ಪ್ರಧಾನ ಮಂತ್ರಿಯವರ ಕಛೇರಿ

ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆ ವೇಳೆ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

Posted On: 24 SEP 2021 3:10AM by PIB Bengaluru

ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆ ವೇಳೆ 2021ರ ಸೆಪ್ಟಂಬರ್ 23ರಂದು ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಸ್ಕಾಟ್ ಮಾರಿಸನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

ಸಾಂಕ್ರಾಮಿಕ ನಂತರದ ಕಾಲದಲ್ಲಿ ಉಭಯ ನಾಯಕರು ನಡೆಸಿದ ಮೊದಲ ಮುಖಾಮುಖಿ ಭೇಟಿ ಇದಾಗಿತ್ತು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಇನ್ನಷ್ಟು ಬಲವರ್ಧನೆಗೊಳಿಸಲು 2020ರ ಜೂನ್ 4ರಂದು ಕಾರ್ಯತಂತ್ರ ಪಾಲುದಾರಿಕೆಯ ಭಾಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಪ್ರಧಾನಮಂತ್ರಿ ಮಾರಿಸನ್ ನಡುವೆ ನಾಯಕರ ವರ್ಚುವಲ್ ಶೃಂಗಸಭೆ ನಡೆದಿತ್ತು.  

ಸಭೆಯ ವೇಳೆ, ಪ್ರಧಾನಮಂತ್ರಿಗಳು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆಯ ಹಲವು ವಿಷಯಗಳ ಕುರಿತು ವಿಸ್ತೃತ ಮಾತುಕತೆ ನಡೆಸಿದರು. ಇತ್ತೀಚೆಗೆ ನಡೆದ ಮೊದಲ ಭಾರತ-ಆಸ್ಟ್ರೇಲಿಯಾ ವಿದೇಶಾಂಗ ಮತ್ತು ರಕ್ಷಣಾ ಸಚಿವರ 2+2 ಮಾತುಕತೆ ಸೇರಿದಂತೆ ಉಭಯ ದೇಶಗಳ ನಡುವಿನ ನಿರಂತರ ಉನ್ನತ ಮಟ್ಟದ ಸಮಾಲೋಚನೆಗಳ ಕುರಿತು ಅವರು ತೃಪ್ತಿ ವ್ಯಕ್ತಪಡಿಸಿದರು.

ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಅಡಿಯಲ್ಲಿ 2020ರ ಜೂನ್ ತಿಂಗಳಲ್ಲಿ ನಡೆದ ನಾಯಕರ ವರ್ಚುವಲ್ ಶೃಂಗಸಭೆಯಿಂದೀಚೆಗೆ ನಡೆದ ಪ್ರಗತಿಯನ್ನು ಪ್ರಧಾನಮಂತ್ರಿಗಳು ಪರಾಮರ್ಶಿಸಿದರು ಮತ್ತು ಇಂಡೋ-ಪೆಸಿಫಿಕ್ ಪ್ರಾಂತ್ಯವನ್ನು ಮುಕ್ತ, ಸ್ವತಂತ್ರ ಮತ್ತು ಸಂಮೃದ್ಧ ಹಾಗೂ ನಿಯಮಾಧಾರಿತವನ್ನಾಗಿ ಮಾಡುವ ನಿಟ್ಟಿನಿಲ್ಲಿ ಮುಂದುವರಿಯಲು ಪರಸ್ಪರರ ಅನುಕೂಲಕ್ಕಾಗಿ ನಿಕಟ ಸಹಕಾರ ಮುಂದುವರಿಸಲು ಸಂಕಲ್ಪ ಕೈಗೊಂಡರು.

ಪ್ರಸ್ತುತ ನಡೆಯುತ್ತಿರುವ ದ್ವಿಪಕ್ಷೀಯ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (ಸಿಇಸಿಎ) ಮಾತುಕತೆಗಳ ಬಗ್ಗೆ ನಾಯಕರು ತೃಪ್ತಿವ್ಯಕ್ತಪಡಿಸಿದರು. ಆ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಅವರ ಭಾರತದ ವಿಶೇಷ ವ್ಯಾಪಾರ ಪ್ರತಿನಿಧಿಯಾಗಿ ಮಾಜಿ ಪ್ರಧಾನಿ ಶ್ರೀ ಟೋನಿ ಅಬಾಟ್ ಅವರು ಭಾರತಕ್ಕೆ ಭೇಟಿ ನೀಡುವುದನ್ನು ಸ್ವಾಗತಿಸಿದರು ಮತ್ತು ಡಿಸೆಂಬರ್ 2021ರೊಳಗೆ ಮಧ್ಯಂತರ ಒಪ್ಪಂದವನ್ನು ಪ್ರಕಟಿಸುವ ಸಾಧ್ಯತೆ ಬಗ್ಗೆ ಉಭಯ ದೇಶಗಳು ಬದ್ಧತೆಯನ್ನು ವ್ಯಕ್ತಪಡಿಸಿದವು.

ಅಂತಾರಾಷ್ಟ್ರೀಯ ಸಮುದಾಯವು ಹವಾಮಾನ ಬದಲಾವಣೆಯ ಸಮಸ್ಯೆಯನ್ನು ತುರ್ತಾಗಿ ಪರಿಹರಿಸುವ ಅಗತ್ಯವನ್ನು ಪ್ರಧಾನಮಂತ್ರಿಗಳು ಒತ್ತಿ ಹೇಳಿದರು. ಆ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪರಿಸರ ಸಂರಕ್ಷಣೆ ಕುರಿತು ವಿಸ್ತೃತ ಸಂವಾದದ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು ಮತ್ತು ಉಭಯ ನಾಯಕರು ಸ್ವಚ್ಛ ತಂತ್ರಜ್ಞಾನಗಳನ್ನು ಒದಗಿಸುವ ಸಾಧ್ಯತೆಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು.

ಎರಡೂ ದೇಶಗಳು ಅತ್ಯಂತ ಕ್ರಿಯಾಶೀಲ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು, ಇವು ಸಾಂಕ್ರಾಮಿಕ ನಂತರದ ಜಗತ್ತಿನಲ್ಲಿ ಪೂರೈಕೆ ಸರಣಿ ಸ್ಥಿತಿಸ್ಥಾಪಕತ್ವ ವೃದ್ಧಿ ಸೇರಿದಂತೆ ಎಲ್ಲ ಸವಾಲುಗಳನ್ನು ಎದುರಿಸಲು ಇನ್ನಷ್ಟು ನಿಕಟವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿಗಳು ಒಪ್ಪಿದರು.

ಇಬ್ಬರೂ ನಾಯಕರು ಆಸ್ಟ್ರೇಲಿಯಾದ ಆರ್ಥಿಕತೆ ಮತ್ತು ಸಮಾಜಕ್ಕೆ ಅನಿವಾಸಿ ಭಾರತೀಯರು ನೀಡಿರುವ ಅಪಾರ ಕೊಡುಗೆಯನ್ನು ಶ್ಲಾಘಿಸಿದರು ಮತ್ತು ಜನರ ಜನರ ನಡುವಿನ ಸಂಬಂಧ ಹೆಚ್ಚಳದ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಅವರಿಗೆ ಶೀಘ್ರವೇ ಭಾರತ ಭೇಟಿ ಕೈಗೊಳ್ಳಬೇಕು ಎಂಬ ತಮ್ಮ ಆಹ್ವಾನ ಪುನರುಚ್ಚರಿಸಿದರು.

***



(Release ID: 1757605) Visitor Counter : 249