ಪ್ರಧಾನ ಮಂತ್ರಿಯವರ ಕಛೇರಿ

ಉತ್ತರ ಪ್ರದೇಶದ ಕುಶಿನಗರದ ಮಹಾಪರಿನಿರ್ವಾಣ ದೇವಾಲಯದಲ್ಲಿ ಅಭಿಧಮ್ಮ ದಿನದಂದು ಪ್ರಧಾನ ಮಂತ್ರಿ ಅವರ ಭಾಷಣ

Posted On: 20 OCT 2021 2:13PM by PIB Bengaluru

ನಮೋ ಬುದ್ಧಾಯ!

ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್ ಜೀ, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ ಜೀ, ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಜಿ. ಕಿಶನ್ ರೆಡ್ಡಿ ಜೀ, ಶ್ರೀ ಕಿರಣ್ ರಿಜಿಜು ಜೀ, ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಜೀ, ಕುಶಿನಗರಕ್ಕೆ ಆಗಮಿಸಿರುವ ಶ್ರೀಲಂಕಾ ಸರಕಾರದಲ್ಲಿ ಸಂಪುಟ ಸಚಿವರಾಗಿರುವ ಶ್ರೀ ನಮಲ್ ರಾಜಪಕ್ಷ ಮತ್ತು ಶ್ರೀಲಂಕಾದ ಅತ್ಯಂತ ಪೂಜ್ಯ ಗಣ್ಯರೇ, ನಮ್ಮ ಇತರ ಅತಿಥಿಗಳೇ, ಭಾರತದಲ್ಲಿರುವ  ಮ್ಯಾನ್ಮಾರ್, ವಿಯೆಟ್ನಾಂ, ಕಾಂಬೋಡಿಯಾ, ಥೈಲ್ಯಾಂಡ್, ಲಾವೋ ಪಿ.ಡಿ.ಆರ್., ಭೂತಾನ್ ಮತ್ತು ದಕ್ಷಿಣ ಕೊರಿಯಾಗಳ ಗೌರವಾನ್ವಿತ ರಾಯಭಾರಿಗಳೇ, ಶ್ರೀಲಂಕಾ, ಮಂಗೋಲಿಯಾ, ಜಪಾನ್, ಸಿಂಗಾಪುರ, ನೇಪಾಳ ಮತ್ತು ಇತರ ದೇಶಗಳ  ಹಿರಿಯ ರಾಜತಾಂತ್ರಿಕರೇ, ಎಲ್ಲಾ ಗೌರವಾನ್ವಿತ ಸನ್ಯಾಸಿಗಳೇ ಹಾಗು ಬುದ್ಧ ಭಗವಾನರ ಎಲ್ಲಾ ಅನುಯಾಯಿಗಳೇ!.

ಈ ಪವಿತ್ರ ದಿನವು ಅಶ್ವಿನ್ ಮಾಸದ ಪೂರ್ಣಿಮೆಯ ದಿನ, ಕುಶಿನಗರದ ಪವಿತ್ರ ಭೂಮಿ ಮತ್ತು ಪವಿತ್ರ ಅವಶೇಷಗಳ ರೂಪದಲ್ಲಿ ದೃಗ್ಗೋಚರವಾಗುತ್ತಿರುವ ಭಗವಾನ್ ಬುದ್ಧರ ಹಾಜರಾತಿ!. ಭಗವಾನ್ ಬುದ್ಧ ಅವರ ಆಶೀರ್ವಾದದಿಂದ ಇಂದು ಅನೇಕ ಪವಾಡ ಸದೃಶ ಸಮ್ಮೇಳನಗಳು,  ಕಾಕತಾಳೀಯ ಘಟನೆಗಳು ಜರಗುತ್ತಿವೆ. ಇಲ್ಲಿಗೆ ಬರುವುದಕ್ಕೆ ಮೊದಲು ನನಗೆ ಕುಶಿನಗರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸುವ ಸೌಭಾಗ್ಯ ಲಭಿಸಿತ್ತು. ಇದರಿಂದ ಜಗತ್ತಿನಾದ್ಯಂತದ ಕೋಟ್ಯಂತರ ಬುದ್ಧ ಅನುಯಾಯಿಗಳಿಗೆ ಇಲ್ಲಿಗೆ ಬರುವ ಅವಕಾಶ ಲಭಿಸಲಿದೆ ಮತ್ತು ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ಅವರ ಪ್ರಯಾಣ ಬಹಳ ಸುಲಭವಾಗಲಿದೆ. ಅತ್ಯಂತ ಪೂಜ್ಯ (ಬುದ್ಧಿಸ್ಟ್) ಒಕ್ಕೂಟ, ಗೌರವಾನ್ವಿತ ಸನ್ಯಾಸಿಗಳು ಮತ್ತು ನಮ್ಮ ಸ್ನೇಹಿತರು ಶ್ರೀಲಂಕಾದಿಂದ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಉದ್ಘಾಟನಾ ವಿಮಾನ ಯಾನದಲ್ಲಿ ಕುಶಿನಗರಕ್ಕೆ ಬಂದಿದ್ದಾರೆ. ನಿಮ್ಮ ಹಾಜರಾತಿಯು ಭಾರತ ಮತ್ತು ಶ್ರೀಲಂಕಾ ನಡುವಣ ಸಾವಿರಾರು ವರ್ಷಗಳ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ.

