ಪ್ರಧಾನ ಮಂತ್ರಿಯವರ ಕಛೇರಿ
ಜೈಪುರದ ಪೆಟ್ರೋ ಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆ –ಸಿಪೆಟ್ ಉದ್ಘಾಟಿಸಿ ಪ್ರಧಾನಮಂತ್ರಿ
ರಾಜಸ್ಥಾನದಲ್ಲಿ ನಾಲ್ಕು ಹೊಸ ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ
‘ಸಾಂಕ್ರಾಮಿಕ ಸಮಯದಲ್ಲಿ ಶಕ್ತಿ, ಸ್ವಾವಲಂಬನೆ ಹೆಚ್ಚಳಕ್ಕೆ ಭಾರತ ದೃಢ ನಿಶ್ಚಯ’
‘ದೇಶದ ಆರೋಗ್ಯವಲಯ ಪರಿವರ್ತನೆಗೆ ರಾಷ್ಟ್ರೀಯ ಮನೋಭಾವ ಮತ್ತು ರಾಷ್ಟ್ರೀಯ ಆರೋಗ್ಯ ನೀತಿಯೊಂದಿಗೆ ಕಾರ್ಯನಿರ್ವಹಣೆ’
‘ಕಳೆದ 6-7 ವರ್ಷಗಳಲ್ಲಿ 170ಕ್ಕೂ ಅಧಿಕ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಮತ್ತು ಇನ್ನೂ 100ಕ್ಕೂ ಅಧಿಕ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಕಾರ್ಯ ಕ್ಷಿಪ್ರವಾಗಿ ಸಾಗಿದೆ’
‘2014ರಲ್ಲಿ ದೇಶದಲ್ಲಿ ಒಟ್ಟಾರೆ ಸುಮಾರು 82 ಸಾವಿರದ ಪದವಿ ಮತ್ತು ಸ್ನಾತಕೋತ್ತರ ಪದವಿ ಸೀಟುಗಳಿದ್ದವು, ಇಂದು ಅವುಗಳ ಸಂಖ್ಯೆ 1ಲಕ್ಷದ 40ಸಾವಿರಕ್ಕೆ ಹೆಚ್ಚಳ’
‘ರಾಜಸ್ಥಾನದ ಅಭಿವೃದ್ಧಿ, ಭಾರತದ ಅಭಿವೃದ್ಧಿಗೆ ವೇಗ ನೀಡುತ್ತದೆ’
Posted On:
30 SEP 2021 1:10PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಜೈಪುರದ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆ–ಸಿಐಪಿಇಟಿಯನ್ನು ಉದ್ಘಾಟಿಸಿದರು. ಅಲ್ಲದೆ, ಅವರು ರಾಜಸ್ಥಾನದ ಬನ್ಸ್‌ವಾರಾ, ಸಿರೋಹಿ, ಹನುಮಾನ್ ಗಢ ಮತ್ತು ಡೌಸಾ ಜಿಲ್ಲೆಗಳಲ್ಲಿ ಹೊಸದಾಗಿ ಸ್ಥಾಪನೆಯಾಗಲಿರುವ ನಾಲ್ಕು ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ರಾಜಸ್ಥಾನದಲ್ಲಿ ನಾಲ್ಕು ಹೊಸ ವೈದ್ಯಕೀಯ ಕಾಲೇಜು ಮತ್ತು ಸಿಪೆಟ್ ಕೇಂದ್ರ ಆರಂಭವಾಗುತ್ತಿರುವುದಕ್ಕೆ ಪ್ರಧಾನಮಂತ್ರಿ ರಾಜಸ್ಥಾನದ ಜನತೆಯನ್ನು ಅಭಿನಂದಿಸಿದರು. ಅವರು 2014ರಲ್ಲಿ ಕೇಂದ್ರ ಸರ್ಕಾರ ರಾಜಸ್ಥಾನಕ್ಕೆ 23 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಅನುಮೋದನೆ ನೀಡಿತ್ತು, ಆ ಪೈಕಿ 7 ವೈದ್ಯಕೀಯ ಕಾಲೇಜುಗಳು ಈಗಾಗಲೇ ಕಾರ್ಯಾರಂಭ ಮಾಡಿವೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, 100 ವರ್ಷಗಳಲ್ಲಿನ ಅತಿದೊಡ್ಡ ಸಾಂಕ್ರಾಮಿಕ ರೋಗವು ಜಗತ್ತಿನ ಆರೋಗ್ಯ ಕ್ಷೇತ್ರಕ್ಕೆ ಪಾಠವನ್ನು ಕಲಿಸಿದೆ. ಪ್ರತಿಯೊಂದು ರಾಷ್ಟ್ರವೂ ತನ್ನದೇ ಆದ ವಿಧಾನದಲ್ಲಿ ಬಿಕ್ಕಟ್ಟನ್ನು ನಿಭಾಯಿಸತೊಡಗಿವೆ. ಭಾರತವೂ ಕೂಡ ಈ ವಿಪತ್ತಿನ ಸಮಯದಲ್ಲಿ ತನ್ನ ಶಕ್ತಿ, ಸ್ವಾವಲಂಬನೆಯನ್ನು ಹೆಚ್ಚಿಸಿಕೊಳ್ಳುವ ದೃಢ ಸಂಕಲ್ಪವನ್ನು ಮಾಡಿದೆ ಎಂದರು.
ಕೃಷಿ ರಾಜ್ಯ ವಿಷಯಗಳ ಪಟ್ಟಿಯಲ್ಲಿದ್ದರೂ ಸಹ, ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ತಾವು ದೇಶದ ಆರೋಗ್ಯ ವಲಯದ ನೂನ್ಯತೆಗಳನ್ನು ಅರ್ಥಮಾಡಿಕೊಂಡಿದ್ದೆ ಮತ್ತು ಪ್ರಧಾನಮಂತ್ರಿಯಾಗಿ ಸಾಧ್ಯವಾದಷ್ಟು ಅವುಗಳನ್ನೂ ತೊಡೆದುಹಾಕಲು ನಿರಂತರ ಪ್ರಯತ್ನ ಮಾಡಿದೆ ಎಂದರು. “ದೇಶದ ಆರೋಗ್ಯ ವಲಯವನ್ನು ಪರಿವರ್ತಿಸಲು ನಾವು ರಾಷ್ಟ್ರೀಯ ಮನೋಭಾವ ಮತ್ತು ರಾಷ್ಟ್ರೀಯ ಆರೋಗ್ಯ ನೀತಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ‘ಎಂದರು. ಸ್ವಚ್ಛ ಭಾರತದಿಂದ ಆಯುಷ್ಮಾನ್ ಭಾರತದವರೆಗೆ ಮತ್ತು ಇದೀಗ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಸೇರಿ ಆ ಮನೋಭಾವದಡಿ ಹಲವು ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆಯುಷ್ಮಾನ್ ಭಾರತ ಯೋಜನೆಯಡಿ ರಾಜಸ್ಥಾನದ ಸುಮಾರು ಮೂರೂವರೆ ಲಕ್ಷ ಜನರು ಉಚಿತ ಚಿಕಿತ್ಸೆಯನ್ನು ಪಡೆದಿದ್ದಾರೆ ಮತ್ತು ರಾಜ್ಯದಲ್ಲಿ ಸುಮಾರು ಎರಡೂವರೆ ಸಾವಿರ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳು ಕಾರ್ಯಾರಂಭ ಮಾಡಿವೆ ಎಂದರು.
ವೈದ್ಯಕೀಯ ಕಾಲೇಜುಗಳು ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ದೇಶದ ಪ್ರತಿಯೊಂದು ಮೂಲೆ ಮೂಲೆಗೂ ತನ್ನ ಜಾಲವನ್ನು ಕ್ಷಿಪ್ರವಾಗಿ ವಿಸ್ತರಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು. “ಭಾರತವು 6 ಏಮ್ಸ್ ಗಳಿಂದಾಚೆಗೆ 22 ಏಮ್ಸ್ ಗಳ ಮೂಲಕ ಬಲವಾದ ಜಾಲ ಹೊಂದುವತ್ತ ಸಾಗಿದೆ ಎಂದು ನಾವು ಇಂದು ತೃಪ್ತಿಯಿಂದ ಹೇಳಿಕೊಳ್ಳಬಹುದಾಗಿದೆ’’ಎಂದರು.
