ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

2019-20ನೇ ವರ್ಷದ ʻರಾಷ್ಟ್ರೀಯ ಸೇವಾ ಯೋಜನೆʼ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ರಾಷ್ಟ್ರಪತಿಗಳು

ಪ್ರಧಾನಮಂತ್ರಿಯವರ ನವ ಭಾರತದ ಕನಸಿನಲ್ಲಿ ಯುವಜನರು ಪರಿವರ್ತನಾತ್ಮಕ ಪಾತ್ರ ವಹಿಸಬೇಕಿದೆ: ಶ್ರೀ ಅನುರಾಗ್ ಠಾಕೂರ್

Posted On: 24 SEP 2021 4:13PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀ ರಾಮ ನಾಥ್ ಕೋವಿಂದ್ ಅವರು ಇಂದು (ಸೆಪ್ಟೆಂಬರ್ 24, 2021) ನಡೆದ ವರ್ಚ್ಯುಯಲ್‌ ಸಮಾರಂಭದಲ್ಲಿ 2019-20ನೇ ಸಾಲಿನ ʻರಾಷ್ಟ್ರೀಯ ಸೇವಾ ಯೋಜನೆʼ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ಯುವಜನ ವ್ಯವಹಾರಗಳ ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಅವರು ನವದೆಹಲಿಯ ಸುಷ್ಮಾ ಸ್ವರಾಜ್ ಭವನದಿಂದ ಸಮಾರಂಭದಲ್ಲಿ ಪಾಲ್ಗೊಂಡರು. ಯುವಜನ ವ್ಯವಹಾರಗಳ ಕಾರ್ಯದರ್ಶಿ ಶ್ರೀಮತಿ ಉಷಾ ಶರ್ಮಾ ಮತ್ತು ಕ್ರೀಡಾ ಕಾರ್ಯದರ್ಶಿ ಶ್ರೀ ರವಿ ಮಿತ್ತಲ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

2019-20ನೇ ಸಾಲಿನಲ್ಲಿ ʻರಾಷ್ಟ್ರೀಯ ಸೇವಾ ಯೋಜನೆʼ (ಎನ್‌ಎಸ್ಎಸ್) ಪ್ರಶಸ್ತಿಗಳನ್ನು ವಿಶ್ವವಿದ್ಯಾಲಯ/ +2 ಮಂಡಳಿಗಳು, ಎನ್‌ಎಸ್‌ಎಸ್ ಘಟಕಗಳು ಮತ್ತು ಅವುಗಳ ಕಾರ್ಯಕ್ರಮ ಅಧಿಕಾರಿಗಳು ಮತ್ತು ಎನ್‌ಎಸ್‌ಎಸ್ ಸ್ವಯಂಸೇವಕರು – ಹೀಗೆ 3 ವಿಭಿನ್ನ ವಿಭಾಗಗಳಲ್ಲಿ 42 ಪ್ರಶಸ್ತಿ ವಿಜೇತರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಸಾಮಾನ್ಯವಾಗಿ ಮಾನವ ಜೀವನದ ಕಟ್ಟಡವು ವಿದ್ಯಾರ್ಥಿ ಜೀವನದ ಅಡಿಪಾಯದ ಮೇಲೆಯೇ ನಿರ್ಮಾಣವಾಗುತ್ತದೆ.ಕಲಿಕ ಒಂದು ನಿರಂತರ ಪ್ರಕ್ರಿಯೆ ಯಾಗಿದೆಯಾದರೂ ಮೂಲಭೂತ ವ್ಯಕ್ತಿತ್ವ ವಿಕಸನವು ವಿದ್ಯಾರ್ಥಿ ಜೀವನದಲ್ಲಿ ಪ್ರಾರಂಭವಾಗುತ್ತದೆ. ಅದಕ್ಕಾಗಿಯೇ ʻಎನ್‌ಎಸ್‌ಎಸ್ʼ ಅನ್ನು ದೂರದೃಷ್ಟಿಯ ಯೋಜನೆ ಎಂದು ಪರಿಗಣಿಸಲಾಗುತ್ತದೆ. ಇದರ ಮೂಲಕ ವಿದ್ಯಾರ್ಥಿಗಳು ತಮ್ಮ ಶಾಲಾ ಮತ್ತು ಕಾಲೇಜು ದಿನಗಳಲ್ಲಿಯೇ ಸಮಾಜ ಮತ್ತು ದೇಶಕ್ಕೆ ಸೇವೆ ಸಲ್ಲಿಸಲು ಅವಕಾಶ ಪಡೆಯುತ್ತಾರೆ ಎಂದರು.

