ಇಂಧನ ಸಚಿವಾಲಯ

ಭಾರತ ಸರ್ಕಾರದಿಂದ ದೇಶಾದ್ಯಂತ ಸಾರ್ವಜನಿಕ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಮೂಲಸೌಕರ್ಯ ವಿಸ್ತರಣೆ


ಸರ್ಕಾರದ ಪ್ರಯತ್ನಗಳಿಂದಾಗಿ ಕಳೆದ 4 ತಿಂಗಳಲ್ಲಿ 9 ಬೃಹತ್ ನಗರದಲ್ಲಿ 2.5ರಷ್ಟು ಚಾರ್ಜಿಂಗ್ ಕೇಂದ್ರಗಳ ಸಂಖ್ಯೆ ಹೆಚ್ಚಳ 

ಈ 9 ನಗರಗಳಲ್ಲಿ 2021ರ ಅಕ್ಟೋಬರ್ ನಿಂದ 2022ರ ಜನವರಿವರೆಗೆ ಹೆಚ್ಚುವರಿಯಾಗಿ 678 ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ

ಭಾರತದ 1640 ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳ ಪೈಕಿ ಈ 9 ನಗರಗಳಲ್ಲಿ ಸದ್ಯ 940 ಕೇಂದ್ರಗಳಿವೆ

ದೇಶಾದ್ಯಂತ ಪ್ರಮುಖ ನಗರಗಳು ಮತ್ತು ಹೆದ್ದಾರಿಗಳಲ್ಲಿ ತೈಲ ಮಾರುಕಟ್ಟೆ ಕಂಪನಿಗಳಿಂದ 22,000 ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ

Posted On: 19 FEB 2022 9:13AM by PIB Bengaluru

ಇಂಧನ ಸಚಿವಾಲಯವು ಇತ್ತೀಚೆಗೆ 2022ರ ಜನವರಿ 14 ರಂದು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ಪರಿಷ್ಕೃತ ಸಮಗ್ರ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಭಾರತ ಸರ್ಕಾರವು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಅಳವಡಿಕೆಯನ್ನು ಉತ್ತೇಜಿಸಲು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕ ಇವಿ ಚಾರ್ಜಿಂಗ್ ಮೂಲಸೌಕರ್ಯದಲ್ಲಿ ಗಣನೀಯ ವಿಸ್ತರಣೆಯೊಂದಿಗೆ, ಎಲೆಕ್ಟ್ರಿಕ್ ವಾಹನಗಳು ದೊಡ್ಡ ಪ್ರಮಾಣದಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಾರಂಭಿಸಿವೆ.

ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳಾದ (ಬಿಇಇ, ಇಇಎಸ್ ಎಲ್, ಪಿಜಿಸಿಐಎಲ್, ಎನ್ ಟಿಪಿಸಿ ಇತ್ಯಾದಿ) ತೊಡಗಿಸಿಕೊಳ್ಳುವ ಮೂಲಕ ಸರ್ಕಾರವು ಸಾರ್ವಜನಿಕ ಚಾರ್ಜಿಂಗ್ ಮೂಲ ಸೌಕರ್ಯ ವೃದ್ಧಿಸಲು ಸರ್ವ ಪ್ರಯತ್ನಗಳನ್ನು ಕೈಗೊಂಡಿದೆ. ಗ್ರಾಹಕರ ವಿಶ್ವಾಸವನ್ನು ಪಡೆಯಲು ಅನುಕೂಲಕರ ಚಾರ್ಜಿಂಗ್ ನೆಟ್‌ವರ್ಕ್ ಗ್ರಿಡ್ ಅನ್ನು ಅಭಿವೃದ್ಧಿಪಡಿಸಲು ಅನೇಕ ಖಾಸಗಿ ಸಂಸ್ಥೆಗಳು ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಮುಂದೆ ಬಂದಿವೆ. ಇಂಧನ ಸಚಿವಾಲಯ (ಎಂಒಪಿ) ಚಾರ್ಜಿಂಗ್ ಕೇಂದ್ರಗಳು  3×3 ಕಿ.ಮೀ ಗ್ರಿಡ್ ಪ್ರದೇಶದಲ್ಲಿ ಇರುಬೇಕೆಂದು ಯೋಜಿಸಿದೆ. ಸದ್ಯ ಭಾರತದಲ್ಲಿ 1640 ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ಆ ಪೈಕಿ 9 ನಗರ (ಸೂರತ್, ಪುಣೆ, ಅಹ್ಮದಾಬಾದ್, ಬೆಂಗಳೂರು, ಹೈದರಾಬಾದ್, ದೆಹಲಿ, ಕೋಲ್ಕತ, ಮುಂಬೈ ಮತ್ತು ಚೆನ್ನೈ ) ಗಳಲ್ಲಿ ಅಂದಾಜು 940 ಕೇಂದ್ರಗಳಿವೆ.

