ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರೀಯ ಮಹಿಳಾ ಆಯೋಗದ 30ನೇ ಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 31 JAN 2022 7:51PM by PIB Bengaluru

ನಮಸ್ಕಾರ!

ಕಾರ್ಯಕ್ರಮದಲ್ಲಿ ಹಾಜರಿರುವ ವಿವಿಧ ರಾಜ್ಯಗಳ ರಾಜ್ಯಪಾಲರೇ ಮತ್ತು ಮುಖ್ಯ ಮಂತ್ರಿಗಳೇ, ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಸ್ಮೃತಿ ಇರಾನೀ ಜೀ, ಡಾ. ಮಹೇಂದ್ರ ಭಾಯಿ ಮತ್ತು ದರ್ಶನ ಜರ್ದೋಷ್ ಜೀ, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾಗಿರುವ ಶ್ರೀಮತಿ ರೇಖಾ ಶರ್ಮಾ ಜೀ, ಎಲ್ಲಾ ರಾಜ್ಯಗಳ ಮಹಿಳಾ ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರೇ, ಸ್ವಯಂ ಸೇವಾ ಸಂಘಟನೆಗಳ ಸದಸ್ಯರೇ, ಇತರ ಗಣ್ಯರೇ, ಸಹೋದರರೇ ಮತ್ತು ಸಹೋದರಿಯರೇ!.

ರಾಷ್ಟ್ರೀಯ ಮಹಿಳಾ ಆಯೋಗದ 30 ನೇ ಸ್ಥಾಪನಾ ವರ್ಷದ ಸಂದರ್ಭದಲ್ಲಿ ನಿಮಗೆಲ್ಲ ಬಹಳ ಅಭಿನಂದನೆಗಳು. 30 ವರ್ಷಗಳ ಮೈಲಿಗಲ್ಲು ಅದು ವ್ಯಕ್ತಿಯ ಬದುಕಿನಲ್ಲಾಗಿರಲಿ ಅಥವಾ ಸಂಘಟನೆಯ ಬದುಕಿನಲ್ಲಾಗಿರಲಿ ಬಹಳ ಮುಖ್ಯವಾದುದು. ಇದು ಹೊಸ ಜವಾಬ್ದಾರಿಗಳ ಕಾಲ ಮತ್ತು ಹೊಸ ಶಕ್ತಿ ಸಂಚಯದೊಂದಿಗೆ ಮುನ್ನಡೆಯುವ ಕಾಲ. ರಾಷ್ಟ್ರೀಯ ಮಹಿಳಾ ಆಯೋಗವು ತನ್ನ 30 ನೇ ಸ್ಥಾಪನಾ ವರ್ಷವನ್ನು ನಿಲುವಿನೊಂದಿಗೆ, ಧೋರಣೆಯೊಂದಿಗೆ ಆಚರಿಸುತ್ತದೆ ಎಂಬ ಬಗ್ಗೆ ನನಗೆ ಖಚಿತ ವಿಶ್ವಾಸವಿದೆ. ಅದು ಹೆಚ್ಚು ಸಕ್ರಿಯವಾಗಿರಬೇಕು, ಹೆಚ್ಚು ಜವಾಬ್ದಾರಿಯುತವಾಗಿರಬೇಕು ಮತ್ತು ಹೊಸ ಉತ್ಸಾಹ, ಶಕ್ತಿಯನ್ನು ಅದು ಹೊಂದಿರಬೇಕು. ಬದಲಾಗುತ್ತಿರುವ ಭಾರತದಲ್ಲಿ ಮಹಿಳೆಯರ ಪಾತ್ರ ನಿರಂತರವಾಗಿ ವಿಸ್ತರಿಸಲ್ಪಡುತ್ತಿದೆ. ಆದುದರಿಂದ ರಾಷ್ಟ್ರೀಯ ಮಹಿಳಾ ಆಯೋಗದ ಪಾತ್ರವೂ ವಿಸ್ತರಣೆಯಾಗಬೇಕಿರುವುದು ಕ್ಷಣದ ಆವಶ್ಯಕತೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಎಲ್ಲಾ ಮಹಿಳಾ ಆಯೋಗಗಳು ಅವುಗಳ ವ್ಯಾಪ್ತಿಯನ್ನು ವಿಸ್ತರಿಸಬೇಕು ಮತ್ತು ಅವುಗಳ ರಾಜ್ಯಗಳ ಮಹಿಳೆಯರಿಗೆ ಹೊಸ ದಿಕ್ಕುಗಳನ್ನು ತೋರಿಸಬೇಕು.

ಸ್ನೇಹಿತರೇ,

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾಲಘಟ್ಟದಲ್ಲಿ ನವಭಾರತದ ದೃಢ ನಿರ್ಧಾರಗಳು ಇಂದು ನಮ್ಮೆದುರು ಇವೆ. ಇಂದು ದೇಶವು  “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ಮಂತ್ರದೊಂದಿಗೆ ಕೆಲಸ ಮಾಡುತ್ತಿದೆ. ಎಲ್ಲಾ ಸಾಧ್ಯತೆಗಳು ಸಮಾನವಾಗಿ ಎಲ್ಲರಿಗೂ ಮುಕ್ತವಾಗಿಟ್ಟುಕೊಂಡಾಗ ಮಾತ್ರ ದೇಶವು ಅಭಿವೃದ್ಧಿಯ ತನ್ನ ಗುರಿಯನ್ನು ತಲುಪಲು  ಸಾಧ್ಯವಾಗುತ್ತದೆ. ಮೊದಲು ವ್ಯಾಪಾರೋದ್ಯಮದ ವ್ಯಾಖ್ಯೆ ದೊಡ್ಡ ಕಾರ್ಪೋರೇಟ್ ಗಳು ಮತ್ತು ಪುರುಷರ ಸುತ್ತ ಸುತ್ತುತ್ತಿತ್ತು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಸತ್ಯ ಸಂಗತಿ ಏನೆಂದರೆ ಶತಮಾನಗಳಿಂದ ಭಾರತದ ಶಕ್ತಿ ನಮ್ಮ ಸಣ್ಣ ಸ್ಥಳೀಯ ಉದ್ಯಮಗಳಲ್ಲಿ ಅಡಗಿತ್ತು. ಅವುಗಳನ್ನು ಇಂದು ನಾವು ಎಂ.ಎಸ್.ಎಂ..ಗಳೆಂದು ಕರೆಯುತ್ತೇವೆ. ಉದ್ಯಮ, ಕೈಗಾರಿಕೆಗಳಲ್ಲಿ ಮಹಿಳೆಯರ ಪಾತ್ರ ಪುರುಷರ ಪಾತ್ರದಷ್ಟೇ ಪ್ರಮುಖವಾಗಿತ್ತು.

ನೀವು ಜವಳಿ ಉದ್ಯಮದ ಉದಾಹರಣೆ ತೆಗೆದುಕೊಳ್ಳಿ, ಅಥವಾ ಗೊಂಬೆ ಉದ್ಯಮ, ಅಥವಾ ಕೃಷಿ ಮತ್ತು ಹೈನು ಉತ್ಪನ್ನಗಳತ್ತ ನೋಡಿ, ಅಲ್ಲಿ ಮಹಿಳಾ ಶಕ್ತಿಯೇ ಜೀವಾಳವಾಗಿರುವಂತಹ ಮತ್ತು ಮಹಿಳಾ ಕೌಶಲ್ಯಗಳೇ ಪ್ರಧಾನವಾಗಿರುವಂತಹ ಹಲವಾರು ಉದ್ಯಮಗಳಿವೆ. ಆದರೆ ದುರದೃಷ್ಟಕರ ಸಂಗತಿ ಎಂದರೆ ಉದ್ಯಮಗಳ, ಕೈಗಾರಿಕೆಗಳ ಶಕ್ತಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಹಳೆಯ ಚಿಂತನೆಯಲ್ಲಿಯೇ ನಂಬಿಕೆ ಇಟ್ಟವರು ಮಹಿಳೆಯರ ಕೌಶಲ್ಯವನ್ನು ಮನೆಕೆಲಸ ಎಂದು ಪರಿಗಣಿಸಿದ್ದರು.

