ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಪ್ಘಾನಿಸ್ತಾನ ಕುರಿತ ಎಸ್‌ ಸಿ ಒ –ಸಿ ಎಸ್ ಟಿ ಒ ಔಟ್‌ರೀಚ್ ಶೃಂಗಸಭೆಯಲ್ಲಿ ಪ್ರಧಾನಿಯವರ ಭಾಷಣ

Posted On: 17 SEP 2021 10:10PM by PIB Bengaluru

ಗೌರವಾನ್ವಿತರೇ,
ಅಫ್ಘಾನಿಸ್ತಾನದ ಪರಿಸ್ಥಿತಿಯ ಕುರಿತು ಎಸ್‌ಸಿಒ ಮತ್ತು ಸಿ.ಎಸ್.ಟಿ. ನಡುವೆ ವಿಶೇಷ ಸಭೆಯನ್ನು ಆಯೋಜಿಸಿದ್ದಕ್ಕಾಗಿ ಅಧ್ಯಕ್ಷ ರೆಹಮಾನ್ ಅವರಿಗೆ ಧನ್ಯವಾದ ಹೇಳುವ ಮೂಲಕ ನನ್ನ ಮಾತು ಆರಂಭಿಸುತ್ತೇನೆ.
ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ನಮ್ಮಂತಹ ನೆರೆಯ ರಾಷ್ಟ್ರಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ.
ಆದ್ದರಿಂದ ಈ ವಿಷಯದ ಮೇಲೆ ಪ್ರಾದೇಶಿಕ ಗಮನ ಹರಿಸುವುದು ಮತ್ತು ಸಹಕಾರವನ್ನು ರಚಿಸುವುದು ಅಗತ್ಯವಾಗಿದೆ.
ಈ ಹಿನ್ನೆಲೆಯಲ್ಲಿ, ನಾವು ನಾಲ್ಕು ವಿಷಯಗಳತ್ತ ಗಮನ ಹರಿಸಬೇಕಾಗಿದೆ.
ಮೊದಲನೆಯದು, ಅಫ್ಘಾನಿಸ್ತಾನದಲ್ಲಿ ಅಧಿಕಾರದ ಹಸ್ತಾಂತರವು ಎಲ್ಲರನ್ನೂ ಒಳಗೊಂಡಿಲ್ಲ ಮತ್ತು ಅದು ಯಾವುದೇ ಮಾತುಕತೆ ಇಲ್ಲದೆ ನಡೆದಿದೆ. 
ಇದು ಹೊಸ ವ್ಯವಸ್ಥೆಯ ಸ್ವೀಕಾರಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಮಹಿಳೆಯರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಅಫ್ಘನ್ ಸಮಾಜದ ಎಲ್ಲ ವರ್ಗಗಳ ಪ್ರಾತಿನಿಧ್ಯವೂ ಮುಖ್ಯವಾಗಿದೆ.
ಆದ್ದರಿಂದ, ಅಂತಹ ಹೊಸ ವ್ಯವಸ್ಥೆಗೆ ಮಾನ್ಯತೆಯನ್ನು ನೀಡುವ ನಿರ್ಧಾರವನ್ನು ಜಾಗತಿಕ ಸಮುದಾಯವು ಒಟ್ಟಾಗಿ ಮತ್ತು ಸೂಕ್ತ ಚಿಂತನೆಯ ನಂತರ ತೆಗೆದುಕೊಳ್ಳುವುದು ಅಗತ್ಯವಾಗಿದೆ.
ಈ ವಿಷಯದಲ್ಲಿ ಭಾರತವು ವಿಶ್ವಸಂಸ್ಥೆಯ ಕೇಂದ್ರ ಪಾತ್ರವನ್ನು ಬೆಂಬಲಿಸುತ್ತದೆ.
ಎರಡನೆಯದು, ಅಫ್ಘಾನಿಸ್ತಾನದಲ್ಲಿ ಅಸ್ಥಿರತೆ ಮತ್ತು ಮೂಲಭೂತವಾದ ಮುಂದುವರಿದರೆ, ಅದು ವಿಶ್ವದಾದ್ಯಂತ ಭಯೋತ್ಪಾದನೆ ಮತ್ತು ಉಗ್ರವಾದದ ಸಿದ್ಧಾಂತಗಳನ್ನು ಪ್ರೋತ್ಸಾಹಿಸುತ್ತದೆ.
ಇತರ ಉಗ್ರ ಸಂಘಟನೆಗಳು ಹಿಂಸೆಯ ಮೂಲಕ ಅಧಿಕಾರಕ್ಕೆ ಬರುವಂತೆ ಪ್ರೋತ್ಸಾಹಿಸಬಹುದು.
ನಮ್ಮ ಎಲ್ಲ ದೇಶಗಳು ಹಿಂದೆ ಭಯೋತ್ಪಾದನೆಗೆ ಬಲಿಯಾಗಿವೆ.
ಆದ್ದರಿಂದ, ನಾವೆಲ್ಲರೂ ಒಟ್ಟಾಗಿ, ಅಫ್ಘಾನಿಸ್ತಾನವನ್ನು ಬೇರೆ ಯಾವುದೇ ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಬಳಸದಂತೆ ಖಚಿತಪಡಿಸಿಕೊಳ್ಳಬೇಕು. ಎಸ್‌ಸಿಒ ಸದಸ್ಯ ರಾಷ್ಟ್ರಗಳು ಈ ವಿಷಯದಲ್ಲಿ ಕಟ್ಟುನಿಟ್ಟಾದ ಮತ್ತು ಒಪ್ಪಿತವಾದ ನಿಯಮಗಳನ್ನು ರೂಪಿಸಬೇಕು.
ಭವಿಷ್ಯದಲ್ಲಿ, ಈ ನಿಯಮಗಳು ಜಾಗತಿಕ ಭಯೋತ್ಪಾದನಾ ವಿರೋಧಿ ಸಹಕಾರಕ್ಕಾಗಿ ಒಂದು ಮಾದರಿ ಆಗಬಹುದು.
ಈ ಮಾನದಂಡಗಳು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯ ತತ್ವವನ್ನು ಆಧರಿಸಿರಬೇಕು.
ಇವುಗಳು ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಹಣಕಾಸಿನ ನೆರವಿನಂತಹ ಚಟುವಟಿಕೆಗಳನ್ನು ತಡೆಗಟ್ಟಲು ನೀತಿ ಸಂಹಿತೆಯಾಗಿರಬೇಕು ಮತ್ತು ಅವುಗಳ ಜಾರಿಗಾಗಿ ಒಂದು ವ್ಯವಸ್ಥೆಯನ್ನು ಹೊಂದಿರಬೇಕು.
ಗೌರವಾನ್ವಿತರೇ,
ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳಿಗೆ ಸಂಬಂಧಿಸಿದ ಮೂರನೆಯ ವಿಷಯವೆಂದರೆ, ಅನಿಯಂತ್ರಿತವಾಗಿರುವ ಮಾದಕವಸ್ತುಗಳು, ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಮಾನವ ಕಳ್ಳಸಾಗಣೆ.
ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ಸಂಖ್ಯೆಯ ಸುಧಾರಿತ ಶಸ್ತ್ರಾಸ್ತ್ರಗಳಿವೆ. ಇವುಗಳಿಂದಾಗಿ ಇಡೀ ಪ್ರದೇಶದಲ್ಲಿ ಅಸ್ಥಿರತೆಯ ಅಪಾಯವಿದೆ. 
ಎಸ್‌ಸಿಒನ ಆರ್ ಎ ಟಿ ಎಸ್ ವ್ಯವಸ್ಥೆಯು ಇವುಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ಮಾಹಿತಿ ಹಂಚಿಕೆಯನ್ನು ಹೆಚ್ಚಿಸುವಲ್ಲಿ ರಚನಾತ್ಮಕ ಪಾತ್ರವನ್ನು ವಹಿಸುತ್ತದೆ.
