ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್.ಎಚ್.ಆರ್.ಸಿ.) 28 ನೇ ಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
Posted On:
12 OCT 2021 2:00PM by PIB Bengaluru
ನಮಸ್ಕಾರ್!
ನಿಮಗೆಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು!. ಕಾರ್ಯಕ್ರಮದಲ್ಲಿ ನನ್ನೊಂದಿಗೆ ಹಾಜರಿರುವ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜೀ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಶ್ರೀ ಅರುಣ್ ಕುಮಾರ್ ಮಿಶ್ರಾ ಜೀ, ಕೇಂದ್ರ ಗೃಹ ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀ ನಿತ್ಯಾನಂದ ರೈ ಜೀ, ಮಾನವ ಹಕ್ಕುಗಳ ಆಯೋಗದ ಗೌರವಾನ್ವಿತ ಸದಸ್ಯರೇ, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರೇ, ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯ ಮೂರ್ತಿಗಳೇ, ಸದಸ್ಯರೇ, ವಿಶ್ವ ಸಂಸ್ಥೆಯ ಏಜೆನ್ಸಿಗಳ ಪ್ರತಿನಿಧಿಗಳೇ, ನಾಗರಿಕ ಸಮಾಜದ ಜೊತೆ ಸಂಬಂಧ ಹೊಂದಿರುವ ಸಹೋದ್ಯೋಗಿಗಳೇ, ಇತರ ಗಣ್ಯರೇ, ಸಹೋದರರೇ ಮತ್ತು ಸಹೋದರಿಯರೇ!.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ 28 ನೇ ಸ್ಥಾಪನಾ ದಿನದ ಅಂಗವಾಗಿ ನಿಮಗೆಲ್ಲ ಹಾರ್ದಿಕ ಅಭಿನಂದನೆಗಳು. ನಮ್ಮ ದೇಶ ತನ್ನ ಸ್ವಾತಂತ್ರ್ಯದ ’ಅಮೃತ ಮಹೋತ್ಸವ” ಆಚರಿಸುತ್ತಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಸ್ವಾತಂತ್ರ್ಯಕ್ಕಾಗಿ ನಮ್ಮ ಚಳವಳಿ, ನಮ್ಮ ಇತಿಹಾಸವು, ಭಾರತಕ್ಕೆ ಮಾನವ ಹಕ್ಕುಗಳಿಗಾಗಿ ಇರುವ ಪ್ರೇರಣೆಯ ಮೂಲ ಮತ್ತು ಅದು ಮಾನವ ಹಕ್ಕುಗಳ ಮೌಲ್ಯಗಳ ಮೂಲ. ನಾವು ನಮ್ಮ ಹಕ್ಕುಗಳಿಗಾಗಿ ಶತಮಾನಗಳ ಕಾಲ ಹೋರಾಡಿದೆವು. ನಾವು ಒಂದು ರಾಷ್ಟ್ರವಾಗಿ ಮತ್ತು ಒಂದು ಸಮಾಜವಾಗಿ ಅನ್ಯಾಯ ಮತ್ತು ದೌರ್ಜನ್ಯಗಳನ್ನು ಪ್ರತಿರೋಧಿಸಿದೆವು. ಇಡೀ ಜಗತ್ತು ಮೊದಲನೆ ಮಹಾಯುದ್ಧದ ಹಿಂಸಾಚಾರದಲ್ಲಿ ಮುಳುಗಿದ್ದಾಗ, ಭಾರತವು ಜಗತ್ತಿಗೆ ಹಕ್ಕುಗಳು ಮತ್ತು ಅಹಿಂಸೆಯ ಪಥವನ್ನು ಸಲಹೆ ಮಾಡಿತು. ನಮ್ಮ ಪೂಜ್ಯ ಬಾಪು ಅವರು ನಮ್ಮ ದೇಶದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಮಾನವ ಹಕ್ಕುಗಳ ಮತ್ತು ಮಾನವ ಮೌಲ್ಯಗಳ ಸಂಕೇತವಾಗಿ ಕಾಣಲ್ಪಡುತ್ತಾರೆ. ನಾವು ಆ ಮೌಲ್ಯಗಳಿಗೆ ಅನುಗುಣವಾಗಿ ಬದುಕುವ ಪ್ರತಿಜ್ಞೆ ಕೈಗೊಂಡಿರುವುದು ಮತ್ತು ಅಮೃತ ಮಹೋತ್ಸವದ ಮೂಲಕ ಮಹಾತ್ಮಾ ಗಾಂಧಿ ಅವರ ಆದರ್ಶಗಳಿಗೆ ಬದ್ಧವಾಗಿ ಬದುಕಲು ಯತ್ನಿಸುತ್ತಿರುವುದು ನಮ್ಮ ಹೆಮ್ಮೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಭಾರತದ ಈ ತಾತ್ವಿಕತೆಯ ದೃಢ ನಿರ್ಧಾರಗಳಿಗೆ ಬೆಂಬಲ ಮತ್ತು ಶಕ್ತಿ ನೀಡುತ್ತಿರುವುದು ನನಗೆ ತೃಪ್ತಿಯ ಸಂಗತಿಯಾಗಿದೆ.
ಸ್ನೇಹಿತರೇ,
ಭಾರತವು ಅತ್ಯುನ್ನತ ಆದರ್ಶಗಳನ್ನು, ಮೌಲ್ಯಗಳನ್ನು ಮತ್ತು 'आत्मवत् सर्वभूतेषु' ಅಂದರೆ ಎಲ್ಲಾ ಮಾನವ ಜೀವಿಗಳನ್ನೂ ಒಂದೇ ಎಂದು ಭಾವಿಸುವ ಚಿಂತನೆಗಳನ್ನು ಅನುಸರಿಸುವ ದೇಶವಾಗಿದೆ. ಮಾನವ ಜೀವಿಗಳು ಮತ್ತು ಇತರ ಜೀವಿಗಳಲ್ಲಿ ವ್ಯತ್ಯಾಸ ಇಲ್ಲ. ನಾವು ಈ ಚಿಂತನೆಯನ್ನು ಅಂಗೀಕರಿಸಿದಾಗ ಎಲ್ಲಾ ರೀತಿಯ ವ್ಯತ್ಯಾಸಗಳು ಅಳಿದು ಹೋಗುತ್ತವೆ. ಎಲ್ಲಾ ವೈವಿಧ್ಯಗಳ ಹೊರತಾಗಿಯೂ ಭಾರತದ ಜನರು ಸಾವಿರಾರು ವರ್ಷಗಳಿಂದ ಈ ಚಿಂತನೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಆದುದರಿಂದ ಭಾರತವು ನೂರಾರು ವರ್ಷಗಳ ಗುಲಾಮಗಿರಿಯಿಂದ ಬಿಡುಗಡೆ ಹೊಂದಿದಾಗ, ನಮ್ಮ ಸಂವಿಧಾನ ಮಾಡಿದ ಸಮಾನತೆಯ ಘೋಷಣೆ ಮತ್ತು ಮೂಲಭೂತ ಹಕ್ಕುಗಳನ್ನು ನಿರಾಳವಾಗಿ ಅಂಗೀಕರಿಸಲಾಯಿತು.
ಸ್ನೇಹಿತರೇ,
ಸ್ವಾತಂತ್ರ್ಯದ ಬಳಿಕವೂ, ಭಾರತ ಸಮಾನತೆ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿ ನಿರಂತರವಾಗಿ ಜಗತ್ತಿಗೆ ಹೊಸ ದೃಷ್ಟಿ ಮತ್ತು ಹೊಸ ದೃಷ್ಟಿಕೋನವನ್ನು ನೀಡಿದೆ. ಕಳೆದ ಕೆಲವು ದಶಕಗಳಲ್ಲಿ ಜಗತ್ತು ಹಲವು ಸಂದರ್ಭಗಳಲ್ಲಿ ಭ್ರಮನಿರಸನಗೊಂಡಿದೆ ಮತ್ತು ಗೊಂದಲಕ್ಕೊಳಗಾಗಿದೆ. ಆದರೆ ಭಾರತ ಸ್ಥಿರವಾಗಿದೆ ಮತ್ತು ಮಾನವ ಹಕ್ಕುಗಳ ಬಗ್ಗೆ ಸಂವೇದನಾಶೀಲವಾಗಿದೆ. ಎಲ್ಲಾ ಸವಾಲುಗಳ ನಡುವೆಯೂ ನಮ್ಮ ನಂಬಿಕೆಯು, ಭಾರತವು ಮಾನವ ಹಕ್ಕುಗಳನ್ನು ಅತ್ಯುನ್ನತ ಸ್ಥಾನದಲ್ಲಿಟ್ಟು ಮಾದರಿ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮುಂದುವರಿಯಲಿದೆ ಎಂಬ ಭರವಸೆಯನ್ನು ನೀಡುತ್ತದೆ.
ಸ್ನೇಹಿತರೇ,
ಇಂದು ದೇಶವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಎಂಬ ಮೂಲ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ಈ ರೀತಿಯಲ್ಲಿ ಇದು ಮಾನವ ಹಕ್ಕುಗಳನ್ನು ಖಾತ್ರಿ ಪಡಿಸುವ ಮೂಲ ಸ್ಫೂರ್ತಿಯಾಗಿದೆ. ಸರಕಾರ ಒಂದು ಯೋಜನೆಯನ್ನು ಆರಂಭಿಸಿದರೆ ಅದರ ಪ್ರಯೋಜನಗಳು ಬರೇ ಆಯ್ದ ಕೆಲವರಿಗೆ ದಕ್ಕಿದರೆ, ಆಗ ಹಕ್ಕುಗಳ ವಿಷಯ ಖಂಡಿತವಾಗಿಯೂ ಮುಂದೆ ಬರುತ್ತದೆ. ಮತ್ತು ಅದಕ್ಕಾಗಿ ನಾವು ಪ್ರತೀ ಯೋಜನೆಯ ಪ್ರಯೋಜನಗಳು ಪ್ರತಿಯೊಬ್ಬರಿಗೂ ತಲುಪಬೇಕು ಎಂಬ ಗುರಿಯನ್ನಿಟ್ಟುಕೊಂಡು ಕಾರ್ಯತತ್ಪರರಾಗಿದ್ದೇವೆ. ಎಲ್ಲಿ ತಾರತಮ್ಯ ಇಲ್ಲವೋ ಮತ್ತು ಪಕ್ಷಪಾತ ಇರುವುದಿಲ್ಲವೋ ಮತ್ತು ಎಲ್ಲಿ ಪಾರದರ್ಶಕತೆ ಇರುವುದೋ, ಆಗ ಸಾಮಾನ್ಯ ಜನರ ಹಕ್ಕುಗಳೂ ಖಾತ್ರಿಪಡಿಸಲ್ಪಡುತ್ತವೆ. ಈ ವರ್ಷದ ಆಗಸ್ಟ್ 15 ರಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಾಗ ನಾನು ಮೂಲಸೌಕರ್ಯಗಳು ಶೇಖಡಾ 100 ರಷ್ಟು ಮಂದಿಗೆ ಲಭ್ಯವಾಗಬೇಕು ಎಂದು ಒತ್ತಿ ಹೇಳಿದ್ದೆ. ಶೇಕಡಾ ನೂರರಷ್ಟು ಸೌಲಭ್ಯಗಳ ಒದಗಣೆ ಆಂದೋಲನ ನಮ್ಮ ಅರುಣ್ ಮಿಶ್ರಾ ಜೀ ಹೇಳಿದಂತೆ ಅದು ತನ್ನ ಹಕ್ಕು ಎಂದು ಗೊತ್ತಿಲ್ಲದ, ಕೊನೆಯ ಸಾಲಿನಲ್ಲಿ ನಿಂತ ವ್ಯಕ್ತಿಗೂ ಹಕ್ಕುಗಳನ್ನು ಖಾತ್ರಿಪಡಿಸುವಂತಹದಾಗಿದೆ. ಅವರು ದೂರು ಕೊಡಲು ಬೇರೆಲ್ಲಿಗೂ ಹೋಗುವುದಿಲ್ಲ. ಆತ ಯಾವುದೇ ಆಯೋಗಕ್ಕೂ ಹೋಗುವುದಿಲ್ಲ. ಈಗ ಸರಕಾರ ಬಡವರ ಮನೆಗಳಿಗೆ ಹೋಗುತ್ತಿದೆ ಮತ್ತು ಸೌಲಭ್ಯಗಳನ್ನು ಅವರಿಗೆ ಒದಗಿಸುತ್ತಿದೆ.
ಸ್ನೇಹಿತರೇ
ದೇಶದ ಬಹಳ ದೊಡ್ಡ ಜನವರ್ಗ ಅದರ ಆವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಹೆಣಗುತ್ತಿರುವಾಗ ಅದರ ಹಕ್ಕುಗಳಿಗೆ ಮತ್ತು ಆಶೋತ್ತರಗಳಿಗಾಗಿ ಹೋರಾಡಲು ಅದಕ್ಕೆ ಸಮಯ, ಶಕ್ತಿ ಅಥವಾ ಇಚ್ಛಾಶಕ್ತಿ ಇರುವುದಿಲ್ಲ. ಮತ್ತು ನೀವು ಬಡವರ ಬದುಕನ್ನು ಬಹಳ ಹತ್ತಿರದಿಂದ ನೋಡಿದರೆ ಅವರ ಜೀವನ ಅವರ ಅವಶ್ಯಕತೆಗಳ ಸುತ್ತವೇ ಇರುತ್ತದೆ ಮತ್ತು ಅವರ ಜೀವನದ ಪ್ರತೀ ಸಮಯವೂ ಆ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ವಿನಿಯೋಗವಾಗುತ್ತಿರುತ್ತದೆ. ಮತ್ತು ಅವಶ್ಯಕತೆಗಳು ಈಡೇರದೇ ಇದ್ದಾಗ, ಅವರು ತಮ್ಮ ಹಕ್ಕುಗಳ ಬಗ್ಗೆ ಚಿಂತಿಸುವುದು ಸಾಧ್ಯವಿಲ್ಲ. ಅಮಿತ್ ಭಾಯಿ ಅವರು ಈಗಷ್ಟೇ ವಿವರವಾಗಿ ವಿವರಿಸಿದಂತೆ, ಬಡ ವ್ಯಕ್ತಿಯು ತನ್ನ ಮೂಲ ಆವಶ್ಯಕತೆಗಳಾದ ಶೌಚಾಲಯ, ವಿದ್ಯುತ್, ಆರೋಗ್ಯ ಸಂಬಂಧಿ ಕಳವಳ ಮತ್ತು ಚಿಕಿತ್ಸೆಗಾಗಿ ಹೋರಾಡುತ್ತಿರುವಾಗ ಯಾರಾದರೊಬ್ಬರು ಆತನ ಬಳಿ ಹೋಗಿ ಹಕ್ಕುಗಳ ಪಟ್ಟಿ ಮಾಡಿದರೆ, ಬಡ ವ್ಯಕ್ತಿ ಮೊದಲು ಈ ಹಕ್ಕುಗಳು ತನ್ನ ಆವಶ್ಯಕತೆಗಳನ್ನು ಈಡೇರಿಸಲು ಸಮರ್ಥವಾಗುತ್ತವೆಯೇ ಎಂದು ಕೇಳುತ್ತಾನೆ. ದಾಖಲೆಗಳಲ್ಲಿ ಹೇಳಲಾಗಿರುವ ಹಕ್ಕುಗಳನ್ನು ಬಡವರಿಗೆ ಒದಗಿಸುವುದಕ್ಕೆ ಮೊದಲು ಅವರ ಆವಶ್ಯಕತೆಗಳನ್ನು ಈಡೇರಿಸುವುದು ಮುಖ್ಯ. ಅವರ ಆವಶ್ಯಕತೆಗಳನ್ನು ಈಡೇರಿಸಿದಾಗ, ಬಡವರು ತಮ್ಮ ಶಕ್ತಿಯನ್ನು ಹಕ್ಕುಗಳತ್ತ ತಿರುಗಿಸಬಲ್ಲರು ಮತ್ತು ಅವುಗಳ ಬಗ್ಗೆ ಆಗ್ರಹವನ್ನು ಮಂಡಿಸಬಲ್ಲರು. ಆವಶ್ಯಕತೆಗಳು ಈಡೇರಿಸಲ್ಪಟ್ಟಾಗ, ಅಲ್ಲಿ ಹಕ್ಕುಗಳ ಬಗ್ಗೆ ಜಾಗೃತಿಯುಂಟಾಗುತ್ತದೆ ಮತ್ತು ಅದರ ಫಲವಾಗಿ ಆಶೋತ್ತರಗಳೂ ತ್ವರಿತವಾಗಿ ಬೆಳೆಯುತ್ತವೆ. ಈ ಆಶೋತ್ತರಗಳು ಬಲವಾಗಿದ್ದಷ್ಟೂ, ಬಡವರು ಆ ಬಡತನದಿಂದ ಹೊರಬರಲು ಶಕ್ತಿ ಪಡೆಯುತ್ತಾರೆ. ಬಡತನದ ವಿಷ ವರ್ತುಲದಿಂದ ಹೊರಬಂದ ಬಳಿಕ ಅವರು ತಮ್ಮ ಕನಸುಗಳನ್ನು ಈಡೇರಿಸುವತ್ತ ಸಾಗುತ್ತಾರೆ. ಆದುದರಿಂದ ಬಡವರ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿದಾಗ ಮತ್ತು ಅಲ್ಲಿ ವಿದ್ಯುತ್ ಹಾಗು ಅನಿಲ ಸಂಪರ್ಕ ಲಭ್ಯ ಇದ್ದಾಗ ಅದು ಆತನಿಗೆ ಲಭ್ಯ ಇರುವ ಯೋಜನೆ ಮಾತ್ರವಲ, ಅವು ಅವರ ಆವಶ್ಯಕತೆಗಳನ್ನು ಈಡೇರಿಸುವುದರ ಜೊತೆಗೆ ಅವರಲ್ಲಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತವೆ ಮತ್ತು ಅವರಲ್ಲಿ ಆಶೋತ್ತರಗಳನ್ನು ಚಿಗುರಿಸುತ್ತವೆ.
ಸ್ನೇಹಿತರೇ,
ಈ ಸೌಲಭ್ಯಗಳು ಬಡವರಿಗೆ ದೊರೆತು ಅವರ ಬದುಕಿನಲ್ಲಿ ಘನತೆಯನ್ನು ತರುತ್ತಿವೆ ಮಾತ್ರವಲ್ಲದೆ ಅವರ ಘನತೆಯನ್ನು ಹೆಚ್ಚಿಸುತ್ತಿವೆ. ಒಂದು ಕಾಲದಲ್ಲಿ ಬಹಿರ್ದೆಸೆಗೆ ಹೋಗುತ್ತಿದ್ದವರಿಗೆ ಶೌಚಾಲಯ ದೊರೆತರೆ ಅವರಿಗೆ ಘನತೆ ದೊರೆತಂತಾಗುತ್ತದೆ. ಬ್ಯಾಂಕುಗಳಿಗೆ ಹೋಗಲು ಧೈರ್ಯ ಮೈಗೂಡಿಸಿಕೊಳ್ಳಲು ಸಾಧ್ಯವಾಗದ ಬಡವರು ಜನ ಧನ ಖಾತೆ ತೆರೆದಾಗ ಅವರಿಗೆ ಪ್ರೋತ್ಸಾಹ ಸಿಗುತ್ತದೆ, ಅವರ ಘನತೆ ಹೆಚ್ಚುತ್ತದೆ. ಡೆಬಿಟ್ ಕಾರ್ಡಿನ ಬಗ್ಗೆ ಯೋಚನೆ ಕೂಡಾ ಮಾಡಲಾರದ ಬಡವರು ರುಪೇ ಕಾರ್ಡ್ ಪಡೆದಾಗ, ಆ ರುಪೇ ಕಾರ್ಡ್ ಅವರ ಕಿಸೆಯಲ್ಲಿ ಇದ್ದಾಗ, ಅವರ ಘನತೆ ಹೆಚ್ಚುತ್ತದೆ. ಒಂದು ಕಾಲದಲ್ಲಿ ಅನಿಲ ಸಂಪರ್ಕಕ್ಕಾಗಿ ಶಿಫಾರಸುಗಳಿಗೆ ಅವಲಂಬಿತರಾಗಿದ್ದ ಬಡವರು, ತಮ್ಮ ಮನೆಗೆ ಉಜ್ವಲಾ ಸಂಪರ್ಕ ಪಡೆದಾಗ ಅವರ ಘನತೆ ಹೆಚ್ಚುತ್ತಾ ಹೋಗುತ್ತದೆ. ಹಲವಾರು ತಲೆಮಾರುಗಳ ಕಾಲ ಆಸ್ತಿಯ ಹಕ್ಕು ಪಡೆದಿರದ ಮಹಿಳೆ, ಸರಕಾರಿ ವಸತಿ ಯೋಜನೆ ಅಡಿಯಲ್ಲಿ ತನ್ನ ಹೆಸರಿನಲ್ಲಿ ಮನೆ ಹೊಂದಿದಾಗ ಆ ತಾಯಂದಿರ ಮತ್ತು ಸಹೋದರಿಯರ ಘನತೆ ಹೆಚ್ಚುತ್ತದೆ.
