ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಅಕ್ಟೋಬರ್ 13ರಂದು ಪಿಎಂ ಗತಿಶಕ್ತಿಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ


ಪ್ರಮುಖ ಮೂಲಸೌಕರ್ಯ ಯೋಜನೆಗಳಾದ್ಯಂತ ಬಾಧ್ಯಸ್ಥರಿಗಾಗಿ ಇಲಾಖಾ ಕಂದಕಗಳನ್ನು ನಿವಾರಿಸಿ ಮತ್ತು ಸಮಗ್ರ ಯೋಜನೆಯನ್ನು ಸಾಂಸ್ಥೀಕರಿಸಲಿರುವ ಪಿಎಂ ಗತಿಶಕ್ತಿ

ಕೇಂದ್ರೀಕೃತ ಪೋರ್ಟಲ್ ಮೂಲಕ ಈಗ ಎಲ್ಲಾ ಇಲಾಖೆಗಳು ಪರಸ್ಪರರ ಯೋಜನೆಗಳನ್ನು ನೋಡುವ ಸೌಲಭ್ಯ ಹೊಂದಿವೆ

ಜನರು, ಸರಕು ಮತ್ತು ಸೇವೆಗಳ ಚಲನೆಗಾಗಿ ಸಮಗ್ರ ಮತ್ತು ತಡೆರಹಿತ ಸಂಪರ್ಕವನ್ನು ಒದಗಿಸಲು ಬಹು-ಮಾದರಿ ಸಂಪರ್ಕ

ಬಹು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿರುವ, ಸಾಗಣೆ ವೆಚ್ಚವನ್ನು ತಗ್ಗಿಸುವ, ಪೂರೈಕೆ ಸರಪಳಿಗಳನ್ನು ಸುಧಾರಿಸುವ ಮತ್ತು ಸ್ಥಳೀಯ ಸರಕುಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವ ಪಿಎಂ ಗತಿಶಕ್ತಿ

ಪ್ರಗತಿ ಮೈದಾನದಲ್ಲಿ ನೂತನ ವಸ್ತುಪ್ರದರ್ಶನ ಸಂಕೀರ್ಣವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ

Posted On: 12 OCT 2021 6:28PM by PIB Bengaluru

ದೇಶದ ಮೂಲಸೌಕರ್ಯ ಭೂರಮೆಗಾಗಿ ಐತಿಹಾಸಿಕ ಕಾರ್ಯಕ್ರಮವೊಂದರಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಿಎಂಗತಿಶಕ್ತಿ - ಬಹು -ಮಾದರಿ ಸಂಪರ್ಕಕ್ಕಾಗಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಗೆ 2021 ಅಕ್ಟೋಬರ್ 13 ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ.

ಭಾರತದಲ್ಲಿ ಮೂಲಸೌಕರ್ಯ ಸೃಷ್ಟಿ ಹಲವು ದಶಕಗಳಿಂದ ಬಹು ಸಮಸ್ಯೆಗಳಿಂದ ಬಳಲುತ್ತಿದೆ. ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆಯೂ ಇದೆ. ಉದಾಹರಣೆಗೆ ಒಮ್ಮೆ ರಸ್ತೆ ನಿರ್ಮಾಣ ಮಾಡಿದ ತರುವಾಯ, ಇತರ ಸಂಸ್ಥೆಗಳು ಅಂತರ್ಗತ ಕೇಬಲ್ ಅಳವಡಿಕೆಗಾಗಿ, ಅನಿಲ ಕೊಳವೆ ಮಾರ್ಗ ನಿರ್ಮಿಸಲು ಇತ್ಯಾದಿಗಾಗಿ ಮತ್ತೆ ರಸ್ತೆಯನ್ನು ಅಗೆಯುತ್ತಾರೆ. ಇದರಿಂದ ಅನಾನುಕೂಲತೆ ಆಗುವುದಷ್ಟೇ ಅಲ್ಲ, ಇದು ವ್ಯರ್ಥ ವೆಚ್ಚವೂ ಆಗುತ್ತದೆ. ಇದನ್ನು ಪರಿಹರಿಸಲು ಕೇಬಲ್, ಕೊಳವೆ ಮಾರ್ಗ ಅಳವಡಿಕೆ ಇತ್ಯಾದಿಗಳನ್ನು ಏಕಕಾಲದಲ್ಲಿ ಅಳವಡಿಸಲು ಹೆಚ್ಚಿನ ಸಮನ್ವಯತೆ ತರಲು ಪ್ರಯತ್ನಗಳು ನಡೆಯುತ್ತಿವೆ. ಇತರ ಸಮಸ್ಯೆಗಳು ಅಂದರೆ ಅನುಮೋದನೆ ಪ್ರಕ್ರಿಯೆ, ಬಹು ನಿಯಂತ್ರಣ ಅನುಮತಿ ಇತ್ಯಾದಿಗಳನ್ನೂ ಪರಿಹರಿಸಲು ಕ್ರಮ ಕೊಳ್ಳಲಾಗಿದೆ. ಕಳೆದ ಏಳು ವರ್ಷಗಳಲ್ಲಿ ಸರ್ಕಾರ ಮೂಲಸೌಕರ್ಯಕ್ಕೆ ಸಮಗ್ರ ದೃಷ್ಟಿಕೋನದೊಂದಿಗೆ ಅಭೂತಪೂರ್ವ ಗಮನದ ಖಾತ್ರಿ ಪಡಿಸಿದೆ. 

