ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 28.11.2021 ರಂದು ಮಾಡಿದ ‘ಮನ್ ಕಿ ಬಾತ್’ 83 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ

Posted On: 28 NOV 2021 11:33AM by PIB Bengaluru

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ.

ಇಂದು ಮತ್ತೊಮ್ಮೆ ನಾವು ಮನದ ಮಾತಿನಲ್ಲಿ ಒಗ್ಗೂಡುತ್ತಿದ್ದೇವೆ. 2 ದಿನಗಳ ನಂತರ ಡಿಸೆಂಬರ್ ತಿಂಗಳು ಆರಂಭವಾಗುತ್ತಿದೆ.  ಡಿಸೆಂಬರ್ ಬರುತ್ತಿದ್ದಂತೆ ಮಾನಸಿಕವಾಗಿ ನಮಗೆ ಅಂತೂ ವರ್ಷ ಮುಗಿಯಿತು ಎಂದೆನ್ನಿಸುತ್ತದೆ. ಇದು ವರ್ಷದ ಕೊನೆಯ ಮಾಸವಾಗಿದೆ. ನವ ವರ್ಷಕ್ಕೆ ಹೊಸ ಯೋಜನೆಗಳನ್ನು ಹೆಣೆಯಲಾರಂಭಿಸುತ್ತೇವೆ. ಇದೇ ತಿಂಗಳು ನೌಕಾಪಡೆ ದಿನ ಮತ್ತು ಸಶಸ್ತ್ರ ಪಡೆಗಳ ಧ್ವಜ ದಿನವನ್ನೂ ದೇಶ ಆಚರಿಸುತ್ತದೆ.  ಡಿಸೆಂಬರ್ 16 ರಂದು 1971 ನೇ ವರ್ಷದಲ್ಲಿ ನಡೆದ ಯುದ್ಧದ ಸ್ವರ್ಣ ಜಯಂತಿಯನ್ನು ದೇಶ ಆಚರಿಸುತ್ತಿದೆ ಎಂದು ನಮಗೆಲ್ಲ ತಿಳಿದಿದೆ. ನಾನು ಈ ಎಲ್ಲ ಸಂದರ್ಭಗಳಲ್ಲಿ ದೇಶದ ಸುರಕ್ಷತಾ ಬಲವನ್ನು ಸ್ಮರಿಸುತ್ತೇನೆ. ನಮ್ಮ ಯೋಧರನ್ನು ಸ್ಮರಿಸುತ್ತೇನೆ ಹಾಗೂ ವಿಶೇಷವಾಗಿ ಇಂಥ ಯೋಧರಿಗೆ ಜನ್ಮ ನೀಡಿದ ವೀರ ಮಾತೆಯರನ್ನು ಸ್ಮರಿಸುತ್ತೇನೆ. ಎಂದಿನಂತೆ ಈ ಬಾರಿಯೂ ನನಗೆ ನಮೋ ಆಪ್ ನಲ್ಲಿ ಮತ್ತು ಮೈ ಗೌ ನಲ್ಲಿ ನಿಮ್ಮ ಹಲವಾರು ಸಲಹೆ ಸೂಚನೆಗಳು ದೊರೆತಿವೆ. ನೀವು ನನ್ನನ್ನು ನಿಮ್ಮ ಕುಟುಂಬ ಸದಸ್ಯನಂತೆ ಪರಿಗಣಿಸಿ ಸುಖ ದುಖಃಗಳನ್ನು ಹಂಚಿಕೊಂಡಿದ್ದೀರಿ. ಇದರಲ್ಲಿ ಬಹಳಷ್ಟು ಯುವಜನತೆ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರೂ ಇದ್ದಾರೆ. ಮನದ ಮಾತಿನ ನಮ್ಮ ಈ ಕುಟುಂಬ ನಿರಂತರವಾಗಿ ವೃದ್ಧಿಸುತ್ತಿದೆ ಮತ್ತು ಮನಸ್ಸುಗಳು ಬೆರೆಯುತ್ತಿವೆ ಗುರಿಯೊಂದಿಗೂ ಬೆಸೆಯುತ್ತಿವೆ ಎಂದು ನನಗೆ ಬಹಳ ಸಂತೋಷವೆನಿಸುತ್ತದೆ. ಗಾಢವಾಗಿ ಬೇರೂರುತ್ತಿರುವ ನಮ್ಮ ಸಂಬಂಧಗಳು ನಮ್ಮ ನಡುವೆ ನಿರಂತರವಾಗಿ ಸಕಾರಾತ್ಮಕತೆಯನ್ನು ಪ್ರವಹಿಸುತ್ತಿವೆ.

ನನ್ನ ಪ್ರಿಯ ದೇಶಬಾಂಧವರೆ, ಸೀತಾಪುರದ ಓಜಸ್ವಿ ಎಂಬುವರು ಹೀಗೆ ಬರೆಯುತ್ತಾರೆ- ಅಮೃತ ಮಹೋತ್ಸವದ ಕುರಿತು ನಡೆಯುತ್ತಿರುವ ಚರ್ಚೆಗಳು ಅವರಿಗೆ ಬಹಳ ಇಷ್ಟವಾಗುತ್ತಿವೆ. ಅವರು ತಮ್ಮ ಸ್ನೇಹಿತರೊಂದಿಗೆ ಮನದ ಮಾತುಗಳನ್ನು ಕೇಳುತ್ತಾರೆ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಸಾಕಷ್ಟು ಅರಿಯಲು ಮತ್ತು ಕಲಿಯಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಸ್ನೇಹಿತರೆ, ಅಮೃತ ಮಹೋತ್ಸವ ನಮಗೆ ಕಲಿಕೆಯ ಜೊತೆಗೆ ದೇಶಕ್ಕಾಗಿ ಏನನ್ನಾದರೂ ಮಾಡುವಂತಹ ಪ್ರೇರಣೆಯನ್ನೂ ನೀಡುತ್ತದೆ. ಈಗಂತೂ ದೇಶದೆಲ್ಲೆಡೆ ಸಾಮಾನ್ಯ ಜನರಲ್ಲಾಗಲಿ ಅಥವಾ ಸರ್ಕಾರದಲ್ಲಾಗಲಿ, ಪಂಚಾಯ್ತಿಯಿಂದ ಹಿಡಿದು ಸಂಸತ್ತಿನವರೆಗೆ ಅಮೃತ ಮಹೋತ್ಸವ ಪ್ರತಿಧ್ವನಿಸುತ್ತಿದೆ ಮತ್ತು ನಿರಂತರವಾಗಿ ಈ ಮಹೋತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಜರುಗುತ್ತಿವೆ. ಇಂಥದೇ ಒಂದು ರೋಮಾಂಚಕಾರಿ ಕಾರ್ಯಕ್ರಮ ದೆಹಲಿಯಲ್ಲಿ ನಡೆಯಿತು. “ಅಜಾದಿ ಕಿ ಕಹಾನಿ ಬಚ್ಚೊಂಕಿ ಜುಬಾನಿ” ಕಾರ್ಯಕ್ರಮದಲ್ಲಿ ಮಕ್ಕಳು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಕಥೆಗಳನ್ನು ಮನಃಪೂರ್ವಕವಾಗಿ ಪ್ರಸ್ತುತಪಡಿಸಿದರು. ವಿಶೇಷವೆಂದರೆ ಇದರಲ್ಲಿ ಭಾರತದ ಜೊತೆಗೆ ನೇಪಾಳ, ಮಾರಿಷಿಯಸ್, ತಾಂಜೇನಿಯಾ, ನ್ಯೂಜಿಲೆಂಡ್ ಮತ್ತು ಫಿಜಿ ದೇಶದ ವಿದ್ಯಾರ್ಥಿಗಳೂ ಭಾಗವಹಿಸಿದ್ದರು. ನಮ್ಮ ದೇಶದ ಮಹಾರತ್ನ ಒಎನ್ ಜಿಸಿ. ಒಎನ್ ಜಿಸಿ ಕೂಡ ಸ್ವಲ್ಪ ವಿಭಿನ್ನವಾಗಿ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ.  ಒಎನ್ ಜಿಸಿ ಈ ಮಧ್ಯೆ ವಿದ್ಯಾರ್ಥಿಗಳಿಗೆ ತೈಲ ಕ್ಷೇತ್ರದಲ್ಲಿ ಅಧ್ಯಯನ ಪ್ರವಾಸವನ್ನು ಆಯೋಜಿಸುತ್ತಿದೆ. ಈ ಪ್ರವಾಸದಲ್ಲಿ ಒಎನ್ ಜಿಸಿ ವಿದ್ಯಾರ್ಥಿಗಳಿಗೆ ತೈಲ ಕ್ಷೇತ್ರದ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಮುಂಬರುವ ನಮ್ಮ ಇಂಜಿನೀಯರ್ ಗಳು ರಾಷ್ಟ್ರ ನಿರ್ಮಾಣದ ಪ್ರಯತ್ನದಲ್ಲಿ ಸಂಪೂರ್ಣ ಹುರುಪು ಮತ್ತು ಶೃದ್ಧೆಯಿಂದ ಪಾಲ್ಗೊಳ್ಳಲಿ ಎಂಬುದು ಇದರ ಉದ್ದೇಶವಾಗಿದೆ.

ಸ್ನೇಹಿತರೆ, ಸ್ವಾತಂತ್ರ್ಯದಲ್ಲಿ ನಮ್ಮ ಬುಡಕಟ್ಟು ಜನರ ಕೊಡುಗೆಯನ್ನು ಮನಗಂಡು ದೇಶ ಬುಡಕಟ್ಟು ಜನರ ಗೌರವ ಸಪ್ತಾಹವನ್ನೂ ಆಚರಿಸಿದೆ. ದೇಶದ ವಿಭಿನ್ನ ಭಾಗಗಳಲ್ಲಿ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳೂ ಜರುಗಿದವು. ಅಂಡಮಾನ್ ಮತ್ತು ನಿಕೊಬಾರ್ ದ್ವೀಪ ಸಮೂಹದಲ್ಲಿ ಜಾರ್ವಾ ಮತ್ತು ಓಂಗೆ ಎಂಬ ಬುಡಕಟ್ಟು ಸಮುದಾಯದ ಜನರು ತಮ್ಮ ಸಂಸ್ಕೃತಿಯ ಸಾಕಾರ ರೂಪವನ್ನು ಪ್ರದರ್ಶಿಸಿದರು. ಹಿಮಾಚಲ ಪ್ರದೇಶದ ಊನಾದ ಮಿನಿಯೇಚರ್ ಬರಹಗಾರ ರಾಮ್ ಕುಮಾರ್ ಜೋಷಿಯವರು ಒಂದು ಅದ್ಭುತ ಕೆಲಸವನ್ನು ಮಾಡಿದ್ದಾರೆ. ಅವರು ಒಂದು ಪುಟ್ಟ ಪೋಸ್ಟೇಜ್ ಸ್ಟಾಂಪ್ ಮೇಲೆ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಪೂರ್ವ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿಜಿಯವರ ವಿಶೇಷ ಸ್ಕೆಚ್ ಬರೆದಿದ್ದಾರೆ. ಹಿಂದಿಯಲ್ಲಿ ಬರೆದ ‘ರಾಮ್’ ಎಂಬ ಶಬ್ದದ ಮೇಲೆ ಸ್ಕೆಚ್ ಬರೆದಿದ್ದಾರೆ. ಇದರಲ್ಲಿ ಇಬ್ಬರೂ ಮಹಾಪುರುಷರ ಜೀವನಗಾಥೆಯನ್ನು ಸಂಕ್ಷಿಪ್ತವಾಗಿ ಬಿಡಿಸಲಾಗಿದೆ. ಮಧ್ಯಪ್ರದೇಶದ ಕಟನಿಯಿಂದ ಕೆಲ ಸ್ನೇಹಿತರು ಒಂದು ಅವಿಸ್ಮರಣೀಯ ಕಥೆ ಹೇಳುವ ಕಾರ್ಯಕ್ರಮದ ಮಾಹಿತಿ ನೀಡಿದ್ದಾರೆ. ಇದರಲ್ಲಿ ರಾಣಿ ದುರ್ಗಾವತಿಯ ಅದಮ್ಯ ಸಾಹಸ ಮತ್ತು ಬಲಿದಾನದ ನೆನಪುಗಳನ್ನು ಸ್ಮರಿಸಲಾಗಿದೆ. ಇಂಥದೇ ಒಂದು ಕಾರ್ಯಕ್ರಮ ಕಾಶಿಯಲ್ಲಿ ಜರುಗಿತು. ಗೋಸವಾಮಿ ತುಲಸಿದಾಸ್, ಸಂತ ಕಬೀರ್, ಸಂತ ರವಿದಾಸ್, ಭಾರತೇಂದು ಹರಿಶ್ಚಂದ್ರ, ಮುನ್ಶಿ ಪ್ರೇಮ್ ಚಂದ್ ಮತ್ತು ಜೈಶಂಕರ್ ಪ್ರಸಾದ್ ರಂತಹ ಮಹಾನುಭಾವರ ಗೌರವಾರ್ಥ 3 ದಿನಗಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೇರೆ ಬೇರೆ ಕಾಲಘಟ್ಟದಲ್ಲಿ ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಇವರೆಲ್ಲರ ಕೊಡುಗೆ ಬಹಳ ಮಹತ್ವದ ಪಾತ್ರವಹಿಸಿದೆ. ಮನದ ಮಾತಿನ ಹಿಂದಿನ ಕಂತುಗಳಲ್ಲಿ ನಾನು 3 ಸ್ಪರ್ಧೆಗಳ ಬಗ್ಗೆ ಉಲ್ಲೇಖಿಸಿದ್ದೆ ಎಂಬುದು ನಿಮಗೆ ನೆನಪಿರಬಹುದು, ದೇಶ ಭಕ್ತಿ ಗೀತೆ ಬರೆಯುವುದು, ದೇಶ ಭಕ್ತಿಗೆ ಸಂಬಂಧಿಸಿದ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಘಟನೆಗಳ ರಂಗೋಲಿ ಬಿಡಿಸುವುದು ಮತ್ತು ನಮ್ಮ ಮಕ್ಕಳ ಮನದಲ್ಲಿ ಭವ್ಯ ಭಾರತದ ಕನಸುಗಳನ್ನು ಬಿತ್ತುವಂತಹ ಜೋಗುಳದ ಹಾಡುಗಳನ್ನು ಬರೆಯುವ ಕುರಿತು ಹೇಳಿದ್ದೆ. ಈ ಸ್ಪರ್ದೆಗಳಿಗೆ ತಾವು ಖಂಡಿತ ಪ್ರವೇಶ ಪಡೆದಿರಬಹುದು, ಯೋಜನೆ ರೂಪಿಸಿರಬಹುದು ಮತ್ತು ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸಿರಲೂಬಹುದು ಎಂದು ನನಗೆ ನಿರೀಕ್ಷೆಯಿದೆ. ಭಾರತದ ಪ್ರತಿ ಮೂಲೆಮೂಲೆಯಲ್ಲೂ ನಾ ಮುಂದು ತಾ ಮುಂದು ಎನ್ನುವಂತೆ ಈ ಕಾರ್ಯಕ್ರಮಗಳನ್ನು ಮುನ್ನಡೆಸುತ್ತೀರಿ ಎಂದು ನಿರೀಕ್ಷಿಸುತ್ತೇನೆ.    

ನನ್ನ ಪ್ರಿಯ ದೇಶಬಾಂಧವರೆ ಈ ಚರ್ಚೆಯಿಂದ ಈಗ ನಿಮ್ಮನ್ನು ನೇರವಾಗಿ ಬೃಂದಾವನಕ್ಕೆ ಕರೆದೊಯ್ಯುತ್ತೇನೆ. ಭಗವಂತನ ಪ್ರೀತಿಯ ಪ್ರತ್ಯಕ್ಷ ಸ್ವರೂಪ ಎಂದು ಬೃಂದಾವನವನ್ನು ಪರಿಗಣಿಸಲಾಗುತ್ತದೆ. ನಮ್ಮ ಸಂತರೂ ಹೀಗೆ ಹೇಳಿದ್ದಾರೆ,

ಯಹ ಆಸಾ ಧರಿ ಚಿತ್ತ ಮೆ, ಯಹ ಆಸಾ ಧರಿ ಚಿತ್ತ ಮೆ

ಕಹತ ಜಥಾ ಮತಿ ಮೋರ

ವೃಂದಾವನ್ ಸುಖ ರಂಗಕೌ,

ವೃಂದಾವನ್ ಸುಖ ರಂಗಕೌ,

ಕಾಹುನಾ ಪಾಯೌ ಔರ್

ಅಂದರೆ ವೃಂದಾವನದ ಮಹಿಮೆಯನ್ನು ನಾವು ನಮ್ಮ ನಮ್ಮ ಸಾಮರ್ಥ್ಯಕ್ಕೆ ಅನುಸಾರ ಬಿಂಬಿಸುತ್ತೇವೆ ಆದರೆ ವೃಂದಾವನದ ಸುಖ ಮತ್ತು ಇಲ್ಲಿಯ ಅನುಭೂತಿಯನ್ನು ಯಾರೂ ಸಂಪೂರ್ಣ ಅನುಭವಿಸಲಾರರು. ಅದು ಸೀಮಾತೀತವಾಗಿದೆ. ಆದ್ದರಿಂದಲೇ ವಿಶ್ವಾದ್ಯಂತದ ಜನರನ್ನು ವೃಂದಾವನ್ ತನ್ನೆಡೆಗೆ ಆಕರ್ಷಿಸುತ್ತಿದೆ. ಇದರ ಛಾಪು ವಿಶ್ವದ ಮೂಲೆಮೂಲೆಯಲ್ಲಿ ನೋಡಲು ಸಿಗುತ್ತದೆ.

ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಪರ್ಥ್ ಎಂಬ ನಗರವಿದೆ. ಕ್ರಿಕೆಟ್ ಪ್ರೇಮಿಗಳು ಇದರ ಬಗ್ಗೆ ಚೆನ್ನಾಗಿ ಬಲ್ಲರು. ಏಕೆಂದರೆ ಪರ್ಥ್ ನಲ್ಲಿ ಕ್ರಿಕೆಟ್ ಮ್ಯಾಚ್ ಗಳು ನಡೆಯುತ್ತಲೇ ಇರುತ್ತವೆ. ಪರ್ಥ್ ನಲ್ಲಿ ‘ಸೆಕ್ರೆಡ್ ಇಂಡಿಯಾ ಗ್ಯಾಲರಿ’ ಎಂಬ ಹೆಸರಿನ ಕಲಾ ವಸ್ತು ಸಂಗ್ರಹಾಲಯವಿದೆ. ಈ ಸಂಗ್ರಹಾಲಯವನ್ನು ಸ್ವಾನ್ ವ್ಯಾಲಿ ಎಂಬ ಸುಂದರ ಸ್ಥಳದಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಆಸ್ಟ್ರೇಲಿಯಾದ ನಿವಾಸಿ ಜಗತ್ ತಾರಿಣಿ ದಾಸಿಯವರ ಪ್ರಯತ್ನದ ಫಲವಾಗಿದೆ.  ಜಗತ್ ತಾರಿಣಿ ಅವರು ಮೂಲತಃ ಆಸ್ಟ್ರೇಲಿಯಾದವರು. ಅಲ್ಲಿಯೇ ಜನನ, ಅಲ್ಲಿಯೇ ಬೆಳೆದದ್ದು ಆದರೆ 16 ವರ್ಷಗಳಿಗೂ ಹೆಚ್ಚು ಕಾಲ ವೃಂದಾವನದಲ್ಲಿ ಅವರು ಕಳೆದಿದ್ದಾರೆ. ತಮ್ಮ ಸ್ವದೇಶ ಆಸ್ಟ್ರೇಲಿಯಾಕ್ಕೆ  ಮರಳಿ ಹೋದರೂ ವೃಂದಾವನವನ್ನು ಮರೆಯಲಾಗಲಿಲ್ಲ ಎಂದು ಅವರು ಹೇಳುತ್ತಾರೆ. ಹಾಗಾಗಿ ಅವರು ವೃಂದಾವನ ಮತ್ತು ಅದರ ಆಧ್ಯಾತ್ಮಿಕ ಭಾವದೊಂದಿಗೆ ಹೊಂದಿಕೊಂಡಿರಲು ಆಸ್ಟ್ರೇಲಿಯಾದಲ್ಲಿಯೇ ವೃಂದಾವನ ನಿರ್ಮಿಸಿದರು. ಕಲೆಯನ್ನೇ ಮಾಧ್ಯಮವನ್ನಾಗಿಸಿಕೊಂಡು ಅಧ್ಬುತ ವೃಂದಾವನವನ್ನು ಅವರು ನಿರ್ಮಿಸಿದ್ದಾರೆ. ಇಲ್ಲಿಗೆ ಭೇಟಿ ನೀಡುವ ಜನರಿಗೆ ಹಲವಾರು ಕಲಾಕೃತಿಗಳನ್ನು ನೋಡುವ ಅವಕಾಶ ಲಭಿಸುತ್ತದೆ. ಅವರಿಗೆ ಭಾರತದ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ವೃಂದಾವನ, ನವಾದ್ವೀಪ ಮತ್ತು ಜಗನ್ನಾಥ ಪುರಿಯ ಪರಂಪರೆ ಮತ್ತು ಸಂಸ್ಕೃತಿಯ ನೋಟ ಕಾಣಸಿಗುತ್ತದೆ. ಇಲ್ಲಿ ಭಗವಾನ್ ಶ್ರೀಕೃಷ್ಣನ ಜೀವನಕ್ಕೆ ಸಂಬಂಧಿಸಿದ ಅನೇಕ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಭಗವಾನ್ ಶ್ರೀಕೃಷ್ಣ ಗೋವರ್ಧನಗಿರಿಯನ್ನು ತನ್ನ ಕಿರುಬೆರಳಲ್ಲಿ ಎತ್ತಿ ಹಿಡಿದಿದ್ದು ಅದರಡಿ ವೃಂದಾವನದ ಜನರು ಆಶ್ರಯ ಪಡೆದಿರುವ ಒಂದು ಕಲಾಕೃತಿಯೂ ಇದೆ. ಜಗತ್ ತಾರಿಣಿಯವರ ಈ ಅದ್ಭುತ ಪ್ರಯತ್ನ ಖಂಡಿತ ನಮಗೆ ಶ್ರೀಕೃಷ್ಣ ಭಕ್ತಿಯ ಶಕ್ತಿ ಏನೆಂಬುದರ ದರ್ಶನ ಮಾಡಿಸುತ್ತದೆ. ನಾನು ಅವರ ಈ ಪ್ರಯತ್ನಕ್ಕೆ ಅನಂತ ಶುಭಾಷಯಗಳನ್ನು ಕೋರುತ್ತೇನೆ.

ನನ್ನ ಪ್ರಿಯ ದೇಶಬಾಂಧವರೆ, ಈಗ ನಾನು ಆಸ್ಟ್ರೇಲಿಯಾದ ಪರ್ಥ್ ನಲ್ಲಿ ನಿರ್ಮಿಸಲಾದ ವೃಂದಾವನದ ಬಗ್ಗೆ ಮಾತನಾಡುತ್ತಿದ್ದೆ. ಒಂದು ಆಸಕ್ತಿಕರ ಇತಿಹಾಸವೆಂದರೆ ಬುಂದೇಲ್ ಖಂಡದ ಝಾನ್ಸಿಯೊಂದಿಗೂ ಆಸ್ಟ್ರೇಲಿಯಾದ ನಂಟಿದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಕಾನೂನಾತ್ಮಕ ಸಮರವನ್ನು ನಡೆಸುತ್ತಿದ್ದಾಗ ಜಾನ್ ಲ್ಯಾಂಗ್ ಅವರ ವಕೀಲರಾಗಿದ್ದರು.  ಜಾನ್ ಲ್ಯಾಂಗ್ ಮೂಲತಃ ಆಸ್ಟ್ರೇಲಿಯಾದವರಾಗಿದ್ದರು. ಭಾರತದಲ್ಲಿದ್ದುಕೊಂಡು ಅವರು ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಮೊಕದ್ದಮೆಯನ್ನು ನಡೆಸಿದ್ದರು. ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಝಾನ್ಸಿ ಮತ್ತು ಬುಂದೇಲ್ ಖಂಡ್ ಕೊಡುಗೆಯೇನೆಂಬುದು ನಮಗೆಲ್ಲ ತಿಳಿದಿದೆ. ಇಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ವೀರರಮಣಿ ಝಲ್ಕಾರಿಬಾಯಿಯವರೂ ಜನಿಸಿದ್ದರು. ಮೇಜರ್ ಧ್ಯಾನ್ ಚಂದ್ ರಂತಹ ಖೇಲ್ ರತ್ನವನ್ನೂ ಕೂಡಾ ಈ ಭೂಮಿ ದೇಶಕ್ಕೆ ಕೊಡುಗೆಯಾಗಿ ನೀಡಿದೆ.

ಸ್ನೇಹಿತರೆ, ಶೌರ್ಯವನ್ನು ಕೇವಲ ಯುದ್ಧ ಭೂಮಿಯಲ್ಲಿ ಮಾತ್ರ ತೋರ್ಪಡಿಸಬೇಕೆಂದೇನೂ ಇಲ್ಲ.  ಶೌರ್ಯವೆಂಬುದು ಒಂದು ವೃತವಾದಾಗ ಮತ್ತು ಅದು ವಿಸ್ತರಣೆಗೊಂಡಾಗ ಪ್ರತಿ ಕ್ಷೇತ್ರದಲ್ಲೂ ಅನೇಕ ಕಾರ್ಯಗಳು ಸಿದ್ಧಿಸಲಾರಂಭಿಸುತ್ತವೆ. ಇಂಥ ಶೌರ್ಯದ ಬಗ್ಗೆ ಶ್ರೀಮತಿ ಜೋತ್ಸ್ನಾ ಅವರು ಪತ್ರ ಬರೆದು ತಿಳಿಸಿದ್ದಾರೆ. ಜಾಲೌನ್ ನಲ್ಲಿ ನೂನ್ ನದಿ ಎಂಬ ಒಂದು ಪಾರಂಪರಿಕ ನದಿಯಿತ್ತು. ನೂನ್ ಇಲ್ಲಿಯ ರೈತರಿಗೆ ನೀರಿನ ಪ್ರಮುಖ ಮೂಲವಾಗಿತ್ತು. ಆದರೆ ಕಾಲಕ್ರಮೇಣ ನೂನ್ ನದಿ ಬತ್ತಿ ಹೋಗಲಾರಂಭಿಸಿತು. ಅಲ್ಪ ಸ್ವಲ್ಪ ಉಳಿದಿದ್ದ ನದಿಯ ಅಸ್ತಿತ್ವ ಕಾಲುವೆ ರೂಪದಲ್ಲಿ ಬದಲಾಗಲಾರಂಭಿಸಿತ್ತು. ಇದರಿಂದ ರೈತರಿಗೆ ನೀರಾವರಿ ಸಂಕಷ್ಟ ಎದುರಾಗಲಾರಂಭಿಸಿತು. ಜಾಲೌನ್ ಜನತೆ ಈ ಸ್ಥಿತಿಯನ್ನು ಬದಲಾಯಿಸುವ ಪಣತೊಟ್ಟರು. ಇದೇ ವರ್ಷ ಮಾರ್ಚ್ ನಲ್ಲಿ ಇದಕ್ಕಾಗಿ ಒಂದು ಸಮಿತಿ ರಚಿಸಲಾಯಿತು. ಸಾವಿರಾರು ಗ್ರಾಮೀಣ ಮತ್ತು ಸ್ಥಳೀಯ ಜನತೆ ಸ್ವಯಂ ಪ್ರೇರಣೆಯಿಂದ ಈ ಆಂದೋಲನದಲ್ಲಿ ಪಾಲ್ಗೊಂಡರು. ಇಲ್ಲಿಯ ಪಂಚಾಯ್ತಿ ಗ್ರಾಮಸ್ಥರೊಂದಿಗೆ ಸೇರಿ ಕೆಲಸ ಮಾಡಲಾರಂಭಿಸಿತು ಮತ್ತು ಇಂದು ಅತ್ಯಂತ ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ಬಂಡವಾಳದಲ್ಲಿ ಈ ನದಿ ಮತ್ತೆ ಪುನರುಜ್ಜೀವನಗೊಂಡಿತು. ಅದೆಷ್ಟೋ ರೈತರಿಗೆ ಇದರ ಲಾಭ ದೊರೆಯುತ್ತಿದೆ. ಯುದ್ಧ ಭೂಮಿಯಿಂದ ಹೊರತಾಗಿರುವ ಶೌರ್ಯದ ಈ ಉದಾಹರಣೆ ನಮ್ಮ ದೇಶಬಾಂಧವರ ಸಂಕಲ್ಪ ಶಕ್ತಿಯನ್ನು ತೋರಿಸುತ್ತದೆ. ಅಲ್ಲದೆ ನಾವು ನಿರ್ಧಾರ ಕೈಗೊಂಡರೆ ಯಾವುದೂ ಅಸಂಭವವಲ್ಲ ಎಂಬುದನ್ನು ತೋರುತ್ತದೆ. ಆದ್ದರಿಂದಲೇ ನಾನು ಸಬ್ ಕಾ ಪ್ರಯಾಸ್ ಎಂದು ಹೇಳುತ್ತೇನೆ.

ನನ್ನ ಪ್ರಿಯ ದೇಶಬಾಂಧವರೆ, ನಾವು ಪ್ರಕೃತಿಯನ್ನು ಸಂರಕ್ಷಿಸಿದರೆ ಪ್ರಕೃತಿಯೂ ನಮಗೆ ಸುರಕ್ಷತೆ ಮತ್ತು ಸಂರಕ್ಷಣೆಯನ್ನು ನೀಡುತ್ತದೆ. ಈ ವಿಷಯವನ್ನು ನಾವು ನಮ್ಮ ಖಾಸಗಿ ಜೀವನದಲ್ಲೂ ಅನುಭವಿಸುತ್ತೇವೆ. ಇಂಥದೇ ಉದಾಹರಣೆಯನ್ನು ತಮಿಳುನಾಡಿನ ಜನತೆ ವ್ಯಾಪಕವಾಗಿ ಪ್ರಸ್ತುತಪಡಿಸಿದ್ದಾರೆ. ತೂತುಕುಡಿ ಜಿಲ್ಲೆಯ ಉದಾಹರಣೆ ಇದಾಗಿದೆ. ದಡದಲ್ಲಿರುವಂತಹ ಪ್ರದೇಶಗಳಲ್ಲಿ ಹಲವು ಬಾರಿ ಭೂಮಿ ಮುಳುಗಿ ಹೋಗುವಂತಹ ಆತಂಕ ಇರುತ್ತದೆ ಎಂಬುದು ನಮಗೆ ತಿಳಿದಿದೆ. ತೂತುಕುಡಿಯಲ್ಲಿ ಕೆಲವು ಪುಟ್ಟ ದ್ವೀಪಗಳು ಸಮುದ್ರದಲ್ಲಿ ಮುಳುಗುವ ಅಪಾಯ ಹೆಚ್ಚುತ್ತಿತ್ತು. ಇಲ್ಲಿಯ ಜನರು ಮತ್ತು ವಿಶೇಷ ತಜ್ಞರು ಈ ಪ್ರಾಕೃತಿಕ ವಿಕೋಪದಿಂದ ಪಾರಾಗುವ ಉಪಾಯವನ್ನು ಪ್ರಕೃತಿಯಿಂದಲೇ ಕಂಡುಕೊಂಡರು. ಈ ಜನರು ಈಗ ಈ ದ್ವೀಪಗಳಲ್ಲಿ ತಾಳೆ ಕೃಷಿ ಕೈಗೊಳ್ಳುತ್ತಿದ್ದಾರೆ. ಈ ಮರಗಳು ಚಂಡಮಾರುತ ಮತ್ತು ಬಿರುಗಾಳಿಯಲ್ಲೂ ಅಚಲವಾಗಿರುತ್ತವೆ ಮತ್ತು ಭೂಮಿಗೆ ಸುರಕ್ಷತೆಯನ್ನು ಒದಗಿಸುತ್ತವೆ. ಇದರಿಂದ ಈ ಪ್ರದೇಶವನ್ನು ರಕ್ಷಿಸುವ ಹೊಸ ಆಶಾಭಾವ ಮೂಡಿದೆ.

ಸ್ನೇಹಿತರೆ, ಪ್ರಕೃತಿಯ ಸಮತೋಲನವನ್ನು ಕೆದಕಿದಾಗ ಅಥವಾ ಅದರ ಪಾವಿತ್ರ್ಯಕ್ಕೆ ಧಕ್ಕೆ ತಂದಾಗ ಮಾತ್ರ ಪ್ರಕೃತಿಯಿಂದ ನಮಗೆ ವಿಪತ್ತು ಬಂದೆರಗುತ್ತದೆ. ಪ್ರಕೃತಿ ತಾಯಿಯಂತೆ ನಮ್ಮನ್ನು ಪೋಷಿಸುತ್ತಾಳೆ ಮತ್ತು ನಮ್ಮ ಜೀವನದಲ್ಲಿ ವಿಭಿನ್ನ ಬಣ್ಣಗಳನ್ನು ತುಂಬುತ್ತಾಳೆ.

ಮೇಘಾಲಯದಲ್ಲಿ ಒಂದು ಹಾರುವ ದೋಣಿಯ ಚಿತ್ರ ವೈರಲ್ ಆಗುತ್ತಿರುವುದನ್ನು ಇದೀಗ ನಾನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದೆ. ಮೊದಲ ನೋಟದಲ್ಲೇ ಈ ಚಿತ್ರ ನಮ್ಮನ್ನು ಆಕರ್ಷಿಸುತ್ತದೆ. ನಿಮ್ಮಲ್ಲಿ ಬಹಳಷ್ಟು ಜನರು ಆನ್ಲೈನ್ ನಲ್ಲಿ ಇದನ್ನು ನೋಡಿರಬಹುದು. ಗಾಳಿಯಲ್ಲಿ ತೇಲುವ ಈ ದೋಣಿಯನ್ನು ಹತ್ತಿರದಿಂದ ನೋಡಿದಾಗ ನಮಗೆ ಇದು ವಾಸ್ತವದಲ್ಲಿ ನದಿ ನೀರಿನ ಮೇಲೆ ತೇಲುತ್ತಿದೆ ಎಂದು ತಿಳಯುತ್ತದೆ. ನದಿಯ ನೀರು ಎಷ್ಟು ಸ್ವಚ್ಛವಾಗಿದೆಯೆಂದರೆ ನಮಗೆ ಅದರ ತಳ ಕಾಣಿಸುತ್ತದೆ ಮತ್ತು ದೋಣಿ ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತದೆ. ನಮ್ಮ ದೇಶದಲ್ಲಿ ಅನೇಕ ರಾಜ್ಯಗಳಿವೆ, ಅನೇಕ ಕ್ಷೇತ್ರಗಳಿವೆ. ಇಲ್ಲಿಯ ಜನರು ತಮ್ಮ ಪ್ರಾಕೃತಿಕ ಪರಂಪರೆಯನ್ನು ಜೀವಂತವಾಗುಳಿಸಿದ್ದಾರೆ. ಈ ಜನರು ಪ್ರಕೃತಿಯೊಂದಿಗೆ ಬೆರೆತು ಬಾಳುವ ಜೀವನಶೈಲಿಯನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಇದು ನಮ್ಮೆಲ್ಲರಿಗೂ ಪ್ರೇರಣಾದಾಯಕವಾಗಿದೆ. ನಮ್ಮ ಸುತ್ತಮುತ್ತ  ಇರುವ ಪ್ರಾಕೃತಿಕ ಸಂಪತ್ತನ್ನು ಉಳಿಸಿ ಬೆಳೆಸೋಣ. ಅವುಗಳಿಗೆ ಮೊದಲಿನ ಸ್ವರೂಪವನ್ನು ನೀಡೋಣ. ಇದರಲ್ಲೇ ನಮ್ಮ ಮತ್ತು ವಿಶ್ವದ ಒಳಿತು ಅಡಗಿದೆ.   

ನನ್ನ ಪ್ರಿಯ ದೇಶಬಾಂಧವರೆ, ಸರ್ಕಾರ ಯೋಜನೆಗಳನ್ನು ರೂಪಿಸುತ್ತದೆ, ಬಜೆಟ್ ನ್ನು ವ್ಯಯಿಸುತ್ತದೆ, ಸಮಯಕ್ಕೆ ಸರಿಯಾಗಿ ಯೋಜನೆಗಳನ್ನು ಪೂರ್ಣಗೊಳಿಸುತ್ತದೆ ಎಂದಾಗ ಜನರಿಗೆ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅನ್ನಿಸುತ್ತದೆ. ಆದರೆ ಸರ್ಕಾರದ ಹಲವಾರು ಕೆಲಸಗಳಲ್ಲಿ ವಿಕಾಸದ ಅನೇಕ ಯೋಜನೆಗಳಲ್ಲಿ ಮಾನವೀಯ ಸಂವೇದನೆಗಳೊಂದಿಗೆ ಬೆರೆತಿರುವಂತಹ ವಿಷಯಗಳು ಎಂದೆಂದಿಗೂ ಒಂದು ವಿಭಿನ್ನ ಸಂತೋಷವನ್ನು ನೀಡುತ್ತದೆ. ಸರ್ಕಾರದ ಪ್ರಯತ್ನ ಮತ್ತು ಯೋಜನೆಗಳಿಂದ ಯಾರ ಜೀವನ ಹೇಗೆ ಬದಲಾಯಿತು ಮತ್ತು ಅವರ ಬದಲಾದ ಜೀವನದ ಅನುಭವ ಹೇಗಿದೆ ಎಂದು ಕೇಳಿದಾಗ ನಾವು ಕೂಡಾ ಭಾವಪರವಶರಾಗುತ್ತೇವೆ. ಇದು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ ಮತ್ತು ಈ ಯೋಜನೆಯನ್ನು ಜನರಿಗೆ ತಲುಪಿಸುವ ಪ್ರೇರಣೆಯನ್ನೂ ನೀಡುತ್ತದೆ. ಒಂದು ರೀತಿಯಲ್ಲಿ ಇದು “ಸ್ವಾಂತಃ ಸುಖಾಯ” ಅಲ್ಲವೇ. ಆದ್ದರಿಂದ ಇಂದು ಮನದ ಮಾತಿನಲ್ಲಿ ನಮ್ಮ ಜೊತೆ ತಮ್ಮ ಧೃಡ ಸಂಕಲ್ಪದಿಂದ ಹೊಸ ಜೀವನವನ್ನು ಜಯಿಸಿರುವಂಥ ಇಬ್ಬರು ಸ್ನೇಹಿತರು ಮಾತನಾಡುತ್ತಿದ್ದಾರೆ. ಇವರು ಆಯುಷ್ಮಾನ್ ಭಾರತ್ ಯೋಜನೆಯ ಸಹಾಯದಿಂದ ಚಿಕಿತ್ಸೆ ಪಡೆದರು ಮತ್ತು ಹೊಸ ಜೀವನವನ್ನು ಆರಂಭಿಸಿದರು. ನಮ್ಮ ಇಂದಿನ ಮೊದಲ ಸ್ನೇಹಿತರು ರಾಜೇಶ್ ಕುಮಾರ್ ಪ್ರಜಾಪತಿ. ಇವರಿಗೆ ಹೃದ್ರೋಗ ಸಮಸ್ಯೆ ಇತ್ತು. ಬನ್ನಿ ರಾಜೇಶ್ ಅವರೊಂದಿಗೆ ಮಾತನಾಡೋಣ.

