ಪ್ರಧಾನ ಮಂತ್ರಿಯವರ ಕಛೇರಿ

ಎಸ್‌ಸಿಒ ಮಂಡಳಿಯ ಮುಖ್ಯಸ್ಥರ 21ನೇ ಸಭೆಯನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾಷಣ

Posted On: 17 SEP 2021 2:22PM by PIB Bengaluru

 ಸನ್ಮಾನ್ಯರೆ,

 ನಮಸ್ಕಾರ. 

ಎಲ್ಲಕ್ಕಿಂತ ಮೊದಲು ನಾನು ಅಧ್ಯಕ್ಷರಾದ ರೆಹಮಾನ್‌ ಅವರನ್ನು ಅಭಿನಂದಿಸಲು ಇಷ್ಟ ಪಡುತ್ತೇನೆ. ಎಸ್‌ಸಿಒ ಮಂಡಳಿಯ ಅಧ್ಯಕ್ಷೀಯ ಅವಧಿಯನ್ನು ಯಶಸ್ವಿಯಾಗಿ ನಿಭಾಯಿಸಿರುವುದಕ್ಕೆ ಅಭಿನಂದನಾರ್ಹರಾಗಿದ್ದಾರೆ. ತಾಜಿ಼ಕ್‌ನ ಅಧ್ಯಕ್ಷತೆಯೊಂದಿಗೆ ಜಾಗತಿಕವಾಗಿ ಸವಾಲುಗಳಿರುವ ಈ ಅವಧಿಯಲ್ಲಿ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ತಜ಼ಕಿಸ್ತಾನದ ಸ್ವಾತಂತ್ರ್ಯದ ಮೂವತ್ತನೇ ಶುಭ ಸಂದರ್ಭದಲ್ಲಿ ಭಾರತದ ಪರವಾಗಿ ತಾಜಿಕ್‌ ಸಹೋದರ ಸಹೋದರಿಯರಿಗೆ ಹಾಗೂ ಸನ್ಮಾನ್ಯ ಅಧ್ಯಕ್ಷರಾದ ರೆಹಮಾನ್‌ ಅವರಿಗೆ ನಾನು ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. 
 
ಸನ್ಮಾನ್ಯರೆ,

 

ಈ ವರ್ಷ ನಾವು ಎಸ್‌ಸಿಒ ಮಂಡಳಿಯ ಇಪ್ಪತ್ತನೇ ವಾರ್ಷಿಕೋತ್ಸವವನ್ನೂ ಆಚರಿಸುತ್ತಿದ್ದೇವೆ. ಈ ಸುಸಂದರ್ಭದಲ್ಲಿ ಹೊಸ ಸ್ನೇಹಿತರು ನಮ್ಮ ಗುಂಪಿಗೆ ಸೇರುತ್ತಿದ್ದಾರೆ ಎನ್ನುವುದೂ ಸಂತಸದ ವಿಷಯವಾಗಿದೆ. ನಾನು ಹೊಸ ಸದಸ್ಯ ರಾಷ್ಟ್ರ ಆಗಿರುವ ಇರಾನ್‌ ಅನ್ನು ಈ ಸಂದರ್ಭದಲ್ಲಿ ಎಸ್‌ಸಿಒಗೆ ಸ್ವಾಗತಿಸುತ್ತೇನೆ. ಈಜಿಪ್ಟ್‌, ಸೌದಿ ಅರೇಬಿಯಾ ಹಾಗೂ ಕತಾರ್‌ ಈ ಮೂರು ಹೊಸ ರಾಷ್ಟ್ರಗಳನ್ನು ಸಂವಾದಿ ಭಾಗಿದಾರರಾಗಿ ಸ್ವಾಗತಿಸುತ್ತೇನೆ. ಎಸ್‌ಸಿಒದ ಈ ವಿಸ್ತರಣೆಯು ನಮ್ಮ ಮಂಡಳಿಯ ಅಭಿವೃದ್ಧಿಯನ್ನು ಸೂಚಿಸುತ್ತದೆ. ಹೊಸ ಸದಸ್ಯ ರಾಷ್ಟ್ರಗಳು ಹಾಗೂ ಸಂವಾದಿ ಭಾಗಿದಾರರಾಗಿ ಸೇರ್ಪಡೆಯಾಗಿರುವ ನೂತನ ರಾಷ್ಟ್ರಗಳಿಂದ ನಮ್ಮ ಎಸ್‌ಸಿಒ ಮಂಡಳಿಯು ಇನ್ನೂ ಬಲಯುತವಾಗಿ ಬೆಳೆಯುವುದಾಗಿ ಆಶಿಸುತ್ತೇನೆ. 