ಕಳೆದ 6-7 ವರ್ಷಗಳಲ್ಲಿ 170ಕ್ಕೂ ಅಧಿಕ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಸಿಲಾಗಿದೆ ಮತ್ತು ಇನ್ನೂ 100ಕ್ಕೂ ಅಧಿಕ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಕಾರ್ಯ ಕ್ಷಿಪ್ರವಾಗಿ ಸಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶದಲ್ಲಿ 2014ರಲ್ಲಿ ಒಟ್ಟಾರೆ ಸುಮಾರು 82 ಸಾವಿರದ ಪದವಿ ಮತ್ತು ಸ್ನಾತಕೋತ್ತರ ಪದವಿ ಸೀಟುಗಳಿದ್ದವು, ಇಂದು ಅವುಗಳ ಸಂಖ್ಯೆ 1ಲಕ್ಷದ 40ಸಾವಿರಕ್ಕೆ ಹೆಚ್ಚಳವಾಗಿದೆ. ಆಡಳಿತ ಮತ್ತು ನಿಯಂತ್ರಣ ವಲಯದಲ್ಲಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾರ್ಯಾರಂಭದೊಂದಿಗೆ ಹಿಂದಿನ ಸಮಸ್ಯೆಗಳು ಮತ್ತು ಪ್ರಶ್ನೆಗಳನ್ನು ಪರಿಹರಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಕೌಶಲ್ಯಹೊಂದಿದ ಮಾನವಶಕ್ತಿ ಪರಿಣಾಮಕಾರಿ ಆರೋಗ್ಯ ಸೇವೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಇದು ಕೊರೊನಾ ಸಂದರ್ಭದಲ್ಲಿ ತೀವ್ರವಾಗಿ ಅನುಭವಕ್ಕೆ ಬಂದಿದೆ. ಕೇಂದ್ರ ಸರ್ಕಾರದ ‘ಸರ್ವರಿಗೂ ಉಚಿತ ಲಸಿಕೆ’ ಅಭಿಯಾನದ ಯಶಸ್ಸು ಅದರ ಪ್ರತಿಬಿಂಬವಾಗಿದೆ. ಇಂದಿಗೆ ಸುಮಾರು 88 ಕೋಟಿ ಗೂ ಅಧಿಕ ಕೋವಿಡ್ ಲಸಿಕೆಗಳನ್ನು ದೇಶದಲ್ಲಿ ನೀಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಆಜಾದಿ ಕಾ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಉನ್ನತ ಮಟ್ಟದ ಕೌಶಲ್ಯವು ಭಾರತವನ್ನು ಬಲಪಡಿಸುವುದಲ್ಲದೆ, ಸ್ವಾವಲಂಬಿ ಭಾರತದ ಸಂಕಲ್ಪವನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪೆಟ್ರೋ-ಕೆಮಿಕಲ್ ನಂತರ ಕೈಗಾರಿಕೆಗಳಲ್ಲಿ ಇಂದು ನುರಿತ ಮಾನವ ಶಕ್ತಿ ಅತ್ಯಗತ್ಯವಾಗಿ ಬೇಕಾಗಿದೆ. ಹೊಸ ಪೆಟ್ರೋ ಕೆಮಿಕಲ್ ತಂತ್ರಜ್ಞಾನ ಸಂಸ್ಥೆ ಲಕ್ಷಾಂತರ ಯುವಕರಿಗೆ ಹೊಸ ಸಾಧ್ಯತೆಗಳ ಸಂಪರ್ಕಗಳನ್ನು ಒದಗಿಸಲಿದೆ ಎಂದು ಅವರು ಹೇಳಿದರು.
ತಾವು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಪಂಡಿತ್ ದೀನ ದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯ ಸ್ಥಾಪನೆಗೆ ಮತ್ತು ಅದರ ಪೋಷಣೆಗೆ ಕೈಗೊಂಡ ಪ್ರಯತ್ನಗಳನ್ನು ಅವರು ಸ್ಮರಿಸಿ, ಆ ವಿಶ್ವವಿದ್ಯಾಲಯ ಇಂದು ರಾಜ್ಯದ ಇಂಧನ ವಿಶ್ವವಿದ್ಯಾಲಯವಾಗಿ ಪರಿವರ್ತನೆಗೊಂಡಿದೆ ಎಂದರು. ಇಂತಹ ಸಂಸ್ಥೆಗಳು ಯುವಕರಿಗೆ ಶುದ್ಧ ಇಂಧನ ಆವಿಷ್ಕಾರಗಳ ಕೊಡುಗೆಯನ್ನು ನೀಡಲು ದಾರಿ ತೋರಲಿದೆ ಎಂದು ಅವರು ಹೇಳಿದರು.
ಬಾರ್ಮರ್ ನಲ್ಲಿರುವ ರಾಜಸ್ಥಾನ ರಿಫೈನರಿ ಯೋಜನೆ 70,000 ಕೋಟಿ ರೂ. ಹೂಡಿಕೆಯೊಂದಿಗೆ ಕ್ಷಿಪ್ರವಾಗಿ ಪ್ರಗತಿಯಲ್ಲಿದೆ ಎಂದು ಪ್ರಧಾನಮಂತ್ರಿ ಪ್ರಮುಖವಾಗಿ ಪ್ರಸ್ತಾಪಿಸಿದರು. ರಾಜ್ಯದಲ್ಲಿನ ನಗರ ಅನಿಲ ವಿತರಣಾ ಯೋಜನೆಯ ಕುರಿತು ಮಾತನಾಡಿದ ಅವರು, 2014ರವರೆಗೆ ರಾಜ್ಯದಲ್ಲಿ ಕೇವಲ ಒಂದು ನಗರದಲ್ಲಿ ಮಾತ್ರ ನಗರ ಅನಿಲ ವಿತರಣೆಗೆ ಅನುಮತಿ ನೀಡಲಾಗಿತ್ತು, ಇದೀಗ ರಾಜ್ಯದ 17 ಜಿಲ್ಲೆಗಳಿಗೆ ನಗರ ಅನಿಲ ವಿತರಣಾ ಜಾಲ ಹೊಂದಲು ಅನುಮೋದನೆ ನೀಡಲಾಗಿದೆ ಎಂದರು.
ಮುಂಬರುವ ವರ್ಷಗಳಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯೂ ಕೊಳೆವೆ ಅನಿಲ ಜಾಲವನ್ನು ಹೊಂದಲಿದೆ. ಶೌಚಾಲಯ, ವಿದ್ಯುತ್ , ಅನಿಲ ಸಂಪರ್ಕಗಳ ಆಗಮನದೊಂದಿಗೆ ಜನರ ಜೀವನವನ್ನು ಇನ್ನಷ್ಟು ಸುಗಮಗೊಳಿಸಲಾಗಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಇಂದು 21 ಲಕ್ಷಕ್ಕೂ ಅಧಿಕ ಕುಟುಂಬಗಳು ಜಲ ಜೀವನ್ ಮಿಷನ್ ಮೂಲಕ ಕೊಳವೆ ಮೂಲಕ ಶುದ್ಧ ಕುಡಿಯುವ ನೀರು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ರಾಜಸ್ಥಾನದ ಪ್ರಗತಿ ಭಾರತದ ಅಭಿವೃದ್ಧಿಗೆ ವೇಗ ನೀಡುತ್ತದೆ ಎಂದ ಅವರು, ರಾಜಸ್ಥಾನದಲ್ಲಿ ಬಡ ಕುಟುಂಬಗಳಿಗಾಗಿ 13ಲಕ್ಷಕ್ಕೂ ಅಧಿಕ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ ಎಂದರು.
****
(Release ID: 1759682)
Visitor Counter : 281
Read this release in:
Malayalam
,
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu