಸುವ ಗುರಿಯನ್ನು ಹೊಂದಿದೆ ಎಂದು ನನಗೆ ತಿಳಿಸಲಾಯಿತು. ಇದು ಹಲವಾರು ಯುವಕರಿಗೆ ಹೊಸ ಉದ್ಯೋಗಗಳು ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಸಾಧನೆಗಾಗಿ ʻಗರುಡ ಏರೋಸ್ಪೇಸ್ʼ ತಂಡ ಮತ್ತು ನನ್ನ ಎಲ್ಲಾ ಯುವ ಸ್ನೇಹಿತರನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ದೇಶದ ಪಾಲಿಗೆ ಇದು 'ಅಜಾದಿ ಕಾ ಅಮೃತಕಾಲ'ದ ಸಮಯ. ಈ ಕಾಲವು ಯುವ ಭಾರತಕ್ಕೆ ಸೇರಿದ್ದು; ಭಾರತದ ಯುವಕರಿಗೆ ಸೇರಿದ್ದು. ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ನಡೆದಿರುವ ಸುಧಾರಣೆಗಳು ಯುವಕರು ಮತ್ತು ಖಾಸಗಿ ವಲಯದ ಶಕ್ತಿಗೆ ಉತ್ತೇಜನ ನೀಡಿವೆ. ಅಲ್ಲದೆ, ಡ್ರೋನ್‌ಗಳಿಗೆ ಸಂಬಂಧಿಸಿದಂತೆ ಭಾರತವು ಸ್ವಲ್ಪವೂ ಸಮಯವನ್ನು ವ್ಯರ್ಥ ಮಾಡಲಿಲ್ಲ. ಯುವ ಪ್ರತಿಭೆಗಳನ್ನು ನಂಬಿ ಹೊಸ ಚಿಂತನೆಗೆ ನಾವು ಮುಂದಾದೆವು.
ಈ ಬಜೆಟ್‌ನಲ್ಲಿ ಮಾಡಿದ ಘೋಷಣೆಗಳಿಂದ ಹಿಡಿದು ಇತರ ನೀತಿ ನಿರ್ಧಾರಗಳವರೆಗೆ, ದೇಶವು ತಂತ್ರಜ್ಞಾನ ಮತ್ತು ನಾವಿನ್ಯತೆಗೆ ಮುಕ್ತವಾಗಿ ಆದ್ಯತೆ ನೀಡಿದೆ. ಅದರ ಫಲಿತಾಂಶಗಳು ಇಂದು ನಮ್ಮ ಮುಂದಿವೆ. ಪ್ರಸ್ತುತ ಕಾಲದಲ್ಲಿ, ಡ್ರೋನ್‌ಗಳ ವೈವಿಧ್ಯಮಯ ಬಳಕೆಗಳನ್ನು ನಾವು ನೋಡುತ್ತಿದ್ದೇವೆ. ಬೀಟಿಂಗ್ ರಿಟ್ರೀಟ್ ಸಮಯದಲ್ಲಿ, ಇಡೀ ರಾಷ್ಟ್ರವು 1000 ಡ್ರೋನ್ ಗಳ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಇಂದು ʻಸ್ವಾಮಿತ್ವʼ ಯೋಜನೆಯಡಿ ಹಳ್ಳಿಗಳಲ್ಲಿ ಡ್ರೋನ್ ಮೂಲಕ ಭೂಮಿ ಮತ್ತು ಮನೆಗಳ ಖಾತೆ ಸಿದ್ಧಪಡಿಸಲಾಗುತ್ತಿದೆ. ಡ್ರೋನ್‌ಗಳ ಮೂಲಕ ಔಷಧಿಗಳನ್ನು ಪೂರೈಸಲಾಗುತ್ತಿದೆ. ಲಸಿಕೆಗಳು ಡ್ರೋನ್ ಮೂಲಕ ದೂರದ ಪ್ರದೇಶಗಳನ್ನು ತಲುಪುತ್ತಿವೆ. ಹಲವಾರು ಪ್ರದೇಶಗಳಲ್ಲಿ ಹೊಲಗಳಲ್ಲಿ ಕೀಟನಾಶಕಗಳನ್ನು ಸಿಂಪಡಿಸಲು ಸಹ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ʻಕಿಸಾನ್ ಡ್ರೋನ್ʼ ಈಗ ಈ ನಿಟ್ಟಿನಲ್ಲಿ ಹೊಸ ಯುಗದ ಕ್ರಾಂತಿಯ ಪ್ರಾರಂಭವಾಗಿದೆ. ಉದಾಹರಣೆಗೆ, ಮುಂಬರುವ ದಿನಗಳಲ್ಲಿ, ಹೆಚ್ಚಿನ ಸಾಮರ್ಥ್ಯದ ಡ್ರೋನ್‌ಗಳ ಸಹಾಯದಿಂದ, ರೈತರು ತಾಜಾ ತರಕಾರಿಗಳು, ಹಣ್ಣುಗಳು, ಹೂವುಗಳನ್ನು ತಮ್ಮ ಹೊಲಗಳಿಂದ ಮಾರುಕಟ್ಟೆಗಳಿಗೆ ಕಳುಹಿಸಬಹುದು. ಮೀನು ಸಾಕಣೆಯಲ್ಲಿ (ಪಿಸ್ಸಿ-ಕಲ್ಚರ್) ತೊಡಗಿರುವ ಜನರು ಕೊಳಗಳು, ನದಿಗಳು