ಪಿಎಂ ಗತಿಶಕ್ತಿಯು ಹಿಂದಿನ ಸಮಸ್ಯೆಗಳನ್ನು ಪ್ರಮುಖ ಮೂಲಸೌಕರ್ಯಗಳಿಗಾಗಿ ಬಾಧ್ಯಸ್ಥರುಗಳಿಗೆ ಸಾಂಸ್ಥೀಕೃತ ಸಮಗ್ರ ಯೋಜನೆ ಮೂಲಕ ಪರಿಹರಿಸಲಿದೆ. ಗೌಪ್ಯವಾಗಿ ಪ್ರತ್ಯೇಕವಾಗಿ ಯೋಜನೆ, ವಿನ್ಯಾಸ ಮಾಡುವುದರ ಬದಲಾಗಿ, ಯೋಜನೆಗಳನ್ನು ಸಮಾನ ದೃಷ್ಟಿಯೊಂದಿಗೆ ವಿನ್ಯಾಸ ಮಾಡಿ ಅನುಷ್ಠಾನಗೊಳಿಸಲಾಗುತ್ತದೆ. ಇದು ಸುಧಾರಿತ ಸಂಪರ್ಕ ಮತ್ತು ಭಾರತೀಯ ವ್ಯಾಪಾರವನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸಲು ವಿವಿಧ ಸಚಿವಾಲಯಗಳ ಮತ್ತು ರಾಜ್ಯ ಸರ್ಕಾರಗಳ ಅಂದರೆ ಭಾರತ್ ಮಾಲಾ, ಸಾಗರ ಮಾಲಾ, ಒಳನಾಡ ಜಲ ಸಾರಿಗೆ, ಒಣ/ಭೂಮಿ ಬಂದರುಗಳು, ಉಡಾನ್ ಇತ್ಯಾದಿ, ಆರ್ಥಿಕ ವಲಯಗಳು ಅಂದರೆ ಜವಳಿ ಗುಚ್ಛಗಳು, ಔಷಧ ಗುಚ್ಛಗಳು, ರಕ್ಷಣಾ ಕಾರಿಡಾರ್ ಗಳು, ವಿದ್ಯುನ್ಮಾನ ಉದ್ಯಾನಗಳು, ಕೈಗಾರಿಕಾ ಕಾರಿಡಾರ್ ಗಳು, ಮೀನುಗಾರಿಕೆ ಗುಚ್ಛಗಳು, ಕೃಷಿ ವಲಯಗಳನ್ನು ಮೂಲಸೌಕರ್ಯ ಯೋಜನೆಗಳಲ್ಲಿ ಸೇರ್ಪಡೆ ಮಾಡಲಾಗುವುದು. ಇದು ಬಿ.ಎಸ್‌.ಎ.ಜಿ-ಎನ್ (ಬಾಹ್ಯಾಕಾಶ ಆನ್ವಯಿಕ ಮತ್ತು ಭೂಮಾಹಿತಿ ಕುರಿತ ಭಾಸ್ಕರಾಚಾರ್ಯ ರಾಷ್ಟ್ರೀಯ ಸಂಸ್ಥೆ) ಅಭಿವೃದ್ಧಿಪಡಿಸಿದ ಇಸ್ರೋ ಚಿತ್ರಣದೊಂದಿಗೆ ಪ್ರಾದೇಶಿಕ ಯೋಜನಾ ಪರಿಕರಗಳನ್ನು ಒಳಗೊಂಡಂತೆ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತದೆ.