ಮಹಾತ್ಮಾ ಗಾಂಧಿಯವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ 1969ರಲ್ಲಿ ʻರಾಷ್ಟ್ರೀಯ ಸೇವಾ ಯೋಜನೆʼಯನ್ನು ಸ್ಥಾಪಿಸಲಾಯಿತು ಎಂಬ ಅಂಶವನ್ನು ಉಲ್ಲೇಖಿಸಿದ ರಾಷ್ಟ್ರಪತಿಗಳು, ಮಹಾತ್ಮಾ ಗಾಂಧಿ ಅವರು ತಮ್ಮ ಇಡೀ ಜೀವನವನ್ನು ಮನುಕುಲದ ಸೇವೆಗೆ ಮುಡಿಪಾಗಿಟ್ಟರು ಎಂದರು. ನಮ್ಮ ಯುವಕರು ಜವಾಬ್ದಾರಿಯುತ ಪ್ರಜೆಗಳಾಗಬೇಕೆಂದು ಮತ್ತು ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎಂದು ಅವರು ಆಶಿಸಿದರು. ಗಾಂಧೀಜಿಯವರ ಪ್ರಕಾರ 'ನಿಮ್ಮನ್ನು ನೀವು ತಿಳಿದುಕೊಳ್ಳಲು ಅತ್ಯುತ್ತಮ ಮಾರ್ಗವೆಂದರೆ ಇತರರ ಸೇವೆಯಲ್ಲಿ ನಿಮ್ಮನ್ನು ಸಮರ್ಪಿಸಿಕೊಳ್ಳುವುದು'. ಗಾಂಧೀಜಿ ಅವರ ಜೀವನ ಮಾನವ ಸೇವೆಗೆ ಒಂದು ವಿಶಿಷ್ಟ ಉದಾಹರಣೆ. ಅವರ ಆದರ್ಶಗಳು ಮತ್ತು ಸೇವಾ ಮನೋಭಾವವು ಇಂದಿಗೂ ನಮ್ಮೆಲ್ಲರಿಗೂ ಪ್ರಸ್ತುತ ಮತ್ತು ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.

ಕೋವಿಡ್-19 ಸಾಂಕ್ರಾಮಿಕ ಸ್ಫೋಟದ ಆರಂಭಿಕ ಹಂತದಲ್ಲಿ, ದೊಡ್ಡ ಮಟ್ಟದಲ್ಲಿ ಮಾಸ್ಕ್‌ಗಳ ಉತ್ಪಾದನೆ ಆರಂಭವವಾಗುವರೆಗೂ ʻಎನ್‌ಎಸ್‌ಎಸ್ʼನಿಂದ 2 ಕೋಟಿ 30 ಲಕ್ಷಕ್ಕೂ ಹೆಚ್ಚು ಮಾಸ್ಕ್‌ಗಳನ್ನು ತಯಾರಿಸಲಾಯಿತು ಮತ್ತು ದೇಶದ ವಿವಿಧ ಭಾಗಗಳಿಗೆ ವಿತರಿಸಲಾಯಿತು ಎಂದು ರಾಷ್ಟ್ರಪತಿಗಳು ಹೇಳಿದರು. ʻಎನ್‌ಎಸ್‌ಎಸ್ʼ ಸ್ವಯಂಸೇವಕರು ಕೋವಿಡ್ ಸಂಬಂಧಿತ ಮಾಹಿತಿಯನ್ನು ಸಹಾಯವಾಣಿಯ ಮೂಲಕ ಜನರಿಗೆ ತಲುಪಿಸಿದ್ದಾರೆ ಹಾಗೂ ಜಾಗೃತಿ ಮತ್ತು ಪರಿಹಾರ ಚಟುವಟಿಕೆಗಳಲ್ಲಿ ಜಿಲ್ಲಾಡಳಿತಗಳಿಗೆ ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದರು.

