ಹಣಕಾಸು ಸಚಿವಾಲಯ

2021-22 ವರ್ಷದ ಮೊದಲ ತ್ರೈಮಾಸಿಕ (ಕ್ಯೂ -1) ಬಂಡವಾಳ ವೆಚ್ಚದ ಗುರಿಯನ್ನು 11 ರಾಜ್ಯಗಳು ಪೂರೈಸಿವೆ.


ಹೆಚ್ಚುವರಿ ಚಲಾವಣೆಗೆ (ವ್ಯಯಕ್ಕೆ) ರೂ. 15,721 ಕೋಟಿ ಪಡೆಯಲು ಅನುಮತಿ.

Posted On: 14 SEP 2021 11:04AM by PIB Bengaluru

ಆಂಧ್ರಪ್ರದೇಶ, ಬಿಹಾರ, ಛತ್ತೀಸ್ ಗಡ್, ಹರಿಯಾಣ, ಕೇರಳ, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ರಾಜಸ್ಥಾನ ಮತ್ತು ಉತ್ತರಾಖಂಡ ಸೇರಿದಂತೆ ಒಟ್ಟು ಹನ್ನೊಂದು ರಾಜ್ಯಗಳು 2021-22ರ 1 ನೇ ತ್ರೈಮಾಸಿಕದಲ್ಲಿ ಬಂಡವಾಳ ವೆಚ್ಚಕ್ಕಾಗಿ ಕೇಂದ್ರ ಹಣಕಾಸು ಸಚಿವಾಲಯ ನಿಗದಿಪಡಿಸಿದ ಗುರಿಯನ್ನು ಸಾಧಿಸಿವೆ. ಪ್ರೋತ್ಸಾಹಕವಾಗಿ, ಈ ರಾಜ್ಯಗಳಿಗೆ ಹೆಚ್ಚುವರಿ ರೂ. 15,721 ಕೋಟಿ ಮೊತ್ತವನ್ನು ಸಾಲವಾಗಿ ಪಡೆಯಲು ಕೇಂದ್ರ ವೆಚ್ಚ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಹೆಚ್ಚುವರಿ ಮುಕ್ತ ಮಾರುಕಟ್ಟೆ ಸಾಲ ಅನುಮತಿಯು ಆಯಾಯ ರಾಜ್ಯಗಳ ದೇಶೀಯ ಉತ್ಪನ್ನದ (ಜಿ.ಎಸ್.ಡಿ.ಪಿ.)ಯ ಒಟ್ಟು 0.25 ಪ್ರತಿಶತಕ್ಕೆ ಸಮನಾಗಿರುತ್ತದೆ.  ಹೀಗೆ ಲಭ್ಯವಿರುವ ಹೆಚ್ಚುವರಿ ಹಣಕಾಸು ಸಂಪನ್ಮೂಲಗಳು, ರಾಜ್ಯಗಳಿಗೆ ತಮ್ಮ ಬಂಡವಾಳ ವೆಚ್ಚವನ್ನು ಮತ್ತಷ್ಟು ಸುಧಾರಿಸಲು ಸಹಾಯ ಮಾಡುತ್ತದೆ. ರಾಜ್ಯವಾರು ಅನುಮತಿಸಲಾದ ಹೆಚ್ಚುವರಿ ಸಾಲವನ್ನು ಜೊತೆಗೆ ಲಗತ್ತಿಸಲಾಗಿದೆ.

ಬಂಡವಾಳದ ವೆಚ್ಚವು ಹೆಚ್ಚಿನ ಗುಣಕ ಪರಿಣಾಮವನ್ನು ಹೊಂದಿರುತ್ತದೆ, ಆರ್ಥಿಕತೆಯ ಭವಿಷ್ಯದ ಉತ್ಪಾದಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಅಂತೆಯೇ, ಜಿ.ಎಸ್.ಡಿ.ಪಿ.ಯ 0.50 ಶೇಕಡಾವನ್ನು 2021-22ರ ಅವಧಿಯಲ್ಲಿ ರಾಜ್ಯಗಳು ಮಾಡುವ ಹೆಚ್ಚಿದ ಬಂಡವಾಳ ವೆಚ್ಚಕ್ಕಾಗಿ ಮೀಸಲಿಡಲಾಗಿದೆ, ಇದನ್ನು 2021-22 ಸಾಲಿನ ರಾಜ್ಯಗಳ ಜಿ.ಎಸ್.ಡಿ.ಪಿ.ಯ 4% ನಷ್ಟು ನಿವ್ವಳ ಎರವಲು ಮಿತಿ (ಎನ್.ಬಿ.ಸಿ)ಯಿಂದ ಪಡೆಯಬಹುದಾಗಿದೆ. ಈ ಹೆಚ್ಚುತ್ತಿರುವ ಸಾಲಕ್ಕೆ ಅರ್ಹತೆ ಪಡೆಯಲು ಪ್ರತಿ ರಾಜ್ಯಕ್ಕೆ ಹೆಚ್ಚುತ್ತಿರುವ ಬಂಡವಾಳ ವೆಚ್ಚದ ಗುರಿಯನ್ನು ಕೇಂದ್ರ ವೆಚ್ಚ ಇಲಾಖೆಯು ನಿಗದಿಪಡಿಸಿದೆ.