ಸ್ನೇಹಿತರೇ,

ಶ್ರೀ ಲಂಕಾದಲ್ಲಿ ಬುದ್ಧಿಸಂನ ಸಂದೇಶ ಮೊದಲು ಹೋದದ್ದು ಭಾರತದ ಸಾಮ್ರಾಟ ಅಶೋಕನ ಪುತ್ರ ಮಹೇಂದ್ರ ಮತ್ತು ಪುತ್ರಿ ಸಂಗಮಿತ್ರ ಎಂಬವರಿಂದ ಎಂಬುದು ನಮಗೆಲ್ಲರಿಗೂ ಗೊತ್ತು. ಈ ದಿನದಂದು ’ಅರಾಹಟ್ ಮಹಿಂದ” ಮರಳಿ ಬಂದರು ಮತ್ತು ಅವರ ತಂದೆಗೆ ಶ್ರೀಲಂಕಾವು ಬುದ್ಧ ಅವರ ಸಂದೇಶವನ್ನು ಬಹಳಷ್ಟು ಧನಾತ್ಮಕತೆಯೊಂದಿಗೆ ಅಂಗೀಕರಿಸಿತು ಎಂದು ಹೇಳಿದರು ಎಂದು ನಂಬಲಾಗುತ್ತದೆ. ಈ ಸುದ್ದಿಯು ಬುದ್ಧ ಅವರ ಸಂದೇಶವು ಇಡೀ ವಿಶ್ವಕ್ಕಾಗಿ ಇರುವುದು ಎಂಬ ನಂಬಿಕೆಯನ್ನು ಬಲಗೊಳಿಸಿದೆ ಮತ್ತು ಬುದ್ಧ ಅವರ ಧಮ್ಮವು ಮಾನವೀಯತೆಗಾಗಿ ಇರುವಂತಹದು ಎಂಬುದನ್ನು ದೃಢಪಡಿಸಿದೆ. ಆದುದರಿಂದ ಈ ದಿನ ನಮ್ಮ ಎಲ್ಲಾ ದೇಶಗಳ ಜೊತೆ  ನಮ್ಮ ಹಳೆಯ ಸಾಂಸ್ಕೃತಿಕ ಬಾಂಧವ್ಯಗಳನ್ನು ಪುನರುಜ್ಜೀವಗೊಳಿಸುವ ದಿನ. ಇಂದು ಭಗವಾನ್ ಬುದ್ಧ ಅವರ ಮಹಾ ಪರಿನಿರ್ವಾಣ ಸ್ಥಳದಲ್ಲಿ ನೀವೆಲ್ಲರೂ ಹಾಜರಿರುವುದಕ್ಕೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಶ್ರೀಲಂಕಾ ಮತ್ತು ಇತರ ಎಲ್ಲಾ ದೇಶಗಳ ನಮ್ಮ ಗೌರವಾನ್ವಿತ ಅತಿಥಿಗಳಿಗೆ ನಾನು ಹಾರ್ದಿಕ ಸ್ವಾಗತವನ್ನು ಬಯಸುತ್ತೇನೆ. ನಮ್ಮನ್ನು ಆಶೀರ್ವದಿಸಲು ಇಲ್ಲಿ ಹಾಜರಿರುವ ನಮ್ಮ ಪೂಜ್ಯ (ಬುದ್ಧಿಸ್ಟ್) ಮಹಾಒಕ್ಕೂಟಕ್ಕೆ  (ಸದಸ್ಯರು) ನಾನು ಶಿರ ಬಾಗುತ್ತೇನೆ. ನೀವು ಭಗವಾನ್ ಬುದ್ಧ ಅವರ ಪವಿತ್ರ ಅವಶೇಷಗಳನ್ನು  ನೋಡುವ ಅವಕಾಶವನ್ನು ನಮಗೆಲ್ಲರಿಗೂ ಒದಗಿಸಿದ್ದೀರಿ. ಕುಶಿನಗರದಲ್ಲಿಯ ಈ ಕಾರ್ಯಕ್ರಮದ ಬಳಿಕ ನೀವು ನನ್ನ ಸಂಸದೀಯ ಕ್ಷೇತ್ರವಾದ ವಾರಾಣಸಿಗೆ ಹೋಗಲಿದ್ದೀರಿ. ನಿಮ್ಮ ಭೇಟಿ ಅಲ್ಲಿಯೂ ಉತ್ತಮ ಅದೃಷ್ಟವನ್ನು ತರಲಿದೆ.

