ಸಂಸ್ಕೃತಿ ಸಚಿವಾಲಯ

ಪ್ರಧಾನಮಂತ್ರಿಯವರು ಸ್ವೀಕರಿಸಿದ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಇ-ಹರಾಜಿನ ಮೂರನೇ ಆವೃತ್ತಿ ಇಂದಿನಿಂದ ಪ್ರಾರಂಭವಾಗಿದೆ


ಇ-ಹರಾಜು ಅಕ್ಟೋಬರ್ 7, 2021 ರವರೆಗೆ ತೆರೆದಿರುತ್ತದೆ

ಇ-ಹರಾಜಿನಿಂದ ಬರುವ ಆದಾಯವು ʻನಮಾಮಿ ಗಂಗೆ ಯೋಜನೆʼಗೆ ಬಳಕೆಯಾಗಲಿದೆ

Posted On: 17 SEP 2021 4:38PM by PIB Bengaluru

ಮುಖ್ಯಾಂಶಗಳು:

•    ಈ ಸುತ್ತಿನ ಇ-ಹರಾಜಿನಲ್ಲಿ, ಸುಮಾರು 1330 ಸ್ಮರಣಿಕೆಗಳನ್ನು ಇ-ಹರಾಜು ಮಾಡಲಾಗುತ್ತಿದೆ.

•    ವ್ಯಕ್ತಿಗಳು/ಸಂಸ್ಥೆಗಳು ಈ ವೆಬ್‌ಸೈಟ್ ಮೂಲಕ ಇ-ಹರಾಜಿನಲ್ಲಿ ಭಾಗವಹಿಸಬಹುದು: https://pmmementos.gov.in

•    ಟೋಕಿಯೊ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟ ಮತ್ತು ಟೋಕಿಯೊ 2020 ಒಲಿಂಪಿಕ್ ಕ್ರೀಡಾಕೂಟದ ವಿಜೇತರು ಪ್ರಧಾನಿಗೆ ಉಡುಗೊರೆಯಾಗಿ ನೀಡಿದ ಕ್ರೀಡಾ ಉಪಕರಣಗಳು ಮತ್ತು ಸಲಕರಣೆಗಳು ಹರಾಜಿಗಿಡಲಾದ ಪ್ರಮುಖ ವಸ್ತುಗಳಲ್ಲಿ ಸೇರಿವೆ.

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ನೀಡಲಾಗುವ ಪ್ರತಿಷ್ಠಿತ ಮತ್ತು ಸ್ಮರಣೀಯ ಉಡುಗೊರೆಗಳ ಇ-ಹರಾಜಿನ 3ನೇ ಆವೃತ್ತಿಯನ್ನು ವೆಬ್ ಪೋರ್ಟಲ್ https://pmmementos.gov.in

ಮೂಲಕ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7, 2021 ರವರೆಗೆ ನಡೆಸಲಾಗುತ್ತಿದೆ. ʻಟೋಕಿಯೊ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟʼ ಮತ್ತು ʻಟೋಕಿಯೊ 2020 ಒಲಿಂಪಿಕ್ ಕ್ರೀಡಾಕೂಟʼದ ವಿಜೇತರು ಪ್ರಧಾನಿಗೆ ಉಡುಗೊರೆಯಾಗಿ ನೀಡಿದ ಕ್ರೀಡಾ ಉಪಕರಣಗಳು ಮತ್ತು ಸಲಕರಣೆಗಳು ಹರಾಜಿಗಿಡಲಾದ ಸ್ಮರಣಿಕೆಗಳಲ್ಲಿ ಸೇರಿವೆ. ಹರಾಜಿಗಿಡಲಾದ ಇತರೆ ಆಕರ್ಷಕ ಕಲಾಕೃತಿಗಳಲ್ಲಿ ಅಯೋಧ್ಯೆ ರಾಮ ಮಂದಿರ, ಚಾರ್ ಧಾಮ್, ರುದ್ರಾಕ್ಷ್ ಕನ್ವೆನ್ಷನ್ ಸೆಂಟರ್ ಮಾದರಿಗಳು, ಶಿಲ್ಪಗಳು, ವರ್ಣಚಿತ್ರಗಳು, ಅಂಗವಸ್ತ್ರಗಳು ಸೇರಿವೆ.

ಈ ಸುತ್ತಿನ ಇ-ಹರಾಜಿನಲ್ಲಿ, ಸುಮಾರು 1330 ಸ್ಮರಣಿಕೆಗಳನ್ನುಇ-ಹರಾಜು ಮಾಡಲಾಗುತ್ತಿದೆ. ʻಟೋಕಿಯೋ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟʼದಲ್ಲಿ ಚಿನ್ನದ ಪದಕ ವಿಜೇತ ಶ್ರೀ ಸುಮಿತ್ ಅಂತಿಲ್ ಬಳಸಿದ ಜಾವೆಲಿನ್ ಮತ್ತು ʻಟೋಕಿಯೊ 2020 ಒಲಿಂಪಿಕ್ ಕ್ರೀಡಾಕೂಟʼದಲ್ಲಿ ಶ್ರೀ ನೀರಜ್ ಚೋಪ್ರಾ ಬಳಸಿದ ಜಾವೆಲಿನ್ ತಲಾ ಒಂದು ಕೋಟಿ ರೂ.ಗಳ ಗರಿಷ್ಠ ಮೂಲ ಬೆಲೆಯನ್ನು ಹೊಂದಿರುವ ವಸ್ತುಗಳಾಗಿವೆ. ಹರಾಜಿನಲ್ಲಿರುವ ಕನಿಷ್ಠ ಮೌಲ್ಯದ ವಸ್ತುವೆಂದರೆ ಅದು 200 ರೂ. ಬೆಲೆಯ ಸಣ್ಣ ಗಾತ್ರದ ಅಲಂಕಾರಿಕ ಆನೆ.

ಕೇಂದ್ರ ಸಂಸ್ಕೃತಿ ಸಚಿವರು ಟ್ವೀಟ್ ನಲ್ಲಿ ಹರಾಜಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ಹರಾಜಿಗಿಡಲಾದ ಇತರ ಕೆಲವು ವಸ್ತುಗಳಲ್ಲಿ ಬಾಕ್ಸರ್‌ ಲವ್ಲಿನಾ ಬೊರ್ಗೊಫಿನ್ ಬಳಸಿದ, ನೀಲಿ ಬಣ್ಣದ ಮತ್ತು ಕೆಳಭಾಗದಲ್ಲಿ ಪಟ್ಟಿಯನ್ನು ಹೊಂದಿರುವ, ಸ್ವತಃ ಅವರೇ ಹಸ್ತಾಕ್ಷರ ಮಾಡಿರುವ ಬಾಕ್ಸಿಂಗ್ ಕೈಗವಸುಗಳು ಸೇರಿವೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಕೃಷ್ಣ ನಾಗರ್ ಅವರು ಹಸ್ತಾಕ್ಷರ ಮಾಡಿದ ಬ್ಯಾಡ್ಮಿಂಟನ್ ರಾಕೆಟ್ ಕೂಡ ಬಿಡ್‌ನಲ್ಲಿದೆ. ʻಟೋಕಿಯೋ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟʼದ ಬೆಳ್ಳಿ ಪದಕ ವಿಜೇತೆ ಭಾವಿನಾ ಪಟೇಲ್ ಅವರು ಟೋಕಿಯೋ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಬಳಸಿದ, ಅವರದ್ದೇ ಹಸ್ತಾಕ್ಷರ ಹೊಂದಿರುವ ಟೇಬಲ್ ಟೆನ್ನಿಸ್ ರಾಕೆಟ್ ಕೂಡ ಹರಾಜಿಗಿದೆ. 

ವ್ಯಕ್ತಿಗಳು /ಸಂಸ್ಥೆಗಳು ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7, 2021ರವರೆಗೆ ಈ ವೆಬ್‌ಸೈಟ್ ಮೂಲಕ ಇ-ಹರಾಜಿನಲ್ಲಿ ಭಾಗವಹಿಸಬಹುದು: https://pmmementos.gov.in

ಇ-ಹರಾಜಿನಿಂದ ಬರುವ ಆದಾಯವು ಗಂಗಾ ಸಂರಕ್ಷಣೆ ಮತ್ತು ಪುನಶ್ಚೇತನದ ಉದ್ದೇಶದ ʻನಮಾಮಿಗಂಗೆ ಯೋಜನೆʼಗೆ ಮೀಸಲಾಗಲಿದೆ. ಶ್ರೀ ನರೇಂದ್ರ ಮೋದಿ ಅವರು ದೇಶದ ಜೀವನಾಡಿ ಗಂಗಾ ನದಿಯನ್ನು "ನಮಾಮಿಗಂಗೆ" ಯೋಜನೆ ಮೂಲಕ ಸಂರಕ್ಷಿಸುವ ಉದಾತ್ತ ಉದ್ದೇಶಕ್ಕಾಗಿ ತಾವು ಪಡೆದ ಎಲ್ಲಾ ಉಡುಗೊರೆಗಳನ್ನು ಹರಾಜು ಹಾಕಲು ನಿರ್ಧರಿಸಿದ ಭಾರತದ ಮೊದಲ ಪ್ರಧಾನಿಯಾಗಿದ್ದಾರೆ. ಗಂಗೆ ದೇಶದ ಸಾಂಸ್ಕೃತಿಕ ವೈಭವ ಮತ್ತು ನಂಬಿಕೆಯ ಸಂಕೇತವಾಗಿದೆ.  ಉತ್ತರಾಖಂಡದ ಗೋಮುಖನ್‌ ನದಿಯ ಉಗಮಸ್ಥಳದಿಂದ ಪಶ್ಚಿಮ ಬಂಗಾಳದ ಸಮುದ್ರದೊಂದಿಗೆ ಸಂಗಮವಾಗುವವರೆಗೂ, ಈ ಬೃಹತ್‌ ನದಿ ದೇಶದ ಅರ್ಧದಷ್ಟು ಜನರ ಜೀವನವನ್ನು ಶ್ರೀಮಂತಗೊಳಿಸಿದೆ ಎಂದು ಪ್ರಧಾನಿ ಆಗಾಗ್ಗೆ ಬಣ್ಣಿಸುತ್ತಿರುತ್ತಾರೆ.

Click here for highlight items

 

****



(Release ID: 1755872) Visitor Counter : 267