ಭಾರತದ ಸ್ವಾತಂತ್ರ್ಯದ 75ನೇ ವರ್ಷವನ್ನು ದೇಶಾದ್ಯಂತ 'ಆಜಾ಼ದಿ ಕಾ ಅಮೃತ ಮಹೋತ್ಸವ' ಎಂದು ಆಚರಿಸಲಾಗುತ್ತಿದೆ ಎಂದು ರಾಷ್ಟ್ರಪತಿಗಳು ಪ್ರಸ್ತಾಪಿಸಿದರು. ಭಾರತೀಯ ಸ್ವಾತಂತ್ರ್ಯ ಚಳವಳಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯ ಬಗ್ಗೆ ವೆಬಿನಾರ್‌ಗಳು/ಸೆಮಿನಾರ್‌ಗಳನ್ನು ಆಯೋಜಿಸುವ ಮೂಲಕ ʻಎನ್‌ಎಸ್‌ಎಸ್ʼ ಸ್ವಯಂಸೇವಕರು ಈ ಮಹೋತ್ಸವಕ್ಕೆ ಕೊಡುಗೆ ನೀಡುತ್ತಿರುವುದನ್ನು ಉಲ್ಲೇಖಿಸಿ ಅವರು ಹರ್ಷ ವ್ಯಕ್ತಪಡಿಸಿದರು. ನಮ್ಮ ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳ ಬಗ್ಗೆ ಜಾಗೃತಿ ಮೂಡಿಸುವುದು ಸಹ ದೇಶ ಸೇವೆಯೇ ಎಂದು ಅವರು ಅಭಿಪ್ರಾಯಪಟ್ಟರು.

ಹಿಂದಿಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಸಂದರ್ಭದಲ್ಲಿ ಮಾತನಾಡಿದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ʻಕುಟುಂಬದ ಸೇವಕʼರಾಗಿ ಸೇವೆ ಒದಗಿಸಿದ್ದಕ್ಕಾಗಿ ʻಎನ್‌ಎಸ್‌ಎಸ್ʼ ಸ್ವಯಂಸೇವಕರು ಮತ್ತು ಅಧಿಕಾರಿಗಳನ್ನು ಶ್ಲಾಘಿಸಿದರು. ಅವರ ನಿಸ್ವಾರ್ಥ ಸೇವೆ ಮತ್ತು ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು, ಲಸಿಕೆ ಅಭಿಯಾನಗಳು, ರಕ್ತದಾನ ಶಿಬಿರಗಳು ಮತ್ತು ನೈಸರ್ಗಿಕ ವಿಪತ್ತುಗಳ ನಿರ್ವಹಣೆಗೆ ಅವರ ಕೊಡುಗೆಯನ್ನು ಸಚಿವರು ಕೊಂಡಾಡಿದರು. ಯುವಕರೇ ದೇಶದ ಭವಿಷ್ಯ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ ಎಂದು ಶ್ರೀ ಅನುರಾಗ್ ಠಾಕೂರ್ ಪುನರುಚ್ಚರಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಲು ಹೆಚ್ಚು ಹೆಚ್ಚು ಯುವಕರು ಮುಂದೆ ಬರಬೇಕು. ಅಲ್ಲಿ ಅವರಿಗೆ ನೈಜ ಭಾರತ ಮತ್ತು ಅದರ ಸಮಸ್ಯೆಗಳ ಅರಿವಾಗುತ್ತದೆ ಎಂದು ಸಚಿವರು ಒತ್ತಾಯಿಸಿದರು. ಯುವಕರು ಸಮಾಜದ ಅತ್ಯಂತ ಪ್ರಗತಿಪರ ವಿಭಾಗವನ್ನು ಪ್ರತಿನಿಧಿಸುತ್ತಾರೆ ಮತ್ತು ಪ್ರಧಾನಮಂತ್ರಿಯವರ ನವ ಭಾರತದ ಕನಸಿನಲ್ಲಿ ಪರಿವರ್ತನಾತ್ಮಕ ಪಾತ್ರವನ್ನು ಅವರು ಹೊಂದಿದ್ದಾರೆ ಎಂದು ಸಚಿವರು ಹೇಳಿದರು. ಇದೇ ವೇಳೆ ನವ, ಆಧುನಿಕ ಮತ್ತು ಏಕೀಕೃತ ಭಾರತಕ್ಕಾಗಿ ಪ್ರಧಾನ ಮಂತ್ರಿಯವರ ದೃಷ್ಟಿಕೋನವಾದ ʻಸಬ್ ಕಾ ಸಾಥ್, ಸಬ್ ಕಾವಿಕಾಸ್‌ʼ, ʻಸಬ್ ಕಾ ವಿಶ್ವಾಸ್ ಔರ್‌ ಸಬ್ ಕಾ ಪ್ರಯಾಸ್‌ʼ ಮತ್ತು ʻಏಕ್ ಭಾರತ್, ಶ್ರೇಷ್ಠ್‌ ಭಾರತ್ʼನತ್ತ ನಾವು ತ್ವರಿತವಾಗಿ ಸಾಗುತ್ತಿದ್ದೇವೆ ಎಂದು ಶ್ರೀ ಅನುರಾಗ್ ಠಾಕೂರ್ ವಿಶ್ವಾಸ ವ್ಯಕ್ತಪಡಿಸಿದರು.

