ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಹಕಾರಕ್ಕೆ ಶ್ರೀ ನಿತಿನ್ ಗಡ್ಕರಿ ಕರೆ

Posted On: 18 JAN 2022 11:23AM by PIB Bengaluru

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಸೋಮವಾರ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಹಕಾರಕ್ಕೆ ಕರೆ ನೀಡಿದರು. ದೇಶವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸುವ ದೃಷ್ಟಿಯಿಂದ ಭಾರತದ ಗುರಿ ಸಾಧನೆಯಲ್ಲಿ ಮೂಲಸೌಕರ್ಯಾಭಿವೃದ್ಧಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (ಎಂಒಆರ್ ಟಿಎಚ್) ಆಯೋಜಿಸಿದ್ದ “ಪಿಎಂ-ಗತಿ ಶಕ್ತಿ” ಕುರಿತ ದಕ್ಷಿಣ ವಲಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರದ ನಡುವೆ ಸಹಕಾರ ಮತ್ತು ಸಂವಹನವನ್ನು ಹೆಚ್ಚಿಸುವ ಅಗತ್ಯವಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸಲು ರಾಜ್ಯಗಳ ನೀಡಿದ ಸಲಹೆಗಳನ್ನು ಅವರು ಸ್ವಾಗತಿಸಿದರು. 
ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ತಮ್ಮ ಭಾಷಣದಲ್ಲಿ, ಭಾರತ ಸರ್ಕಾರ ಮತ್ತು ರಾಜ್ಯಗಳ ಅತ್ಯಂತ ಪ್ರಮುಖ ಯೋಜನೆಗಳಲ್ಲಿ ಸಹಕಾರ ಮತ್ತು ಸಮನ್ವಯ ಸಾಧಿಸಲು ಇಸು ಸಕಾಲ ಎಂದು ಸಲಹೆ ನೀಡಿದರು. ಹಣಕಾಸು ವಲಯದಲ್ಲಿ ಹೂಡಿಕೆಗಳನ್ನು ಹೆಚ್ಚಿಸಲು ಅನುಮೋದನೆಗಳನ್ನು ಮತ್ತು ನಿಯಮಗಳನ್ನು ಸಡಿಲಗೊಳಿಸುವಂತೆ ಅವರು ಕೇಂದ್ರವನ್ನು ಒತ್ತಾಯಿಸಿದರು.

