ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ದೂರಸಂಪರ್ಕ ಸುಧಾರಣಾ ಪ್ಯಾಕೇಜ್ ಬಗ್ಗೆ ಪದೇಪದೆ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯೂ)
Posted On:
12 JAN 2022 4:41PM by PIB Bengaluru
2021ರ ಸೆಪ್ಟೆಂಬರ್ 15ರಂದು ಪ್ರಕಟಿಸಲಾದ ʻದೂರಸಂಪರ್ಕ ಸುಧಾರಣಾ ಪ್ಯಾಕೇಜ್ʼ ಪ್ರಕಾರ ಸರಕಾರಕ್ಕೆ ಸಲ್ಲಿಸಬೇಕಾದ ಕೆಲವು ಬಾಕಿಗಳನ್ನು ಈಕ್ವಿಟಿಯಾಗಿ ಪರಿವರ್ತಿಸುವ ವಿಷಯದಲ್ಲಿ ಕೆಲವು ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆಗಳು ತಮ್ಮ ಆಯ್ಕೆಗಳನ್ನು ಚಲಾಯಿಸುವ ಬಗ್ಗೆ ಹಲವು ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ.
- ಯಾವುದೇ ಟೆಲಿಕಾಂ ಸೇವಾ ಪೂರೈಕೆದಾರರ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಸರಕಾರ ಹಣ ಪಾವತಿಸುತ್ತಿದೆಯೇ?
ಇಲ್ಲ. ಯಾವುದೇ ಟೆಲಕಾಂ ಸೇವಾ ಪೂರೈಕೆದಾರರ (ಟಿಎಸ್‌ಪಿ) ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಸರಕಾರ ಯಾವುದೇ ಹಣವನ್ನು ಪಾವತಿಸುತ್ತಿಲ್ಲ. 2021ರ ಸೆಪ್ಟೆಂಬರ್ 15ರಂದು ಪ್ರಕಟಿಸಲಾದ ʻದೂರಸಂಪರ್ಕ ಸುಧಾರಣಾ ಪ್ಯಾಕೇಜ್ʼ ಪ್ರಕಾರ ಆ ಸಂಸ್ಥೆಗಳು ಚಲಾಯಿಸಿದ ಆಯ್ಕೆಗಳ ಆಧಾರದ ಮೇಲೆ ಕೆಲವು ʻಟಿಎಸ್‌ಪಿʼಗಳು ಸರಕಾರಕ್ಕೆ ಪಾವತಿಸಬೇಕಾದ ಕೆಲವು ಬಾಕಿಗಳನ್ನು ಈ ಕಂಪನಿಗಳಲ್ಲಿ ಈಕ್ವಿಟಿ/ಆದ್ಯತೆಯ ಬಂಡವಾಳವಾಗಿ ಪರಿವರ್ತಿಸಲಾಗುತ್ತಿದೆ.
- ಹಾಗಾದರೆ ಮೂರು ಕಂಪನಿಗಳಲ್ಲಿ ಷೇರುಗಳನ್ನು ಹೇಗೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ?
ದೂರಸಂಪರ್ಕ ವಲಯವು ಸುದೀರ್ಘ ಕಾಲದಿಂದ ವ್ಯಾಜ್ಯವನ್ನು ಎದುರಿಸಿದೆ. ಇದರ ಪರಿಣಾಮವಾಗಿ, ಎಲ್ಲಾ ಟೆಲಿಕಾಂ ಕಂಪನಿಗಳು ಹೆಚ್ಚಿನ ಪ್ರಮಾಣದ ಹೊಣೆಗಾರಿಕೆಗಳನ್ನು ಹೊಂದಿವೆ, ಅವು ವಿವಿಧ ಪೂರ್ವಾರ್ಜಿತ ಸಮಸ್ಯೆಗಳಿಂದಾಗಿ ಉದ್ಭವಿಸಿವೆ. ಈ ಸಮಸ್ಯೆಗಳು ಭಾರತೀಯ ಟೆಲಿಕಾಂ ಉದ್ಯಮವನ್ನು ಒತ್ತಡಕ್ಕೆ ಸಿಲುಕಿಸಿವೆ.
ನಮ್ಮ ಸಮಾಜಕ್ಕೆ ದೂರಸಂಪರ್ಕ ವಲಯವು ಅತ್ಯಗತ್ಯವಾಗಿದೆ, ಅದರಲ್ಲೂ ವಿಶೇಷವಾಗಿ ಕೋವಿಡ್ ನಂತರದ ಸನ್ನಿವೇಶದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಆದ್ದರಿಂದ, ಸರಕಾರವು ಸೆಪ್ಟೆಂಬರ್ 2021ರಲ್ಲಿ ಅನೇಕ ರಚನಾತ್ಮಕ ಮತ್ತು ಕಾರ್ಯವಿಧಾನ ಸುಧಾರಣೆಗಳಿಗೆ ಅನುಮೋದನೆ ನೀಡಿತು.
ಈ ಸುಧಾರಣೆಗಳ ಭಾಗವಾಗಿ, ಸರಕಾರಕ್ಕೆ ಪಾವತಿಸಬೇಕಾದ ಕೆಲವು ನಿರ್ದಿಷ್ಟ ಬಡ್ಡಿ ಹೊಣೆಗಾರಿಕೆಗಳನ್ನು ಸರಕಾರದ ಪರವಾಗಿ ಈಕ್ವಿಟಿ/ಆದ್ಯತೆಯ ಷೇರುಗಳಾಗಿ ಪರಿವರ್ತಿಸುವ ಆಯ್ಕೆಯನ್ನು ʻಟಿಎಸ್‌ಪಿʼಗಳಿಗೆ ನೀಡಲಾಯಿತು.
ಕೆಲವು ಕಂಪನಿಗಳು ತಮ್ಮ ಹೊಣೆಗಾರಿಕೆಗಳನ್ನು ಈಕ್ವಿಟಿ/ಆದ್ಯತೆಯ ಷೇರುಗಳಾಗಿ ಪರಿವರ್ತಿಸದಿರಲು ಆಯ್ಕೆ ಮಾಡಿದವು. ಆದರೆ, ಮೂರು ಕಂಪನಿಗಳು ಹೊಣೆಗಾರಿಕೆಗಳನ್ನು ಈಕ್ವಿಟಿ/ಆದ್ಯತೆಯ ಷೇರುಗಳಾಗಿ ಪರಿವರ್ತಿಸುವ ಆಯ್ಕೆಯನ್ನು ಚಲಾಯಿಸಿವೆ. ಅವುಗಳು ತಮ್ಮ ಹೊಣೆಗಾರಿಕೆಗಳಿಗೆ ಪ್ರತಿಯಾಗಿ ಸರಕಾರಕ್ಕೆ ಈ ಆಯ್ಕೆಯನ್ನು ನೀಡಿವೆ.
ಸರಕಾರವು ಈ ಷೇರುಗಳನ್ನು ಸೂಕ್ತ ಸಮಯದಲ್ಲಿ ಮಾರಾಟ ಮಾಡಬಹುದು ಮತ್ತು ಆ ಮೂಲಕ ಬಾಕಿ ಇರುವ ಮೊತ್ತವನ್ನು ಪಡೆಯಬಹುದಾಗಿದೆ.
- ಈ ಪ್ರಕ್ರಿಯೆಯು ಈ ಮೂರು ಕಂಪನಿಗಳನ್ನು ಸಾರ್ವಜನಿಕ ವಲಯದ ಉದ್ಯಮಗಳನ್ನಾಗಿ (ಪಿಎಸ್‌ಯು) ಮಾಡುತ್ತದೆಯೇ?
ಇಲ್ಲ. ಈ ಮೂರು ಕಂಪನಿಗಳು ʻಪಿಎಸ್‌ಯುʼಗಳಾಗುವುದಿಲ್ಲ. ಈ ಮೂರು ಕಂಪನಿಗಳು ವೃತ್ತಿಪರವಾಗಿ ನಡೆಸಲಾಗುವ ಖಾಸಗಿ ಕಂಪನಿಗಳಾಗಿ ಮುಂದುವರಿಯುತ್ತವೆ.
- ಟೆಲಿಕಾಂ ಉದ್ಯಮದ ಮೇಲೆ ಮತ್ತು ಸಾಮಾನ್ಯ ಜನರ ಮೇಲೆ ಪರಿಣಾಮವೇನು?
ಟೆಲಿಕಾಂ ಉದ್ಯಮವು ಆರೋಗ್ಯಕರ ಮತ್ತು ಸ್ಪರ್ಧಾತ್ಮಕವಾಗಿರಬೇಕು. ಇಂತಹ ಸಾಂಕ್ರಾಮಿಕದ ಸಮಯದಲ್ಲಿ ಸರಕಾರದ ಸುಧಾರಣೆಗಳು ಮತ್ತು ಬೆಂಬಲದಿಂದಾಗಿ ಕಂಪನಿಗಳು ತಮ್ಮ ವ್ಯವಹಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಇದು ಮಾರುಕಟ್ಟೆಯಲ್ಲಿ ಕೆಲವೇ ಸಂಸ್ಥೆಗಳು ಆಧಿಪತ್ಯ ಗಳಿಸುವ ಸನ್ನಿವೇಶವನ್ನು ಸಹ ತಡೆಯುತ್ತದೆ. ಅಂತಹ ಸ್ಪರ್ಧೆ ಕೊರತೆಯ ಸಂಭಾವ್ಯ ಸನ್ನಿವೇಶವು ಅಧಿಕ ಬೆಲೆಗಳಿಗೆ ಮತ್ತು ಕಳಪೆ ಸೇವೆಗಳಿಗೆ ಕಾರಣವಾಗಬಹುದು. ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಪರ್ಧೆಯು ಸಾಮಾನ್ಯ ಜನರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ.
ಹೊಣೆಗಾರಿಕೆಗಳನ್ನು ಈಕ್ವಿಟಿ/ಆದ್ಯತೆಯ ಷೇರುಗಳಾಗಿ ಪರಿವರ್ತಿಸುವುದರೊಂದಿಗೆ, ಈ ವಲಯವು ಹೂಡಿಕೆ ಮಾಡುವ ಮತ್ತು ಉತ್ತಮ ಸೇವೆಗಳನ್ನು ಒದಗಿಸುವ ಸಾಮರ್ಥ್ಯವನ್ನು ಮರಳಿ ಪಡೆದಿದೆ. ದೂರಸಂಪರ್ಕ ಸೇವೆಗಳು ದೂರದ ಪ್ರದೇಶಗಳನ್ನು ತಲುಪಲು ಕಂಪನಿಗಳು ಹೂಡಿಕೆ ಮಾಡುವ ಸಾಮರ್ಥ್ಯವನ್ನು ಉಳಿಸಿಕೊಂಡಿವೆ.
- ಬಿಎಸ್ಎನ್ಎಲ್ ಅನ್ನು ಪುನರುಜ್ಜೀವಗೊಳಿಸಲು ಎನ್‌ಡಿಎ ಸರಕಾರ ಯಾವ ಕ್ರಮಗಳನ್ನು ಕೈಗೊಂಡಿದೆ?
ತಂತ್ರಜ್ಞಾನವನ್ನು ನವೀಕರಿಸಲು ಅನುಮತಿ ನೀಡದ ಕಾರಣದಿಂದಾಗಿ ಈ ಹಿಂದೆ ʻಎಂಟಿಎನ್ಎಲ್ʼ ಮತ್ತು ʻಬಿಎಸ್ಎನ್ಎಲ್ʼ ವ್ಯವಸ್ಥಿತವಾಗಿ ದುರ್ಬಲಗೊಂಡಿದ್ದವು. ಇದರ ಪರಿಣಾಮವಾಗಿ, ಈ ಎರಡು ಸಾರ್ವಜನಿಕ ವಲಯದ ಕಂಪನಿಗಳು (ಪಿಎಸ್‌ಯು) ಮಾರುಕಟ್ಟೆ ಪಾಲನ್ನು ಕಳೆದುಕೊಂಡವು ಮತ್ತು ಸುಮಾರು 59,000 ಕೋಟಿ ಸಾಲದ ಹೊರೆಯನ್ನು ಹೊತ್ತುಕೊಂಡವು.
ಈ ʻಪಿಎಸ್‌ಯುʼಗಳ ಉಳಿವನ್ನು ಖಚಿತಪಡಿಸಿಕೊಳ್ಳಲು ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ʻಬಿಎಸ್ಎನ್ಎಲ್ʼ ಮತ್ತು ʻಎಂಟಿಎನ್ಎಲ್ʼಗಳನ್ನು ಪುನರುಜ್ಜೀವಗೊಳಿಸಲು ಮತ್ತು ಬೆಳೆಸಲು 70,000 ಕೋಟಿ ರೂ. ಮೌಲ್ಯದ ಪ್ಯಾಕೇಜ್‌ಗೆ ಸರಕಾರ ಅನುಮೋದನೆ ನೀಡಿದೆ.
ಸರ್ಕಾರದ ಪ್ರಯತ್ನಗಳು ಭಾರತೀಯ ʻ4ಜಿʼ ಮತ್ತು ʻ5ಜಿʼ ತಂತ್ರಜ್ಞಾನಗಳ ಅಭಿವೃದ್ಧಿಗೆ ಹಾದಿ ಮಾಡಿವೆ. ʻಬಿಎಸ್ಎನ್ಎಲ್ʼನ 4ಜಿ ʻಪಿಒಸಿʼಯ ಅಂತಿಮ ಹಂತದಲ್ಲಿದೆ. 4ಜಿ ಸ್ಪೆಕ್ಟ್ರಂ ಅನ್ನು ಸ್ವಾಧೀನಪಡಿಸಿಕೊಳ್ಳಲು ಸರಕಾರ ʻಬಿಎಸ್ಎನ್ಎಲ್ʼಗೆ ಹಣವನ್ನು ಹಂಚಿಕೆ ಮಾಡಿದೆ. ಈ ಎಲ್ಲಾ ಕ್ರಮಗಳು ʻಬಿಎಸ್ಎನ್ಎಲ್ʼ ಅನ್ನು ಹೆಚ್ಚು ಸ್ಪರ್ಧಾತ್ಮಕ ಪರಿಸರದಲ್ಲಿ ಉಳಿಯಲು ಅನುವು ಮಾಡಿಕೊಟ್ಟಿವೆ. ಸರಕಾರದ ಬೆಂಬಲವು ಈಗ ʻಬಿಎಸ್ಎನ್ಎಲ್ʼ 20 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹೈಸ್ಪೀಡ್ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಸಹಾಯಕವಾಗಿದೆ.
ಈ ಹಿಂದಿನಂತಲ್ಲದೆ, ಪ್ರಸ್ತುತ ಸರಕಾರವು ಕೈಗೆಟುಕುವ ದರದಲ್ಲಿ ದೂರಸಂಪರ್ಕ ಸೇವೆಗಳು ಬಡ ಕುಟುಂಬಗಳಿಗೆ ತಲುಪುವಂತೆ ಕಾಯ್ದುಕೊಳ್ಳಲು ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ.
***
(Release ID: 1789573)
Visitor Counter : 239