ದೇಶದ ಆರ್ಥಿಕತೆಯನ್ನು ಮುನ್ನಡೆಸಲು ಹಳೆಯ ಚಿಂತನೆಯನ್ನು, ಧೋರಣೆಯನ್ನು ಬದಲಾಯಿಸುವುದು ಅವಶ್ಯವಿದೆ. ಮೇಕ್ ಇನ್ ಇಂಡಿಯಾ ಇಂದು ಇದನ್ನು ಬಹಳ ನಿರ್ದಿಷ್ಟವಾದ ರೀತಿಯಲ್ಲಿ ಮಾಡುತ್ತಿದೆ. ಅತ್ಮ ನಿರ್ಭರ ಭಾರತ ಆಂದೋಲನವು ಮಹಿಳೆಯರ ಸಾಮರ್ಥ್ಯವನ್ನು ದೇಶದ ಅಭಿವೃದ್ಧಿಯ ಜೊತೆ ಜೋಡಿಸುತ್ತಿದೆ. ಮತ್ತು ಅದರ ಫಲಿತಾಂಶಗಳು ನಮ್ಮೆದುರು ಇವೆ!. ಇಂದು ಮುದ್ರಾ ಯೋಜನಾದ ಫಲಾನುಭವಿಗಳಲ್ಲಿ ಸುಮಾರು 70 ಶೇಖಡಾದಷ್ಟು  ಮಂದಿ ಮಹಿಳೆಯರು. ಕೋಟ್ಯಾಂತರ ಮಹಿಳೆಯರು ಯೋಜನೆಯ ಸಹಾಯದೊಂದಿಗೆ ಅವರ ಉದ್ಯಮಗಳನ್ನು ಆರಂಭ ಮಾಡಿದ್ದಾರೆ ಮತ್ತು ಇತರರಿಗೂ ಉದ್ಯೋಗಗಳನ್ನು ಒದಗಿಸುತ್ತಿದ್ದಾರೆ.

ಅದೇ ರೀತಿ ದೇಶವು ಸ್ವ-ಸಹಾಯ ಗುಂಪುಗಳ ಮೂಲಕ ಮಹಿಳೆಯರಲ್ಲಿ ಉದ್ಯಮಶೀಲತ್ವವನ್ನು ಸುಧಾರಿಸಲು ದೀನ ದಯಾಳ ಅಂತ್ಯೋದಯ ಯೋಜನಾವನ್ನು ಕೈಗೊಂಡಿದೆ. ದೇಶದಲ್ಲಿರುವ ಮಹಿಳೆಯರ ಉತ್ಸಾಹ ಮತ್ತು ಶಕ್ತಿ ಎಷ್ಟಿದೆ ಎಂದರೆ ಕಳೆದ ಆರು-ಏಳು ವರ್ಷಗಳಲ್ಲಿ ಸ್ವ-ಸಹಾಯ ಗುಂಪುಗಳ ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಅದೇ ಪ್ರವೃತ್ತಿ ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯಲ್ಲೂ ಕಾಣಬರುತ್ತಿದೆ. 2016ರಿಂದ ನಮ್ಮ ದೇಶದಲ್ಲಿ 56 ವಿವಿಧ ವಲಯಗಳಲ್ಲಿ 60,000ಕ್ಕೂ ಅಧಿಕ  ಹೊಸ ನವೋದ್ಯಮಗಳು ಸ್ಥಾಪನೆಯಾಗಿವೆ. 45% ನಷ್ಟು ನವೋದ್ಯಮಗಳಲ್ಲಿ ಕನಿಷ್ಟ ಒಬ್ಬರು ಮಹಿಳಾ ನಿರ್ದೇಶಕರು ಇರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.

ಸ್ನೇಹಿತರೇ,

ನವ ಭಾರತದ ಅಭಿವೃದ್ಧಿ ಚಕ್ರದಲ್ಲಿ ಮಹಿಳೆಯರ ಪಾಲುದಾರಿಕೆ ಸತತವಾಗಿ ಹೆಚ್ಚುತ್ತಿದೆ. ಮಹಿಳಾ ಅಯೋಗಗಳು ಮಹಿಳೆಯರ ಪಾತ್ರವನ್ನು ಸಮಾಜದ ಉದ್ಯಮಶೀಲತ್ವದಲ್ಲಿ ಸಾಧ್ಯವಿರುವಷ್ಟು ಮಟ್ಟಿಗೆ ಹೆಚ್ಚು ಉತ್ತೇಜಿಸಬೇಕು. ಕಳೆದ ಏಳು ವರ್ಷಗಳಲ್ಲಿ ದೇಶವು ಇದಕ್ಕೆ ವಿಶೇಷ ಗಮನ ಕೊಟ್ಟಿರುವುದನ್ನು ನೀವೆಲ್ಲರೂ ನೋಡಿರಬಹುದು. ಪ್ರತಿಷ್ಟಿತ ಪದ್ಮ ಪ್ರಶಸ್ತಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚುತ್ತಿರುವುದು ಇನ್ನೊಂದು ಉದಾಹರಣೆ. 2015 ರಿಂದ 185 ಮಹಿಳೆಯರಿಗೆ ಅವರ ಅಸಾಧಾರಣ ಕೆಲಸಕ್ಕಾಗಿ ಪದ್ಮ ಪ್ರಶಸ್ತಿ ನೀಡಲಾಗಿದೆ. ವರ್ಷ ಕೂಡಾ 34 ಪದ್ಮ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ನೀಡಲಾಗಿದೆ. ಇದು ಒಂದು ದಾಖಲೆ ಕೂಡಾ. ಇಂದಿನವರೆಗೆ ಇಷ್ಟು ಸಂಖ್ಯೆಯಲ್ಲಿ ಮಹಿಳೆಯರು ಪದ್ಮ ಪ್ರಶಸ್ತಿ ಪಡೆದದ್ದಿಲ್ಲ.

ಅದೇ ರೀತಿ ಭಾರತದ ಹೆಣ್ಣು ಮಕ್ಕಳು ಕ್ರೀಡಾ ಜಗತ್ತಿನಲ್ಲಿ ಅದ್ಭುತವಾದುದನ್ನು ಮಾಡುತ್ತಿದ್ದಾರೆ. ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಪದಕಗಳನ್ನು ಗೆಲ್ಲುತ್ತಿದ್ದಾರೆ. ಕೊರೊನಾ ಜಾಗತಿಕ ಸಾಂಕ್ರಾಮಿಕದ ವಿರುದ್ಧ ದೇಶದ ಅತ್ಯಂತ ದೊಡ್ಡ ಯುದ್ದದಲ್ಲಿ ನಮ್ಮ ದಾದಿಯರು, ವೈದ್ಯರು ಮತ್ತು ಮಹಿಳಾ ವಿಜ್ಞಾನಿಗಳು ಬಹಳ ದೊಡ್ಡ ಪಾತ್ರವನ್ನು ನಿಭಾಯಿಸಿದ್ದಾರೆ.

ಅಂದರೆ, ಭಾರತದ ಮಹಿಳಾ ಶಕ್ತಿ ತನಗೆ ಅವಕಾಶ ಸಿಕ್ಕಿದಾಗೆಲ್ಲ ತನ್ನ ಸಾಮರ್ಥ್ಯವನ್ನು ತೋರಿಸಿದೆ. ಮಹಿಳೆಯರು ಅತ್ಯುತ್ತಮ ಶಿಕ್ಷಕರು ಮತ್ತು ತರಬೇತುದಾರರು ಎಂಬುದು ನಿಮಗಿಂತ ಚೆನ್ನಾಗಿ ಬಲ್ಲವರು ಬೇರೆ ಯಾರು ಇದ್ದಾರೆ?. ಆದುದರಿಂದ, ಎಲ್ಲಾ ಮಹಿಳಾ ಆಯೋಗಗಳ ಎದುರು ಭಾರತದಲ್ಲಿ ಉದ್ಯಮಶೀಲತ್ವದಿಂದ ಹಿಡಿದು ಕ್ರೀಡೆಯವರೆಗೆ ಹೊಸ ಧೋರಣೆ ಮತ್ತು ಸಾಮರ್ಥ್ಯವನ್ನು ರೂಪಿಸುವ ಬಹಳ ದೊಡ್ಡ ಜವಾಬ್ದಾರಿ ಕೂಡಾ ಇದೆ.

ಸ್ನೇಹಿತರೇ,

ಕಳೆದ ಏಳು ವರ್ಷಗಳಲ್ಲಿ ದೇಶದ ನೀತಿಗಳು ಮಹಿಳೆಯರಿಗೆ ಸಂಬಂಧಿಸಿದಂತೆ ಹೆಚ್ಚು ಸೂಕ್ಷ್ಮವಾಗಿರುವುದಕ್ಕೆ ನೀವೆಲ್ಲ ಸಾಕ್ಷಿಗಳಾಗಿದ್ದೀರಿ. ಇಂದು ಭಾರತವು ಗರಿಷ್ಟ ಹೆರಿಗೆ ರಜೆ ನೀಡುತ್ತಿರುವ ದೇಶಗಳಲ್ಲಿ ಒಂದಾಗಿದೆ. ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 21 ವರ್ಷಕ್ಕೆ ಏರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಬೇಗ ಮದುವೆ ಮಾಡುವುದರಿಂದ  ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳಿಗೆ ತೊಂದರೆಯಾಗುವುದನ್ನು ಇದು ನಿವಾರಿಸಬಲ್ಲುದು.

ದೇಶದ ಮಹಿಳಾ ಸಶಕ್ತೀಕರಣವನ್ನು ಕಿರಿದಾದ ಪಟ್ಟಕದ ಮೂಲಕ, ಕಿರಿದಾದ ದೃಷ್ಟಿಕೋನದಿಂದ ನೋಡುವ ಕಾಲವೊಂದಿತ್ತು. ಹಳ್ಳಿಗಳ, ಗ್ರಾಮಗಳ ಮಹಿಳೆಯರು ಮತ್ತು ಬಡ ಕುಟುಂಬಗಳ ಮಹಿಳೆಯರು ಇದರ ವ್ಯಾಪ್ತಿಯಿಂದ ಹೊರಗಿದ್ದರು. ಅಸಮಾನತೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ. ಇಂದು ಮಹಿಳಾ ಸಶಕ್ತೀಕರಣದ ಮುಖವನ್ನು 9 ಕೋಟಿ ಬಡ ಮಹಿಳೆಯರು ಮೊದಲ ಬಾರಿಗೆ ಅಡುಗೆ ಅನಿಲ ಸಂಪರ್ಕ ಪಡೆದು ಹೊಗೆಯಿಂದ ಮುಕ್ತಿ ಪಡೆದಿರುವಲ್ಲಿಯೂ ಕಾಣಬಹುದು. ಇಂದು, ಕೋಟ್ಯಾಂತರ ತಾಯಂದಿರು ಮತ್ತು ಸಹೋದರಿಯರು ತಮ್ಮ ಮನೆಗಳಲ್ಲಿ ಶೌಚಾಲಯ ಪಡೆದಿರುವುದರಲ್ಲಿಯೂ ಮಹಿಳಾ ಸಶಕ್ತೀಕರಣದ ಮುಖವಿದೆ. ಇವುಗಳನ್ನು ಉತ್ತರ ಪ್ರದೇಶದಲ್ಲಿ ಇಜ್ಜತ್ ಘರ್ ಎಂದು ಕರೆಯುತ್ತಾರೆ. ಇದೇ ಮೊದಲ ಬಾರಿಗೆ ತಮ್ಮ ತಲೆಯ ಮೇಲೆ ಕಾಂಕ್ರೀಟ್ ಛಾವಣಿ ಹೊಂದಿರುವ ತಾಯಂದಿರಲ್ಲೂ ಮಹಿಳಾ ಸಶಕ್ತೀಕರಣದ ಮುಖವನ್ನು ಕಾಣಬಹುದು. ಅದೇ ರೀತಿ ಕೋಟ್ಯಾಂತರ ಮಹಿಳೆಯರು ಗರ್ಭಿಣಿಯಾಗಿದ್ದಾಗ ಮತ್ತು ಹೆರಿಗೆ ಸಂದರ್ಭದಲ್ಲಿ  ನೆರವು ಪಡೆದುಕೊಳ್ಳುವಲ್ಲಿ, ಕೋಟ್ಯಾಂತರ ಮಹಿಳೆಯರು ಜನ ಧನ ಬ್ಯಾಂಕ್ ಖಾತೆಗಳನ್ನು ಪಡೆದುಕೊಳ್ಳುವಲ್ಲಿ, ಸರಕಾರದ ಸಹಾಯಧನ ನೇರವಾಗಿ ಮಹಿಳೆಯರ ಖಾತೆಗಳಿಗೆ ಜಮಾ ಆಗುವಲ್ಲಿ, ಮಹಿಳೆಯರ ಸಶಕ್ತೀಕರಣದ ಮುಖವಿದೆ ಮತ್ತು ಅದು ಬದಲಾಗುತ್ತಿರುವ ಭಾರತದ ಮುಖ.