ಪುದುಚೇರಿಯ ಲೆಫ್ಟಿನೆಂಟ್ ಗೌರ್ನರ್ ಡಾ.(ಶ್ರೀಮತಿ) ತಮಿಳಿಸೈ ಸೌಂದರರಾಜನ್,  ಬಹು ಮಾದರಿ ಸಂಪರ್ಕವು ಜನರು ಮತ್ತು ಸರಕುಗಳ ಸಾಗಣೆಗೆ ಸಂಪರ್ಕ ಸುಗಮಗೊಳಿಸುತ್ತದೆ ಎಂದು ಹೇಳಿದರು. ಪುದುಚೇರಿ ಮುಖ್ಯಮಂತ್ರಿ ಶ್ರೀ ಎನ್.ರಂಗಸಾಮಿ ಅವರು, ಪುದುಚೇರಿಗೆ ಭೇಟಿ ನೀಡುವ ಜನರಿಗೆ ಸಂಚಾರ ದಟ್ಟಣೆ ತಗ್ಗಿಸಲು ಎಲಿವೇಟೆಡ್ ಕಾರಿಡಾರ್ ಯೋಜನೆ ನಿರ್ಮಾಣ, ಹೆಲಿಪ್ಯಾಡ್ ಸೇವೆಗಳು ಮತ್ತು ವಿಮಾನ ನಿಲ್ದಾಣದ ಸೌಲಭ್ಯಗಳನ್ನು ಒದಗಿಸುವ ಪ್ರಾಮುಖ್ಯದ  ಕುರಿತು ಮಾತನಾಡಿದರು.
ರಾಜ್ಯ ಸಚಿವ (ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ನಾಗರಿಕ ವಿಮಾನಯಾನ) ಜನರಲ್ (ನಿವೃತ್ತ) ಡಾ. ವಿ.ಕೆ. ಸಿಂಗ್ ತಮ್ಮ ಭಾಷಣದಲ್ಲಿ “ಭಾರತದಲ್ಲಿ ಬಹು-ಮಾದರಿ ಸಂಪರ್ಕಕ್ಕೆ ಉತ್ತೇಜನ ನೀಡುವುದು ‘ಪಿಎಂ-ಗತಿ ಶಕ್ತಿ’ ಯ ಗುರಿಯಾಗಿದೆ’’ ಎಂದು  ಹೇಳಿದರು.
ಆಂಧ್ರಪ್ರದೇಶದ ಕೈಗಾರಿಕೆ, ವಾಣಿಜ್ಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಎಂ. ಗೌತಮ್ ರೆಡ್ಡಿ ಅವರು, ದೇಶದ ಎರಡನೇ ಅತಿದೊಡ್ಡ ಕರಾವಳಿ ಕಾರಿಡಾರ್ ಹೊಂದಿರುವ ತಮ್ಮ ರಾಜ್ಯವು ಬೃಹತ್  ಆರ್ಥಿಕತೆಯ ಭಾರತದ ದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಕೊಡುಗೆ ನೀಡಬಹುದು ಎಂದು ಹೇಳಿದರು. ಪಿಎಂ-ಗತಿ ಶಕ್ತಿ ಕುರಿತು ಅವರು ಮಾತನಾಡಿ, ಭಾರತದಲ್ಲಿ ಸಾಗಣೆ (ಲಾಜಿಸ್ಟಿಕ್ಸ್) ವೆಚ್ಚವು ಜಾಗತಿಕ ಸರಾಸರಿ ಜಿಡಿಪಿಯ ಶೇ.14ರಷ್ಟಿದೆ, ಆದರೆ ಜಾಗತಿಕ ಸರಾಸರಿ  ಶೇ 8 ರಷ್ಟು ಮಾತ್ರವಿದೆ ಮತ್ತು  ವೆಚ್ಚವನ್ನು ಕಡಿಮೆ ಮಾಡಲು ಪ್ರಧಾನ ಮಂತ್ರಿ ಬದ್ಧತೆ ವ್ಯಕ್ತಪಡಿಸಿದ್ದಾರೆ. ಆ ಗುರಿ ಸಾಧಿಸಲು ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು. 
ಕೇರಳದ ಲೋಕೋಪಯೋಗಿ ಇಲಾಖೆ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಪಿ.ಎ. ಮೊಹಮ್ಮದ್ ರಿಯಾಸ್, ದೇಶದ ಆರ್ಥಿಕ ಬೆಳವಣಿಗೆಗೆ ದೃಢವಾದ ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯವು ಮೂಲಭೂತ ಅಗತ್ಯವಾಗಿದೆ ಮತ್ತು ಪಿಎಂ-ಗತಿ ಶಕ್ತಿಯು ಸಾಗಣೆ ವಲಯದ ಆಯಾಮವನ್ನು ಬದಲಾಯಿಸುತ್ತದೆ ಎಂದು ಹೇಳಿದರು. ಬಹು-ಮಾದರಿ ಸಂಪರ್ಕದ ಅಭಿವೃದ್ಧಿಗೆ ಕೇರಳ ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
ತೆಲಂಗಾಣ ಪೌರಾಡಳಿತ ಮತ್ತು ನಗರಾಭಿವೃದ್ಧಿ, ಕೈಗಾರಿಕೆ ಮತ್ತು ವಾಣಿಜ್ಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಕೆ.ಟಿ. ರಾಮರಾವ್, ರಾಷ್ಟ್ರೀಯ ಹೆದ್ದಾರಿಗಳ ವಿಷಯದಲ್ಲಿ ತಮ್ಮ ರಾಜ್ಯವು ಕೇಂದ್ರದಿಂದ ಸಾಕಷ್ಟು ನೆರವನ್ನು ಪಡೆದಿದೆ, ಆದರೆ ರೈಲ್ವೆ ಮೂಲಸೌಕರ್ಯವನ್ನು ಸುಧಾರಿಸಲು ಕೇಂದ್ರದಿಂದ ಹೆಚ್ಚಿನ ಸಹಾಯವನ್ನು ಕೋರಲಾಗುತ್ತಿದೆ ಎಂದರು. 