 
ಸನ್ಮಾನ್ಯರೆ,  


ಎಸ್‌ಸಿಒ ಸ್ಥಾಪನೆಯ ಎರಡನೇ ದಶಮಾನೋತ್ಸವದ ಈ ಸುಸಂದರ್ಭವು ನಮ್ಮ ಮಂಡಳಿಯ ಭವಿತವ್ಯದ ಬಗೆಗೆ ಯೋಜಿಸಲು ಸಕಾಲಿಕವಾಗಿದೆ ಎಂದು ಭಾವಿಸುತ್ತೇನೆ. ಶಾಂತಿ, ಸುರಕ್ಷೆ ಹಾಗೂ ಭರವಸೆ ನಿರ್ಮಾಣ ಈ ಕ್ಷೇತ್ರದ ಬೃಹತ್‌ ಸವಾಲುಗಳಾಗಿವೆ ಎಂಬುದನ್ನು ನಾನು ನಂಬುತ್ತೇನೆ. ಈ ಸವಾಲುಗಳನ್ನು ಸಮಸ್ಯೆಗಳಿಲ್ಲದಂತೆ ನಿರ್ಮೂಲನೆ ಮಾಡುವುದು ನಮ್ಮ ಗುರಿಯಾಗಿದೆ. ಇತ್ತೀಚಿಗೆ ಅಫ್ಘಾನಿಸ್ಥಾನದಲ್ಲಿ ಆಗಿರುವ ಬೆಳವಣಿಗೆಯು ನಾವು ಈ ದಿಸೆಯಲ್ಲಿ ಯೋಚಿಸುವಂತೆ ಮಾಡಿದೆ. ಎಸ್‌ಸಿಒ ಮಂಡಳಿಯು ಈ ಕುರಿತು ಮಹತ್ತರ ನಿರ್ಧಾರ ತೆಗೆದುಕೊಳ್ಳುವಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದು ನಂಬಿದ್ದೇನೆ. 

 ಇತಿಹಾಸವನ್ನು ಗಮನಿಸಿದಾಗ ಮಧ್ಯಪ್ರಾಚ್ಯ ಏಷ್ಯಾದ ಪ್ರದೇಶವು ನಾಗರಿಕತೆಗಳ ತೊಟ್ಟಿಲಾಗಿದೆ. ಸಂಸ್ಕೃತಿ ಮತ್ತು ಪರಂಪರೆಗಳು ಮತ್ತು ಮೌಲ್ಯಗಳು ಬೆಳೆದ ಭೌಗೋಳಿಕ ಪ್ರದೇಶವಾಗಿದೆ. ಸೂಫಿಸಂನಂತಹ ಪರಂಪರೆ ಬೆಳೆದು ಬಂದ ನಾಡಿದು. ಶತಶತಮಾನಗಳಿಂದ ಸೌಹಾರ್ದವನ್ನೇ ಈ ಪ್ರದೇಶದಲ್ಲಿ ಹಾಗೂ ವಿಶ್ವಕ್ಕೆ ಹರಡುವಂತೆ ಮಾಡಿದ ಪ್ರದೇಶವಿದು. ಈ ಪ್ರದೇಶದ ಸಾಂಸ್ಕೃತಿಕ ಸಿರಿವಂತಿಕೆಯಲ್ಲಿ ನಾವು ಸೂಫಿಸಂನ ಗಾಢವಾದ ಪ್ರಭಾವ ಕಾಣುತ್ತೇವೆ. ಮಧ್ಯ ಏಷ್ಯಾದ ಈ ಸಾಂಸ್ಕೃತಿಕ ಸಿರಿವಂತಿಕೆಯ ಪರಂಪರೆಯ ಇತಿಹಾಸವು, ತೀವ್ರಗಾಮಿಗಳ ಭಯೋತ್ಪಾದನೆಯ ನಿರ್ಮೂಲನೆಗೆ ಮೂಲ ಉರುವಲು ಆಗಲಿದೆ. 
ಭಾರತದಲ್ಲಿ ಹಾಗೂ ಎಸ್‌ಸಿಒದ ಎಲ್ಲ ರಾಷ್ಟ್ರಗಳಲ್ಲಿಯೂ ಇಸ್ಲಾಂ ಧರ್ಮದೊಟ್ಟಿಗೆ ಸಹನೆ ಹಾಗೂ ಸಮಗ್ರತ್ವವನ್ನು ತೋರುತ್ತವೆ. ಎಸ್‌ಸಿಒ ಈ ರಾಷ್ಟ್ರಗಳ ನಡುವೆ ಬಲಯುತವಾದ ಸಂಪರ್ಕಜಾಲ ಹೆಣೆಯುವಂತೆ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಎಸ್‌ಸಿಒದ RATS ನ ಕಾರ್ಯ ಶ್ಲಾಘನೀಯವಾಗಿದೆ. ಭಾರತದ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ ವರ್ಷಪೂರ್ತಿ ಚಟುವಟಿಕೆಗಳಲ್ಲಿ ಎಸ್‌ಸಿಒ ಸದಸ್ಯರಾಷ್ಟ್ರಗಳೂ ಪಾಲ್ಗೊಳ್ಳಲಿ ಎಂದು ನಿರೀಕ್ಷಿಸುತ್ತೇನೆ. 

 

ಸನ್ಮಾನ್ಯರೆ,

 

ಪರಸ್ಪರ ನಂಬಿಕೆ ಹಾಗೂ ಸುರಕ್ಷೆಗಾಗಿ ರಾಜಕೀಯ ನೆಲೆಯಲ್ಲಿ ಸಂಘರ್ಷಮಾಡುವುದು ಅನಗತ್ಯವಾಗಿದೆ. ಆದರೆ ನಮ್ಮ ಮುಂದಿನ ತಲೆಮಾರಿಗಾಗಿ, ಅವರ ಉಜ್ವಲ ಭವಿಷ್ಯಕ್ಕಾಗಿ ಹೋರಾಡುವುದೂ ಅತ್ಯವಶ್ಯವಾಗಿದೆ. ಅಭಿವೃದ್ಧಿ ಹೊಂದಿರುವ ಜಗತ್ತಿನ ಜೊತೆಗೆ ಅವರು ಸ್ಪರ್ಧಿಸಲು ನಮ್ಮ ಪ್ರದೇಶವು ಆಧುನಿಕ ತಂತ್ರಜ್ಞಾನದಂಥ ಕ್ಷೇತ್ರಗಳಲ್ಲಿ ಬಹುಮುಖ್ಯವಾದ ಪಾತ್ರವಹಿಸಬೇಕಾಗುತ್ತದೆ.  ಇದಕ್ಕಾಗಿ ನಮ್ಮ ಯುವ ತಲೆಮಾರು ಪ್ರತಿಭಾನ್ವಿತ ಯುವಜನತೆ ವಿಜ್ಞಾನ ಹಾಗೂ ವೈಚಾರಿಕತೆಯತ್ತ ಒಲವು ಬೆಳೆಸಿಕೊಳ್ಳಬೇಕಿದೆ.  

ನೂತನ ಸ್ಟಾರ್ಟ್‌ ಆ್ಯಪ್ಸ್‌ ಹಾಗೂ ನವೋದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ನಾವು ಈ ನೂತನ ಚಿಂತನೆಯನ್ನು ಮತ್ತು ಯೋಚನೆಯನ್ನು ಯುವಜನರಲ್ಲಿ ತರಬಹುದಾಗಿದೆ.  ಇದೇ ಯೋಚನೆಯೊಂದಿಗೆ ಕಳೆದ ವರ್ಷ ಭಾರತವು ಎಸ್‌ಸಿಒ ಸ್ಟಾರ್ಟ್‌ ಆ್ಯಪ್‌ ಫೋರಂ ಹಾಗೂ ಯುವ ವಿಜ್ಞಾನಿಗಳ ಸಮಾವೇಶವನ್ನು ಹಮ್ಮಿಕೊಂಡಿತ್ತು. ಕಳೆದ ವರ್ಷ ಭಾರತವು ತನ್ನ ಅಭಿವೃದ್ಧಿಪಥದಲ್ಲಿ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಂಡಿದೆ. 
 ಯುಪಿಐ ಅಥವಾ ರುಪೆ ಕಾರ್ಡ್‌ನಂತೆ ತಂತ್ರಜ್ಞಾನವನ್ನು ಆರ್ಥಿಕ ಹಾಗೂ ಹಣಕಾಸಿನ ವ್ಯವಸ್ಥೆಯಲ್ಲಿ ಅಳವಡಿಸಿರುವುದು, ಆರೋಗ್ಯ ಸೇತು ಹಾಗೂ ಕೋವಿನ್‌ ಮೂಲಕ, ಕೋವಿಡ್‌ನಂಥ ದುರಿತ ಕಾಲವನ್ನು ನಿಭಾಯಿಸಿರುವುದು, ನಾವು ಸ್ವಯಂಸ್ಫೂರ್ತಿಯಿಂದ ಈ ಸೌಲಭ್ಯಗಳನ್ನು ಇತರ ರಾಷ್ಟ್ರಗಳೊಂದಿಗೂ ಹಂಚಿಕೊಂಡಿದ್ದೇವೆ. ನಾವು ಈ ಮುಕ್ತ ಸಂಪನ್ಮೂಲವಿರುವ ತಂತ್ರಜಾಲಗಳನ್ನು ಎಸ್‌ಸಿಒ ಸದಸ್ಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲೂ ಮುಂದಾಗುವೆವು. ಇವುಗಳ ಜಾಗೃತಿ ಕಾರ್ಯಕ್ರಮದಲ್ಲಿ ಸಂಯೋಜಿಸುವಲ್ಲಿಯೂ ಕೈಗೂಡಿಸುವೆವು.

 

 ಸನ್ಮಾನ್ಯರೆ,  

 

ಕೆಲವು ರಾಜಕೀಯ ಕಾರಣ ಹಾಗೂ ಅಸುರಕ್ಷೆಯಿಂದಾಗಿ ಈ ಭಾಗದ ಆರ್ಥಿಕ ಸಾಮರ್ಥ್ಯವನ್ನು ಸಂಪೂರ್ಣವಾಗಿ ಸದ್ಬಳಕೆಯಾಗುವಲ್ಲಿ ತಡೆ ಹಿಡಿದಂತಾಗಿದೆ. ಅದು ನಮ್ಮ ಖನಿಜ ಸಂಪತ್ತಾಗಿರಲಿ ಅಥವಾ ಎಸ್‌ಸಿಒ ಅಂತರ್‌ ಸಂಚಾರವಾಗಿರಲಿ, ಇದರ ಸಂಪೂರ್ಣ ಸದ್ಬಳಕೆಯಾಗಲು ನಾವೂ ನಮ್ಮ ನಡುವೆ ಪರಸ್ಪರ ಸಂಚಾರ ಮುಕ್ತಗೊಳಿಸಬೇಕು. ಮಧ್ಯ ಏಷ್ಯಾದ ಇತಿಹಾಸದಲ್ಲಿ ಈ ರಾಷ್ಟ್ರಗಳ ನಡುವೆ ಇದ್ದ ವ್ಯಾಪಾರ ವಹಿವಾಟು ಮಾರ್ಗ ಮತ್ತು ಮಾರುಕಟ್ಟೆ ಎರಡನ್ನೂ ಎತ್ತಿ ಹಿಡಿಯುತ್ತದೆ.  ಈ ಪ್ರದೇಶದ ಸಂಪತ್ತಿಗೆ ಇದು ಪ್ರಮುಖ ಕಾರಣವೂ ಆಗಿತ್ತು. ಭಾರತವು ಮಧ್ಯ ಏಷ್ಯಾದೊಂದಿಗೆ ಸಂಪರ್ಕ ಸಾಧಿಸಲು, ಮತ್ತು ಅಭಿವೃದ್ಧಿಯತ್ತ ಒಟ್ಟೊಟ್ಟಿಗೆ ಸಾಗಲು ಬದ್ಧವಾಗಿದೆ.  

ಭಾರತದ ವಿಸ್ತಾರವಾದ ಮಾರುಕಟ್ಟೆಯೊಂದಿಗೆ ಸಂಪರ್ಕ ಸಾಧಿಸುವ ಮಧ್ಯ ಏಷ್ಯಾದ ರಾಷ್ಟ್ರಗಳಿಗೆ ಅಪಾರ ಲಾಭವಿದೆ ಎಂದು ನಾವು ನಂಬುತ್ತೇವೆ. ಪರಸ್ಪರ ನಂಬಿಕೆಯ ಕೊರತೆಯಿಂದಾಗಿ ಸಂಪರ್ಕ ಸಾಧಿಸಬಹುದಾದ ಸಾಧ್ಯತೆಗಳಿನ್ನೂ ತೆರೆದುಕೊಂಡಿಲ್ಲ. ಇರಾನ್‌ನಲ್ಲಿ ಛಭಾರ್‌ ಬಂದರು ಸ್ಥಾಪನೆ ಹಾಗೂ ನಿರ್ಮಾಣದಲ್ಲಿ ಹಾಗೂ ಅಂತರರಾಷ್ಟ್ರೀಯ ಉತ್ತರ ದಕ್ಷಿಣ ಕಾರಿಡಾರ್‌ ನಿರ್ಮಾಣದಲ್ಲಿಯೂ ನಮ್ಮ ಬದ್ಧತೆಯನ್ನು ತೋರುವಂತಿದೆ. 


 ಸನ್ಮಾನ್ಯರೆ,


ಸಂಪರ್ಕಕ್ಕೆ ಸಂಬಂಧಿಸಿದಂತೆ ಇದು ಏಕಮುಖ ಸಂಚಾರವಾಗಿದ್ದಲ್ಲಿ ಯಾವ ಉಪಯೋಗವೂ ಆಗುವುದಿಲ್ಲ. ಸಂಪರ್ಕಿಸುವ ಯೋಜನೆಗಳು ಪರಸ್ಪರ ಸಲಹಾತ್ಮಕವಾಗಿರಬೇಕು. ಪಾರದರ್ಶಕವಾಗಿರಬೇಕು. ಸಹಭಾಗಿತ್ವದಲ್ಲಿರಬೇಕು. ಮತ್ತು ಪರಸ್ಪರ ನಂಬಿಕೆಯನ್ನು ಸ್ಥಾಪಿಸುವಂತಿರಬೇಕು. ಈ ನಿಟ್ಟಿನಲ್ಲಿ ಪ್ರತಿ ರಾಷ್ಟ್ರದ ಗಡಿಸೀಮೆಯನ್ನು ಗೌರವಿಸುವಂತೆಯೂ ಇರಬೇಕು. ಈ ತತ್ವಗಳ ಆಧಾರದ ಮೇಲೆ ಎಸ್‌ಸಿಒ ಈ ಪ್ರದೇಶದಲ್ಲಿ ಸಂಪರ್ಕಸೇತು ಸ್ಥಾಪಿಸಲು ಕೆಲವು ನಿಯಮಗಳನ್ನು ರಚಿಸಬೇಕು. 

ಇದರೊಂದಿಗೆ ನಾವು ಈ ಪ್ರದೇಶದಲ್ಲಿದ್ದ ಪ್ರಾದೇಶಿಕ ಸಂಪರ್ಕದ ಪರಂಪರೆಯನ್ನು ಪುನರ್‌ ಸ್ಥಾಪಿಸಿದಂತಾಗುವುದು. ಇದಾದ ನಂತರವಷ್ಟೇ ನಮ್ಮ ಸಂಪರ್ಕದ ಎಲ್ಲ ಯೋಜನೆಗಳೂ ನಮ್ಮನ್ನು ಕೂಡಿಸುವಂತಾಗುತ್ತದೆ. ನಮ್ಮ ನಡುವಿನ ದೂರವನ್ನು ಹೆಚ್ಚಿಸಿದಂತಾಗುವುದಿಲ್ಲ. ಈ ಪ್ರಯತ್ನದಲ್ಲಿ ಭಾರತವು ಯಾವುದೇ ರೀತಿಯ ಪಾಲ್ಗೊಳ್ಳುವಿಕೆಗೆ ಸಿದ್ಧವಾಗಿದೆ.
 
 ಸನ್ಮಾನ್ಯರೆ,  

 

ಎಸ್‌ಸಿಒದ ಯಶಸ್ಸಿನ ಮೂಲ ಕಾರಣಗಳಲ್ಲಿ ಒಂದೆಂದರೆ ಈ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು. ನಮ್ಮ ನಡುವೆ ನಮ್ಮ ವೈಚಾರಿಕತೆ, ಸಂಪರ್ಕ ಹಾಗೂ ಜನರೊಂದಿಗೆ ಜನರು ಬೆಳೆಸುವ ಸಂಬಂಧಗಳು  ಎಸ್‌ಸಿಒದ ಉದ್ದೇಶವನ್ನು ಹಾಗೂ ಗುರಿ ಸಾಧನೆಗೆ ಮೂಲ ಸಾಧನಗಳಾಗಲಿ ಎಂಬುದು ನನ್ನ ಸಲಹೆಯಾಗಿದೆ. ನಾನು ನನ್ನ ಮಾತುಗಳನ್ನು ಮುಗಿಸುವ ಮುಂಚೆ ನಮಗೆ ಆತಿಥ್ಯ ನೀಡಿರುವ ಅಧ್ಯಕ್ಷ ರೆಹಮಾನ್‌ ಅವರನ್ನು ಮತ್ತೊಮ್ಮೆ ಧನ್ಯವಾದ ಅರ್ಪಿಸಲು ಇಷ್ಟ ಪಡುವೆ. 
 ಇಂಥ ದುರಿತ ಕಾಲದ ಸವಾಲುಗಳ ನಡುವೆಯೂ ಈ ಸಮಾವೇಶವನ್ನು ಏರ್ಪಡಿಸಿದ್ದೂ ಅಲ್ಲದೆ, ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಈ ಸಂದರ್ಭದಲ್ಲಿ ಎಸ್‌ಸಿಒದ ಮುಂದಿನ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿರುವ ಉಜ್ಬೇಕಿಸ್ತಾನ್‌ಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಹಾಗೂ ಭಾರತದ ಸಂಪೂರ್ಣ ಸಹಕಾರ ಹಾಗೂ ಬೆಂಬಲವನ್ನು ಘೋಷಿಸುತ್ತೇನೆ.

ಧನ್ಯವಾದಗಳು

ಈ ಭಾಷಣವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣದ ಭಾವಾನುವಾದವಾಗಿದೆ. ಮೂಲ ಭಾಷಣವನ್ನು ಪ್ರಧಾನಿಗಳು ಹಿಂದಿಯಲ್ಲಿ ಮಾಡಿದ್ದಾರೆ.

***



(Release ID: 1755785) Visitor Counter : 215