ಮತ್ತು ಸಮುದ್ರದಿಂದ ಹಿಡಿದ ತಾಜಾ ಮೀನುಗಳನ್ನು ನೇರವಾಗಿ ಮಾರುಕಟ್ಟೆಗೆ ಕಳುಹಿಸಬಹುದು. ಮೀನುಗಾರರು ಮತ್ತು ರೈತರ ಉತ್ಪನ್ನಗಳು ಕನಿಷ್ಠ ಹಾನಿಯೊಂದಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಮಾರುಕಟ್ಟೆಯನ್ನು ತಲುಪುತ್ತವೆ. ಪರಿಣಾಮವಾಗಿ, ನನ್ನ ರೈತ ಮತ್ತು ಮೀನುಗಾರ ಸಹೋದರ ಸಹೋದರಿಯರ ಆದಾಯವೂ ಹೆಚ್ಚಾಗುತ್ತದೆ. ಇಂತಹ ಅನೇಕ ಸಾಧ್ಯತೆಗಳು ನಮ್ಮ ಬಾಗಿಲನ್ನು ತಟ್ಟುತ್ತಿವೆ.
ದೇಶದ ಇನ್ನೂ ಅನೇಕ ಕಂಪನಿಗಳು ಈ ದಿಕ್ಕಿನಲ್ಲಿ ವೇಗವಾಗಿ ಸಾಗುತ್ತಿರುವುದು ನನಗೆ ಸಂತೋಷ ತಂದಿದೆ. ಭಾರತದಲ್ಲಿ ಡ್ರೋನ್ ನವೋದ್ಯಮಗಳ ಹೊಸ ಪರಿಸರ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಪ್ರಸ್ತುತ, ದೇಶದಲ್ಲಿ 200ಕ್ಕೂ ಹೆಚ್ಚು ಡ್ರೋನ್ ನವೋದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಶೀಘ್ರದಲ್ಲೇ ಈ ಸಂಖ್ಯೆ ಸಾವಿರಾರು ತಲುಪುತ್ತದೆ. ಇದರಿಂದ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿದೆ. ಮುಂದಿನ ದಿನಗಳಲ್ಲಿ, ಭಾರತದ ಈ ಪ್ರಗತಿ ಸಾಮರ್ಥ್ಯವು ಡ್ರೋನ್‌ಗಳ ಕ್ಷೇತ್ರದಲ್ಲಿ ಇಡೀ ವಿಶ್ವದ ಮುಂದೆ ಭಾರತವನ್ನು ಹೊಸ ನಾಯಕನ ಸ್ಥಾನದಲ್ಲಿ ಪ್ರದರ್ಶಿಸುತ್ತದೆ ಎಂಬ ವಿಶ್ವಾಸ ನನಗಿದೆ. ಇದರೊಂದಿಗೆ, ನಾನು ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು. ಯುವಕರ ಪರಾಕ್ರಮಕ್ಕೆ ನನ್ನ ಶುಭ ಹಾರೈಕೆಗಳು. ಇಂದು ದೇಶದಲ್ಲಿ ತಲೆ ಎತ್ತಿರುವ ಎಲ್ಲಾ ನವೋದ್ಯಮಗಳಿಗಾಗಿ, ಧೈರ್ಯದಿಂದ ಸವಾಲುಗಳನ್ನು ಎದುರಿಸಿದ್ದಕ್ಕಾಗಿ ನಾನು ಇಂದಿನ ಯುವಕರನ್ನು ಅಭಿನಂದಿಸುತ್ತೇನೆ. ಜೊತೆಗೆ ಭಾರತ ಸರ್ಕಾರವು ನಿರಂತರ ಬೆಂಬಲ ಮತ್ತು ನೀತಿಗಳ ಮೂಲಕ ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ನಡೆಯುವ ಭರವಸೆ ನೀಡುತ್ತದೆ. ನಿಮ್ಮ ದಾರಿಯಲ್ಲಿ ಯಾವುದೇ ಅಡೆತಡೆಯನ್ನು ಬರಲು ಸರ್ಕಾರ ಬಿಡುವುದಿಲ್ಲ. ನಾನು ನಿಮಗೆ ಶುಭ ಹಾರೈಸುತ್ತೇನೆ! ಧನ್ಯವಾದಗಳು!
ಗಮನಿಸಿ: ಇದು ಪ್ರಧಾನ ಮಂತ್ರಿಯವರ ಭಾಷಣದ ಭಾವಾನುವಾದ. ಅವರ ಮೂಲ ಭಾಷಣವು ಹಿಂದಿಯಲ್ಲಿತ್ತು.
***
(Release ID: 1799635)
Visitor Counter : 254
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam