ಪ್ರಧಾನ ಮಂತ್ರಿಯವರ ಕಛೇರಿ

ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಗಂಗಾ ಎಕ್ಸ್ ಪ್ರೆಸ್ ವೇಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 18 DEC 2021 5:56PM by PIB Bengaluru

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ನಾನು ಶ್ರೀ ಬಾಬಾ ವಿಶ್ವನಾಥ ಮತ್ತು ಭಗವಾನ್ ಪರಶುರಾಮ್ ಅವರ ಪಾದಕ್ಕೆ ಶಿರಬಾಗಿ ನಮಿಸುತ್ತೇನೆ. ಜೈ ಗಂಗಾ ಮಾಯೇ ಕೀ, ಹರ್ ಹರ್ ಗಂಗೇ. ಉತ್ತರ ಪ್ರದೇಶದ ಪ್ರತಿಭಾವಂತ ಮತ್ತು ಉತ್ಸಾಹಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೀ, ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯಾ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಬಿ.ಎಲ್. ವರ್ಮಾ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಯಾಗಿರುವ ಸಂತೋಷ್ ಗಂಗ್ವಾರ್ ಜೀ, ಉತ್ತರ ಪ್ರದೇಶ ಸರಕಾರದಲ್ಲಿ  ಸಚಿವರಾಗಿರುವ  ಸುರೇಶ್ ಕುಮಾರ್ ಖನ್ನಾ ಜೀ, ಸತೀಶ್ ಮಹನಾ ಜೀ, ಜಿತಿನ್ ಪ್ರಸಾದ್ ಜೀ, ಮಹೇಶಚಂದ್ರ ಗುಪ್ತಾ ಜೀ, ಮತ್ತು ಧರ್ಮವೀರ ಪ್ರಜಾಪತಿ ಜೀ, ಸಂಸತ್ತಿನಲ್ಲಿ ನನ್ನ ಇತರ ಸಹೋದ್ಯೋಗಿಗಳೇ, ಉತ್ತರ ಪ್ರದೇಶ ವಿಧಾನ ಸಭೆಯ ಮತ್ತು ವಿಧಾನ ಪರಿಷತ್ತಿನ ಸಹೋದ್ಯೋಗಿಗಳೇ, ಪಂಚಾಯತ್ ಸದಸ್ಯರೇ, ಮತ್ತು ಬೃಹತ್ ಸಂಖ್ಯೆಯಲ್ಲಿ ಬಂದಿರುವ ನನ್ನ ಪ್ರೀತಿಯ ಸಹೋದರರೇ ಹಾಗು ಸಹೋದರಿಯರೇ!

ಕಾಕೋರಿಯಿಂದ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದ ವೀರ ಕ್ರಾಂತಿಕಾರಿಗಳಾದ ರಾಮ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್ ಮತ್ತು ರೋಶನ್ ಸಿಂಗ್ ಅವರ ಪಾದಗಳನ್ನು ಮುಟ್ಟಿ ನಾನು, ಕೈಜೋಡಿಸಿ ನಮಿಸುತ್ತೇನೆ. ನಿಮ್ಮನ್ನು ಆಶೀರ್ವದಿಸಿದ ಮಣ್ಣನ್ನು ನನ್ನ ಹಣೆಯ ಮೇಲೆ ಧರಿಸಲು ನಾನು ಅದೃಷ್ಟ ಮಾಡಿದ್ದೇನೆ. ಇಲ್ಲಿಂದಲೇ ಉತ್ಸಾಹಿ ಕವಿಗಳಾದ ದಾಮೋದರ್ ಸ್ವರೂಪ್ ವಿದ್ರೋಹಿ, ರಾಜ್ ಬಹಾದ್ದೂರ್ ವಿಕಾಲ್ ಮತ್ತು ಅಗ್ನಿವೇಶ್ ಶುಕ್ಲಾ ತಮ್ಮವೀರ ರಸ ಪದ್ಯಗಳ ಮೂಲಕ ದೇಶವನ್ನು ಕ್ರಾಂತಿಗೆ ಸಜ್ಜು ಮಾಡಿದರು. ಸ್ಥಳ ಸ್ಕೌಟ್ ಗೈಡ್ ಪಿತಾಮಹ, ಶಿಸ್ತು ಮತ್ತು ನಿಷ್ಟೆಯ ಪ್ರಮಾಣ ಬೋಧಿಸಿದ  ಪಂಡಿತ್ ಶ್ರೀ ರಾಂ ವಾಜಪೇಯೀ ಜೀ ಅವರ ಜನ್ಮಸ್ಥಳ. ನಾನು ಎಲ್ಲಾ ಶ್ರೇಷ್ಟ ವ್ಯಕ್ತಿತ್ವಗಳಿಗೆ ನಮನಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಯೋಗಾಯೋಗ  ಎಂಬಂತೆ ನಾಳೆ ಪಂಡಿತ್ ರಾಂ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್ ಮತ್ತು ಠಾಕೂರ್ ರೋಶನ್ ಸಿಂಗ್ ಅವರಬಲಿದಾನ ದಿವಸ”  ಕೂಡಾ. ಶಹಜಹಾನ್ಪುರದ ಮೂವರು ಪುತ್ರರು ಬ್ರಿಟಿಶ್ ಆಡಳಿತಕ್ಕೆ ಸವಾಲೆಸೆದಿದ್ದರು, ಮತ್ತು ಅವರನ್ನು ದಶಂಬರ 19ರಂದು (1927) ನೇಣಿಗೇರಿಸಲಾಯಿತು. ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ ಇಂತಹ ಹೀರೋಗಳಿಗೆ ನಾವು ಬಹಳ ಋಣಿಯಾಗಿರಬೇಕು. ನಾವು ಆವರ ಋಣವನ್ನೆಂದೂ ತೀರಿಸಲಾರೆವು. ಆದರೆ ನಾವು ದೇಶಕ್ಕಾಗಿ ರಾತ್ರಿ ಹಗಲು ಕೆಲಸ ಮಾಡುವ ಮೂಲಕ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸಿನ ಭಾರತವನ್ನು ನಿರ್ಮಾಣ ಮಾಡುವ ಮೂಲಕ ನಾವು ಅವರಿಗೆ ನೈಜ ಶ್ರದ್ಧಾಂಜಲಿಯನ್ನು ಸಲ್ಲಿಸಬಹುದು. ಇಂತಹ ಪುಣ್ಯದ ಮತ್ತು ಚಾರಿತ್ರಿಕ ಸಂದರ್ಭ ಶಹಜಹಾನ್ಪುರದಲ್ಲಿ ಇಂದು ಘಟಿಸಿದೆ. ಉತ್ತರ ಪ್ರದೇಶದ ಅತ್ಯಂತ ದೊಡ್ಡ ಎಕ್ಸ್ ಪ್ರೆಸ್ ವೇ ಆಗಿರುವ  -ಗಂಗಾ ಎಕ್ಸ್ ಪ್ರೆಸ್ ವೇಯ ಕಾಮಗಾರಿ ಆರಂಭಗೊಳ್ಳುತ್ತಿದೆ.

ರಾಮಚರಿತಮಾನಸದಲ್ಲಿ ಬರೆಯಲಾಗಿದೆ- गंग सकल मुद मंगल मूला। सब सुख करनि हरनि सब सूला ಅಂದರೆ ಗಂಗಾ ಮಾತೆ ಸಮೃದ್ಧಿ ಮತ್ತು ಪ್ರಗತಿಯ ಮೂಲಸೆಲೆ. ಗಂಗಾ ಮಾತೆ ಎಲ್ಲಾ ಸಂತೋಷವನ್ನು ಕರುಣಿಸುತ್ತಾಳೆ ಮತ್ತು ನೋವನ್ನು ದೂರ ಮಾಡುತ್ತಾಳೆ. ಅದೇ ರೀತಿ ಗಂಗಾ ಎಕ್ಸ್ ಪ್ರೆಸ್ ವೇ ಉತ್ತರ ಪ್ರದೇಶದಲ್ಲಿ ಪ್ರಗತಿಯ ಹೊಸ ದ್ವಾರಗಳನ್ನು ತೆರೆಯಲಿದೆ. ಇಂದು ನಾನು ಮೀರತ್, ಹಾಪುರ, ಬುಲಂದ್ ಶಹರ್, ಅಮ್ರೋಹ, ಸಂಭಾಲ್, ಬಡೌನ್, ಶಹಜಹಾನ್ಪುರ, ಹರ್ದೋಯಿ, ಉನ್ನಾವೋ, ರಾಯ್ ಬರೇಲಿ, ಪ್ರತಾಪಘರ್ ಮತ್ತು ಪ್ರಯಾಗರಾಜ್ ಗಳ ಪ್ರತಿಯೊಬ್ಬ ನಾಗರಿಕರಿಗೂ ವಿಶೇಷ ಶುಭಾಶಯಗಳನ್ನು ಹೇಳುತ್ತೇನೆ. 600-ಕಿಲೋ ಮೀಟರ್ ಉದ್ದದ ಎಕ್ಸ್ ಪ್ರೆಸ್ ವೇಗೆ 36,000 ಕೋ.ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಗಂಗಾ ಎಕ್ಸ್ ಪ್ರೆಸ್ ವೇ ವಲಯದಲ್ಲಿ ಹೊಸ ಕೈಗಾರಿಕೆಗಳನ್ನು, ಹಲವು ಉದ್ಯೋಗಗಳನ್ನು, ಸಾವಿರಾರು ಯುವಜನತೆಗೆ ಹಲವು ಹೊಸ ಅವಕಾಶಗಳನ್ನು ತರಲಿದೆ.  

ಸ್ನೇಹಿತರೇ,

ಉತ್ತರ ಪ್ರದೇಶವು ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ 1,000 ಕಿಲೋ ಮೀಟರ್ ವಿಸ್ತಾರವನ್ನು ಹೊಂದಿರುವ ದೊಡ್ಡ ರಾಜ್ಯ ಮಾತ್ರವಲ್ಲ, ಅದು ಜನಸಂಖ್ಯಾ ಬಾಹುಳ್ಯದಲ್ಲಿಯೂ ದೊಡ್ಡ ರಾಜ್ಯ. ಇಂತಹ ದೊಡ್ಡ ರಾಜ್ಯವನ್ನು ನಿಭಾಯಿಸಲು ಶಕ್ತಿ ಮತ್ತು ದೃಢತೆ ಬೇಕು ಮತ್ತು ಎರಡು ಇಂಜಿನ್ ಗಳ ಸರಕಾರ ಅದನ್ನು ಮಾಡುತ್ತಿದೆ. ಉತ್ತರ ಪ್ರದೇಶವನ್ನು ಮುಂದಿನ ತಲೆಮಾರಿನ ಮೂಲಸೌಕರ್ಯಗಳು ಇರುವ ಅತ್ಯಾಧುನಿಕ ರಾಜ್ಯ ಎಂದು ಪರಿಗಣಿಸಲ್ಪಡುವ ದಿನ ಬಹಳ ದೂರವಿಲ್ಲ. ಎಕ್ಸ್ ಪ್ರೆಸ್ ವೇ ಗಳು, ವಿಮಾನ ನಿಲ್ದಾಣಗಳು ಮತ್ತು ಹೊಸ ರೈಲು ಮಾರ್ಗಗಳ ಜಾಲ ಉತ್ತರ ಪ್ರದೇಶದ ಜನತೆಗೆ ಬಹಳ ವರಗಳನ್ನು ತರಲಿದೆ. ಮೊದಲ ವರ: ಜನತೆಯ ಸಮಯ ಉಳಿತಾಯ, ಎರಡನೇ ವರ: ಜನತೆಗೆ ಅನುಕೂಲತೆಗಳ ಹೆಚ್ಚಳ, ಮೂರನೇ ವರ: ಉತ್ತರ ಪ್ರದೇಶದ ಸಂಪನ್ಮೂಲಗಳ ಸೂಕ್ತ ಮತ್ತು ಉತ್ತಮ ರೀತಿಯ ಬಳಕೆ; ನಾಲ್ಕನೇ ವರ: ಉತ್ತರ ಪ್ರದೇಶದ ಸಾಮರ್ಥ್ಯವರ್ಧನೆ; ಮತ್ತು ಐದನೇ ವರ: ಉತ್ತರ ಪ್ರದೇಶದ ಸರ್ವಾಂಗೀಣ ಸಮೃದ್ಧಿ

ಸ್ನೇಹಿತರೇ,

ಒಂದು ನಗರದಿಂದ ಇನ್ನೊಂದು ನಗರಕ್ಕೆ ಪ್ರಯಾಣಿಸುವುದಕ್ಕೆ ನಿಮಗೆ ಈಗ ತಗಲುವಷ್ಟು ಸಮಯ ತಗಲದು. ನಿಮ್ಮ ಸಮಯ ಸಂಚಾರ ದಟ್ಟಣೆಯಲ್ಲಿ ವ್ಯರ್ಥವಾಗುವುದಿಲ್ಲ ಮತ್ತು ನಿಮಗೆ ನಿಮ್ಮ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಎಕ್ಸ್ ಪ್ರೆಸ್ ವೇ ಉತ್ತರ ಪ್ರದೇಶದ 12 ಜಿಲ್ಲೆಗಳನ್ನು ಜೋಡಿಸುತ್ತದೆ, ಅದು ಪೂರ್ವ ಮತ್ತು ಪಶ್ಚಿಮದ ಉತ್ತರ ಪ್ರದೇಶವನ್ನು ಹತ್ತಿರ ತರುತ್ತದೆ. ಮತ್ತು ದಿಲ್ಲಿಯಿಂದ ಬಿಹಾರಕ್ಕೆ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುತ್ತದೆ. ಎಕ್ಸ್ ಪ್ರೆಸ್ ವೇ ಸಿದ್ಧವಾದಾಗ ಅದರ ಸುತ್ತ ಬೃಹತ್ ಕೈಗಾರಿಕಾ ಗುಚ್ಛಗಳು ರಚನೆಯಾಗಲಿವೆ ಮತ್ತು ಅವುಗಳು ರೈತರಿಗೆ ಮತ್ತು ಪಶುಪಾಲಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿ ಮಾಡಲಿವೆ ಹಾಗು ಎಂ.ಎಸ್.ಎಂ..ಗಳು ಮತ್ತು ಸಣ್ಣ ಕೈಗಾರಿಕೆಗಳಿಗೆ ಹೊಸ ಸಾಧ್ಯತೆಗಳನ್ನು ತೆರೆಯಲಿವೆ. ಇಲ್ಲಿ ತೆರೆದುಕೊಳ್ಳಲಿರುವ ಭಾರೀ ಅವಕಾಶಗಳುಅದರಲ್ಲೂ ವಿಶೇಷವಾಗಿ ಆಹಾರ ಸಂಸ್ಕರಣಾ ಉದ್ಯಮಗಳಿಗೆ ದೊರೆಯುವ ಉತ್ತೇಜನದಿಂದ ರೈತರ ಆದಾಯ ಹೆಚ್ಚಳಕ್ಕೆ ಸಹಾಯವಾಗಲಿದೆ. ಅದು ರೈತರಿರಬಹುದು ಅಥವಾ ಯುವಜನತೆ ಇರಬಹುದು-ಇದು ಎಲ್ಲರಿಗೂ ಅಗಣಿತ ಸಾಧ್ಯತೆಗಳ ಎಕ್ಸ್ ಪ್ರೆಸ್ ವೇ.