ಹೆಚ್ಚುವರಿ ಸಾಲಕ್ಕೆ ಅರ್ಹರಾಗಲು, ರಾಜ್ಯಗಳು 2021-22ರ ಮೊದಲ ತ್ರೈಮಾಸಿಕದ ಅಂತ್ಯದ ವೇಳೆಗೆ 2021-22 ಕ್ಕೆ ನಿಗದಿತ ಗುರಿಯ ಕನಿಷ್ಠ 15 ಪ್ರತಿಶತವನ್ನು,  2021-22ರ 2 ನೇ ತ್ರೈಮಾಸಿಕದ ಅಂತ್ಯದ ವೇಳೆಗೆ 45 ಶೇಕಡಾವನ್ನು, 3 ನೇ ತ್ರೈಮಾಸಿಕ ಅಂತ್ಯದ ವೇಳೆಗೆ 70 ಶೇಕಡಾವನ್ನು ಮತ್ತು 100 ಶೇಕಡರಷ್ಟನ್ನು  ಮಾರ್ಚ್ 31, 2022 ರೊಳಗೆ ಸಾಧಿಸಬೇಕಾಗಿದೆ.

ರಾಜ್ಯಗಳ ಬಂಡವಾಳ ವೆಚ್ಚದ ಮುಂದಿನ ಪರಿಶೀಲನೆಯನ್ನು ಡಿಸೆಂಬರ್ 2021 ರಲ್ಲಿ ಕೇಂದ್ರ ವೆಚ್ಚ ಇಲಾಖೆಯು ಕೈಗೊಳ್ಳುತ್ತದೆ. ಈ ಸುತ್ತಿನಲ್ಲಿ, ಸೆಪ್ಟೆಂಬರ್ 30, 2021 ರವರೆಗೆ ರಾಜ್ಯಗಳು ಸಾಧಿಸಿದ ಬಂಡವಾಳದ ವೆಚ್ಚವನ್ನು ಮೌಲ್ಯಮಾಪನ ಮಾಡಲಾಗುತ್ತದೆ. 2021-22 ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ರಾಜ್ಯವು ಮಾಡಿದ ಬಂಡವಾಳದ ವೆಚ್ಚದ ಆಧಾರದ ಮೇಲೆ ಮೂರನೇ ವಿಮರ್ಶೆಯನ್ನು 2022 ರ ಮಾರ್ಚ್ ತಿಂಗಳಲ್ಲಿ ಮಾಡಲಾಗುತ್ತದೆ. ಸೆಪ್ಟೆಂಬರ್ 30, 2021 ರ ವೇಳೆಗೆ ಗುರಿಯ ಕನಿಷ್ಠ 45 ಪ್ರತಿಶತದಷ್ಟು ಅಥವಾ ಡಿಸೆಂಬರ್ 31, 2021 ರ ವೇಳೆಗೆ ಗುರಿಯ 70 ಪ್ರತಿಶತದಷ್ಟು ವಾಸ್ತವಿಕ ಬಂಡವಾಳ ವೆಚ್ಚವನ್ನು ಸಾಧಿಸುವ ರಾಜ್ಯಗಳಿಗೆ ಜಿ.ಎಸ್.ಡಿ.ಪಿ.ಯ 0.50 ಪ್ರತಿಶತದಷ್ಟು ಬಂಡವಾಳ ವೆಚ್ಚ-ಸಂಬಂಧಿತ ಸಾಲದ ಗರಿಷ್ಠತಮ ಮಿತಿಯ ಅವಕಾಶ ಅನುಮತಿಸಲಾಗುವುದು.

ರಾಜ್ಯಗಳ ವಾಸ್ತವ ಬಂಡವಾಳದ ವೆಚ್ಚದ ಅಂತಿಮ ಪರಾಮರ್ಶನ 2022 ರ ಜೂನ್ ತಿಂಗಳಲ್ಲಿ ಇರುತ್ತದೆ. 2021-22 ಕ್ಕೆ ಉದ್ದೇಶಿತ ಬಂಡವಾಳ ವೆಚ್ಚಕ್ಕೆ ಹೋಲಿಸಿದರೆ ಆಗುವ 2021-22ರ ವರ್ಷದ ವಾಸ್ತವಿಕ ಬಂಡವಾಳದ ವೆಚ್ಚದಲ್ಲಿನ ಯಾವುದೇ ಕೊರತೆ/ ಕಡಿತಗಳನ್ನು, ಬರುವ 2022-23 ವರ್ಷಕ್ಕೆ ಮೀಸಲಿರುವ ಆ ರಾಜ್ಯದ ಎರವಲು ಗರಿಷ್ಟತಮ ಮಿತಿಯಲ್ಲಿ  ಸರಿಹೊಂದಿಸಲಾಗುತ್ತದೆ.

ಅನುಮತಿಸಲಾದ ಹೆಚ್ಚುವರಿ ಸಾಲದ ರಾಜ್ಯವಾರು ಮೊತ್ತವು ಕೆಳಕಂಡಂತಿದೆ:

ಕ್ರ.ಸಂ

ರಾಜ್ಯ

ಮೊತ್ತ ( ರೂ. ಕೋಟಿಗಳಲ್ಲಿ )

1.

ಆಂಧ್ರಪ್ರದೇಶ

2,655

2.

ಬಿಹಾರ

1,699

3.

ಛತ್ತೀಸ್‌ ಗಡ್

895

4.

ಹರಿಯಾಣ

2,105

5.

ಕೇರಳ

2,255

6.

ಮಧ್ಯಪ್ರದೇಶ

2,590

7.

ಮಣಿಪುರ

90

8.

ಮೇಘಾಲಯ

96

9.

ನಾಗಾಲ್ಯಾಂಡ್

89

10.

ರಾಜಸ್ಥಾನ

2,593

11.

ಉತ್ತರಾಖಂಡ

654

 

***



(Release ID: 1754791) Visitor Counter : 256