 

ಸ್ನೇಹಿತರೇ,

ನಾನಿಂದು ಅಂತಾರಾಷ್ಟ್ರೀಯ ಬುದ್ಧಿಸ್ಟ್ ಒಕ್ಕೂಟದ ಎಲ್ಲಾ ಸದಸ್ಯರನ್ನೂ ಅಭಿನಂದಿಸುತ್ತೇನೆ. ಆಧುನಿಕ ವಿಶ್ವದಲ್ಲಿ ಭಗವಾನ್ ಬುದ್ಧ ಅವರ ಸಂದೇಶಗಳನ್ನು ನೀವು ಹರಡುತ್ತಿರುವ ರೀತಿ ನಿಜವಾಗಿಯೂ ಶ್ಲಾಘನೀಯವಾದುದು. ಈ ಸಂದರ್ಭದಲ್ಲಿ, ನಾನು ನನ್ನ ಹಳೆಯ ಸಹೋದ್ಯೋಗಿ ಶ್ರೀ ಶಕ್ತಿ ಸಿನ್ಹಾ ಜೀ ಅವರನ್ನು ನೆನಪಿಸಿಕೊಳ್ಳುತ್ತೇನೆ. ಶಕ್ತಿ ಸಿನ್ಹಾ ಅವರು ಅಂತಾರಾಷ್ಟ್ರೀಯ ಬುದ್ಧಿಸ್ಟ್ ಒಕ್ಕೂಟದ ಡಿ.ಜಿ.ಯಾಗಿ ಕೆಲಸ ಮಾಡುತ್ತಿದ್ದರು, ಕೆಲವು ದಿನಗಳ ಹಿಂದೆ ಅವರು ತೀರಿಕೊಂಡರು. ಭಗವಾನ್ ಬುದ್ಧರಲ್ಲಿ ಅವರ ನಂಬಿಕೆ ಮತ್ತು ಅವರ ಭಕ್ತಿ, ಅರ್ಪಣಾ ಭಾವ ನಮ್ಮೆಲ್ಲರಿಗೂ ಪ್ರೇರಣೆ ನೀಡುವಂತಹದು.

ಸ್ನೇಹಿತರೇ,

ನಿಮಗೆಲ್ಲರಿಗೂ ತಿಳಿದಿರುವಂತೆ ಇಂದು ಇನ್ನೊಂದು ಸ್ಮರಣಾರ್ಹ ಸಂದರ್ಭ- ಭಗವಾನ್ ಬುದ್ಧ ಅವರು ಸ್ವರ್ಗದಿಂದ ಧರೆಗೆ ಮರಳಿದ ಸಂದರ್ಭ!. ಇದರಿಂದಾಗಿ ನಮ್ಮ ಸನ್ಯಾಸಿಗಳು, ಬೌದ್ಧ ಭಿಕ್ಷುಗಳು ಅವರ ಮೂರು ತಿಂಗಳ “ವರ್ಷವಾಸ”ವನ್ನು ಅಶ್ವಿನ್ ಪೂರ್ಣಿಮಾದಂದು ಪೂರ್ಣಗೊಳಿಸುತ್ತಾರೆ. “ವರ್ಷಾವಾಸ”ದ ಬಳಿಕ ಬೌದ್ಧ ಭಿಕ್ಷುಗಳಿಗೆ, ಸನ್ಯಾಸಿಗಳಿಗೆ “ಚಿವರ್” ದೇಣಿಗೆ ನೀಡುವ ಅವಕಾಶ ಇಂದು ನನಗೂ ಲಭಿಸಿದೆ. ಬುದ್ಧ ಅವರ ಈ ಸಾಕ್ಷಾತ್ಕಾರ ಬಹಳ ಅದ್ಭುತ. ಮತ್ತು ಅದು ಇಂತಹ ಸಂಪ್ರದಾಯಗಳಿಗೆ ಜನ್ಮ ನೀಡಿದೆ!. ಮಳೆಗಾಲದ ತಿಂಗಳುಗಳಲ್ಲಿ ನಮ್ಮ ಸುತ್ತಲಿನ ಪ್ರಕೃತಿ, ಮರಗಳು ಮತ್ತು ಗಿಡಗಳು  ಹೊಸ ಬದುಕನ್ನು ಆರಂಭ ಮಾಡುತ್ತವೆ. ಜೀವಿಗಳ ಕುರಿತಂತೆ ಅಹಿಂಸೆಯ ನಿರ್ಧಾರವನ್ನು ಬುದ್ಧ ಅವರು ಕೈಗೊಳ್ಳುವುದರ ಹಿಂದಿನ ಸಂದೇಶ ಮತ್ತು ಸಸ್ಯಗಳಲ್ಲಿಯೂ ದೇವರನ್ನು ಕಾಣುವ ನಂಬಿಕೆ, ನಮ್ಮ ಭೌದ್ಧ ಭಿಕ್ಷುಗಳು, ಸನ್ಯಾಸಿಗಳು ಅದನ್ನು ಅನುಸರಿಸುತ್ತಿರುವುದು ಬಹಳ ಸನಾತನವಾದುದು. ಸದಾ ಸಕ್ರಿಯರಾಗಿರುವ ಮತ್ತು ಚಲನಶೀಲರಾಗಿರುವ ಸನ್ಯಾಸಿಗಳು ಈ ಮೂರು ತಿಂಗಳು ವಿರಾಮವನ್ನು ತೆಗೆದುಕೊಳ್ಳುತ್ತಾರೆ, ಯಾಕೆಂದರೆ ಮೊಳಕೆಯೊಡೆಯುತ್ತಿರುವ ಯಾವುದೇ ಬೀಜ ಅಪ್ಪಚ್ಚಿಯಾಗಬಾರದು, ಹಾಳಾಗಬಾರದು ಮತ್ತು ಹೊಳೆಯುತ್ತಿರುವ ಪ್ರಕೃತಿಗೆ ಯಾವುದೇ ಅಡೆತಡೆಗಳು ಇರಬಾರದು ಎಂಬುದಕ್ಕಾಗಿ!. ಈ “ವರ್ಷಾವಾಸ” ಹೊರಗಿನ ಪ್ರಕೃತಿಯನ್ನು ಅರಳಿಸುವುದು ಮಾತ್ರವಲ್ಲ, ಅದು ನಮ್ಮೊಳಗಿನ ಪ್ರಕೃತಿಯನ್ನು ನವೀಕರಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.

ಸ್ನೇಹಿತರೇ,

ಧಮ್ಮದ ಸೂಚನೆ ಹೀಗಿದೆ:

यथापि रुचिरं पुप्फं, वण्णवन्तं सुगन्धकं। एवं सुभासिता वाचा, सफलाहोति कुब्बतो

ಅಂದರೆ ಉತ್ತಮ ಭಾಷಣ, ಮಾತು ಮತ್ತು ಉತ್ತಮ ಚಿಂತನೆಗಳನ್ನು ಅದೇ ಅರ್ಪಣಾಭಾವದಿಂದ, ಭಕ್ತಿಯಿಂದ ಅನುಷ್ಠಾನಗೊಳಿಸಿದರೆ ಅದರ ಪರಿಣಾಮವು ಹೂವಿನ ಪರಿಮಳದಂತಿರುತ್ತದೆ!. ಯಾಕೆಂದರೆ ಉತ್ತಮ ಗುಣನಡತೆ ಇಲ್ಲದ ಶ್ರೇಷ್ಠ ಮಾತುಗಳು ಪರಿಮಳ ಇಲ್ಲದ ಹೂವಿನಂತೆ.ಜಗತ್ತಿನಲ್ಲಿ ಎಲ್ಲೆಲ್ಲಿ ಬುದ್ಧ ಅವರ ಚಿಂತನೆಗಳು ನೈಜವಾಗಿ ಸಮೀಕರಿಸಲ್ಪಟ್ಟಿವೆಯೋ  ಅಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿಯೂ ಪ್ರಗತಿಗೆ ಹಾದಿಗಳು ಲಭಿಸುತ್ತವೆ. ಬುದ್ಧ ವಿಶ್ವವ್ಯಾಪಿಯಾಗಿದ್ದಾರೆ,  ಯಾಕೆಂದರೆ ಬುದ್ಧ ಅವರು ತಮ್ಮ ಬೋಧನೆಯನ್ನು ಆತ್ಮದಿಂದ ಆರಂಭಿಸುತ್ತಾರೆ. ಬುದ್ಧ ಅವರ ಬುದ್ಧತ್ವ ಎಂಬುದು ಜವಾಬ್ದಾರಿಯ ಉತ್ತುಂಗದ ಭಾವನೆ, ಅಂದರೆ ನಮ್ಮ ಸುತ್ತ, ನಮ್ಮ ಜಗತ್ತಿನಲ್ಲಿ ಏನು ನಡೆಯುತ್ತದೋ ಅದನ್ನು ನಾವು ನಮಗೆ ಅನ್ವಯಿಸಿಕೊಳ್ಳುತ್ತೇವೆ. ಅದರ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳುತ್ತೇವೆ. ಏನು ನಡೆಯುತ್ತಿದೆಯೋ ಅದಕ್ಕೆ ಧನಾತ್ಮಕ ಪ್ರಯತ್ನಗಳನ್ನು ಸೇರಿಸಿದರೆ, ನಾವು ಸೃಷ್ಟಿಗೆ ವೇಗವನ್ನು ತುಂಬುತ್ತೇವೆ. ಇಂದು, ಜಗತ್ತು ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಿರುವಾಗ, ವಾತಾವರಣ ಬದಲಾವಣೆಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸುತ್ತಿರುವಾಗ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಆದರೆ, ನಾವು ಬುದ್ಧ ಅವರ ಸಂದೇಶಗಳನ್ನು ಅಳವಡಿಸಿಕೊಂಡರೆ, ಆಗ “ಇದನ್ನು ಯಾರು ಮಾಡಬೇಕು” ಎಂಬುದಕ್ಕೆ ಬದಲು ಸ್ವಯಂ ಆಗಿ “ಏನು ಮಾಡಬೇಕು” ಎಂಬ ಅರಿವು ಮೂಡುತ್ತದೆ.

ಸ್ನೇಹಿತರೇ,

ಸಾವಿರಾರು ವರ್ಷಗಳ ಹಿಂದೆ ಭಗವಾನ್ ಬುದ್ಧ ಅವರು ಬದುಕಿದ್ದಾಗ, ಇಂದು ಇದ್ದಂತಹ ವ್ಯವಸ್ಥೆಗಳು ಇರಲಿಲ್ಲ. ಆದರೂ ಬುದ್ಧ ಅವರು ಜಗತ್ತಿನ ಕೋಟ್ಯಾಂತರ ಜನರನ್ನು ತಲುಪಿದರು ಮತ್ತು ಅವರ ಅಂತರಾತ್ಮದ ಜೊತೆ ಸಂಪರ್ಕಿಸಲ್ಪಟ್ಟರು. ನಾನಿದನ್ನು ವಿವಿಧ ದೇಶಗಳ ದೇವಾಲಯಗಳಲ್ಲಿ ಮತ್ತು ಬುದ್ಧಧರ್ಮದ ವಿಹಾರಗಳಲ್ಲಿ ಅನುಭವಿಸಿದ್ದೇನೆ. ಕಾಂಡಿಯಿಂದ ಕ್ಯೋಟೋವರೆಗೆ, ಹನೋಯಿಯಿಂದ ಹಂಬಂಟೋಟಾವರೆಗೆ ಭಗವಾನ್ ಬುದ್ಧ ತಮ್ಮ ಚಿಂತನೆಗಳು, ವಿಹಾರಗಳು, ಪವಿತ್ರ ಅವಶೇಷಗಳು ಮತ್ತು ಸಂಸ್ಕೃತಿಯ ಮೂಲಕ ಸರ್ವಾಂತರ್ಯಾಮಿಯಾಗಿದ್ದಾರೆ. ಶ್ರೀ ದಲಾದ ಮಾಲಿಗಾವಾ ಭೇಟಿಗಾಗಿ ನಾನು ಕಾಂಡಿಗೆ ಹೋಗುವ ಅದೃಷ್ಟವನ್ನು ಪಡೆದಿದ್ದೆ. ಸಿಂಗಾಪುರದಲ್ಲಿ ನಾನು ಅವರ ದಂತದ ಪವಿತ್ರ ಅವಶೇಷಗಳನ್ನು ನೋಡಿದ್ದೆ. ಮತ್ತು ಕ್ಯೋಟೋದಲ್ಲಿಯ ಕಿಂಕಾಕು –ಜೀ ಗೆ ಭೇಟಿ ನೀಡುವ ಅವಕಾಶವನ್ನು ಪಡೆದಿದ್ದೆ. ಅದೇ ರೀತಿ ನಾನು ಈಶಾನ್ಯ ದೇಶಗಳ ಭೌದ್ಧಗುರುಗಳಿಂದ ಆಶೀರ್ವಾದಗಳನ್ನು ಪಡೆಯುತ್ತಿದ್ದೇನೆ. ಅಲ್ಲಿ ಬೇರೆ ಬೇರೆ ದೇಶಗಳಿವೆ ಮತ್ತು ವಿವಿಧ ಸಂಸ್ಕೃತಿಗಳಿವೆ, ಆದರೆ ಮಾನವನ ಆತ್ಮದಲ್ಲಿ ನೆಲೆಸಿರುವ ಬುದ್ಧ ಪ್ರತಿಯೊಬ್ಬರನ್ನೂ ಜೋಡಿಸುತ್ತಿದ್ದಾರೆ. ಭಗವಾನ್ ಬುದ್ಧ ಅವರ ಬೋಧನೆಯ ಈ ಅಂಶವನ್ನು ಭಾರತವು ತನ್ನ ಅಭಿವೃದ್ಧಿ ಪಥದ ಭಾಗವನ್ನಾಗಿಸಿಕೊಂಡಿದೆ. ನಾವು ಜ್ಞಾನವನ್ನು ನಿರ್ಬಂಧಿಸುವುದರಲ್ಲಿ ನಂಬಿಕೆಯನ್ನು ಹೊಂದಿಲ್ಲ. ಶ್ರೇಷ್ಠರಾದವರ ಸಂದೇಶಗಳನ್ನು ಅಥವಾ ಚಿಂತನೆಗಳನ್ನು ನಾವು ನಿರ್ಬಂಧಿಸುವುದಿಲ್ಲ. ನಮ್ಮದೇನಿದೆಯೋ ಅದನ್ನು ನಾವು ಇಡೀಯ ಮಾನವತೆಯ ಜೊತೆ ಹಂಚಿಕೊಂಡಿದ್ದೇವೆ. ಅದರಿಂದಾಗಿ ಮಾನವ ಮೌಲ್ಯಗಳಾದ ಅಹಿಂಸೆ ಮತ್ತು ಅನುಕಂಪ, ಅನುಭೂತಿಗಳು ಈಗಲೂ ಭಾರತದ ಹೃದಯದಲ್ಲಿ ನೆಲೆ ನಿಂತಿವೆ. ಮತ್ತು ತ್ರಿವರ್ಣ ಧ್ವಜದ ಮೇಲೆ ಇರುವ ಬುದ್ಧ ಅವರ ಧಮ್ಮ ಚಕ್ರ ನಮಗೆ ಚಲನೆಯ ವೇಗವನ್ನು ಕೊಡುತ್ತಿದೆ.ಇಂದು ಕೂಡಾ, ಯಾರಾದರೂ ಭಾರತದ ಸಂಸತ್ತಿಗೆ ಹೋದರೆ “ಧರ್ಮ ಚಕ್ರ ಪ್ರವರ್ತನ” ಎಂಬ ಮಂತ್ರ (ಬುದ್ಧ ಅವರ ಮೊದಲ ಧರ್ಮೋಪದೇಶ.) ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ. 

