ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಡಿಮೆ ಲಸಿಕೆ ವ್ಯಾಪ್ತಿ ಹೊಂದಿರುವ ಜಿಲ್ಲೆಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ

ಜಿಲ್ಲಾ ಮಟ್ಟದಲ್ಲಿ ಕಡಿಮೆ ಲಸಿಕೆ ವ್ಯಾಪ್ತಿ ಹೊಂದಿರುವ ಜಾರ್ಖಂಡ್, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ  ಮತ್ತು ಇತರೆ ರಾಜ್ಯಗಳ 40ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು

ವರ್ಷಾಂತ್ಯದೊಳಗೆ ದೇಶವು ತನ್ನ ಲಸಿಕೆ ವ್ಯಾಪ್ತಿಯನ್ನು ಗರಿಷ್ಠ ಮಟ್ಟಕ್ಕೆ ವಿಸ್ತರಿಸುವುದನ್ನು ಖಾತರಿಪಡಿಸುವಂತೆ ಮತ್ತು ಹೊಸ ಆತ್ಮವಿಶ್ವಾಸ ಹಾಗೂ ನಂಬಿಕೆಯೊಂದಿಗೆ ಹೊಸ ವರ್ಷಕ್ಕೆ ಕಾಲಿಡುವುದನ್ನು ಖಚಿತಪಡಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಸಲಹೆ ನೀಡಿದರು

"ಈಗ ನಾವು ಲಸಿಕೆ ಅಭಿಯಾನವನ್ನು ಪ್ರತಿ ಮನೆಗೆ ಕೊಂಡೊಯ್ಯಲು ತಯಾರಿ ನಡೆಸುತ್ತಿದ್ದೇವೆ. 'ಹರ್ ಘರ್ ದಸ್ತಕ್' ಮಂತ್ರದೊಂದಿಗೆ ಪ್ರತಿ ಮನೆಯ ಬಾಗಿಲನ್ನು ತಟ್ಟಿರಿ, ಎರಡು ಡೋಸ್ ಲಸಿಕೆಯ ಸುರಕ್ಷತೆ ಪಡೆಯದ ಪ್ರತಿಯೊಂದು ಮನೆಯನ್ನೂ ಸಂಪರ್ಕಿಸಿರಿ"

"ಸ್ಥಳೀಯ ಮಟ್ಟದಲ್ಲಿನ ಅಂತರಗಳನ್ನು ಪರಿಹರಿಸುವ ಮೂಲಕ ಲಸಿಕೆಯ ಪೂರ್ಣ ಮಟ್ಟ ಸಾಧನೆಗಾಗಿ  ಇದುವರೆಗೂ ಪಡೆದ ಅನುಭವವನ್ನು ಗಮನದಲ್ಲಿಟ್ಟುಕೊಂಡು ಸೂಕ್ಷ್ಮ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಿ"

"ನಿಮ್ಮ ಜಿಲ್ಲೆಗಳನ್ನು ರಾಷ್ಟ್ರೀಯ ಸರಾಸರಿ ಸನಿಹಕ್ಕೆ ಕೊಂಡೊಯ್ಯಲು ನೀವು ನಿಮ್ಮ ಕೈಲಾದ ಗರಿಷ್ಠ ಪ್ರಯತ್ನಗಳನ್ನು ಮಾಡಬೇಕು"

"ನೀವು ಸ್ಥಳೀಯ ಧಾರ್ಮಿಕ ಮುಖಂಡರಿಂದ ಹೆಚ್ಚಿನ ಸಹಾಯವನ್ನು ಪಡೆಯ

Posted On: 03 NOV 2021 2:26PM by PIB Bengaluru

ಇಟಲಿ ಮತ್ತು ಗ್ಲ್ಯಾಸ್ಗೋ ಪ್ರವಾಸದಿಂದ ಹಿಂದಿರುಗಿದ ಕೂಡಲೇ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಡಿಮೆ ಲಸಿಕೆ ವ್ಯಾಪ್ತಿಯನ್ನು ಹೊಂದಿರುವ ಜಿಲ್ಲೆಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಕೋವಿಡ್‌ ಲಸಿಕೆಯ ಮೊದಲ ಡೋಸ್‌ನ ವ್ಯಾಪ್ತಿ 50% ಕ್ಕಿಂತ ಕಡಿಮೆ ಇರುವ ಹಾಗೂ ಎರಡನೇ ಡೋಸ್‌ನ ವ್ಯಾಪ್ತಿಯೂ ತೀರಾ ಕಡಿಮೆ ಇರುವ ಜಿಲ್ಲೆಗಳು ಸಭೆಯಲ್ಲಿ ಭಾಗಿಯಾದವು. ಜಾರ್ಖಂಡ್, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಮತ್ತು ಇತರ ರಾಜ್ಯಗಳ 40ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು.

ತಮ್ಮ ಜಿಲ್ಲೆಯಲ್ಲಿ ಕಡಿಮೆ ಲಸಿಕೆ ವ್ಯಾಪ್ತಿಗೆ ಕಾರಣವಾಗಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳು ವಿವರಣೆ ನೀಡಿದರು. ವದಂತಿಗಳಿಂದಾಗಿ ಲಸಿಕೆ ಪಡೆಯಲು ಹಿಂಜರಿಕೆ, ದುರ್ಗಮ ಪ್ರದೇಶ, ಇತ್ತೀಚಿನ ಹಲವು ತಿಂಗಳಲ್ಲಿ ನೆಲೆಸಿರುವ ಹವಾಮಾನ ಪರಿಸ್ಥಿತಿಳಿಂದ ಸೃಷ್ಟಿಯಾದ ಸವಾಲುಗಳು ಇತ್ಯಾದಿ ಸಮಸ್ಯೆಗಳನ್ನು ಅಧಿಕಾರಿಗಳು ಪ್ರಮುಖವಾಗಿ ಪ್ರಸ್ತಾಪಿಸಿದರು. ಸವಾಲುಗಳನ್ನು ಎದುರಿಸಲು ಇಲ್ಲಿಯವರೆಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆಯೂ ಅವರು ಪ್ರಧಾನಿಗೆ ವಿವರಣೆ ನೀಡಿದರು. ಜಿಲ್ಲಾಧಿಕಾರಿಗಳು ಲಸಿಕೆ ವ್ಯಾಪ್ತಿ ಹೆಚ್ಚಳಕ್ಕೆ ತಾವು ಅಳವಡಿಸಿಕೊಂಡ ಉತ್ತಮ ಕಾರ್ಯವಿಧಾನಗಳನ್ನೂ ಹಂಚಿಕೊಂಡರು.

ಲಸಿಕೆ ಪಡೆಯಲು ಹಿಂಜರಿಕೆ ಮತ್ತು ಅದರ ಹಿಂದಿನ ಸ್ಥಳೀಯ ಅಂಶಗಳ ಬಗ್ಗೆ ಸಂವಾದದಲ್ಲಿ ಪ್ರಧಾನಮಂತ್ರಿಯವರು ವಿವರವಾಗಿ ಚರ್ಚಿಸಿದರು. ಜಿಲ್ಲೆಗಳಲ್ಲಿ 100%  ಲಸಿಕೆ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಜಾರಿಗೆ ತರಬಹುದಾದ ವಿವಿಧ ಕ್ರಮಗಳ ಬಗ್ಗೆ ಅವರು ಚರ್ಚಿಸಿದರು. ಧಾರ್ಮಿಕ ಮತ್ತು ಸಮುದಾಯದ ಮುಖಂಡರ ಮೂಲಕ ಸಮುದಾಯ ಪಾಲ್ಗೊಳ್ಳುವಿಕೆಯನ್ನು ಗರಿಷ್ಠಗೊಳಿಸುವ ಬಗ್ಗೆ ಅವರು ಮಾತನಾಡಿದರು. ವರ್ಷಾಂತ್ಯದೊಳಗೆ ದೇಶವು ತನ್ನ ಲಸಿಕೆ ವ್ಯಾಪ್ತಿಯನ್ನು ಗರಿಷ್ಠ ಮಟ್ಟಕ್ಕೆ ವಿಸ್ತರಿಸುವಂತೆ ಮತ್ತು ಹೊಸ ಆತ್ಮವಿಶ್ವಾಸ ಹಾಗೂ ನಂಬಿಕೆಯೊಂದಿಗೆ ಹೊಸ ವರ್ಷಕ್ಕೆ ದೇಶವು ಪ್ರವೇಶಿಸುವಂತೆ ನೋಡಿಕೊಳ್ಳಲು ಎಲ್ಲಾ ಅಧಿಕಾರಿಗಳಿಗೆ ಅವರು ಸಲಹೆ ನೀಡಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು ದೇಶದಲ್ಲಿ ಲಸಿಕೆ ವ್ಯಾಪ್ತಿಯ ಅವಲೋಕನವನ್ನು ಒದಗಿಸಿದರು. ರಾಜ್ಯಗಳಲ್ಲಿ ಇನ್ನೂ ಬಳಸಬೇಕಿರುವ ಮತ್ತು ಲಭ್ಯವಿರುವ ಲಸಿಕೆ ಡೋಸ್‌ಗಳ ಬಗ್ಗೆಯೂ ಅವರು ವಿವರಣೆ ನೀಡಿದರು. ಲಸಿಕೆ ವ್ಯಾಪ್ತಿಯನ್ನು ಮತ್ತಷ್ಟು ಸುಧಾರಿಸಲು ರಾಜ್ಯಗಳಲ್ಲಿ ವಿಶೇಷ ಲಸಿಕೆ ಅಭಿಯಾನಗಳನ್ನು ನಡೆಸುತ್ತಿರುವ ಬಗ್ಗೆಯೂ ಕಾರ್ಯದರ್ಶಿಯವರು ಮಾತನಾಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ಸಭೆಯಲ್ಲಿ ಹಾಜರಿದ್ದ ಎಲ್ಲಾ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದರು. ಮುಖ್ಯಮಂತ್ರಿಗಳು ಗಮನ ವಹಿಸುವುದರಿಂದ ಜಿಲ್ಲೆಗಳು ಮತ್ತಷ್ಟು ದೃಢನಿಶ್ಚಯದಿಂದ ಕೆಲಸ ಮಾಡಲು ಪ್ರೋತ್ಸಾಹ ದೊರೆಯುತ್ತದೆ ಎಂದರು. ಶತಮಾನದಲ್ಲೇ ಅತಿದೊಡ್ಡದೆನಿಸಿದ ಸಾಂಕ್ರಾಮಿಕದ ವೇಳೆ ದೇಶವು ಅನೇಕ ಸವಾಲುಗಳನ್ನು ಎದುರಿಸಿದೆ ಎಂದು ಶ್ರೀ ಮೋದಿ ಹೇಳಿದರು. "ಕೊರೊನಾ ವಿರುದ್ಧದ ದೇಶದ ಹೋರಾಟದಲ್ಲಿ ಒಂದು ವಿಶೇಷವಾದ ವಿಚಾರವೆಂದರೆ ನಾವು ಹೊಸ ಪರಿಹಾರಗಳನ್ನು ಕಂಡುಕೊಂಡಿದ್ದೇವೆ ಮತ್ತು ವಿನೂತನ ವಿಧಾನಗಳನ್ನು ಪ್ರಯತ್ನಿಸಿದ್ದೇವೆ," ಎಂದು ಹೇಳಿದರು. ತಮ್ಮ ಜಿಲ್ಲೆಗಳಲ್ಲಿ ಲಸಿಕೆಯ ವ್ಯಾಪ್ತಿ ಹೆಚ್ಚಿಸಲು ವಿನೂತನ ಮಾರ್ಗಗಳನ್ನು ಅನುಸರಿಸುವ ನಿಟ್ಟಿನಲ್ಲಿ ಹೆಚ್ಚು ಕೆಲಸ ಮಾಡುವಂತೆ ಜಿಲ್ಲಾಡಳಿಗಳನ್ನು ಅವರು ಒತ್ತಾಯಿಸಿದರು. ಉತ್ತಮ ಸಾಧನೆ ತೋರಿರುವ ಜಿಲ್ಲೆಗಳಿಗೂ ಇದೇ ರೀತಿಯ ಸವಾಲುಗಳಿವೆ, ಆದರೆ ಅವುಗಳನ್ನು ದೃಢನಿಶ್ಚಯ ಮತ್ತು ನಾವಿನ್ಯತೆಯಿಂದ ಎದುರಿಸಲಾಗಿದೆ ಎಂದು ಅವರು ತಿಳಿಸಿದರು. ಸ್ಥಳೀಯ ಮಟ್ಟದಲ್ಲಿನ ಅಂತರಗಳನ್ನು ಪರಿಹರಿಸುವ ಮೂಲಕ ಲಸಿಕೆಯ ವ್ಯಾಪ್ತಿಯನ್ನು ಗರಿಷ್ಠಗೊಳಿಸಲು ಇದುವರೆಗೂ ಪಡೆದಿರುವ ಅನುಭವವನ್ನು ಗಮನದಲ್ಲಿಟ್ಟುಕೊಂಡು ಸೂಕ್ಷ್ಮ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅಗತ್ಯವಿದ್ದರೆ ಜಿಲ್ಲೆಯ ಪ್ರತಿ ಗ್ರಾಮ, ಪ್ರತಿ ಪಟ್ಟಣಕ್ಕೂ ವಿಭಿನ್ನ ಕಾರ್ಯತಂತ್ರಗಳನ್ನು ರೂಪಿಸುವಂತೆ ಪ್ರಧಾನಮಂತ್ರಿಯವರು ಜಿಲ್ಲೆಯ ಅಧಿಕಾರಿಗಳಿಗೆ ಸಲಹೆ ನೀಡಿದರು. ಆಯಾ ಪ್ರದೇಶದ ವಿಸ್ತಾರವನ್ನು ಆಧರಿಸ 20-25 ಜನರ ತಂಡವನ್ನು ರಚಿಸುವ ಮೂಲಕ ಇದನ್ನು ಮಾಡಬಹುದು ಎಂದು ಅವರು ತಿಳಿಸಿದರು. ಹೀಗೆ ರಚಿಸಲಾದ ತಂಡಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಇರುವಂತೆ ನೋಡಿಕೊಳ್ಳಿ ಎಂದು ಅವರು ಸಲಹೆ ನೀಡಿದರು. ಸ್ಥಳೀಯ ಗುರಿಗಳಿಗಾಗಿ ಪ್ರದೇಶವಾರು ವೇಳಾಪಟ್ಟಿಗಳನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ನೀಡಿದ ಪ್ರಧಾನಿ, "ನಿಮ್ಮ ಜಿಲ್ಲೆಗಳಲ್ಲಿನ ಲಸಿಕೆ ವ್ಯಾಪ್ತಿಯನ್ನು ರಾಷ್ಟ್ರೀಯ ಸರಾಸರಿ ಸನಿಹಕ್ಕೆ ಕೊಂಡೊಯ್ಯಲು ನೀವು ನಿಮ್ಮ ಕೈಲಾದ ಗರಷ್ಠ ಪ್ರಯತ್ನ ಮಾಡಬೇಕಾಗುತ್ತದೆ,ʼʼ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಲಸಿಕೆಯ ಬಗ್ಗೆ ವದಂತಿಗಳು ಮತ್ತು ತಪ್ಪು ತಿಳುವಳಿಕೆಯ ವಿಷಯವನ್ನು ಪ್ರಧಾನಿ ಪ್ರಸ್ತಾಪಿಸಿದರು. ಇದಕ್ಕೆ ಜಾಗೃತಿಯೊಂದೇ ಪರಿಹಾರ ಎಂದು ಸಲಹೆ ನೀಡಿದ ಅವರು, ಧಾರ್ಮಿಕ ಮುಖಂಡರ ಸಹಾಯವನ್ನು ಪಡೆಯುವಂತೆ ರಾಜ್ಯದ ಅಧಿಕಾರಿಗಳಿಗೆ ಸೂಚಿಸಿದರುಲಸಿಕೆ ಅಭಿಯಾನದ ಬಗ್ಗೆ ಧಾರ್ಮಿಕ ಮುಖಂಡರು ತುಂಬಾ ಉತ್ಸುಕರಾಗಿದ್ದಾರೆ ಎಂದು ಪ್ರಧಾನಿ ಉಲ್ಲೇಖಿಸಿದರು. ಕೆಲವು ದಿನಗಳ ಹಿಂದೆ ವ್ಯಾಟಿಕನ್‌ನಲ್ಲಿ ಪೋಪ್ ಫ್ರಾನ್ಸಿಸ್ ಅವರೊಂದಿಗಿನ ಭೇಟಿಯನ್ನು ಶ್ರೀ ಮೋದಿ ನೆನಪಿಸಿಕೊಂಡರು. ಲಸಿಕೆಗಳ ಬಗ್ಗೆ ಧಾರ್ಮಿಕ ಮುಖಂಡರ ಸಂದೇಶವನ್ನು ಜನರಿಗೆ ತಲುಪಿಸಲು ವಿಶೇಷ ಒತ್ತು ನೀಡುವಂತೆ ಅವರು ಒತ್ತಾಯಿಸಿದರು.

ಜನರನ್ನು ಲಸಿಕೆ ಕೇಂದ್ರಕ್ಕೆ ಕರೆದೊಯ್ಯಲು ಮತ್ತು ಸುರಕ್ಷಿತವಾಗಿ ಲಸಿಕೆ ಹಾಕಲು ಪ್ರಸ್ತುತ ವ್ಯವಸ್ಥೆಗಳನ್ನು ಮಾಡಲಾಗಿದೆ. ಆದರೆ ಹಂತದಿಂದ ಮುಂದಿನ ಹಂತಕ್ಕೆ ಹೋಗಬೇಕು, ಲಸಿಕೆಯನ್ನೇ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ವ್ಯವಸ್ಥೆಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮನೆ ಮನೆಗೆ ಲಸಿಕೆ ಸಂದೇಶವನ್ನು ಸಾರುವ 'ಹರ್ ಘರ್ ಟಿಕಾ, ಘರ್ ಘರ್ ಟಿಕಾಮಂತ್ರದೊಂದಿಗೆ ಪ್ರತಿ ಮನೆ ಬಾಗಿಲಿಗೂ ಉತ್ಸಾಹದಿಂದ ಲಸಿಕೆ ತಲುಪಿಸುವಂತೆ ಆರೋಗ್ಯ ಕಾರ್ಯಕರ್ತರನ್ನು ಅವರು ಒತ್ತಾಯಿಸಿದರು. ಕುಟುಂಬಗಳು ಎರಡೂ ಲಸಿಕೆಯನ್ನು ಪಡೆದಿರುವುದನ್ನು ಖಚಿತಪಡಿಸಿಕೊಳ್ಳಲು - 'ಹರ್ ಘರ್ ದಸ್ತಕ್' - ಪ್ರತಿ ಮನೆ ಬಾಗಿಲನ್ನು ತಟ್ಟುವ ಉತ್ಸಾಹ ಪ್ರದರ್ಶಿಸಬೇಕು ಅವರು ಕೇಳಿದರು. "ಈಗ ನಾವು ಲಸಿಕೆ ಅಭಿಯಾನವನ್ನು ಪ್ರತಿ ಮನೆಗೆ ಕೊಂಡೊಯ್ಯಲು ತಯಾರಿ ನಡೆಸುತ್ತಿದ್ದೇವೆ. 'ಹರ್ ಘರ್ ದಸ್ತಕ್' ಮಂತ್ರದೊಂದಿಗೆ, ಪ್ರತಿ ಬಾಗಿಲನ್ನು ತಟ್ಟಿರಿ, ಎರಡು ಡೋಸ್ ಲಸಿಕೆಯ ಸುರಕ್ಷತಾ ಕವಚ ಹೊಂದಿರದ ಪ್ರತಿಯೊಂದು ಮನೆಯನ್ನು ಸಂಪರ್ಕಿಸಿ" ಎಂದು ಅವರು ಕರೆ ನೀಡಿದರು.

ಪ್ರತಿಯೊಂದು ಮನೆಯ ಕದವನ್ನು ತಟ್ಟುವಾಗ, ಮೊದಲ ಮತ್ತು ಎರಡನೇ ಡೋಸ್ ಎರಡರ ಬಗ್ಗೆಯೂ ಸಮಾನವಾಗಿ ಗಮನ ಹರಿಸಬೇಕಿದೆ ಎಂದು ಪ್ರಧಾನಿ ಎಚ್ಚರಿಕೆ ನೀಡಿದರು. ಏಕೆಂದರೆ ಸೋಂಕಿನ ಪ್ರಕರಣಗಳು ಕಡಿಮೆಯಾಗಲು ಪ್ರಾರಂಭಿಸಿದಾಗಲೆಲ್ಲಾ, ಕೆಲವೊಮ್ಮೆ ಜನರಲ್ಲಿ ʻತುರ್ತುʼ ಭಾವನೆ ಕಡಿಮೆಯಾಗುತ್ತದೆ. ಲಸಿಕೆಗಳನ್ನು ಪಡೆಯುವ ʻತುರ್ತುʼ ಜನರಲ್ಲಿ ಕಡಿಮೆಯಾಗುತ್ತದೆ. "ನಿಗದಿತ ಸಮಯ ಮೀರಿದರೂ ಎರಡನೇ ಡೋಸ್ ಪಡೆಯದ ಜನರನ್ನು ಆದ್ಯತೆಯ ಆಧಾರದ ಮೇಲೆ ನೀವು ಸಂಪರ್ಕಿಸಬೇಕು... ಇದನ್ನು ನಿರ್ಲಕ್ಷಿಸುವುದರಿಂದ ವಿಶ್ವದ ಅನೇಕ ದೇಶಗಳು ಸಮಸ್ಯೆಗಳನ್ನು ಎದುರಿಸಿವೆ," ಎಂದು ಅವರು ಎಚ್ಚರಿಸಿದರು.

ಎಲ್ಲರಿಗೂ ಉಚಿತ ಲಸಿಕೆಯ ಅಭಿಯಾನದ ಅಡಿಯಲ್ಲಿ, ಭಾರತವು ಒಂದೇ ದಿನದಲ್ಲಿ ಸುಮಾರು 2.5 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಿದ ದಾಖಲೆಯನ್ನು ಸೃಷ್ಟಿಸಿದೆ. ಸಾಧನೆಯು ಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರು. ಉತ್ತಮ ಸಾಧನೆ ತೋರಿದ ಜಿಲ್ಲೆಗಳಲ್ಲಿರುವ  ತಮ್ಮ ಸಹೋದ್ಯೋಗಿಗಳಿಂದ ಅತ್ಯುತ್ತಮ ಕಾರ್ಯವಿಧಾನಗಳನ್ನು ಕಲಿಯುವಂತೆ ಅವರು ಕಡಿಮೆ ವ್ಯಾಪ್ತಿ ಹೊಂದಿರುವ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಸ್ಥಳೀಯ ಅಗತ್ಯ ಮತ್ತು ಪರಿಸರಗಳಿಗೆ ಸೂಕ್ತವಾದ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಿ ಹೇಳಿದರು.

***(Release ID: 1769212) Visitor Counter : 129