ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಡಿಸೆಂಬರ್ 30 ರಂದು ಉತ್ತರಾಖಂಡಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ, ರೂ. 17500 ಕೋಟಿಗೂ ಹೆಚ್ಚು ಮೌಲ್ಯದ 23 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ


ಲಖ್ವಾರ್ ವಿವಿಧೋದ್ದೇಶ ಯೋಜನೆಯ ಅಡಿಗಲ್ಲು, 1976 ರಲ್ಲಿ ಮೊದಲಿಗೆ ಕಲ್ಪನೆ ರೂಪುಗೊಂಡರೂ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಶಂಕುಸ್ಥಾಪನೆ; ಆರು ರಾಜ್ಯಗಳಿಗೆ ಅನುಕೂಲವಾಗುವ ಯೋಜನೆ

8700 ಕೋಟಿ ರೂ.ಗಳ ರಸ್ತೆ ವಲಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ; ದೂರದ, ಗ್ರಾಮೀಣ ಮತ್ತು ಗಡಿ ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ಯೋಜನೆಗಳು; ಕೈಲಾಸ ಮಾನಸ ಸರೋವರ ಯಾತ್ರೆಗೆ ಸುಧಾರಿತ ಸಂಪರ್ಕ

ಉಧಮ್ ಸಿಂಗ್ ನಗರದಲ್ಲಿ ಏಮ್ಸ್ ಋಷಿಕೇಶ ಉಪಗ್ರಹ ಕೇಂದ್ರ ಮತ್ತು ದೇಶದ ಎಲ್ಲಾ ಭಾಗಗಳಲ್ಲಿ ವಿಶ್ವ ದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಪ್ರಧಾನಮಂತ್ರಿಯವರ ಪ್ರಯತ್ನಕ್ಕೆ ಅನುಗುಣವಾಗಿ ಪಿಥೋರಗಢ್‌ ನಲ್ಲಿ ಜಗಜೀವನ್ ರಾಮ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ.

ಕಾಶಿಪುರದಲ್ಲಿ ಸುಗಂಧ ಉದ್ಯಾನ ಮತ್ತು ಸಿತಾರ್‌ ಗಂಜ್‌ ನಲ್ಲಿ ಪ್ಲಾಸ್ಟಿಕ್ ಕೈಗಾರಿಕಾ ಉದ್ಯಾನ ಮತ್ತು ರಾಜ್ಯದಾದ್ಯಂತ ವಸತಿ, ನೈರ್ಮಲ್ಯ ಮತ್ತು ಕುಡಿಯುವ ನೀರು ಪೂರೈಕೆಯಲ್ಲಿ ಅನೇಕ ಇತರ ಉಪಕ್ರಮಗಳಿಗೆ ಪ್ರಧಾನಮಂತ್ರಿ ಅವರಿಂದ ಶಂಕುಸ್ಥಾಪನೆ

Posted On: 28 DEC 2021 8:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  2021ರ  ಡಿಸೆಂಬರ್ 30, ರಂದು ಉತ್ತರಾಖಂಡದ ಹಲ್ಡವಾನಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು 17500 ಕೋಟಿ ರೂ. ಮೌಲ್ಯದ 23 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನರವೇರಿಸಲಿದ್ದಾರೆ. 23 ಯೋಜನೆಗಳ ಪೈಕಿ 14100 ಕೋಟಿ ರೂ.ಗೂ ಅಧಿಕ ಮೊತ್ತದ 17 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಲಿದೆ. ಈ ಯೋಜನೆಗಳು ನೀರಾವರಿ, ರಸ್ತೆ, ವಸತಿ, ಆರೋಗ್ಯ ಮೂಲಸೌಕರ್ಯ, ಕೈಗಾರಿಕೆ, ನೈರ್ಮಲ್ಯ, ಕುಡಿಯುವ ನೀರು ಸರಬರಾಜು ಸೇರಿದಂತೆ ರಾಜ್ಯದಾದ್ಯಂತ ವ್ಯಾಪಕ ಶ್ರೇಣಿಯ ಕ್ಷೇತ್ರಗಳು/ಪ್ರದೇಶಗಳನ್ನು ಒಳಗೊಂಡಿವೆ. ಕಾರ್ಯಕ್ರಮವು ಬಹು ರಸ್ತೆ ವಿಸ್ತರಣೆ ಯೋಜನೆಗಳು, ಪಿಥೋರಗಢದಲ್ಲಿ ಜಲವಿದ್ಯುತ್ ಯೋಜನೆ ಮತ್ತು ನೈನಿತಾಲ್‌ ನಲ್ಲಿ ಒಳಚರಂಡಿ ಜಾಲವನ್ನು ಸುಧಾರಿಸುವ ಯೋಜನೆಗಳನ್ನೂ ಒಳಗೊಂಡಂತೆ 6 ಯೋಜನೆಗಳ ಉದ್ಘಾಟನೆಗೆ ಸಾಕ್ಷಿಯಾಗಲಿದೆ. ಉದ್ಘಾಟನೆಗೊಳ್ಳುತ್ತಿರುವ ಯೋಜನೆಗಳ ಒಟ್ಟು ವೆಚ್ಚ 3400 ಕೋಟಿ ರೂ. ಆಗಿದೆ.