ಪಿಎಂ ಗತಿಶಕ್ತಿ ಆರು ಸ್ತಂಭಗಳನ್ನು ಆಧರಿಸಿದೆ:

1. ಸಮಗ್ರತೆ: ಇದು ಒಂದು ಕೇಂದ್ರೀಕೃತ ಪೋರ್ಟಲ್‌ ನೊಂದಿಗೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಅಸ್ತಿತ್ವದಲ್ಲಿರುವ ಮತ್ತು ಯೋಜಿತ ಉಪಕ್ರಮಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಇಲಾಖೆಯು ಈಗ ಪರಸ್ಪರರ ಚಟುವಟಿಕೆಗಳ ಗೋಚರತೆಯನ್ನು ಹೊಂದಿದ್ದು, ಸಮಗ್ರ ಯೋಜನೆಯಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸುವಾಗ ನಿರ್ಣಾಯಕ ದತ್ತಾಂಶವನ್ನು ಒದಗಿಸುತ್ತದೆ.

2. ಆದ್ಯತೆ: ಇದರ ಮೂಲಕ, ವಿವಿಧ ಇಲಾಖೆಗಳು ತಮ್ಮ ಯೋಜನೆಗಳಿಗೆ ವಿಭಾಗದಾಚೆಯೂ ಪರಸ್ಪರ ಕ್ರಿಯೆಗಳ ಮೂಲಕ ಆದ್ಯತೆ ನೀಡಲು ಸಾಧ್ಯವಾಗುತ್ತದೆ

3. ಅತ್ಯಂತ ಪ್ರಶಸ್ತವಾಗಿಸುವುದು (ಆಪ್ಟಿಮೈಸೇಶನ್): ರಾಷ್ಟ್ರೀಯ ಮಾಸ್ಟರ್ ಪ್ಲಾನ್ ನಿರ್ಣಾಯಕ ಅಂತರವನ್ನು ಗುರುತಿಸಿದ ನಂತರ ಯೋಜನೆಗಳಿಗೆ ಯೋಜನೆ ರೂಪಿಸುಲ್ಲಿ ವಿವಿಧ ಸಚಿವಾಲಯಗಳಿಗೆ ಸಹಾಯ ಮಾಡುತ್ತದೆ. ಸರಕುಗಳನ್ನು ಒಂದು ಸ್ಥಳದಿಂದ ಇನ್ನೊಂದು ಕಡೆಗೆ ಸಾಗಿಸಲು, ಸಮಯ ಮತ್ತು ವೆಚ್ಚದ ದೃಷ್ಟಿಯಿಂದ ಅತ್ಯಂತ ಸೂಕ್ತವಾದ ಮಾರ್ಗವನ್ನು ಆಯ್ಕೆ ಮಾಡಲು ಯೋಜನೆಯು ಸಹಾಯ ಮಾಡುತ್ತದೆ.