ಸ್ನೇಹಿತರೇ,
ಕಳೆದ ಕೆಲವು ವರ್ಷಗಳಲ್ಲಿ, ದೇಶವು ವಿವಿಧ ಮಟ್ಟಗಳಲ್ಲಿ, ವಿವಿಧ ವಿಭಾಗಗಳಲ್ಲಿ ನಡೆಯುತ್ತಿದ್ದ ಅನ್ಯಾಯವನ್ನು ಕೊನೆಗೊಳಿಸಲು ಪ್ರಯತ್ನಗಳನ್ನು ಮಾಡಿದೆ. ದಶಕಗಳಿಂದ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ವಿರುದ್ಧ ಕಾನೂನಿಗಾಗಿ ಒತ್ತಾಯಿಸುತ್ತಿದ್ದರು. ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿ ಮಾಡುವ ಮೂಲಕ ಮುಸ್ಲಿಂ ಮಹಿಳೆಯರಿಗೆ ನಾವು ಹೊಸ ಹಕ್ಕನ್ನು ನೀಡಿದ್ದೇವೆ. ಮುಸ್ಲಿಂ ಮಹಿಳೆಯರಿಗೆ ಹಜ್ ಸಂದರ್ಭದಲ್ಲಿ ವಿಧಿಸಲಾಗಿದ್ದ ಮಹ್ರಾಂ ನಿಬಂಧನೆಯಿಂದ (ಇಸ್ಲಾಮಿಕ್ ಕಾನೂನಿನನ್ವಯ ಮಹಿಳೆಯ ಜೊತೆ ಕಡ್ಡಾಯವಾಗಿ ಗಂಡ ಅಥವಾ ಪುರುಷ ಸಂಬಂಧಿ ಹೋಗಬೇಕು ಎಂಬ ಕರಾರು) ಅವರನ್ನು ನಮ್ಮ ಸರಕಾರ ಮುಕ್ತ ಮಾಡಿದೆ.
ಸ್ನೇಹಿತರೇ,
ಸ್ವಾತಂತ್ರ್ಯದ ಹಲವು ದಶಕಗಳ ಬಳಿಕವೂ ಭಾರತೀಯ ಮಹಿಳೆಯ ಎದುರು ಬಹಳ ಅಡೆ ತಡೆಗಳಿವೆ. ಹಲವು ವಲಯಗಳಲ್ಲಿ ಅವರ ಪ್ರವೇಶ ನಿಷೇಧಿಸಲ್ಪಟ್ಟಿದ್ದರಿಂದ ಮಹಿಳೆಯರಿಗೆ ಅನ್ಯಾಯವಾಗಿದೆ. ಇಂದು ಹಲವು ವಲಯಗಳು ಮಹಿಳೆಯರಿಗೆ ತೆರೆಯಲ್ಪಟ್ಟಿವೆ. ಮತ್ತು ಅವರು ದಿನದ 24 ಗಂಟೆಯೂ ಸುರಕ್ಷಿತವಾಗಿ ಕೆಲಸ ಮಾಡುವುದನ್ನು ಖಾತ್ರಿಪಡಿಸಲಾಗುತ್ತಿದೆ. ಭಾರತವು ಉದ್ಯೋಗಸ್ಥ ಮಹಿಳೆಗೆ 26 ವಾರಗಳ ಸಂಬಳ ಸಹಿತ ರಜೆಯನ್ನು ನೀಡುತ್ತಿದೆ. ಹಲವಾರು ಅಭಿವೃದ್ಧಿ ಹೊಂದಿದ ದೇಶಗಳು ಇದರ ಅನುಷ್ಠಾನಕ್ಕೆ ಹೆಣಗಾಡುತ್ತಿವೆ.
ಸ್ನೇಹಿತರೇ,
ಮಹಿಳೆಗೆ 26 ವಾರಗಳ ರಜೆ ದೊರೆತರೆ, ಅದು ನವಜಾತ ಶಿಶುವಿನ ಹಕ್ಕನ್ನು ರಕ್ಷಿಸುತ್ತದೆ. ಆ ಮಗುವಿಗೆ ತಾಯಿಯ ಜೊತೆ ಬದುಕನ್ನು ಕಳೆಯುವ ಹಕ್ಕು ಇದೆ ಮತ್ತು ಆ ಮಗು ಆ ಹಕ್ಕನ್ನು ಪಡೆಯುತ್ತದೆ. ಆದರೆ ಈ ಎಲ್ಲಾ ವಿಷಯಗಳೂ ನಮ್ಮ ಕಾನೂನು ಪುಸ್ತಕಗಳಲ್ಲಿ ಇದುವರೆಗೆ ಉಲ್ಲೇಖಗೊಂಡದ್ದು ಕಾಣುವುದಿಲ್ಲ.