ಸ್ನೇಹಿತರೇ,

ಭಾರತದಲ್ಲಿ ಬುದ್ಧತತ್ವದ ಅಥವಾ ಬೌದ್ಧ ಧರ್ಮದ  ಪ್ರಭಾವ ಪ್ರಧಾನವಾಗಿ ಪೂರ್ವ ಭಾಗದಲ್ಲಿ ಮಾತ್ರ ಇದೆ ಎಂದು ಸಾಮಾನ್ಯವಾಗಿ ನಂಬಲಾಗುತ್ತದೆ. ಆದರೆ ನಾವು ಇತಿಹಾಸದತ್ತ ಸೂಕ್ಷ್ಮವಾಗಿ ಗಮನಿಸಿದರೆ, ಬುದ್ಧ ಪೂರ್ವದ ಭಾಗದಲ್ಲಿ ಬೀರಿದ ಪ್ರಭಾವವನ್ನು ಪಶ್ಚಿಮ ಮತ್ತು ದಕ್ಷಿಣದಲ್ಲಿಯೂ ಬೀರಿರುವುದು ಕಂಡು ಬರುತ್ತದೆ. ಗುಜರಾತಿನ ವಡ್ನಾಗರ್, ಅದು ನನ್ನ ಜನ್ಮ ಸ್ಥಳ ಕೂಡಾ, ಹಿಂದೆ ಬುದ್ಧ ಧರ್ಮದ ಜೊತೆ ಬಹಳ ಹತ್ತಿರದ ಸಂಬಂಧವನ್ನು ಹೊಂದಿದ ಪ್ರಮುಖ ನಗರವಾಗಿತ್ತು. ಇದುವರೆಗೂ ನಾವು ಇದನ್ನು ಹ್ಯೂಯೆನ್ ಸಾಂಗ್ ನ ಹೇಳಿಕೆಗಳ ಮೂಲಕ ಈ ಇತಿಹಾಸವನ್ನು ತಿಳಿದುಕೊಂಡಿದ್ದೆವು, ಈಗ ಪ್ರಾಚೀನ ವಿಹಾರಗಳು ಮತ್ತು ಸ್ಥೂಪಗಳು ವಡ್ನಾಗರ್ ಉತ್ಖನನದಲ್ಲಿ ಕಂಡು ಬಂದಿವೆ. ಗುಜರಾತಿನ ಗತ ಇತಿಹಾಸವು ಬುದ್ಧ ಗಡಿಗಳನ್ನು ಮತ್ತು ದಿಕ್ಕುಗಳನ್ನು ಮೀರಿದವರು ಎಂಬುದಕ್ಕೆ ಸಾಕ್ಷಿ ಒದಗಿಸುತ್ತದೆ. ಗುಜರಾತಿನ ಮಣ್ಣಿನಲ್ಲಿ ಜನಿಸಿ ಮಹಾತ್ಮಾ ಗಾಂಧಿ ಅವರು ಬುದ್ಧ ಅವರ ಸತ್ಯ ಮತ್ತು ಅಹಿಂಸೆಯ  ಸಂದೇಶವನ್ನು ಪ್ರಸಾರಿಸಿದ ಆಧುನಿಕ ಕಾಲದ ದೃಷ್ಟಾರರು.

ಸ್ನೇಹಿತರೇ,

ಇಂದು ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಅಮೃತ ಮಹೋತ್ಸವದಲ್ಲಿ ನಾವು ನಮ್ಮ ಭವಿಷ್ಯಕ್ಕಾಗಿ ಮತ್ತು ಮಾನವತೆಯ ಭವಿಷ್ಯಕ್ಕಾಗಿ ಪ್ರತಿಜ್ಞೆಯನ್ನು ಕೈಗೊಳ್ಳಲಿದ್ದೇವೆ. ಈ ಚಿಂತನೆಗಳ ಕೇಂದ್ರ ಬಿಂದುವಿನಲ್ಲಿ ಭಗವಾನ್ ಬುದ್ಧ ಅವರ ಸಂದೇಶಗಳಿವೆ, ಅವುಗಳು ಏನು ಹೇಳುತ್ತವೆ ಎಂದರೆ-

अप्पमादो अमतपदं,

पमादो मच्चुनो पदं।

अप्पमत्ता न मीयन्ति,

ये पमत्ता यथा मता।

ನಿರ್ಲಕ್ಷ್ಯದ ಗೈರುಹಾಜರಿ ಮಕರಂದ, ಮತ್ತು  ನಿರ್ಲಕ್ಷ್ಯ  ಎಂದರೆ  ಸಾವು. ಆದುದರಿಂದ ಭಾರತವು ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ, ತನ್ನ ಜೊತೆ ಇಡೀ ಜಗತ್ತನ್ನು ಕರೆದೊಯ್ಯುತ್ತಿದೆ. ಭಗವಾನ್ ಬುದ್ಧ ಹೇಳಿದ್ದರು-

“अप्प दीपो भव”।

ಅಂದರೆ, ನೀವು ನಿಮ್ಮದೇ ಬೆಳಕನ್ನು ಹೊಂದಿರಿ. ಯಾವುದೇ ವ್ಯಕ್ತಿಯು ತಾನು ಸ್ವಯಂ ಪ್ರಕಾಶಿತನಾದರೆ, ಆತ ಜಗತ್ತನ್ನೂ ಬೆಳಗುತ್ತಾನೆ. ಇದು ಸ್ವಾವಲಂಬಿಯಾಗಲು ಭಾರತಕ್ಕೆ ಪ್ರೇರಣೆ. ಇದು ಜಗತ್ತಿನ ಪ್ರತೀ ದೇಶದ ಪ್ರಗತಿಯಲ್ಲಿ ಪಾಲ್ಗೊಳ್ಳಲು ನಮಗೆ ಸ್ಪೂರ್ತಿಯನ್ನು ಕೊಡುತ್ತದೆ. ಇಂದು ಭಾರತವು ಈ ಚಿಂತನೆಯನ್ನು “ಸಬ್ ಕಾ  ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್” ಎಂಬ ಮಂತ್ರದೊಂದಿಗೆ ಮುಂದಕ್ಕೆ ಕೊಂಡೊಯ್ಯುತ್ತಿದೆ. ನಾವೆಲ್ಲರೂ ಒಗ್ಗೂಡಿ ಭಗವಾನ್ ಬುದ್ಧರ ಈ ಬೋಧನೆಗಳನ್ನು ಅನುಸರಿಸುವ ಮೂಲಕ ಮಾನವತೆಯ ಕಲ್ಯಾಣಕ್ಕೆ ಹಾದಿಯನ್ನು ರೂಪಿಸುತ್ತೇವೆ ಎಂಬ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ.

ಈ ಆಶಯದೊಂದಿಗೆ, ನಿಮ್ಮೆಲ್ಲರಿಗೂ ಬಹಳ ಧನ್ಯವಾದಗಳು!

ಭವತು ಸಬ್ ಮಂಗಲಂ!

ನಮೋ ಬುದ್ಧಾಯ!!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1766209) Visitor Counter : 218