ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರಿಂದ ಲಡಾಕ್‌ನ ಹಂಬೋಟಿಂಗ್ ಲಾ ದಲ್ಲಿ ದೂರದರ್ಶನ/ಆಕಾಶವಾಣಿ ಟ್ರಾನ್ಸ್‌ಮಿಟರ್‌ಗಳಿಗೆ ಚಾಲನೆ


ದೂರ ಪ್ರದೇಶ ಮತ್ತು ಗಡಿ ಪ್ರದೇಶಗಳನ್ನು ಒಳಗೊಳ್ಳಲು ಅತಿ ಎತ್ತರದಲ್ಲಿರುವ ಪ್ರಸಾರ ಭಾರತಿಯ ಟ್ರಾನ್ಸ್‌ಮಿಟರ್‌ಗಳು

Posted On: 25 SEP 2021 2:50PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು, ಲಡಾಖ್‌ನ ಕಾರ್ಗಿಲ್ ಬಳಿಯ ಹಂಬೋಟಿಂಗ್ ಲಾ ದಲ್ಲಿ ಇಂದು ದೂರದರ್ಶನ ಮತ್ತು ಆಕಾಶವಾಣಿಯ  ಹೈ ಪವರ್ ಟ್ರಾನ್ಸ್‌ಮಿಟರ್‌ಗಳನ್ನು  ರಾಷ್ಟ್ರಕ್ಕೆ ಸಮರ್ಪಿಸಿದರು. 10 ಕಿ.ವ್ಯಾ. ಸಾಮರ್ಥ್ಯದ ಈ ಟ್ರಾನ್ಸ್‌ಮಿಟರ್‌ಗಳು ದೇಶದ ಅತಿ ಎತ್ತರದಲ್ಲಿರುವ ಟಿವಿ ಮತ್ತು ರೇಡಿಯೋ ಟ್ರಾನ್ಸ್‌ಮಿಟರ್‌ಗಳಾಗಿವೆ.  ಇವು ಸಮುದ್ರ ಮಟ್ಟಕ್ಕಿಂತ 4054 ಮೀಟರ್ (ಸುಮಾರು 13,300 ಅಡಿ) ಎತ್ತರದಲ್ಲಿವೆ. ಲೇಹ್‌ನಲ್ಲಿರುವ ಟ್ರಾನ್ಸ್‌ಮಿಟರ್‌ಗಳು 3501 ಮೀಟರ್ (ಸುಮಾರು 11,450 ಅಡಿ) ಎತ್ತರದಲ್ಲಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪ್ರತಿಕೂಲ ಹವಾಮಾನ ಮತ್ತು ಭೌಗೋಳಿಕ ಭೂಪ್ರದೇಶವನ್ನು ಪರಿಗಣಿಸಿದರೆ ಹ್ಯಾಂಬೋಟಿಂಗ್ ಲಾ ಅತ್ಯಂತ ಕಷ್ಟಕರವಾದ ಸ್ಥಳಗಳಲ್ಲಿ ಒಂದಾಗಿದೆ ಎಂದರು. ಇಂತಹ ಪ್ರತಿಕೂಲ ವಾತಾವರಣದಲ್ಲಿ ಯೋಜನೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಎಂಜಿನಿಯರ್‌ಗಳು ಮತ್ತು ಕಾರ್ಮಿಕರ ತಂಡವನ್ನು ಸಚಿವರು ಅಭಿನಂದಿಸಿದರು. ಟ್ರಾನ್ಸ್‌ಮಿಟರ್‌ಗಳ ವ್ಯಾಪ್ತಿಯು 50 ಕಿ.ಮೀ. ಸುತ್ತಳತೆಗಿಂತಲೂ ಹೆಚ್ಚು. ಕಾರ್ಗಿಲ್‌ನ ದೂರದ ಗಡಿ ಪ್ರದೇಶದಲ್ಲಿರುವ ಈ ಟ್ರಾನ್ಸ್‌ಮಿಟರ್‌ಗಳು ಸುಮಾರು 50,000 ಜನಸಂಖ್ಯೆಯನ್ನು ಒಳಗೊಳ್ಳುತ್ತವೆ ಎಂದ ಶ್ರೀ ಠಾಕೂರ್, ದೇಶದ ಇತರ ಭಾಗಗಳಿಗೆ ಹೋಲಿಸಿದರೆ ಈ ಸಂಖ್ಯೆ ಸಣ್ಣದಾಗಿ ಕಾಣಿಸಬಹುದು, ಆದರೆ ಇದು ಗಡಿ ಪ್ರದೇಶಗಳಲ್ಲಿರುವ ಪ್ರತಿಯೊಬ್ಬ ನಾಗರಿಕನನ್ನು ತಲುಪಲು ಭಾರತ ಸರ್ಕಾರಕ್ಕಿರುವ ಬದ್ಧತೆಯನ್ನು ತೋರಿಸುತ್ತದೆ ಎಂದರು. 2021 ರ ಅಕ್ಟೋಬರ್ 1 ರಿಂದ ಡಿಡಿ ಕಾಶ್ಮೀಳರ್‌ಗೆ ಲಡಾಖಿ ಕೊಡುಗೆಯನ್ನು ಈಗಿರುವ ಪ್ರತಿದಿನದ 30 ನಿಮಿಷ ವನ್ನು  ಒಂದು ಗಂಟೆಯ ಅವಧಿಗೆ ದ್ವಿಗುಣಗೊಳಿಸಲಾಗುವುದು ಎಂದು ಸಚಿವರು ಘೋಷಿಸಿದರು.
ರೇಡಿಯೋ ಮತ್ತು ದೂರದರ್ಶನದ ಬಲವಾದ ಸಿಗ್ನಲ್‌ಗಳ ಮೂಲಕ ಗಡಿಗಳಲ್ಲಿ ಪ್ರಸಾರವು ಸರ್ಕಾರದ ಪ್ರಸಾರ ನೀತಿಗಳ ಒಂದು ಪ್ರಮುಖ ಅಂಶವಾಗಿದೆ ಎಂದು ಶ್ರೀ ಠಾಕೂರ್ ಹೇಳಿದರು. ಜಮ್ಮು ಮತ್ತು ಕಾಶ್ಮೀರ ಹಾಗು ಲಡಾಖ್‌ನ ಸೂಕ್ಷ್ಮ ಗಡಿ ಪ್ರದೇಶಗಳಲ್ಲಿ ಜನರಿಗೆ ಸೂಕ್ತ ಮಾಹಿತಿಯನ್ನು ಒದಗಿಸುವುದು ಮಾತ್ರವಲ್ಲದೆ ನೆರೆಹೊರೆಯ ಶತ್ರುಗಳ ಅಪಪ್ರಚಾರವನ್ನು ಎದುರಿಸುವುದು ಸಹ ಅಗತ್ಯವಾಗಿದೆ ಎಂದು ಸಚಿವರು ಹೇಳಿದರು. ಗಡಿ ಪ್ರದೇಶಗಳಲ್ಲಿ ಪ್ರಸಾರ ವ್ಯಾಪ್ತಿಯನ್ನು ಬಲಪಡಿಸುವುದರಿಂದ ವೀಕ್ಷಕರಿಗೆ/ಕೇಳುಗರಿಗೆ ದೇಶದ ನೀತಿಗಳು, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಮರ್ಪಕವಾದ ಮಾಹಿತಿ ನೀಡಲು ಮತ್ತು ವಿವಿಧ ಕಾರ್ಯಕ್ರಮಗಳ ಮೂಲಕ ಮನರಂಜನೆ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಟ್ರಾನ್ಸ್‌ಮಿಟರ್‌ಗಳು ಈ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಷಯವನ್ನು ಡಿಡಿ ಮತ್ತು ಆಕಾಶವಾಣಿ ಮೂಲಕ ಲಭ್ಯವಾಗುವಂತೆ ಮಾಡುತ್ತವೆ. ಟಿವಿ, ರೇಡಿಯೋ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ, ಪ್ರಸಾರ ಭಾರತಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ರಾಜ್ಯ ಶಿಕ್ಷಣ ಇಲಾಖೆಗಳು ಮತ್ತು ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಶೈಕ್ಷಣಿಕ ವಿಷಯಗಳನ್ನು ನೀಡುತ್ತಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಡಾಕ್ ನ ಸಂಸತ್ ಸದಸ್ಯ ಶ್ರೀ ಜೆ ಟಿ ನಮಗ್ಯಾಲ್, ಹೊಸ ಟ್ರಾನ್ಸ್‌ಮಿಟರ್‌ಗಳು ಈ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರಕ್ಕಿರುವ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಟಿವಿ ಮತ್ತು ರೇಡಿಯೋ ಚಾನೆಲ್‌ಗಳನ್ನು ಸಾಮಾನ್ಯ ಜನರಿಗೆ ತಲುಪುವಂತೆ ಮಾಡಲು, ಪ್ರಸಾರ ಭಾರತಿಯು ಸುದ್ದಿ, ಮನರಂಜನೆ, ಶಿಕ್ಷಣಕ್ಕೆ ಸಂಬಂಧಿಸಿದ 160 ಟಿವಿ ಚಾನೆಲ್‌ಗಳನ್ನು ಮತ್ತು 48 ರೇಡಿಯೋ ಚಾನೆಲ್‌ಗಳನ್ನು ಡಿಡಿ ಉಚಿತ ಡಿಶ್ ಮೂಲಕ ಯಾವುದೇ ಮಾಸಿಕ ಶುಲ್ಕವಿಲ್ಲದೆ ಉಚಿತವಾಗಿ ನೀಡುತ್ತಿದೆ. ವಿಶಿಷ್ಟವಾದ ಉಚಿತ ಪ್ರಸಾರ ಮಾದರಿಯು ಡಿಡಿ ಫ್ರೀ ಡಿಶ್ ಅನ್ನು 4 ಕೋಟಿಗೂ ಹೆಚ್ಚು ಮನೆಗಳಿಗೆ ತಲುಪುತ್ತಿರುವ ದೊಡ್ಡ ಡಿಟಿಎಚ್ ಪ್ಲಾಟ್‌ಫಾರ್ಮ್ ಮಾಡಿದೆ.

 

***


(Release ID: 1758078) Visitor Counter : 288