ಈ ತಿಂಗಳಿನಿಂದ, ಭಾರತವು ಎಸ್‌ಸಿಒ-ಆರ್ ಎ ಟಿ ಎಸ್ ಮಂಡಳಿಯ ಅಧ್ಯಕ್ಷತೆಯನ್ನು ವಹಿಸುತ್ತಿದೆ. ಈ ವಿಷಯದ ಕುರಿತು ಪ್ರಾಯೋಗಿಕ ಸಹಕಾರಕ್ಕಾಗಿ ನಾವು ಪ್ರಸ್ತಾಪಗಳನ್ನು ರೂಪಿಸಿದ್ದೇವೆ. 
ನಾಲ್ಕನೆಯ ವಿಷಯವೆಂದರೆ, ಅಫ್ಘಾನಿಸ್ತಾನದಲ್ಲಿನ ಗಂಭೀರ ಮಾನವೀಯ ಬಿಕ್ಕಟ್ಟು.
ಹಣಕಾಸು ಮತ್ತು ವ್ಯಾಪಾರದ ಮೇಲಾಗಿರುವ ಅಡಚಣೆಗಳಿಂದ ಅಫ್ಘನ್ ಜನರ ಆರ್ಥಿಕ ಸಂಕಟವು ಹೆಚ್ಚುತ್ತಿದೆ.
ಅದೇ ಸಮಯದಲ್ಲಿ, ಕೋವಿಡ್ ಸವಾಲು ಕೂಡ ಅವರ ಸಂಕಷ್ಟಕ್ಕೆ ಕಾರಣವಾಗಿದೆ.
ಭಾರತವು ಹಲವು ವರ್ಷಗಳಿಂದ ಅಭಿವೃದ್ಧಿ ಮತ್ತು ಮಾನವೀಯ ನೆರವಿನಲ್ಲಿ ಅಫ್ಘಾನಿಸ್ತಾನದ ವಿಶ್ವಾಸಾರ್ಹ ಪಾಲುದಾರನಾಗಿದೆ. ಮೂಲಸೌಕರ್ಯದಿಂದ ಶಿಕ್ಷಣ, ಆರೋಗ್ಯ ಮತ್ತು ಸಾಮರ್ಥ್ಯ ವೃದ್ಧಿಯವರೆಗಿನ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಅಫ್ಘಾನಿಸ್ತಾನದ ಪ್ರತಿಯೊಂದು ಭಾಗಕ್ಕೂ ನಮ್ಮ ಕೊಡುಗೆಯನ್ನು ನೀಡಿದ್ದೇವೆ.
ಇಂದಿಗೂ, ನಾವು ನಮ್ಮ ಅಫ್ಘನ್ ಸ್ನೇಹಿತರಿಗೆ ಆಹಾರ ಪದಾರ್ಥಗಳು, ಔಷಧಗಳು ಇತ್ಯಾದಿಗಳನ್ನು ತಲುಪಿಸಲು ಉತ್ಸುಕರಾಗಿದ್ದೇವೆ.
ಮಾನವೀಯ ನೆರವು ಅಫ್ಘಾನಿಸ್ತಾನಕ್ಕೆ ಯಾವುದೇ ಅಡಚಣೆಯಿಲ್ಲದೇ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ.
ಮಹನೀಯರೇ,
ಅಫ್ಘನ್ ಮತ್ತು ಭಾರತದ ಜನರು ಶತಮಾನಗಳಿಂದ ವಿಶೇಷ ಸಂಬಂಧವನ್ನು ಹಂಚಿಕೊಂಡಿದ್ದಾರೆ.
ಅಫ್ಘನ್ ಸಮಾಜಕ್ಕೆ ಸಹಾಯ ಮಾಡಲು ಭಾರತವು ಪ್ರತಿಯೊಂದು ಪ್ರಾದೇಶಿಕ ಅಥವಾ ಜಾಗತಿಕ ಉಪಕ್ರಮದಲ್ಲಿ ಸಂಪೂರ್ಣ ಸಹಕಾರವನ್ನು ನೀಡುತ್ತದೆ.
ಧನ್ಯವಾದಗಳು.
ಸೂಚನೆ: ಇದು ಪ್ರಧಾನಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.

***


(Release ID: 1756091) Visitor Counter : 221