ಸರ್ಕಾರವು ಆರಂಭಿಕವಾಗಿ ಈ 9 ಮಹಾ ನಗರಗಳ (4 ದಶಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ) ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ನಾನಾ ಅನುಷ್ಠಾನ ಏಜೆನ್ಸಿಗಳ ಮೂಲಕ ಸರ್ಕಾರವು ಕೈಗೊಂಡ ತೀವ್ರತರನಾದ ಪ್ರಯತ್ನಗಳಿಂದಾಗಿ ಸಾರ್ವಜನಿಕ ಇವಿ ಚಾರ್ಜಿಂಗ್ ಮೂಲಸೌಕರ್ಯಗಳ ನಿಯೋಜನೆಯಲ್ಲಿ ಕ್ಷಿಪ್ರ ಬೆಳವಣಿಗೆಗೆ ಕಾರಣವಾಗಿದೆ. ಈ 9 ನಗರಗಳಲ್ಲಿ 2021 ಅಕ್ಟೋಬರ್  ನಿಂದ 2022ರ ಜನವರಿ ನಡುವೆ 678 ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಹೆಚ್ಚುವರಿಯಾಗಿ ಸ್ಥಾಪಿಸಲಾಗಿದೆ, ಇದು ಹಿಂದಿನ ಸಂಖ್ಯೆಗಳಿಗಿಂತ ಸುಮಾರು 2.5 ಪಟ್ಟು ಅಧಿಕವಾಗಿದೆ, ಇದೇ ಅವಧಿಯಲ್ಲಿ ಸುಮಾರು 1.8 ಲಕ್ಷ ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬಂದಿವೆ. ಇದು ಎಲೆಕ್ಟ್ರಿಕ್ ವಾಹನಗಳತ್ತ  ಪರಿವರ್ತನೆ ಹೊಂದಲು ಗ್ರಾಹಕರಿಗೆ ಹೆಚ್ಚಿನ ವಿಶ್ವಾಸ ಮೂಡಿಸಿದೆ. ಈ ಮಹಾನಗರಗಳಲ್ಲಿ ಇವಿ ಮೂಲಸೌಕರ್ಯಗಳ ಗರಿಷ್ಠ ಮಟ್ಟ ತಲುಪಿದ ನಂತರ ಸರ್ಕಾರ ಹಂತ ಹಂತವಾಗಿ ಇತರ ನಗರಗಳಿಗೂ ಅಂತಹ ಮೂಲಸೌಕರ್ಯ ವಿಸ್ತರಿಸಲು ಯೋಜಿಸಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ತೀವ್ರಗೊಳಿಸಲು ಸಾಕಷ್ಟು ಚಾರ್ಜಿಂಗ್ ಮೂಲಸೌಕರ್ಯಗಳ ಲಭ್ಯತೆಯು ಪ್ರಮುಖ ಅಡಚಣೆಯಾಗಿತ್ತು. ಈ ನಿಟ್ಟಿನಲ್ಲಿ,  ಇಂಧನ ಸಚಿವಾಲಯವು “ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯ-ಮಾರ್ಗಸೂಚಿಗಳು ಮತ್ತು ಮಾನದಂಡಗಳು’’ ಬಿಡುಗಡೆ ಮಾಡಿದೆ. ಅದರಲ್ಲಿ ದೇಶಾದ್ಯಂತ ಸಾರ್ವಜನಿಕ ಇವಿ ಚಾರ್ಜಿಂಗ್ ಮೂಲಸೌಕರ್ಯಗಳ ತ್ವರಿತ ನಿಯೋಜನೆಗಾಗಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ನಾನಾ ಪಾಲುದಾರರ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ವಿವರಿಸಲಾಗಿದೆ.

