ಹಣಕಾಸು ಸಚಿವಾಲಯ

ಮುಂಬೈ ಮತ್ತು ಇತರ ಪ್ರದೇಶಗಳಲ್ಲಿ ಆದಾಯ ತೆರಿಗೆ ಇಲಾಖೆ ಶೋಧಕಾರ್ಯ ನಡೆಸಿದೆ

Posted On: 18 SEP 2021 12:29PM by PIB Bengaluru

ಆದಾಯ ತೆರಿಗೆ ಇಲಾಖೆಯು ಮುಂಬೈನ ಪ್ರಮುಖ ನಟರೊಬ್ಬರ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕೆಲಸ  ಕೈಗೊಳ್ಳುವ ಲಕ್ನೋ ಮೂಲದ  ಸಂಸ್ಥೆಯ ಉದ್ಯಮಗಳ ವಿವಿಧ ಸ್ಥಳಗಳಲ್ಲಿ ತಪಾಸಣೆ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ನಡೆಸಿತು. ಮುಂಬೈ, ಲಕ್ನೋ, ಕಾನ್ಪುರ್, ಜೈಪುರ, ದೆಹಲಿ ಮತ್ತು ಗುರ್ಗಾಂವ್ ನಲ್ಲಿ ಒಟ್ಟು 28 ಕಡೆ ಕಾರ್ಯಾಚರಣೆಯನ್ನು ನಡೆಸಲಾಯಿತು.

 

 ನಟ ಮತ್ತು ಅವರ ಸಹಚರರ ಸ್ಥಳಗಳಲ್ಲಿ ತಪಾಸಣೆಯ ಸಮಯದಲ್ಲಿ, ತೆರಿಗೆ ವಂಚನೆಗೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ. ನಟರು ಅನುಸರಿಸಿದ ಮುಖ್ಯ ವಿಧಾನವೆಂದರೆ ತಮ್ಮ ಲೆಕ್ಕವಿಲ್ಲದ ಆದಾಯವನ್ನು ಅನೇಕ ನಕಲಿ ಸಂಸ್ಥೆಗಳಿಂದ ನಕಲಿ ಅಸುರಕ್ಷಿತ ಸಾಲಗಳ ರೂಪದಲ್ಲಿ ತೋರಿಸುವುದು. ಇಲ್ಲಿಯವರೆಗಿನ ತನಿಖೆಗಳು ಅಂತಹ ಇಪ್ಪತ್ತು ನಮೂದುಗಳ ಬಳಕೆಯನ್ನು ಬಹಿರಂಗಪಡಿಸಿವೆ, ಇವುಗಳನ್ನು ಒದಗಿಸುವವರು ಪರೀಕ್ಷೆಯಲ್ಲಿ, ನಕಲಿ ನಮೂದುಗಳನ್ನು ನೀಡಿದ್ದಾಗಿ ಪ್ರಮಾಣ ಮಾಡಿದ್ದಾರೆ. ನಗದಿಗೆ ಬದಲಾಗಿ ಚೆಕ್‌ಗಳನ್ನು ನೀಡಲು ಅವರು ಒಪ್ಪಿಕೊಂಡಿದ್ದಾರೆ. ತೆರಿಗೆ ವಂಚನೆಯ ಉದ್ದೇಶದಿಂದ ಖಾತೆಗಳ ಪುಸ್ತಕಗಳಲ್ಲಿ ವೃತ್ತಿಯ ಆದಾಯವನ್ನು ಸಾಲಗಳೆಂದು ಮರೆಮಾಚಿದ ಉದಾಹರಣೆಗಳಿವೆ. ಹೂಡಿಕೆಗಳನ್ನು ಮಾಡಲು ಮತ್ತು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಈ ನಕಲಿ ಸಾಲಗಳನ್ನು ಬಳಸಲಾಗಿದೆ ಎಂದು ಸಹ ಬಹಿರಂಗಪಡಿಸಲಾಗಿದೆ. ಇಲ್ಲಿಯವರೆಗೆ ಪತ್ತೆಯಾಗದ ತೆರಿಗೆಯು ಒಟ್ಟು ರೂ.20 ಕೋಟಿಗಿಂತಲೂ ಹೆಚ್ಚು ಮೊತ್ತವಾಗಿದೆ.