ಪ್ರಧಾನಿ: ರಾಜೇಶ್ ಅವರೇ ನಮಸ್ಕಾರ

ರಾಜೇಶ್: ನಮಸ್ಕಾರ ಸರ್ ನಮಸ್ಕಾರ…

ಪ್ರಧಾನಿ:  ರಾಜೇಶ್ ಅವರೇ ನಿಮಗೆ ಏನು ಆರೋಗ್ಯ ಸಮಸ್ಯೆಯಿತ್ತು? ನೀವು ವೈದ್ಯರ ಬಳಿ ಹೋಗಿರಬಹುದು. ಸ್ಥಳೀಯ ವೈದ್ಯರ ಬಳಿ ನೀವು ಹೋಗಿರಬಹುದು, ಅವರು ಸಲಹೆಯಂತೆ ಬೇರೆ ವೈದ್ಯರ ಬಳಿ ಹೋಗುವ ನಿರ್ಣಯ ಕೈಗೊಂಡಿರಬಹುದು, ಕೈಗೊಳ್ಳದೇ ಇರಬಹುದು? ಏನೇನಾಯಿತು ಎಂದು ನನಗೆ ತಿಳಿಸುವಿರಾ. 

ರಾಜೇಶ್: ಸರ್ ನನಗೆ ಹೃದಯ ರೋಗ ಬಾಧೆಯಿತ್ತು. ನನಗೆ ಎದೆಯುರಿಯಾಗುತ್ತಿತ್ತು. ನಾನು ವೈದ್ಯರನ್ನು ಸಂಪರ್ಕಿಸಿದೆ. ವೈದ್ಯರು ಬಹುಶಃ ಆಸಿಡಿಟಿ ಇರಬಹುದು ಎಂದರು. ಹಾಗಾಗಿ ಬಹಳಷ್ಟು ದಿನಗಳವರೆಗೆ ಆಸಿಡಿಟಿ ಔಷಧಿಗಳನ್ನು ತೆಗೆದುಕೊಂಡೆ. ಅದರಿಂದ ಯಾವ ಲಾಭವಾಗದಿದ್ದಾಗ ಡಾ.ಕಪೂರ್ ಅವರನ್ನು ಸಂಪರ್ಕಿಸಿದೆ. ಅವರು ನಿಮ್ಮ ಲಕ್ಷಣಗಳನ್ನು ನೋಡಿದರೆ ಆಂಜಿಯೊಗ್ರಾಫಿ ಮಾಡುವುದು ಉತ್ತಮ ಎಂದರು. ಅವರು ನನಗೆ ಶ್ರೀರಾಮ ಮೂರ್ತಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದರು. ನಂತರ ನಾವು ಅಮರೇಶ್ ಅಗರವಾಲ್ ಅವರನ್ನು ಭೇಟಿಯಾದೆವು. ಅವರು ನನ್ನ ಆಂಜಿಯೋಗ್ರಾಫಿ ತೆಗೆದರು. ಅವರು ನನಗೆ ನಿಮ್ಮ ರಕ್ತನಾಳದಲ್ಲಿ ಬ್ಲಾಕ್ ಇದೆ ಎಂದು ಹೇಳಿದರು. ನಾನು ಎಷ್ಟು ಖರ್ಚಾಗುತ್ತದೆ ಎಂದು ಕೇಳಿದೆ. ಅದಕ್ಕೆ ವೈದ್ಯರು ಪ್ರಧಾನಿಯವರು ಮಾಡಿಸಿಕೊಟ್ಟಂತಹ ಆಯುಷ್ಮಾನ್ ಕಾರ್ಡ್ ಇದೆಯೇ ಎಂದು ಕೇಳಿದರು. ನನ್ನ ಬಳಿ ಇದೆ ಎಂದು ನಾನು ಹೇಳಿದೆ. ಅದಕ್ಕೆ ಅವರು ನನ್ನ ಕಾರ್ಡ್ ತೆಗೆದುಕೊಂಡರು. ನನ್ನ ಸಂಪೂರ್ಣ ಚಿಕಿತ್ಸೆ ಅದೇ ಕಾರ್ಡ್ ನಿಂದ ಆಗಿದೆ. ಸರ್ ನೀವು ಮಾಡಿಸಿಕೊಟ್ಟ ಈ ಕಾರ್ಡ್ ಬಡವರಿಗೆ ಬಹಳ ಉಪಯುಕ್ತವಾಗಿದೆ. ಇದರಿಂದ ಸಾಕಷ್ಟು ಅನುಕೂಲವಾಗಿದೆ. ನಾನು ನಿಮಗೆ ಹೇಗೆ ಕೃತಜ್ಞತೆ ಸಲ್ಲಿಸಲಿ…     

ಪ್ರಧಾನಿ: ನೀವು ಏನು ಕೆಲಸ ಮಾಡುತ್ತೀರಿ ರಾಜೇಶ್ ಅವರೇ?

ರಾಜೇಶ್: ಸರ್ ಸದ್ಯಕ್ಕೆ ನಾನು ಪ್ರೈವೇಟ್ ಉದ್ಯೋಗದಲ್ಲಿದ್ದೇನೆ.

ಪ್ರಧಾನಿ: ನಿಮ್ಮ ವಯಸ್ಸೆಷ್ಟು?

ರಾಜೇಶ್: ನನಗೆ 49 ವರ್ಷ ಸರ್..

ಪ್ರಧಾನಿ: ಇಷ್ಟು ಕಡಿಮೆ ವಯಸ್ಸಿನಲ್ಲಿ ನಿಮಗೆ ಹೃದ್ರೋಗ ಖಾಯಿಲೆಯೇ?

ರಾಜೇಶ್: ಹೌದು ಸರ್..ಏನೆಂದು ಹೇಳಲಿ,

ಪ್ರಧಾನಿ: ನಿಮ್ಮ ಕುಟುಂಬದಲ್ಲಿ, ತಾಯಿ, ತಂದೆಯವರಿಗೆ ಇಂಥ ಸಮಸ್ಯೆಯಿತ್ತೇ? ಅಥವಾ ಇದೇ ಮೊದಲ ಬಾರಿಯೇ?

ರಾಜೇಶ್: ಇಲ್ಲ ಸರ್ ಯಾರಿಗೂ ಇರಲಿಲ್ಲ, ಮೊದಲ ಬಾರಿಗೆ ನನಗೆ ಈ ರೋಗ ಕಾಣಿಸಿಕೊಂಡಿದೆ.

ಪ್ರಧಾನಿ: ಆಯುಷ್ಮಾನ್ ಕಾರ್ಡ್ ನ್ನು ಭಾರತ ಸರ್ಕಾರ ನೀಡುತ್ತದೆ. ಬಡವರಿಗಾಗಿ ಇದು ಬಹುದೊಡ್ಡ ಯೋಜನೆಯಾಗಿದೆ. ಇದರ ಬಗ್ಗೆ ನಿಮಗೆ ಹೇಗೆ ತಿಳಿಯಿತು?

ರಾಜೇಶ್: ಇದು ಬಹು ದೊಡ್ಡ ಯೋಜನೆಯಾಗಿದೆ. ಬಡವರಿಗೆ ಇದರಿಂದ ಬಹಳ ಉಪಯೋಗವಾಗುತ್ತಿದೆ. ಬಹಳ ಸಂತೋಷವಾಗಿದೆ ಸರ್. ಈ ಕಾರ್ಡ್ ನಿಂದ ಅದೆಷ್ಟು ಜನರಿಗೆ ಲಾಭವಾಗುತ್ತಿದೆ ಎಂದು ನಾನು ಆಸ್ಪತ್ರೆಯಲ್ಲಿ ನೋಡಿದೆ. ನಾವು ವೈದ್ಯರಿಗೆ ನಮ್ಮ ಬಳಿ ಕಾರ್ಡ್ ಇದೆ ಎಂದು ಹೇಳಿದಾಗ ವೈದ್ಯರು ‘ಆ ಕಾರ್ಡ್ ತೆಗೆದುಕೊಂಡು ಬನ್ನಿ, ನಾನು ಅದರಿಂದಲೇ ನಿಮ್ಮ ಚಿಕಿತ್ಸೆ ಮಾಡುವೆ ಎಂದು ಹೇಳುತ್ತಾರೆ’

ಪ್ರಧಾನಿ: ಹೌದಾ, ಕಾರ್ಡ್ ಇಲ್ಲದಿದ್ದರೆ ನಿಮಗೆ ಎಷ್ಟು ಖರ್ಚಾಗತ್ತಿತ್ತು ಎಂದು ವೈದ್ಯರು ಹೇಳಿದ್ದರೆ?

ರಾಜೇಶ್: ವೈದ್ಯರು, ಕಾರ್ಡ್ ಇಲ್ಲದಿದ್ದರೆ ಬಹಳ ಖರ್ಚಾಗುತ್ತದೆ ಎಂದು ಹೇಳಿದ್ದರು. ಅದಕ್ಕೆ ನಾನು ನನ್ನ ಬಳಿ ಕಾರ್ಡ್ ಇದೆ ಎಂದು ಹೇಳಿದೆ. ಅದಕ್ಕೆ ಅವರು ಕೂಡಲೇ ಕಾರ್ಡ್ ತೋರಿಸುವಂತೆ ಹೇಳಿದರು. ನಾನು ಅದನ್ನು ತೋರಿಸಿದೆ. ಅದೇ ಕಾರ್ಡ್ ಬಳಸಿ ನನ್ನ ಸಂಪೂರ್ಣ ಚಿಕಿತ್ಸೆ ನಡಲಾಯಿತು. ನನ್ನಿಂದ ಒಂದು ಪೈಸೆಯೂ ಖರ್ಚಾಗಲಿಲ್ಲ. ಎಲ್ಲ ಔಷಧಿಗಳನ್ನೂ ಇದೇ ಕಾರ್ಡ್ ನಿಂದ ಪಡೆಯಲಾಯಿತು. 

ಪ್ರಧಾನಿ: ಹಾಗಾದರೆ ರಾಜೇಶ್ ಅವರೆ, ನಿಮ್ಮ ಆರೋಗ್ಯ ಸುಧಾರಿಸಿದೆಯೇ, ಸಂತೋಷವಾಗಿದೆಯೇ?

ರಾಜೇಶ್: ಹೌದು ಸರ್, ತಮಗೆ ಅನಂತ ಧನ್ಯವಾದಗಳು ಸರ್… ನೀವು ಎಂದೆಂದಿಗೂ ಅಧಿಕಾರದಲ್ಲಿ ಮುಂದುವರಿಯುವಂತೆ ನಿಮಗೆ ದೀರ್ಘಾಯಸ್ಸು ಇರಲಿ. ನಿಮ್ಮಿಂದ ನಮ್ಮ ಕುಟುಂಬ ಕೂಡ ಬಹಳ ಸಂತೋಷಗೊಂಡಿದೆ. 

ಪ್ರಧಾನಿ: ರಾಜೇಶ್ ಅವರೇ ಅಧಿಕಾರದಲ್ಲಿರುವ ಶುಭಾಷಯಗಳನ್ನು ನೀಡಬೇಡಿ. ಇಂದು ಕೂಡಾ ನಾನು ಅಧಿಕಾರದಲ್ಲಿಲ್ಲ ಮುಂದೆ ಕೂಡಾ ಅಧಿಕಾರದಲ್ಲಿರಲು ಬಯಸುವುದಿಲ್ಲ. ನಾನು ಕೇವಲ ಸೇವೆ ಮಾಡಬಯಸುತ್ತೇನೆ. ನನಗೆ ಈ ಪ್ರಧಾನಿ ಪಟ್ಟ, ಈ ಪದವಿ ಇದೆಲ್ಲ ಅಧಿಕಾರ ಚಲಾಯಿಸಲು ಅಲ್ಲ ಸೇವೆಗಾಗಿದೆ.  

ರಾಜೇಶ್: ನಮಗೆ ಸೇವೆಯೇ ಬೇಕಲ್ಲವೇ…ಮತ್ತಿನ್ನೇನು 

ಪ್ರಧಾನಿ: ನೋಡಿ ಬಡವರಿಗಾಗಿ ಈ ಆಯುಷ್ಮಾನ್ ಭಾರತ ಯೋಜನೆ ತನ್ನಲ್ಲಿಯೇ…

ರಾಜೇಶ್: ತುಂಬಾ ಅದ್ಭುತ ಕೊಡುಗೆ ಸರ್…

ಪ್ರಧಾನಿ: ಆದರೆ ರಾಜೇಶ್ ಅವರೆ ನಮಗಾಗಿ ಒಂದು ಕೆಲಸ ಮಾಡುವಿರಾ?

ರಾಜೇಶ್: ಖಂಡಿತ ಮಾಡುತ್ತೇನೆ ಸರ್

ಪ್ರಧಾನಿ: ಜನರಿಗೆ ಇದರ ಅರಿವಿರುವುದಿಲ್ಲ, ನಿಮ್ಮ ಸುತ್ತಮುತ್ತ ಇಂಥ ಅದೆಷ್ಟು ಬಡ ಕುಟುಂಬಗಳಿವೆಯೋ ಅವರಿಗೆ ನಿಮಗೆ ಇದರಿಂದ ಏನೆಲ್ಲ ಲಾಭವಾಯಿತು, ಹೇಗೆ ನೆರವು ದೊರೆಯಿತು ಎಂಬುದನ್ನು ಜವಾಬ್ದಾರಿಯುತವಾಗಿ ತಿಳಿಸಿ ಹೇಳುವಿರಾ? 

ರಾಜೇಶ್: ಖಂಡಿತ ಹೇಳುತ್ತೇನೆ ಸರ್

ಪ್ರಧಾನಿ: ಅವರು ಕೂಡ ಇಂಥ ಕಾರ್ಡ್ ಮಾಡಿಸಿಕೊಳ್ಳಲಿ ಎಂದು ಅವರಿಗೆ ತಿಳಿಸಿ ಏಕೆಂದರೆ ಕುಟುಂಬದಲ್ಲಿ ಯಾವಾಗ ಎಂಥ ಸಂಕಷ್ಟ ಬಂದೊದಗುವುದೋ ಯಾರಿಗೆ ಗೊತ್ತು? ಇಂದು ಬಡವರು ಔಷಧಿಗಾಗಿ ಪರದಾಡುವುದು ಸೂಕ್ತವಲ್ಲ. ಈಗ ಹಣದ ಅಡಚಣೆಯಿಂದ ಬಡವರು ಔಷಧಿ ತೆಗೆದುಕೊಳ್ಳಲಾಗದಿರುವುದು ಅಥವಾ ಚಿಕಿತ್ಸೆ ಪಡೆಯಲಾಗದಿರುವುದು ಕೂಡಾ ಬಹಳ ಚಿಂತಾಜನಕ ವಿಷಯವಾಗಿದೆ. ಬಡವರಿಗೆ ಎಂಥ ಸಮಸ್ಯೆಯೆಂದರೆ!  ನಿಮಗೆ ಈ ಹೃದ್ರೋಗ ಸಮಸ್ಯೆ ಆದಾಗ ಅದೆಷ್ಟೋ ತಿಂಗಳು ನೀವು ಕೆಲಸ ಮಾಡಲಾಗಿರಲಿಕ್ಕಿಲ್ಲ.

ರಾಜೇಶ್: ನಾನು 10 ಅಡಿ ನಡೆಯಲಾಗುತ್ತಿರಲಿಲ್ಲ. ಮೆಟ್ಟಿಲುಗಳನ್ನು ಏರಲಾಗುತ್ತಿರಲಿಲ್ಲ

ಪ್ರಧಾನಿ: ಹಾಗಾದರೆ, ರಾಜೇಶ್ ಅವರೇ ನನ್ನ ಉತ್ತಮ ಸ್ನೇಹಿತನಂತೆ ನೀವು ಎಷ್ಟು ಬಡ ಜನರಿಗೆ ಆಯುಷ್ಮಾನ್ ಭಾರತ್ ಬಗ್ಗೆ ಮಾಹಿತಿ ತಲುಪಿಸುತ್ತೀರಿ, ಅನಾರೋಗ್ಯವಂತರಿಗೆ ಸಹಾಯ ಮಾಡಬಲ್ಲಿರಿ ಎಂದು ಆಲೋಚಿಸಿ. ಇದರಿಂದ ನಿಮಗೂ ಸಂತೋಷವಾಗುತ್ತದೆ ನನಗೂ ಆನಂದವಾಗುತ್ತದೆ. ರಾಜೇಶ್ ಅವರ ಆರೋಗ್ಯವಂತೂ ಸುಧಾರಿಸಿತು ಅಂತೆಯೇ ರಾಜೇಶ್ ಅವರು ನೂರಾರು ಜನರ ಆರೋಗ್ಯವನ್ನೂ ಸುಧಾರಿಸುವಂತೆ ಮಾಡಿದರು ಎಂದು ನನಗನ್ನಿಸುತ್ತದೆ. ಈ ಆಯುಷ್ಮಾನ್ ಭಾರತ್ ಯೋಜನೆ ಬಡವರಿಗಾಗಿಯೇ ಇದೆ. ಮಧ್ಯಮವರ್ಗದವರಿಗಾಗಿದೆ. ಸಾಮಾನ್ಯ ಕುಟುಂಬಗಳಿಗಾಗಿಯೇ ಇದೆ. ನೀವು ಮನೆಮನೆಗೂ ಈ ವಿಷಯವನ್ನು ತಲುಪಿಸುವಿರಾ?   

ರಾಜೇಶ್: ಖಂಡಿತ ತಲುಪಿಸುವೆ ಸರ್. ನಾನು ಮೂರು ದಿನ ಆಸ್ಪತ್ರೆಯಲ್ಲಿಯೇ ಇದ್ದಾಗ ಬಹಳ ಜನರು ಭೇಟಿಗೆ ಬಂದಿದ್ದರು. ಅವರೆಲ್ಲರಿಗೇ ಕಾರ್ಡ್ ಇದ್ದರೆ ಚಿಕಿತ್ಸೆ ಉಚಿತ ಎಂದು ತಿಳಿಸಿದೆ. ಕಾರ್ಡ್ ನ ಪ್ರಯೋಜನಗಳನ್ನು ಅವರಿಗೆ ತಿಳಿಸಿದೆ.

ಪ್ರಧಾನಿ: ಒಳ್ಳೆಯದು ರಾಜೇಶ್ ಅವರೇ ಆರೋಗ್ಯವನ್ನು ಕಾಪಾಡಿಕೊಳ್ಳಿ. ದೈಹಿಕವಾಗಿ ಸದೃಡರಾಗಿರಿ. ಮಕ್ಕಳ ಬಗ್ಗೆ ಯೋಚಿಸಿ. ಬಹಳಷ್ಟು ಪ್ರಗತಿಯನ್ನು ಸಾಧಿಸಿ. ನಿಮಗೆ ಅನಂತ ಶುಭ ಹಾರೈಕೆಗಳು

ಜತೆಗಾರರೇ, ನಾವು ರಾಜೇಶ್ ಅವರ ಮಾತುಗಳನ್ನು ಆಲಿಸಿದೆವು. ಬನ್ನಿ, ನಮ್ಮೊಂದಿಗೆ ಸುಖದೇವಿ ಅವರು ಸೇರಿಕೊಂಡಿದ್ದಾರೆ. ಮಂಡಿಗಳ ತೊಂದರೆ ಅವರನ್ನು ಅತೀವ ದುಃಖಿತರನ್ನಾಗಿ ಮಾಡಿತ್ತು. ಬನ್ನಿ, ನಾವು ಸುಖ ದೇವಿ ಅವರೊಂದಿಗೆ ಮಾತನಾಡೋಣ, ಮೊದಲು ಅವರು ಅನುಭವಿಸಿದ ದುಃಖದ ಬಗ್ಗೆ ಕೇಳೋಣ, ಬಳಿಕ ಸುಖ ಹೇಗೆ ಬಂತು ಎನ್ನುವುದನ್ನು ಅರ್ಥೈಸಿಕೊಳ್ಳೋಣ.

ಮೋದಿ: ಸುಖದೇವಿ ಜೀ, ನಮಸ್ತೆ. ತಾವು ಎಲ್ಲಿಂದ ಮಾತನಾಡುತ್ತಿರುವಿರಿ?

ಸುಖದೇವಿ: ದಾನ್ ದಪರಾದಿಂದ

ಮೋದಿ: ಎಲ್ಲಿ..ಎಲ್ಲಿ ಬರುತ್ತದೆ ಇದು?

ಸುಖದೇವಿ: ಮಥುರಾದಲ್ಲಿ.

ಮೋದಿ: ಮಥುರಾದಲ್ಲಿ, ಹಾಗಿದ್ದರೆ ಸುಖದೇವಿ ಅವರೇ, ತಮಗೆ ನಮಸ್ತೆಯನ್ನೂ ಹೇಳಬೇಕು, ಹಾಗೂ ಅದರೊಂದಿಗೆ ರಾಧೇ ರಾಧೇ ಯನ್ನೂ ಸಹ ಹೇಳಬೇಕಾಗುತ್ತದೆ.

ಸುಖದೇವಿ: ಹಾಂ, ರಾಧೇ ರಾಧೇ.

ಮೋದಿ: ಒಳ್ಳೆಯದು, ನಿಮಗೆ ಸಮಸ್ಯೆಯಾಗಿತ್ತೆಂದು ನಾವು ಕೇಳಿದ್ದೇವೆ, ತಮಗೆ ಯಾವುದೋ ಶಸ್ತ್ರಚಿಕಿತ್ಸೆ ಆಗಿದೆ. ಅದೇನು ವಿಚಾರವೆಂದು ಸ್ವಲ್ಪ ಹೇಳುತ್ತೀರಾ?

ಸುಖದೇವಿ: ಹೌದು, ನನ್ನ ಮಂಡಿಗಳು ಸವೆಯಲ್ಪಟ್ಟಿದ್ದವು. ಅವುಗಳಿಗೆ ಶಸ್ತ್ರಕ್ರಿಯೆ ಮಾಡಿಸಬೇಕಾಯಿತು. ಪ್ರಯಾಗ್ ಆಸ್ಪತ್ರೆಯಲ್ಲಿ ಮಾಡಿಸಿದೆವು.

ಮೋದಿ: ತಮಗೆ ಈಗ ಎಷ್ಟು ವರ್ಷ ಸುಖದೇವಿಯವರೇ?

ಸುಖದೇವಿ: ನನ್ನ ವಯಸ್ಸು 40 ವರ್ಷ.

ಮೋದಿ: 40 ವರ್ಷ ಹಾಗೂ ಸುಖದೇವ ಹೆಸರು. ಮತ್ತು ಸುಖದೇವಿಗೆ ಅನಾರೋಗ್ಯ ಉಂಟಾಯಿತು.

ಸುಖದೇವಿ: ರೋಗವು ನನಗೆ 15-16 ವರ್ಷಗಳಿಂದಲೂ ತಗುಲಿತ್ತು.

ಮೋದಿ: ಅರೇ, ಇಷ್ಟು ಕಡಿಮೆ ವಯಸ್ಸಿನಲ್ಲಿ ತಮ್ಮ ಮಂಡಿಗಳು ಸವೆಲ್ಪಟ್ಟಿದ್ದವು ಎನ್ನುವುದು ಆಶ್ಚರ್ಯ.

ಸುಖದೇವಿ: ಮಂಡಿಗಳ ಉರಿಯೂತ ಎನ್ನುತ್ತಾರಲ್ಲ, ಅದು ಕೀಲುಗಳ ನೋವಿನಿಂದ ಮಂಡಿಗಳು ಹಾಳಾದವು.

ಮೋದಿ: ಹಾಗಿದ್ದರೆ 16 ವರ್ಷಗಳಿಂದ 40 ವರ್ಷದ ವಯಸ್ಸಿನವರೆಗೂ ತಾವು ಇದಕ್ಕೆ ಚಿಕಿತ್ಸೆ ಮಾಡಿಸಿಕೊಳ್ಳಲಿಲ್ಲ.

ಸುಖದೇವಿ: ಇಲ್ಲ, ಮಾಡಿಸಿಕೊಂಡಿರಲಿಲ್ಲ. ನೋವಿನ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದೆ. ಸಣ್ಣಪುಟ್ಟ ವೈದ್ಯರು ದೇಶಿ ಔಷಧ ನೀಡಿದರು. ಆ ಔಷಧವೇ ಅಂಥದ್ದು. ನಾಟಿ ವೈದ್ಯರು ಎಂತಹ ಔಷಧ ನೀಡಿದರೆಂದರೆ, ಅದರಿಂದ ನಡೆಯುವಷ್ಟು ಸಾಧ್ಯವಾಯಿತು ಹಾಗೂ ಮಂಡಿಗಳ ನೋವು ಇದ್ದೇ ಇತ್ತು. 1-2 ಕಿಲೋಮಿಟರ್ ನಡೆಯುವಷ್ಟರಲ್ಲಿ ನನಗೆ ಮಂಡಿಗಳಲ್ಲಿ ತೀವ್ರ ನೋವು ಉಂಟಾಗುತ್ತಿತ್ತು.

ಮೋದಿ: ಹಾಗಾದರೆ, ಸುಖದೇವಿ ಅವರೇ ಶಸ್ತ್ರಕ್ರಿಯೆ ಮಾಡಿಸಿಕೊಳ್ಳುವ ವಿಚಾರ ತಮಗೆ ಹೇಗೆ ಬಂತು? ಅದಕ್ಕಾಗಿ ಹಣದ ನಿರ್ವಹಣೆಯನ್ನು ಹೇಗೆ ಮಾಡಿದಿರಿ? ಹೇಗೆ ಎಲ್ಲವನ್ನೂ ನಿಭಾಯಿಸಿದಿರಿ?