4. ಸಮನ್ವಯತೆ: ವೈಯಕ್ತಿಕ ಸಚಿವಾಲಯಗಳು ಮತ್ತು ಇಲಾಖೆಗಳು ಹೆಚ್ಚಾಗಿ ನಾಲ್ಕು ಗೋಡೆಯ ಮಧ್ಯೆ ಕೆಲಸ ಮಾಡುತ್ತವೆ. ಯೋಜನೆಗಳ ಯೋಜನೆ ಮತ್ತು ಅನುಷ್ಠಾನದಲ್ಲಿ ಸಮನ್ವಯದ ಕೊರತೆಯು ವಿಳಂಬಕ್ಕೆ ಕಾರಣವಾಗುತ್ತದೆ. ಪಿಎಂ ಗತಿಶಕ್ತಿಯು ಪ್ರತಿಯೊಂದು ಇಲಾಖೆಯ ಚಟುವಟಿಕೆಗಳನ್ನು ಹಾಗೂ ವಿವಿಧ ಹಂತದ ಆಡಳಿತಗಳನ್ನು ಅವುಗಳ ನಡುವೆ ಕೆಲಸದ ಸಮನ್ವಯವನ್ನು ಖಾತ್ರಿಪಡಿಸುವ ಮೂಲಕ ಸಮಗ್ರ ರೀತಿಯಲ್ಲಿ ಸಮನ್ವಯಗೊಳಿಸಲು ಸಹಾಯ ಮಾಡುತ್ತದೆ.

5. ವಿಶ್ಲೇಷಣಾತ್ಮಕ: ಯೋಜನೆಯು ಸಂಪೂರ್ಣ ದತ್ತಾಂಶವನ್ನು ಒಂದೇ ಸ್ಥಳದಲ್ಲಿ ಜಿ.ಐ.ಎಸ್ ಆಧಾರಿತ ಪ್ರಾದೇಶಿಕ ಯೋಜನೆ ಮತ್ತು 200+ ಪದರಗಳನ್ನು ಹೊಂದಿರುವ ವಿಶ್ಲೇಷಣಾತ್ಮಕ ಸಾಧನಗಳನ್ನು ಒದಗಿಸುತ್ತದೆ, ಇದು ಕಾರ್ಯಗತಗೊಳಿಸುವ ಸಂಸ್ಥೆಗೆ ಉತ್ತಮ ಗೋಚರತೆಯನ್ನು ಒದಗಿಸುತ್ತದೆ.

6. ಕ್ರಿಯಾತ್ಮಕತೆ: ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಈಗ ಜಿಐಎಸ್ ವೇದಿಕೆ ಮೂಲಕ ವಿಭಾಗದಾಚೆಯ ಯೋಜನೆಗಳ ಪ್ರಗತಿಯನ್ನು ದೃಶ್ಯೀಕರಿಸಲು, ಪರಿಶೀಲಿಸಲು ಮತ್ತು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ, ಏಕೆಂದರೆ ಉಪಗ್ರಹ ಚಿತ್ರಣವು ನಿಯಮಿತವಾಗಿ ವಾಸ್ತವ ಪ್ರಗತಿಯನ್ನು ನೀಡುತ್ತದೆ ಮತ್ತು ಯೋಜನೆಗಳ ಪ್ರಗತಿಯನ್ನು ನವೀಕರಿಸಲಾಗುತ್ತದೆ ಪೋರ್ಟಲ್‌ ನಲ್ಲಿ ನಿಯಮಿತವಾಗಿ ಇದು ಮಾಸ್ಟರ್ ಪ್ಲಾನ್ ಅನ್ನು ಹೆಚ್ಚಿಸಲು ಮತ್ತು ನವೀಕರಿಸಲು ಪ್ರಮುಖ ಮಧ್ಯಸ್ಥಿಕೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.

ಪಿಎಂ ಗತಿಶಕ್ತಿಯು ಸುಗಮ ಜೀವನವನ್ನು ಉತ್ತಮಪಡಿಸುವ ಮತ್ತು ಅದರ ಜೊತೆಗೆ ಸುಗಮ ವಾಣಿಜ್ಯಕ್ಕೂ ದಾರಿ ಮಾಡಿಕೊಡುವ ಮುಂದಿನ ಪೀಳಿಗೆಯ ಮೂಲಸೌಕರ್ಯ ನಿರ್ಮಿಸುವ ಪ್ರಧಾನಮಂತ್ರಿಯವರ ಪ್ರಯತ್ನದ ಫಲವಾಗಿದೆ. ಬಹು ಮಾದರಿ ಸಂಪರ್ಕವು, ಜನರ ಸಂಚಾರ, ಸರಕು ಮತ್ತು ಸೇವೆಗಳ ಸಾಗಾಟವನ್ನು ಒಂದು ಸಾರಿಗೆ ಮಾಧ್ಯಮದಿಂದ ಮತ್ತೊಂದಕ್ಕೆ ಸಾಗಿಸಲು ಸಮಗ್ರ ಮತ್ತು ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಇದು ಮೂಲಸೌಕರ್ಯದ ಕೊನೆಯ ಮೈಲಿಯ ಸಂಪರ್ಕಕ್ಕೆ ಅನುವು ಮಾಡಿಕೊಡಲಿದ್ದು, ಜನರ ಸಂಚಾರದ ಸಮಯ ತಗ್ಗಿಸಲಿದೆ.  

ಪಿಎಂ ಗತಿಶಕ್ತಿಯು ಮುಂಬರುವ ಸಂಪರ್ಕ ಯೋಜನೆಗಳು, ಇತರ ವ್ಯಾಪಾರ ತಾಣಗಳು, ಕೈಗಾರಿಕಾ ಪ್ರದೇಶಗಳು ಮತ್ತು ಸುತ್ತಮುತ್ತಲಿನ ಪರಿಸರದ ಕುರಿತು ಸಾರ್ವಜನಿಕ ಮತ್ತು ವ್ಯಾಪಾರ ಸಮುದಾಯದ ಮಾಹಿತಿಯನ್ನು ಒದಗಿಸುತ್ತದೆ. ಇದು ಹೂಡಿಕೆದಾರರಿಗೆ ತಮ್ಮ ವ್ಯಾಪಾರವನ್ನು ಸೂಕ್ತ ಸ್ಥಳಗಳಲ್ಲಿ ಯೋಜಿಸಲು ಅನುವು ಮಾಡಿಕೊಡುತ್ತದೆ. ಇದು ಬಹು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಆರ್ಥಿಕತೆಗೆ ಉತ್ತೇಜನ ನೀಡುತ್ತದೆ. ಇದು ಸಾಗಣೆ ವೆಚ್ಚವನ್ನು ಕಡಿತಗೊಳಿಸುವ ಮೂಲಕ ಮತ್ತು ಪೂರೈಕೆ ಸರಪಳಿಗಳನ್ನು ಸುಧಾರಿಸುವ ಮೂಲಕ ಸ್ಥಳೀಯ ಉತ್ಪನ್ನಗಳ ಜಾಗತಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸುತ್ತದೆ ಮತ್ತು ಸ್ಥಳೀಯ ಉದ್ಯಮ ಮತ್ತು ಗ್ರಾಹಕರಿಗೆ ಸರಿಯಾದ ಸಂಪರ್ಕವನ್ನು ಖಚಿತಪಡಿಸುತ್ತದೆ.

ಕಾರ್ಯಕ್ರಮದ ವೇಳೆ ಪ್ರಗತಿ ಮೈದಾನದಲ್ಲಿ ಪ್ರಧಾನಮಂತ್ರಿಯವರು ನೂತನ ವಸ್ತು ಪ್ರದರ್ಶನ ಸಂಕೀರ್ಣವನ್ನು (2 ರಿಂದ 5 ಹಾಲ್‌ ಗಳು) ಉದ್ಘಾಟಿಸಲಿದ್ದಾರೆ. ಭಾರತೀಯ ವ್ಯಾಪಾರ ಉತ್ತೇಜನ ಸಂಸ್ಥೆಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ, ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳ (ಐಐಟಿಎಫ್) 2021 ಸಹ ಈ ನೂತನ ವಸ್ತುಪ್ರದರ್ಶನ ಸಭಾಂಗಣಗಳಲ್ಲಿ 2021 ನವೆಂಬರ್ 14-27ರವರೆಗೆ ನಡೆಯಲಿದೆ.

ಕೇಂದ್ರ ವಾಣಿಜ್ಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ರೈಲ್ವೆ, ನಾಗರಿಕ ವಿಮಾನ ಯಾನ, ಹಡಗು, ಇಂಧನ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

***(Release ID: 1763410) Visitor Counter : 506