 

21 ಜುಲೈ, 2020 ರಂದು ನಟರಿಂದ ಸ್ಥಾಪಿಸಲ್ಪಟ್ಟ ಪ್ರತಿಷ್ಠಾನವು 01.04.2021 ರಿಂದ ಇಲ್ಲಿಯವರೆಗೆ 18.94 ಕೋಟಿ ರೂ.ಗಳಷ್ಟು ದೇಣಿಗೆಗಳನ್ನು ಸಂಗ್ರಹಿಸಿದೆ, ಅದರಲ್ಲಿ ಸುಮಾರು ರೂ. 1.9 ಕೋಟಿ ವಿವಿಧ ಪರಿಹಾರ ಕಾರ್ಯಗಳಿಗೆ ಮತ್ತು ಉಳಿದ ಮೊತ್ತ ಚಾರಿಟಿ ಪ್ರತಿಷ್ಠಾನದ ಬ್ಯಾಂಕ್ ಖಾತೆಯಲ್ಲಿ   17 ಕೋಟಿ ಬಳಕೆಯಾಗದೇ ಇರುವುದು ಪತ್ತೆಯಾಗಿದೆ.   ಚಾರಿಟಿ ಪ್ರತಿಷ್ಠಾನವು ವಿದೇಶದ ದಾನಿಗಳಿಂದ ಕ್ರೌಡ್ ಫಂಡಿಂಗ್ ವೇದಿಕೆಯಲ್ಲಿ ಎಫ್‌ಸಿಆರ್‌ಎ ನಿಯಮಗಳನ್ನು ಉಲ್ಲಂಘಿಸಿ 2.1 ಕೋಟಿ ಸಂಗ್ರಹಿಸಿದೆ.

 

ಲಕ್ನೋದಲ್ಲಿನ  ಸಂಸ್ಥೆಯ ವಿವಿಧ ಕಡೆಗಳಲ್ಲಿ  ಏಕಕಾಲದಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಯಿತು, ಇದರಲ್ಲಿ ನಟರು ಜಂಟಿ ಉದ್ಯಮದ ರಿಯಲ್ ಎಸ್ಟೇಟ್ ಯೋಜನೆಗೆ ತೊಡಗಿದ್ದು  ಮತ್ತು ಗಣನೀಯ ಪ್ರಮಾಣದ ಹಣವನ್ನು ಹೂಡಿಕೆ ಮಾಡಿದ್ದಾರೆ, ಇದರ ಪರಿಣಾಮವಾಗಿ ಲೆಕ್ಕ ಪುಸ್ತಕಗಳಲ್ಲಿ ತೆರಿಗೆ ವಂಚನೆ ಮತ್ತು ಅಕ್ರಮಗಳಿಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಕಂಡುಹಿಡಿಯಲಾಯಿತು.  

ಸದರಿ ಉದ್ಯಮಗಳ ಗುಂಪು ಉಪಗುತ್ತಿಗೆ ವೆಚ್ಚಗಳ ಬೋಗಸ್ ಬಿಲ್ಲಿಂಗ್ ಮತ್ತು ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ತಪಾಸಣೆಯಲ್ಲಿ   ಬಹಿರಂಗಪಡಿಸಿದೆ. ಇಲ್ಲಿಯವರೆಗೆ ಪತ್ತೆಯಾದ ಇಂತಹ ನಕಲಿ ಒಪ್ಪಂದಗಳ ಪುರಾವೆಗಳು ರೂ. 65 ಕೋಟಿ. ಲೆಕ್ಕವಿಲ್ಲದ ನಗದು ವೆಚ್ಚಗಳು, ಸ್ಕ್ರ್ಯಾಪ್‌ನ ಲೆಕ್ಕವಿಲ್ಲದ ಮಾರಾಟ ಮತ್ತು ಲೆಕ್ಕವಿಲ್ಲದ ನಗದು ವಹಿವಾಟುಗಳನ್ನು ಸಾಬೀತುಪಡಿಸುವ ಪುರಾವೆಗಳು ಸಹ ಕಂಡುಬಂದಿವೆ. ಇದಲ್ಲದೆ, ಈ ಮೂಲಸೌಕರ್ಯ ಗುಂಪು/ ಕಂಪನಿಯು ರೂ.175 ಕೋಟಿ ಯಷ್ಟು ಸಂಶಯಾಸ್ಪದ ವಹಿವಾಟನ್ನು ಜೈಪುರ ಮೂಲದ ಮೂಲಸೌಕರ್ಯ ಕಂಪನಿಯೊಂದಿಗೆ ಮಾಡಿದೆ. ತೆರಿಗೆ ವಂಚನೆಯ ಸಂಪೂರ್ಣ ಪ್ರಮಾಣವನ್ನು ಅರಿಯಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ತಪಾಸಣೆಯ  ಸಮಯದಲ್ಲಿ 1.8 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಮತ್ತು 11 ಲಾಕರ್‌ಗಳನ್ನು ನಿಷೇಧಾಜ್ಞೆಯ ಅಡಿಯಲ್ಲಿ ಇರಿಸಲಾಗಿದೆ.

ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು,  ತನಿಖೆ ಪ್ರಗತಿಯಲ್ಲಿದೆ.

****



(Release ID: 1756070) Visitor Counter : 253