ʻಡಿಜಿಟಲ್ ಇಂಡಿಯಾʼ, ʻಸ್ಕಿಲ್ ಇಂಡಿಯಾʼ, ʻಸ್ಟಾರ್ಟ್ ಅಪ್ ಅಂಡ್‌ ಸ್ಟ್ಯಾಂಡ್ ಅಪ್ ಇಂಡಿಯಾʼದಂತಹ ಸರಕಾರಿ ಅಭಿಯಾನಗಳೊಂದಿಗೆ ಯುವಕರು ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿರುವುದಕ್ಕಾಗಿ ಹಾಗೂ ಅವರ ಪ್ರಯತ್ನಗಳಿಗೆ ಅಂತರರಾಷ್ಟ್ರೀಯ ಮನ್ನಣೆ ಯನ್ನು ಸಾಧಿಸಿದ್ದಕ್ಕಾಗಿ ಶ್ರೀ ಅನುರಾಗ್ ಠಾಕೂರ್ ಹೆಮ್ಮೆ ವ್ಯಕ್ತಪಡಿಸಿದರು. ಯುವಜನರ ಕೌಶಲ್ಯ ವೃದ್ಧಿ ಕಾರ್ಯಕ್ರಮಗಳ ನೆರವಿನಿಂದ ವಿಶ್ವಕ್ಕೆ ಅತಿದೊಡ್ಡ ನುರಿತ ಕಾರ್ಯಪಡೆಯನ್ನು ನೀಡಲು ನಾವು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ನಮ್ಮ ಸ್ವಾತಂತ್ರ್ಯದ 75ನೇ ವರ್ಷದ ಅಂಗವಾಗಿ ಆಚರಿಸಲಾಗುತ್ತಿರುವ ʻಆಜಾ಼ದಿ ಕಾ ಅಮೃತ್‌ ಮಹೋತ್ಸವʼದ ಭಾಗವಾಗುವ ಮೂಲಕ ಮಹಾನ್ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಬೇಕೆಂದು ಯುವಕರಿಗೆ ಅವರು ಕರೆ ನೀಡಿದರು.

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆಯ ಸಹಾಯಕ ಸಚಿವರು ತಮ್ಮ ಸಂದೇಶದಲ್ಲಿ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು. ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಶ್ರೇಷ್ಠ ಕೊಡುಗೆಯನ್ನು ನೀಡುವಂತೆ ಅವರು ಕೋರಿದರು. ಯುವಕರು ನವ ಭಾರತದ ಹರಿಕಾರರಾಗಲಿದ್ದಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಶಸ್ತಿ ವಿಜೇತರ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ʻರಾಷ್ಟ್ರೀಯ ಸೇವಾ ಯೋಜನೆʼಯ ಬೆಳ್ಳಿ ಹಬ್ಬದ ವರ್ಷದ ಸಂದರ್ಭದಲ್ಲಿ 1993-94ರಲ್ಲಿ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ʻಎನ್‌ಎಸ್‌ಎಸ್ ಪ್ರಶಸ್ತಿʼಗಳನ್ನು ಸ್ಥಾಪಿಸಿತು. ವಿಶ್ವವಿದ್ಯಾಲಯಗಳು/ ಕಾಲೇಜುಗಳು, (+2) ಮಂಡಳಿಗಳು, ಎಸ್‌ಎಸ್‌ಎಲ್‌ಸಿ, ಎನ್‌ಎಸ್‌ಎಸ್ ಘಟಕಗಳ/ ಕಾರ್ಯಕ್ರಮದ  ಅಧಿಕಾರಿಗಳು ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕರು ಸಮುದಾಯ ಸೇವೆಗೆ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸುವ ಮತ್ತು ಅದಕ್ಕಾಗಿ ಅವರನ್ನು ಸತ್ಕರಿಸುವ ಗುರಿಯೊಂದಿಗೆ ʻರಾಷ್ಟ್ರೀಯ ಸೇವಾ ಯೋಜನೆ ಪ್ರಶಸ್ತಿʼಗಳನ್ನು ನೀಡಲಾಗುತ್ತದೆ. ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ಪ್ರದಾನ ಮಾಡಲಾಗುತ್ತದೆ.