ಸ್ನೇಹಿತರೇ,
ಹೆಣ್ಣು ಮಕ್ಕಳ ರಕ್ಷಣೆಗೆ ಸಂಬಂಧಿಸಿ ಹಲವಾರು ಕಾನೂನು ಕ್ರಮಗಳನ್ನು ಕಳೆದ ಕೆಲವು ವರ್ಷಗಳಲ್ಲಿ ಕೈಗೊಳ್ಳಲಾಗಿದೆ. ದೇಶದ 700 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಒನ್ ಸ್ಟಾಪ್ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ದೇಶಾದ್ಯಂತ ಅಲ್ಲಿ ಮಹಿಳೆಯರಿಗೆ ಒಂದೇ ಕಡೆಯಲ್ಲಿ ವೈದ್ಯಕೀಯ ಸಹಾಯ, ಪೊಲೀಸ್ ರಕ್ಷಣೆ, ಮಾನಸಿಕ ಸಾಮಾಜಿಕ ಕೌನ್ಸೆಲಿಂಗ್, ಕಾನೂನು ನೆರವು ಮತ್ತು ತಾತ್ಕಾಲಿಕ ಆಶ್ರಯವನ್ನು ಒದಗಿಸುತ್ತಿವೆ. ಮಹಿಳೆಯರ ವಿರುದ್ಧದ ಅಪರಾಧಗಳ ತ್ವರಿತ ತನಿಖೆಗಾಗಿ ದೇಶಾದ್ಯಂತ 650 ಕ್ಕೂ ಅಧಿಕ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಅತ್ಯಾಚಾರದಂತಹ ಹೀನ ಕೃತ್ಯಗಳಿಗೆ ಮರಣದಂಡನೆಯನ್ನು ವಿಧಿಸುವ ಪ್ರಸ್ತಾವನೆಯನ್ನೂ ಒದಗಿಸಲಾಗಿದೆ. ವೈದ್ಯಕೀಯ ಗರ್ಭಪಾತ ಕಾಯ್ದೆಯನ್ನು ತಿದ್ದುಪಡಿ ಮಾಡಿ ಗರ್ಭಪಾತದ ಸ್ವಾತಂತ್ರ್ಯವನ್ನು ಮಹಿಳೆಯರಿಗೆ ಒದಗಿಸಲಾಗಿದೆ. ಸುರಕ್ಷಿತ ಮತ್ತು ಕಾನೂನು ಬದ್ಧ ಗರ್ಭಪಾತಗಳ ಮೂಲಕ ಮಹಿಳೆಯರ ಉದ್ವಿಗ್ನತೆ ಗಮನಾರ್ಹವಾಗಿ ಕಡಿಮೆಯಾಗಿದೆ. ಮತ್ತು ಅವರು ಕಿರುಕುಳದಿಂದ ಮುಕ್ತರಾಗುವಂತಾಗಿದೆ. ಮಕ್ಕಳ ವಿರುದ್ಧದ ಅಪರಾಧಗಳನ್ನು ತಡೆಯಲು ಕಾನೂನುಗಳನ್ನು ಬಿಗಿಗೊಳಿಸಲಾಗಿದೆ. ಮತ್ತು ಹೊಸ ತ್ವರಿತಗತಿಯ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ.
ಸ್ನೇಹಿತರೇ,
ಇತ್ತೀಚೆಗೆ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ ನಾವು ದಿವ್ಯಾಂಗ ಸಹೋದರರ ಮತ್ತು ಸಹೋದರಿಯರ ಸಾಮರ್ಥ್ಯವನ್ನು ಮನಗಂಡಿದ್ದೇವೆ. ಕಳೆದ ವರ್ಷಗಳಲ್ಲಿ, ದಿವ್ಯಾಂಗರನ್ನು ಸಶಕ್ತೀಕರಣಗೊಳಿಸಲು ಕಾನೂನುಗಳನ್ನು ಮಾಡಲಾಗಿದೆ. ಮತ್ತು ಹಲವಾರು ಹೊಸ ಸೌಲಭ್ಯಗಳನ್ನು ಅವರಿಗೆ ಒದಗಿಸಲಾಗಿದೆ. ಸಾವಿರಾರು ಸಾರ್ವಜನಿಕ ಕಟ್ಟಡಗಳನ್ನು, ಸಾರ್ವಜನಿಕ ಬಸ್ಸುಗಳನ್ನು ಮತ್ತು ದೇಶಾದ್ಯಂತ ರೈಲ್ವೇಗಳನ್ನು ಅವರಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. 700ಕ್ಕೂ ಅಧಿಕ ಜಾಲತಾಣಗಳನ್ನು ದಿವ್ಯಾಂಗ ಸ್ನೇಹಿಯನ್ನಾಗಿ ರಚಿಸಲಾಗಿದೆ. ಅವರಿಗಾಗಿ ವಿಶೇಷ ನಾಣ್ಯಗಳನ್ನು ಮತ್ತು ಕರೆನ್ಸಿ ನೋಟುಗಳನ್ನು ರೂಪಿಸಲಾಗಿದೆ. ಈಗ ನಮ್ಮ ದಿವ್ಯಾಂಗ ಸಹೋದರರು ಮತ್ತು ಸಹೋದರಿಯರು ಕರೆನ್ಸಿ ನೋಟುಗಳನ್ನು ಸ್ಪರ್ಷಿಸುವ ಮೂಲಕ ಅವುಗಳ ಮೌಲ್ಯ ಹೇಳಬಲ್ಲರು ಎಂಬುದು ಬಹುತೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ. ಕಳೆದ ಕೆಲವು ವರ್ಷಗಳಿಂದ ಅವರ ಶಿಕ್ಷಣ, ಕೌಶಲ್ಯಗಳು, ಸಂಸ್ಥೆಗಳು ಮತ್ತು ವಿಶೇಷ ಕೋರ್ಸುಗಳಿಗೆ ಸಂಬಂಧಿಸಿ ವಿಶೇಷ ಒತ್ತನ್ನು ನೀಡಲಾಗಿದೆ. ನಮ್ಮ ದೇಶ ಹಲವಾರು ಭಾಷೆಗಳನ್ನು ಮತ್ತು ಭಾಷಾ ವಿಶೇಷಗಳನ್ನು ಹೊಂದಿದೆ ಮತ್ತು ಅದನ್ನು ನಮ್ಮ ಸೈನೇಜ್ (ಸಂಕೇತ) ಗಳಲ್ಲಿ ಅಳವಡಿಸಲಾಗಿದೆ. ಶ್ರವಣ ದೋಷ ಇರುವ ನಮ್ಮ ದಿವ್ಯಾಂಗ ಸಹೋದರರು ಗುಜರಾತ್, ಮಹಾರಾಷ್ಟ್ರ, ಗೋವಾ ಮತ್ತು ತಮಿಳುನಾಡುಗಳಲ್ಲಿ ವಿವಿಧ ಭಾಷೆಗಳಲ್ಲಿರುವ ಸೈನೇಜ್ ಗಳನ್ನು ಅನುಸರಿಸಬೇಕಾಗುತ್ತಿತು. ಈ ಸಮಸ್ಯೆಯನ್ನು ಪರಿಹರಿಸಲು ಭಾರತವು ಕಾನೂನಿನ ಮೂಲಕ ಏಕಪ್ರಕಾರದ ಸೈನೇಜ್ ನೀತಿಯನ್ನು ರೂಪಿಸಿದೆ. ಅವರ ಸಂಪೂರ್ಣ ತರಬೇತಿ, ಮತ್ತು ಅವರ ಹಕ್ಕುಗಳ ಕುರಿತ ಕಳಕಳಿಗಳು ಸೂಕ್ಷ್ಮ ಧೋರಣೆಯ ಫಲಿತಾಂಶಗಳಾಗಿವೆ. ಇತ್ತೀಚೆಗೆ ದೇಶದ ಮೊದಲ ಸೈನ್ ಭಾಷಾ ನಿಘಂಟು ಮತ್ತು ಶ್ರಾವ್ಯ ಪುಸ್ತಕ ಸೌಲಭ್ಯವು ದೇಶಾದ್ಯಂತ ಲಕ್ಷಾಂತರ ದಿವ್ಯಾಂಗ ಮಕ್ಕಳಿಗೆ ದೊರೆಯುವಂತೆ ಮಾಡಲಾಗಿದೆ. ಇದರಿಂದ ಅವರು ಇ-ಕಲಿಕಾ ವ್ಯವಸ್ಥೆಗೆ ಸಂಪರ್ಕಿಸಲ್ಪಡುತ್ತಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕೂಡಾ ಇದರ ಬಗ್ಗೆ ಕಾಳಜಿ ವಹಿಸಿದೆ. ಅದೇ ರೀತಿ ಲಿಂಗತ್ವ ಅಲ್ಪಸಂಖ್ಯಾತರಿಗಾಗಿರುವ ಟ್ರಾನ್ಸ್ ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆಯನ್ನು ಜಾರಿ ಮಾಡಲಾಗಿದ್ದು ಟ್ರಾನ್ಸ್ ಜೆಂಡರ್ ವ್ಯಕ್ತಿಗಳಿಗೆ ಉತ್ತಮ ಸೌಲಭ್ಯಗಳು ಮತ್ತು ಉತ್ತಮ ಅವಕಾಶಗಳನ್ನು ಒದಗಿಸುತ್ತದೆ. ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗಾಗಿ ಅಭಿವೃದ್ಧಿ ಮತ್ತು ಕಲ್ಯಾಣ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಲೋಕ ಅದಾಲತ್ ಗಳ ಮೂಲಕ ಲಕ್ಷಾಂತರ ಬಾಕಿ ಇರುವ ಪ್ರಕರಣಗಳ ಇತ್ಯರ್ಥದಿಂದ ನ್ಯಾಯಾಲಯಗಳ ಮೇಲಿನ ಹೊರೆ ಕಡಿಮೆಯಾಗಿದೆ. ಮತ್ತು ಅದರಿಂದ ದೇಶವಾಸಿಗಳಿಗೆ ಬಹಳ ಪ್ರಯೋಜನವಾಗಿದೆ. ಈ ಎಲ್ಲಾ ಪ್ರಯತ್ನಗಳು ಸಮಾಜದಲ್ಲಿ ಅನ್ಯಾಯವನ್ನು ಕೊನೆಗಾಣಿಸುವಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತಿವೆ.
ಸ್ನೇಹಿತರೇ,
ನಮ್ಮ ದೇಶವು ಶತಮಾನದ ಅತ್ಯಂತ ದೊಡ್ಡ ವಿಪತ್ತಾದ ಜಾಗತಿಕ ಸಾಂಕ್ರಾಮಿಕ ಕೊರೊನಾವನ್ನು ಎದುರಿಸಿದೆ. ಅದು ಜಗತ್ತಿನ ಪ್ರಮುಖ ದೇಶಗಳನ್ನು ಹದಗೆಡಿಸಿದೆ. ಹಿಂದಿನ ಇತಿಹಾಸ ಏನು ಹೇಳುತ್ತದೆ ಎಂದರೆ ಇಂತಹ ದೊಡ್ಡ ಆಪತ್ತು ಬಹಳ ದೊಡ್ಡ ಪ್ರಮಾಣದ ಜನಸಂಖ್ಯೆಗೆ ಬಂದೊದಗಿದಾಗ ಅದು ಸಮಾಜದಲ್ಲಿ ಅಸ್ಥಿರತೆಗೆ ಕಾರಣವಾಗುತ್ತದೆ. ಆದರೆ ಭಾರತ ತನ್ನ ಸಾಮಾನ್ಯ ಜನತೆಯ ಹಕ್ಕುಗಳನ್ನು ರಕ್ಷಿಸಲು ಕೈಗೊಂಡ ಕ್ರಮಗಳು ಎಲ್ಲಾ ಕಳವಳಗಳು, ಆತಂಕಗಳು ತಪ್ಪು ಎಂಬುದನ್ನು ಸಾಬೀತು ಮಾಡಿವೆ. ಇಂತಹ ಕಠಿಣ ಸಮಯದಲ್ಲಿ, ಭಾರತವು ಒಬ್ಬನೇ ಒಬ್ಬ ಬಡ ವ್ಯಕ್ತಿ ಹಸಿವಿನಿಂದಿರಬಾರದು ಎಂಬುದನ್ನು ಖಾತ್ರಿಪಡಿಸಲು ಪ್ರಯತ್ನಿಸಿತು. ಈ ನಿಟ್ಟಿನಲ್ಲಿ ಜಗತ್ತಿನ ಪ್ರಮುಖ ರಾಷ್ಟ್ರಗಳು ಹೆಣಗಾಡುತ್ತಿರುವಾಗ, ಭಾರತವು ಇಂದೂ ಕೂಡಾ 800 ಮಿಲಿಯನ್ ಜನತೆಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸುತ್ತಿದೆ. ಭಾರತವು ಬಡವರಿಗೆ, ಸಂಕಷ್ಟದಲ್ಲಿರುವವರಿಗೆ, ಹಿರಿಯರಿಗೆ ಈ ಕೊರೊನಾ ಅವಧಿಯಲ್ಲೂ ಅವರ ಖಾತೆಗಳಿಗೆ ನೇರವಾಗಿ ಹಣಕಾಸು ಸಹಾಯವನ್ನು ಒದಗಿಸಿದೆ. ’ಒಂದು ರಾಷ್ಟ್ರ, ಒಂದು ರೇಶನ್ ಕಾರ್ಡ್” ಸೌಲಭ್ಯವನ್ನು ವಲಸೆ ಕಾರ್ಮಿಕರಿಗಾಗಿ ಆರಂಭ ಮಾಡಲಾಗಿದ್ದು, ಇದರಿದ ಅವರು ದೇಶದ ಯಾವ ಭಾಗಕ್ಕೆ ಹೋದರೂ ಪಡಿತರಕ್ಕಾಗಿ ಅಲೆದಾಟ ಮಾಡಬೇಕಾಗಿಲ್ಲ.