ಸ್ನೇಹಿತರೇ,

ಇಂದು ದೇಶದ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಅವರು ಅವರ ಭವಿಷ್ಯವನ್ನು ನಿರ್ಧರಿಸುತ್ತಿದ್ದಾರೆ ಮತ್ತು ದೇಶದ ಭವಿಷ್ಯಕ್ಕೆ ದಿಕ್ಕುದಿಸೆಗಳನ್ನು ನೀಡುತ್ತಿದ್ದಾರೆ. ಹಲವಾರು ವರ್ಷಗಳ ಬಳಿಕ ದೇಶದಲ್ಲಿ ಲಿಂಗಾನುಪಾತ ಸುಧಾರಿಸಿದೆ. ಹುಡುಗಿಯರು ಶಾಲೆಗಳನ್ನು ತೊರೆಯುವ ಪ್ರಮಾಣದಲ್ಲಿ ಕುಸಿತವಾಗಿದೆ. ಯಾಕೆಂದರೆ ಮಹಿಳೆಯರು ದೇಶದಬೇಟಿ ಬಚಾವೋ, ಬೇಟಿ ಪಡಾವೋಆಂದೋಲನದ ಜೊತೆ ತಮ್ಮನ್ನು ತಾವು ಸಂಯೋಜಿಸಿಕೊಂಡಿದ್ದಾರೆ. ಮತ್ತು ಮಹಿಳೆ ಯಾವುದಾದರೊಂದು ಸಂಗತಿಯ ಬಗ್ಗೆ ನಿರ್ಧಾರ ಕೈಗೊಂಡರೆ ಆಗ ಆಕೆಯೇ ಅದರ ದಿಕ್ಕನ್ನೂ ನಿರ್ಧರಿಸುತ್ತಾಳೆ. ಆದುದರಿಂದ, ಮಹಿಳಾ ಸುರಕ್ಷೆಗೆ ಆದ್ಯತೆ ನೀಡದ ಸರಕಾರಗಳನ್ನು ಅಧಿಕಾರದಿಂದ ಪದಚ್ಯುತಗೊಳಿಸಲು ಮಹಿಳೆಯರು ಹಿಂಜರಿಯಲಾರರು ಎಂಬ ಸಂಗತಿಯನ್ನೂ ನಾವು ಕಾಣುವಂತಾಗಿದೆ

ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ವಿಷಯವನ್ನು ಇತರ ಕಡೆಗಳಲ್ಲಿಯೂ ಯಾಕೆ ಇದೇ ರೀತಿಯಲ್ಲಿ ನಿರ್ವಹಿಸಲಾಗುತ್ತಿಲ್ಲ ಎಂಬ ಬಗ್ಗೆ ಅಚ್ಚರಿಪಡುತ್ತಿದ್ದೆ. ಆದುದರಿಂದ ನಾವು 2014ರಲ್ಲಿ ಸರಕಾರ ರಚಿಸಿದ ಬಳಿಕ ರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಸುರಕ್ಷೆಗೆ ಸಂಬಂಧಿಸಿ ಹಲವು ಪ್ರಯತ್ನಗಳನ್ನು ಮಾಡಿದೆವು. ಇಂದು ಮಹಿಳೆಯರ ಮೇಲೆ ನಡೆಯುವ ಅಪರಾಧಗಳಿಗೆ ಬಹಳ ಕಠಿಣ ಕಾನೂನುಗಳಿವೆ. ಮತ್ತು ಅತ್ಯಂತ ಹೀನ ಕೃತ್ಯಗಳಲ್ಲಿ ಮರಣದಂಡನೆಯ ಅವಕಾಶವನ್ನೂ ಒದಗಿಸಲಾಗಿದೆ. ದೇಶಾದ್ಯಂತ ತ್ವರಿತ ಗತಿಯ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಹೊಸ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಅನುಸರಿಸುವುದನ್ನು ಖಾತ್ರಿ ಮಾಡಲು ರಾಜ್ಯಗಳ ಜೊತೆ ಸಹಕಾರದೊಂದಿಗೆ ವ್ಯವಸ್ಥೆಗಳನ್ನು ಸುಧಾರಿಸಲಾಗುತ್ತಿದೆ

ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯ ಡೆಸ್ಕ್ ಗಳ ಸಂಖ್ಯೆಯನ್ನು ಹೆಚ್ಚಿಸುವ ಹಲವಾರು ಪ್ರಯತ್ನಗಳು ಚಾಲನೆಯಲ್ಲಿವೆ. ನಿರಂತರ ಕಾರ್ಯಾಚರಿಸುವ ಸಹಾಯವಾಣಿ ಮತ್ತು ಸೈಬರ್ ಅಪರಾಧಗಳನ್ನು ನಿರ್ವಹಿಸುವ ಪೋರ್ಟಲ್ ಹೊಂದುವ ನಿಟ್ಟಿನಲ್ಲಿಯೂ ಕ್ರಮಗಳು ಜಾರಿಯಲ್ಲಿವೆ. ಬಹಳ ಮುಖ್ಯವಾಗಿ, ಇಂದು ಸರಕಾರ ಮಹಿಳೆಯರ ಮೇಲಣ ಅಪರಾಧಗಳಿಗೆ ಸಂಬಂಧಿಸಿ ಶೂನ್ಯ ಸಹನೆಯ ನೀತಿಯನ್ನು ಅನುಸರಿಸುತ್ತಿದೆ. ಎಲ್ಲಾ ಪ್ರಯತ್ನಗಳಲ್ಲಿ, ಮಹಿಳೆಯರಿಗಾಗಿರುವ ರಾಷ್ಟ್ರೀಯ ಆಯೋಗವು ರಾಜ್ಯ ಮಹಿಳಾ ಆಯೋಗಗಳ ಸಹಯೋಗದೊಂದಿಗೆ ಮಹಿಳೆಯರು ಮತ್ತು ಸರಕಾರದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿದೆ. ನಿಮ್ಮ ಧನಾತ್ಮಕ ಪಾತ್ರವು ಅದೇ ರೀತಿಯಲ್ಲಿ ನಮ್ಮ ಸಮಾಜವನ್ನು ಬಲಪಡಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂಬ ಬಗ್ಗೆ ನನಗೆ ಖಚಿತ ವಿಶ್ವಾಸವಿದೆ

ನಂಬಿಕೆಯೊಂದಿಗೆ, ಮತ್ತೊಮ್ಮೆ ನಿಮ್ಮೆಲ್ಲರಿಗೂ ಸ್ಥಾಪನಾ ದಿನದ ಸಂದರ್ಭದಲ್ಲಿ ಬಹಳ ಬಹಳ ಅಭಿನಂದನೆಗಳು!

ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***


(Release ID: 1794712) Visitor Counter : 694