ಪ್ರಧಾನ ಮಂತ್ರಿಯವರ ಕಛೇರಿ

ಡಿಸೆಂಬರ್ 28ರಂದು ಕಾನ್ಪುರಕ್ಕೆ ಭೇಟಿ ನೀಡಿ, ಕಾನ್ಪುರ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಲಿರುವ ಪ್ರಧಾನಿ


ನಗರ ಸಂಚಾರ ಅಥವಾ ಚಲನಶೀಲತೆ ಸುಧಾರಣೆಗೆ ಪ್ರಧಾನಿ ಹೆಚ್ಚು ಗಮನ ಹರಿಸುತ್ತಾರೆ ಎಂಬುದಕ್ಕೆ ಈ ಯೋಜನೆ ಕನ್ನಡಿಯಾಗಿದೆ

ಐಐಟಿ ಕಾನ್ಪುರ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಪ್ರಧಾನಿ, ಬ್ಲಾಕ್ ಚೈನ್ ಆಧಾರಿತ ಡಿಜಿಟಲ್ ಪದವಿ ಪ್ರಮಾಣ ಪತ್ರಗಳಿಗೆ ಚಾಲನೆ ನೀಡಲಿದ್ದಾರೆ

ಐಐಟಿ ಕಾನ್ಪುರ ಸಂಸ್ಥೆಯಲ್ಲೇ ಅಭಿವೃದ್ಧಿಪಡಿಸಲಾದ ಬ್ಲಾಕ್ ಚೈನ್ ಚಾಲಿತ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಡಿಜಿಟಲ್ ಪದವಿಗಳನ್ನು ನೀಡಲಾಗುವುದು

ಬೀನಾ-ಪಂಕಿ ಬಹುಉತ್ಪನ್ನ ಪೈಪ್ ಲೈನ್ ಯೋಜನೆಗೂ ಚಾಲನೆ ನೀಡಲಿರುವ ಪ್ರಧಾನಿ

Posted On: 26 DEC 2021 4:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಡಿಸೆಂಬರ್ 28ರಂದು ಕಾನ್ಪುರಕ್ಕೆ ಭೇಟಿ ನೀಡಲಿದ್ದು, ಕಾನ್ಪುರ ಮೆಟ್ರೋ ರೈಲು ಯೋಜನೆಯ ಕಾಮಗಾರಿ ಪೂರ್ಣಗೊಂಡ ವಿಭಾಗವನ್ನು ಮಧ್ಯಾಹ್ನ 1:30ರ ಸುಮಾರಿಗೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿಯವರು ಬೀನಾ-ಪಂಕಿ ಬಹು ಉತ್ಪನ್ನ ಪೈಪ್ ಲೈನ್ ಯೋಜನೆಯನ್ನೂ ಉದ್ಘಾಟಿಸಲಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ 11 ಗಂಟೆ ಸುಮಾರಿಗೆ ಕಾನ್ಪುರ ಐಐಟಿಯ 54ನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ.

ನಗರ ಸಂಚಾರ ಅಥವಾ ಚಲನಶೀಲತೆ ಸುಧಾರಣೆಯು ಪ್ರಧಾನ ಮಂತ್ರಿಯವರು ಹೆಚ್ಚು ಗಮನ ಹರಿಸುವ ಕ್ಷೇತ್ರಗಳಲ್ಲಿ ಒಂದಾಗಿದೆ. ಕಾನ್ಪುರ ಮೆಟ್ರೋ ರೈಲು ಯೋಜನೆಯ ಪೂರ್ಣಗೊಂಡ ವಿಭಾಗದ ಉದ್ಘಾಟನೆ ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಐಐಟಿ ಕಾನ್ಪುರದಿಂದ ಮೋತಿ ಝೀಲ್‌ವರೆಗೆ 9 ಕಿ.ಮೀ ಉದ್ದದ ಮೆಟ್ರೋ ಮಾರ್ಗದ ಕಾಮಗಾರಿಯು ಪ್ರಸ್ತುತ ಪೂರ್ಣಗೊಂಡಿದೆ. ಕಾನ್ಪುರ ಮೆಟ್ರೋ ರೈಲು ಯೋಜನೆಯ ಕಾಮಗಾರಿ ಪ್ರಗತಿಯನ್ನು ಪ್ರಧಾನಮಂತ್ರಿಯವರು ಪರಿಶೀಲಿಸಲಿದ್ದಾರೆ ಜೊತೆಗೆ ಐಐಟಿ ಮೆಟ್ರೋ ನಿಲ್ದಾಣದಿಂದ ಗೀತಾ ನಗರಕ್ಕೆ ಮೆಟ್ರೋ ಪ್ರಯಾಣ ಕೈಗೊಳ್ಳಲಿದ್ದಾರೆ. ಕಾನ್ಪುರದ ಮೆಟ್ರೋ ರೈಲು ಯೋಜನೆಯ ಸಂಪೂರ್ಣ ಉದ್ದ 32 ಕಿ.ಮೀ. 11,000 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ.

ಬಿನಾ-ಪಂಕಿ ಬಹುಉತ್ಪನ್ನ ಪೈಪ್ ಲೈನ್ ಯೋಜನೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. 356 ಕಿ.ಮೀ ಉದ್ದದ ಈ ಪೈಪ್‌ ಲೈನ್‌ ಯೋಜನೆಯು ವರ್ಷಕ್ಕೆ ಸುಮಾರು 3.45 ದಶಲಕ್ಷ ಮೆಟ್ರಿಕ್ ಟನ್ ಸಾಗಣೆ ಸಾಮರ್ಥ್ಯವನ್ನು ಹೊಂದಿದೆ. ಮಧ್ಯಪ್ರದೇಶದ ಬೀನಾ ಸಂಸ್ಕರಣಾಗಾರದಿಂದ ಕಾನ್ಪುರದ ಪಂಕಿವರೆಗೆ ವಿಸ್ತರಿಸಿರುವ ಈ ಯೋಜನೆಯನ್ನು ೧೫೦೦ ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಈ ಪ್ರದೇಶಕ್ಕೆ ಬಿನಾ ಸಂಸ್ಕರಣಾಗಾರದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ತಲುಪಿಸಲು ಸಹಾಯ ಮಾಡುತ್ತದೆ.

ಕಾನ್ಪುರ ಐಐಟಿಯ 54ನೇ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಪ್ರಧಾನಮಂತ್ರಿ ಯವರು ಭಾಷಣ ಮಾಡಲಿದ್ದಾರೆ. ಘಟಿಕೋತ್ಸವದ ವೇಳೆ, ಎಲ್ಲಾ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಬ್ಲಾಕ್ ಚೈನ್ ಯೋಜನೆಯ ಅಡಿಯಲ್ಲಿ, ಸಂಸ್ಥೆಯಲ್ಲೇ ಅಭಿವೃದ್ಧಿಪಡಿಸಲಾದ ಬ್ಲಾಕ್ ಚೈನ್ ಚಾಲಿತ ತಂತ್ರಜ್ಞಾನದ ಮೂಲಕ ಡಿಜಿಟಲ್ ಪದವಿಗಳನ್ನು ನೀಡಲಾಗುವುದು. ಪ್ರಧಾನಮಂತ್ರಿಯವರು ಬ್ಲಾಕ್ ಚೈನ್ ಆಧಾರಿತ ಡಿಜಿಟಲ್ ಪದವಿ ಪ್ರಮಾಣ ಪತ್ರಕ್ಕೆ ಚಾಲನೆ ನೀಡಲಿದ್ದಾರೆ. ಈ ಡಿಜಿಟಲ್ ಪದವಿ ಪ್ರಮಾಣ ಪತ್ರಗಳನ್ನು ಜಾಗತಿಕ ಮಟ್ಟದಲ್ಲಿ ಪರಿಶೀಲನೆಗೆ ಒಳಪಡಿಸಬಹುದು ಮತ್ತು ಇವುಗಳನ್ನು ನಕಲು ಮಾಡಲಾಗದು ಎಂಬುದು ವಿಶೇಷ.

***



(Release ID: 1785392) Visitor Counter : 196