ಸುಖದೇವಿ: ನಾನು ಆ ಆಯುಷ್ಮಾನ್ ಕಾರ್ಡ್ ನಿಂದ ಚಿಕಿತ್ಸೆ ಪಡೆದುಕೊಂಡೆ.

ಮೋದಿ:  ಅಂದರೆ, ತಮಗೆ ಆಯುಷ್ಮಾನ್ ಕಾರ್ಡ್ ದೊರೆತಿತ್ತೇ?

ಸುಖದೇವಿ: ಹೌದು.

ಮೋದಿ: ಹಾಗೂ ಆಯುಷ್ಮಾನ್ ಕಾರ್ಡ್ ನಿಂದ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇದು ತಮಗೆ ತಿಳಿದಿತ್ತೇ?

ಸುಖದೇವಿ: ಶಾಲೆಯಲ್ಲಿ ಸಭೆ ನಡೆಯುತ್ತಿತ್ತು. ಅಲ್ಲಿ ನನ್ನ ಪತಿಯ ತಂದೆ ಹೋಗಿ ನನ್ನ ಹೆಸರಿನಲ್ಲೂ ಕಾರ್ಡ್ ಮಾಡಿಸಿದರು.

ಮೋದಿ: ಓಹೊ.

ಸುಖದೇವಿ: ಬಳಿಕ, ಕಾರ್ಡ್ ಮೂಲಕ ಚಿಕಿತ್ಸೆ ಮಾಡಿಸಿದೆವು. ಹಾಗೂ ನಾನು ಯಾವುದೇ ಹಣ ನೀಡಲಿಲ್ಲ. ಕಾರ್ಡ್ ನಿಂದಲೇ ನನ್ನ ಚಿಕಿತ್ಸೆ ಸಾಧ್ಯವಾಯಿತು. ತುಂಬ ಉತ್ತಮವಾದ ಚಿಕಿತ್ಸೆ ದೊರೆಯಿತು.

ಮೋದಿ: ಉತ್ತಮ. ವೈದ್ಯರು ಮೊದಲು ಕಾರ್ಡ್ ಇಲ್ಲವೆಂದಾದರೆ ಚಿಕಿತ್ಸೆಗೆ ಎಷ್ಟು ವೆಚ್ಚವಾಗುವುದಾಗಿ ಹೇಳಿದ್ದರು?

ಸುಖದೇವಿ: ಎರಡೂವರೆ ಲಕ್ಷ ರೂಪಾಯಿ-3 ಲಕ್ಷ ರೂಪಾಯಿ. 6-7 ವರ್ಷಗಳಿಂದ ಮಂಚದ ಮೇಲೆ ಮಲಗಿಯೇ ಜೀವನ ಕಳೆದೆ. “ಹೇ, ದೇವರೆ ನನ್ನನ್ನು ಕರೆಸಿಕೊ. ನನಗೆ ಈ ಜೀವನ ಬೇಡ’ವೆಂದು ಹೇಳುತ್ತಿದ್ದೆ. 

ಮೋದಿ; 6-7 ವರ್ಷಗಳಿಂದ ಹಾಸಿಗೆ ಮೇಲೆಯೇ ಜೀವನ ಕಳೆದಿರಾ? ಅಬ್ಬಬ್ಬಾ.

ಸುಖದೇವಿ: ಹಾಂ

ಮೋದಿ: ಓಹೊ.

ಸುಖದೇವಿ: ಬಿಲ್ಕುಲ್ ಏಳಲು, ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಮೋದಿ: ಅಂದರೆ ಈಗ ತಮ್ಮ ಮಂಡಿಗಳು ಮೊದಲಿನಂತೆ ಚೆನ್ನಾಗಿವೆಯೇ?

ಸುಖದೇವಿ: ನಾನು ಈಗ ಚೆನ್ನಾಗಿ ಓಡಾಡುತ್ತೇನೆ. ಅಡ್ಡಾಡುತ್ತೇನೆ. ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತೇನೆ. ಮನೆಯ ಕೆಲಸ ನಿಭಾಯಿಸುತ್ತೇನೆ. ಮಕ್ಕಳಿಗೆ ಅಡುಗೆ ಮಾಡಿ ಬಡಿಸುತ್ತೇನೆ.

ಮೋದಿ: ಇದರರ್ಥ ಆಯುಷ್ಮಾನ್ ಭಾರತ್ ಕಾರ್ಡ್ ತಮ್ಮನ್ನು ನಿಜವಾಗಿಯೂ ಆಯುಷ್ಯವಂತರನ್ನಾಗಿ ಮಾಡಿತು.

ಸುಖದೇವಿ: ತಮ್ಮ ಈ ಯೋಜನೆಯಿಂದ ನಾನು ಆರೋಗ್ಯವಂತಳಾದೆ. ನನ್ನ ಕಾಲಿನ ಮೇಲೆ ನಾನು ನಿಂತುಕೊಳ್ಳುವಂತಾದೆ, ಇದಕ್ಕಾಗಿ ತುಂಬ ತುಂಬ ಧನ್ಯವಾದಗಳು.

ಮೋದಿ: ಈಗ ಮಕ್ಕಳಿಗೂ ಅತ್ಯಂತ ಸಂತಸವಾಗಿರಬೇಕು.

ಸುಖದೇವಿ. ಹೌದು. ಹಿಂದೆ ಮಕ್ಕಳಿಗೆ ಅತೀವ ಚಿಂತೆಯಾಗಿತ್ತು. ಅಮ್ಮನಿಗೆ ಚಿಂತೆಯಾದರೆ, ಮಕ್ಕಳಿಗೂ ಚಿಂತೆಯಾಗುತ್ತದೆ.

ಮೋದಿ: ನೋಡಿ, ನಮ್ಮ ಜೀವನದಲ್ಲಿ ಅತ್ಯಂತ ದೊಡ್ಡ ಸುಖವೆಂದರೆ, ನಮ್ಮ ಆರೋಗ್ಯವೇ ಆಗಿರುತ್ತದೆ.ಆರೋಗ್ಯಪೂರ್ಣ ಸುಖವಾದ ಜೀವನ ಎಲ್ಲರಿಗೂ ಸಿಗಬೇಕು. ಇದೇ ಆಯುಷ್ಮಾನ್ ಭಾರತ ಯೋಜನೆಯ ಉದ್ದೇಶವಾಗಿದೆ. ಸರಿ, ಸುಖದೇವಿ ಅವರೇ, ತಮಗೆ ತುಂಬ ಶುಭಕಾಮನೆಗಳು. ಮತ್ತೊಮ್ಮೆ ಮತ್ತೊಂದು ಬಾರಿ ತಮಗೆ ರಾಧೇ, ರಾಧೇ.

ಸುಖದೇವಿ: ರಾಧೇ ರಾಧೇ. ನಮಸ್ತೆ.

ನನ್ನ ಪ್ರೀತಿಯ ದೇಶವಾಸಿಗಳೇ. ಯುವಕರಿಂದ ಸಮೃದ್ಧವಾಗಿರುವ ಪ್ರತಿ ದೇಶದಲ್ಲೂ ಮೂರು ಅಂಶಗಳು ಅತ್ಯಂತ ಮೌಲಿಕವಾದದ್ದಾಗಿರುತ್ತವೆ. ಈಗ ಅವುಗಳೇ ಕೆಲವು ಬಾರಿ ಯುವಕರ ನಿಜವಾದ ಗುರುತಾಗಿಬಿಡುತ್ತಿವೆ. ಮೊದಲನೆಯ ಅಂಶವೆಂದರೆ, ಚಿಂತನೆಗಳು ಅಥವಾ ಆವಿಷ್ಕಾರ. ಎರಡನೆಯದ್ದೆಂದರೆ, ಅಪಾಯವನ್ನು ಎದುರಿಸುವ ಎದೆಗಾರಿಕೆ ಮತ್ತು ಮೂರನೆಯದ್ದು ಎಲ್ಲವನ್ನೂ ಮಾಡುತ್ತೇನೆ ಎನ್ನುವ ಸ್ಥೈರ್ಯ, ಅಂದರೆ, ಯಾವುದೇ ಕೆಲಸವನ್ನು ಪೂರ್ಣಗೊಳಿಸುವ ಬದ್ಧತೆ. ಪರಿಸ್ಥಿತಿಗಳು ಎಷ್ಟೇ ವಿಪರೀತಕ್ಕೆ ಹೋದರೂ, ಒಂದೊಮ್ಮೆ ಈ ಮೂರೂ ಅಂಶಗಳು ಒಂದಕ್ಕೊಂದು ಸೇರಿಕೊಂಡರೆ ಅಭೂತಪೂರ್ವವಾದ ಪರಿಣಾಮ ದೊರೆಯುತ್ತದೆ. ಚಮತ್ಕಾರವೇ ಆಗಿಬಿಡುತ್ತದೆ. ಇಂದಿನ ದಿನಗಳಲ್ಲಿ ನಾವು ನಾಲ್ಕೂ ಕಡೆಗಳಿಂದ ನವೋದ್ಯಮ, ನವೋದ್ಯಮ, ನವೋದ್ಯಮಗಳೆಂದು ಕೇಳುತ್ತಲೇ ಇದ್ದೇವೆ. ನಿಜವಾದ ಮಾತು ಏನೆಂದರೆ, ಇದು ನವೋದ್ಯಮಗಳ ಯುಗವಾಗಿದೆ. ಹಾಗೂ ಈ ನವೋದ್ಯಮದ ಯುಗದಲ್ಲಿ ಭಾರತ ವಿಶ್ವದಲ್ಲಿ ಒಂದು ರೀತಿಯಲ್ಲಿ ನೇತೃತ್ವ ವಹಿಸುತ್ತಿದೆ ಎನ್ನುವುದೂ ನಿಜವಾದ ಸಂಗತಿಯಾಗಿದೆ. ವರ್ಷದಿಂದ ವರ್ಷಕ್ಕೆ ನವೋದ್ಯಮಗಳಿಗೆ ದಾಖಲೆ ಮಟ್ಟದಲ್ಲಿ ಹೂಡಿಕೆಯಾಗುತ್ತಿದೆ. ಈ ಕ್ಷೇತ್ರವು ಅತ್ಯಂತ ವೇಗವಾಗಿ ಮುಂದೆ ಸಾಗುತ್ತಿದೆ. ದೇಶದ ಚಿಕ್ಕಪುಟ್ಟ ನಗರಗಳನ್ನೂ ನವೋದ್ಯಮಗಳು ತಲುಪುತ್ತಿವೆ. ಇಂದಿನ ದಿನಗಳಲ್ಲಿ ಯೂನಿಕಾರ್ನ್ ಶಬ್ದವು ಅತ್ಯಂತ ಚರ್ಚೆಯಲ್ಲಿದೆ. ತಾವೆಲ್ಲರೂ ಇದರ ಕುರಿತು ಕೇಳಿರಬಹುದು. ಯೂನಿಕಾರ್ನ್ ನವೋದ್ಯಮವೆಂದರೆ, ಇದರ ಮೌಲ್ಯ ಕಡಿಮೆಯೆಂದರೂ ಒಂದು ಬಿಲಿಯುನ್ ಡಾಲರ್ ಆಗಿದೆ. ಅಂದರೆ, ಹತ್ತಿರ ಹತ್ತಿರ ಏಳು ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯವನ್ನು ಇಂತಹ ನವೋದ್ಯಮಗಳು ಹೊಂದಿರುತ್ತವೆ.

ಸ್ನೇಹಿತರೇ, 2015ನೇ ವರ್ಷದವರೆಗೆ ದೇಶದಲ್ಲಿ ಅಷ್ಟೇನೂ ಅಂದರೆ ಕೇವಲ 9ರಿಂದ 10 ಯೂನಿಕಾರ್ನ್ ನವೋದ್ಯಮಗಳು ಕಾರ್ಯ ನಿಭಾಯಿಸುತ್ತಿದ್ದವು. ಆದರೆ, ಈಗ ವಿಶ್ವದಲ್ಲಿಯೇ ಭಾರತವು ಯೂನಿಕಾರ್ನ್ ನವೋದ್ಯಮಗಳಲ್ಲೂ ಕೀರ್ತಿ ಪತಾಕೆಯನ್ನು ಹಾರಿಸುತ್ತಿದೆ ಎನ್ನುವುದನ್ನು ಕೇಳಿದರೆ ತಮಗೆ ಸಂತಸವಾಗಬಹುದು. ಒಂದು ವರದಿಯ ಪ್ರಕಾರ, ಇದೇ ವರ್ಷ ಒಂದು ದೊಡ್ಡ ಬದಲಾವಣೆ ಉಂಟಾಗಿದೆ. ಕೇವಲ 10 ತಿಂಗಳಲ್ಲಿ ಭಾರತದಲ್ಲಿ ಪ್ರತಿ 10 ದಿನಗಳಿಗೆ ಒಂದರಂತೆ ಯೂನಿಕಾರ್ನ್ ನವೋದ್ಯಮ ಸೃಷ್ಟಿಯಾಗಿದೆ. ನಮ್ಮ ಯುವಜನತೆ ಕೊರೋನಾ ಮಹಾಮಾರಿಯ ಮಧ್ಯದಲ್ಲಿ ಈ ಯಶಸ್ಸನ್ನು ಗಳಿಸಿದ್ದಾರೆ ಎನ್ನುವುದರಿಂದಲೂ ಈ ಸಂಗತಿ ಅತ್ಯಂತ ಪ್ರಮುಖ ವಿಚಾರವಾಗುತ್ತದೆ. ಇಂದು ಭಾರತದಲ್ಲಿ 70ಕ್ಕೂ ಅಧಿಕ ಯೂನಿಕಾರ್ನ್ ನವೋದ್ಯಮಗಳಿವೆ. ಅಂದರೆ, 70ಕ್ಕೂ ಅಧಿಕ ನವೋದ್ಯಮಗಳು 1 ಬಿಲಿಯನ್ ಡಾಲರ್ ಗೂ ಅಧಿಕ ಮೌಲ್ಯವನ್ನು ಹೊಂದಿವೆ. ಸ್ನೇಹಿತರೇ, ನವೋದ್ಯಮಗಳ ಯಶಸ್ಸಿನ ಕಾರಣದಿಂದ ಪ್ರತಿಯೊಬ್ಬರ ಗಮನವೂ ಅತ್ತ ಹೋಗಿದೆ, ಹಾಗೂ ಎಷ್ಟು ಚೆನ್ನಾಗಿ ದೇಶದಿಂದ, ವಿದೇಶದಿಂದ, ಹೂಡಿಕೆದಾರರಿಂದ ಅದಕ್ಕೆ ಬೆಂಬಲ ಸಿಗುತ್ತಿದೆ ಎಂದರೆ,ಬಹುಶಃ ಕೆಲವು ವರ್ಷಗಳ ಮುನ್ನ ಯಾರೂ ಈ ಕುರಿತು ಕಲ್ಪನೆ ಮಾಡಲೂ ಸಾಧ್ಯವಾಗುತ್ತಿರಲಿಲ್ಲ.

ಸ್ನೇಹಿತರೇ, ನವೋದ್ಯಮಗಳ ಮೂಲಕ ಭಾರತೀಯ ಯುವಜನರು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿಯೂ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಇಂದು ನಾವು ಅಂಥ ಒಬ್ಬ ಯುವಕ ಮಯೂರ್ ಪಾಟೀಲ್ ಅವರೊಂದಿಗೆ ಮಾತನಾಡೋಣ. ಅವರು ತಮ್ಮ ಸ್ನೇಹಿತರೊಂದಿಗೆ ಸೇರಿ ಮಾಲಿನ್ಯದ ಸಮಸ್ಯೆಗೆ ಪರಿಹಾರ ನೀಡಲು ಪ್ರಯತ್ನ ನಡೆಸುತ್ತಿದ್ದಾರೆ.

ಮೋದಿ ಜೀ: ಮಯೂರ್ ಜೀ, ನಮಸ್ತೆ.

ಮಯೂರ್ ಪಾಟೀಲ್: ನಮಸ್ತೆ ಸರ್

ಮೋದಿ: ಮಯೂರ್, ತಾವು ಹೇಗಿದ್ದೀರಿ?

ಮಯೂರ್: ಉತ್ತಮ ಸರ್. ತಾವು ಹೇಗಿದ್ದೀರಿ?

ಮೋದಿ: ನಾನು ತುಂಬ ಖುಷಿಯಾಗಿದ್ದೇನೆ. ಒಳ್ಳೆಯದು, ನನಗೆ ಹೇಳಿ, ಇಂದು ನೀವು ನವೋದ್ಯಮಗಳ ಜಗದಲ್ಲಿದ್ದೀರಿ.

ಮಯೂರ್: ಹಾ, ಸರ್.

ಮೋದಿ: ಹಾಗೂ ತ್ಯಾಜ್ಯವಾಗಿ ಹೋಗುವುದರಿಂದ ಉತ್ತಮವಾದದ್ದನ್ನು ನಿರ್ಮಿಸುತ್ತಿದ್ದೀರಿ.

ಮಯೂರ್; ಹಾ ಸರ್.

ಮೋದಿ: ಪರಿಸರಕ್ಕಾಗಿಯೂ ಇದನ್ನು ನೀವು ಮಾಡುತ್ತಿರುವಿರಿ. ನನಗೂ ಸ್ವಲ್ಪ ನಿಮ್ಮ ಕುರಿತಾಗಿ ಹೇಳಿ. ತಮ್ಮ ಕೆಲಸದ ಕುರಿತು ತಿಳಿಸಿ. ಹಾಗೂ ಈ ಕಾರ್ಯವನ್ನು ಆರಂಭಿಸಬೇಕೆಂಬ ವಿಚಾರ ನಿಮಗೆ ಹೇಗೆ ಮೂಡಿತು?

ಮಯೂರ್: ಸರ್, ನಾನು ಕಾಲೇಜಿನಲ್ಲಿರುವ ಸಮಯದಲ್ಲೇ ನನ್ನ ಬಳಿ ಮೋಟಾರ್ ಸೈಕಲ್ ಇತ್ತು. ಅದರ ಮೈಲೇಜ್ ಅತಿ ಕಡಿಮೆ ಇತ್ತು ಹಾಗೂ ಅದರಿಂದ ಉತ್ಸರ್ಜನೆ ಪ್ರಮಾಣ ಅತ್ಯಂತ ಅಧಿಕವಾಗಿತ್ತು. ಅದು ಎರಡು ಸ್ಟ್ರೋಕ್ ಗಳ ಮೋಟಾರ್ ಸೈಕಲ್ ಆಗಿತ್ತು. ಹೀಗಾಗಿ, ಉತ್ಸರ್ಜನೆ ಕಡಿಮೆ ಮಾಡಲು ಹಾಗೂ ಅದರ ಮೈಲೇಜ್ ಅನ್ನು ಸ್ವಲ್ಪ ಹೆಚ್ಚಿಸಲು ನಾನು ಪ್ರಯತ್ನ ಆರಂಭಿಸಿದ್ದೆ. 2011-12ರ ಸಮಯದಲ್ಲಿ ನಾನು ಲೀಟರ್ ಗೆ ಸರಿಸುಮಾರು 62 ಕಿಲೋಮೀಟರ್ ವರೆಗೆ ಮೋಟಾರ್ ಸೈಕಲ್ಲಿನ ಮೈಲೇಜ್ ಅನ್ನು ಹೆಚ್ಚಿಸಿದ್ದೆ. ಆ ಹಂತದಲ್ಲಿ ನನಗೆ, ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಮಾಡುವಂತಹ ಅಂಶವನ್ನು ನಿರ್ಮಾಣ ಮಾಡಬೇಕೆಂದು ಪ್ರೇರಣೆ ದೊರಕಿತು. ಅದರಿಂದ ಬಹಳಷ್ಟು ಜನರಿಗೆ ಪ್ರಯೋಜನವಾಗುತ್ತದೆ ಎಂದು ಅನ್ನಿಸಿತು. ಹೀಗಾಗಿ, 2017-18ರಲ್ಲಿ ನಾವು ಈ ಕುರಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆವು. ಹಾಗೂ ವಲಯ ಸಾರಿಗೆ ಸಂಸ್ಥೆಗಳೊಂದಿಗೆ ಸೇರಿಕೊಂಡು 10 ಬಸ್ ಗಳಿಗೆ ಅದನ್ನು ಅಳವಡಿಸಿದೆವು. ಅದರ ಫಲಿತಾಂಶ ಪರೀಕ್ಷಿಸಿದಾಗ, ಹತ್ತಿರ ಹತ್ತಿರ ನಾವು ಆ ಬಸ್ಸುಗಳ ಶೇಕಡ 40ರಷ್ಟು ಉತ್ಸರ್ಜನೆಯನ್ನು ಕಡಿಮೆ ಮಾಡಿದ್ದೆವು ಎನ್ನುವುದು ತಿಳಿದುಬಂತು.

ಮೋದಿ: ಹಮ್. ಈಗ ಈ ತಂತ್ರಜ್ಞಾನವನ್ನು ತಾವು ಶೋಧಿಸಿದ್ದೀರಿ, ಅದರ ಹಕ್ಕನ್ನು ಪಡೆದುಕೊಂಡಿದ್ದೀರಿ.

ಮಯೂರ್: ಹಾ ಸರ್. ಪೇಟೆಂಟ್ ಪಡೆದುಕೊಂಡಿದ್ದೇವೆ. ಈ ವರ್ಷ ನಾವು ಈ ತಂತ್ರಜ್ಞಾನದ ಹಕ್ಕನ್ನು ನಮ್ಮದಾಗಿಸಿಕೊಂಡಿದ್ದೇವೆ.

ಮೋದಿ: ಹಾಗೂ ಮುಂದೆ ಇದನ್ನು ವೃದ್ಧಿಪಡಿಸಲು ನೀವು ಏನು ಯೋಜನೆ ಹಾಕಿಕೊಂಡಿದ್ದೀರಿ? ಬಸ್ ಗಳ ಫಲಿತಾಂಶ ಬಂದ ಮಾದರಿಯಲ್ಲಿ ಮುಂದೇನು ಮಾಡಬೇಕೆಂದು ಅಂದುಕೊಂಡಿದ್ದೀರಿ? ಅದರ ಬಗ್ಗೆಯೂ ನೀವು ಎಲ್ಲ ಯೋಚನೆ ಮಾಡಿರುತ್ತೀರಿ. ಮುಂದೆ ಏನು ಮಾಡಬೇಕೆಂಬ ವಿಚಾರವಿದೆ?

ಮಯೂರ್: ಸರ್, ಸ್ಟಾರ್ಟಪ್ ಇಂಡಿಯಾ ಮೂಲಕ, ನೀತಿ ಆಯೋಗದಿಂದ ಜಾರಿಯಲ್ಲಿರುವ “ಅಟಲ್ ನವಭಾರತ ಸವಾಲು’ ಅಭಿಯಾನವಿದೆಯಲ್ಲ, ಅದರ ಅಡಿಯಲ್ಲಿ ನಮಗೆ ಅನುದಾನ ದೊರೆತಿದೆ. ಹಾಗೂ ಆ ಅನುದಾನದ ನೆರವಿನಿಂದ ನಾವು ಈಗ ಏರ್ ಫಿಲ್ಟರ್ ಗಳನ್ನು ಉತ್ಪಾದನೆ ಮಾಡಲು ಸಾಧ್ಯವಾಗುವಂತಹ ಕೈಗಾರಿಕಾ ಘಟಕವನ್ನು ಆರಂಭಿಸಿದ್ದೇವೆ. 

ಮೋದಿ: ಅಂದರೆ, ಭಾರತ ಸರ್ಕಾರದ ವತಿಯಿಂದ ನಿಮಗೆ ಎಷ್ಟು ಅನುದಾನ ದೊರೆಯಿತು?

ಮಯೂರ್: 90 ಲಕ್ಷ

ಮೋದಿ: 90 ಲಕ್ಷ

ಮಯೂರ್: ಹೌದು ಸರ್.

ಮೋದಿ: ಹಾಗೂ ಇದರಿಂದ ನಿಮ್ಮ ಕೆಲಸವಾಯಿತು.

ಮಯೂರ್: ಹೌದು. ಈಗಿನ್ನೂ ಆರಂಭವಾಗಿದೆ. ಪ್ರಕ್ರಿಯೆ ನಡೆಯುತ್ತಿದೆ.

ಮೋದಿ: ನೀವು ಎಷ್ಟು ಸ್ನೇಹಿತರು ಸೇರಿಕೊಂಡು ಇದನ್ನೆಲ್ಲ  ಮಾಡುತ್ತಿದ್ದೀರಿ?

ಮಯೂರ್: ನಾವು ನಾಲ್ಕು ಜನರಿದ್ದೇವೆ ಸರ್.

ಮೋದಿ: ನೀವು ನಾಲ್ಕೂ ಮಂದಿ ಜತೆಯಾಗಿಯೇ ಓದಿದ್ದೀರಿ. ಹಾಗೂ ಅದರಿಂದಲೇ ತಮಗೆ ಈ ಬಗ್ಗೆ ಮುಂದೆ ಸಾಗುವ ವಿಚಾರ ಬಂದಿರಬೇಕು.

ಮಯೂರ್: ಹೌದು ಸರ್. ನಾವು ಕಾಲೇಜಿನಲ್ಲಿದ್ದೆವು. ಅಲ್ಲಿರುವಾಗಲೇ ನಾವು ಈ ಎಲ್ಲ ವಿಚಾರಗಳ ಕುರಿತು ಚಿಂತನೆ ನಡೆಸಿದ್ದೆವು. ನನ್ನ ಮೋಟಾರ್ ಸೈಕಲ್ ನಿಂದ ಕನಿಷ್ಠ ಮಾಲಿನ್ಯ ಹೊರಸೂಸುವಂತೆ ಮಾಡುವುದು ಹಾಗೂ ಅದರ ಮೈಲೇಜ್ ಹೆಚ್ಚಿಸುವುದು ನನ್ನ ಚಿಂತನೆಯೇ ಆಗಿತ್ತು.

ಮೋದಿ: ಒಳ್ಳೆಯದು, ಮಾಲಿನ್ಯ ಕಡಿಮೆಯಾಗುತ್ತದೆ, ಮೈಲೇಜ್ ಹೆಚ್ಚುತ್ತದೆ ಅಂದರೆ, ಸರಾಸರಿ ವೆಚ್ಚ ಎಷ್ಟು ಉಳಿತಾಯವಾಗಬಲ್ಲದು?

ಮಯೂರ್: ಸರ್. ಮೋಟಾರ್ ಸೈಕಲ್ ನಲ್ಲಿ ನಾವು ಪರೀಕ್ಷೆ ನಡೆಸಿದ್ದೆವು. ಅದರ ಮೈಲೇಜ್ ಒಂದು ಲೀಟರ್ ಪೆಟ್ರೋಲ್ ಗೆ 25 ಕಿಲೋಮೀಟರ್ ಇತ್ತು. ಅದನ್ನು ನಾವು ಏರಿಕೆ ಮಾಡಿ ಲಿಟರ್ ಗೆ 39 ಕಿಲೋಮೀಟರ್ ಚಲಿಸುವಂತೆ ಮಾಡಿದೆವು. ಇದರಿಂದ ಲೀಟರ್ ಗೆ ಹತ್ತಿರ ಹತ್ತಿರ 14 ಕಿಲೋಮೀಟರ್ ಹೆಚ್ಚುವರಿ ಲಾಭವಾಗುತ್ತದೆ. ಹಾಗೂ ಅದರಿಂದ ಶೇ.40ರಷ್ಟು ಕಾರ್ಬನ್ ಹೊರಸೂಸುವಿಕೆ ಕಡಿಮೆಯಾಯಿತು. ಈ ತಂತ್ರಜ್ಞಾನವನ್ನು ವಲಯ ಸಾರಿಗೆ ಸಂಸ್ಥೆಗಳ ಬಸ್ ಗಳಿಗೆ ಅಳವಡಿಸಿದಾಗ ಅಲ್ಲಿ ಶೇ.10ರಷ್ಟು ಇಂಧನ ದಕ್ಷತೆ ಹೆಚ್ಚಿತು. ಹಾಗೂ ಶೇ.35-40ರಷ್ಟು ಉತ್ಸರ್ಜನೆ ಕಡಿಮೆಯಾಯಿತು.

ಮೋದಿ: ಮಯೂರ್, ನಿಮ್ಮೊಂದಿಗೆ ಮಾತನಾಡಿ ನನಗೆ ತುಂಬ ಖುಷಿಯಾಯಿತು. ನಿಮ್ಮ ಜತೆಗಾರರಿಗೂ ನನ್ನ ವತಿಯಿಂದ ಶುಭಾಶಗಳನ್ನು ತಿಳಿಸಿ. ಕಾಲೇಜ್ ಜೀವನದಲ್ಲಿ ಸ್ವಂತದ್ದೊಂದು ಸಮಸ್ಯೆ ಉಂಟಾಗಿತ್ತು. ಆ ಸಮಸ್ಯೆಗೆ ನೀವೇ ಖುದ್ದಾಗಿ ಪರಿಹಾರವನ್ನೂ ಶೋಧಿಸಿದಿರಿ. ಹಾಗೂ ಆ ಯಶಸ್ಸಿನಿಂದ ತೃಪ್ತರಾಗಿ ಈಗ ನೀವೇನು ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದೀರೋ ಅದರಿಂದ ಪರಿಸರದ ಸಮಸ್ಯೆಯನ್ನೂ ನಿವಾರಿಸುವ ದಿಶೆಯಲ್ಲಿ ಹೆಜ್ಜೆ ಇಟ್ಟಿದ್ದೀರಿ. ಇದು ನಮ್ಮ ದೇಶದ ಯುವಜನರ ಸಾಮರ್ಥ್ಯವೇ ಆಗಿದೆ. ಯಾವುದೇ ದೊಡ್ಡ ಸವಾಲವನ್ನು ಹೊತ್ತುಕೊಳ್ಳುತ್ತಾರೆ ಹಾಗೂ ದಾರಿಯನ್ನು ತಾವೇ ಪರಿಶೋಧಿಸುತ್ತಾರೆ. ನನ್ನ ಕಡೆಯಿಂದ ತಮಗೆ ಅತ್ಯಂತ ಶುಭಕಾಮನೆಗಳು. ತುಂಬ ಧನ್ಯವಾದಗಳು.

ಮಯೂರ್: ಧನ್ಯವಾದಗಳು ಸರ್, ಧನ್ಯವಾದಗಳು.

ಸ್ನೇಹಿತರೇ, ಕೆಲವು ವರ್ಷಗಳ ಮೊದಲು ಯಾರಾದರೂ ತಾವು ಸ್ವಂತ ವಹಿವಾಟು, ಉದ್ಯಮ ಆರಂಭಿಸಲು ಇಷ್ಟಪಡುವುದಾಗಿ ಹೇಳಿದ್ದರೆ ಅಥವಾ ಯಾರಾದರೂ ಹೊಸ ಸಂಸ್ಥೆಯನ್ನು ಆರಂಭಿಸಲು ಬಯಸಿದ್ದರೆ ಆಗ ಅವರಿಗೆ ಕುಟುಂಬದ ಹಿರಿಯರು ಉತ್ತರ ನೀಡುತ್ತಿದ್ದರು. “ನೀನೇಕೆ ನೌಕರಿ ಮಾಡಲು ಇಷ್ಟಪಡುವುದಿಲ್ಲ, ನೌಕರಿಯನ್ನು ಮಾಡು, ನೌಕರಿಯಲ್ಲಿ ಭದ್ರತೆ ಇರುತ್ತದೆ. ಸಂಬಳ ಇರುತ್ತದೆ. ಜಂಜಡವೂ ಕಡಿಮೆ ಇರುತ್ತದೆ’ ಎಂದು ಹೇಳುತ್ತಿದ್ದರು. ಆದರೆ, ಇಂದು ಒಂದು ವೇಳೆ, ಯಾರಾದರೂ ಕಂಪೆನಿಯನ್ನು ಆರಂಭಿಸಲು ಇಷ್ಟಪಟ್ಟರೆ, ಅವರ ಸುತ್ತಮುತ್ತಲಿನ ಎಲ್ಲ ಜನರೂ ಉತ್ಸಾಹಿತರಾಗುತ್ತಾರೆ. ಹಾಗೂ ಈ ಪ್ರಯತ್ನಕ್ಕೆ ಅವರ ಸಂಪೂರ್ಣ ಬೆಂಬಲವನ್ನೂ ನೀಡುತ್ತಾರೆ. ಸ್ನೇಹಿತರೇ, ಇದು ಭಾರತದ ಪ್ರಗತಿಯ ಗಾಥೆಯ ತಿರುವಿನ ಬಿಂದುವಾಗಿದೆ. ಇಲ್ಲೀಗ ಜನರು ಕೇವಲ ಉದ್ಯೋಗ ಹುಡುಕುವ ಕನಸನ್ನಷ್ಟೇ ಕಾಣುತ್ತಿಲ್ಲ, ಬದಲಿಗೆ, ಉದ್ಯೋಗದಾತರಾಗುವ, ಉದ್ಯೋಗ ಸೃಷ್ಟಿಸುವವರಾಗಲು ಇಚ್ಛಿಸುತ್ತಿದ್ದಾರೆ. ಇದರಿಂದಾಗಿ, ವಿಶ್ವದಲ್ಲಿ ಭಾರತದ ಸ್ಥಾನ ನ್ನಷ್ಟು ಸದೃಢಗೊಳ್ಳುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು “ಮನದ ಮಾತು’ ಕಾರ್ಯಕ್ರಮದಲ್ಲಿ ನಾವು ಅಮೃತ ಮಹೋತ್ಸವದ ಕುರಿತು ಮಾತನಾಡಿದೆವು. ಅಮೃತ ಕಾಲದಲ್ಲಿ ಹೇಗೆ ನಮ್ಮ ದೇಶವಾಸಿಗಳು ಹೊಸ ಹೊಸ ಸಂಕಲ್ಪಗಳನ್ನು ಪೂರ್ಣಗೊಳಿಸುತ್ತಿದ್ದಾರೆ ಎನ್ನುವುದರ ಕುರಿತು ನಾನು ಚರ್ಚೆ ನಡೆಸಿದೆ. ಹಾಗೂ ಜತೆಗೇ, ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಸೇನೆಯ ಶೌರ್ಯದೊಂದಿಗೆ ಗುರುತಿಸಲ್ಪಡುವ ಸಂದರ್ಭದ ಕುರಿತೂ ನಾನು ಉಲ್ಲೇಖಿಸಿದ್ದೇನೆ.  ಡಿಸೆಂಬರ್ ತಿಂಗಳಲ್ಲಿನಲ್ಲಿಯೇ ನಾವೆಲ್ಲರೂ ಪ್ರೇರಣೆ ಪಡೆಯುವಂತಹ ಮತ್ತೊಂದು ದೊಡ್ಡ ದಿನ ನಮ್ಮ ಎದುರು ಆಗಮಿಸುತ್ತಿದೆ. ಅದು ಡಿಸೆಂಬರ್ 6. ಈ ದಿನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿಯ ದಿನವಾಗಿದೆ. ಬಾಬಾ ಸಾಹೇಬರು ದೇಶ ಹಾಗೂ ಸಮಾಜಕ್ಕಾಗಿ, ತಮ್ಮ ಕರ್ತವ್ಯಗಳನ್ನು ನಿರ್ವಹಣೆ ಮಾಡುವುದಕ್ಕಾಗಿಯೇ ತಮ್ಮ ಇಡೀ ಜೀವನವನ್ನು ಸಮರ್ಪಿತಗೊಳಿಸಿದ್ದರು. ನಮ್ಮ ಸಂವಿಧಾನದ ಮೂಲ ಆಶಯವೂ ಇದೇ ಆಗಿದೆ ಎನ್ನುವುದನ್ನು ನಾವು ದೇಶವಾಸಿಗಳು ಎಂದಿಗೂ ಮರೆಯಬಾರದು. ಸಂವಿಧಾನವು ಎಲ್ಲ ನಾಗರಿಕರು ತಮ್ಮ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಅಪೇಕ್ಷಿಸುತ್ತದೆ. ಹೀಗಾಗಿ, ಬನ್ನಿ, ಈ ಅಮೃತಮಹೋತ್ಸದ ಸಮಯದಲ್ಲಿ ನಮ್ಮ ಕರ್ತವ್ಯಗಳನ್ನು ಸಂಪೂರ್ಣ ನಿಷ್ಠೆಯಿಂದ ನಿಭಾಯಿಸಲು ಪ್ರಯತ್ನಿಸುವುದಾಗಿ ನಾವು ಸಹ ಸಂಕಲ್ಪ ಕೈಗೊಳ್ಳೋಣ. ಇದೇ, ನಾವು ಬಾಬಾ ಸಾಹೇಬರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ.

ಸ್ನೇಹಿತರೇ, ನಾವು ಈಗ ಡಿಸೆಂಬರ್ ತಿಂಗಳಿಗೆ ಪದಾರ್ಪಣೆ ಮಾಡುತ್ತಿದ್ದೇವೆ. ಮುಂದಿನ “ಮನದ ಮಾತು’ 2021ನೇ ವರ್ಷದ ಕೊನೆಯ ಮನದ ಮಾತಾಗಿರುವುದು ಸ್ವಾಭಾವಿಕವೇ ಆಗಿದೆ. 2022ರಲ್ಲಿ ಮತ್ತೆ ಯಾತ್ರೆಯನ್ನು ಆರಂಭಿಸೋಣ. ಹಾಗೂ ನಾನು ತಮ್ಮಿಂದ ಬಹಳಷ್ಟು ಸಲಹೆಗಳನ್ನು ನಿರೀಕ್ಷಿಸುತ್ತೇನೆ ಹಾಗೂ ಅಪೇಕ್ಷೆ ಮಾಡುತ್ತಲೇ ಇರುತ್ತೇನೆ. ತಾವು ಈ ವರ್ಷಕ್ಕೆ ಹೇಗೆ ವಿದಾಯ ಹೇಳುತ್ತಿದ್ದೀರಿ, ಹೊಸ ವರ್ಷದಲ್ಲಿ ಏನೆಲ್ಲ ಮಾಡುವವರಿದ್ದೀರಿ ಇವುಗಳೆಲ್ಲವನ್ನೂ ಖಂಡಿತವಾಗಿ ಹೇಳಿ. ಹಾಗೂ ಕೊರೋನಾ ಇನ್ನೂ ಹೋಗಿಲ್ಲ ಎನ್ನುವುದನ್ನು ಎಂದೂ ಮರೆಯಬೇಡಿ, ಜಾಗ್ರತೆ ವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ತುಂಬಾ ತುಂಬಾ ಧನ್ಯವಾದಗಳು.

***



(Release ID: 1775784) Visitor Counter : 339