ಸ್ನೇಹಿತರೇ,

ಉತ್ತರ ಪ್ರದೇಶದಲ್ಲಿ ಆಧುನಿಕ ಮೂಲಸೌಕರ್ಯಗಳ ನಿರ್ಮಾಣವು ಸಂಪನ್ಮೂಲಗಳನ್ನು ಹೇಗೆ ಸೂಕ್ತವಾಗಿ ಬಳಸಬೇಕು ಎಂಬುದನ್ನು ತೋರಿಸುತ್ತದೆ. ಮೊದಲು, ಸಾರ್ವಜನಿಕ ಹಣ ಹೇಗೆ ಬಳಕೆಯಾಗುತ್ತಿತ್ತು, ಎಂಬುದರ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ. ನೀವು ನೋಡಿದ್ದೀರೋ ಇಲ್ಲವೋ?. ಏನಾಗುತ್ತಿತ್ತು, ಎಂಬುದು ನಿಮಗೆ ನೆನಪಿದೆಯೇ? ನೀವು ನೆನಪಿನಲ್ಲಿಟ್ಟಿರುವಿರೋ ಅಥವಾ ಮರೆತಿದ್ದೀರೋ?. ಆದರೆ, ಇಂದು ಉತ್ತರ ಪ್ರದೇಶದ ಹಣ ಉತ್ತರ ಪ್ರದೇಶದ ಅಭಿವೃದ್ಧಿಗೆ ಬಳಕೆಯಾಗುತ್ತಿದೆ. ಮೊದಲು ಇಂತಹ ಹಲವು ದೊಡ್ಡ ಯೋಜನೆಗಳು ಕಾಗದಗಳಲ್ಲಿ ಕಾರ್ಯಾರಂಭ ಮಾಡುತ್ತಿದ್ದವು, ಇದರಿಂದ, ಜನರ ಕಿಸೆ ತುಂಬುತ್ತಿತ್ತು. ಇಂದು ಅಂತಹ ಯೋಜನೆಗಳ ಕಾಮಗಾರಿ ನಡೆಸಲಾಗುತ್ತಿದೆ, ಇದರಿಂದ ಉತ್ತರ ಪ್ರದೇಶದ ಜನತೆಯ ಹಣ ಉಳಿತಾಯವಾಗುತ್ತಿದೆ. ನಿಮ್ಮ ಹಣ ನಿಮ್ಮ ಕಿಸೆಯಲ್ಲಿರಬೇಕು.

ಸಹೋದರರೇ ಮತ್ತು ಸಹೋದರಿಯರೇ

ಸಮಯದ ಉಳಿತಾಯ ಆದಾಗ, ಅನುಕೂಲತೆಗಳು ಹೆಚ್ಚಿದಾಗ ಮತ್ತು ಸಂಪನ್ಮೂಲಗಳು ಸರಿಯಾಗಿ, ಸೂಕ್ತವಾಗಿ ಬಳಕೆಯಾದಾಗ, ಸಾಮರ್ಥ್ಯದಲ್ಲಿ ಹೆಚ್ಚಳವಾಗುತ್ತದೆ. ಸಾಮರ್ಥ್ಯ ಹೆಚ್ಚಳವಾದಾಗ ಸಮೃದ್ಧಿಯು ತನ್ನಿಂದ ತಾನಾಗಿಯೇ ಹಿಂಬಾಲಿಸುತ್ತದೆ. ಇಂದು ಎರಡು ಇಂಜಿನ್ ಗಳ ಸರಕಾರದಲ್ಲಿ ಉತ್ತರ ಪ್ರದೇಶದ ಸಾಮರ್ಥ್ಯ ಹೆಚ್ಚುತ್ತಿರುವುದನ್ನು ನಾವೆಲ್ಲ ಕಾಣುತ್ತಿದ್ದೇವೆ. ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಇರಲಿ ಅಥವಾ ದಿಲ್ಲಿ-ಮೀರತ್ ಎಕ್ಸ್ ಪ್ರೆಸ್ ವೇ ಇರಲಿ, ಕುಷಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರಲಿ ಅಥವಾ ಸರಕು ಕಾರಿಡಾರಿಗಾಗಿಯೇ ಇರುವ ಪ್ರಮುಖ ಹಂತಗಳಿರಲಿ, ಇಂತಹ ಹಲವು ಯೋಜನೆಗಳು ಸಾರ್ವಜನಿಕ ಸೇವೆಗೆ ಸಮರ್ಪಿಸಲ್ಪಟ್ಟಿವೆ. ಇಂದು ಬುಂದೇಲ್ ಖಂಡ  ಎಕ್ಸ್ ಪ್ರೆಸ್ ವೇ, ಗೋರಕ್ ಪುರ ಲಿಂಕ್ ಎಕ್ಸ್ ಪ್ರೆಸ್ ವೇ , ಪ್ರಯಾಗರಾಜ್ ಲಿಂಕ್ ಎಕ್ಸ್ ಪ್ರೆಸ್ ವೇ, ದಿಲ್ಲಿ-ಡೆಹ್ರಾಡೂನ್ ಎಕ್ಸ್ ಪ್ರೆಸ್ ವೇ, ನೊಯಿಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದಿಲ್ಲಿ-ಮೀರತ್ ತ್ವರಿತ ಅತಿ ವೇಗದ ಕಾರಿಡಾರ್ ಗಳಂತಹ ಬೃಹತ್ ಯೋಜನೆಗಳ ಕಾರ್ಯ ಪೂರ್ಣ ವೇಗದಲ್ಲಿ ನಡೆಯುತ್ತಿದೆ. ಇವೆಲ್ಲ ಬಹು ಮಾದರಿ ಸಂಪರ್ಕವನ್ನು ಗಣನೆಗೆ ತೆಗೆದುಕೊಂಡು ಅನುಷ್ಟಾನಿಸಲಾಗುತ್ತಿರುವ ಬಹು ಉದ್ದೇಶಿತ ಮೂಲಸೌಕರ್ಯ ಯೋಜನೆಗಳಾಗಿವೆ

ಸ್ನೇಹಿತರೇ,

21ನೇ ಶತಮಾನದಲ್ಲಿ ಯಾವುದೇ ದೇಶದ ಮತ್ತು ರಾಜ್ಯದ ಪ್ರಗತಿಗೆ ತ್ವರಿತಗತಿಯ ಸಂಪರ್ಕ ಬಹಳ ದೊಡ್ಡ ಅಗತ್ಯ. ಸರಕುಗಳು ಅವುಗಳ ಗಮ್ಯ ಸ್ಥಾನವನ್ನು ಬಹಳ ವೇಗವಾಗಿ ತಲುಪಿದರೆ, ವೆಚ್ಚ ಕೂಡಾ ಕಡಿಮೆಯಾಗುತ್ತದೆ. ವೆಚ್ಚ ಕಡಿಮೆಯಾದಾಗ ವ್ಯಾಪಾರೋದ್ಯಮ ಕೂಡಾ ಬೆಳೆಯುತ್ತದೆ. ವ್ಯಾಪಾರೋದ್ಯಮ ಹೆಚ್ಚಿದಾಗ ರಫ್ತು ಹೆಚ್ಚುತ್ತದೆ ಮತ್ತು ದೇಶದ ಆರ್ಥಿಕತೆ ಕೂಡಾ ಬೆಳೆಯುತ್ತದೆ. ಆದುದರಿಂದ ಗಂಗಾ ಎಕ್ಸ್ ಪ್ರೆಸ್ ವೇ ಉತ್ತರ ಪ್ರದೇಶದ ಅಭಿವೃದ್ಧಿಗೆ ವೇಗ ಮತ್ತು ಶಕ್ತಿಯನ್ನು ನೀಡುತ್ತದೆ. ಪಿ.ಎಂ. ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆಯಿಂದ ಇದಕ್ಕೆ ಪ್ರಯೋಜನವಾಗಲಿದೆ. ವಿಮಾನ ನಿಲ್ದಾಣಗಳು, ಮೆಟ್ರೋ, ಜಲ ಮಾರ್ಗಗಳು, ಮತ್ತು ರಕ್ಷಣಾ ಕಾರಿಡಾರ್ ಗಳು ಎಕ್ಸ್ ಪ್ರೆಸ್ ವೇಯಿಂದ ಜೋಡಿಸಲ್ಪಡುತ್ತವೆ. ಟೆಲಿಫೋನ್ ವಯರ್ ಗಳನ್ನು ಹಾಕಲು ಅಪ್ಟಿಕಲ್ ಫೈಬರ್ ಗಳ ಅಳವಡಿಕೆ, ವಿದ್ಯುತ್ ಕೇಬಲ್ ಗಳ ಅಳವಡಿಕೆ, ಅನಿಲ ಜಾಲಗಳು, ಅನಿಲ ಪೈಪ್ ಲೈನ್ ಗಳ ಅಳವಡಿಕೆ, ನೀರಿನ ಗ್ರಿಡ್ ಗಳು, ಹೈಸ್ಪೀಡ್ ರೈಲು ಯೋಜನೆಗಳು, ಇವನ್ನೆಲ್ಲ ಗಮನದಲ್ಲಿಟ್ಟುಕೊಂಡು ಗತಿ ಶಕ್ತಿ ಮಹಾಯೋಜನೆ ಅಡಿಯಲ್ಲಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಹೊಸ ಸೇತುವೆಗಳಿಗೆ ಮತ್ತು ಮೇಲ್ ಸೇತುವೆಗಳಿಗೆ ಸಕಾಲದಲ್ಲಿ ಅನುಮತಿಯಿಂದಾಗಿ ಎಕ್ಸ್ ಪ್ರೆಸ್ ವೇಯ ಕಾಮಗಾರಿ ತ್ವರಿತಗೊಳ್ಳಲಿದೆ. ಭವಿಷ್ಯದಲ್ಲಿ ಪಶ್ಚಿಮ ಉತ್ತರ ಪ್ರದೇಶದಿಂದ ಸರಕು ಸಾಗಾಟದ ಕಂಟೈನರ್ ಗಳು ವಾರಾಣಸಿ ಮೂಲಕ ಹಾಲ್ಡಿಯಾ ಬಂದರಿಗೆ ನೇರವಾಗಿ ರವಾನಿಸಬಹುದಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಗಂಗಾ ಎಕ್ಸ್ ಪ್ರೆಸ್ ವೇ ರೈತರಿಗೆ, ಉದ್ಯಮಿಗಳಿಗೆ, ಕೈಗಾರಿಕೆಗಳಿಗೆ ಮತ್ತು ಉತ್ಪಾದನೆ ಹಾಗು ತಯಾರಿಕೆಯಲ್ಲಿ ತೊಡಗಿರುವ ಎಲ್ಲರಿಗೆ, ವ್ಯಾಪಾರೋದ್ಯಮಿಗಳಿಗೆ ಹಾಗು ಕಠಿಣ ಪರಿಶ್ರಮಿ ನಾಗರಿಕರಿಗೆ ಬಹಳ ಪ್ರಯೋಜನಗಳನ್ನು ತರಲಿದೆ.

ಸಹೋದರರೇ ಮತ್ತು ಸಹೋದರಿಯರೇ

ಉತ್ತರ ಪ್ರದೇಶ ಬೆಳೆದಂತೆ ದೇಶವೂ ಪ್ರಗತಿಯಾಗುತ್ತದೆ!. ಆದುದರಿಂದ ಎರಡು ಇಂಜಿನ್ ಗಳ ಸರಕಾರದ ಗಮನ, ಉತ್ತರ ಪ್ರದೇಶದ ಅಭಿವೃದ್ಧಿಯ ಮೇಲಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಮಂತ್ರದೊಂದಿಗೆ ನಾವು ಉತ್ತರ ಪ್ರದೇಶದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನೀವು ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳಿ, ಹಳೆಯ ನಿರ್ಧಾರಗಳನ್ನು ಮತ್ತು ಹಳೆಯ ಮಾದರಿಯಲ್ಲಿ ಕೆಲಸ ಆಗುತ್ತಿದ್ದ ರೀತಿಯನ್ನು ನೆನಪು ಮಾಡಿಕೊಳ್ಳಿ. ವ್ಯತ್ಯಾಸವನ್ನು ಸ್ಪಷ್ಟವಾಗಿ ಕಾಣುತ್ತೀರಿ. ಈಗ ಅಲ್ಲಿ ತಾರತಮ್ಯ ಇಲ್ಲ. ಮತ್ತು ಉತ್ತರ ಪ್ರದೇಶದ ಎಲ್ಲರಿಗೂ ಲಾಭವಾಗುತ್ತಿದೆ. ಐದು ವರ್ಷದ ಹಿಂದೆ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ರಾಜ್ಯದ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ ಇತರ ನಗರಗಳಲ್ಲಿ ಮತ್ತು ಗ್ರಾಮಗಳಲ್ಲಿ ವಿದ್ಯುತ್ ಲಭ್ಯ ಇರಲಿಲ್ಲ. ಹಾಗಿತ್ತು ಸ್ಥಿತಿ, ಹೌದೋ ಅಲ್ಲವೋ? ಬರೇ ಕೆಲವು ಜನರಿಗೆ ಲಾಭವಾಗುತ್ತಿತ್ತು. ಸರಿಯೇ?. ಎರಡು ಇಂಜಿನ್ ಗಳ ಸರಕಾರ ಉತ್ತರ ಪ್ರದೇಶದಲ್ಲಿ 80 ಲಕ್ಷ ಉಚಿತ ವಿದ್ಯುತ್ ಸಂಪರ್ಕಗಳನ್ನು ನೀಡಿತಲ್ಲದೆ ಪ್ರತೀ ಜಿಲ್ಲೆಗೂ ಮೊದಲಿಗಿಂತ ಹಲವು ಪಟ್ಟು ಹೆಚ್ಚು ವಿದ್ಯುತ್ ಶಕ್ತಿಯನ್ನು ಒದಗಿಸಿತು. ಮೊದಲಿನ ಸರಕಾರಗಳು ಬಡವರಿಗೆ ಮನೆಗಳ ವಿಷಯವನ್ನು ಎಂದೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಈಗ ಯೋಗೀ ಜೀ ಅವರು ವಿವರಿಸುತ್ತಿದ್ದರು ಮೋದೀ ಜೀ ಕಾಶಿಯಲ್ಲಿ ಶಿವಾ ಜೀ ಅವರನ್ನು ಪೂಜಿಸಿದರು ಮತ್ತು ತಕ್ಷಣವೇ ಬಳಿಕ ಕಾರ್ಮಿಕರ ಮೇಲೆ ಹೂಮಳೆಗರೆಯುವ ಮೂಲಕ ಅವರಿಗೆ ನಮಸ್ಕಾರಗಳನ್ನು ಸಲ್ಲಿಸಿದರು ಎಂದು.

ಸಹೋದರರೇ ಮತ್ತು ಸಹೋದರಿಯರೇ

ಅವರು ಕ್ಯಾಮರಾಗಳಿಗೆ ಪೋಸ್ ನೀಡುತ್ತಿದ್ದರು, ಆದರೆ ನಮ್ಮ ಸರಕಾರ ಬಡವರಿಗಾಗಿ ರಾತ್ರಿ ಹಗಲು ಕೆಲಸ ಮಾಡುತ್ತಿದೆ.ನಮ್ಮ ಸರಕಾರ ಉತ್ತರ ಪ್ರದೇಶದಲ್ಲಿಯ 30 ಲಕ್ಷಕ್ಕೂ ಅಧಿಕ ಬಡವರಿಗಾಗಿ ಪಕ್ಕಾ ಮನೆಗಳನ್ನು ಒದಗಿಸಿದೆ

ಸಹೋದರರೇ ಮತ್ತು ಸಹೋದರಿಯರೇ

ನೀವು ನಿಮ್ಮದೇ ಪಕ್ಕಾ ಮನೆಯನ್ನು ಕಟ್ಟಿಕೊಂಡಾಗ ನೀವು ಗೌರವದ ಬಾಳ್ವೆಯನ್ನು ಬಾಳುವಂತಹ ಭಾವನೆಯನ್ನು ಹೊಂದಿರುತ್ತೀರೋ ಇಲ್ಲವೋ?. ತಲೆ ಎತ್ತಿ ನಡೆಯುವಂತಹ ಸ್ಥಿತಿ ಬರುತ್ತದೆಯೋ ಇಲ್ಲವೋ?, ನೀವು ಹೆಮ್ಮೆಯಿಂದಿರುತ್ತೀರೋ ಇಲ್ಲವೋ?.ದೇಶಕ್ಕೆ ಏನನ್ನಾದರೂ ಮಾಡಬೇಕು ಎಂಬ ಆಶಯ ಬಡವರಿಗೆ ಇರುತ್ತದೆಯೋ ಇಲ್ಲವೋ?.  ಮೋದಿ ಕೆಲಸ ಮಾಡಿದರೆ, ಅದು ಸರಿಯೋ ಅಥವಾ ಸರಿಯಲ್ಲವೋ?. 30 ಲಕ್ಷ ಬಡವರು ತಮ್ಮ ಪಕ್ಕಾ ಮನೆಗಳನ್ನು ಪಡೆದರೆ ಅವರ ಆಶೀರ್ವಾದಗಳು ನಮಗೆ ಲಭಿಸುತ್ತವೆಯೋ ಇಲ್ಲವೋ?. ಶಕ್ತಿಯಿಂದ ನಮಗೆ ಹೆಚ್ಚು ಸೇವೆಗಳನ್ನು ನಿಮಗೆ ಒದಗಿಸಲು ಸಾಧ್ಯವಾಗುತ್ತದೆಯಲ್ಲವೇ? ನಿಮಗಾಗಿ ನಾವು ಪೂರ್ಣಮನಸ್ಸಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಹೌದೋ ಅಲ್ಲವೋ?.

ಸಹೋದರರೇ ಮತ್ತು ಸಹೋದರಿಯರೇ

ಶಹಜಹಾನ್ಪುರದಲ್ಲಿರುವ ಯಾರಾದರೊಬ್ಬರು ಇಲ್ಲಿ 50,000 ಜನರು ಪಕ್ಕಾ ಮನೆಯನ್ನು ಹೊಂದುವುದರ ಬಗ್ಗೆ ಎಂದಾದರೂ ಯೋಚಿಸಿದ್ದರೇ ಮತ್ತು ಅವರ ಜೀವನದ ಅತ್ಯಂತ ದೊಡ್ಡ ಕನಸು ನನಸಾಗುವುದೆಂದು ಕಲ್ಪಿಸಿಕೊಂಡಿದ್ದರೆ. ಮೊದಲು ಇಂತಹ ಇಷ್ಟೊಂದು ಪ್ರಮಾಣದ ಕೆಲಸ ಇಡೀ ಉತ್ತರ ಪ್ರದೇಶದಲ್ಲಿ ಆಗಿರಲಿಲ್ಲ. ಮೋದಿ ಮತ್ತು ಯೋಗಿ ರಾತ್ರಿ ಹಗಲು ಕೆಲಸ ಮಾಡುತ್ತಾರೆ ಮತ್ತು ಮತ್ತು ಪಿ.ಎಂ.ಆವಾಸ್ ಯೋಜನಾ ಅಡಿಯಲ್ಲಿ ಇದುವರೆಗೆ ಮನೆಯನ್ನು ಪಡೆಯದವರಿಗೂ ಮನೆ ಒದಗಿಸುವ ನಿಟ್ಟಿನಲ್ಲಿ ಅದೇ ರೀತಿಯಲ್ಲಿ ಕೆಲಸವನ್ನು ಮುಂದುವರಿಸುತ್ತಾರೆ. ಇತ್ತೀಚೆಗೆ ನಮ್ಮ ಸರಕಾರ ಇದಕ್ಕಾಗಿ 2 ಲಕ್ಷ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಎಷ್ಟು-ಎರಡು ಲಕ್ಷ ಕೋಟಿ ರೂಪಾಯಿಗಳು!. ಮತ್ತು ಯಾವ ಉದ್ದೇಶಕ್ಕಾಗಿ-ಬಡವರಿಗೆ ಪಕ್ಕಾ ಮನೆಗಳನ್ನು ನಿರ್ಮಾಣ ಮಾಡುವುದಕ್ಕಾಗಿ!. ಸಂಪತ್ತು ನಿಮ್ಮದು; ಇದು ನಿಮ್ಮ ಮಕ್ಕಳ, ಸ್ನೇಹಿತರ ಉಜ್ವಲ ಭವಿಷ್ಯಕ್ಕಾಗಿ. ನಾವು ನಿಮ್ಮ ಹಣವನ್ನು 5 ಅಥವಾ 50 ಕುಟುಂಬಗಳ ಉದ್ಧಾರಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗದು. ಸಹೋದರರೇ ಮತ್ತು ಸಹೋದರಿಯರೇ ನಾವು ನಿಮಗಾಗಿಯೇ ಕೆಲಸ ಮಾಡುತ್ತಿದ್ದೇವೆ.

ಸಹೋದರರೇ ಮತ್ತು ಸಹೋದರಿಯರೇ,

ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ, ಸರಕಾರ ಬಡವರ ನೋವನ್ನು ಅರ್ಥ ಮಾಡಿಕೊಂಡು, ಬಡವರಿಗಾಗಿ ಕೆಲಸಗಳನ್ನು ಮಾಡುತ್ತಿದೆ. ಇದೇ ಮೊದಲ ಬಾರಿಗೆ ಮೂಲಸೌಕರ್ಯಗಳಾದಂತಹ ಮನೆಗಳು, ವಿದ್ಯುತ್, ನೀರು, ರಸ್ತೆಗಳು, ಶೌಚಾಲಯಗಳು, ಅನಿಲ ಸಂಪರ್ಕಗಳಿಗೆ ಆದ್ಯತೆಯನ್ನು ನೀಡಲಾಗುತ್ತಿದೆ. ಇಂತಹ ಅಭಿವೃದ್ಧಿ ಕಾರ್ಯಗಳು ಬಡವರ, ತಳಮಟ್ಟದಲ್ಲಿರುವವರ, ನಿರ್ಲಕ್ಷಿತರ ಮತ್ತು ಹಿಂದುಳಿದವರ ಬದುಕಿನಲ್ಲಿ ಬದಲಾವಣೆ ತರುತ್ತವೆ. ಇಲ್ಲಿದ್ದಂತಹ ಸ್ಥಿತಿಯನ್ನು ನೀವು ನೆನಪಿಸಿಕೊಳ್ಳಿ. ಮೊದಲು ರಾತ್ರಿಯಲ್ಲಿ ತುರ್ತುಪರಿಸ್ಥಿತಿ ಇದ್ದಾಗ ಹರ್ದೋಯಿ, ಶಹಜಹಾನ್ಪುರ ಮತ್ತು ಫಾರೂಕಾಬಾದ್ ಗಳ ಜನರು ಆಸ್ಪತ್ರೆಗೆ ದಾಖಲಾಗಲು ಲಕ್ನೋ, ಕಾನ್ಪುರ ಮತ್ತು ದಿಲ್ಲಿಗೆ ತೆರಳಬೇಕಾಗಿತ್ತು. ಇಲ್ಲಿ ಆಸ್ಪತ್ರೆಗಳು ಸಾಕಷ್ಟು ಇರಲಿಲ್ಲ. ಮತ್ತು ಇತರ ನಗರಗಳಿಗೆ ಹೋಗಲು ರಸ್ತೆಗಳೂ ಇರಲಿಲ್ಲ. ಇಂದು ಇಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಎಕ್ಸ್ ಪ್ರೆಸ್ ವೇ ಗಳನ್ನೂ ನಿರ್ಮಾಣ ಮಾಡಲಾಗುತ್ತಿದೆ. ಮತ್ತು ವೈದ್ಯಕೀಯ ಕಾಲೇಜುಗಳನ್ನೂ ತೆರೆಯಲಾಗಿದೆ. ಹರ್ದೋಯಿ ಮತ್ತು ಶಹಜಹಾನ್ಪುರಗಳಲ್ಲಿ ತಲಾ ಒಂದು ವೈದ್ಯಕೀಯ ಕಾಲೇಜು!. ಅದೇ ರೀತಿ ಯೋಗೀ ಜೀ ಮತ್ತು ಅವರ ತಂಡ ಉತ್ತರ ಪ್ರದೇಶದಾದ್ಯಂತ ಡಜನ್ನಿನಷ್ಟು ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆದಿದೆ. ಪ್ರಾಮಾಣಿಕ ಮತ್ತು ಫಲಪ್ರದವಾದ ಕೆಲಸಗಳು ಆಗುವುದೆಂದರೆ ಹೀಗೆ.

ಸಹೋದರರೇ ಮತ್ತು ಸಹೋದರಿಯರೇ,

ಸಮಾಜದಲ್ಲಿ ಹಿಂದುಳಿದವರಿಗೆ ಮತ್ತು ಸೌಲಭ್ಯವಂಚಿತರಿಗೆ ಅಭಿವೃದ್ಧಿಯ ಪ್ರಯೋಜನಗಳನ್ನು ಒದಗಿಸುವುದು ಮತ್ತು ಅವರನ್ನು ಸಶಕ್ತೀಕರಣಗೊಳಿಸುವುದು ನಮ್ಮ ಸರಕಾರದ ಆದ್ಯತೆಯಾಗಿದೆ. ನಮ್ಮ ಕೃಷಿ ನೀತಿಯಲ್ಲಿ ಹಾಗು ರೈತರಿಗೆ ಸಂಬಂಧಿಸಿದ ನೀತಿಗಳಲ್ಲಿ  ಅದೇ ಸ್ಪೂರ್ತಿ, ನಿಲುವು ಪ್ರತಿಬಿಂಬಿತವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಬೀಜಗಳನ್ನು ಒದಗಿಸುವುದರಿಂದ ಹಿಡಿದು ಮಾರುಕಟ್ಟೆಯವರೆಗೆ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ, ದೇಶದಲ್ಲಿ ಶೇಖಡಾ 80ಕ್ಕಿಂತಲೂ ಅಧಿಕ ಪ್ರಮಾಣದಲ್ಲಿರುವ, 2 ಹೆಕ್ಟೇರಿಗಿಂತ ಕಡಿಮೆ ಭೂಮಿ ಹೊಂದಿರುವ  ರೈತರಿಗೆ  ಆದ್ಯತೆಯನ್ನು ನೀಡಲಾಗಿದೆ. ಪಿ.ಎಂ.ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಸಣ್ಣ ರೈತರ ಬ್ಯಾಂಕ್ ಖಾತೆಗಳಿಗೆ ನೇರ ಜಮಾ ಮಾಡಲಾಗಿದ್ದು, ಇದರಿಂದ ಸಣ್ಣ ರೈತರಿಗೆ ಬಹಳ ಪ್ರಯೋಜನಗಳಾಗಿವೆ. ಇಂದು ನಾವು ಬ್ಯಾಂಕುಗಳಲ್ಲಿ ಪ್ರವೇಶದ ಅವಕಾಶ ನಿರಾಕರಿಸಲ್ಪಟ್ಟ ಕೋಟ್ಯಾಂತರ ಸಣ್ಣ ರೈತರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಜೋಡಿಸುತ್ತಿದ್ದೇವೆ. ಎಂ.ಎಸ್.ಪಿ.ಯಲ್ಲಿ ದಾಖಲೆ ಹೆಚ್ಚಳ, ಸರಕಾರಿ ಖರೀದಿ ಪ್ರಮಾಣದಲ್ಲಿ ದಾಖಲೆ ಹೆಚ್ಚಳ ಮತ್ತು ರೈತರ ಬ್ಯಾಂಕ್ ಖಾತೆಗಳಿಗೆ ನೇರ ಹಣಕಾಸು ಜಮಾ, ಇವೆಲ್ಲ ಕ್ರಮಗಳಿಂದ ಸಣ್ಣ ರೈತರು ನಿರಾಳವಾಗಿರುವಂತಹ  ಸ್ಥಿತಿ ಉಂಟಾಗಿದೆ.

ಸ್ನೇಹಿತರೇ,

ನಾವು ದೇಶದಲ್ಲಿ ನೀರಾವರಿ ವ್ಯಾಪ್ತಿಯ ಪ್ರದೇಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿದ್ದೇವೆ ಮತ್ತು ನೀರಾವರಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಆದ್ಯತೆ ನೀಡುತ್ತಿದ್ದೇವೆ. ಆದುದರಿಂದ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಗ್ರಾಮೀಣ ಮೂಲಸೌಕರ್ಯ, ಶೀತಲಗೃಹಗಳ ಅಭಿವೃದ್ಧಿಗಾಗಿ ವ್ಯಯ ಮಾಡಲಾಗುತ್ತಿದೆ. ಇಂತಹ ಮೂಲಸೌಕರ್ಯವನ್ನು ಹಳ್ಳಿಗಳ ಬಳಿಯಲ್ಲೇ ರೂಪಿಸುವುದು ನಮ್ಮ ಪ್ರಯತ್ನವಾಗಿದೆ, ಇದರಿಂದ ರೈತರು ಬೇಗ ಹಾಳಾಗುವಂತಹ ಆದರೆ ಗರಿಷ್ಟ ಬೆಲೆ ತರುವ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಬೆಳೆದು ಅವುಗಳನ್ನು ತಕ್ಷಣವೇ ಮಾರುಕಟ್ಟೆಗೆ ಕೊಂಡೊಯ್ಯಬಹುದು. ಇದರಿಂದ ಆಹಾರ ಸಂಸ್ಕರಣಾ ಉದ್ಯಮಗಳ ತ್ವರಿತ ವಿಸ್ತರಣೆಗೂ ಸಹಾಯವಾಗಲಿದೆ ಮತ್ತು ಗ್ರಾಮಗಳ ಹತ್ತಿರದಲ್ಲಿಯೇ ಹೊಸ ಉದ್ಯೋಗಾವಕಾಶಗಳು ನಿರ್ಮಾಣವಾಗಲಿವೆ.

ಸಹೋದರರೇ ಮತ್ತು ಸಹೋದರಿಯರೇ,

ವರ್ಷಾನುಕ್ರಮದಲ್ಲಿ ನಾವು ಕಬ್ಬು ಬೆಳೆಗಾರರ ದಶಕಗಳಷ್ಟು ಹಳೆಯ ಸಮಸ್ಯೆಗಳಿಗೆ ಪರಿಹಾರಗಳನ್ನು ಮತ್ತು ಹೊಸ ಸಾಧ್ಯತೆಯ ಅವಕಾಶಗಳನ್ನು ಹುಡುಕಲು ಪ್ರಾಮಾಣಿಕವಾದ ಪ್ರಯತ್ನಗಳನ್ನು ಮಾಡಿದ್ದೇವೆ. ಕಬ್ಬಿಗೆ ಉತ್ತಮ ದರ ನೀಡುತ್ತಿರುವ ದೇಶದ ಪ್ರಮುಖ ರಾಜ್ಯಗಳಲ್ಲಿ ಇಂದು ಉತ್ತರ ಪ್ರದೇಶವೂ ಒಂದಾಗಿದೆ. ಯೋಗೀ ಜೀ ಅವರ ಸರಕಾರ ಪಾವತಿಗೆ ಸಂಬಂಧಿಸಿ ಹೊಸ ಮಾದರಿಗಳನ್ನು ನಿಗದಿ ಮಾಡಿದೆ. ಇಂದು ಪೆಟ್ರೋಲಿನಲ್ಲಿ ಎಥೆನಾಲ್ ಬ್ಲೆಂಡಿಂಗ್ ಕಾರ್ಯಕ್ಕೆ ಕೂಡಾ  ಅಭೂತಪೂರ್ವ ಒತ್ತನ್ನು ನೀಡಲಾಗಿದೆ. ಇದರ ಪರಿಣಾಮವಾಗಿ ದೇಶವು ಕಚ್ಚಾ ತೈಲ ಆಮದಿನ ಮೇಲಿನ ಹಣವನ್ನು ಉಳಿತಾಯ ಮಾಡುತ್ತಿದೆ, ಮಾತ್ರವಲ್ಲ ದೇಶದ ಸಕ್ಕರೆ ವಲಯ ಕೂಡಾ ಬಲಿಷ್ಟವಾಗುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ದೇಶದ ಪರಂಪರೆಯ ಬಗ್ಗೆ ಮತ್ತು ದೇಶದ ಅಭಿವೃದ್ಧಿಯ ಬಗ್ಗೆ ಸಮಸ್ಯೆಗಳನ್ನು ತಕರಾರುಗಳನ್ನು ಹೊಂದಿರುವ ಕೆಲವು ರಾಜಕೀಯ ಪಕ್ಷಗಳು ನಮ್ಮಲ್ಲಿವೆ. ದೇಶದ ಪರಂಪರೆಯ ಬಗೆಗೆ ಸಮಸ್ಯೆ ಯಾಕೆ ಎಂದರೆ ಅವರು ತಮ್ಮ ಮತ ಬ್ಯಾಂಕಿನ ಬಗ್ಗೆ ಹೆಚ್ಚು ಚಿಂತಿತರಾಗಿರುವುದು. ದೇಶದ ಅಭಿವೃದ್ಧಿಗೆ ಸಂಬಂಧಿಸಿ ಸಮಸ್ಯೆ ಯಾಕೆಂದರೆ ಬಡವರು ಮತ್ತು ಜನಸಾಮಾನ್ಯರು ಅವರನ್ನು ಅವಲಂಬನೆ ಮಾಡುವುದು ಕ್ಷೀಣಿಸುತ್ತದೆ ಎಂಬುದು. ನೀವು ನಿಮ್ಮನ್ನೇ ನೋಡಿಕೊಳ್ಳಿ. ಜನರು ಕಾಶಿಯಲ್ಲಿ ಬಾಬಾ ವಿಶ್ವನಾಥನ ಭವ್ಯ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿಯೂ ಸಮಸ್ಯೆಗಳನ್ನು ಹೊಂದಿದ್ದರು. ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನಿಗೆ ಭವ್ಯ ಮಂದಿರ ಕಟ್ಟುವುದರ ಬಗ್ಗೆಯೂ ಇವರಿಗೆ ಸಮಸ್ಯೆಗಳಿದ್ದವು. ಗಂಗಾ ಜೀಯ ಶುದ್ದೀಕರಣ, ಸ್ವಚ್ಛತಾ ಆಂದೋಲನದ ಬಗ್ಗೆಯೂ ಸಮಸ್ಯೆಗಳನ್ನು ಹೊಂದಿದ್ದರು. ಜನರು ಭಯೋತ್ಪಾದನೆಯ ಪ್ರಮುಖ ವ್ಯಕ್ತಿಗಳ ವಿರುದ್ಧ ಸೇನೆ ಕ್ರಮ ಕೈಗೊಂಡಾಗಲೂ ಪ್ರಶ್ನಿಸಿದ್ದರು. ಜನರು ಭಾರತೀಯ ವಿಜ್ಞಾನಿಗಳು ತಯಾರಿಸಿದ ಭಾರತೀಯ ನಿರ್ಮಿತ ಕೊರೊನಾ ಲಸಿಕೆಗಳ ಬಗ್ಗೆಯೂ ವಿವಾದವುಂಟು ಮಾಡಿದ್ದರು.

ಸಹೋದರರೇ ಮತ್ತು ಸಹೋದರಿಯರೇ,

ರಾಜ್ಯ, ದೇಶ ಬಹಳ ಶ್ರೇಷ್ಟವಾದುದು ಮತ್ತು ಬೃಹತ್ತಾದುದು. ಹಿಂದೆಯೂ ಸರಕಾರಗಳು ಬಂದಿವೆ ಮತ್ತು ಹೋಗಿವೆ. ನಾವು ದೇಶದ ಅಭಿವೃದ್ಧಿ ಮತ್ತು ಸಾಮರ್ಥ್ಯವನ್ನು ಮುಕ್ತ ಮನಸ್ಸಿನಿಂದ ಕೊಂಡಾಡಬೇಕು. ಆದರೆ.. ಜನರು ರೀತಿ ಆಲೋಚಿಸುವುದಿಲ್ಲ. ಕಳೆದ 4-5 ವರ್ಷಗಳಲ್ಲಿ ಉತ್ತರ ಪ್ರದೇಶದ ಜನತೆ ಸರಕಾರ ಸರಿಯಾದ ಉದ್ದೇಶದಿಂದ ಕಾರ್ಯಾಚರಿಸಿದರೆ ಆಗುವ ಬದಲಾವಣೆಗಳ ಅನುಭವವನ್ನು ಪಡೆದಿದ್ದಾರೆ. ಯೋಗೀ ಜೀ ನಾಯಕತ್ವದಲ್ಲಿ ಸರಕಾರ ರಚನೆಯಾಗುವುದಕ್ಕೆ ಮೊದಲು ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಹೇಗಿತ್ತು ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಇಲ್ಲಿ ಹಿಂದೆ ಏನು ಹೇಳಲಾಗುತ್ತಿತ್ತು?. ಇಲ್ಲಿ ಜನರು ಹೇಳುತ್ತಿದ್ದರು-ಕತ್ತಲೆ ಮುಸುಕುವ ಮುನ್ನ ಮನೆಗೆ ಬಂದು ಬಿಡು. ಯಾಕೆಂದರೆ ಸೂರ್ಯ ಮುಳುಗಿದ ಬಳಿಕಕಟ್ಟ” (ದೇಶೀಯ ನಿರ್ಮಿತ ರಿವಾಲ್ವರ್) ತೋರಿಸಿ ಹೆದರಿಸುವವರು ಬೀದಿಗಳಲ್ಲಿ ಅಡ್ಡಾಡುತ್ತಿರುತ್ತಾರೆ ಎಂಬುದಕ್ಕಾಗಿ. “ಕಟ್ಟಾಕಣ್ಮರೆಯಾಯಿತೋ ಇಲ್ಲವೋ? “ಕಟ್ಟಾಸಂಸ್ಕೃತಿ ಕೊನೆಗೊಳ್ಳಬೇಕೋ ಬೇಡವೋ?. ಅಲ್ಲಿ ಹೆಣ್ಣು ಮಕ್ಕಳ ಸುರಕ್ಷೆ ಬಗ್ಗೆ ಪ್ರಶ್ನೆಗಳಿದ್ದವು. ಹೆಣ್ಣು ಮಕ್ಕಳು ಶಾಲೆ ಕಾಲೇಜುಗಳಿಗೆ ಹೋಗುವುದು ದುಸ್ತರವಾಗಿತ್ತು. ವ್ಯಾಪಾರೋದ್ಯಮಿಗಳು ಬೆಳಿಗ್ಗೆ ಮನೆ ಬಿಟ್ಟು ಹೋಗುವಾಗ ಅವರ ಕುಟುಂಬ ಚಿಂತೆಗೀಡಾಗುತ್ತಿತ್ತು. ಬಡ ಕುಟುಂಬಗಳು ಕೆಲಸಕ್ಕಾಗಿ ಬೇರೆ ರಾಜ್ಯಗಳಿಗೆ ಹೋದಾಗ ಅವರ ಮನೆ ಮತ್ತು ಭೂಮಿ ಅಕ್ರಮವಾಗಿ ಅತಿಕ್ರಮಣ ಮಾಡಲ್ಪಡುವ ಬಗ್ಗೆ ಆತಂಕ ಇರುತ್ತಿತ್ತು. ಅಲ್ಲಿ ಯಾವಾಗ ಗಲಭೆಗಳು ಮತ್ತು ದೊಂಬಿಗಳಾಗುತ್ತವೆ ಎಂಬ ಬಗ್ಗೆ ಯಾರೊಬ್ಬರಿಗೂ  ಹೇಳಲು ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳು, ಪ್ರಿಯ ಸಹೋದರರೇ ಮತ್ತು  ಸಹೋದರಿಯರೇ, ನಮಗೆ ಹಗಲು ರಾತ್ರಿ ಕೆಲಸ ಮಾಡಲು ಪ್ರೇರೇಪಣೆ ನೀಡುತ್ತಿವೆ.ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ, ಮೊದಲು ಇಂತಹ ಪರಿಸ್ಥಿತಿಯಿಂದಾಗಿ  ದಿನನಿತ್ಯ ಹಳ್ಳಿಗಳಿಂದ ಮತ್ತು ಗ್ರಾಮಗಳಿಂದ ವಲಸೆಯ ವರದಿಗಳು ಬರುತ್ತಿದ್ದವು. ಆದರೆ ಕಳೆದ ನಾಲ್ಕುವರೆ ವರ್ಷಗಳಲ್ಲಿ ಯೋಗೀ ಜೀ ಸರಕಾರ ಪರಿಸ್ಥಿತಿಯಲ್ಲಿ ಸುಧಾರಣೆ ತರಲು ಬಹಳ ಶ್ರಮಪಟ್ಟು ಕೆಲಸ ಮಾಡಿದೆ. ಇಂದು ಮಾಫಿಯಾ ಮೇಲೆ, ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್ ಸಾಗುವಾಗ ಅವರನ್ನು ಪೋಷಿಸಿದವರಿಗೆ ನೋವಿನ ಅನುಭವ ಆಗುತ್ತಿದೆ. ಆದುದರಿಂದ ಇಂದು ಇಡೀ ಉತ್ತರ ಪ್ರದೇಶದ ಜನರು ಹೇಳುತ್ತಿದ್ದರೆ ಯು.ಪಿ ಕೂಡಿಸು ಯೋಗಿ ಎಂದರೆ ಬಹಳಉಪಯೋಗಿಎಂದು. ಅದನ್ನು ನಾನು ಮತ್ತೊಮ್ಮೆ ಹೇಳುತ್ತೇನೆ-ಉಪಯೋಗಿ, ಯು.ಪಿ. ಕೂಡಿಸು ಯೋಗಿ, ಬಹಳ ಉಪಯೋಗಿ!

