ಪ್ರಧಾನ ಮಂತ್ರಿಯವರ ಕಛೇರಿ
ಉತ್ತರ ಪ್ರದೇಶದ ಉಮ್ರಾಹಾ ಗ್ರಾಮದ ಸ್ವರ್ವೇದ್ ಮಹಾ ಮಂದಿರ ಧಾಮದಲ್ಲಿ ಸದ್ಗುರು ಸದಾ ಫಲ ದೇವ್ ವಿಹಂಗಮ್ ಯೋಗ ಸಂಸ್ಥಾನಂನ 98ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಮಂತ್ರಿ
"ಶ್ರೀಕೃಷ್ಣನ ಪಾದಾರವಿಂದಗಳಿಗೆ ನಮಸ್ಕರಿಸುವ ವೇಳೆ, ಗೀತಾ ಜಯಂತಿಯ ಸಂದರ್ಭದಲ್ಲಿ ನಾನು ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ"
"ನಾನು ಸದ್ಗುರು ಸದಾಫಲದೇವ್ ಜೀ ಅವರ ಆಧ್ಯಾತ್ಮಿಕ ಉಪಸ್ಥಿತಿಗೆ ತಲೆಬಾಗುತ್ತೇನೆ"
"ಸಮಯವು ಅನನುಕೂಲಕರವಾದಾಗಲೆಲ್ಲಾ, ಸಮಯದ ಹರಿವನ್ನು ಬದಲಾಯಿಸಲು ನಮ್ಮ ದೇಶದಲ್ಲಿ ಯಾರಾದರೂ ಸಂತರು ಹೊರಹೊಮ್ಮುತ್ತಾರೆ. ಸ್ವಾತಂತ್ರ್ಯದ ಅತಿದೊಡ್ಡ ನಾಯಕನನ್ನು ಜಗತ್ತು ಮಹಾತ್ಮ ಎಂದು ಕರೆಯುತ್ತದೆ"
"ನಾವು ಬನಾರಸ್ ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ, ಅದು ಇಡೀ ಭಾರತದ ಅಭಿವೃದ್ಧಿಯ ಮಾರ್ಗಸೂಚಿಯನ್ನು ರೂಪಿಸುತ್ತದೆ"
"ಹಳೆಯದನ್ನು ಉಳಿಸಿಕೊಂಡು ಹೊಸತನವನ್ನು ಅಪ್ಪಿಕೊಂಡ ಬನಾರಸ್ ದೇಶಕ್ಕೆ ಹೊಸ ದಿಕ್ಕು ತೋರುತ್ತಿದೆ"
"ಇಂದು ದೇಶದ ಸ್ಥಳೀಯ ವ್ಯವಹಾರಗಳು, ಉದ್ಯೋಗ ಮತ್ತು ಉತ್ಪನ್ನಗಳು ಹೊಸ ಬಲವನ್ನು ಪಡೆಯುತ್ತಿದ್ದು, ಸ್ಥಳೀಯತೆ ಜಾಗತಿಕವಾಗುತ್ತಿದೆ"
Posted On:
14 DEC 2021 4:50PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಉಮ್ರಾಹಾ ಗ್ರಾಮದ ಸ್ವರ್ವೇದ್ ಮಹಾಮಂದಿರ ಧಾಮದಲ್ಲಿ ಸದ್ಗುರು ಸದಾಫಲದೇವ್ ವಿಹಂಗಮ ಯೋಗ ಸಂಸ್ಥಾನಮ್ ನ 98ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕಾಶಿಯಲ್ಲಿ ನಿನ್ನೆ ಮಹಾದೇವನ ಪಾದಗಳಿಗೆ ಭವ್ಯ 'ವಿಶ್ವನಾಥ ಧಾಮ'ದ ಸಮರ್ಪಣೆ ಮಾಡಿದ್ದನ್ನು ಸ್ಮರಿಸಿದರು. "ಕಾಶಿಯ ಶಕ್ತಿಯು ಶಾಶ್ವತ ಮಾತ್ರವಲ್ಲ, ಅದು ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಲೇ ಇರುತ್ತದೆ" ಎಂದು ಅವರು ಹೇಳಿದರು. ಅಲ್ಲದೆ ಗೀತಾ ಜಯಂತಿಯ ಶುಭ ಸಂದರ್ಭದಲ್ಲಿ ಶ್ರೀಕೃಷ್ಣನ ಪಾದಾರವಿಂದಕ್ಕೆ ನಮಸ್ಕರಿಸಿದರು. "ಕುರುಕ್ಷೇತ್ರದ ರಣರಂಗದಲ್ಲಿ ಸೇನೆಗಳು ಮುಖಾಮುಖಿಯಾದ ಈ ದಿನದಂದು, ಮಾನವಕುಲವು ಯೋಗ, ಆಧ್ಯಾತ್ಮಿಕತೆ ಮತ್ತು ಪರಮಾರ್ಥಗಳ ಮಹಾ ಜ್ಞಾನವನ್ನು ಪಡೆಯಿತು. ಈ ಸಂದರ್ಭದಲ್ಲಿ, ಶ್ರೀಕೃಷ್ಣನ ಪಾದಗಳಿಗೆ ನಮಸ್ಕರಿಸುವಾಗ, ಗೀತಾ ಜಯಂತಿಯ ಸಂದರ್ಭದಲ್ಲಿ ನಿಮ್ಮೆಲ್ಲರಿಗೆ ಮತ್ತು ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ" ಎಂದು ಪ್ರಧಾನಮಂತ್ರಿ ಹೇಳಿದರು.
ಪ್ರಧಾನಮಂತ್ರಿಯವರು ಸದ್ಗುರು ಸದಾಫಲದೇವ್ ಅವರಿಗೆ ಗೌರವ ನಮನ ಸಲ್ಲಿಸಿದರು. "ನಾನು ಅವರ ಆಧ್ಯಾತ್ಮಿಕ ಉಪಸ್ಥಿತಿಗೆ ತಲೆಬಾಗುತ್ತೇನೆ. ಈ ಸಂಪ್ರದಾಯವನ್ನು ಜೀವಂತವಾಗಿರಿಸಿ, ಹೊಸ ವಿಸ್ತರಣೆ ನೀಡಿರುವ ಶ್ರೀ ಸ್ವತಂತ್ರದೇವ್ ಜೀ ಮಹಾರಾಜ್ ಮತ್ತು ಶ್ರೀ ವಿಜ್ಞಾನದೇವ್ ಜೀ ಮಹಾರಾಜ್ ಅವರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಪ್ರಧಾನಮಂತ್ರಿ ಹೇಳಿದರು. ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಕಷ್ಟದ ಸಮಯದಲ್ಲಿ ಸಂತರನ್ನು ನೀಡಿದ ಭಾರತದ ಇತಿಹಾಸದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. "ನಮ್ಮ ದೇಶ ಎಷ್ಟು ಅದ್ಭುತವಾಗಿದೆಯೆಂದರೆ, ಸಮಯವು ಅನನುಕೂಲಕರವಾದಾಗಲೆಲ್ಲಾ, ಸಮಯದ ಹರಿವನ್ನು ಬದಲಾಯಿಸಲು ಯಾರಾದರೂ ಸಂತರು ಇಲ್ಲಿ ಹೊರಹೊಮ್ಮುತ್ತಾರೆ. ಸ್ವಾತಂತ್ರ್ಯದ ಅತಿದೊಡ್ಡ ನಾಯಕನನ್ನು ಜಗತ್ತು ಮಹಾತ್ಮ ಎಂದು ಕರೆಯುತ್ತದೆ", ಎಂದು ಅವರು ಹೇಳಿದರು.
ಕಾಶಿಯ ವೈಭವ ಮತ್ತು ಮಹತ್ವವನ್ನು ಪ್ರಧಾನಮಂತ್ರಿಯವರು ವಿವರಿಸಿದರು. ಬನಾರಸ್ ನಂತಹ ನಗರಗಳು ಭಾರತದ ಅಸ್ಮಿತೆ, ಕಲೆ, ಉದ್ಯಮಶೀಲತೆಯ ಬೀಜಗಳನ್ನು ಕಠಿಣ ಸಮಯದಲ್ಲೂ ಸಂರಕ್ಷಿಸಿವೆ ಎಂದು ಅವರು ಹೇಳಿದರು. "ಬೀಜವಿದ್ದರೆ, ಅಲ್ಲಿ ಮರ ವಿಕಸಿಸಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ಇಂದು ನಾವು ಬನಾರಸ್ ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ, ಅದು ಇಡೀ ಭಾರತದ ಅಭಿವೃದ್ಧಿಯ ಮಾರ್ಗಸೂಚಿಯನ್ನು ರೂಪಿಸುತ್ತದೆ", ಎಂದು ಅವರು ಹೇಳಿದರು.
ಕಾಶಿಯ ಎರಡು ದಿನಗಳ ಭೇಟಿಯಲ್ಲಿರುವ ಪ್ರಧಾನಮಂತ್ರಿಯವರು ಕಳೆದ ರಾತ್ರಿ ನಗರದ ಪ್ರಮುಖ ಅಭಿವೃದ್ಧಿ ಯೋಜನೆಗಳ ಪರಿಶೀಲನೆ ನಡೆಸಿದರು. ಬನಾರಸ್ ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮ ನಿರಂತರ ತೊಡಗಿಸಿಕೊಳ್ಳುವಿಕೆಯನ್ನು ಅವರು ಪುನರುಚ್ಚರಿಸಿದರು. "ಕಳೆದ ರಾತ್ರಿ 12 ಗಂಟೆಯ ನಂತರ, ನನಗೆ ಅವಕಾಶ ಸಿಕ್ಕ ತಕ್ಷಣ, ನಾನು ನನ್ನ ಕಾಶಿಯಲ್ಲಿ ನಡೆಯುತ್ತಿರುವ ಕಾಮಗಾರಿ, ಆಗಿರುವ ಕೆಲಸವನ್ನು ನೋಡಲು ಮತ್ತೆ ಹೊರಗೆ ಹೋದೆ", ಎಂದು ಅವರು ಹೇಳಿದರು. ಗಡೋಲಿಯಾ ಪ್ರದೇಶದಲ್ಲಿ ಮಾಡಲಾಗುತ್ತಿರುವ ಸೌಂದರ್ಯೀಕರಣ ಕಾಮಗಾರಿ ನೋಡಲೇಬೇಕಾದ ಒಂದು ದೃಶ್ಯವಾಗಿದೆ ಎಂದು ಅವರು ಹೇಳಿದರು. "ನಾನು ಅಲ್ಲಿ ಅನೇಕ ಜನರೊಂದಿಗೆ ಸಂವಹನ ನಡೆಸಿದೆ. ನಾನು ಮಂಡುದ್ದಿಯದಲ್ಲಿನ ಬನಾರಸ್ ರೈಲು ನಿಲ್ದಾಣವನ್ನು ಸಹ ನೋಡಿದೆ. ಈ ನಿಲ್ದಾಣವನ್ನು ಸಹ ನವೀಕರಿಸಲಾಗಿದೆ. ಹಳೆಯದನ್ನು ಉಳಿಸಿಕೊಂಡು ಹೊಸತನವನ್ನು ಅಪ್ಪಿಕೊಂಡ ಬನಾರಸ್, ದೇಶಕ್ಕೆ ಹೊಸ ದಿಕ್ಕನ್ನು ತೋರುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸದ್ಗುರು ಅವರು ನೀಡಿದ ಸ್ವದೇಶಿ ಮಂತ್ರವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಇಂದು ಅದೇ ಮನೋಭಾವದಿಂದ ದೇಶವು 'ಆತ್ಮನಿರ್ಭರ ಭಾರತ್ ಅಭಿಯಾನ' ಪ್ರಾರಂಭಿಸಿದೆ ಎಂದು ಹೇಳಿದರು. "ಇಂದು ದೇಶದ ಸ್ಥಳೀಯ ವ್ಯಾಪಾರ, ಉದ್ಯೋಗ ಮತ್ತು ಉತ್ಪನ್ನಗಳು ಹೊಸ ಬಲವನ್ನು ಪಡೆಯುತ್ತಿವೆ. ಸ್ಥಳೀಯತೆ ಜಾಗತಿಕವಾಗುತ್ತಿದೆ" ಎಂದು ಅವರು ಹೇಳಿದರು.
ತಮ್ಮ ಭಾಷಣದಲ್ಲಿ ಸಬ್ ಕಾ ಪ್ರಯಾಸ್ ಮನೋಭಾವ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಪ್ರತಿಯೊಬ್ಬರೂ ಕೆಲವು ನಿರ್ಣಯಗಳನ್ನು ಮಾಡುವಂತೆ ಮನವಿ ಮಾಡಿದರು. ಈ ನಿರ್ಣಯಗಳು ಸದ್ಗುರುವಿನ ನಿರ್ಣಯಗಳನ್ನು ಪೂರೈಸುವ ಮತ್ತು ದೇಶದ ಆಶೋತ್ತರಗಳನ್ನು ಸಹ ಈಡೇರಿಸುವ ರೀತಿಯಲ್ಲಿರಬೇಕು ಎಂದು ಅವರು ಹೇಳಿದರು. ಇವು ಮುಂದಿನ ಎರಡು ವರ್ಷಗಳಲ್ಲಿ ಆವೇಗವನ್ನು ನೀಡಬೇಕಾದ ಮತ್ತು ಸಾಮೂಹಿಕವಾಗಿ ಪೂರೈಸಬೇಕಾದ ನಿರ್ಣಯಗಳಾಗಿರಬಹುದು. ಅವರು ಒತ್ತಾಯಿಸಿದ ಮೊದಲ ನಿರ್ಣಯವು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಮತ್ತು ಅವರಲ್ಲಿ ಕೌಶಲ್ಯ ಅಭಿವೃದ್ಧಿಯ ಕುರಿತಾಗಿತ್ತು. "ತಮ್ಮ ಕುಟುಂಬಗಳ ಜೊತೆಗೆ, ಸಮಾಜದ ಜವಾಬ್ದಾರಿಯನ್ನು ತೆಗೆದುಕೊಳ್ಳಬಲ್ಲವರು ಒಬ್ಬಿಬ್ಬರು ಬಡ ಹೆಣ್ಣುಮಕ್ಕಳ ಕೌಶಲ್ಯ ಅಭಿವೃದ್ಧಿಯ ಜವಾಬ್ದಾರಿಯನ್ನು ಸಹ ತೆಗೆದುಕೊಳ್ಳಬೇಕು", ಎಂದು ಅವರು ಒತ್ತಾಯಿಸಿದರು. ಮತ್ತೊಂದು ನಿರ್ಣಯವು ನೀರನ್ನು ಉಳಿಸುವ ಕುರಿತಾದ್ದು ಎಂದು ಅವರು ಹೇಳಿದರು. "ನಾವು ನಮ್ಮ ನದಿಗಳು, ಗಂಗಾ ಜೀ ಮತ್ತು ನಮ್ಮ ಎಲ್ಲಾ ನೀರಿನ ಮೂಲಗಳನ್ನು ಸ್ವಚ್ಛವಾಗಿಡಬೇಕು" ಎಂದು ಪ್ರಧಾನಮಂತ್ರಿ ತಮ್ಮ ಮಾತು ಮುಕ್ತಾಯಗೊಳಿಸಿದರು.
***
(Release ID: 1781716)
Visitor Counter : 209
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam