ಹಣಕಾಸು ಸಚಿವಾಲಯ
ಕೇಂದ್ರ ಹಣಕಾಸು ಸಚಿವರು ಸೋಮವಾರ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ರಾಜ್ಯ ಹಣಕಾಸು ಸಚಿವರೊಂದಿಗೆ ಸಂವಾದ ನಡೆಸಲಿದ್ದಾರೆ
Posted On:
12 NOV 2021 4:25PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ರ ನವೆಂಬರ್ 15ರ ಸೋಮವಾರ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯ ಹಣಕಾಸು ಸಚಿವರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.
ಭಾರತ ಸರಕಾರದ ಸಂಬಂಧಪಟ್ಟ ಸಚಿವಾಲಯಗಳ ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ರಾಜ್ಯಗಳ ಹಣಕಾಸು ಕಾರ್ಯದರ್ಶಿಗಳು ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಬೆಳವಣಿಗೆ ಕುಂಠಿತವಾಗಿತ್ತು. ಆದಾಗ್ಯೂ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ನಂತರ, ಆರ್ಥಿಕತೆಯು ಚೇತರಿಕೆ ಕಾಣುತ್ತಿದ್ದು, ಪುನಶ್ಚೇತನದ ಆಶಾಭಾವ ಮೂಡಿದೆ. ಹಲವಾರು ಆರ್ಥಿಕತೆ ಸೂಚ್ಯಂಕಗಳು ಈಗ ಸಾಂಕ್ರಾಮಿಕದ ಪೂರ್ವದ ಸ್ಥಿತಿಗೆ ಹಿಂತಿರುಗಿವೆ. ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಭಾರತದ ಜಿಡಿಪಿ ಬೆಳವಣಿಗೆ ಅಂದಾಜನ್ನು ಕ್ರಮವಾಗಿ ಸುಮಾರು 9.5% ಮತ್ತು 8.3%ಗೆ ಹೆಚ್ಚಿಸಿದ್ದು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಗುರುತಿಸಿವೆ.
ಹೂಡಿಕೆದಾರರ ಭಾವನೆ ಉತ್ತಮವಾಗಿದ್ದರೂ, ಈಗಾಗಲೇ ಸೃಷ್ಟಿಯಾಗಿರುವ ವೇಗದ ಗತಿಯನ್ನು ಬಳಸಿಕೊಳ್ಳುವ ಅಗತ್ಯವಿದೆ. 2021-22ರ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳುಗಳು ಈಗಾಗಲೇ 64 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಒಳಹರಿವಿಗೆ ಸಾಕ್ಷಿಯಾಗಿವೆ. ಭಾರತ ಸರಕಾರವು (ಜಿಒಐ) ತನ್ನ ಕೇಂದ್ರ ಬಜೆಟ್ 2021-22ರಲ್ಲಿ ಕಾರ್ಯವಿಧಾನಗಳನ್ನು ಸುವ್ಯವಸ್ಥಿತಗೊಳಿಸುವುದು, ಅಡಚಣೆಗಳನ್ನು ನಿವಾರಿಸಿರುವುದು ಮತ್ತು ಅಗತ್ಯ ಪ್ರೋತ್ಸಾಹಕಗಳನ್ನು ಒದಗಿಸುವುದು ಮುಂತಾದ ಕ್ರಮಗಳ ಮೂಲಕ ವಿದೇಶಿ ಹೂಡಿಕೆ ಒಳಹರಿವಿಗೆ ಮತ್ತಷ್ಟು ಉತ್ತೇಜನ ನೀಡಿದೆ.
ರಾಷ್ಟ್ರಕ್ಕಾಗಿ ಸಹಯೋಗದ ಬೆಳವಣಿಗೆಯ ದೃಷ್ಟಿಕೋನವನ್ನು ಅನುಸರಿಸಲು ಬಯಸಿರುವ ಹಣಕಾಸು ಸಚಿವರು ದೇಶದಲ್ಲಿ ಹೂಡಿಕೆ ವಾತಾವರಣವನ್ನು ಮತ್ತಷ್ಟು ಉತ್ತಮಗೊಳಿಸುವ ಸಲುವಾಗಿ ಇದಕ್ಕೆ ಪೂರಕವಾದ ಮುಕ್ತ ವಿಚಾರ ವಿನಿಯಮವನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತಾರೆ. ಹೂಡಿಕೆ ಒಳಹರಿವಿನ ನೇತೃತ್ವದ ಪ್ರಗತಿಗೆ ನೀತಿ ಬೆಂಬಲ ಒದಗಿಸಲು ಮತ್ತು ಅದಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಉದ್ದೇಶಿತ ಸಂವಾದದ ಮೂಲಕ ಪ್ರಯತ್ನಿಸಲಾಗುವುದು. ಹೂಡಿಕೆ ಉತ್ತೇಜನಕ್ಕೆ ಸಕ್ರಿಯ ಕಾರ್ಯವಿಧಾನ ಅನುಸರಣೆ, ಸುಗಮ ವ್ಯಾಪಾರ ವಾತಾವರಣ ಸೃಷ್ಟಿಗೆ ತರಲಾದ ಸುಧಾರಣೆಗಳಿಂದ ಸಾಧಿಸಲಾದ ದಕ್ಷತೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ (ಯುಎಲ್‌ಬಿ) ಮಟ್ಟಗಳವರೆಗೆ ಅನುಮೋದನೆಗಳು ಹಾಗೂ ಅನುಮತಿಗಳನ್ನು ತ್ವರಿತಗೊಳಿಸಲು ಒತ್ತು ನೀಡುವ ಮೂಲಕ ಇದನ್ನು ಕಾರ್ಯಸಾಧುಗೊಳಿಸಲಾಗುವುದು.
ಸಂವಾದದ ವೇಳೆ, ರಾಜ್ಯಗಳು ಹೂಡಿಕೆಯ ವಾತಾವರಣವನ್ನು ಮತ್ತಷ್ಟು ಉತ್ತಮಗೊಳಿಸುವ ಬಗ್ಗೆ ತಮ್ಮ ಆಲೋಚನೆಗಳು ಮತ್ತು ದೃಷ್ಟಿಕೋನವನ್ನು ಹಂಚಿಕೊಳ್ಳಬಹುದು. ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗುವತ್ತ ಭಾರತವು ಸೂಕ್ತ ಪಥದಲ್ಲಿ ಸಾಗಲು ವ್ಯಾಪಕ ಒಮ್ಮತಕ್ಕೆ ಇದು ದಾರಿ ಮಾಡಬಹುದು.
***
(Release ID: 1771242)
Visitor Counter : 307