ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಚೊಚ್ಚಲ ʻಹಿಮಾಲಯನ್ ಚಲನಚಿತ್ರೋತ್ಸವʼಕ್ಕೆ ಸೆಪ್ಟೆಂಬರ್ 24 ರಂದು ಚಾಲನೆ ನೀಡಲಿರುವ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್


ತಾರಾ ದಿಗ್ಗಜರಿಂದ ರಂಗೇರಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ʻಶೇರ್‌ಷಾʼ ಚಿತ್ರದ ನಿರ್ದೇಶಕ ಶ್ರೀ ವಿಷ್ಣುವರ್ಧನ್ ಮತ್ತು ನಾಯಕ ನಟ ಶ್ರೀ ಸಿದ್ಧಾರ್ಥ್ ಮಲ್ಹೋತ್ರಾ ಅವರು ಪಾಲ್ಗೊಳ್ಳಲಿದ್ದಾರೆ

ಪರಮವೀರ ಚಕ್ರ ಪ್ರಶಸ್ತಿ ವಿಜೇತ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನ ಆಧರಿತ ಯುದ್ಧ ಚಿತ್ರ ʻಶೇರ್‌ಷಾʼ ಪ್ರದರ್ಶನದ ಮೂಲಕ 5 ದಿನಗಳ ಉತ್ಸವಕ್ಕೆ ಚಾಲನೆ ದೊರೆಯಲಿದೆ

ಜನಪ್ರಿಯ ಚಲನಚಿತ್ರಗಳ ಪ್ರದರ್ಶನಗಳ ಜೊತೆಗೆ ಸ್ಪರ್ಧೆ ಮತ್ತು ಸ್ಪರ್ಧೆಯೇತರ ವಿಭಾಗಗಳು, ʻಮಾಸ್ಟರ್‌ಕ್ಲಾಸ್, ಸಮಾಲೋಚನೆಗಳಿಗೆ ಈ ಸಿನಿ ಉತ್ಸವವು ಸಾಕ್ಷಿಯಾಗಲಿದೆ

ಪ್ರಕಟಣಾ ದಿನಾಂಕ: 22 SEP 2021 1:13PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು 2021 ಸೆಪ್ಟೆಂಬರ್ 24ರಂದು ಚೊಚ್ಚಲ ʻಹಿಮಾಲಯನ್ ಚಲನಚಿತ್ರೋತ್ಸವʼವನ್ನು ಉದ್ಘಾಟಿಸಲಿದ್ದಾರೆ. ಐದು ದಿನಗಳ ಉತ್ಸವವು 2021 ಸೆಪ್ಟೆಂಬರ್ 24ರಿಂದ 28ರವರೆಗೆ ಲಡಾಖ್‌ನ ಲೇಹ್‌ನಲ್ಲಿ ನಡೆಯಲಿದೆ.

ಚಿತ್ರೋತ್ಸವದ ಉದ್ಘಾಟನಾ ಸಮಾರಂಭವು ಭಾರಿ ಜನಮೆಚ್ಚುಗೆ ಪಡೆದ ಚಲನಚಿತ್ರ ʻಶೇರ್‌ಷಾʼ ನಿರ್ದೇಶಕ ಶ್ರೀ ವಿಷ್ಣುವರ್ಧನ್ ಮತ್ತು ನಾಯಕ ನಟ ಶ್ರೀ ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಚಿತ್ರದ ನಿರ್ಮಾಪಕರು ಮತ್ತು ಇತರೆ ತಾರಾಗಣದ ಉಪಸ್ಥಿತಿಗೆ ಸಾಕ್ಷಿಯಾಗಲಿದೆ. ʻಶೇರ್‌ಷಾʼ ಚಿತ್ರೋತ್ಸವದ ಆರಂಭಿಕ ಚಲನಚಿತ್ರವಾಗಿದೆ.