ಸುಮಾರು 5750 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ  ಲಖ್ವಾರ್ ವಿವಿಧೋದ್ದೇಶ ಯೋಜನೆಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯನ್ನು ಮೊದಲು  1976ರಲ್ಲಿ ರೂಪಿಸಲಾಗಿತ್ತು ಆದರೆ, ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು.  ದೀರ್ಘಕಾಲದಿಂದ ಬಾಕಿ ಉಳಿದಿರುವ ಯೋಜನೆಗಳಿಗೆ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ದೃಷ್ಟಿಕೋನವು ಯೋಜನೆಯ ಶಂಕುಸ್ಥಾಪನೆಯ ಹಿಂದಿನ ಶಕ್ತಿಯಾಗಿದೆ.  ರಾಷ್ಟ್ರೀಯ ಪ್ರಾಮುಖ್ಯತೆಯ ಈ ಯೋಜನೆಯು ಸುಮಾರು 34,000 ಹೆಕ್ಟೇರ್ ಹೆಚ್ಚುವರಿ ಭೂಮಿಗೆ ನೀರಾವರಿ ಸೌಲಭ್ಯಕ್ಕೆ ಅನುವು ಮಾಡಿಕೊಡುತ್ತದೆ,  300 ಮೆಗಾವ್ಯಾಟ್ ಜಲ ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಉತ್ತರಾಖಂಡ, ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ಸೇರಿ ಆರು ರಾಜ್ಯಗಳಿಗೆ ಕುಡಿಯುವ ನೀರನ್ನೂ ಪೂರೈಸುತ್ತದೆ. 

ದೇಶದ ದೂರದ ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿಗೆ ಅನುಗುಣವಾಗಿ, ಸುಮಾರು 87೦೦ ಕೋಟಿ ರೂ.ಗಳ ಬಹು ರಸ್ತೆ ವಲಯದ ಯೋಜನೆಗಳ  ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಾಗುವುದು.

4000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವ  85  ಕಿಲೋ ಮೀಟರ್  ಮೊರಾದಾಬಾದ್-ಕಾಶಿಪುರ ರಸ್ತೆಯ ಚತುಷ್ಪಥ; ಗದರ್ಪುರ್- ದಿನೇಶ್ ಪುರ್- ಮಡ್ಕೋಟಾ-ಹಲ್ದ್ ವಾನಿ ರಸ್ತೆಯ  22  ಕಿಲೋ ಮೀಟರ್ ಉದ್ದದ  ದ್ವಿಪಥ  (ಎಸ್.ಎಚ್-5)  ಮತ್ತು  ಕಿಚ್ಚದಿಂದ ಪಂತ್ ನಗರ್      ಗೆ 18 ಕಿಲೋಮೀಟರ್ ಉದ್ದದ ಯೋಜನೆಗಳು ಶಂಕುಸ್ಥಾಪನೆ ನೆರವೇರಿಸಲಿವೆ. (ಎಸ್.ಎಚ್. 44); ಉಧಮ್ ಸಿಂಗ್ ನಗರದಲ್ಲಿ 8 ಕಿಲೋ ಮೀಟರ್ ಉದ್ದದ ಖತೀಮಾ  ಬೈಪಾಸ್  ನಿರ್ಮಾಣ;  175 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ (ರಾಷ್ಟ್ರೀಯ ಹೆದ್ದಾರಿ 109 ಡಿ)  ನಿರ್ಮಾಣ. ಈ ರಸ್ತೆ ಯೋಜನೆಗಳು ಗರ್ವಾಲ್,  ಕುಮಾವೂನ್  ಮತ್ತು ತೆರಾಯ್ ಪ್ರದೇಶದ ಸಂಪರ್ಕವನ್ನು ಸುಧಾರಿಸುತ್ತವೆ ಮತ್ತು ಉತ್ತರಾಖಂಡ ಮತ್ತು ನೇಪಾಳದ ನಡುವಿನ ಸಂಪರ್ಕವನ್ನೂ ಸುಧಾರಿಸುತ್ತವೆ.  ಸುಧಾರಿತ ಸಂಪರ್ಕವು  ರುದ್ರಪುರ ಮತ್ತು ಲಾಲ್ ಕುವಾನ್ ನ ಕೈಗಾರಿಕಾ ಪ್ರದೇಶಗಳಿಗೆ ಪ್ರಯೋಜನಕಾರಿಯಾಗಲಿದೆ ಮತ್ತು  ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದ ಪ್ರವೇಶವನ್ನು ಸುಧಾರಿಸುತ್ತದೆ.

ಇದರ ಜೊತೆಗೆ, ಪ್ರಧಾನಮಂತ್ರಿ ಗ್ರಾಮೀಣ ರಸ್ತೆ  ಯೋಜನೆ ಅಡಿಯಲ್ಲಿ  ರಾಜ್ಯದಾದ್ಯಂತ ಅನೇಕ ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳಲ್ಲಿ ಒಟ್ಟು 1157 ಕಿಲೋ ಮೀಟರ್ ಉದ್ದದ 133  ಗ್ರಾಮೀಣ ರಸ್ತೆಗಳನ್ನು  625 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸುವುದು ಮತ್ತು ಸುಮಾರು 450 ಕೋಟಿ ರೂ.ಗಳ ವೆಚ್ಚದಲ್ಲಿ  151 ಸೇತುವೆಗಳನ್ನು ನಿರ್ಮಾಣ ಮಾಡುವುದೂ ಸೇರಿವೆ.

ಪ್ರಧಾನಮಂತ್ರಿಯವರು ಉದ್ಘಾಟಿಸುತ್ತಿರುವ ರಸ್ತೆ ಯೋಜನೆಗಳಲ್ಲಿ 2500 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ  ನಾಗಿನಾದಿಂದ ಕಾಶಿಪುರ (ರಾಷ್ಟ್ರೀಯ ಹೆದ್ದಾರಿ74) ವರೆಗಿನ 99  ಕಿಲೋ ಮೀಟರ್ ರಸ್ತೆ ಅಗಲೀಕರಣ ಯೋಜನೆ ಮತ್ತು 780 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಸರ್ವಋತು ರಸ್ತೆ ಯೋಜನೆಯಡಿ ನಿರ್ಮಿಸಲಾದ ವ್ಯೂಹಾತ್ಮಕ ತನಕ್ಪುರ್-ಪಿಥೋರ್ಗರ್ ರಸ್ತೆ (ರಾ.ಹೆ. 125)ಯಲ್ಲಿ ಮೂರು ವಿಸ್ತಾರಗಳಲ್ಲಿ ರಸ್ತೆ ಅಗಲೀಕರಣ ಮಾಡುವ ಯೋಜನೆಗಳೂ ಸೇರಿವೆ. ಮೂರು ವಿಸ್ತಾರಗಳು  ಚ್ಯುರಾನಿಯಿಂದ   ಆಂಚೋಲಿ   (32  ಕಿಲೋಮೀಟರ್),  ಬಿಲ್ಖೇಟ್ ನಿಂದ ಚಂಪಾವತ್ ವರೆಗೆ (29  ಕಿಲೋಮೀಟರ್) ಮತ್ತು  ಟಿಲಾನ್ ನಿಂದ ಚ್ಯುರಾನಿ   (28 ಕಿಲೋಮೀಟರ್) ವರೆಗೂ ಇವೆ. ರಸ್ತೆ ಅಗಲೀಕರಣ ಯೋಜನೆಗಳು ದೂರದ ಪ್ರದೇಶಗಳ ಸಂಪರ್ಕವನ್ನು ಸುಧಾರಿಸುವುದಲ್ಲದೆ, ಈ ಪ್ರದೇಶದ ಪ್ರವಾಸೋದ್ಯಮ, ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತವೆ. ಆಯಕಟ್ಟಿನ  ತಾನಕ್ಪುರ್-ಪಿಥೋರ್ಗರ್ ರಸ್ತೆ ಈಗ ಸರ್ವಋತು ಸಂಪರ್ಕವನ್ನು ಹೊಂದಲಿದೆ, ಇದು ಗಡಿ ಪ್ರದೇಶಗಳಿಗೆ ಸೇನೆಯ ಅಡೆತಡೆಯಿಲ್ಲದೆ ಸಂಚಾರಕ್ಕೆ ಮತ್ತು ಕೈಲಾಸ ಮಾನಸ ಸರೋವರ ಯಾತ್ರೆಗೆ ಸುಧಾರಿತ ಸಂಪರ್ಕವನ್ನು ಸುಗಮಗೊಳಿಸುತ್ತದೆ. ರಾಜ್ಯದ ವೈದ್ಯಕೀಯ ಮೂಲಸೌಕರ್ಯವನ್ನು ವಿಸ್ತರಿಸುವ ಮತ್ತು ದೇಶದ ಎಲ್ಲಾ ಭಾಗಗಳಲ್ಲಿ ಜನರಿಗೆ ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನವಾಗಿ, ಪ್ರಧಾನಮಂತ್ರಿಯವರು ಉಧಮ್  ಸಿಂಗ್ ನಗರ ಜಿಲ್ಲೆಯ ಏಮ್ಸ್ ಋಷಿಕೇಶ್ ಉಪಗ್ರಹ ಕೇಂದ್ರ ಮತ್ತು ಪಿಥೋರಗಢದಲ್ಲಿ ಜಗಜೀವನ್ ರಾಮ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಎರಡೂ ಆಸ್ಪತ್ರೆಗಳನ್ನು ಕ್ರಮವಾಗಿ ಸುಮಾರು 5೦೦ ಕೋಟಿ ಮತ್ತು 45೦ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸುಧಾರಿತ ವೈದ್ಯಕೀಯ ಮೂಲಸೌಕರ್ಯವು  ಕುಮಾವೂನ್ ಮತ್ತು ತೆರಾಯ್ ಪ್ರದೇಶಗಳ ಜನರಿಗೆ ಮಾತ್ರವಲ್ಲದೆ ಉತ್ತರ ಪ್ರದೇಶದ ಗಡಿ ಪ್ರದೇಶಗಳಿಗೂ ಸಹಾಯ ಮಾಡುತ್ತದೆ.

ಉಧಮ್ ಸಿಂಗ್ ನಗರ ಜಿಲ್ಲೆಯ ಸಿತಾರ್ ಗಂಜ್  ಮತ್ತು ಕಾಶಿಪುರ  ನಗರಗಳಲ್ಲಿ ಆರ್ಥಿಕವಾಗಿ ದುರ್ಬಲವರ್ಗದವರಿಗೆ ಸುಮಾರು 24೦೦ ಮನೆಗಳ ನಿರ್ಮಾಣಕ್ಕೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಮನೆಗಳನ್ನು  ಪ್ರಧಾನಮಂತ್ರಿ ವಸತಿ  ಯೋಜನೆ  (ನಗರ) ಅಡಿಯಲ್ಲಿ 170 ಕೋಟಿಗೂ ಹೆಚ್ಚು ಒಟ್ಟು ವೆಚ್ಚದಲ್ಲಿ ನಿರ್ಮಿಸಲಾಗುವುದು.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೊಳಾಯಿ ನೀರು ಪೂರೈಕೆಯನ್ನು ಸುಧಾರಿಸಲು ಪ್ರಧಾನಮಂತ್ರಿಯವರು ಜಲ ಜೀವನ್ ಅಭಿಯಾನದ ಅಡಿಯಲ್ಲಿ ರಾಜ್ಯದ 13 ಜಿಲ್ಲೆಗಳಲ್ಲಿ 73  ನೀರು ಸರಬರಾಜು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳಿಗೆ ಒಟ್ಟು ಸುಮಾರು 1250 ಕೋಟಿ ರೂ. ವೆಚ್ಚವಾಗಲಿದೆ ಮತ್ತು ರಾಜ್ಯದ 1.3 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ಪ್ರಯೋಜನವಾಗಲಿದೆ.  ಇದಲ್ಲದೆ, ಹರಿದ್ವಾರ ಮತ್ತು ನೈನಿತಾಲ್ ನ ನಗರ ಪ್ರದೇಶಗಳಲ್ಲಿ ಗುಣಮಟ್ಟದ ನೀರನ್ನು ನಿಯಮಿತವಾಗಿ ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು, ಪ್ರಧಾನಮಂತ್ರಿಯವರು ಈ ಎರಡು ನಗರಗಳಿಗೆ ನೀರು ಸರಬರಾಜು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ಹರಿದ್ವಾರದಲ್ಲಿ ಸುಮಾರು 14500  ಸಂಪರ್ಕಗಳನ್ನು ಮತ್ತು  ಹಲ್ದ ವಾನಿಯಲ್ಲಿ 2400 ಕ್ಕೂ ಹೆಚ್ಚು ಸಂಪರ್ಕಗಳನ್ನು ಒದಗಿಸಲಿದ್ದು, ಇದು ಹರಿದ್ವಾರದ ಸುಮಾರು ಒಂದು ಲಕ್ಷ ಜನಸಂಖ್ಯೆ ಮತ್ತು  ಹಲ್ದ್ ವಾನಿಯ  ಸುಮಾರು 12000  ಜನಸಂಖ್ಯೆಗೆ ಉಪಯುಕ್ತವಾಗಲಿದೆ.