ಇಂಧನ ಸಚಿವಾಲಯವು ಇತ್ತೀಚೆಗೆ  2022ರ ಜನವರಿ 14ರಂದು ಈ ಕೆಳಗಿನ ತಿದ್ದುಪಡಿಗಳೊಂದಿಗೆ  ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಪರಿಷ್ಕರಿಸಿದೆ:

  1. ಸಾರ್ವಜನಿಕ ಇವಿ ಚಾರ್ಜಿಂಗ್ ಸ್ಟೇಷನ್ ಆಪರೇಟರ್‌ಗಳು ಮತ್ತು ಮಾಲೀಕರು ಮತ್ತು ಎಲೆಕ್ಟ್ರಿಕ್ ವೆಹಿಕಲ್ (ಇವಿ) ಮಾಲೀಕರಿಗೆ ವಿಧಿಸಬಹುದಾದ ಕೈಗೆಟುಕುವ ದರ ನಿಗದಿಪಡಿಸುವುದು.
  2. ಎಲೆಕ್ಟ್ರಿಕ್ ವಾಹನಗಳ ಮಾಲೀಕರು ತಮ್ಮ ಬಳಿ ಹಾಲಿ ಇರುವ ವಿದ್ಯುತ್ ಸಂಪರ್ಕಗಳನ್ನು ಬಳಸಿಕೊಂಡು ತಮ್ಮ ನಿವಾಸಗಳು ಅಥವಾ ಕಚೇರಿಗಳಲ್ಲಿ ಇವಿಗಳನ್ನು ಚಾರ್ಜ್ ಮಾಡಲು ಅವಕಾಶ ಮಾಡಿಕೊಡುವುದು.
  3. ಕಾರ್ಯಾಚರಣೆಯ ದೃಷ್ಟಿಯಿಂದ ಸಾರ್ವಜನಿಕ ಚಾರ್ಜಿಂಗ್ ಕೇಂದ್ರವನ್ನು ಆರ್ಥಿಕವಾಗಿ ಕಾರ್ಯಸಾಧ್ಯವಾಗುವಂತೆ ಮಾಡಲು ಭೂ ಬಳಕೆಗಾಗಿ ಆದಾಯ ಹಂಚಿಕೆ ಮಾದರಿ ಸೂಚಿಸಲಾಗಿದೆ.
  4. ಇವಿ ಸಾರ್ವಜನಿಕ ಚಾರ್ಜಿಂಗ್‌ ವ್ಯವಸ್ಥೆಯನ್ನು ತ್ವರಿತವಾಗಿ ಒದಗಿಸಲು ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ (ಪಿಸಿಎಸ್) ಗೆ ಸಂಪರ್ಕವನ್ನು ಒದಗಿಸಲು ಕಾಲಮಿತಿ ಸೂಚಿಸಲಾಗಿದೆ.
  5. ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳಿಗೆ ತಾಂತ್ರಿಕ ಅವಶ್ಯಕತೆಗಳನ್ನು ವಿವರಿಸಲಾಗಿದೆ.

ಆ ನಿಟ್ಟಿನಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ದೇಶದಾದ್ಯಂತ ಪ್ರಮುಖ ನಗರಗಳಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ 22,000 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಘೋಷಿಸಿವೆ. 22,000 ಇವಿ ಚಾರ್ಜಿಂಗ್ ಕೇಂದ್ರಗಳಲ್ಲಿ 10,000 ಅನ್ನು ಐಒಸಿಎಲ್ ಸ್ಥಾಪಿಸುತ್ತದೆ, 7,000 ಕೇಂದ್ರಗಳನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಸ್ಥಾಪಿಸುತ್ತದೆ ಮತ್ತು ಉಳಿದ 5,000 ಅನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ ಪಿಸಿಎಲ್) ಸ್ಥಾಪಿಸುತ್ತದೆ. ಐಒಸಿಎಲ್ ಈಗಾಗಲೇ 439 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದೆ ಮತ್ತು ಮುಂದಿನ ವರ್ಷದ ಇನ್ನೂ 2,000 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಿದೆ. ಬಿಪಿಸಿಎಲ್  52 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದ್ದರೆ, ಎಚ್ ಪಿಸಿಎಲ್ 382 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದೆ.

ಬೃಹತ್ ಕೈಗಾರಿಕಾ ಇಲಾಖೆಯು ಇತ್ತೀಚೆಗೆ 25 ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಿಗಾಗಿ 1576 ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳನ್ನು ಮಂಜೂರು ಮಾಡಿದೆ, ಇದು ಈ ಎಕ್ಸ್‌ಪ್ರೆಸ್‌ವೇಗಳು ಮತ್ತು ಹೆದ್ದಾರಿಗಳ ಎರಡೂ ಬದಿಗಳಲ್ಲಿ ಪ್ರತಿ 25 ಕಿಮೀ ವ್ಯಾಪ್ತಿಯಲ್ಲಿ ಕೇಂದ್ರಗಳಿರಲಿವೆ.  

***



(Release ID: 1799604) Visitor Counter : 257