ಚಿತ್ರೋತ್ಸವವು ಪ್ರೇಕ್ಷಕರು ಮತ್ತು ಸಿನಿಪ್ರಿಯರನ್ನು ಸಮಾನ ರೀತಿಯಲ್ಲಿ ಮೋಡಿ ಮಾಡಬಲ್ಲ ವಿವಿಧ ವಿಭಾಗಗಳನ್ನು ಒಳಗೊಂಡಿದೆ:

1.         5 ದಿನಗಳ ಚಿತ್ರೋತ್ಸವದಲ್ಲಿ ಜನಪ್ರಿಯ ಚಲನಚಿತ್ರಗಳ ಪ್ರದರ್ಶನ

ರಾಷ್ಟ್ರೀಯ ಪ್ರಶಸ್ತಿ ಮತ್ತು ಭಾರತೀಯ ಪನೋರಮಾಕ್ಕೆ ಆಯ್ಕೆಯಾದ ಸಮಕಾಲೀನ ಚಲನಚಿತ್ರಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವುದು. ಡಿಜಿಟಲ್ ಪ್ರೊಜೆಕ್ಷನ್ ಸೌಲಭ್ಯಗಳನ್ನು ಹೊಂದಿರುವ ಲೇಹ್‌ನ ಸಿಂಧು ಸಾಂಕೃತಿ ಸಭಾಂಗಣದಲ್ಲಿ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

2.         ಕಾರ್ಯಾಗಾರಗಳು, ಮಾಸ್ಟರ್‌ಕ್ಲಾಸ್ ಗಳು ಮತ್ತು ಸಮಾಲೋಚನೆ

ವೈವಿಧ್ಯಮಯ ಕಾರ್ಯಾಗಾರಗಳು ಮತ್ತು ಮಾಸ್ಟರ್‌ಕ್ಲಾಸ್‌ಗಳನ್ನು ಆಯೋಜಿಸಲಾಗಿದೆ. ಇವುಗಳ ಮೂಲಕ ಚಲನಚಿತ್ರ ನಿರ್ಮಾಪಕರು, ವಿಮರ್ಶಕರು, ಹಿಮಾಲಯ ಭಾಗದ ತಂತ್ರಜ್ಞರು ಸ್ಥಳೀಯ ಸಿನಿ ಉತ್ಸಾಹಿಗಳಿಗೆ ಜ್ಞಾನ ಹಾಗೂ ಕೌಶಲ್ಯವನ್ನು ಉಣಬಡಿಸಲಿದ್ದಾರೆ. ಚಲನಚಿತ್ರ ನಿರ್ಮಾಣದ ಬಗ್ಗೆ ಸೃಜನಶೀಲ ಕಲಿಕೆಗೆ ಉತ್ತೇಜಿಸಲು ಇದರಿಂದ ಪ್ರೇರಣೆ ದೊರೆಯಲಿದೆ.

3.         ಸ್ಪರ್ಧಾ ವಿಭಾಗ- ಕಿರು ಮತ್ತು ಸಾಕ್ಷ್ಯಚಿತ್ರ ಸ್ಪರ್ಧೆ

ಕಿರುಚಿತ್ರಗಳು ಮತ್ತು ಕಿರು ಸಾಕ್ಷ್ಯಚಿತ್ರಗಳನ್ನು ಸ್ಪರ್ಧಾ ವಿಭಾಗಕ್ಕೆ ಆಹ್ವಾನಿಸಲಾಗಿದೆ. ಅತ್ಯುತ್ತಮ ಚಲನಚಿತ್ರಕ್ಕಾಗಿ ನಿರ್ದೇಶಕರು, ಮತ್ತು ನಿರ್ಮಾಪಕರಿಗೆ ಪ್ರಶಸ್ತಿ ನೀಡಲಾಗುವುದು. ಜೊತೆಗೆ ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಕಥೆಗೆ ಪ್ರಶಸ್ತಿಗಳನ್ನು ನೀಡಲಾಗುವುದು.

