ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ-ಯುಎಇ ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆರಂಭಿಕ ಭಾಷಣ

Posted On: 18 FEB 2022 8:20PM by PIB Bengaluru

ಗೌರವಾನ್ವಿತರೇ, ನನ್ನ ಸಹೋದರ,

ಇಂದಿನ ವರ್ಚುವಲ್ ಶೃಂಗಸಭೆಗೆ ನಿಮಗೆ ಆತ್ಮೀಯ ಸ್ವಾಗತ. ಮೊದಲನೆಯದಾಗಿ, ನಾನು ನಿಮ್ಮನ್ನು ಮತ್ತು ಯು.ಎ.ಇ.ಯನ್ನು ಅಭಿನಂದಿಸಲು ಬಯಸುತ್ತೇನೆ. ಕೋವಿಡ್ನ ಸವಾಲುಗಳ ಹೊರತಾಗಿಯೂ, ಎಕ್ಸ್ಪೋ 2020 ರ ಸಂಘಟನೆಯು ತುಂಬಾ ಅದ್ಭುತವಾಗಿತ್ತು. ದುರದೃಷ್ಟವಶಾತ್, ಎಕ್ಸ್ಪೋಗೆ ಹಾಜರಾಗಲು ನನಗೆ ಯು.ಎ.ಇ.ಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ ಮತ್ತು ನಾವು ಮುಖಾಮುಖಿಯಾಗಿ ಭೇಟಿಯಾಗಿ ಬಹಳ ಸಮಯವಾಯಿತು. ಆದರೆ ಇಂದಿನ ವರ್ಚುವಲ್ ಶೃಂಗಸಭೆಯು ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಿ ನಮ್ಮ ಸೌಹಾರ್ದ ಸಂಬಂಧಗಳು ಹೊಸ ಎತ್ತರಕ್ಕೆ ಬೆಳೆಯಲು ಸಾಕ್ಷಿಯಾಗಿದೆ.

ಗೌರವಾನ್ವಿತರೇ,

ನಮ್ಮ ಸಂಬಂಧವನ್ನು ಬಲಪಡಿಸುವಲ್ಲಿ ನಿಮ್ಮ ವೈಯಕ್ತಿಕ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ಯು.ಎ.ಇ ಯ ಭಾರತೀಯ ಸಮುದಾಯದ ಕಾಳಜಿ ವಹಿಸಿರುವ ನಿಮ್ಮ ರೀತಿಗೆ ನಾನು ನಿಮಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿಯೂ ಕೂಡ. ಯು.ಎ.ಇ ಯಲ್ಲಿ ನಡೆದ ಇತ್ತೀಚಿನ ಭಯೋತ್ಪಾದಕ ದಾಳಿಗಳನ್ನು ನಾವು ಬಲವಾಗಿ ಖಂಡಿಸಿದ್ದೇವೆ. ಭಾರತ ಮತ್ತು ಯು.ಎ.ಇ. ಭಯೋತ್ಪಾದನೆ ವಿರುದ್ಧ ಸದಾ ಒಟ್ಟಾಗಿ ನಿಲ್ಲುತ್ತೇವೆ.

ಗೌರವಾನ್ವಿತರೇ,

ಈ ವರ್ಷವು ನಮ್ಮ ಎರಡೂ ದೇಶಗಳಿಗೆ ವಿಶೇಷ ಮಹತ್ವವನ್ನು ಹೊಂದಿದೆ. ನೀವು ಯು.ಎ.ಇ ಸ್ಥಾಪನೆಯ 50 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಿರಿ. ಮತ್ತು ಮುಂದಿನ 50 ವರ್ಷಗಳವರೆಗೆ ನೀವು ಯುಎಇಗೆ ಗುರಿಗಳನ್ನು ಹೊಂದಿದ್ದೀರಿ. ನಾವು ಈ ವರ್ಷ ನಮ್ಮ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ನಾವು ಮುಂದಿನ 25 ವರ್ಷಗಳ ಗುರಿಗಳನ್ನು ಹೊಂದಿದ್ದೇವೆ. ಭವಿಷ್ಯದ ಕುರಿತು ಉಭಯ ದೇಶಗಳ ದೃಷ್ಟಿಕೋನಗಳ ನಡುವೆ ಹಲವು ಹೋಲಿಕೆಗಳಿವೆ.

