ಕಲ್ಲಿದ್ದಲು ಸಚಿವಾಲಯ

ವಿದ್ಯುತ್ ಸ್ಥಾವರಗಳಲ್ಲಿ 18 ದಿನಗಳಿಗೆ ಅಗತ್ಯವಿರುವಷ್ಟು ಕಲ್ಲಿದ್ದಲು ಸಂಗ್ರಹವನ್ನು ನವೆಂಬರ್ ಅಂತ್ಯದ ವೇಳೆಗೆ ಖಚಿತಪಡಿಸಿಕೊಳ್ಳುವಂತೆ ಕೋಲ್ ಇಂಡಿಯಾ ಲಿಮಿಟೆಡ್ ಗೆ ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಕರೆ


2024 ರ ವೇಳೆಗೆ ಒಂದು ಶತಕೋಟಿ ಟನ್ ಕಲ್ಲಿದ್ದಲು ಉತ್ಪಾದನೆ ಗುರಿ ಸಾಧಿಸಲು ಕಾರ್ಯತಂತ್ರ ರೂಪಿಸುವಂತೆ ಸೂಚನೆ

Posted On: 01 NOV 2021 4:17PM by PIB Bengaluru

ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕನಿಷ್ಠ 18 ದಿನಗಳವರೆಗೆ ಕಲ್ಲಿದ್ದಲು ಸಂಗ್ರಹವನ್ನು ನವೆಂಬರ್ ಅಂತ್ಯ ಇಲ್ಲವೆ ವರ್ಷಾಂತ್ಯದ ವೇಳೆಗೆ ಖಚಿತಪಡಿಸಿಕೊಳ್ಳುವಂತೆ ಕೋಲ್ ಇಂಡಿಯಾ [ಸಿ.ಐ.ಎಲ್] ಗೆ ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಕರೆ ನೀಡಿದ್ದಾರೆ.

ಸಿ.ಐ.ಎಲ್ ನ 47 ನೇ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ವರ್ಚುವಲ್ ಮೂಲಕ  ಮಾತನಾಡಿದ ಅವರು, ಬರುವ 2024 ರ ಅಂತ್ಯದ ವೇಳೆಗೆ ಒಂದು ಶತಕೋಟಿ ಟನ್ ಕಲ್ಲಿದ್ದಲು ಉತ್ಪಾದನೆಯ ಗುರಿ ಸಾಧಿಸಬೇಕು. ಈ ಗುರಿ ಸಾಧನೆಗೆ ಪರಿಷ್ಕೃತ ಗುರಿಗಳನ್ನು ಮತ್ತು ವಿವರವಾದ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವಂತೆ ಕಲ್ಲಿದ್ದಲು ಸಾರ್ವಜನಿಕ  ಸ್ವಾಮ್ಯದ ಸಿಎಂಡಿಗೆ ನಿರ್ದೇಶನ ನೀಡಿದರು.  
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲ್ಲಿದ್ದಲು ದರಗಳು ಮೂರು ಪಟ್ಟಿಗೂ ಹೆಚ್ಚು ಏರಿಕೆಯಾಗಿದ್ದು, ಇದರ ಪರಿಣಾಮ ಭಾರತಕ್ಕೆ ಆಮದಾಗುತ್ತಿರುವ ಕಲ್ಲಿದ್ದಲು ಪ್ರಮಾಣ ಶೇ 38 ರಷ್ಟು ಕಡಿಮೆಯಾಗಿದೆ.  ಇದೇ ಸಮಯಕ್ಕೆ ವಿದ್ಯುತ್ ಬೇಡಿಕೆ ಶೇ 24 ರಷ್ಟು ಹೆಚ್ಚಳವಾಗಿದ್ದು, ಇದು ದೃಢವಾದ ಆರ್ಥಿಕ ಬೆಳವಣಿಗೆಯನ್ನು ಸೂಚಿಸುತ್ತದೆ. ಇತ್ತೀಚೆಗೆ ದೇಶದ ಹಲವು ಕಲ್ಲಿದ್ದಲು ಗಣಿಗಳಿಗೆ ಭೇಟಿ ನೀಡಿದ್ದು,  ಸಿಐಎಲ್ ನಲ್ಲಿ ಅರ್ಪಣಾಮನೋಭಾವದ ಮಾನವ ಸಂಪನ್ಮೂಲ ಇರುವುದು ಉತ್ತಮ ಬೆಳವಣಿಗೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.  ಕೋವಿಡ್ – 19 ನಿಯಂತ್ರಣಕ್ಕಾಗಿ ಜಾರಿಗೊಳಿಸಲಾದ ಲಾಕ್ ಡೌನ್ ಸಂದರ್ಭದಲ್ಲಿ ದೇಶದ ಇಂಧನ ಭದ್ರತೆ ದೃಷ್ಟಿಯಿಂದ ಕಲ್ಲಿದ್ದಲು ಸೇನಾನಿಗಳು ಹಗಲಿರುಳು ಕೆಲಸ ಮಾಡಿದ್ದನ್ನು ಸಚಿವರು ನೆನಪಿಸಿಕೊಂಡರು.  
ಕಲ್ಲಿದ್ದಲು ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ರಾವ್ ಸಾಹೇಬ್ ಪಾಟೀಲ್ ದನ್ವೆ ಅವರು ಸಹ ಸಂಸ್ಥಾಪನಾ ದಿನ ಮತ್ತು ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ವರ್ಚುವಲ್ ಮೂಲಕ ಪಾಲ್ಗೊಂಡು ಮಾತನಾಡಿ, ದೇಶದಲ್ಲಿ ಲಭ್ಯವಿರುವ ಕಲ್ಲಿದ್ದಲು ನಿಕ್ಷೇಪಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಇತ್ತೀಚಿನ ದಿನಗಳಲ್ಲಿ ಸಿಐಎಲ್ ಅತ್ಯುತ್ತಮ ಸಾಮರ್ಥ್ಯ ತೋರಿದೆ ಮತ್ತು ಕೋವಿಡ್ – 19 ಸಾಂಕ್ರಾಮಿಕ ಸಂದರ್ಭದಲ್ಲಿ ಸಾಮಾಜಿಕ ಜವಾಬ್ದಾರಿ ವಲಯದಲ್ಲಿ ಉತ್ತಮ ಸೇವೆ ಸಲ್ಲಿಸಿದೆ ಎಂದು ಶ‍್ಲಾಘಿಸಿದರು.  
ಕಲ್ಲಿದ್ದಲು ಪೂರೈಕೆಯಲ್ಲಿನ ಇತ್ತೀಚಿನ ಕೊರತೆಯನ್ನು ನೀಗಿಸುವಲ್ಲಿ ಸಿಐಎಲ್ ಮತ್ತು ಅಂಗ ಸಂಸ್ಥೆಗಳು ನಿರ್ವಹಿಸಿದ ಪ್ರಮುಖ ಪಾತ್ರವನ್ನು ವಿಶೇಷವಾಗಿ ಪ್ರಸ್ತಾಪಿಸಿದರಲ್ಲದೇ ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಡಾ. ಅನಿಲ್ ಕುಮಾರ್ ಜೈನ್, ಸಿಐಎಲ್ ನಾಯಕತ್ವಕ್ಕೆ ಅಭಿನಂದನೆ ಸಲ್ಲಿಸಿದರು.   
ಕೊಲ್ಕತ್ತಾದ ಸಿಐಎಲ್ ಮುಖ್ಯ ಕಚೇರಿಯಲ್ಲಿ 47 ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಸಿ.ಎಂ.ಡಿ ಶ್ರೀ ಪ್ರಮೋದ್ ಅಗರ್ವಾಲ್ ಅವರು ವಿವಿಧ ಕಲ್ಲಿದ್ದಲು ಪಿ.ಎಸ್.ಯುಗಳಿಗೆ ಸುರಕ್ಷತೆ, ಪರಿಸರ ನಿರ್ವಹಣೆ, ಕಲ್ಲಿದ್ದಲು ಉತ್ಪಾದನೆ ಮತ್ತು ಆಫ್ ಟೇಕ್ ಸಿ.ಎಸ್.ಆರ್. ಉಪಕ್ರಮದಂತಹ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.   

   ***



(Release ID: 1768666) Visitor Counter : 211