ಮೇಲಿನವುಗಳ ಜೊತೆಗೆ ಚಲನಚಿತ್ರೋತ್ಸವದಲ್ಲಿ ಪ್ರೇಕ್ಷಕರ ವಿವಿಧ ಅಭಿರುಚಿಗಳನ್ನು ತಣಿಸಲು ಕೆಳಕಂಡ ಆಕರ್ಷಣೆಗಳೂ ಇರಲಿವೆ:

•           ಆಹಾರ ಮೇಳ: ಲಡಾಖ್‌ನ ವಿಶಿಷ್ಟ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿಗಳಿಂದಾಗಿ ಪ್ರದೇಶದ ಪಾಕಪದ್ಧತಿಯು ಅನನ್ಯವಾಗಿದೆ. ಚಿತ್ರೋತ್ಸವದ ಸ್ಥಳದಲ್ಲಿ ಐದು ದಿನಗಳ ಆಹಾರ ಮೇಳವೂ ನಡೆಯಲಿದೆ.

•           ಸಾಂಸ್ಕೃತಿಕ ಪ್ರದರ್ಶನಗಳು: ಲಡಾಖ್‌ನ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಲು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

•           ಸಂಗೀತೋತ್ಸವ: ಚಿತ್ರೋತ್ಸವದ ಸ್ಥಳದಲ್ಲಿ ಪ್ರದರ್ಶನಗಳನ್ನು ನೀಡಲು ಲಡಾಖ್‌ನ ಯುವ ಸಂಗೀತಗಾರರನ್ನು ಆಹ್ವಾನಿಸಲಾಗಿದೆ.

ಭಾರತದ ಹಿಮಾಲಯ ಪ್ರದೇಶವು ತನ್ನ ವಿಶಿಷ್ಟ ರಮಣೀಯತೆಯಿಂದಾಗಿ ಪ್ರಪಂಚದ ವಿವಿಧ ಭಾಗಗಳ ಚಲನಚಿತ್ರ ನಿರ್ಮಾಪಕರನ್ನು ಆಕರ್ಷಿಸುತ್ತದೆ. ಪ್ರದೇಶದ ವಿಶಿಷ್ಟ ಭೌಗೋಳಿಕತೆ, ಅಲ್ಲಿನ ಸ್ಥಳೀಯ ಜನರು, ಸಾಂಪ್ರದಾಯಿಕ ಕೌಶಲ್ಯಗಳು ಮತ್ತು ಉದ್ಯೋಗಗಳೊಂದಿಗೆ ವ್ಯಾಪಕವಾಗಿ ಚಿತ್ರಗಳಲ್ಲಿ ಸೆರೆ ಹಿಡಿಯಲಾಗುತ್ತದೆ. ಹಿನ್ನೆಲೆಯಲ್ಲಿ, ಸ್ಥಳೀಯ ಚಲನಚಿತ್ರ ನಿರ್ಮಾಪಕರಿಗೆ ತಮ್ಮ ಕಥೆಗಳನ್ನು ವ್ಯಾಪಕ ಪ್ರೇಕ್ಷಕರಿಗೆ ವಿವರಿಸಲು ಚಲನಚಿತ್ರೋತ್ಸವವು ಅವಕಾಶ ಒದಗಿಸಲಿದೆ.

ಕಳೆದ ಎರಡು ದಶಕಗಳಲ್ಲಿ, ಪ್ರದೇಶದಲ್ಲಿ ಸ್ವತಂತ್ರ ಚಿತ್ರೋದ್ಯಮವು ತಲೆ ಎತ್ತಿದೆ. ನಿರ್ಮಾಪಕರು ಸ್ಥಳೀಯ ಭಾಷೆಯ ಚಲನಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೇ ವೇಳೆ, ಧ್ವನಿ-ದೃಶ್ಯ ವಲಯದ ಅಭಿವೃದ್ಧಿಗೆ ಪೂರ್ವಾಪೇಕ್ಷಿತವಾದ ವಿದ್ಯುದೀಕರಣ ಕಾರ್ಯವೂ ವಲಯದಲ್ಲಿ ತ್ವರಿತವಾಗಿ ನಡೆದಿದೆ.

ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಭಾರತದಲ್ಲಿ ನಿರ್ಮಿಸಲಾದ ಯಾವುದೇ ಜನಪ್ರಿಯ ಚಿತ್ರವೊಂದು  ಲಡಾಖ್ ಅನ್ನು ತಲುಪುತ್ತದೆ. ಆದರೆ ಲಡಾಖ್‌ನ ಕಥೆಗಳು ಇನ್ನೂ ಅನಾವರಣಗೊಂಡಿಲ್ಲ. ವಿಶೇಷವಾಗಿ ಸ್ಥಳೀಯ ಚಲನಚಿತ್ರ ನಿರ್ಮಾಪಕರ ದೃಷ್ಟಿಕೋನದಿಂದ ಹೇಳುವುದಾದರೆ ಅವರ ಪ್ರತಿಭೆ ಹೊರಜಗತ್ತಿಗೆ ಮುಕ್ತವಾಗಿಲ್ಲ. ಸಂದರ್ಭದಲ್ಲಿ ಚಲನಚಿತ್ರ ಕಾರ್ಯಾಗಾರಗಳು, ಮಾಸ್ಟರ್ ಕ್ಲಾಸ್‌ಗಳು ಮತ್ತು ಸಮಾಲೋಚನೆಗಳು ಉದಯೋನ್ಮುಖ ಮತ್ತು ಪ್ರತಿಷದ್ಠಿತ ಚಲನಚಿತ್ರ ನಿರ್ಮಾಪಕರಿಗೆ ಅಗತ್ಯ ಕೌಶಲ್ಯಗಳು ಮತ್ತು ಸಂಪರ್ಕಜಾಲದ ವಿಸ್ತರಣೆಗೆ ಅವಕಾಶ ಒದಗಿಸುತ್ತವೆ.

ಹಿಮಾಲಯದ ಚಿತ್ರರಂಗವನ್ನು ಸಾಂಸ್ಥಿಕಗೊಳಿಸುವ ಆಲೋಚನೆಯೂ ʻಹಿಮಾಲಯನ್‌ ಚಲನಚಿತ್ರೋತ್ಸವʼ ಹಿಂದಿದೆ. ಇದು ಭಾರತದ ಹಿಮಾಲಯದ ಭಾಗಗಳಲ್ಲಿ ಚಲನಚಿತ್ರ ತಯಾರಿಕರ ಮೇಲೆ ಲಾಭದಾಯಕ ಪರಿಣಾಮ ಬೀರಲಿದೆ. ಹಿಮಾಲಯ ಪ್ರದೇಶ ಮತ್ತು ಭಾರತದ ಇತರ ರಾಜ್ಯಗಳಲ್ಲಿ ನಿರ್ಮಾಣಗೊಂಡ ಜನಪ್ರಿಯ ಚಲನಚಿತ್ರಗಳನ್ನೂ 5 ದಿನಗಳ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು.

ಸ್ಪರ್ಧಾ ವಿಭಾಗದ ತೀರ್ಪುಗಾರರು

1.         ಶ್ರೀಮತಿ ಮಂಜು ಬೋರಾ, ಅಧ್ಯಕ್ಷೆ (ಅಸ್ಸಾಂ)

2.         ಶ್ರೀ ಜಿ.ಪಿ. ವಿಜಯಕುಮಾರ್, ಸದಸ್ಯರು (ತಮಿಳುನಾಡು)

3.         ಶ್ರೀ ರಾಜಾ ಶಬೀರ್ ಖಾನ್, ಸದಸ್ಯರು (ಜಮ್ಮು ಮತ್ತು ಕಾಶ್ಮೀರ)

***


(ಪ್ರಕಟಣೆ ಐ.ಡಿ.: 1757018) ವಿಸಿಟರ್ ಕೌಂಟರ್ : 302
ಪ್ರಕಟಣೆಯನ್ನು ಇದರಲ್ಲಿ ಓದಿ: Telugu , English , Urdu , Marathi , हिन्दी , Bengali , Punjabi , Gujarati , Tamil