ಗೌರವಾನ್ವಿತರೇ,

ನಮ್ಮ ಎರಡೂ ದೇಶಗಳು ಇಂದು ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಮೂರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಅಂತಹ ಮಹತ್ವದ ಒಪ್ಪಂದದ ಕುರಿತು ನಾವು ಮಾತುಕತೆಗಳನ್ನು ತೀರ್ಮಾನಿಸಲು ಸಾಧ್ಯವಾಯಿತು ಎಂಬುದು ಗಮನಾರ್ಹ. ಈ ರೀತಿಯ ಒಪ್ಪಂದಕ್ಕೆ ಸಾಮಾನ್ಯವಾಗಿ ವರ್ಷಗಳು ಬೇಕಾಗುತ್ತವೆ. ಈ ಒಪ್ಪಂದವು ಎರಡು ದೇಶಗಳ ನಡುವಿನ ಆಳವಾದ ಸ್ನೇಹ, ಹಂಚಿಕೊಳ್ಳುವ ದೃಷ್ಟಿ ಮತ್ತು ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಇದು ನಮ್ಮ ಆರ್ಥಿಕ ಸಂಬಂಧಗಳಲ್ಲಿ ಹೊಸ ಯುಗವನ್ನು ಪ್ರಾರಂಭಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಮತ್ತು ಮುಂದಿನ ಐದು ವರ್ಷಗಳಲ್ಲಿ ನಮ್ಮ ವ್ಯಾಪಾರ ವಹಿವಾಟುಗಳು $ 60 ಶತಕೋಟಿಯಿಂದ $100 ಶತಕೋಟಿಗೆ ಬೆಳೆಯುತ್ತದೆ.

ಗೌರವಾನ್ವಿತರೇ,

ವ್ಯಾಪಾರ, ಹೂಡಿಕೆ, ಇಂಧನ ಮತ್ತು ಜನರಿಂದ ಜನರ ಸಂಪರ್ಕಗಳು ನಮ್ಮ ಸಹಕಾರದ ಆಧಾರ ಸ್ತಂಭಗಳಾಗಿವೆ. ಅದೇ ಸಮಯದಲ್ಲಿ, ಅನೇಕ ಹೊಸ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ನಮ್ಮ ನಡುವಿನ ಆಹಾರ ಕಾರಿಡಾರ್ಗಳ ಹೊಸ ತಿಳಿವಳಿಕೆಯ ಒಪ್ಪಂದವು ಒಂದು ಉತ್ತಮ ಉಪಕ್ರಮವಾಗಿದೆ. ಆಹಾರ ಸಂಸ್ಕರಣೆ ಮತ್ತು ವಿತರಣಾ ಜಾಲಗಳಲ್ಲಿ ಯುಎಇ ಹೂಡಿಕೆಯನ್ನು ನಾವು ಸ್ವಾಗತಿಸುತ್ತೇವೆ. ಇದು ಯುಎಇಯ ಆಹಾರ ಭದ್ರತೆಗೆ ಭಾರತವನ್ನು ವಿಶ್ವಾಸಾರ್ಹ ಪಾಲುದಾರನನ್ನಾಗಿ ಮಾಡುತ್ತದೆ.