ʻಎನ್ಎಸ್ಎಸ್ʼ ಒಂದು ಕೇಂದ್ರ ವಲಯದ ಯೋಜನೆಯಾಗಿದ್ದು, ಸ್ವಯಂ ಪ್ರೇರಿತ ಸಮುದಾಯ ಸೇವೆಯ ಮೂಲಕ ವಿದ್ಯಾರ್ಥಿ ಯುವಕರ ವ್ಯಕ್ತಿತ್ವ ಹಾಗೂ ಗುಣಗಳನ್ನು ಅಭಿವೃದ್ಧಿಪಡಿಸುವ ಪ್ರಾಥಮಿಕ ಉದ್ದೇಶದೊಂದಿಗೆ 1969ರಲ್ಲಿ ಇದನ್ನು ಪ್ರಾರಂಭಿಸಲಾಯಿತು. ʻಎನ್‌ಎಸ್ಎಸ್ʼನ ಸೈದ್ಧಾಂತಿಕ ದೃಷ್ಟಿಕೋನವು ಮಹಾತ್ಮಾ ಗಾಂಧಿಯವರ ಆದರ್ಶಗಳಿಂದ ಪ್ರೇರಿತವಾಗಿದೆ. ಈ  ಹಿನ್ನೆಲೆಯಲ್ಲಿ "ನಾನಲ್ಲ, ನನಗಿಂತ ಮೊದಲು ನೀವುʼ (स्वयं  से पहले आप' ) ಎಂಬ ʻಎನ್‌ಎಸ್‌ಎಸ್‌ʼನ ಧ್ಯೇಯವಾಕ್ಯವು ಅತ್ಯಂತ ಸೂಕ್ತವಾದುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ʻಎನ್ಎಸ್ಎಸ್ʼ ಸ್ವಯಂಸೇವಕರು ಸಾಮಾಜಿಕವಾಗಿ ಪ್ರಸ್ತುತವಾಗಿರುವ ವಿಷಯಗಳ ಮೇಲೆ ಕೆಲಸ ನೀಡುತ್ತಾರೆ. ಸಮುದಾಯದ ಅಗತ್ಯಗಳಿಗೆ ತಕ್ಕಂತೆ ಈ ಸೇವೆಯು ವಿಕಸನಗೊಳ್ಳುತ್ತಿರುತ್ತದೆ. ತಮ್ಮ ನಿಯಮಿತ ಮತ್ತು ವಿಶೇಷ ಕ್ಯಾಂಪಿಂಗ್ ಚಟುವಟಿಕೆಗಳ ಮೂಲಕ ಈ ಸೇವೆ ಮಾಡಲಾಗುತ್ತದೆ. ಎನ್‌ಎಸ್‌ಎಸ್‌ ಸೇವೆ ಒದಗಿಸುವ ಅಂತಹ ವಿಷಯಗಳಲ್ಲಿ(1)ಸಾಕ್ಷರತೆ ಮತ್ತು ಶಿಕ್ಷಣ, (2) ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ಪೌಷ್ಟಿಕತೆ, (3) ಪರಿಸರ ಸಂರಕ್ಷಣೆ, (4) ಸಾಮಾಜಿಕ ಸೇವಾ  ಕಾರ್ಯಕ್ರಮಗಳು, (5) ಮಹಿಳೆಯರ ಸಬಲೀಕರಣಕ್ಕಾಗಿ ಕಾರ್ಯಕ್ರಮಗಳು, (6) ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳಿಗೆ ಸಂಬಂಧಿಸಿದ   ಕಾರ್ಯಕ್ರಮಗಳು,  (7) ವಿಪತ್ತುಗಳ ಸಮಯದಲ್ಲಿ ರಕ್ಷಣೆ ಮತ್ತು ಪರಿಹಾರ ಇತ್ಯಾದಿ ಸೇರಿವೆ.

***



(Release ID: 1757876) Visitor Counter : 155