ಸ್ನೇಹಿತರೇ,

ನಾನು ನಿಮಗೆ ಇನ್ನೊಂದು ಉದಾಹರಣೆಯನ್ನು ನೀಡುತ್ತೇನೆ. ಕೆಲವು ದಿನಗಳ ಹಿಂದೆ, ನಾನು ಮೀರತ್ತಿನ ಬಗ್ಗೆ ಒಂದು ವರದಿಯನ್ನು ನೋಡುತ್ತಿದ್ದೆ, ಆದರೆ ಇಡೀ ಉತ್ತರ ಪ್ರದೇಶ, ದಿಲ್ಲಿ ಎನ್.ಸಿ.ಆರ್ ಮತ್ತು ದೇಶದ ಇತರ ರಾಜ್ಯಗಳೂ ಇದರ ಬಗ್ಗೆ ತಿಳಿದುಕೊಳ್ಳಬೇಕಿದೆ.

ಸಹೋದರರೇ ಮತ್ತು ಸಹೋದರಿಯರೇ,

ಮೀರತ್ತಿನಲ್ಲಿ ಒಂದುಮೊಹಲ್ಲಇತ್ತು-ಅಲ್ಲಿ ಸೋಟಿಗಂಜ್ ಎಂಬ ಮಾರುಕಟ್ಟೆ ಇತ್ತು. ದೇಶದ ವಿವಿಧೆಡೆಯಿಂದ ಕಳವು ಮಾಡಲಾದ ವಾಹನಗಳನ್ನು ಇಲ್ಲಿಗೆ ತಂದು ಇಲ್ಲಿ ಕಳಚಿ ಹಾಕಲಾಗುತ್ತಿತ್ತು ಮತ್ತು ಅವುಗಳನ್ನು ಅಕ್ರಮ ಬಳಕೆ ಮಾಡಲಾಗುತ್ತಿತ್ತು. ದಶಕಗಳಿಂದ ಇದು ಹೀಗೆಯೇ ನಡೆದುಕೊಂಡು ಬಂದಿತ್ತು. ಕಳವು ಮಾಡಲಾದ ವಾಹನಗಳ ಜಾಲದ ಹಿಂದಿನ ಪ್ರಮುಖ ವ್ಯಕ್ತಿಗಳ ಬಗ್ಗೆ ಕಾರ್ಯಾಚರಣೆ ನಡೆಸುವ ಧೈರ್ಯವನ್ನು ಹಿಂದಿನ ಸರಕಾರಗಳು ತೋರಿರಲಿಲ್ಲ. ಕೆಲಸವನ್ನು ಕೂಡಾ ಬಲಿಷ್ಟ ಯೋಗೀ ಜೀ ಸರಕಾರ ಮತ್ತು ಸ್ಥಳೀಯ ಆಡಳಿತ ಮಾಡಿತು. ಈಗ ಸೋಟಿಗಂಜ್ ಕುಖ್ಯಾತ ಮಾರುಕಟ್ಟೆ ಬಾಗಿಲು ಹಾಕಿದೆ.

ಸಹೋದರರೇ ಮತ್ತು ಸಹೋದರಿಯರೇ,

ಮಾಫಿಯಾದ ಸಾಹಚರ್ಯೆಯನ್ನು ಬಯಸುವವರು ಮಾಫಿಯಾದ ಭಾಷೆಯನ್ನು ಬಳಸುತ್ತಾರೆ, ಮಾತನಾಡುತ್ತಾರೆ. ಆದರೆ ನಾವು ತಮ್ಮ ತ್ಯಾಗದಿಂದ ಮತ್ತು ದೃಢತೆಯಿಂದ ದೇಶವನ್ನು ಕಟ್ಟಿದವರನ್ನು ವೈಭವೀಕರಿಸುತ್ತೇವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ಪೂರ್ತಿಯ ಸಂಕೇತ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಇದರಂಗವಾಗಿ ಶಾಹೀದ್ ವಸ್ತುಸಂಗ್ರಹಾಲಯವನ್ನು ಶಹಜಹಾನ್ಪುರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಹುತಾತ್ಮರ ನೆನಪು ವಸ್ತುಸಂಗ್ರಹಾಲಯದಲ್ಲಿ ಕಾಪಿಡಲಾಗುತ್ತದೆ. ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವ ಹೊಸ ತಲೆಮಾರಿನ ಜನರು ರಾಷ್ಟ್ರದ ಬಗ್ಗೆ ಭಕ್ತಿಯ ಪ್ರೇರಣೆ ಪಡೆಯುತ್ತಾರೆ. ನಿಮ್ಮ ಆಶೀರ್ವಾದದೊಂದಿಗೆ, ಉತ್ತರ ಪ್ರದೇಶದ ಅಭಿವೃದ್ಧಿ ರೀತಿಯಲ್ಲಿಯೇ ಮುಂದೆ ಸಾಗಲಿದೆ. ಅದು ಪೂರ್ವ ಇರಲಿ ಅಥವಾ ಪಶ್ಚಿಮ ಇರಲಿ, ಅವಧ್ ಅಥವಾ ಬುಂದೇಲ್ ಖಂಡ ಇರಲಿಉತ್ತರ ಪ್ರದೇಶದ ಪ್ರತೀ ಮೂಲೆ ಮೂಲೆಯನ್ನೂ ಅಭಿವೃದ್ಧಿ ಮಾಡುವ ಆಂದೋಲನ ಮುಂದುವರೆಯಲಿದೆ. ಮತ್ತೊಮ್ಮೆ ನಿಮಗೆ ಗಂಗಾ ಎಕ್ಸ್ ಪ್ರೆಸ್ ವೇಗಾಗಿ ಶುಭವನ್ನು ಹಾರೈಸುತ್ತಾ  ಅಭಿನಂದಿಸುತ್ತೇನೆ.

ನನ್ನೊಂದಿಗೆ ಗಟ್ಟಿ ಧ್ವನಿಯಲ್ಲಿ ಹೇಳಿ

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಬಹಳ ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ

***



(Release ID: 1785487) Visitor Counter : 147