ನವೋದ್ಯಮ ಕ್ಷೇತ್ರದಲ್ಲಿ ಭಾರತ ಅಭೂತಪೂರ್ವ ಬೆಳವಣಿಗೆಸಾಧಿಸಿದೆ. ಕಳೆದ ವರ್ಷ ಭಾರತದಲ್ಲಿ 44 ಯುನಿಕಾರ್ನ್ಗಳು ಹೊರಹೊಮ್ಮಿವೆ. ಪರಸ್ಪರ ಪೋಷಣೆ ಮತ್ತು ಪರಸ್ಪರ ಹಣಕಾಸು ಬೆಂಬಲದ ಮೂಲಕ ನಾವು ಎರಡೂ ದೇಶಗಳಲ್ಲಿ ಸ್ಟಾರ್ಟ್-ಅಪ್ಗಳನ್ನು ಪ್ರೋತ್ಸಾಹಿಸಬಹುದು. ಅಂತೆಯೇ, ಕೌಶಲ್ಯ ಅಭಿವೃದ್ಧಿಗಾಗಿ, ನಾವು ಆಧುನಿಕ ಶ್ರೇಷ್ಠ ಕೇಂದ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಬಹುದು.

ಕಳೆದ ತಿಂಗಳು ಯುಎಇಗೆ ಜಮ್ಮು ಮತ್ತು ಕಾಶ್ಮೀರದ ಲೆ.ಗವರ್ನರ್ ರವರ ಯಶಸ್ವಿ ಭೇಟಿಯ ನಂತರ, ಹಲವಾರು ಎಮಿರಟ್ ಕಂಪನಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಹೂಡಿಕೆ ಮಾಡಲು ಆಸಕ್ತಿಯನ್ನು ತೋರಿಸಿವೆ. ಪೂರೈಕೆ ಸರಪಳಿ, ಆರೋಗ್ಯ ರಕ್ಷಣೆ ಮತ್ತು ಆತಿಥ್ಯ ಕ್ಷೇತ್ರಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಯುಎಇ ಹೂಡಿಕೆಗಳನ್ನು ನಾವು ಸ್ವಾಗತಿಸುತ್ತೇವೆ. 

ಗೌರವಾನ್ವಿತರೇ,

ಮುಂದಿನ ವರ್ಷ, ಭಾರತವು ಜಿ-20 ಶೃಂಗಸಭೆ ಮತ್ತು ಯುಎಇ, ಸಿಒಪಿ-28 ಅನ್ನು ಆಯೋಜಿಸುತ್ತದೆ. ಜಾಗತಿಕ ಮಟ್ಟದಲ್ಲಿ ಹವಾಮಾನದ ಸಮಸ್ಯೆಯು ಹೆಚ್ಚು ಮಹತ್ವದ್ದಾಗಿದೆ. ಈ ಕಾರ್ಯಸೂಚಿಯನ್ನು ರೂಪಿಸುವಲ್ಲಿ ನಾವು ಪರಸ್ಪರ ಸಹಕಾರವನ್ನು ಹೆಚ್ಚಿಸಬಹುದು. ನಮ್ಮ ಎರಡೂ ದೇಶಗಳು ಸಮಾನ ಮನಸ್ಕ ಪಾಲುದಾರರೊಂದಿಗೆ ಕೆಲಸ ಮಾಡುವ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಹೊಂದಿವೆ. "ಭಾರತ-ಯುಎಇ-ಇಸ್ರೇಲ್-ಯುಎಸ್ಎ", ಈ ಗುಂಪು ನಮ್ಮ ಸಾಮೂಹಿಕ ಗುರಿಗಳನ್ನು ವಿಶೇಷವಾಗಿ ತಂತ್ರಜ್ಞಾನ, ನಾವೀನ್ಯತೆ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಮುನ್ನಡೆಸುತ್ತದೆ ಎಂದು ನನಗೆ ವಿಶ್ವಾಸವಿದೆ.

ಗೌರವಾನ್ವಿತರೇ,

ಈ ವರ್ಚುವಲ್ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಮತ್ತೊಮ್ಮೆ ನನ್ನ ಹೃದಯದಾಳದಿಂದ ತುಂಬಾ ಧನ್ಯವಾದಗಳು.

ಸೂಚನೆ: ಇದು ಪ್ರಧಾನಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

***


(Release ID: 1799633) Visitor Counter : 157