ಸಹೋದರರೇ ಮತ್ತು ಸಹೋದರಿಯರೇ,
ಮಾನವ ಸಂವೇದನೆ ಮತ್ತು ಸೂಕ್ಷ್ಮತೆಯನ್ನು ಅತ್ಯುಚ್ಛ ಮಟ್ಟದಲ್ಲಿರಿಸಿಕೊಂಡು, ಪ್ರತಿಯೊಬ್ಬರನ್ನೂ ಒಳಗೊಳಿಸಿಕೊಂಡು ಮುಂದೆ ಸಾಗುವ ಇಂತಹ ಪ್ರಯತ್ನಗಳು ದೇಶದ ಸಣ್ಣ ರೈತರಿಗೆ ಬಹಳ ಶಕ್ತಿಯನ್ನು ನೀಡಿವೆ. ಇಂದು ದೇಶದ ರೈತರು ಯಾವುದೇ ಮೂರನೇ ವ್ಯಕ್ತಿಯಿಂದ ಸಾಲ ಪಡೆಯುವಂತಹ ಅನಿವಾರ್ಯ ಸ್ಥಿತಿಯಲ್ಲಿ ಇಲ್ಲ. ಅವರಿಗೆ ಕಿಸಾನ್ ಸಮ್ಮಾನ್ ನಿಧಿಯ ಶಕ್ತಿ ಇದೆ. ಬೆಳೆ ವಿಮಾ ಯೋಜನೆಗಳ ಮತ್ತು ಮಾರುಕಟ್ಟೆ ಜೊತೆ ಸಂಪರ್ಕ ಸಂಪರ್ಕಿಸುವ ನೀತಿಗಳ ಬೆಂಬಲ ಇದೆ. ಇದರ ಪರಿಣಾಮವಾಗಿ ದೇಶದ ರೈತರು ಬಿಕ್ಕಟ್ಟಿನ ಸಮಯದಲ್ಲಿಯೂ ಕೂಡಾ ದಾಖಲೆ ಪ್ರಮಾಣದಲ್ಲಿ ಬೆಳೆಗಳನ್ನು ಉತ್ಪಾದನೆ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯಗಳ ಉದಾಹರಣೆ ಕೂಡಾ ನಮ್ಮ ಮುಂದಿದೆ. ಇಂದು ಈ ಪ್ರದೇಶಗಳಿಗೆ ಅಭಿವೃದ್ಧಿ ತಲುಪುತ್ತಿದೆ. ಅವರ ಜೀವನ ಮಟ್ಟವನ್ನು ಸುಧಾರಿಸಲು ಗಂಭೀರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಪ್ರಯತ್ನಗಳು ಮಾನವ ಹಕ್ಕುಗಳನ್ನು ಸಮಾನವಾಗಿ ಸಶಕ್ತೀಕರಣ ಮಾಡುತ್ತಿವೆ.
ಸ್ನೇಹಿತರೇ,
ಮಾನವ ಹಕ್ಕುಗಳಿಗೆ ಸಂಬಂಧಿಸಿದ ಇನ್ನೊಂದು ಸಂಗತಿಯೂ ಇದೆ. ಅದನ್ನು ನಾನಿಂದು ಚರ್ಚಿಸಲು ಇಚ್ಛಿಸುತ್ತೇನೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ಜನರು ಮಾನವ ಹಕ್ಕುಗಳನ್ನು ತಮ್ಮದೇ ಆದ ಹಿತಾಸಕ್ತಿಗೆ ಅನ್ವಯವಾದ ರೀತಿಯಲ್ಲಿ ವಿಶ್ಲೇಷಿಸಲು ಆರಂಭ ಮಾಡಿದ್ದಾರೆ. ಕೆಲವರು ಕೆಲವು ಘಟನೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕಾಣುತ್ತಾರೆ. ಆದರೆ ಇತರ ಇಂತಹದೇ ಘಟನೆಗಳಲ್ಲಿ ಅವರದನ್ನು ಕಾಣುವುದಿಲ್ಲ. ಈ ರೀತಿಯ ಮಾನಸಿಕತೆ ಮಾನವ ಹಕ್ಕುಗಳಿಗೆ ಬಹಳ ದೊಡ್ಡ ಹಾನಿಯನ್ನು ಮಾಡುತ್ತದೆ. ಮಾನವ ಹಕ್ಕುಗಳನ್ನು ರಾಜಕೀಯ ಬಣ್ಣದೊಂದಿಗೆ ನೋಡುವುದರಿಂದ, ರಾಜಕೀಯದ ಕಣ್ಣಿನಿಂದ ನೋಡುವುದರಿಂದ ಮತ್ತು ರಾಜಕೀಯ ನಷ್ಟ ಹಾಗು ಲಾಭದ ಕಣ್ಣಿನಿಂದ ನೋಡುವುದರಿಂದ ಅವುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದಂತಾಗುತ್ತದೆ. ಇಂತಹ ಆಯ್ಕೆ ಆಧಾರಿತ ವರ್ತನೆ ಪ್ರಜಾಪ್ರಭುತ್ವಕ್ಕೆ ಅಷ್ಟೇ ಅಪಾಯಕಾರಿ. ಮಾನವ ಹಕ್ಕುಗಳ ಉಲ್ಲಂಘನೆಯ ಹೆಸರಿನಲ್ಲಿ ತಮ್ಮ ಆಯ್ಕೆ ಆಧಾರಿತ ವರ್ತನೆಯ ಮೂಲಕ ದೇಶದ ಪ್ರತಿಷ್ಠೆಗೆ ಕುಂದು ತರಲು ಕೆಲವು ವ್ಯಕ್ತಿಗಳು ಪ್ರಯತ್ನಿಸುತ್ತಿರುವುದನ್ನು ನಾವು ಕಾಣುತ್ತೇವೆ. ಇಂತಹ ವ್ಯಕ್ತಿಗಳ ಬಗ್ಗೆ ದೇಶವು ಬಹಳ ಜಾಗರೂಕವಾಗಿರಬೇಕು.
ಸ್ನೇಹಿತರೇ,
ಜಗತ್ತಿನಲ್ಲಿ ಇಂದು ಮಾನವ ಹಕ್ಕುಗಳ ವಿಷಯ ಬಂದಾಗ ಅದರ ಕೇಂದ್ರದಲ್ಲಿ ವೈಯಕ್ತಿಕ ಹಕ್ಕುಗಳೂ ಇರುತ್ತವೆ. ಮತ್ತು ಅವು ಇರಬೇಕು. ಯಾಕೆಂದರೆ ವ್ಯಕ್ತಿಗಳೇ ಸಮಾಜವನ್ನು ನಿರ್ಮಾಣ ಮಾಡುತ್ತಾರೆ. ಮತ್ತು ಸಮಾಜಗಳ ಮೂಲಕ ರಾಷ್ಟ್ರ ನಿರ್ಮಾಣ ಆಗುತ್ತದೆ. ಶತಮಾನಗಳಿಂದ ಭಾರತ ಮತ್ತು ಅದರ ಪರಂಪರೆ ಈ ಚಿಂತನೆಗೆ ಹೊಸ ಎತ್ತರವನ್ನು ಒದಗಿಸಿದೆ. ನಮ್ಮ ಪವಿತ್ರ ಗ್ರಂಥಗಳಲ್ಲಿ ಶತಮಾನಗಳಿಂದ ಪದೇ ಪದೇ ಹೇಳಲಾಗುತ್ತದೆ “आत्मनः प्रति-कूलानि परेषाम् न समाचारेत्।. ನೀವು ಯಾವುದೇ ವ್ಯಕ್ತಿಯ ಜೊತೆ ಶತ್ರುತ್ವದಿಂದ ವರ್ತಿಸಬೇಡಿ. ಇದರ ಅರ್ಥ ಮಾನವ ಹಕ್ಕುಗಳು ಬರೇ ಹಕ್ಕುಗಳಿಗೆ ಮಾತ್ರವೇ ಸಂಭವಿಸಿದುವಲ್ಲ, ಅದು ನಮ್ಮ ಕರ್ತವ್ಯಗಳಿಗೂ ಸಂಬಂಧಿಸಿದೆ. ನಾವು ನಮ್ಮ ಹಕ್ಕುಗಳ ಬಗ್ಗೆ ಕಾಳಜಿ ವಹಿಸುವಂತೆ ಇತರರ ಹಕ್ಕುಗಳ ಬಗೆಗೂ ಕಾಳಜಿ ವಹಿಸಬೇಕು.ಇತರರ ಹಕ್ಕುಗಳನ್ನು ನಮ್ಮ ಕರ್ತವ್ಯಗಳೆಂದು ಅನುಸರಿಸಬೇಕು. ಮತ್ತು ಪ್ರತಿಯೊಬ್ಬ ಮಾನವ ಜೀವಿಯ ಬಗೆಗೂ ಏಕಪ್ರಕಾರವಾದ ಮತ್ತು ಪ್ರೀತಿಯ ಧೋರಣೆಯನ್ನು ಅಳವಡಿಸಿಕೊಳ್ಳಬೇಕು. ಮತ್ತು ಇಂತಹ ಸ್ವಾಭಾವಿಕ ನಿಲುವು ಸಮಾಜದಲ್ಲಿ ಇದ್ದರೆ, ಮಾನವ ಹಕ್ಕುಗಳು ನಮ್ಮ ಸಮಾಜದ ಮುಖ್ಯ ಮೌಲ್ಯಗಳಾಗುತ್ತವೆ. ಹಕ್ಕುಗಳು ಮತ್ತು ಕರ್ತವ್ಯಗಳು ಮಾನವ ಅಭಿವೃದ್ಧಿ, ಮಾನವ ಘನತೆ ಪ್ರವಹಿಸುವ ಹಾದಿಯ ಎರಡು ಪಥಗಳು. ಹಕ್ಕುಗಳು ಪ್ರಮುಖವಾದರೆ, ಕರ್ತವ್ಯಗಳೂ ಪ್ರಮುಖವಾಗುತ್ತವೆ. ಹಕ್ಕುಗಳು ಮತ್ತು ಕರ್ತವ್ಯಗಳನ್ನು ಏಕಕಾಲದಲ್ಲಿ ಮಾತನಾಡಬೇಕೇ ಹೊರತು ಅವುಗಳನ್ನು ಪ್ರತ್ಯೇಕಿಸಿ ಮಾತನಾಡಬಾರದು. ಕರ್ತವ್ಯದ ಮೇಲೆ ಹೆಚ್ಚು ಒತ್ತು ಬಿದ್ದರೆ ಹಕ್ಕುಗಳು ಖಾತ್ರಿಪಡಿಸಲ್ಪಡುತ್ತವೆ ಎಂಬುದು ನಮ್ಮ ಅನುಭವ. ಆದುದರಿಂದ ಪ್ರತಿಯೊಬ್ಬ ಭಾರತೀಯರೂ ಅವರ ಹಕ್ಕುಗಳ ಬಗ್ಗೆ ಜಾಗರೂಕರಾಗಿರುವಂತೆ ಅವರ ಕರ್ತವ್ಯಗಳನ್ನೂ ಅಷ್ಟೇ ಪ್ರಾಮಾಣಿಕವಾಗಿ ನಿಭಾಯಿಸಬೇಕು. ಮತ್ತು ನಾವು ಇದಕ್ಕಾಗಿ ನಿರಂತರ ಪ್ರಯತ್ನಗಳನ್ನು ಮಾಡಬೇಕು ಹಾಗು ಸದಾ ಪ್ರೇರಣೆ ಪಡೆಯುವಂತಿರಬೇಕು.
ಸ್ನೇಹಿತರೇ,
ಪ್ರಕೃತಿ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸುವಂತೆ ನಮಗೆ ಭಾರತದ ಸಂಸ್ಕೃತಿ ಕಲಿಸಿದೆ. ನಮ್ಮ ನೀತಿಗಳಲ್ಲಿ ಸಸ್ಯಗಳಲ್ಲೂ ದೈವಿಕತೆ ಇದೆ. ಆದುದರಿಂದ, ನಾವು ವರ್ತಮಾನದ ಬಗ್ಗೆ ಚಿಂತಿತರಾಗಿರುವುದು ಮಾತ್ರವಲ್ಲ, ಭವಿಷ್ಯದ ಬಗ್ಗೆಯೂ ಚಿಂತಿತರಾಗಿದ್ದೇವೆ. ನಾವು ಸತತವಾಗಿ ಭವಿಷ್ಯದ ತಲೆಮಾರಿನ ಮಾನವ ಹಕ್ಕುಗಳ ಬಗೆ ಜಗತ್ತಿಗೆ ಎಚ್ಚರಿಸುತ್ತಾ ಬಂದಿದ್ದೇವೆ. ಅದು ಅಂತಾರಾಷ್ಟ್ರೀಯ ಸೌರ ಮಿತ್ರಕೂಟವಿರಲಿ, ಮರುನವೀಕೃತ ಇಂಧನದಲ್ಲಿ ಭಾರತದ ಗುರಿಗಳಿರಲಿ, ಹೈಡ್ರೋಜನ್ ಮಿಷನ್ ಇರಲಿ, ಭಾರತವು ಸುಸ್ಥಿರ ಜೀವನ ಮತ್ತು ಪರಿಸರ ಸ್ನೇಹಿ ಬೆಳವಣಿಗೆಯತ್ತ ತ್ವರಿತವಾಗಿ ಸಾಗುತ್ತಿದೆ. ಮಾನವ ಹಕ್ಕುಗಳ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ನಮ್ಮ ಬುದ್ಧಿಜೀವಿಗಳಿಗೆ ಮತ್ತು ನಾಗರಿಕ ಸಮಾಜದ ಜನತೆಗೆ ಈ ನಿಟ್ಟಿನಲ್ಲಿ ಅವರ ಪ್ರಯತ್ನಗಳನ್ನು ಹೆಚ್ಚಿಸಬೇಕು ಎಂದು ಹೇಳಲಿಚ್ಛಿಸುತ್ತೇನೆ. ನಿಮ್ಮ ಎಲ್ಲಾ ಪ್ರಯತ್ನಗಳು ಜನತೆಯನ್ನು ಹಕ್ಕುಗಳ ಜೊತೆಗೆ ಕರ್ತವ್ಯದ ಭಾವನೆಯನ್ನು ಮೂಡಿಸಿಕೊಳ್ಳಲು ಪ್ರೇರೇಪಿಸಲಿವೆ. ಈ ಶುಭ ಹಾರೈಕೆಗಳೊಂದಿಗೆ, ನಾನು ನಿಲ್ಲಿಸುತ್ತೇನೆ. ನಿಮಗೆಲ್ಲ ಬಹಳ ಧನ್ಯವಾದಗಳು.
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
***
(Release ID: 1765030)
Visitor Counter : 2016
Read this release in:
Assamese
,
Marathi
,
Malayalam
,
Hindi
,
Gujarati
,
English
,
Urdu
,
Bengali
,
Manipuri
,
Punjabi
,
Odia
,
Tamil
,
Telugu