ಪ್ರಧಾನ ಮಂತ್ರಿಯವರ ಕಛೇರಿ

ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಉದ್ಘಾಟನೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 16 NOV 2021 5:59PM by PIB Bengaluru

ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ!

ಕಾಲನೇಮಿಯನ್ನು ಸಂಹರಿಸಿದ ಭಗವಾನ್ ಹನುಮಾನ್ ಅವರ ನೆಲದ ಜನತೆಗೆ ನಾನು ವಂದಿಸುತ್ತೇನೆ. 1857ರ ಹೋರಾಟದಲ್ಲಿ ಈ ಪ್ರದೇಶದ ಜನರು ಬ್ರಿಟಿಷರ ವಿರುದ್ಧ ವೀರತ್ವದಿಂದ ಕಾದಾಡಿದರು. ಸ್ವಾತಂತ್ರ್ಯ ಹೋರಾಟದ ಸುವಾಸನೆಯನ್ನು ಈ ನೆಲ ಹೊಂದಿದೆ. ಕೊಯಿರಿಪುರದ ಯುದ್ಧವನ್ನು ಯಾರು ತಾನೇ ಮರೆಯಬಲ್ಲರು?. ಇಂದು ಈ ಪವಿತ್ರ ಭೂಮಿ ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಉಡುಗೊರೆಯನ್ನು ಪಡೆಯುತ್ತಿದೆ. ಇದಕ್ಕಾಗಿ ನೀವು ಬಹಳ ಸಮಯದಿದ ಕಾಯುತ್ತಿದ್ದಿರಿ. ನಿಮ್ಮೆಲ್ಲರಿಗೂ ಬಹಳ ಅಭಿನಂದನೆಗಳು.

ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್ ಜೀ, ಉತ್ತರ ಪ್ರದೇಶದ ಶಕ್ತಿಶಾಲೀ, ಉತ್ಸಾಹೀ ಮತ್ತು ಕರ್ಮಯೋಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೀ, ಉತ್ತರ ಪ್ರದೇಶ ಬಿ.ಜೆ.ಪಿ. ಅಧ್ಯಕ್ಷ ಶ್ರೀ ಸ್ವತಂತ್ರ ದೇವ್ ಜೀ, ಉತ್ತರ ಪ್ರದೇಶ ಸರಕಾರದ ಸಚಿವರಾದ ಶ್ರೀ ಜೈಪ್ರತಾಪ್ ಸಿಂಗ್ ಜೀ ಮತ್ತು ಧರ್ಮವೀರ ಪ್ರಜಾಪತೀ ಜೀ, ಸಂಸತ್ತಿನ ನನ್ನ ಸಹೋದ್ಯೋಗಿ ಸಹೋದರಿ ಮನೇಕಾ ಗಾಂಧಿ ಜೀ, ಇತರ ಜನ ಪ್ರತಿನಿಧಿಗಳೇ ಮತ್ತು ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ!.

ಉತ್ತರ ಪ್ರದೇಶದ ಸಾಮರ್ಥ್ಯದ ಬಗೆಗೆ ಮತ್ತು ಅದರ ಜನತೆಯ ಬಗ್ಗೆ ಜಗತ್ತಿನ ಯಾರಿಗೇ ಆದರೂ ಯಾವುದೇ ಸಂಶಯಗಳಿದ್ದರೆ ಅವರು ಸುಲ್ತಾನಪುರಕ್ಕೆ ಬರಬಹುದು ಮತ್ತು ಅವರಾಗಿ ಇದನ್ನು ನೋಡಬಹುದು. ಮೂರು ನಾಲ್ಕು ವರ್ಷಗಳ ಹಿಂದೆ ಬರೇ ಭೂಮಿಯ ತುಂಡಾಗಿ ಇದ್ದ ಈ ಭಾಗದಲ್ಲಿ ಆಧುನಿಕ ಎಕ್ಸ್ ಪ್ರೆಸ್ ವೇ ಈಗ ಹಾದು ಹೋಗುತ್ತಿದೆ. ಮೂರು ವರ್ಷಗಳ ಹಿಂದೆ ಪೂರ್ವಾಂಚಲ ಎಕ್ಸ್ ಪ್ರೆಸ್ ವೇಗೆ ನಾನು ಶಿಲಾನ್ಯಾಸ ಮಾಡಿದಾಗ, ಒಂದು ದಿನ ನಾನಿಲ್ಲಿ ವಿಮಾನದ ಮೂಲಕ ಬಂದಿಳಿಯುತ್ತೇನೆ ಎಂದು ಭಾವಿಸಿರಲಿಲ್ಲ. ಎಕ್ಸ್ ಪ್ರೆಸ್ ವೇ ಯು ಉತ್ತರ ಪ್ರದೇಶವನ್ನು ತ್ವರಿತಗತಿಯಿಂದ ಉತ್ತಮ ಭವಿಷ್ಯದತ್ತ ಕೊಂಡೊಯ್ಯಬಲ್ಲದು. ಈ ಎಕ್ಸ್ ಪ್ರೆಸ್ ವೇಯು ಉತ್ತರ ಪ್ರದೇಶದ ಅಭಿವೃದ್ಧಿಯ ಎಕ್ಸ್ ಪ್ರೆಸ್ ವೇ. ಈ ಎಕ್ಸ್ ಪ್ರೆಸ್ ವೇಯು ಉತ್ತರ ಪ್ರದೇಶದ ಪ್ರಗತಿಯ ಎಕ್ಸ್ ಪ್ರೆಸ್ ವೇ. ಈ ಎಕ್ಸ್ ಪ್ರೆಸ್ ವೇಯು ನವ ಉತ್ತರ ಪ್ರದೇಶದ ಎಕ್ಸ್ ಪ್ರೆಸ್ ವೇ. ಈ ಎಕ್ಸ್ ಪ್ರೆಸ್ ವೇಯು ಉತ್ತರ ಪ್ರದೇಶದ ಬೆಳೆಯುತ್ತಿರುವ ಆರ್ಥಿಕತೆಯ ಎಕ್ಸ್ ಪ್ರೆಸ್ ವೇ. ಈ ಎಕ್ಸ್ ಪ್ರೆಸ್ ವೇಯು ಉತ್ತರ ಪ್ರದೇಶದ ಆಧುನಿಕ ಸೌಲಭ್ಯಗಳ ಪ್ರತಿಬಿಂಬ. ಈ ಎಕ್ಸ್ ಪ್ರೆಸ್ ವೇಯು ಉತ್ತರ ಪ್ರದೇಶದ ಬಲಿಷ್ಟ ಇಚ್ಛಾಶಕ್ತಿಯ ಪವಿತ್ರ ವಿವರಣೆ. ಈ ಎಕ್ಸ್ ಪ್ರೆಸ್ ವೇಯು ಉತ್ತರ ಪ್ರದೇಶದಲ್ಲಿ ದೃಢ ನಿರ್ಧಾರಗಳು ಅನುಷ್ಟಾನಗೊಳ್ಳುತ್ತಿರುವುದಕ್ಕೆ ಜೀವಂತ ಸಾಕ್ಷಿ. ಇದು ಉತ್ತರ ಪ್ರದೇಶದ ಹೆಮ್ಮೆ ಮತ್ತು  ಅದ್ಭುತ. ಪೂರ್ವಾಂಚಲ ಎಕ್ಸ್ ಪ್ರೆಸ್ ವೇಯನ್ನು ಇಂದು ಉತ್ತರ ಪ್ರದೇಶದ ಜನತೆಗೆ ಅರ್ಪಿಸಲು ನನಗೆ ಆಶೀರ್ವಾದದಂತಹ ಅವಕಾಶ ಸಿಕ್ಕಿದೆ.

ಸ್ನೇಹಿತರೇ,

ದೇಶದ ಸಮಗ್ರ ಅಭಿವೃದ್ಧಿಗೆ ಸಮತೋಲಿತ ಅಭಿವೃದ್ಧಿಯೂ ಬಹಳ ಮುಖ್ಯ. ಕೆಲವು ವಲಯಗಳು ಅಭಿವೃದ್ಧಿಯ ಸ್ಪರ್ಧೆಯಲ್ಲಿ ಬಹಳ ವೇಗವಾಗಿ ಮುನ್ನಡೆ ಸಾಧಿಸುವುದು ಮತ್ತು ಕೆಲವು ವಲಯಗಳು ಹಲವು ದಶಕಗಳಷ್ಟು ಹಿಂದುಳಿಯುವುದು ಯಾವುದೇ ದೇಶಕ್ಕೆ ಒಳಿತಲ್ಲ. ಭಾರತದ ಪೂರ್ವ ವಲಯ ಮತ್ತು ಈಶಾನ್ಯದ ರಾಜ್ಯಗಳು ಬಹಳ  ಸಾಮರ್ಥ್ಯ ಹೊಂದಿದ್ದರೂ ದೇಶದ ಅಭಿವೃದ್ಧಿಯಿಂದ ಅವುಗಳಿಗೆ ಆಗಬೇಕಾದಷ್ಟು ಪ್ರಯೋಜನ ಆಗಿಲ್ಲ. ರಾಜಕೀಯದಿಂದಾಗಿ ಮತ್ತು ಬಹಳ ದೀರ್ಘ ಕಾಲ ಇಲ್ಲಿ ಆಡಳಿತ ನಡೆಸಿದ ಸರಕಾರಗಳ ರೀತಿಯ ಕಾರಣದಿಂದಾಗಿ ಉತ್ತರ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕೊಡಬೇಕಾದಷ್ಟು ಗಮನ ಕೊಡಲಾಗಿಲ್ಲ. ಉತ್ತರ ಪ್ರದೇಶದ ಈ ವಲಯ ಮಾಫಿಯಾಗಳ ಕೈಗೆ ಹಸ್ತಾಂತರವಾಗಿತ್ತು ಮತ್ತು ಅದರ ನಾಗರಿಕರು ಬಡತನದತ್ತ ದೂಡಲ್ಪಟ್ಟಿದ್ದರು.

ಈ ವಲಯವು ಅಭಿವೃದ್ಧಿಯ ಹೊಸ ಅಧ್ಯಾಯ ಬರೆಯುತ್ತಿರುವುದಕ್ಕೆ ನನಗೆ ಬಹಳ ಸಂತೋಷವಿದೆ. ನಾನು ಉತ್ತರ ಪ್ರದೇಶದ  ಬಹಳ ಉತ್ಸಾಹೀ ಮತ್ತು ಕರ್ಮಯೋಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೀ ಅವರನ್ನು, ಅವರ ತಂಡವನ್ನು ಮತ್ತು ಉತ್ತರ ಪ್ರದೇಶದ ಜನತೆಯನ್ನು ಪೂರ್ವಾಂಚಲ ಎಕ್ಸ್ ಪ್ರೆಸ್ ವೇಗಾಗಿ ಅಭಿನಂದಿಸುತ್ತೇನೆ. ಈ ಎಕ್ಸ್ ಪ್ರೆಸ್ ವೇಗಾಗಿ ಬಳಕೆಯಾಗಿರುವ ಭೂಮಿಯ ನನ್ನ ರೈತ ಸಹೋದರರನ್ನು ಮತ್ತು ಸಹೋದರಿಯರನ್ನು ಮತ್ತು ಬೆವರು ಸುರಿಸಿದ ಕಾರ್ಮಿಕರನ್ನು ಹಾಗು ಇಂಜಿನಿಯರ್ ಗಳ ಕೌಶಲ್ಯವನ್ನು ಅಭಿನಂದಿಸುತ್ತೇನೆ.

ಸಹೋದರರೇ ಮತ್ತು ಸಹೋದರಿಯರೇ,

ನಮ್ಮ ರಾಷ್ಟ್ರದ ಭದ್ರತೆಯಷ್ಟೇ ಮುಖ್ಯ ರಾಷ್ಟ್ರದ ಸಮೃದ್ಧಿ. ಇನ್ನು ಕೆಲವೇ ಕಾಲದಲ್ಲಿ ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ತುರ್ತು ಸಂದರ್ಭಗಳಲ್ಲಿ ಹೇಗೆ ನಮ್ಮ ವಾಯು ಪಡೆಯ ಹೊಸ ಶಕ್ತಿಯಾಗಲಿದೆ ಎಂಬುದನ್ನು ನಾವೆಲ್ಲ ನೋಡಲಿದ್ದೇವೆ. ಈಗಿನಿಂದ ಕೆಲವೇ ಸಮಯದಲ್ಲಿ ನಮ್ಮ ಯುದ್ಧ ವಿಮಾನಗಳು ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಯಲ್ಲಿ ಬಂದಿಳಿಯಲಿವೆ.ಈ ವಿಮಾನಗಳ ಗರ್ಜನೆ ದಶಕಗಳಿಂದ ದೇಶದ ರಕ್ಷಣಾ ಮೂಲಸೌಕರ್ಯವನ್ನು ನಿರ್ಲಕ್ಷಿಸಿದವರಿಗೂ ಕೇಳಲಿದೆ.

ಸ್ನೇಹಿತರೇ,

ಉತ್ತರ ಪ್ರದೇಶದ ಫಲವತ್ತಾದ ಭೂಮಿ, ಜನರ ಕೌಶಲ್ಯಗಳು ಮತ್ತು ಕಠಿಣ ದುಡಿಮೆಗಳು ವಿಶಿಷ್ಟವಾದಂತಹವು. ಮತ್ತು ನಾನು ಇದನ್ನು ಯಾವುದೇ ಪುಸ್ತಕದಿಂದ ಓದಿ ಹೇಳುತ್ತಿರುವುದಲ್ಲ. ನಾನು ಏನನ್ನು ನೋಡಿದ್ದೇನೋ ಮತ್ತು ಉತ್ತರ ಪ್ರದೇಶದ ಸಂಸದನಾಗಿ ನಾನು ಯಾರ ಜೊತೆ ಸಂಪರ್ಕ ಬೆಳೆಸಿಕೊಂಡಿದ್ದೇನೋ ಅವರಿಂದ ಪಡೆದ ಮಾಹಿತಿಯನ್ನು ಆಧರಿಸಿ ಇದನ್ನು  ಹೇಳುತ್ತಿದ್ದೇನೆ. ಇಂತಹ ದೊಡ್ಡ ಪ್ರದೇಶವು ಗಂಗಾಜೀ ಮತ್ತು ಇತರ ನದಿಗಳಿಂದ ಸಂಪದ್ಭರಿತವಾಗಿದೆ, ಮತ್ತು ಅವುಗಳ ಕರುಣೆಯನ್ನು ಹೊಂದಿದೆ. ಏಳೆಂಟು ವರ್ಷಗಳ ಹಿಂದೆ ಇಲ್ಲಿ ಇದ್ದಂತಹ ಸ್ಥಿತಿ ಹೇಗಿತ್ತೆಂದರೆ  ಯಾಕೆ ಕೆಲವು ಜನರು ಉತ್ತರ ಪ್ರದೇಶಕ್ಕೆ ಶಿಕ್ಷೆ ನೀಡುತ್ತಿದ್ದಾರೆ ಮತ್ತು ಯಾವ ಕಾರಣಕ್ಕಾಗಿ ನೀಡುತ್ತಿದ್ದಾರೆ ಎಂಬುದನ್ನು ಆಶ್ಚರ್ಯದಿಂದ ನೋಡುವಂತೆ ಮಾಡಿತ್ತು. 2014ರಲ್ಲಿ ನೀವೆಲ್ಲರೂ ಉತ್ತರ ಪ್ರದೇಶ ಮತ್ತು ದೇಶ ನನಗೆ ಭಾರತದ ಈ ಶ್ರೇಷ್ಟ ಭೂಮಿಗೆ ಸೇವೆ ಸಲ್ಲಿಸುವಂತಹ ಅವಕಾಶವನ್ನು ನೀಡಿದಾಗ, ನಾನು ಉತ್ತರ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದ ವಿವರಗಳ ಒಳಗೆ ಹೋದೆ, ಅದು ಸಂಸತ್ ಸದಸ್ಯನಾಗಿ ಮತ್ತು “ಪ್ರಧಾನ ಸೇವಕ”ನಾಗಿ ನನ್ನ ಕರ್ತವ್ಯವಾಗಿತ್ತು.

ಉತ್ತರ ಪ್ರದೇಶಕ್ಕಾಗಿ ನಾನು ಹಲವಾರು ಉಪಕ್ರಮಗಳನ್ನು ಆರಂಭ ಮಾಡಿದೆ. ಬಡವರಿಗೆ ಪಕ್ಕಾ ಮನೆ ಸಿಗಬೇಕು, ಅವುಗಳಲ್ಲಿ ಶೌಚಾಲಯ ಇರಬೇಕು. ಬಯಲು ಬಹಿರ್ದೆಸೆಗೆ ಹೋಗುವಂತಹ ಪರಿಸ್ಥಿತಿ ಮಹಿಳೆಯರಿಗೆ ಬರಬಾರದು, ಪ್ರತಿಯೊಬ್ಬರ ಮನೆಯಲ್ಲಿಯೂ ವಿದ್ಯುತ್ ಇರಬೇಕು ಎಂಬುದಲ್ಲದೆ ಇಂತಹ ಹಲವು ಕಾರ್ಯಗಳನ್ನು ಇಲ್ಲಿ ಅನುಷ್ಟಾನಕ್ಕೆ ತರಬೇಕಾಗಿತ್ತು. ಆದರೆ ಆಗ ಉತ್ತರ ಪ್ರದೇಶದಲ್ಲಿದ್ದ ಸರಕಾರ ನನ್ನನ್ನು ಬೆಂಬಲಿಸದಿದ್ದುದು ನನಗೆ ನೋವನ್ನುಂಟು ಮಾಡಿತು. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಸಾರ್ವಜನಿಕವಾಗಿ ನನ್ನ ಮಗ್ಗುಲಲ್ಲಿ  ನಿಂತರೂ ಅವರ ಮತ ಬ್ಯಾಂಕ್ ಕಳೆದುಕೊಳ್ಳುವ ಭಯ ಕಾಡಿತು. ನಾನಿಲ್ಲಿಗೆ ಸಂಸತ್ ಸದಸ್ಯನಾಗಿ ಬಂದಾಗ, ಅವರು ವಿಮಾನ ನಿಲ್ದಾಣಕ್ಕೆ ನನ್ನನ್ನು ಸ್ವಾಗತಿಸಲು ಬರುತ್ತಿದ್ದರು, ಮತ್ತು ಆ ಬಳಿಕ ಮಾಯವಾಗುತ್ತಿದ್ದರು. ಅವರಲ್ಲಿ  ಲೆಕ್ಕ ಕೊಡುವಂತಹ ಯಾವ ಸಾಧನೆಯ ಸಂಗತಿಯೂ ಇರದಿದ್ದುದರ ಬಗ್ಗೆ ಅವರಿಗೆ ನಾಚಿಕೆಯಾಗುತ್ತಿತ್ತು.

ಯೋಗೀ ಜೀ ಅವರು ಅಧಿಕಾರ ಸ್ವೀಕರಿಸುವುದಕ್ಕೆ ಮೊದಲಿದ್ದ ಸರಕಾರಗಳ ಬಗ್ಗೆ ನನಗೆ ತಿಳಿದಿತ್ತು.  ಆ ಸರಕಾರಗಳು ಜನರಿಗೆ ಮಾಡಿದ ಅನ್ಯಾಯದಿಂದಾಗಿ, ಅಭಿವೃದ್ಧಿಯಲ್ಲಿ ತೋರಿದ ತಾರತಮ್ಯದಿಂದಾಗಿ ಮತ್ತು ಅವರ ಕುಟುಂಬದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ನಿರತರಾದುದಕ್ಕಾಗಿ ಅವರನ್ನು ಉತ್ತರ ಪ್ರದೇಶದ ಅಭಿವೃದ್ಧಿಯ ಪಥದಿಂದ ಜನರು ದೂರ ಸರಿಸಬಹುದೆಂಬ ನಿರೀಕ್ಷೆ ಇತ್ತು. ಮತ್ತು 2017 ರಲ್ಲಿ ನೀವದನ್ನು ಮಾಡಿದಿರಿ. ಭಾರೀ ಬಹುಮತವನ್ನು ನೀಡುವ ಮೂಲಕ ನೀವು ಯೋಗೀಜಿ ಮತ್ತು ಮೋದೀ ಜೀ ಅವರಿಗೆ ನಿಮ್ಮ ಸೇವೆ ಮಾಡುವ ಅವಕಾಶ ಒದಗಿಸಿದಿರಿ.

ಇಂದು ಉತ್ತರ ಪ್ರದೇಶದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿದರೆ, ನಾನು ಹೇಳುತ್ತೇನೆ ಈ ವಲಯದ ಅದೃಷ್ಟ ಬದಲಾಗಲು ಆರಂಭಿಸಿದೆ ಮತ್ತು ಅದು ಬಹಳ ತ್ವರಿತಗತಿಯಿಂದ ಬದಲಾಗಲಿದೆ. ಈ ಮೊದಲು ಉತ್ತರ ಪ್ರದೇಶದಲ್ಲಿದ್ದ ವಿದ್ಯುತ್ ಕಡಿತಗಳ ಸಂಖ್ಯೆಯನ್ನು ಯಾರು ಮರೆಯುತ್ತಾರೆ?. ನಿಮಗೆ ನೆನಪಿದೆಯೋ ಇಲ್ಲವೋ?. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಯಾರು ತಾನೆ ಮರೆಯುತ್ತಾರೆ?. ಉತ್ತರ ಪ್ರದೇಶದಲ್ಲಿ ವೈದ್ಯಕೀಯ ಸೌಕರ್ಯಗಳ ಸ್ಥಿತಿ ಹೇಗಿತ್ತು ಎಂಬುದನ್ನು ಯಾರು ತಾನೆ ಮರೆಯಬಲ್ಲರು? ಉತ್ತರ ಪ್ರದೇಶದಲ್ಲಿ ರಸ್ತೆಗಳು ಎಲ್ಲಿಗೂ ಜೋಡಿಸಲ್ಪಡುತ್ತಿರಲಿಲ್ಲ ಮತ್ತು ಜನರನ್ನು ಲೂಟಿ ಮಾಡಲಾಗುತ್ತಿತ್ತು. ಆಗ ಲೂಟಿ ಮಾಡುತ್ತಿದ್ದವರು ಈಗ ಜೈಲಿನಲ್ಲಿದ್ದಾರೆ.  ದರೋಡೆಗಳ ಬದಲಿಗೆ ಈಗ ಉತ್ತರ ಪ್ರದೇಶದಲ್ಲಿ ಹೊಸ ರಸ್ತೆಗಳ ನಿರ್ಮಾಣ ಆಗುತ್ತಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಅದು ಪೂರ್ವ ಭಾಗವಾಗಿರಲಿ ಅಥವಾ ಪಶ್ಚಿಮ ಭಾಗವಾಗಿರಲಿ ಸಾವಿರಾರು ಗ್ರಾಮಗಳು ಹೊಸ ರಸ್ತೆಗಳಿಂದ ಜೋಡಿಸಲ್ಪಟ್ಟಿವೆ ಮತ್ತು ಸಾವಿರಾರು ಕಿಲೋಮೀಟರ್ ಹೊಸ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಈಗ ನಿಮ್ಮೆಲ್ಲರ ಸಹಕಾರದಿಂದ, ಉತ್ತರ ಪ್ರದೇಶದ ಸಕ್ರಿಯ ಪಾಲುದಾರಿಕೆಯಿಂದ ಉತ್ತರ ಪ್ರದೇಶದ ಅಭಿವೃದ್ಧಿಯ ಕನಸು ನಿಜವಾಗುವಂತೆ ಕಾಣುತ್ತಿದೆ. ಇಂದು ಹೊಸ ವೈದ್ಯಕೀಯ ಕಾಲೇಜುಗಳು, ಎ.ಐ.ಐ.ಎಂ.ಎಸ್. ಗಳು ಮತ್ತು ಆಧುನಿಕ ಶಿಕ್ಷಣ ಸಂಸ್ಥೆಗಳನ್ನು ಉತ್ತರ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಬರೇ ಕೆಲವು ವಾರಗಳ ಹಿಂದೆ ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಾಯಿತು ಮತ್ತು ಇಂದು ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಯನ್ನು ನಿಮಗೆ ಹಸ್ತಾಂತರಿಸುವ ಅವಕಾಶ ನನಗೆ ದೊರಕಿದೆ.

ಸಹೋದರರೇ ಮತ್ತು ಸಹೋದರಿಯರೇ,

ಈ ಎಕ್ಸ್ ಪ್ರೆಸ್ ವೇ ಬಡವರಿಗೆ, ಮಧ್ಯಮ ವರ್ಗದವರಿಗೆ, ರೈತರಿಗೆ ಮತ್ತು ವ್ಯಾಪಾರಿಗಳಿಗೆ ಪ್ರಯೋಜನಗಳನ್ನು ಒದಗಿಸಲಿದೆ. ಇದು ಕಾರ್ಮಿಕ ವರ್ಗಕ್ಕೆ ಮತ್ತು ಉದ್ಯಮಿಗಳಿಗೆ ಅಂದರೆ ದಲಿತರಿಗೆ, ಅವಕಾಶ ವಂಚಿತರಿಗೆ, ಹಿಂದುಳಿದವರಿಗೆ, ರೈತರಿಗೆ, ಯುವ ಜನರಿಗೆ, ಮಧ್ಯಮ ವರ್ಗಕ್ಕೆ, ಪ್ರತೀ ವ್ಯಕ್ತಿಗೆ ಪಯೋಜನಕಾರಿಯಾಗಲಿದೆ. ಅದು ನಿರ್ಮಾಣ ಹಂತದಲ್ಲಿದ್ದಾಗ ಸಾವಿರಾರು ಸಹೋದ್ಯೋಗಿಗಳಿಗೆ ಉದ್ಯೋಗವನ್ನು ಒದಗಿಸಿದೆ. ಮತ್ತು ಅದೀಗ ಸಿದ್ದಗೊಂಡಿದ್ದು, ಅದು ಮಿಲಿಯಾಂತರ ಹೊಸ ಉದ್ಯೋಗಾವಕಾಶಗಳನ್ನು ನಿರ್ಮಾಣ ಮಾಡಲಿದೆ.

ಸ್ನೇಹಿತರೇ,

ವಿಸ್ತಾರವಾದ ರಾಜ್ಯ ಉತ್ತರ ಪ್ರದೇಶದಲ್ಲಿ ನಗರಗಳು ಪರಸ್ಪರ ಜೋಡಣೆಯಾಗಿರಲಿಲ್ಲ ಎಂಬುದು ವಸ್ತುಸ್ಥಿತಿ. ಕೆಲಸಕ್ಕಾಗಿಯೋ ಅಥವಾ ಸಂಬಂಧಿಕರನ್ನು ಭೇಟಿಯಾಗುವುದಕ್ಕೋ ವಿವಿಧ ಭಾಗಗಳಿಗೆ ತೆರಳುವ ಜನರಿಗೆ ಸೂಕ್ತ ಸಂಪರ್ಕ ವ್ಯವಸ್ಥೆ ಇಲ್ಲದೆ ತೊಂದರೆಗಳಾಗುತ್ತಿದ್ದವು. ಪೂರ್ವದ ಜನರಿಗೆ ಲಕ್ನೋ ತಲುಪುವುದು ಮಹಾಭಾರತ ಗೆದ್ದಂತೆ ಇತ್ತು. ಹಿಂದಿನ ಮುಖ್ಯಮಂತ್ರಿಗಳ ಕಾಲದಲ್ಲಿ ಅಭಿವೃದ್ಧಿ ಎಂಬುದು ಅವರ ಕುಟುಂಬಗಳು ನೆಲೆಸಿದ್ದ ಸ್ಥಳಗಳಿಗೆ ಸೀಮಿತವಾಗಿತ್ತು. ಇಂದು ಪಶ್ಚಿಮಕ್ಕೆ ಇರುವಂತಹ ಗುರುತಿಸುವಿಕೆಯಂತೆಯೇ ಪೂರ್ವಾಂಚಲಕ್ಕೂ ಈಗ ಆದ್ಯತೆ ದೊರೆಯುತ್ತಿದೆ. ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಈ ಅಂತರವನ್ನು ಜೋಡಿಸುತ್ತಿದೆ ಮತ್ತು ಉತ್ತರ ಪ್ರದೇಶವನ್ನು ಪರಸ್ಪರ ಜೋಡಿಸುತ್ತಿದೆ. ಈ ಎಕ್ಸ್ ಪ್ರೆಸ್ ವೇ ನಿರ್ಮಾಣದಿಂದ ಅವಧ್, ಪೂರ್ವಾಂಚಲ, ಮತ್ತು ಬಿಹಾರಗಳ ಜನತೆಗೂ ಪ್ರಯೋಜನವಾಗಲಿದೆ. ದಿಲ್ಲಿಯಿಂದ ಬಿಹಾರಕ್ಕೆ ಬರುವುದೂ ಸುಲಭವಾಗಲಿದೆ. ಮತ್ತು ನಾನು ನಿಮ್ಮ ಗಮನವನ್ನು ಇನ್ನೊಂದು ವಿಷಯದತ್ತ ಸೆಳೆಯಲು ಇಚ್ಛಿಸುತ್ತೇನೆ. 340 ಕಿಲೋ ಮೀಟರ್ ಉದ್ದದ ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಯ ವೈಶಿಷ್ಟ್ಯ ಎಂದರೆ ಅದು ಲಕ್ನೋ, ಬಾರಾಬಂಕಿ, ಅಮೇಥಿ, ಸುಲ್ತಾನ್ ಪುರ, ಅಯೋಧ್ಯಾ, ಅಂಬೇಡ್ಕರ್ ನಗರ, ಮಾವು, ಅಜಂಘರ್ ಮತ್ತು ಗಾಜಿಯಾಪುರಗಳನ್ನು ಸಂಪರ್ಕಿಸುತ್ತದೆ ಮಾತ್ರವಲ್ಲ, ಅದರ ವಿಶೇಷತೆ ಇರುವುದು ಈ ಎಕ್ಸ್ ಪ್ರೆಸ್ ವೇ ಯು ಅಭಿವೃದ್ಧಿಯ ಸಾಮರ್ಥ್ಯ ಇರುವ ಮತ್ತು ಭಾರೀ ಆಶೋತ್ತರಗಳನ್ನು ಹೊಂದಿರುವ ಈ ನಗರಗಳನ್ನು ಲಕ್ನೋ ಜೊತೆ ಬೆಸೆಯುವುದರಲ್ಲಿ. ಯೋಗೀ ಜೀ ಅವರ ನಾಯಕತ್ವದಲ್ಲಿ ಉತ್ತರ ಪ್ರದೇಶ ಸರಕಾರ ಈ ಎಕ್ಸ್ ಪ್ರೆಸ್ ವೇಗಾಗಿ 22,000 ಕೋ.ರೂ.ಗಳಿಗಿಂತ ಹೆಚ್ಚು ವೆಚ್ಚ ಮಾಡಿರಬಹುದು. ಆದರೆ ಇದು ಇಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ  ಕೈಗಾರಿಕೆಗಳನ್ನು ಆಕರ್ಷಿಸುವ ಮಾಧ್ಯಮವಾಗಲಿದೆ.  ಇಲ್ಲಿರುವ ಮಾಧ್ಯಮ ಸ್ನೇಹಿತರು ಉತ್ತರ ಪ್ರದೇಶದಲ್ಲಿ ಬರುತ್ತಿರುವ ಹೊಸ ಎಕ್ಸ್ ಪ್ರೆಸ್ ವೇ ಹಲವಾರು ನಗರಗಳನ್ನು ಜೋಡಿಸುತ್ತದೆ ಎಂಬ ಬಗ್ಗೆ ಗಮನ ಹರಿಸಿರುವರೇ, ಇಲ್ಲವೇ  ಎಂಬ ಬಗ್ಗೆ ನನಗೆ ತಿಳಿದಿಲ್ಲ. 300 ಕಿಲೋ ಮೀಟರ್ ಬುಂದೇಲ್ ಖಂಡ ಎಕ್ಸ್ ಪ್ರೆಸ್ ವೇ ಚಿತ್ರಕೂಟ, ಬಂಡಾ, ಹಮೀರ್ ಪುರ, ಮಹೋಬಾ, ಜಲೌನ್, ಔರಿಯಾ, ಮತ್ತು ಎಟ್ವಾಗಳನ್ನು ಜೋಡಿಸುತ್ತದೆ. 90 ಕಿಲೋ ಮೀಟರ್ ಗೋರಖ್ ಪುರ ಲಿಂಕ್ ಎಕ್ಸ್ ಪ್ರೆಸ್ ಗೋರಖ್ ಪುರ, ಅಂಬೇಡ್ಕರ್ ನಗರ್, ಸಂತ ಕಬೀರ್ ನಗರ್, ಮತ್ತು ಅಜಂಘರ್ ಗಳನ್ನು ಜೋಡಿಸುತ್ತದೆ. ಅದೇ ರೀತಿ 600 ಕಿಲೋ ಮೀಟರ್ ಉದ್ದದ ಗಂಗಾ ಎಕ್ಸ್ ಪ್ರೆಸ್ ವೇ ಮೀರತ್, ಹಾಪುರ, ಬುಲಂದ್ ಶಹರ್, ಅಮ್ರೋಹಾ, ಸಂಭಾಲ್, ಬಡೌನ್, ಶಹಜಹಾನ್ ಪುರ, ಹರ್ದೋಯಿ, ಉನ್ನಾವೋ, ರಾಯ್ ಬರೇಲಿ, ಪ್ರತಾಪ್ ಘರ್, ಮತ್ತು ಪ್ರಯಾಗ್ ರಾಜ್ ಗಳನ್ನು ಜೋಡಿಸುತ್ತದೆ. ಈಗ ಈ ಸಣ್ಣ ನಗರಗಳ ಬಗ್ಗೆ ಯೋಚಿಸಿ, ನೀವು ಹೇಳಿ, ಈ ನಗರಗಳಲ್ಲಿ ಎಷ್ಟು ನಗರಗಳು ದೊಡ್ದ ಮೆಟ್ರೋ ನಗರಗಳೆಂದು ಪರಿಗಣಿತವಾಗಿವೆ?. ಈ ನಗರಗಳಲ್ಲಿ ಎಷ್ಟು ನಗರಗಳು ರಾಜ್ಯದ ಇತರ ನಗರಗಳ ಜೊತೆ ಜೋಡಿಸಲ್ಪಟ್ಟಿವೆ?. ಉತ್ತರ ಪ್ರದೇಶದ ಜನರಿಗೆ  ಈ ಪ್ರಶೆಗಳಿಗೆ ಉತ್ತರ ತಿಳಿದಿದೆ. ಮತ್ತು ಅವರು ಈ ಸಂಗತಿಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಸ್ವಾತಂತ್ರ್ಯದ ಬಳಿಕ ಈ ರೀತಿಯ ಕೆಲಸ ಆಗುತ್ತಿರುವುದು ಇದೇ ಮೊದಲ ಬಾರಿ. ಉತ್ತರ ಪ್ರದೇಶದ ಜನತೆಯ ಆಶೋತ್ತರಗಳನ್ನು ಸಂಕೇತಿಸುವಂತೆ ಇದೇ ಮೊದಲ ಬಾರಿಗೆ ಆಧುನಿಕ ಸಂಪರ್ಕ ವ್ಯವಸ್ಥೆಗೆ  ಆದ್ಯತೆ ನೀಡಲಾಗುತ್ತಿದೆ. ಸಹೋದರರೇ ಮತ್ತು ಸಹೋದರಿಯರೇ, ಉತ್ತಮ ರಸ್ತೆಗಳು ಮತ್ತು ಹೆದ್ದಾರಿಗಳು ತಲುಪುವಲ್ಲಿ ಅಭಿವೃದ್ಧಿಯ ವೇಗ ಹೆಚ್ಚಾಗಿರುತ್ತದೆ ಮತ್ತು ಉದ್ಯೋಗ ಸೃಷ್ಟಿಯೂ ತ್ವರಿತವಾಗಿ ಆಗುತ್ತದೆ ಎಂಬುದು ನಿಮಗೂ ತಿಳಿದಿದೆ.

ಸ್ನೇಹಿತರೇ,

ಉತ್ತರ ಪ್ರದೇಶದ ಪ್ರತೀ ಮೂಲೆ ಮೂಲೆಗೂ ಉತ್ತಮ ಸಂಪರ್ಕ ಅದರ ಕೈಗಾರಿಕಾಭಿವೃದ್ಧಿಗೆ ಅವಶ್ಯಕ. ಯೋಗೀ ಜೀ ಸರಕಾರ ಯಾವುದೇ ತಾರತಮ್ಯ ಮಾಡದೆ ಈ ಯೋಜನೆಗಳಿಗೆ ಬದ್ಧವಾಗಿರುವುದು ನನಗೆ ಸಂತೋಷ ತಂದಿದೆ. ಅದು ’ಸಬ್ ಕಾ ಸಾಥ್ , ಸಬ್ ಕಾ ವಿಕಾಸ್’ ಎಂಬ ಮಂತ್ರದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಎಕ್ಸ್ ಪ್ರೆಸ್ ವೇ ಗಳು ಸಿದ್ಧವಾದಂತೆ ಏಕಕಾಲದಲ್ಲಿ ಕೈಗಾರಿಕಾ ಕಾರಿಡಾರ್ ಗಳ ಕಾರ್ಯವೂ ಆರಂಭವಾಗಲಿದೆ. ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಬಳಿ ಶೀಘ್ರದಲ್ಲಿಯೇ ಹಲವು ಹೊಸ ಕೈಗಾರಿಕೆಗಳು ಸ್ಥಾಪನೆಯಾಗಲಿವೆ. ಮತ್ತು 21 ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ. ಸದ್ಯೋಭವಿಷ್ಯದಲ್ಲಿ ಆಹಾರ ಸಂಸ್ಕರಣೆ, ಹಾಲು ಉತ್ಪನ್ನಗಳು, ಶೀತಲ ದಾಸ್ತಾನುಗಾರಗಳು, ದಾಸ್ತಾನುಗಾರ ಇತ್ಯಾದಿ ಕಾರ್ಯ ಚಟುವಟಿಕೆಗಳು ಈ ಎಕ್ಸ್ ಪ್ರೆಸ್ ವೇಯ ಉದ್ದಕ್ಕೂ ಇರುವ ನಗರಗಳಲ್ಲಿ ವೇಗ ಪಡೆದುಕೊಳ್ಳಲಿವೆ. ಉತ್ತರ ಪ್ರದೇಶದಲ್ಲಿಯ ಈ ಹೊಸ ಎಕ್ಸ್ ಪ್ರೆಸ್ ವೇ ಗಳು ಹೊಸ ಶಕ್ತಿಯನ್ನು ನೀಡಲಿವೆ ಮತ್ತು ಕೃಷಿಗೆ ಸಂಬಂಧಿಸಿದ ಕೈಗಾರಿಕೆಗಳಾದಂತಹ ಹಣ್ಣುಗಳು, ತರಕಾರಿಗಳು, ಕಾಳುಗಳು, ಪಶು ಸಂಗೋಪನೆ ಮತ್ತು ಔಷಧ ತಯಾರಿಕೆ, ವಿದ್ಯುತ್, ಜವಳಿ, ಕೈಮಗ್ಗ, ಲೋಹ,  ಪೀಠೋಪಕರಣ, ಪೆಟ್ರೋಕೆಮಿಕಲ್ ವಲಯ ಮತ್ತು ಇತರ  ಕ್ಷೇತ್ರದ  ಉದ್ಯಮಗಳಿಗೆ ಇವು ಹೊಸ ಆಕರ್ಷಣೆಯಾಗಲಿವೆ.

ಸ್ನೇಹಿತರೇ,

ಈ ಕೈಗಾರಿಕೆಗಳಿಗೆ ಅವಶ್ಯವಾದ ಮಾನವ ಸಂಪನ್ಮೂಲವನ್ನು ತಯಾರು ಮಾಡುವ ಕೆಲಸವೂ ಆರಂಭಗೊಂಡಿದೆ. ಐ.ಟಿ.ಐ.ಗಳು, ಇತರ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು, ವೈದ್ಯಕೀಯ ಸಂಸ್ಥೆಗಳು ಇತ್ಯಾದಿಗಳನ್ನು ಈ ನಗರಗಳಲ್ಲಿ ಸ್ಥಾಪಿಸಲಾಗುವುದು. ಕೃಷಿ ಇರಲಿ ಅಥವಾ ಕೈಗಾರಿಕೋದ್ಯಮ ಇರಲಿ ಉತ್ತರ ಪ್ರದೇಶದ ಯುವಜನತೆಗೆ ಸದ್ಯೋಭವಿಷ್ಯದಲ್ಲಿ ಹಲವಾರು ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ರಕ್ಷಣಾ ಕಾರಿಡಾರ್ ಇಲ್ಲಿ ಹೊಸ ಉದ್ಯೋಗಾವಕಾಶಗಳನ್ನು ತರಲಿದೆ. ಈ ಮೂಲಸೌಕರ್ಯ ಯೋಜನೆಗಳು ಸದ್ಯೋಭವಿಷ್ಯದಲ್ಲಿ ಇಲ್ಲಿಯ ಆರ್ಥಿಕತೆಗೆ ಹೊಸ ಎತ್ತರವನ್ನು ತರಲಿವೆ ಎಂಬ ಬಗ್ಗೆ ನನಗೆ ಖಚಿತ ವಿಶ್ವಾಸವಿದೆ.

ಸಹೋದರರೇ ಮತ್ತು ಸಹೋದರಿಯರೇ,

ವ್ಯಕ್ತಿ ಮನೆಯನ್ನು ಕಟ್ಟಿದಾಗ, ಅವನ ಮೊದಲ ಕಳವಳ ರಸ್ತೆಗಳದ್ದು; ಆತ ಮಣ್ಣನ್ನು ಪರೀಕ್ಷೆ ಮಾಡುತ್ತಾನೆ. ಮತ್ತು ಇತರ ಅಂಶಗಳನ್ನೂ ಗಮನಿಸುತ್ತಾನೆ. ಆದರೆ ಉತ್ತರ ಪ್ರದೇಶದಲ್ಲಿ ಬಹಳ ದೀರ್ಘ ಕಾಲ ಇದ್ದ ಸರಕಾರಗಳು ಬೃಹತ್ ಪ್ರಮಾಣದ ಕೈಗಾರಿಕೀಕರಣದ ಕನಸನ್ನು ತೋರಿಸುತ್ತಿದ್ದರು ಮತ್ತು ಹೇಳಿಕೆಗಳನ್ನು ಕೊಡುತ್ತಿದ್ದರು. ಆದರೆ ಅವರು ಸಂಪರ್ಕದ ಬಗ್ಗೆ ಚಿಂತಿಸುತ್ತಿರಲಿಲ್ಲ. ಇದರ ಪರಿಣಾಮವಾಗಿ ಹಲವು ಕೈಗಾರಿಕೆಗಳು ಅವಶ್ಯ ಸೌಲಭ್ಯಗಳಿಲ್ಲದೆ ಮುಚ್ಚಲ್ಪಟ್ಟವು. ದುರದೃಷ್ಟವಶಾತ್ ರಾಜವಂಶಗಳು ದಿಲ್ಲಿ ಮತ್ತು ಲಕ್ನೋದಲ್ಲಿ ಆಡಳಿತ ನಡೆಸುತ್ತಿದ್ದವು. ರಾಜವಂಶಗಳ ನಡುವಣ ಪಾಲುದಾರಿಕೆಯ ದೀರ್ಘ ವರ್ಷಗಳು ಉತ್ತರ ಪ್ರದೇಶದ ಆಶೋತ್ತರಗಳನ್ನು ನಿರ್ಲಕ್ಷ್ಯ ಮಾಡಿದವು. ಸಹೋದರರೇ ಮತ್ತು ಸಹೋದರಿಯರೇ, ಇಂತಹದೇ ಸಂಗತಿ ಸುಲ್ತಾನ್ ಪುರದ ಮಣ್ಣಿನ ಮಗ ಶ್ರೀಪತಿ ಮಿಶ್ರಾಜೀ ಅವರೊಂದಿಗೂ ನಡೆಯಿತು.  ತಳಮಟ್ಟದಲ್ಲಿ ಬಹಳ ವಿಸ್ತಾರವಾದ ಅನುಭವ ಹೊಂದಿದ್ದ ಮತ್ತು ಕಠಿಣ ದುಡಿಮೆಯೇ ಬಂಡವಾಳವಾಗಿದ್ದ ಅವರನ್ನು ಈ ಕುಟುಂಬಗಳ ವಂಶದ ಜನರು ಅವಮಾನ ಮಾಡಿದರು. ಉತ್ತರ ಪ್ರದೇಶದ ಜನತೆ ಇಂತಹ ಕರ್ಮಯೋಗಿಗಳಿಗೆ ಆದ ಅನ್ಯಾಯವನ್ನು ಎಂದಿಗೂ ಮರೆಯಲಾರರು.

ಸ್ನೇಹಿತರೇ,

ಇಂದು ಉತ್ತರ ಪ್ರದೇಶದಲ್ಲಿ ಎರಡು ಇಂಜಿನ್ ಗಳ ಸರಕಾರ  ಉತ್ತರ ಪ್ರದೇಶದ ಜನಸಾಮಾನ್ಯರು ಮತ್ತು ಅವರ ಕುಟುಂಬಗಳನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡುತ್ತಿದೆ. ಇಲ್ಲಿ ಸ್ಥಾಪನೆಯಾಗಿರುವ ಗಿರಣಿಗಳನ್ನು ಮತ್ತು ಕಾರ್ಖಾನೆಗಳನ್ನು ದಕ್ಷತೆಯಿಂದ ನಡೆಸುವುದಲ್ಲದೆ ಹೊಸ ಹೂಡಿಕೆ ಪರಿಸರವನ್ನು ಹೊಸ ಕಾರ್ಖಾನೆಗಳಿಗಾಗಿ ನಿರ್ಮಾಣ ಮಾಡಲಾಗುತ್ತಿದೆ. ಬಹಳ ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಯೋಜನೆಗಳನ್ನು ಬರೇ ಐದು ವರ್ಷಗಳ ಅವಧಿಗಾಗಿ ರೂಪಿಸದೆ ಈ ದಶಕದ ಆವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು ಸಮೃದ್ಧ ಉತ್ತರ ಪ್ರದೇಶಕ್ಕಾಗಿ ಮೂಲ ಸೌಕರ್ಯವನ್ನು ನಿರ್ಮಾಣ ಮಾಡಲಾಗುತ್ತಿದೆ. ಪೂರ್ವ ಮತ್ತು ಪಶ್ಚಿಮ ಸರಕು ಸಾಗಾಣಿಕೆಗಾಗಿಯೇ ಇರುವ ಕಾರಿಡಾರ್ ಗಳ ಉದ್ದೇಶ ಎಂದರೆ ರಾಜ್ಯವನ್ನು ಪೂರ್ವ ಮತ್ತು ಪಶ್ಚಿಮ ಕರಾವಳಿಯ ಜೊತೆ ಜೋಡಿಸುವುದಾಗಿದೆ. ಸರಕು ಸಾಗಾಟದ ರೈಲುಗಳ ಈ ವಿಶೇಷ ಮಾರ್ಗಗಳು ಉತ್ತರ ಪ್ರದೇಶದ ರೈತರ ಉತ್ಪನ್ನಗಳನ್ನು ಮತ್ತು ಕಾರ್ಖಾನೆಗಳಲ್ಲಿ ತಯಾರಾದ ವಸ್ತುಗಳನ್ನು ವಿಶ್ವ ಮಾರುಕಟ್ಟೆಗೆ ತಲುಪಿಸಲು ಸಹಾಯ ಮಾಡಲಿವೆ. ಇದರಿಂದ ನಮ್ಮ ರೈತರಿಗೆ, ವ್ಯಾಪಾರಿಗಳಿಗೆ, ವ್ಯಾಪಾರೋದ್ಯಮಿಗಳಿಗೆ ಮತ್ತು ಪ್ರತಿಯೊಬ್ಬ ಸಣ್ಣ ಹಾಗು ದೊಡ್ಡ ಸಹೋದ್ಯೋಗಿಗಳಿಗೆ ಪ್ರಯೋಜನವಾಗಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ಕೊರೊನಾ ಲಸಿಕಾಕರಣದಲ್ಲಿ ಅತ್ಯುತ್ತಮ ಕೆಲಸ ಮಾಡಿದುದಕ್ಕಾಗಿ ಉತ್ತರ ಪ್ರದೇಶದ ಜನರನ್ನು ಶ್ಲಾಘಿಸಲು ನಾನು ಇಚ್ಛಿಸುತ್ತೇನೆ. 14 ಕೋಟಿ ಲಸಿಕೆಗಳನ್ನು ಹಾಕುವ ಮೂಲಕ ಉತ್ತರ ಪ್ರದೇಶವು ದೇಶದಲ್ಲಿ  ಮುಂಚೂಣಿಯಲ್ಲಿರುವುದು ಮಾತ್ರವಲ್ಲ, ಜಗತ್ತಿನಲ್ಲಿಯೇ ಮುಂದಿದೆ. ಜಗತ್ತಿನ ಅನೇಕ ರಾಷ್ಟ್ರಗಳು ಇಷ್ಟೊಂದು ಜನಸಂಖ್ಯೆಯನ್ನು ಕೂಡಾ ಹೊಂದಿಲ್ಲ.

ಸ್ನೇಹಿತರೇ,

ಭಾರತದಲ್ಲಿ ತಯಾರಾದ ಲಸಿಕೆಗಳ ವಿರುದ್ಧ  ಮಾಡಲಾದ ಯಾವುದೇ ಅಪಪ್ರಚಾರದ ಬಗ್ಗೆ ಕಿವಿಗೊಡದಿರುವುದಕ್ಕಾಗಿ ನಾನು ಉತ್ತರ ಪ್ರದೆಶದ ಜನತೆಯನ್ನು ಶ್ಲಾಘಿಸುತ್ತೇನೆ. ಉತ್ತರ ಪ್ರದೇಶದ ಜನತೆ ಇಲ್ಲಿ ಜನರ ಆರೋಗ್ಯದ ಜೊತೆ ಆಟವಾಡುವ ಒಳಸಂಚನ್ನು ವಿಫಲ ಮಾಡಿದ್ದಾರೆ. ಮತ್ತು ಉತ್ತರ ಪ್ರದೇಶದ ಜನತೆ ಇದೇ ರೀತಿ ಮುಂದೆಯೂ ಅವರನ್ನು ಸೋಲಿಸುತ್ತಾರೆ.

ಸಹೋದರರೇ ಮತ್ತು ಸಹೋದರಿಯರೇ,

ಉತ್ತರ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮ ಸರಕಾರ ಹಗಲು ರಾತ್ರಿ ಕೆಲಸ ಮಾಡುತ್ತಿದೆ. ಸಂಪರ್ಕದ ಜೊತೆ ಉತ್ತರ ಪ್ರದೇಶದಲ್ಲಿ ಮೂಲ ಸೌಲಭ್ಯಗಳಿಗೆ ಗರಿಷ್ಟ ಆದ್ಯತೆಯನ್ನು ನೀಡಲಾಗುತ್ತಿದೆ. ಇದರಿಂದ ನಮ್ಮ ಸಹೋದರಿಯರಿಗೆ ಮತ್ತು ಮಹಿಳಾ ಶಕ್ತಿಗೆ ಹೆಚ್ಚಿನ ಪ್ರಯೋಜನವಾಗಿದೆ. ತಮ್ಮ ಹೆಸರಿನಲ್ಲಿ ಪಕ್ಕಾ ಮನೆ ಪಡೆಯುತ್ತಿರುವ ನಮ್ಮ ಬಡ ಸಹೋದರಿಯರು ಗುರುತಿಸುವಿಕೆಯನ್ನು ಪಡೆಯುತ್ತಿದ್ದಾರೆ ಮತ್ತು ಅವರು ಉರಿ ಬಿಸಿಲಿನಿಂದ, ಮಳೆ ಗಾಳಿಯಿಂದ ಮತ್ತು ಭಾರೀ ಶೀತದಿಂದ  ರಕ್ಷಣೆ ಪಡೆಯುತ್ತಿದ್ದಾರೆ. ವಿದ್ಯುತ್ ಮತ್ತು ಅನಿಲ ಸಂಪರ್ಕ ಇಲ್ಲದಿದ್ದರೆ ತಾಯಂದಿರು ಮತ್ತು ಸಹೋದರಿಯರು ಬಹಳ ತೊಂದರೆಗಳನ್ನು ಅನುಭವಿಸುತ್ತಾರೆ. ಸೌಭಾಗ್ಯ ಮತ್ತು ಉಜ್ವಲಾ ಯೋಜನೆಗಳ ಅಡಿಯಲ್ಲಿ ಒದಗಿಸಲಾದ ಉಚಿತ ವಿದ್ಯುತ್ ಮತ್ತು ಅನಿಲ ಸಂಪರ್ಕಗಳು ಈ ಸಮಸ್ಯೆಯನ್ನು ನಿಭಾಯಿಸಿವೆ. ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಮನೆ ಮತ್ತು ಶಾಲೆಗಳಲ್ಲಿ ಶೌಚಾಲಯ ಕೊರತೆಯಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಈಗ ಮನೆಗಳಲ್ಲಿ ಸಂತೋಷದ ವಾತಾವರಣವಿದೆ ಮತ್ತು ಹೆಣ್ಣು ಮಕ್ಕಳು ಶಾಲೆಗಳಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಕಲಿಯಬಹುದಾಗಿದೆ.

ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತ ತಾಯಂದಿರ ಮತ್ತು ಸಹೋದರಿಯರ ಎಷ್ಟೋ ತಲೆಮಾರುಗಳು ಗತಿಸಿ ಹೋಗಿವೆ. ಈಗ ಕೊಳವೆ ಮೂಲಕ ಪ್ರತೀ ಮನೆಗೂ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಬರೇ ಎರಡು ವರ್ಷಗಳಲ್ಲಿ ಉತ್ತರ ಪ್ರದೇಶ ಸರಕಾರವು ಸುಮಾರು 30 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಕೊಳವೆ ಮೂಲಕ ಕುಡಿಯುವ ನೀರನ್ನು ಒದಗಿಸಿದೆ.  ಮತ್ತು ಈ ವರ್ಷ ಎರಡು ಇಂಜಿನ್ ಗಳ ಸರಕಾರ ಲಕ್ಷಾಂತರ ಸಹೋದರಿಯರಿಗೆ ಅವರ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಬದ್ಧವಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಆರೋಗ್ಯ ಸವಲತ್ತುಗಳ ಗೈರು ಹಾಜರಿಯಲ್ಲಿ, ಯಾರಾದರೊಬ್ಬರು ಗಂಭೀರವಾಗಿ ಅಸ್ವಸ್ಥಗೊಂಡು ತೊಂದರೆ ಅನುಭವಿಸುತ್ತಾರೆಂದರೆ,  ಅದು ನಮ್ಮ ತಾಯಂದಿರು ಮತ್ತು ಸಹೋದರಿಯರು. ತಮ್ಮ ಮಕ್ಕಳ ಆರೋಗ್ಯದ ಖರ್ಚು ಮತ್ತು ಕುಟುಂಬದ ಖರ್ಚಿನ ಆತಂಕದ ಕಾರಣದಿಂದಾಗಿ  ಅವರು ತಮ್ಮ ಚಿಕಿತ್ಸೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಆಯುಷ್ಮಾನ್ ಭಾರತ್ ಯೋಜನೆಯಿಂದಾಗಿ, ಹೊಸ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಿಂದಾಗಿ ಬಹಳ ದೊಡ್ಡ ಪರಿಹಾರ, ಸಮಾಧಾನ  ಪಡೆದುಕೊಂಡಿದ್ದಾರೆ.

ಸ್ನೇಹಿತರೇ,

ಎರಡು ಇಂಜಿನ್ ಗಳ ಸರಕಾರದಿಂದ ಇಂತಹ ದುಪ್ಪಟ್ಟು ಪ್ರಯೋಜನಗಳು ಲಭಿಸುತ್ತಿರುವಾಗ ಕೆಲವು ಜನರು ತಮ್ಮ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ಅವರು ಅಸ್ವಸ್ಥರಾಗುವುದು ಬಹಳ ಸಹಜ. ತಮ್ಮ ಅಧಿಕಾರದಲ್ಲಿ ಯಶಸ್ಸನ್ನು ಸಾಧಿಸದೇ ಇರುವವರಿಗೆ  ಯೋಗೀ ಜೀ ಅವರ ಯಶಸ್ಸನ್ನು ನೋಡಲು ಮತ್ತು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸಹೋದರರೇ ಮತ್ತು ಸಹೋದರಿಯರೇ,

ಅವರ ಗದ್ದಲಗಳಿಗೆ ಗಮನ ಕೊಡದೆ ಸೇವೆಯ ಸ್ಫೂರ್ತಿಯೊಂದಿಗೆ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಕೊಳ್ಳುವುದು ನಮ್ಮ ಕರ್ತವ್ಯ. ಇದು ನಮ್ಮ ಕರ್ಮ ಗಂಗಾ ಮತ್ತು “ಸುಜಲಾಂ ಸುಫಲಾಂ” ವಾತಾವರಣವನ್ನು ನಿರ್ಮಾಣ ಮಾಡಲು ನಾವು ನಿರಂತರ ಶ್ರಮಿಸುತ್ತೇವೆ. ನಮಗೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳು ನಿರಂತರವಾಗಿ ಲಭಿಸುತ್ತವೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ಮತ್ತೊಮ್ಮೆ ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಗಾಗಿ ನಿಮಗೆ ಬಹಳ ಬಹಳ ಅಭಿನಂದನೆಗಳು.

ನನ್ನೊಂದಿಗೆ ಪೂರ್ಣ ಶಕ್ತಿಯೊಂದಿಗೆ ಹೇಳಿ

ಭಾರತ್ ಮಾತಾ ಕೀ ಜೈ

ಭಾರತ್ ಮಾತಾ ಕೀ ಜೈ

ಭಾರತ್ ಮಾತಾ ಕೀ ಜೈ

ಬಹಳ ಬಹಳ ಧನ್ಯವಾದಗಳು!

ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

***



(Release ID: 1773322) Visitor Counter : 168