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಗಿರಿಧರ್ ಅರ್ಮಾನೆ ತಮ್ಮ ಸ್ವಾಗತ ಭಾಷಣದಲ್ಲಿ ರಾಜ್ಯ ಮಟ್ಟದಲ್ಲಿ ಸಾಂಸ್ಥಿಕ ಚೌಕಟ್ಟನ್ನು ರಚಿಸುವ ಬಗ್ಗೆ ಒತ್ತಿ ಹೇಳಿದರು. ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳಿಂದ ಸಂವೇದನಾ ಶೀಲತೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವುದು, ಜೊತೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕ್ರಿಯಾ ಯೋಜನೆಯ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವುದು ಸಮ್ಮೇಳನದ ಉದ್ದೇಶ ಎಂದು ಅವರು ಹೇಳಿದರು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಲಕ್ಷದ್ವೀಪ, ಮಹಾರಾಷ್ಟ್ರ, ಪುದುಚೇರಿ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸಮಾವೇಶದಲ್ಲಿ ಭಾಗವಹಿಸಿದ್ದವು. ಕೇಂದ್ರ ಮತ್ತು ರಾಜ್ಯಗಳ ಅಧಿಕಾರಿಗಳು ಮತ್ತು ಪಾಲುದಾರರನ್ನು ಒಳಗೊಂಡ ಕಾರ್ಯಕ್ರಮ ನಾನಾ ವಿಷಯಗಳ ವಿವಿಧ ಆಯಾಮಗಳ  ಕುರಿತ ಚರ್ಚೆಗೆ ಸಾಕ್ಷಿಯಾಯಿತು. ಭಾಗವಹಿಸಿದ್ದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಇದುವರೆಗಿನ ಸಾಧನೆಗಳು, ಆಯಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಅನುಷ್ಠಾನ ಮತ್ತು ಸುಧಾರಣೆಗೆ ಕ್ರಿಯಾ ಯೋಜನೆ ಸಂಬಂಧಿಸಿದಂತೆ ಸಮ್ಮೇಳನದ ವೇಳೆ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು. 
 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ, ಎನ್ ಎಚ್ ಎಐ  ಅಧ್ಯಕ್ಷರಾದ ಶ್ರೀಮತಿ ಅಲ್ಕಾ ಉಪಾಧ್ಯಾಯ ಅವರ ಅಧ್ಯಕ್ಷತೆಯಲ್ಲಿ “ಪಿಎಂ-ಗತಿ ಶಕ್ತಿಗಾಗಿ ಅನುಷ್ಠಾನ ಮಾರ್ಗಸೂಚಿ” ಕುರಿತು ಸಂವಾದದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎಐ) ಸದಸ್ಯ ಶ್ರೀ ಆರ್.ಕೆ. ಪಾಂಡೆ  ಮಾತನಾಡಿದರು. ಎನ್ ಎಚ್ ಎಐ  ಅಧ್ಯಕ್ಷರಾದ ಶ್ರೀಮತಿ ಅಲ್ಕಾ ಉಪಾಧ್ಯ ಅವರು ಭಾಗವಹಿಸಿದ್ದ ರಾಜ್ಯಗಳ ಹಿರಿಯ ಅಧಿಕಾರಿಗಳು ನೀಡಿದ ಕೆಲವು ಮಹತ್ವದ ಅಂಶಗಳನ್ನು ಪಟ್ಟಿ ಮಾಡಿದರು.
ಭಾಸ್ಕರಾಚಾರ್ಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಪೇಸ್ ಅಪ್ಲಿಕೇಷನ್ಸ್ ಮತ್ತು ಜಿಯೋ ಇನ್‌ಫರ್ಮ್ಯಾಟಿಕ್ಸ್ (ಬಿಐಎಸ್ ಎಜಿ-ಎನ್) ಮಹಾನಿರ್ದೇಶಕ ಶ್ರೀ ಟಿ.ಪಿ.ಸಿಂಗ್ ಅವರು ತಾಂತ್ರಿಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ (ಹೆದ್ದಾರಿ) ಶ್ರೀ ಅಮಿತ್ ಕುಮಾರ್ ಘೋಷ್ ಅವರು ಭಾಗವಹಿಸಿದ್ದ ಎಂಟು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳನ್ನು ಸ್ವಾಗತಿಸಿ, ಕೈಗಾರಿಕಾ ಅಭಿವೃದ್ಧಿ, ಸಂಭಾವ್ಯ ಎಂಎಂಎಲ್ ಪಿ ಗಳು, ರಾಜ್ಯಗಳ ಆರ್ಥಿಕ ಅವಲೋಕನ ಮತ್ತು ಸಾರಿಗೆ ಆಯಾಮಗಳ ಅವಲೋಕನ, ಎನ್ ಎಂಪಿ ಯ ಉದ್ದೇಶಗಳು, ಉದ್ದೇಶಿತ ಸಂಪರ್ಕ ವಿಧಾನಗಳನ್ನು ಮತ್ತು ಸಾಗಣೆ ಮೂಲಸೌಕರ್ಯವನ್ನು ಬಲವರ್ಧನೆಗೊಳಿಸುವ ಇತರೆ ಆಯಾಮಗಳ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಸಲ್ಲಿಸುವಂತೆ ಕೋರಿದರು. 

***



(Release ID: 1790732) Visitor Counter : 197