ಒಂದು ಪ್ರದೇಶದ ಅಂತರ್ಗತ ಸಾಮರ್ಥ್ಯವನ್ನು ಅನ್ವೇಷಣೆ ಮಾಡಲು ಹೊಸ ಮಾರ್ಗಗಳನ್ನು ಸೃಷ್ಟಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಕಾಶಿಪುರದಲ್ಲಿ 41 ಎಕರೆ ಪರಿಮಳ ಉದ್ಯಾನ ಮತ್ತು  ಸಿತಾರ್ ಗಂಜ್ ನಲ್ಲಿ 40   ಎಕರೆ  ಪ್ಲಾಸ್ಟಿಕ್ ಕೈಗಾರಿಕಾ ಉದ್ಯಾನವನಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಈ ಎರಡೂ ಯೋಜನೆಗಳನ್ನು ರಾಜ್ಯ ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ ಉತ್ತರಾಖಂಡ್ ಲಿಮಿಟೆಡ್ (ಎಸ್.ಐಡಿಯುಎಲ್) ಸುಮಾರು  100  ಕೋಟಿ ಸಂಚಿತ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿದೆ. ಪರಿಮಳ ಉದ್ಯಾನ ತನ್ನ ವಿಶಿಷ್ಟ ಭೌಗೋಳಿಕ ಪರಿಸ್ಥಿತಿಗಳಿಂದಾಗಿ ಉತ್ತರಾಖಂಡದ ಪುಷ್ಪಕೃಷಿ ಬೆಳವಣಿಗೆಯ ಅಪಾರ ಸಾಮರ್ಥ್ಯವನ್ನು ಬಳಸಿಕೊಳ್ಳಲಿದೆ. ಪ್ಲಾಸ್ಟಿಕ್ ಕೈಗಾರಿಕಾ ಉದ್ಯಾನವು ರಾಜ್ಯದ ಕೈಗಾರಿಕಾ ಸಾಮರ್ಥ್ಯವನ್ನು ಸ್ಥಾಪಿಸಲು ಮತ್ತು ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಒಂದು ಕ್ರಮವಾಗಿದೆ.

ನೈನಿತಾಲ್ ನ  ರಾಮನಗರದಲ್ಲಿ ಸುಮಾರು 50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 7 ಎಂಎಲ್ ಡಿ ಮತ್ತು  1.5  ಎಂಎಲ್ ಡಿ ಸಾಮರ್ಥ್ಯದ   ಎರಡು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಅಲ್ಲದೆ,  ಉಧಮ್ ಸಿಂಗ್ ನಗರದಲ್ಲಿ ಸುಮಾರು 200  ಕೋಟಿ  ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಒಂಬತ್ತು ಒಳಚರಂಡಿ ಸಂಸ್ಕರಣಾ ಘಟಕಗಳ (ಎಸ್.ಟಿಪಿ) ನಿರ್ಮಾಣಕ್ಕೆ ಮತ್ತು ನೈನಿತಾಲ್ ನಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು 78 ಕೋಟಿ ರೂ. ವೆಚ್ಚದ ಯೋಜನೆಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸುಮಾರು 5೦ ಕೋಟಿ ರೂ.ಗಳ ವೆಚ್ಚದಲ್ಲಿ ಪಿಥೋರಘರ್ ಜಿಲ್ಲೆಯ  ಮುನ್ಸ್ಯಾರಿಯಲ್ಲಿ ಉತ್ತರಾಖಂಡ ಜಲ ವಿದ್ಯುತ್ ನಿಗಮ (ಯುಜೆವಿಎನ್) ನಿಯಮಿತ ನಿರ್ಮಿಸಿರುವ ನದಿ ನೀರಿನಿಂದ ವಿದ್ಯುತ್ ಉತ್ಪಾದಿಸುವ 5  ಮೆಗಾವ್ಯಾಟ್  ಸಾಮರ್ಥ್ಯದ  ಸುರಿಂಗಾದ್- II ಯೋಜನೆಯನ್ನೂ ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ.

***


(Release ID: 1785972) Visitor Counter : 236