ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮದ (ಯುಐಪಿ) ಅಡಿಯಲ್ಲಿ ʻನ್ಯೂಮೋಕೋಕಲ್ ಕಾಂಜುಗೇಟ್ ಲಸಿಕೆʼಯ(ಪಿಸಿವಿ) ರಾಷ್ಟ್ರವ್ಯಾಪಿ ವಿಸ್ತರಣೆಗೆ ಚಾಲನೆ ನೀಡಿದ ಡಾ. ಮನ್ಸುಖ್ ಮಾಂಡವಿಯಾ


ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ʻಪಿಸಿವಿʼ ಕುರಿತಾದ ಸಂವಹನ ಪ್ಯಾಕೇಜ್ (ಐಇಸಿ ಸಾಮಗ್ರಿ) ಬಿಡುಗಡೆ ಮಾಡಿದರು

"ದೇಶಾದ್ಯಂತ ಇದೇ ಮೊದಲ ಬಾರಿಗೆ ʻಪಿಸಿವಿʼ ಸಾರ್ವತ್ರಿಕ ಬಳಕೆಗೆ ಲಭ್ಯವಿವಾಗುತ್ತಿದೆ; ʻಪಿಸಿವಿʼಯು ನ್ಯುಮೋನಿಯಾದಿಂದಾಗಿ ಮಕ್ಕಳ ಮರಣವನ್ನು ಸುಮಾರು 60% ರಷ್ಟು ಕಡಿಮೆ ಮಾಡುತ್ತದೆ"

ಮಕ್ಕಳು ನಮ್ಮ ದೇಶದ ಭವಿಷ್ಯ ಮತ್ತು ಅವರಿಗೆ ಆರೋಗ್ಯಕರ ಜೀವನವನ್ನು ಒದಗಿಸುವುದು ನಮ್ಮ ಜವಾಬ್ದಾರಿ: ಡಾ. ಮನ್ಸುಖ್ ಮಾಂಡವಿಯಾ

Posted On: 29 OCT 2021 2:20PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್‌ಸುಖ್ ಮಾಂಡವಿಯಾ ಅವರು ಇಂದು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮದ (ಯುಐಪಿ) ಅಡಿಯಲ್ಲಿ ʻನ್ಯೂಮೋಕೋಕಲ್ ಕಾಂಜುಗೇಟ್ ಲಸಿಕೆʼಯ(ಪಿಸಿವಿ) ರಾಷ್ಟ್ರವ್ಯಾಪಿ ವಿಸ್ತರಣೆಗೆ ಚಾಲನೆ ನೀಡಿದರು. ವ್ಯಾಪಕ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವರು ಪಿಸಿವಿ ಕುರಿತ ಸಂವಹನ ಮತ್ತು ಜಾಗೃತಿ ಪ್ಯಾಕೇಜ್‌ ಬಿಡುಗಡೆ ಮಾಡಿದರು. ಈ ಸಂವಹನ ಪ್ಯಾಕೇಜ್‌ಗಳನ್ನು ಮುಂದಿನ ಬಳಕೆಗಾಗಿ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಲಾಗುವುದು.

ರಾಷ್ಟ್ರವ್ಯಾಪಿ ಜಾರಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ದೇಶದಲ್ಲಿ ಇದೇ ಮೊದಲ ಬಾರಿಗೆ ಸಾರ್ವತ್ರಿಕ ಬಳಕೆಗೆ ʻಪಿಸಿವಿʼ ಲಭ್ಯವಾಗಲಿದೆ ಎಂದು ಹೇಳಿದರು. ಜಾಗತಿಕವಾಗಿ ಮತ್ತು ಭಾರತದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿಗೆ ನ್ಯುಮೋನಿಯಾ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು. "ನ್ಯೂಮೋಕಾಕಸ್‌ನಿಂದ ಉಂಟಾಗುವ ನ್ಯುಮೋನಿಯಾವು ಮಕ್ಕಳಲ್ಲಿ ತೀವ್ರ ನ್ಯುಮೋನಿಯಾಕ್ಕೆ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಭಾರತದಲ್ಲಿನ ಮಕ್ಕಳಲ್ಲಿ ಸುಮಾರು 16 ಪ್ರತಿಶತ ಸಾವುಗಳು ನ್ಯುಮೋನಿಯಾದಿಂದ ಸಂಭವಿಸುತ್ತವೆ. ʻಪಿಸಿವಿʼ ನೀಡಿಕೆ ರಾಷ್ಟ್ರವ್ಯಾಪಿ ವಿಸ್ತರಣೆ ಮಾಡುವುದರಿಂದ ಮಕ್ಕಳ ಮರಣ ಪ್ರಮಾಣವನ್ನು ಸುಮಾರು ಶೇಕಡಾ 60ರಷ್ಟು ಕಡಿಮೆ ಮಾಡುತ್ತದೆ", ಎಂದು ಆರೋಗ್ಯ ಸಚಿವರು ಹೇಳಿದರು.

