ಉಕ್ಕು ಸಚಿವಾಲಯ
azadi ka amrit mahotsav

ಕೇಂದ್ರ ಉಕ್ಕು ಸಚಿವ ರಾಮ್ ಚಂದ್ರ ಪ್ರಸಾದ್ ಸಿಂಗ್ ಉನ್ನತ ಮಟ್ಟದ ಸಭೆಯಲ್ಲಿ ಉಕ್ಕು ʻಸಿಪಿಎಸ್ಇʼಗಳ ಮಾರುಕಟ್ಟೆ ಕಾರ್ಯತಂತ್ರಗಳನ್ನು ಪರಿಶೀಲಿಸಿದರು,


ರಾಷ್ಟ್ರೀಯ ಪ್ರಾಮುಖ್ಯದ ಮೂಲಸೌಕರ್ಯ ಯೋಜನೆಗಳಿಗೆ ಕೊಡುಗೆ ನೀಡುವಂತೆ ʻಸಿಪಿಎಸ್ಇʼಗಳನ್ನು ಒತ್ತಾಯಿಸಿದರು

Posted On: 21 SEP 2021 6:05PM by PIB Bengaluru

ಉಕ್ಕು ವಲಯಕ್ಕೆ ಸಂಬಂಧಿಸಿದ ಕೇಂದ್ರ ಸರಕಾರದ ಒಡೆತನದ ಸಾರ್ವಜನಿಕ ಉದ್ಯಮಗಳ (ʻಸಿಪಿಎಸ್ಇʼ) ಮಾರುಕಟ್ಟೆ ಕಾರ್ಯತಂತ್ರಗಳು ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಪರಿಶೀಲಿಸಲು ಕೇಂದ್ರ ಉಕ್ಕು ಸಚಿವ ಶ್ರೀ ರಾಮ್ ಚಂದ್ರ ಪ್ರಸಾದ್ ಸಿಂಗ್ ಅವರು ಇಂದು ಈ ಸಂಸ್ಥೆಗಳ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿದರು. ಸಂಸ್ಥೆಗಳ ಭವಿಷ್ಯದ ವಿಸ್ತರಣೆ/ವೈವಿಧ್ಯಮಯ ಯೋಜನೆಗಳ ಹಿನ್ನೆಲೆಯಲ್ಲಿ ಕಂಪನಿಗಳು ಅಳವಡಿಸಿಕೊಂಡಿರುವ ಮಾರುಕಟ್ಟೆ ಮತ್ತು ಮಾರಾಟ ಕಾರ್ಯತಂತ್ರಗಳನ್ನು ಸಚಿವರು ಪರಿಶೀಲಿಸಿದರು. ಉಕ್ಕು ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ ಶ್ರೀ ಫಾಗ್ಗನ್ ಸಿಂಗ್ ಕುಲಸ್ತೆ ಮತ್ತು ಉಕ್ಕು ಕಾರ್ಯದರ್ಶಿ ಶ್ರೀ ಪ್ರದೀಪ್‌ ಕುಮಾರ್ ತ್ರಿಪಾಠಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ಎಲ್ಲಾ ʻಸಿಪಿಎಸ್ಇʼಗಳು ತಮ್ಮ ವಿವಿಧ ಉತ್ಪನ್ನಗಳಿಗೆ ಸಂಬಂಧಿಸಿದ ದೇಶೀಯ ಮತ್ತು ರಫ್ತು ಮಾರುಕಟ್ಟೆ ಮಾರಾಟ ತಂತ್ರಗಳ ಬಗ್ಗೆ ಉಕ್ಕು ಸಚಿವಾಲಯಕ್ಕೆ ಮಾಹಿತಿ ನೀಡಿದವು. ಅತ್ಯುತ್ತಮವಾದ  ಮತ್ತು ಸೂಕ್ತ ಮಾರುಕಟ್ಟೆ ತಂತ್ರಗಳನ್ನು ರೂಪಿಸುವ ನಿಟ್ಟಿನಲ್ಲಿ ತಮ್ಮ ವಿವಿಧ ಉತ್ಪನ್ನಗಳಿಗೆ ಬೇಡಿಕೆ, ಪೂರೈಕೆ, ಬೆಲೆ ಪ್ರವೃತ್ತಿಗಳು, ಸ್ಪರ್ಧೆಯ ಮಟ್ಟ ಇತ್ಯಾದಿಗಳ ಬದಲಾವಣೆಗಳ ಬಗ್ಗೆ ನೈಜ ಸಮಯಾಧಾರಿತ ಮೌಲ್ಯಮಾಪನಕ್ಕಾಗಿ ಒಂದು ವ್ಯವಸ್ಥೆಯನ್ನು ಹೊಂದುವಂತೆ ಸಚಿವರು ಉಕ್ಕು ʻಸಿಪಿಎಸ್ಇʼಗಳಿಗೆ ನಿರ್ದೇಶನ ನೀಡಿದರು. ತಮ್ಮ ಉತ್ಪನ್ನಗಳನ್ನು ತೀವ್ರವಾಗಿ ಮಾರ್ಕೆಟಿಂಗ್ ಮಾಡಲು ಅವರು ಸಲಹೆ ನೀಡಿದರು. ಹಾಲಿ ಮತ್ತು ಭವಿಷ್ಯದ ರಾಷ್ಟ್ರೀಯ ಪ್ರಾಮುಖ್ಯದ ಯೋಜನೆಗಳು ಹಾಗೂ ಭಾರತಮಾಲಾ, ಸಾಗರಮಾಲಾ, ರಸ್ತೆ ಯೋಜನೆಗಳು, ರೈಲ್ವೆ ವಿಶೇಷ ಸರಕು ಸಾಗಣೆ ಕಾರಿಡಾರ್‌ಗಳು, ಅಣೆಕಟ್ಟುಗಳ ನಿರ್ಮಾಣ ಮತ್ತು ಇಂಧನ ವಲಯದ ಕಾಮಗಾರಿಗಳು ಸೇರಿದಂತೆ ಇತರೆ ಯೋಜನೆಗಳಿಗೆ ʻಸಿಪಿಎಸ್ಇʼಗಳು ಹೃತ್ಪೂರ್ವಕವಾಗಿ ಕೊಡುಗೆ ನೀಡುವ ಅಗತ್ಯವನ್ನು ಉಕ್ಕು ಸಚಿವರು ಒತ್ತಿ ಹೇಳಿದರು.

ಉತ್ಪನ್ನಗಳ ಬ್ರಾಂಡಿಂಗ್‌ಗೆ ಹೆಚ್ಚಿನ ಒತ್ತು ನೀಡುವಂತೆ ಮತ್ತು ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ಲಭ್ಯವಿರುವ ಎಲ್ಲಾ ಜಾಹೀರಾತು ಅವಕಾಶಗಳನ್ನು ಬಳಸಿಕೊಳ್ಳುವಂತೆ ಸಚಿವರು ʻಸಿಪಿಎಸ್ಇʼಗಳಿಗೆ ಸಲಹೆ ನೀಡಿದರು. ಡೀಲರ್‌ಗಳು/ ವಿತರಕರು, ಏಜೆಂಟರು, ಗ್ರಾಹಕರು ಮುಂತಾದವರೊಂದಿಗೆ ನಿರಂತರವಾಗಿ ತೊಡಗಿಸಿಕೊಳ್ಳುವಂತೆ ಹಾಗೂ ಸಣ್ಣ ಪಟ್ಟಣಗಳು/ನಗರಗಳು ಮತ್ತು ಹಳ್ಳಿಗಳಲ್ಲಿ ಸಾಮಾನ್ಯ ಜನತೆಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸಚಿವರು ಸಂಸ್ಥೆಗಳಿಗೆ ನಿರ್ದೇಶನ ನೀಡಿದರು.

***


(Release ID: 1756841) Visitor Counter : 237