ಯಾವುದೇ ದೇಶದ ಬೆಳವಣಿಗೆ, ಉತ್ಪಾದಕತೆ ಮತ್ತು ಅಭಿವೃದ್ಧಿಯಲ್ಲಿ ಆರೋಗ್ಯವಂತ ಮಕ್ಕಳ ಮಹತ್ವವನ್ನು ಒತ್ತಿ ಹೇಳಿದ ಕೇಂದ್ರ ಸಚಿವರು, "ಮಕ್ಕಳು ನಮ್ಮ ದೇಶದ ಭವಿಷ್ಯಮತ್ತು ಅವರಿಗೆ ಆರೋಗ್ಯಕರ ಜೀವನವನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿಯವರು ಪ್ರಾರಂಭಿಸಿದ ʻಮಿಷನ್ ಇಂದ್ರಧನುಷ್ʼ ಈ ನಿಟ್ಟಿನಲ್ಲಿ ಅಂತಹ ಒಂದು ಪ್ರಯತ್ನವಾಗಿದೆ. ಕೋವಿಡ್-19 ಲಸಿಕೆ ಕಾರ್ಯಕ್ರಮಕ್ಕೆ ʻಮಾರ್ಗದರ್ಶಕʼವಾಗಿರುವ ಗೌರವಾನ್ವಿತ ಪ್ರಧಾನಮಂತ್ರಿಯವರ "ಸಬ್ಕೋ ವ್ಯಾಕ್ಸಿನ್‌, ಮುಫ್ತ್ ವ್ಯಾಕ್ಸಿನ್‌" ದೃಷ್ಟಿಕೋನವು ದೇಶಾದ್ಯಂತ ಅರ್ಹ ಜನರಿಗೆ ಕೋವಿಡ್-19 ಲಸಿಕೆಗಳ ಲಭ್ಯತೆಯನ್ನು ಖಚಿತಪಡಿಸಿದೆ,ʼʼ ಎಂದರು. ʻಪಿಸಿವಿʼಯನ್ನು ಪ್ರಾರಂಭಿಸುವುದರಿಂದ ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ ನಮ್ಮ ಮಕ್ಕಳ ಆರೋಗ್ಯಕರ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಮತ್ತಷ್ಟು ಖಚಿತಪಡಿಸಬಹುದು ಎಂದು ಅವರು ಹೇಳಿದರು.

ಈ ಜೀವ ರಕ್ಷಕ ಲಸಿಕೆಯನ್ನು ಹೊರತರಲು ಶ್ರಮಿಸಿದ ಎಲ್ಲಾ ರೋಗನಿರೋಧಕ ಸಿಬ್ಬಂದಿ, ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಅಧಿಕಾರಿಗಳನ್ನು ಕೇಂದ್ರ ಆರೋಗ್ಯ ಸಚಿವರು ಅಭಿನಂದಿಸಿದರು. ಲಸಿಕೆಗಾಗಿ ಸಂವಹನ ಪ್ಯಾಕೇಜ್ ಅನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ, ಡಾ. ಮನ್ಸುಖ್ ಮಾಂಡವಿಯಾ ಅವರು ಲಸಿಕೆಯ ಬಗ್ಗೆ ಜಾಗೃತಿ ಮೂಡಿಸುವುದು ಒಂದು ಪ್ರಮುಖ ಅಂಶವಾಗಿದೆ ಎಂದು ಸಲಹೆ ನೀಡಿದರು. ನಮ್ಮ ಮಕ್ಕಳ ಜೀವವನ್ನು ಉಳಿಸುವುದು ಲಸಿಕೆಯ ಉದ್ದೇಶವಾಗಿದೆ. ನಾವು ದೇಶಾದ್ಯಂತ ಯಶಸ್ವಿ ಜಾಗೃತಿ ಅಭಿಯಾನವನ್ನು ನಡೆಸಿದರೆ ಇದು ಸಾಧ್ಯವಾಗುತ್ತದೆ ಎಂದರು.

ಯುಐಪಿ ಕುರಿತು:

ʻಯೂನಿವರ್ಸಲ್ ಇಮ್ಯೂನೈಸೇಶನ್ ಪ್ರೋಗ್ರಾಂʼ(ಯುಐಪಿ) ಇದು ವಾರ್ಷಿಕವಾಗಿ ಸುಮಾರು 26.7 ದಶಲಕ್ಷ ನವಜಾತ ಶಿಶುಗಳು ಮತ್ತು 29 ದಶಲಕ್ಷ ಗರ್ಭಿಣಿ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಆರಂಭಿಸಲಾದ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

  • ʻಯುಐಪಿʼ ಅಡಿಯಲ್ಲಿ, ಲಸಿಕೆಯಿಂದ ತಡೆಗಟ್ಟಬಹುದಾದ 12 ರೋಗಗಳ ವಿರುದ್ಧ ಉಚಿತವಾಗಿ ರೋಗನಿರೋಧಕ ಲಸಿಕೆಯನ್ನು ಒದಗಿಸಲಾಗುತ್ತಿದೆ:
  • ರಾಷ್ಟ್ರೀಯವಾಗಿ - ಡೆಫ್ತೀರಿಯಾ, ಪೆರ್ಟುಸಿಸ್, ಟೆಟಾನಸ್‌, ಪೋಲಿಯೊ, ದಡಾರ, ರುಬೆಲ್ಲಾ, ಬಾಲ್ಯದ ಕ್ಷಯ, ರೋಟಾವೈರಸ್ ಅತಿಸಾರ, ಹೆಪಟೈಟಿಸ್ ಬಿ ಮತ್ತು ಮೆನಿಂಜೈಟಿಸ್, ಮೆನಿಂಜೈಟಿಸ್ ಮತ್ತು ಹೆಮೋಫಿಲಸ್ ಇನ್‌ಫ್ಲುಯೆಂಜಾ ಪ್ರಕಾರ ʻಬಿʼಯಿಂದ ಉಂಟಾಗುವ ನ್ಯುಮೋನಿಯಾ – ಈ 10 ರೋಗಗಳ ವಿರುದ್ಧ ಲಸಿಕೆ ನೀಡಲಾಗುತ್ತಿದೆ.
  • ನ್ಯೂಮೋಕೋಕಲ್ ನ್ಯುಮೋನಿಯಾ ಮತ್ತು ಜಪಾನೀಸ್ ಎನ್ಸೆಫಾಲಿಟಿಸ್ – ಈ 2 ರೋಗಗಳ ವಿರುದ್ಧ ಪಾರ್ಶ್ವ-ರಾಷ್ಟ್ರೀಯವಾಗಿ ಲಸಿಕೆಗಳನ್ನು ನೀಡಲಾಗುತ್ತಿದೆ; ಈ ಪೈಕಿ ನ್ಯೂಮೋಕೋಕಲ್ ಕಾಂಜುಗೇಟ್ ಲಸಿಕೆಯನ್ನು ಇಂದು ರಾಷ್ಟ್ರೀಯವಾಗಿ ವಿಸ್ತರಿಸಲಾಗಿದೆ, ಆದರೆ ʻಜೆಇʼ ಲಸಿಕೆಯನ್ನು ಸ್ಥಳೀಯವಾಗಿ ರೋಗ ಇರುವಂತಹ ಜಿಲ್ಲೆಗಳಲ್ಲಿ ಮಾತ್ರ ಒದಗಿಸಲಾಗುತ್ತದೆ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ. ವಿಕಾಸ್ ಶೀಲ್, ಸಚಿವಾಲಯದ ಜಂಟಿ ಕಾರ್ಯದರ್ಶಿ ಅಶೋಕ್ ಬಾಬು ಮತ್ತು ಆರೋಗ್ಯ ಸಚಿವಾಲಯ ಮತ್ತು ರಾಜ್ಯಗಳ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

***


(Release ID: 1767733) Visitor Counter : 1239